ಡೆಲ್ಟಾ ಪ್ಲಸ್ ರೂಪಾಂತರಿ : ದೇಶದಲ್ಲಿ ಕೊರೊನಾ 3ನೇ ಅಲೆಗೂ ಕಾರಣವಾಗಬಲ್ಲುದೇ?

 ಡೆಲ್ಟಾ ಪ್ಲಸ್ ಊಹೆ ಎಲ್ಲಾ ಉಲ್ಟಾ ಪಲ್ಟಾ…..

“The world is in a very ‘ Dangerous period ‘ of COVID-19 pandemic compounded by more transmissible variants like Delta ,which is continuing to evolve and mutate ”
–Tedros Adhanom Ghebreyesus
Director General W.H.O.”

ಕೋವಿಡ್-19 ಸೋಂಕನ್ನು ಕ್ಷಿಪ್ರವಾಗಿ ಹರಡಬಲ್ಲ ಡೆಲ್ಟಾ ರೂಪಾಂತರಿ ಜಗತ್ತಿನ 98 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಈ ಪೈಕಿ 11 ರಾಷ್ಟ್ರಗಳಲ್ಲಿ ಎರಡು ವಾರಗಳ ಅವಧಿಯಲ್ಲಿ ಗರಿಷ್ಠ ಪ್ರಕರಣಗಳು ಪತ್ತೆಯಾಗಿದ್ದು, ಇನ್ನಷ್ಟು ರಾಷ್ಟ್ರಗಳಿಗೆ ತೀವ್ರವಾಗಿ ಹರಡುವ ಅಪಾಯ ಗೋಚರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಕೋವಿಡ್-19 ಹರಡಬಲ್ಲ ಪ್ರಭೇದಗಳ ಪೈಕಿ ಅಲ್ಫಾ, ಬೀಟಾ, ಗಾಮಾ, ಡೆಲ್ಟಾ ಎಂಬ ನಾಲ್ಕು ಪ್ರಭೇದಗಳನ್ನು ‘ವೆರಿಯಂಟ್ ಆಫ್ ಕನ್ಸರ್ನ ‘ ಎಂದು ಗುರುತಿಸಲಾಗಿದೆ .ಅದರಲ್ಲಿ ಡೆಲ್ಟಾ ಪ್ರಭೇದ ಅತಿ ವೇಗವಾಗಿ ಸೋಂಕನ್ನು ಹರಡಬಲ್ಲದಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಅಪಾಯಕಾರಿಯಾಗುವ ಲಕ್ಷಣಗಳಿವೆ. ಅಲ್ಫಾ ಪ್ರಭೇದ ಜಾಗತಿಕವಾಗಿ 170 ರಾಷ್ಟ್ರಗಳಲ್ಲಿ, ಬೀಟಾ ಪ್ರಭೇದ 119 ರಾಷ್ಟ್ರಗಳಲ್ಲಿ, ಗಾಮಾ ಪ್ರಭೇದವು 71 ರಾಷ್ಟ್ರಗಳಲ್ಲಿ ಪತ್ತೆಯಾಗಿರುವುದಾಗಿ ಹೇಳಿದೆ.

corona-delta-plus

ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ತೀವ್ರವಾಗಲು ಕಾರಣವಾಗಿದ್ದು ಡೆಲ್ಟಾ (ಬಿ.1.617) ತಳಿಯ ಕರೊನಾ ವೈರಸ್ ಎಂದು ತಜ್ಞರು ಹೇಳಿದ್ದಾರೆ. ಆದರೆ ಡೆಲ್ಟಾ ತಳಿಯ ರೂಪಾಂತರ ತಳಿಯಾದ, ಡೆಲ್ಟಾ ಪ್ಲಸ್ (ಬಿ.1.617.2) ದೇಶದ ಕೆಲವಡೆ ಕಾಣಿಸಿಕೊಂಡಿದೆ. ಡೆಲ್ಟಾ ಪ್ಲಸ್ ತಳಿಯು ಒಂದು ಅಸಕ್ತಿದಾಯಕ ತಳಿ ಎಂದಷ್ಟೇ ವಾರದ ಹಿಂದೆ ಕೇಂದ್ರ ಸರಕಾರ ಹೇಳಿತ್ತು. ಈಗ, ಇದು ಕಳವಳಕಾರಿ ರೂಪಾಂತರ ತಳಿ ಎಂದು ಘೋಷಿಸಿದೆ. ಕೊರೊನಾ ವೈರಸ್ ನ ಹೊರ ಕವಚದಲ್ಲಿ ಮುಳ್ಳು ಚಾಚಿಕೆಗಳು (Spike protein )ಇರುತ್ತವೆ. ವೈರಸ್ ಗಳು ಮನುಷ್ಯನ ಜೀವಕೋಶಗಳನ್ನು ಪ್ರವೇಶಿಸಲು ಈ ಮುಳ್ಳು ಚಾಚಿಕೆಗಳು ನೆರವಾಗುತ್ತವೆ. ವೈರಸ್ ಎಷ್ಟು ಕ್ಷಿಪ್ರವಾಗಿ ಹರಡುತ್ತದೆ ಎಂಬುದು ಈ ಮುಳ್ಳು ಚಾಚಿಕೆಗಳ ಸಂಖ್ಯೆ ಮತ್ತು ಸ್ವರೂಪವನ್ನು ಆಧರಿಸಿರುತ್ತದೆ. ಮೂಲ ಕೊರೊನಾ ವೈರಸ್ ನಲ್ಲಿ ಈ ಮುಳ್ಳು ಚಾಚಿಕೆಗಳ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಮೊದಲ ಅಲೆಯಲ್ಲಿ ಸೋಂಕು ನಿಧಾನವಾಗಿ ಹರಡಿತು.

ಜಗತ್ತಿನ ವಿವಿಧೆಡೆ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ಹೊಸ ತಳಿಯ ವೈರಸ್ಸಿನಲ್ಲಿ ಈ ಮುಳ್ಳು ಚಾಚಿಕೆಗಳು ಹೆಚ್ಚಾಗಿದ್ದವು. ಹೀಗಾಗಿ ಎರಡನೇ ಅಲೆ ತೀವ್ರವಾಗಿತ್ತು. ಭಾರತದಲ್ಲಿ ಮೊದಲು ಪತ್ತೆ ಮಾಡಿದ್ದ ಡೆಲ್ಟಾ ತಳಿಯಲ್ಲೂ ಮುಳ್ಳು ಚಾಚಿಕೆಗಳು ಹೆಚ್ಚಾಗಿದ್ದವು. ಹೀಗಾಗಿಯೇ ಎರಡನೇ ಅಲೆ ಅತ್ಯಂತ ಕ್ಷಿಪ್ರವಾಗಿ ಹರಡಿತು. ಡೆಲ್ಟಾ ಪ್ಲಸ್ ತಳಿಯಲ್ಲಿನ ಮುಳ್ಳು ಚಾಚಿಕೆಗಳು ಮತ್ತಷ್ಟು ಹೆಚ್ಚಾಗಿವೆ. ಹೀಗಾಗಿ ಸೋಂಕು ಹರಡುವಿಕೆಗೆ ಈ ತಳಿಯು ಮತ್ತಷ್ಟು ವೇಗ ನೀಡುತ್ತದೆ ಎಂದು ಈ ತಳಿಯ ವಂಶವಾಹಿ ಅಧ್ಯಯನ ನಡೆಸಿರುವ ಭಾರತದ ವಿಜ್ಞಾನಿಗಳು ಹೇಳಿದ್ದಾರೆ. ಡೆಲ್ಟಾ ಪ್ಲಸ್ ತಳಿಯಲ್ಲಿನ ಮುಳ್ಳು ಚಾಚಿಕೆಗಳು ತೀವ್ರಗಾಮಿ ಸ್ವರೂಪದವು. ಹೀಗಾಗಿ, ಇವು ಅತ್ಯಂತ ತ್ವರಿತವಾಗಿ ಹರಡುವ ಸಾಮರ್ಥ್ಯ ಹೊಂದಿವೆ.

ಭಾರತಕ್ಕೂ ಬಿಟ್ಟಿಲ್ಲ ಆತಂಕ :

ದೇಶದಲ್ಲಿ ಕೊರೊನಾ 2ನೇ ಅಲೆ ಇಳಿಮುಖವಾಗಿದ್ದು ಪರಿಸ್ಥಿತಿ ಕೊಂಚ ಸುಧಾರಿಸುವತ್ತ ಸಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವಾಗಲೇ ಡೆಲ್ಟಾ ಪ್ಲಸ್ ರೂಪಾಂತರಿ ಕಾಲಿಟ್ಟಿದ್ದು ,ಆತಂಕದ ವಾತಾವರಣ ಸೃಷ್ಟಿಸಿದೆ. ಡೆಲ್ಟಾ ಪ್ಲಸ್ ತೀವ್ರತೆಯ ಪ್ರಮಾಣ ಎಷ್ಟೆನ್ನುವುದು ಸಧ್ಯದ ಮಟ್ಟಿಗೆ ತಿಳಿದಿಲ್ಲ. ಇದೇ ವೇಳೆ ಡೆಲ್ಟಾ ಪ್ಲಸ್ 3ನೇ ಅಲೆಗೂ ಕಾರಣವಾಗಬಲ್ಲುದೇ ಎಂಬ ಅನುವಾನವೂ ಹುಟ್ಟಿದೆ. ದೇಶಾದ್ಯಂತ ಡೆಲ್ಟಾ ಪ್ಲಸ್ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ ಇಲ್ಲಿಯ ವರೆಗೆ.ಡೆಲ್ಟಾ ಪ್ಲಸ್ ಪ್ರಭೇದದ ಹೊಸ ಕೇಸ್ ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಡೆಲ್ಟಾ ಪ್ಲಸ್ ರೂಪಾಂತರಿ ಎಂಬುದು ಇದೀಗ ಜಿನೋಮ್ ಸಿಕ್ವೆನ್ಸಿಂಗ್ ಬಳಿಕ ಬೆಳಕಿಗೆ ಬಂದಿದೆ. ಸಧ್ಯ ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಬಹಳ ಕಡಿಮೆ ಕೊರೊನಾ ಪ್ರಕರಣಗಳನ್ನು ಒಳಪಡಿಸುತ್ತಿರುವುದರಿಂದ ಈಗಾಗಲೇ ಈ ವೈರಸ್ ಸಾಕಷ್ಟು ಪ್ರಮಾಣದಲ್ಲಿ ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

“Delta varient is even more transmissible ” ಎಂದು ವಿಶ್ವ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹೆಗಾರರಾದ ಮಾರಿಯ ವ್ಹಾನ್ ಕೆರಕೋವ್ ಎಚ್ಚರಿಸಿದ್ದಾರೆ. ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶಗಳಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಹೊರತಾಗಿ ಜಮ್ಮು ಮತ್ತು ಕಾಶ್ಮೀರ, ದಕ್ಷಿಣ ಕರ್ನಾಟಕದ ಮೈಸೂರು, ಬೆಂಗಳೂರು, ತಮಿಳುನಾಡಿನಲ್ಲಿ ಮುಂತಾದ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಮಾನದಂಡಗಳನ್ನು ಅನುಸರಿಸಬೇಕೆಂದು ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಡೆಲ್ಟಾ ಅಪಾಯ ಮತ್ತು ಅತ್ಯಂತ ದೊಡ್ಡ ಸವಾಲು ಎಂದು ಶ್ವೇತ ಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಟನಿ ಫೌಜಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳ ಪೈಕಿ ಡೆಲ್ಟಾ ರೂಪಾಂತರಿಯಿಂದ ಸೋಂಕಿತರಾಗುತ್ತಿರುವವರ ಪ್ರಮಾಣ ಶೇ.20ಕ್ಕೆ ಏರಿದೆ. ಬ್ರಿಟನ್ ನಲ್ಲಿ ಆದಂತೆ ಇದೀಗ ಅಮೆರಿಕಕ್ಕೂ ಡೆಲ್ಟಾ ರೂಪಾಂತರಿ ವೈರಸ್ ಅತ್ಯಂತ ಅಪಾಯಕಾರಿಯಾಗಿ ಹೊರಹೊಮ್ಮಿದೆ ಎಂದಿದ್ದಾರೆ. ‘ತ್ವರಿತವಾಗಿ ಹರಡುವ ಡೆಲ್ಟಾ ಸೇರಿದಂತೆ ರೂಪಾಂತರ ಸೋಂಕುಗಳು ಹಲವು ದೇಶಗಳಲ್ಲಿ ಹೆಚ್ಚಿ ನ ಪರಿಣಾಮ ಬೀರಲಿವೆ.ನಾವು ಕೋವಿಡ್ ಪಿಡುಗಿನ ಸಂಕಷ್ಟ್ಟದ ಕಾಲದಲ್ಲಿದ್ದೇವೆ ‘ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಯಾವುದೇ ದೇಶವು ಡೆಲ್ಟಾ ತಳಿಯ ಪರಿಣಾಮದಿಂದ ಸದ್ಯ ಪಾರಾಗಿಲ್ಲ. ನಿರಂತರವಾಗಿ ಈ ವೈರಸ್ ರೂಪಾಂತರಗೊಳ್ಳುತ್ತಿರುವ ಕಾರಣ ,ಸತತವಾಗಿ ಅದರ ಪರಿಣಾಮಗಳತ್ತಲೂ ಕಣ್ಗಾವಲು ಇಡುತ್ತಾ ,ಪೂರಕವಾಗಿ ಸಾರ್ವಜನಿಕ ಆರೋಗ್ಯ ಸ್ಪಂದಿಸುವಂತೆಯೂ ಸಜ್ಜುಗೊಳ್ಳಬೇಕಿದೆ ಎಂದೂ ಹೇಳಿದೆ .

ರೂಪಾಂತರಿಯ ರಂಗಿನಾಟ :

ಸಾಮಾನ್ಯವಾಗಿ ವೈರಸ್ ಗಳು ಬದುಕುಳಿಯುವುದಕ್ಕಾಗಿ ರೂಪಾಂತರ ಗೊಳ್ಳುತ್ತವೆ. ಅದೇ ರೀತಿ ಕರೊನಾಗೆ ಕಾರಣವಾಗುವ ಸಾರ್ಸ- ಕೋವ್-2 ವೈರಸ್ ಸಹ ತೀವ್ರ ರೂಪಾಂತರಗಳಾಗಿ ಪರಿವರ್ತನೆಗೊಂಡಿದೆ. ಈಗ ಭಾರತದಲ್ಲಿ ಪತ್ತೆಯಾಗಿರುವ ಡೆಲ್ಟಾ ರೂಪಾಂತರಿಯೂ ಇದೇ ಮಾದರಿಯದಾಗಿದೆ. ಡೆಲ್ಟಾ ಎನ್ನುವುದು ಭಾರತದಲ್ಲಿ ಪತ್ತೆಯಾದ ಕೊರೊನಾ ವೈರಸ್ಸಿನ ರೂಪಾಂತರಿ ಪ್ರಭೇದವಾಗಿದೆ. ಭಾರತದಲ್ಲಿ ಕಳೆದ ವರ್ಷ ಡಿಸೆಂಬರ್ ವೇಳೆಗೆ ಈ ವೈರಸ್ ಪತ್ತೆಯಾಗಿತ್ತು. ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಡೆಲ್ಟಾ (ಬಿ.1.617 )ತಳಿ ಎಂಬುದಾಗಿ ಗುರುತಿಸಿದೆ. ಡೆಲ್ಟಾ ಪ್ಲಸ್ ಎನ್ನುವುದು ಡೆಲ್ಟಾದಿಂದ ರೂಪಾಂತರಗೊಂಡ ಇನ್ನೊಂದು ಪ್ರಭೇದವಾಗಿದೆ. ವೈರಸ್ಸಿನ ಪ್ರೋಟೀನ್ ಕಣಗಳಲ್ಲಿ ಆಗಿರುವ ಕೆ.417.ಎನ್ ರೂಪಾಂತರದ ಕಾರಣಕ್ಕೆ ಅದನ್ನು ಡೆಲ್ಟಾ ಪ್ಲಸ್ (ಬಿ.1.617.2)ಎಂದು ಕರೆಯಲಾಗಿದೆ.

ಡೆಲ್ಟಾ ಪ್ಲಸ್ ವೈರಸ್, ಲಸಿಕೆಯಿಂದ ಪಡೆದಿರುವ ಹಾಗೂ ಸೋಂಕಿನಿಂದಾಗಿ ಗಳಿಸಿಕೊಂಡಿರುವ ರೋಗ ನಿರೋಧಕ ಶಕ್ತಿಯನ್ನೇ ಛಿದ್ರ ಛಿದ್ರ ಮಾಡುವಷ್ಟು ಬಲಶಾಲಿ ಆಗಿದೆ. ಈ ರೂಪಾಂತರಿಯು ಅಸಲಿ ಡೆಲ್ಟಾ ರೂಪಾಂತರಿಯ ಎಲ್ಲ ಗುಣವಿಶೇಷಗಳನ್ನು ಹೊಂದಿದೆ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಬೀಟಾ ರೂಪಾಂತರಿಯ ಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ. ಇದರಿಂದಾಗಿಯೇ ಇದು ಕೆಟ್ಟ ಅಪಾಯಕಾರಿಯಾಗಿ ಪರಿಣಮಿಸಿದೆ.

ಡೆಲ್ಟಾ ಪ್ಲಸ್ ಭಾರತ, ಅಮೆರಿಕ, ಬ್ರಿಟನ್, ಪೋರ್ಚುಗಲ್, ಸ್ವಿಜರ್ ಲ್ಯಾಂಡ್, ಜಪಾನ್, ನೇಪಾಳ, ಪೋಲ್ಯಾಂಡ್, ಚೀನಾ ಮತ್ತು ರಷ್ಯಾ ಸೇರಿದಂತೆ ಜಗತ್ತಿನ 85 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಡೆಲ್ಟಾ ಪ್ಲಸ್ ಮೊದಲ ಬಾರಿಗೆ ಮಾರ್ಚದಲ್ಲಿ ಯುರೋಪ್ ನಲ್ಲಿ ಪತ್ತೆಯಾಯಿತು. ಆದರೆ, ಅದು ಸಾರ್ವಜನಿಕಗೊಂಡಿದ್ದು ಮಾತ್ರ ಜೂನ್ 13 ರಂದು. ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ತೀವ್ರತೆರನಾದ ಸಾಂಕ್ರಾಮಿಕ ಎನ್ನಲು ಸಧ್ಯಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಇದು ಹಲವು ಪ್ರದೇಶಗಳಲ್ಲಿ ಕಳವಳಿಕಾರಿಯಾಗಿ ಹೆಚ್ಚುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಇದು ಇತರೇ ರೂಪಾಂತರಿಗಳಿಗಿಂತ ವೇಗವಾಗಿ ಹರಡಬಲ್ಲದೇ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದು ಭಾರತೀಯ ಸಾರ್ಸ- ಕೋವ್- 2ಅನುವಂಶಿಕ ಒಕ್ಕೂಟ (INSACOG)ಸದಸ್ಯ ಪ್ರೊ.ಜಾಹೀದ ಜಮೀಲ್ ಸ್ಪಷ್ಟಪಡಿಸಿದ್ದಾರೆ.

ಅಪಾಯಕಾರಿ ಹೇಗೆ ?

1. ಡೆಲ್ಟಾ ಕೊರೊನಾ ವೈರಸ್ ವಿಶ್ವದ ಪ್ರಬಲ ಸಾಂಕ್ರಾಮಿಕ ಸೋಂಕು. ಡೆಲ್ಟಾ ಪ್ಲಸ್ ಅದೇ ರೀತಿ ಆಗುವ ಭೀತಿ.
2. ಈ ಸೋಂಕಿನ ಲಕ್ಷಣವೇ ಬೇರೆ ರೀತಿ ಇರುತ್ತದೆ. ಶಿಕ್ಷಣಕ್ಕೆ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗದಿರಬಹುದು.
3. ಒಂದು ಡೋಸ್ ಲಸಿಕೆ ಪಡೆದವರಲ್ಲೂ ಸೋಂಕು ತಗಲುವ ಸಾಧ್ಯತೆ ಇದೆ.
4. ಡೆಲ್ಟಾ ಪ್ಲಸ್ ಸೋಂಕಿನ ತೀವ್ರತೆ ಹೆಚ್ಚು. ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಅಧಿಕ.
5. ಸೋಂಕಿನಿಂದ ದೇಹದಲ್ಲಿ ಸೃಷ್ಟಿಯಾದ ಪ್ರತಿಕಾಯ ಶಕ್ತಿಯನ್ನು ಡೆಲ್ಟಾ ಪ್ಲಸ್ ಸೋಂಕು ಭೇದಿಸಬಲ್ಲದು. ಕೋವಿಡ್-19 ದಿಂದ ಚೇತರಿಸಿಕೊಂಡವರ ರೋಗ ನಿರೋಧಕ ಶಕ್ತಿಯನ್ನು ಛಿದ್ರ ಛಿದ್ರ ಮಾಡಿ ಉಲ್ಟಾ ಪಲ್ಟಾ ಮಾಡುವುದು.ಮಾನವನ ಶ್ವಾಸಕೋಶದ ಜೀವಕೋಶಗಳಿಗೆ ಬಲವಾಗಿ ಅಂಟಿಕೊಳ್ಳುವುದರಿಂದಾಗಿ ಕೆಟ್ಟ ಪರಿಣಾಮಗಳಿಗೆ ಹುಟ್ಟು ಹಾಕುವುದು .ಅಪಾಯಕಾರಿಯೂ ಆಗುವುದೆಂದು ರಾಷ್ಟ್ರೀಯ ತಾಂತ್ರಿಕ ಸಮಿತಿಯ ಮುಖ್ಯಸ್ಥ ಡಾ.ಎನ್. ಕೆ. ಅರೋರಾ ಹೇಳಿದ್ದಾರೆ.
6. ದೇಶದಲ್ಲಿ ಡೆಲ್ಟಾ ಪ್ಲಸ್ ವೈರಸ್ ನಿಂದಲೇ 3ನೇ ಅಲೆ ಏಳಬಹುದು ಎಂಬ ಆತಂಕ ಇದೆ.

ತಡೆ ಹೇಗೆ ? :

1. ಈ ವರೆಗೆ ಕೊರೊನಾ ಲಸಿಕೆ ಪಡೆಯದಿದ್ದವರು ಬೇಗನೆ ಲಸಿಕೆ ಹಾಕಿಸಿಕೊಳ್ಳಬೇಕು.
2. ಈಗಾಗಲೇ ಒಂದು ಡೋಸ್ ಲಸಿಕೆ ಪಡೆದವರು ನಿಗದಿತ ಅವಧಿಯಲ್ಲಿ 2ನೇ ಡೋಸ್ ಪಡೆಯಬೇಕು .
3. ಕುಟುಂಬ ಸದಸ್ಯರು, ನೆರೆಹೊರೆಯವರನ್ನು ಲಸಿಕೆ ಪಡೆಯಲು ಉತ್ತೇಜಿಸಬೇಕು .ಐ.ಸಿ.ಎಮ್ .ಆರ್. ನಿರ್ದೇಶಕ ಬಲರಾಮ್ ಬಾರ್ಗವ ಭಾರತದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಡೆಲ್ಟಾಗೆ ಮತ್ತು ಡೆಲ್ಟಾ ಪ್ಲಸ್ ಗೆ ಪರಿಣಾಮಕಾರಿ ಎಂದು ಹೇಳಿರುವುದು ಸಮಾಧಾನ ತಂದಿದೆ.
4. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು .ಸ್ಯಾನಿಟೈಜರ್ ಬಳಸಬೇಕು .ಮೇಲಿಂದ ಮೇಲೆ ಕೈ ತೊಳೆಯಬೇಕು .
5. ಮಾಸ್ಕ್ ಧರಿಸುವುದು .ಮನೆಯೇ ಮಂತ್ರಾಲಯವೆನ್ನುವುದು.
6. ಗಡಿಯಲ್ಲಿ ಕಟ್ಟೆಚ್ಚರ ಕ್ರಮ ತಗೆದುಕೊಳ್ಳುವುದು. ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ಮಾಡಿ ಒಳಗೆ ಬಿಟ್ಟರೆ ಸಾಲುವುದಿಲ್ಲ. ಡೆಲ್ಟಾ ಪ್ಲಸ್ ನಿಂದ ರಾಜ್ಯಕ್ಕಾಗಬಹುದಾದ ಅಪಾಯ ತಡೆಯಬೇಕು ಅಂತಾದರೆ ಗಡಿಯಲ್ಲಿ ಬಿಗಿಯಾದ ನಿರ್ಭಂಧ ಇರಬೇಕು. ಗೋವಾ ರಾಜ್ಯವು ನೆರೆ ರಾಜ್ಯದಿಂದ ಬರುವವರಿಗೆ ಎರಡು ಡೋಸ್ ಲಸಿಕೆ ತಗೆದುಕೊಂಡಿರುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಇಂತಹದೇ ಬಿಗಿ ಕ್ರಮವನ್ನು ಕರ್ನಾಟಕವೂ ಏಕೆ ಜಾರಿಗೊಳಿಸಬಾರದು? ಮಹಾರಾಷ್ಟ್ರ, ಕೇರಳ ಗಡಿಯತ್ತ ಗಂಭೀರವಾಗಿ ಗಮನ ಸರಿಸಬೇಕು.

ದೇಹದ ಹೋರಾಟ ವ್ಯವಸ್ಥೆನ್ನು ಉಲ್ಟಾ ಪಲ್ಟಾ ಮಾಡುವ ಡೆಲ್ಟಾ ಪ್ಲಸ್ ನಿಯಂತ್ರಣಕ್ಕೆ ಗಡಿ ನಿಗಾ ಬಹಳ ಮುಖ್ಯ. ಹೊರ ರಾಜ್ಯಗಳಿಂದ ಬರುವವರಿಗೆ ಗಡಿ ಪ್ರವೇಶಿಸುತ್ತಲೇ ರಾಪಿಡ್ ಆಂಟಿಜನ್ ಟೆಸ್ಟ್ ಮಾಡಬೇಕು. ಆರ್ ಟಿಪಿಸಿಆರ್ ಟೆಸ್ಟ್ ವರದಿ ನೆಗೆಟಿವ್ ಇದ್ದರಷ್ಟೇ ರಾಜ್ಯ ಪ್ರವೇಶಿಸಲು ಅವಕಾಶ ನೀಡಬೇಕು. ರಾಜ್ಯದ ಎಲ್ಲಾ ವಿಮಾನ ನಿಲ್ದಾಣ, ಬಂದರುಗಳಲ್ಲಿ ಆರ್ ಟಿಪಿಆರ್ ಟೆಸ್ಟ್ ಕಡ್ಡಾಯ. ಹೊರ ರಾಜ್ಯಗಳಿಂದ ರೈಲು, ಬಸ್ಸುಗಳಲ್ಲಿ ಬರುವವರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ.

ಕೊನೆಯ ಮಾತು :

ಕೊರೊನಾ ವೈರಸ್ ರೂಪಾಂತರ ಇಷ್ಟಕ್ಕೆ ನಿಲ್ಲುವುದಿಲ್ಲ. ಅದು ಮುಂದುವರಿಯುತ್ತದೆ. ಇದರಿಂದ ರಕ್ಷಿಸಿ ಕೊಳ್ಳಲು ನಮಗೆ ಇರುವುದು ಎರಡೇ ಮಾರ್ಗಗಳು. ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು ಮತ್ತು ಲಸಿಕೆ ಹಾಕಿಸಿಕೊಳ್ಳುವುದು.

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ
ಮೊ :9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!