ಕಳವಳ ಮೂಡಿಸುತ್ತಿರುವ ಕರೋನಾ ವೈರಸ್

ಕಳವಳ ಮೂಡಿಸುತ್ತಿರುವ ಕರೋನಾ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ನಾವೆಲ್ಲಾ ಸೂಕ್ತ ಜಾಗರೂಕತೆ ವಹಿಸಿ ನಮ್ಮ ಆರೊಗ್ಯವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕಳವಳ ಮೂಡಿಸುತ್ತಿರುವ ಕರೋನಾ ವೈರಸ್ಇತ್ತೀಚಿನ ದಿನಗಳಲ್ಲಿ ಕೌತುಕ ಹುಟ್ಟಿಸಿ, ಕಳವಳ ಮೂಡಿಸುತ್ತಿರುವ ವಿಷಯಗಳಲ್ಲಿ ಅಗ್ರಸ್ಥಾನದಲ್ಲಿರುವ ವಿಚಾರವು ಕರೋನಾ ವೈರಸ್ ಎಂದರೆ ತಪ್ಪಾಗಲಾರದು. ಪ್ರಪ್ರಥಮ ಬಾರಿಗೆ ಚೀನಾದ ಉಹಾನ್ ಪ್ರಾಂತ್ಯದಲ್ಲಿ ಪತ್ತೆಯಾದ ಈ ಮಾರಕ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ.ಬಹುತೇಕ ಇಡೀ ಪ್ರಪಂಚದಲ್ಲಿ (ಸುಮಾರು 212 ದೇಶಗಳು) ಆತಂಕದ ಪರಿಸ್ಥಿತಿ ಇದ್ದು, ಸುಮಾರು 3 ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ.  ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.

ಏನಿದು ಕರೋನಾ ವೈರಾಣು?

ಇದೊಂದು RNA ಜಾತಿಯ ವೈರಾಣುವಾಗಿದ್ದು, ಸೂಕ್ತ ದರ್ಶಕದ ಅಡಿಯಲ್ಲಿ ಕಿರೀಟದ ರೀತಿಯಲ್ಲಿ ಈ ವೈರಾಣುವಿನ ಆಕಾರ ಇರುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೊನಾ ಎಂದರೆ ಕಿರೀಟ ಎಂಬರ್ಥವಿದೆ. ಈ ಕಾರಣದಿಂದಲೇ ಕೊರೋನಾ ವೈರಸ್ ಎಂಬ ಹೆಸರನ್ನು ಪಡೆದಿದೆ. ಸಾಮಾನ್ಯವಾಗಿ ಈ ವೈರಾಣು ಸಸ್ತನಿಗಳಲ್ಲಿ ಮತ್ತು ಹಕ್ಕಿಗಳಲ್ಲಿ ಜೀರ್ಣಾಂಗ ವ್ಯೂಹ ಮತ್ತು ಶಾಸಕೋಶ ವ್ಯೂಹವನ್ನು ಸೋಂಕಿಗೆ ತಗುಲಿಸಿ ರೋಗ ಬರುವಂತೆ ಮಾಡುತ್ತದೆ. ಮನುಷ್ಯರಲ್ಲಿ ಸುಮಾರು ಈ ಕೊರೋನಾ ಗುಂಪಿನ 7 ಬಗೆಯ ವೈರಾಣುಗಳು ಸೋಂಕು ಉಂಟುಮಾಡುವ ಸಾಮಥ್ರ್ಯ ಹೊಂದಿರುತ್ತದೆ. ಕೊರೋನಾ ವೈರಾಣು ಎನ್ನುವುದು ಬಹುದೊಡ್ಡ ವೈರಾಣುಗಳ ಕುಟುಂಬವಾಗಿದ್ದು, SARS ಮತ್ತು MERS ಎಂಬ ರೋಗಕ್ಕೂ ಕಾರಣವಾಗುತ್ತದೆ.

ಈ ಹಿಂದೆ ಹಲವು ಬಾರಿ ಯುರೋಪ್ ದೇಶದಲ್ಲಿ SARS ಮತ್ತು MERS ರೋಗ ಬಂದು ನೂರಾರು ಮಂದಿ ಸಾವನ್ನಪ್ಪಿರುವುದು ಚರಿತ್ರೆಯಿಂದ ಎಲ್ಲರಿಗೂ ತಿಳಿದಿದೆ. SARS ಎಂದರೆ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಎಂದೂ ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ. MERS ಎಂದರೆ ಮಿಡ್ಲ್ ಇಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇವೆರಡೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕೊರೋನಾ ವೈರಾಣುವಿನಿಂದ ಹರಡುವ ರೋಗವಾಗಿರುತ್ತದೆ. ತಕ್ಷಣ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮಾತ್ರ ಚಿಕಿತ್ಸೆ ಸ್ಪಂದಿಸುತ್ತದೆ. ಚಿಕಿತ್ಸೆಗೆ ತಡವಾದಲ್ಲಿ ಮರಣ ಕಟ್ಟಿಟ್ಟ ಬುತ್ತಿ. ಲಸಿಕೆ ಇಲ್ಲದ ರೋಗ ಇದಾಗಿರುವುದರಿಂದ ಮುಂಜಾಗರೂಕತೆ ವಹಿಸಿ ರೋಗ ಬರದಂತೆ ತಡೆಯುವ ಅನಿವಾರ್ಯತೆ ಇದೆ. ಅದೇ ರೀತಿ ಈ ವೈರಾಣುವಿನ ವಿರುದ್ಧ ಹೋರಾಡುವ ಔಷಧಿಯೂ ಲಭ್ಯವಿಲ್ಲದಿರುವುದೇ ಬಹಳ ದೊಡ್ಡ ಚಿಂತೆಯಾಗಿದೆ.

ಹೇಗೆ ಹರಡುತ್ತದೆ?

ಸಾಮಾನ್ಯವಾಗಿ ಸಸ್ತನಿ ಮತ್ತು ಹಕ್ಕಿಗಳನ್ನು ಈ ವೈರಾಣು ಕಾಡುತ್ತದೆ. ಹಂದಿ, ದನ, ಕೋಳಿ, ಬಾವಲಿ ಮತ್ತು ಹಾವುಗಳನ್ನು ಕಾಡುವ ಈ ವೈರಾಣು ಅವುಗಳ ಮಾಂಸದ ಮುಖಾಂತರವೂ ಮನುಷ್ಯರನ್ನು ತಲುಪುವ ಸಾಧ್ಯತೆ ಇರುತ್ತದೆ. ಚೀನಾ ದೇಶದ ನಿಶಾನ್ ನಗರದಲ್ಲಿನ ಅಕ್ರಮ ವನ್ಯಜೀವಿ ಮಾಂಸ ಕೇಂದ್ರ ಮುಖಾಂತರ ಈ ವೈರಾಣು ಮನುಷ್ಯರಿಗೆ ಹರಡಿದೆ ಎಂದು ಶಂಕಿಸಲಾಗಿದೆ. ಶಂಕಿತ ಮತ್ತು ಸೋಂಕಿತ ಪ್ರಾಣಿಗಳ ಮಾಂಸವನ್ನು ಸರಿಯಾಗಿ ಬೇಯಿಸದೆ ತಿನ್ನುವುದರಿಂದಲೂ ಹರಡಿರುವ ಸಾಧ್ಯತೆ ಇದೆ.

ರೋಗದ ಲಕ್ಷಣಗಳು:

ಎಲ್ಲಾ ವೈರಲ್ ಜ್ವರದಂತೆ ಈ ರೋಗದಲ್ಲಿಯೂ ತೀವ್ರ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ, ನಡುಕ, ಉಸಿರಾಟದ ತೊಂದರೆ, ತಲೆನೋವು ಇರುತ್ತದೆ. ಮೈಕೈ ನೋವು, ಸುಸ್ತು ಹೆಚ್ಚು ಇರುತ್ತದೆ. ಹೆಚ್ಚಾಗಿ ಈ ವೈರಾಣು ಶ್ವಾಸಕೋಶವನ್ನು ಕಾಡುವುದರಿಂದ ನಿಮೋನಿಯಾ ರೀತಿಯ ಲಕ್ಷಣಗಳು ಹೆಚ್ಚು ಕಂಡುಬರುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಈ ರೋಗ ತನ್ನಿಂತಾನೆ ಕಡಿಮೆಯಾಗಬಹುದು. ಆದರೆ ಮಧುಮೇಹ, ಕಿಡ್ನಿ ವೈಫಲ್ಯ, ಧೂಮಪಾನಿಗಳು, ಹೃದಯ ವೈಫಲ್ಯ ಇರುವವರಲ್ಲಿ ಈ ವೈರಾಣು ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಇದೆ. ರೋಗದ ಇಂಕುಬೇಷನ್ ಅವಧಿ ಅಂದರೆ ವೈರಾಣು ದೇಹಕ್ಕೆ ಸೇರಿ ರೋಗದ ಲಕ್ಷಣ ಕಾಣಿಸಿಕೊಳ್ಳುವ ವರೆಗಿನ ಅವಧಿ ಸುಮಾರು 6 ರಿಂದ 12 ದಿನ ಇರುತ್ತದೆ.

ಹೇಗೆ ಹರಡುತ್ತದೆ?

1. ದೈಹಿಕ ಸಂಪರ್ಕ, ಸ್ಪರ್ಶದ ಮುಖಾಂತರ ಹರಡುತ್ತದೆ.

2. ಕೆಮ್ಮು ಮತ್ತು ಸೀನಿನ ಮುಖಾಂತರ ಹರಡುತ್ತದೆ.

3. ಕರವಸ್ತ್ರ, ಊಟದ ತಟ್ಟೆ ಮುಂತಾದವುಗಳನ್ನು ಜೊತೆಗೆ ಬಳಸುವುದರಿಂದ ಹರಡುತ್ತದೆ.

ಹೇಗೆ ತಡೆಗಟ್ಟಬಹುದು?

1. ನಿಮ್ಮ ಕೈಗಳನ್ನು ಚೆನ್ನಾಗಿ ಸೋಪು ದ್ರಾವಣ ಬಳಸಿ 30 ಸೆಕೆಂಡ್ ಶುಭ್ರವಾಗಿ ಸ್ವಚ್ಛಗೊಳಿಸಿ

2. ಸೋಪ್ ದ್ರಾವಣವಿಲ್ಲದಿದ್ದಲ್ಲಿ ಆಲ್ಕೋಹಾಲ್ ದ್ರಾವಣ ಬಳಸಬಹುದು.

3. ಶಂಕಿತ ಅಥವಾ ಸೋಂಕಿತ ವ್ಯಕ್ತಿಯ ಬಟ್ಟೆ, ಕರವಸ್ತ್ರ, ತಟ್ಟೆ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸಬೇಡಿ.

4. ಶಂಕಿತ ರೋಗಿಗಳಿಂದ ದೂರವಿರಿ. ಕೈತೊಳೆಯದೆ ಕಣ್ಣ್ಣು, ಮುಖ, ಬಾಯಿಯನ್ನು ಸ್ಪರ್ಶಿಸಬೇಡಿ.

5. ಶಂಕಿತ ರೋಗಿಯೊಂದಿಗೆ ಯಾವುದೇ ದೈಹಿಕ ಸಂಪರ್ಕ, ಚುಂಬನ ಮಾಡಬೇಡಿ.

6. ಸಾಧ್ಯವಾದಷ್ಟು ಮುಖಕವಚ ಧರಿಸಿ. ಶಂಕಿತ ವ್ಯಕ್ತಿಯಿಂದ ದೂರವಿರಿ.

7. ಶಂಕಿತ ರೋಗ ಪ್ರದೇಶಗಳಲ್ಲಿ ಪ್ರಯಾಣ ಮಾಡಬೇಡಿ.

8. ಆದಷ್ಟು ಶಂಕಿತ ಪ್ರದೇಶದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.

ಚಿಕಿತ್ಸೆ ಹೇಗೆ?

ಈ ರೋಗಕ್ಕೆ ಲಸಿಕೆ ಇರುವುದಿಲ್ಲ, ಸೂಕ್ತ ಚಿಕಿತ್ಸೆಯೂ ಲಭ್ಯವಿಲ್ಲ. ರೋಗ ಬರದಂತೆ ತಡೆಯುವುದರಲ್ಲಿ ಜಾಣತನವಿದೆ. ಈ ರೋಗಕ್ಕೆ  ಕೊರೊನಾ ವೈರಾಣುವಿನ ವಿರುದ್ಧ ಹೋರಾಡುವ ಔಷಧಿಯೂ ಲಭ್ಯವಿಲ್ಲ. ಆದರೆ ರೋಗಿಯ ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜ್ವರ, ನೋವಿಗೆ ಔಷಧಿ ನೀಡಿ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಸಾಕಷ್ಟು ದ್ರವಾಹಾರ ನೀಡಲಾಗುತ್ತದೆ. ಶಂಕಿತ ರೋಗಿಯನ್ನು ಒಳರೋಗಿಯಾಗಿ ಇರಿಸಿ ಇತರ ರೋಗಿಗಳ ಸಂಪರ್ಕ ಬಾರದಂತೆ ಅಂತರ ಕಾಯ್ದುಕೊಳ್ಳಲಾಗುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟ ಮಧುಮೇಹಿಗಳು, ಗರ್ಭಿಣಿಯರು, ಸಣ್ಣ ಶಿಶುಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ತೀವ್ರ ನಿಗಾ ಘಟಕದಲ್ಲಿರಿಸಿ ಎಚ್ಚರಿಕೆ ವಹಿಸಲಾಗುತ್ತದೆ. 

ಕೊನೆಮಾತು

ಆಧುನಿಕತೆ, ತಂತ್ರಜ್ಞಾನ ಬೆಳೆದಂತೆಲ್ಲಾ ಜಗತ್ತು ಕಿರಿದಾಗುತ್ತದೆ. ಹೊಸ ಹೊಸ ತಂತ್ರಜ್ಞಾನ ಮತ್ತು ಔಷಧಿ ಹುಟ್ಟಿದಂತೆ ಹೊಸ ರೋಗಗಳೂ ಹುಟ್ಟಿಕೊಳ್ಳುತ್ತದೆ. ಸಂಚಾರ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯಿಂದಾಗಿ ಜನರು ದಿನಬೆಳಗಾಗುವುದರೊಳಗೆ ಜಗತ್ತಿನೆಲ್ಲೆಡೆ ಸಂಚರಿಸಲು ಸಾಧ್ಯವಾಗಿದೆ. ಆದರೆ ತಾವು ಚಲಿಸುವಾಗ ತಮ್ಮ ಜೊತೆ ರೋಗವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಡುತ್ತಿರುವುದು ದೌರ್ಭಾಗ್ಯಕರ ವಿಚಾರವಾಗಿದೆ. ಈ ಕಾರಣದಿಂದಲೇ ಎಲ್ಲೋ ಆಫ್ರಿಕಾ ಖಂಡದ ಕಾಡಿನಲ್ಲಿ ಹುಟ್ಟಿದ ವೈರಾಣು ಸೋಂಕು ಏಷ್ಯಾಖಂಡದ ಚೀನ ಮತ್ತು ಭಾರತಕ್ಕೆ ದಿನ ಬೆಳಗಾಗುವುದರೊಳಗೆ ಹರಡಲು ಸಾಧ್ಯವಿದೆ. ಈ ಕಾರಣದಿಂದ ಎಲ್ಲೋ ಚೀನಾದಲ್ಲಿ ರೋಗ ಬಂದಿದೆ ನಮಗೇನೂ ಆಗದು ಎಂದು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಎಬೋಲಾ ಕಳೆದ ವರ್ಷ ಮಾಡಿದ ದಾಂಧಲೆ ನಮಗೆಲ್ಲಾ ನೆನಪಿದೆ. 2003ರಲ್ಲಿ SARS ರೋಗ ಮತ್ತು 2012 ರಲ್ಲಿ MERS ರೋಗ 2017 ರಲ್ಲಿ ಎಬೋಲಾ ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ಮಾತ್ರ ಈ ರೀತಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಿದೆ. ಇಲ್ಲವಾದಲ್ಲಿ ಕಣ್ಣಿಗೆ ಕಾಣಿಸದ ವೈರಾಣುಗಳು ಮನುಕುಲಕ್ಕೆ ಪ್ರತಿ ದಿನ ಹೊಸ ಹೊಸ ರೋಗಗಳನ್ನು ತಂದೊಡ್ಡಿ ನಮ್ಮ ಅಸ್ತಿತ್ವಕ್ಕೆ ಕುಂದುಂಟಾಗಬಹುದು. ಅದಕ್ಕಾಗಿಯೇ ನಾವೆಲ್ಲಾ ಸೂಕ್ತ ಜಾಗರೂಕತೆ ವಹಿಸಿ ನಮ್ಮ ಆರೊಗ್ಯವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com Email: drmuraleemohan@gmail.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!