ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ

ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ ಹುಟ್ಟು ಹಾಕಿದೆ. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು.

World-Senior-Citizens-day- ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆಕೋವಿಡ್-19 ಮನುಷ್ಯನ ನಿಯಂತ್ರಣಕ್ಕೆ ಸಿಗದೆ ನಾಗಾಲೋಟದಿಂದ ವಿಶ್ವದೆಲ್ಲೆಡೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಇದೆ. ಇದರ ಜೊತೆಗೆ ಜನರಲ್ಲಿ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ವಿಶೇಷವಾದ ಭಯ, ಭೀತಿ ಕಳವಳ ಮತ್ತು ಚಿಂತೆಯನ್ನು ಹುಟ್ಟು ಹಾಕಿ ಮಾನಸಿಕವಾಗಿ ಅವರನ್ನು ಜರ್ಜರಿತಗೊಳಿಸಿದೆ ಎಂದರೂ ತಪ್ಪಾಗಲಾರದು. ಮಕ್ಕಳು ಮತ್ತು ಯುವಕರಲ್ಲಿ ಅಷ್ಟೇನೂ ಮಾನಸಿಕವಾಗಿ ಪರಿಣಾಮ ಬೀರದಿದ್ದರೂ ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆಯನ್ನು ಹುಟ್ಟು ಹಾಕಿದೆ.

ಅತಿಯಾದ ಭಯ, ಒತ್ತಡ ಮತ್ತು ಮಾನಸಿಕವಾದ ಹಿಂಸೆಯಿಂದಾಗಿ ಮನೋವ್ಯಾಕುಲತೆ ದ್ವಿಗುಣವಾಗಿರುವುದಂತೂ ನಿಜವಾದ ಮಾತು. ಅಲ್ಲದೆ ವಯಸ್ಕರಲ್ಲಿ ಕಾಡುವ ಏಕಾಂಗಿತನ, ಖಿನ್ನತೆ, ಕಾಡುವ ಇತರ ಕಾಯಿಲೆಗಳು ಇವೆಲ್ಲದರ ಜೊತೆಗೆ ಈ ಔಷಧಿ ಮತ್ತು ಲಸಿಕೆ ಇಲ್ಲದ ಕೋವಿಡ್-19 ರೋಗ ಬಹಳಷ್ಟು ಭೀತಿ ಉಂಟುಮಾಡಿರುವುದಂತೂ ಸೂರ್ಯಚಂದ್ರರಷ್ಟೇ ನಿಜ. ಈ ಚಿಂತೆಯಿಂದ ಹೊರಬರಲು ಆಲ್ಕೋಹಾಲ್ ಸೇವನೆ, ಧೂಮಪಾನ, ನಿದ್ದೆ ಮಾತ್ರೆ ಮುಂತಾದವುಗಳ ಮೊರೆ ಹೋಗಿ ಮೊದಲೇ ಕೆಟ್ಟು ಹೋಗಿರುವ ಆರೋಗ್ಯ ಮತ್ತಷ್ಟು ಬಿಗಡಾಯಿಸುವುದಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ.

ಇದರ ನಡುವೆ ಈ ರೋಗವನ್ನು ವೈಭವೀಕರಿಸಿ ಒಂದು ಬಹುದೊಡ್ಡ ಜಾಗತಿಕ ಸಮಸ್ಯೆ, ಚಿಕಿತ್ಸೆ ಇಲ್ಲದ ರೋಗ, ರೋಗ ಬಂದರೆ ಸಾಯುವುದು ಖಚಿತ ಎಂದು ಬಿಂಬಿಸುವ ದೃಶ್ಯ ಮತ್ತು ಅಚ್ಚು ಮಾಧ್ಯಮಗಳಿಂದಾಗಿ ವಯಸ್ಕರ ದಿಗಿಲು ಮತ್ತಷ್ಟು ದ್ವಿಗುಣವಾಗಿದೆ. ವಿಷಯವನ್ನು ವೈಭವೀಕರಿಸುವ ಆತುರದಲ್ಲಿ ಚಿತ್ರವಿಚಿತ್ರವಾದ ವೈರಾಣುಗಳ ದೃಶ್ಯಗಳನ್ನು ಪದೇ ಪದೇ ತೋರಿಸಿ ಜನರು ಉಸಿರಾಡಲು ಕಷ್ಟಪಡುವ ಇನ್ನಾವುದೋ ಚಿತ್ರ ತೋರಿಸಿ ತಮ್ಮ TRP ಏರಿಸುವ ಭರದಲ್ಲಿ ವಯೋವೃದ್ಧರು ಮತ್ತು ವಯಸ್ಕರ ಮಾನಸಿಕ ಆರೋಗ್ಯ ಹಾಳು ಮಾಡಿದ ಅತಿ ಹೆಚ್ಚು ಶ್ರೇಯಸ್ಸು ದೃಶ್ಯಮಾದ್ಯಮಗಳಿಗೆ ಸಲ್ಲುತ್ತದೆ ಎಂದರೂ ತಪ್ಪಾಗಲಾರದು.

ಏನು ಮಾನಸಿಕ ತೊಂದರೆಗಳು ಉಂಟಾಗುತ್ತದೆ?

ಔಷಧಿ ಇಲ್ಲದ ಲಸಿಕೆ ಇಲ್ಲದ ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಜನಸಾಮಾನ್ಯರು ಭಯಭೀತರಾಗುವುದು ಮಾನಸಿಕ ಒತ್ತಡಕ್ಕೊಳಗಾಗುವುದು, ಖಿನ್ನತೆ ಉಂಟಾಗುವುದು, ಸಿಟ್ಟುಗೊಳ್ಳುವುದು ಅಥವಾ ಹತಾಶರಾಗುವುದು ಸಹಜ. ಇಂತಹಾ ಸಂದರ್ಭಗಳಲ್ಲಿ ಅನಕ್ಷರಸ್ಥರು, ರೋಗದ ಬಗ್ಗೆ ಮಾಹಿತಿ ಇಲ್ಲದವರು, ವಯೋವೃದ್ಧರು, ಮಾನಸಿಕ ಆರೋಗ್ಯ ಸರಿಯಿಲ್ಲದವರು ಬಹಳ ಬೇಗ ಕಂಗಾಲಾಗುತ್ತಾರೆ. ಇಂತಹ ವ್ಯಕ್ತಿಗಳು ಮಾನಸಿಕವಾಗಿ ಬಹಳ ದುರ್ಬಲರಾಗಿರುತ್ತಾರೆ. ಬಾಹ್ಯ ಮೂಲಗಳಿಂದ ಸಿಗುವ ವಿಷಯಗಳು, ತಪ್ಪು ಮಾಹಿತಿಗಳು ಮತ್ತು ಅತಿಯಾದ ವೈಭವೀಕೃತಗೊಂಡ ದೃಶ್ಯಗಳು ಅವರನ್ನು ಮತ್ತಷ್ಟು ಗಲಿಬಿಲಿಗೊಳಗಾಗುವಂತೆ ಮಾಡಿ ಮಾನಸಿಕ ಗೊಂದಲ ಉಂಟುಮಾಡಿ ಅವರನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿ ಬಿಡುತ್ತದೆ. ಪದೇ ಪದೇ ಅದೇ ವಿಚಾರದ ಬಗ್ಗೆ ರೋಗದ ಬಗ್ಗೆ ಚಿಂತಿಸುತ್ತಾ ಇರುತ್ತಾರೆ.

ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ

ಎಲ್ಲಿಂದಲೋ ವೈರಾಣು ಬಂದು ಮೈಮೇಲೆ ಬಂದಂತೆ ಭಾಸವಾಗುವುದು, ಭಯಭೀತರಾಗುವುದು, ನಿದ್ರಾಹೀನತೆ, ಒಬ್ಬರೇ ಮಲಗಲು ಭೀತಿಪಡುವುದು ಮುಂತಾದ ಕ್ರಿಯೆಗಳನ್ನು ಅವರಿಗರಿವಿಲ್ಲದೆ ಮಾಡುವ ಸಾಧ್ಯತೆಯೂ ಇರುತ್ತದೆ. ತಮ್ಮ ದೇಹಕ್ಕೆ ವೈರಾಣು ಸೇರಿದೆ ಎಂದು ಪದೇ ಪದೇ ಸ್ನಾನ ಮಾಡುವುದು, ಕೈತೊಳೆಯುವುದು, ರೂಮಿನಿಂದ ಹೊರಬರಲು ಹೆದರುವುದು ಹೀಗೆ ಹತ್ತು ಹಲವು ರೀತಿಯಲ್ಲಿ ಪ್ರಕಟಗೊಳ್ಳಬಹುದು.

ಇವೆಲ್ಲವನ್ನು ಸಕಾಲದಲ್ಲಿ ಗುರುತಿಸಿ ಆಪ್ತ ಸಮಾಲೋಚನೆ ನಡೆಸದಿದ್ದಲ್ಲಿ ಅವರು ಮತ್ತಷ್ಟು ಗೊಂದಲಕ್ಕೊಳಗಾಗಿ ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ನಿದ್ರಾಹೀನತೆ, ನಿರಾಸಕ್ತಿ, ಹಸಿವಿಲ್ಲದಿರುವುದು, ಭಯಭೀತರಾಗುವುದು ಇವೆಲ್ಲವೂ ಮೇಳೈಸಿ ಮೊದಲೇ ಇದ್ದ ಇತರ ಕಾಯಿಲೆಗಳೂ ಬಿಗಡಾಯಿಸುವ ಸಾದ್ಯತೆ ಮುಕ್ತವಾಗಿರುತ್ತದೆ. ಒಟ್ಟಿನಲ್ಲಿ ಇದೊಂದು ಸಂಕೀರ್ಣವಾದ ಸಮಸ್ಯೆಗಳಿಗೆ ನಾಂದಿ ಹಾಡಿ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಹದಗೆಟ್ಟು ಮಾರಣಾಂತಿಕವಾಗುವ ಸಾಧ್ಯತೆ ಅಥವಾ ಆತ್ಮಹತ್ಯಾ ಯೋಚನೆಗಳಿಗೂ ನಾಂದಿ ಹಾಡಬಹುದು.

ಏನು ಮಾಡಬೇಕು?

1. ವಯಸ್ಕರಿಗೆ ಅತೀ ಹೆಚ್ಚು ಗಮನ ನೀಡಬೇಕು. ಪದೇ ಪದೇ ಅವರ ಬಗ್ಗೆ ವಿಚಾರಿಸಿ ಅವರ ಬಗ್ಗೆ ವಿಶೇಷ ಕಾಳಜಿ ಮತ್ತು ಮುತುವರ್ಜಿ ತೆಗೆದುಕೊಳ್ಳಬೆಕು.

2. ಮನೋರೋಗ ತಜ್ಞರ ಬಳಿ ಆಪ್ತ ಸಮಾಲೋಚನೆ ನಡೆಸಿ ರೋಗದ ಬಗ್ಗೆ ತಿಳಿಹೇಳಬೇಕು.

3. ಅತಿರಂಜಿತವಾಗಿ, ವೈಭವೀಕರಿಸುವ ಖಿಗಿ ಚಾನೆಲ್‍ಗಳನ್ನು ಇಂತಹ ದುರ್ಬಲ ಮನಸ್ಸಿನ ವಯಸ್ಕರು ನೋಡಲೇಬಾರದು.

4. ವಯಸ್ಕರನ್ನು ಏಕಾಂಗಿಯಾಗಿ ಇರಲು ಬಿಡಬಾರದು. ಯಾರಾದರೂ ಜೊತೆಯಲ್ಲಿಯೇ ಇರಬೇಕು.

5. ರೋಗದ ಬಗ್ಗೆ ಪೂರ್ಣ ಮಾಹಿತಿ, ನೀಡಿ ತಪ್ಪು ಮಾಹಿತಿ ದೊರಕದಂತೆ ಎಚ್ಚರ ವಹಿಸಬೇಕು. ಅವರಿಗೆ ಮಾನಸಿಕ ಸಾಂತ್ವನ ಧೈರ್ಯ ಮತ್ತು ಭರವಸೆ ನೀಡಬೇಕು. ಅಗತ್ಯವಿದ್ದಲ್ಲಿ ವೈದ್ಯರ ಸೂಚನೆ ಮೇರೆಗೆ ಮಿಥ್ಯ ಮಾತ್ರೆಗಳನ್ನು (ಪ್ಲಾಸೆಬೋ ಔಷಧಿ) ನೀಡಬಹುದು.

6. ವಯಸ್ಕರು ಅವರಿಗೆ ಪ್ರಿಯವಾದ ಹಾಡು ಕೇಳುವುದು, ಪುಸ್ತಕ ಓದುವುದು, ಸಂಗೀತ ಆಲಿಸುವುದು ಮಾಡಬಹುದು.

7. ಯೋಗ, ಪ್ರಾಣಾಯಾಮ ಧ್ಯಾನ ಮುಂತಾದವುಗಳಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಯಾವುದೇ ಕಾರಣಕ್ಕೂ ಆಲ್ಕೋಹಾಲ್, ಧೂಮಪಾನ ಮತ್ತು ಔಷಧಿಗಳ ಮೊರೆ ಹೋಗದಂತೆ ನೋಡಿಕೊಳ್ಳಬೇಕು.

8. ನಿರಂತರ ವ್ಯಾಯಾಮ, ಆರೋಗ್ಯಪೂರ್ಣವಾದ ಸಮತೋಲಿತ ಆಹಾರ, ದಿನಕ್ಕೆ 6 ರಿಂದ 8 ಗಂಟೆಗಳ ನಿದ್ರೆ, 2 ರಿಂದ 3 ಲೀಟರ್ ನೀರು ಸೇವಿಸಿ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೂ ಗಮನ ನೀಡಬೇಕು. ದೈಹಿಕ ಆರೋಗ್ಯ ಚೆನ್ನಾಗಿದ್ದಲ್ಲಿ ಮಾನಸಿಕ ಆರೋಗ್ಯ ತನ್ನಿಂತಾನೇ ವೃದ್ಧಿಸುತ್ತದೆ. ದೈಹಿಕ ಆರೋಗ್ಯ ಹದಗೆಟ್ಟಲ್ಲಿ ಜೀವ ಭಯ ಉಂಟಾಗಿ ಅನಗತ್ಯ ಮಾನಸಿಕ ನೆಮ್ಮದಿ ಹಾಳಾಗಿ, ಮಾನಸಿಕ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ.

9. ಮನೆಯಲ್ಲಿರುವ ವೃದ್ಧರನ್ನು, ವಯಸ್ಕರನ್ನು ಏಕಾಂಗಿಯಾಗಿರಲು ಬಿಡಬಾರದು. ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು. ವಯಸ್ಕರು ಒಂದು ರೀತಿಯಲ್ಲಿ ಮಕ್ಕಳಂತೆ. ಅವರಿಗೆ ನಿರಂತರವಾದ ಗಮನಹರಿಸುವಿಕೆ ಅತಿ ಅಗತ್ಯ. ನಿರ್ಲಕ್ಷ್ಯಕ್ಕೆ ಒಳಗಾದರೆ ಅವರು ಮಾನಸಿಕವಾಗಿ ಜರ್ಜರಿತರಾಗುತ್ತಾರೆ.

ಏನು ಮಾಡಬಾರದು?

1. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು. ಅವರ ಎಲ್ಲಾ ಸಮಸ್ಯೆಗಳಿಗೆ ಕಿವಿಯಾಗಬೇಕು. ಅವರ ಎಲ್ಲಾ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅವರಿಗೆ ಸಾಂಕ್ರಾಮಿಕ ರೋಗ ತಗಲುತ್ತದೆ ಎಂದು ಅವರನ್ನು ಬೇರೆಯೇ ರೂಮಿನಲ್ಲಿ ಕೂಡಿ ಹಾಕಿ ಬರೀ ಊಟ, ಕಾಫಿ, ತಿಂಡಿ ನೀಡಿ ದಿಗ್ಭಂಧನ ಮಾಡಿದ್ದಲ್ಲಿ ಖಂಡಿತವಾಗಿಯೂ ಅವರು ಮಾನಸಿಕವಾಗಿ ಕುಗ್ಗಿ ಹೋಗಿ ಮಾನಸಿಕ ಆರೋಗ್ಯ ಹದಗೆಡುವುದರಲ್ಲಿ ಸಂಶಯವೇ ಇಲ್ಲ.

2. ಋಣಾತ್ಮಕವಾದ ವಿಚಾರಗಳನ್ನು ಬಹಳ ನಾಜೂಕಾಗಿ ಹೇಳಬೇಕು. ಕೋವಿಡ್-19 ಬಂದರೆ ನೀವು ಸಾಯುತ್ತೀರಿ ಎಂದು ಅವರಿಗೆ ನೇರವಾಗಿ ಹೇಳಿದರೆ ಅವರು ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗಿ ರೋಗ ಬರುವ ಮೊದಲೇ ಸಾಯುವ ಅವಕಾಶ ಇರುತ್ತದೆ. ಧನಾತ್ಮಕವಾದ ಆಲೋಚನೆ ಬರುವಂತಹ ವಿಚಾರಗಳನ್ನು ಮಾತ್ರ ಅವರಿಗೆ ಹೇಳಬೇಕು. ಅತಿ ರಂಜಿತವಾದ, ವೈಭವೀಕರಿಸಿದ ವಿಚಾರಗಳನ್ನು ಅವರಿಗೆ ತೋರಿಸಬೇಡಿ, ಹೇಳಬೇಡಿ ಮಾನಸಿಕ ಸಾಂತ್ವನ ನೆಮ್ಮದಿ ನೀಡುವ ವಿಚಾರಗಳನ್ನು ಮಾತ್ರ ಅವರ ಮುಂದೆ ತೆರೆದಿಡಬೇಕು. ಋಣಾತ್ಮಕ ವಿಚಾರಗಳನ್ನು ಅವರ ಮುಂದೆ ಚರ್ಚಿಸಲೂಬಾರದು.

3. ಸಾಂಕ್ರಾಮಿಕ ರೋಗಗಳ ಬಗ್ಗೆ, ಕೋವಿಡ್-19 ರೋಗದ ಬಗ್ಗೆ ತಪ್ಪು ಮಾಹಿತಿ ನೀಡುವ ಸಾಮಾಜಿಕ ಜಾಲತಾಣಗಳ ಸಂಪರ್ಕ ಹಿರಿಯ ನಾಗರೀಕರಿಗೆ ಬಾರದಂತೆ ಎಚ್ಚರವಹಿಸಬೇಕು. ಋಣಾತ್ಮಕ ವಿಚಾರಗಳು ಬಹಳ ಬೇಗನೆ ವಯಸ್ಕರ ಮನಸ್ಸಿಗೆ ನಾಟುತ್ತದೆ. ಧನಾತ್ಮಕ ವಿಚಾರಗಳಿಗಿಂತಲೂ ಋಣಾತ್ಮಕ ವರದಿಗಳು ಹೆಚ್ಚು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದಿದೆ. ರೋಗದ ಬಗ್ಗೆ ಸರಿಯಾದ ಸೂಕ್ತವಾದ ವಿಚಾರಗಳನ್ನು ಮಾತ್ರ ಇಂತಹಾ ವಯಸ್ಕರಿಗೆ ಮತ್ತು ಮಾನಸಿಕವಾಗಿ ದುರ್ಬಲರಾಗಿರುವ ವ್ಯಕ್ತಿಗಳಿಗೆ ಅಗತ್ಯವಿದ್ದಲ್ಲಿ ಮಾತ್ರ ನೀಡತಕ್ಕದ್ದು. ಮರಣದ ಪ್ರಮಾಣದ ಶೇಕಡಾವಾರು ದಾಖಲೆಗಳನ್ನು ತಿಳಿಸಲೇ ಬೇಕಾದ ಅನಿವಾರ್ಯತೆ ಇಲ್ಲ.

ಕೊನೆಮಾತು

corona-and-old-ageಸಾಂಕ್ರಾಮಿಕ ರೋಗಗಳು ಸಮುದಾಯದಲ್ಲಿ ಹರಡುತ್ತಿರುವಾಗ ಜನರು ಮನೋಕ್ಷೋಭೆಗೆ ಒಳಪಡುವುದು, ಮಾನಸಿಕ ಒತ್ತಡಕ್ಕೊಳಗಾಗುವುದು ಮತ್ತು ಭಯಭೀತರಾಗುವುದು ಸಹಜ. ಮಾನಸಿಕ ಒತ್ತಡ ಮತ್ತು ಭಯ ಒಂದು ಹಂತದವರೆಗೆ ಮನುಷ್ಯನ ಕಾರ್ಯಕ್ಷಮತೆಯನ್ನು ನಿಯಂತ್ರಿಸುತ್ತದೆ ಮತ್ತು ಮನುಷ್ಯನ ಪರಿಪೂರ್ಣ ಬೆಳವಣಿಗೆಗೆ ಅನಿವಾರ್ಯ. ಆದರೆ ಒಂದು ಹಂತವನ್ನು ದಾಟಿದಾಗ ಈ ಭಯ, ಒತ್ತಡ ಮತ್ತು ಗೊಂದಲ ಆ ವ್ಯಕ್ತಿಗೆ ಮಾರಕವಾಗುವ ಸಾಧ್ಯತೆಯೂ ಇರುತ್ತದೆ.

ಒಬ್ಬ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ ಎಂಬುದನ್ನು ಆತನ ಹಿತೈಷಿಗಳು ಅರಿತುಕೊಂಡಲ್ಲಿ ಆತನಿಗೆ ಚಿಕಿತ್ಸೆ ನೀಡುವುದು ಬಹಳ ಸುಲಭ. ಆತನಿಗೆ ಬೇಕಾದ ಸಾಂತ್ವನ, ಮಾರ್ಗದರ್ಶನ, ಆಪ್ತ ಸಮಾಲೋಚನೆ ಮುಖಾಂತರ ರೋಗದ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿ, ಅವ್ಯಕ್ತವಾದ ಭಯ, ಗೊಂದಲ ಮತ್ತು ಅಪನಂಬಿಕೆಗಳನ್ನು ದೂರ ಮಾಡಿದಾಗ ಬಹುತೇಕ ಹೆಚ್ಚಿನ ಎಲ್ಲಾ ಸಮಸ್ಯೆಗಳು ದೂರವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾವಾಗ ಸಮಸ್ಯೆ ಇದೆ ಎಂದು ತಿಳಿಯದಾದಾಗ ಸಮಸ್ಯೆ ಉಲ್ಬಣಿಸುತ್ತದೆ. ಸಮಸ್ಯೆಯ ಮೂಲ ಯಾವುದು ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾದಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ವಯಸ್ಕರಲ್ಲಿ ತಮಗೆ ಎಲ್ಲಿ, ಯಾವಾಗ ಸೋಂಕು ತಗಲುತ್ತದೆ ಎಂಬ ಅವ್ಯಕ್ತ ಆತಂಕ, ತಮಗೆ ಸೋಂಕು ತಗುಲಿ ಸಾವು ಬರಬಹುದು ಎಂಬ ಭಯ ಮತ್ತು ಕೋವಿಡ್-19 ರೋಗದ ಬಗ್ಗೆ ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣ ಮತ್ತು ದೃಶ್ಯಮಾದ್ಯಮಗಳಲ್ಲಿ ಒತಪ್ರೋತವಾಗಿ ಎಗ್ಗಿಲ್ಲದೆ ಹರಿದುಬರುವ ಸುಳ್ಳುಕತೆಗಳು, ಸಾವಿನ ವೈಭವೀಕರಣ, ವೈರಾಣುಗಳ ವರ್ಣನೆ ಇವೆಲ್ಲವೂ ಮೇಳೈಸಿ, ವಯಸ್ಕ ಮನುಷ್ಯ ಯಾವುದೇ ರೋಗವಿಲ್ಲದಿದ್ದರೂ ರೋಗಿಯಂತಾಗಿ ಬಿಡುತ್ತಾನೆ. ಅದಕ್ಕಾಗಿಯೇ ಇಂತಹಾ ಎಲ್ಲಾ ಮಾಧ್ಯಮಗಳಿಂದ ದೂರವಿದ್ದು, ಅಂತಹಾ ಚಂಚಲ ಮನಸ್ಸಿನ ವಯಸ್ಕರಿಗೆ ಸಾಂತ್ವನ, ಆಶ್ವಾಸನೆ ಮತ್ತು ಭರವಸೆಯ ಮಾತು ಆಡಿ ಮನೋಧೈರ್ಯ ನೀಡಿದಲ್ಲಿ ಅವರು ಮನೋಸ್ಥೈರ್ಯ ಕುಸಿಯದಂತೆ ಮಾಡಬಹುದು.

Also Read: ವೃದ್ಧರನ್ನು ಜೀವನೋತ್ಸಾಹದಲ್ಲಿರಿಸಿ

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!