ನಿಮ್ಮ ಮಗುವಿನ ಇಮ್ಮ್ಯೂನಿಟಿ ಸ್ಟ್ರಾಂಗ್ ಆಗಬೇಕೇ ? ಅತಿಯಾದ ಕಾಳಜಿ, ತುಂಬಾ ನಾಜೂಕಾಗಿ ಮಗುವನ್ನು ಬೆಳೆಸುವುದು ಮಗುವಿನ ಆರೋಗ್ಯಕ್ಕೆ ಮಾರಕ, ಹಾಗೆಯೇ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು, ಜಗಳಗಳು ಮಗುವಿನ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರಲಿ.
ಡಾಕ್ಟ್ರೇ ನನ್ನ ಮಗನಿಗೆ ಪದೇ ಪದೇ ಶೀತ, ಕೆಮ್ಮು, ಜ್ವರ ಬರ್ತಾನೆ ಇರುತ್ತೆ, ಬೇಗನೇ ಹೊಟ್ಟೆ ಕೆಡುತ್ತೆ ಹೊಟ್ಟೆ ನೋವು , ಡಯೇರಿಯಾ ಆಗಾಗ ಇರುತ್ತೆ, ನಾಲ್ಕು ದಿನ ಅರಾಮಿದಾನೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಪ್ರಾಬ್ಲಮ್ ಶುರುವಾಗಿಬಿಡುತ್ತೆ, ಮಕ್ಕಳ ಡಾಕ್ಟ್ರಲ್ಲಿ ಹೋದ್ರೆ ಆಂಟಿಬಯೋಟಿಕ್, ಸಿರಪ್ಪು ಕೊಡ್ತಾರೆ, ಅವನ್ನೆಲ್ಲಾ ಕೊಟ್ಟು ಸಾಕಾಗಿದೆ, ಕೆಲವೊಮ್ಮೆ ಏನು ಕೊಟ್ರೂ ಕಮ್ಮಿ ಆಗಲ್ಲ, ಹೋಮಿಯೋಪಥಿಯಲ್ಲಿ ಪರ್ಮನೆಂಟ್ ಸಲ್ಯೂಷನ್ ಇದೆಯಂತಾ ಕೇಳಿದೀನಿ, ಪ್ಲೀಸ್ ಏನಾದ್ರೂ ಮಾಡಿ , ಇವನ ಇಮ್ಮ್ಯೂನಿಟಿ ಪವರ್ ಸ್ಟ್ರಾಂಗ್ ಆಗೋ ಅಂತಹ ಮೆಡಿಸಿನ್ ಕೊಡಿ ….. ಎಂದು ಅನೇಕ ಪೋಷಕರು ಹೋಮಿಯೋ ವೈದ್ಯರಲ್ಲಿ ಕೇಳುವುದು ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಮಕ್ಕಳ ವೈದ್ಯರ ಪ್ರಕಾರ 5-6 ವರ್ಷ ವಯಸ್ಸಿನ ತನಕ ಮಕ್ಕಳಲ್ಲಿ ಈ ತೊಂದರೆಗಳು ಕಂಡುಬರುವುದು ಸಾಮಾನ್ಯ. ಏಕೆಂದರೆ ಮಕ್ಕಳ ರೋಗನಿರೋಧಕ ವ್ಯವಸ್ಥೆ, ಸಂಪೂರ್ಣ ಬೆಳವಣಿಗೆ ಆಗಿರುವುದಿಲ್ಲ. ಆದರೆ ಅನೇಕ ಮಕ್ಕಳು 6 ವರ್ಷಗಳ ನಂತರವೂ ಪದೇ ಪದೇ ಶೀತ, ಕೆಮ್ಮು, ಜ್ವರ, ಹೊಟ್ಟೆನೋವುಗಳಂತಹ ತೊಂದರೆಗಳಿಂದ ಬಳಲುವುದು ಸಾಮಾನ್ಯವಾಗಿಬಿಟ್ಟಿದೆ, ಅನೇಕ ಮಕ್ಕಳಲ್ಲಿ ಶೀತ, ಕೆಮ್ಮುಗಳಿಂದ ಶುರುವಾದ ತೊಂದರೆ, ಅವರು ಬೆಳೆದಂತೆ ಟಾನ್ಸಿಲ್ಸ್, ಅಡೆನೋಯ್ಡ್ಸ್, ಅಸ್ತಮಾದಂತಹ ತೊಂದರೆಗಳಿಗೆ ಈಡುಮಾಡುತ್ತದೆ.
ಅನುವಂಶೀಯ ಕಾಯಿಲೆಗಳು, ಸುತ್ತಮುತ್ತಲಿನ ಪರಿಸರ, ಪೌಷ್ಟಿಕ ಆಹಾರ ಮಕ್ಕಳ ರೋಗನಿರೋಧಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳೆಂಬುದು ಎಲ್ಲರಿಗೂ ತಿಳಿದ ವಿಷಯವೇ, ಆದರೆ ಮಗುವಿನ ಆರೋಗ್ಯ ಕಾಪಾಡುವಲ್ಲಿ, ಮಗುವಿನ ತಂದೆ-ತಾಯಿಯ ಪಾತ್ರ, ಮನೆಯ ಇತರ ಸದಸ್ಯರ ಪಾತ್ರವೂ ಅತೀ ಮಹತ್ವದ್ದು.
ಶುಚಿತ್ವ, ಆಹಾರ ಮತ್ತು ವೈದ್ಯರ ಔಷಧಿಯಿಂದಷ್ಟೇ ಮಗುವಿನ ಅರೋಗ್ಯ ಸಂರಕ್ಷಣೆ ಸಾಧ್ಯವೇ ?
1. ಅನೇಕ ಪೋಷಕರು, ಹೊತ್ತು ಹೊತ್ತಿಗೆ ಮಗುವಿಗೆ ಆಹಾರ, ರೋಗನಿರೋಧಕ ಲಸಿಕೆ, ಕಾದಾರಿಸಿದ ಫಿಲ್ಟರ್ ನೀರು, ಮಗು ಸ್ವಲ್ಪ ಹುಷಾರು ತಪ್ಪಿದ ತಕ್ಪಣ ಡಾಕ್ಟರ್ ಬಳಿಗೆ ಕರೆದೊಯ್ಯುವುದರಿಂದ ತಮ್ಮ ಮಗುವನ್ನು ಆರೋಗ್ಯವಾಗಿಡಬಹುದು ಎಂಬ ಭ್ರಮಾ ಲೋಕದಲ್ಲಿರುತ್ತಾರೆ.
2. ಪೇಟೆಯಲ್ಲಿ ಲಭ್ಯವಿರುವ ಲಗ್ಜುರಿ ಸೋಪು, ಶಾಂಪೂಗಳಿಂದ ಮಗುವನ್ನು ತಿಕ್ಕಿ ತೊಳೆದು, ಮಗು ಓಡಿದರೆ ಬಿದ್ದೀತು, ಆಡಿದರೆ ಕೊಳೆಯಾದೀತು, ಮಣ್ಣುಮುಟ್ಟಿದರೆ ಇನ್ಫೆಕ್ಷನ್ ಆದೀತು ಎಂದು ಅತೀ ನಾಜೂಕಾಗಿ ನೋಡಿಕೊಳ್ಳು ವಂತವರು
3. ಮಗು ಒಂದು ಸೀನಿದರೆ ವೈದ್ಯರ ಬಳಿಗೆ ಓಡುವ, ಮಗುವಿನ ತೂಕದಲ್ಲಿ ಸ್ವಲ್ಪ ಕಡಿಮೆಯಾದರೆ ಅತಿಯಾಗಿ ಚಿಂತಿಸುವ, ಜಾಹೀರಾತಿನ ಮೋಡಿಗೊಳಗಾಗಿ ಮಾರುಕಟ್ಟೆಯಲ್ಲಿ ಸಿಗುವ ತರಹಾವಾರಿ ವಿಟಮಿನ್ನು, ಮಿನರಲ್ಲೂ, ಇರುವಂತಹ ಡಬ್ಬಿಗಳಲ್ಲಿ ಬರುವ ರೆಡಿಮೇಡ್ ಪೂರಕ ಆಹಾರವನ್ನು, ಮಗುವಿಗೆ ಇಷ್ಟವಿರದಿದ್ದರೂ ಒತ್ತಾಯವಾಗಿ ತುರುಕುವಂತಹ ಅತೀವ ಆತಂಕದ ಮನೋಭಾವವುಳ್ಳ ಪೋಷಕರೇ, ನೀವೇ ನಿಮ್ಮ ಮಗುವಿನ ಆರೋಗ್ಯ ಹಾಳುಮಾಡುತ್ತಿರುವಿರಿ.
4. ಮಳೆ, ಚಳಿ, ಬಿಸಿಲು ಗಾಳಿ, ಧೂಳು, ಕುಡಿವ ನೀರು, ರೋಗಾಣು ಮಾತ್ರ ಅನಾರೋಗ್ಯಕ್ಕೆ ಕಾರಣ ಅಲ್ಲ ಎಂಬ ಸತ್ಯ ಎಷ್ಟು ಜನ ಪೋಷಕರಿಗೆ ಅರ್ಥವಾಗಿದೆ
5. ಇಂತಹವರು ತಾವೇ ತಮ್ಮ ಬಾಲ್ಯದ ದಿನಗಳಲ್ಲಿ ಮಣ್ಣಲ್ಲಿ ಆಡಿ, ಮಳೆಯಲ್ಲಿ ನೆನೆದು, ಬೇಕಾದ್ದನ್ನೂ ತಿಂದು ಹೇಗೆ ಆರೋಗ್ಯವಾಗಿದ್ದರು ಎಂಬುದನ್ನು ಹೇಗೆ ಮರೆತರು ?
6. ಇನ್ನೊಂದು ವಿಷಯ, ಮಗುವಿನ ಆರೋಗ್ಯ ಬರೀ ಭೌತಿಕ (physical) ಅಂಶಗಳ ಮೇಲೆ ಮಾತ್ರ ನಿರ್ಭರವಾಗಿದೆ ಎಂದು ಕೊಂಡರೆ ಅದು ಅತೀ ದೊಡ್ಡ ತಪ್ಪು ಕಲ್ಪನೆ, ಮಗುವಿನ ಆರೋಗ್ಯ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳಮೇಲೂ ನಿರ್ಭರವಾಗಿರುತ್ತದೆ. ಬಿಡಿಸಿ ಹೇಳಬೇಕಾದರೆ ಮಗುವಿನ ಸಧೃಡ ಆರೋಗ್ಯಕ್ಕೆ ಮನೆಯಲ್ಲಿನ ಪರಿಸರ ತುಂಬಾ ಮುಖ್ಯ, ತಂದೆ-ತಾಯಿ, ತಾಯಿ ಮತ್ತು ಅತ್ತೆಯ ನಡುವಿನ ಸಂಬಂಧಗಳು, ಮನೆಯ ಇತರ ಸದಸ್ಯರ ನಡುವಿನ ಬಾಂಧವ್ಯ ಮತ್ತು ಮಗುವಿನ ಜೊತೆ ಎಲ್ಲರ ಭಾಂದವ್ಯ ಇತ್ಯಾದಿಗಳು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಮೇಲೆ ಗಾಢ ಪರಿಣಾಮಬೀರುತ್ತವೆ. ತಾರೆ ಝಮೀನ್ ಪರ್ (Tare Zameen per) ಅಂತಹ ಸಿನೆಮಾಗಳಲ್ಲಿ ಈ ಕೆಲವೊಂದು ಅಂಶಗಳನ್ನು ತೋರಿಸಲಾಗಿದೆ.
7. ನಿತ್ಯವೂ ಒಂದಿಲ್ಲೊಂದು ವಿಷಯಕ್ಕೆ ಜಗಳವಾಡುವ ತಂದೆ -ತಾಯಿಯರ ಮನೆಯಲ್ಲಿನ ಮಗು ಪದೇ ಪದೇ ಅನಾರೋಗ್ಯಕ್ಕೆ ಈಡಾಗುವುದು ಗಮನಿಸಬೇಕಾದ ವಿಷಯ. ಇಂತಹ ಮಕ್ಕಳು ಓದಿನಲ್ಲಿ ಹಿಂದೆ ಬಿದ್ದಿರುವುದು, ಹದಿಹರೆಯದಲ್ಲಿ ದುಶ್ಚಟಗಳ ದಾಸರಾಗುವುದು ಅಥವಾ ಮಾನಸಿಕ ಮತ್ತು ಭಾವನಾತ್ಮಕ ವಿಚಾರಗಳಲ್ಲಿ ದುರ್ಬಲರಾಗುವುದು ಕಂಡುಬರುತ್ತದೆ.
ಮಗುವಿನ ರೋಗ ಪ್ರತಿರೋಧಕ ಶಕ್ತಿಯನ್ನು(Immunity) ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ಹೇಗೆ ?
1. ಮಗುವನ್ನು ಮನೆಯಿಂದ ಹೊರಗೆ, ಮೈದಾನದಲ್ಲಿ ಆಡಲು ಬಿಡಿ
2. ಕೈ ಕೆಸರಾಗುತ್ತದೆ, ಡಸ್ಟ್ ಸೇರುತ್ತದೆ ಎಂಬ ಚಿಂತೆ ಬಿಡಿ
3. ಮಳೆಯಲ್ಲಿ ಕೆಲ ಸಮಯ ಆಡಲು ಬಿಡಿ, ನೀರಲ್ಲೂ ಆಡಲಿ
4. ಅತಿಯಾದ ಕಾಳಜಿ ನಾಜೂಕು ಬೇಡ, ನೀರಿಗೆ ಹಲವಾರು ಬಾರಿ ಬೀಳದೆ ಯಾರು ಸ್ವಿಮ್ಮಿಂಗ್ ಕಲಿಯಲಾಗುವುದಿಲ್ಲ
5. ಮಗು ಗಾಳಿ,ಮಳೆ, ಚಳಿ, ಇತ್ಯಾದಿಗಳಿಗೆ ಮೈ ಒಡ್ಡಿದರೇ, ದೇಹದ ಇಮ್ಮ್ಯೂನ್ ಸಿಸ್ಟಮ್ ಅದಕ್ಕನುಸಾರವಾಗಿ ಬೆಳವಣಿಗೆ ಹೊಂದಿ, ರೋಗಗಳನ್ನೆದುರಿಸಲು ಸಮರ್ಥವಾಗಲು ಸಾಧ್ಯ
6. ಹೋದಲ್ಲೆಲ್ಲ ಮಗುವಿಗೆ ಬಿಸಿನೀರು ಕುಡಿಸಲು ಬಾಟಲು ಒಯ್ಯದಿರಿ, ಬೇರೆಯವರ ಮನೆಯ ನೀರನ್ನು ಮಗು ಕುಡಿಯಲಿ.
7. ನಿಮ್ಮ ದಿನಚರಿಯಲ್ಲಿ ಮಗುವಿನ ಜೊತೆ ಕಳೆಯಲು ಸಮಯ ಮೀಸಲಿಡಿ, ಮಗುವನ್ನು ಸುತ್ತಲೂ ಕರೆದೊಯ್ಯಿರಿ, ಪಾರ್ಕ್, ಸ್ವಿಮ್ಮಿಂಗ್ ಪೂಲ್ ಗಳು, ಶಾಪಿಂಗ್ ಮಾಲ್, ಫಾಸ್ಟ್ ಫುಡ್ ಜಾಯಿಂಟ್ಗಳಿಗಿಂತ ಉತ್ತಮ.
8. ಮಗುವಿನ ಜೊತೆ ಇರುವಾಗ ಮೊಬೈಲ್, ವಾಟ್ಸಪ್ಪ್ ಬೇಡ
9. ಅವರಿವರು ಹೇಳಿದರೆಂದೋ ಅಥವಾ ಜಾಹಿರಾತು ನೋಡಿ ಮಗುವಿಗೆ ಹಾಳು ಮೂಳು ತಿನ್ನಿಸಲು ಹೋಗಬೇಡಿ, ಒತ್ತಾಯದಿಂದ ಮೇಲೆ ಮೇಲೆ ತಿನ್ನಿಸಬೇಡಿ, ಇದರಿಂದಲೇ ಮಗುವಿಗೆ ಅಜೀರ್ಣ, ಹೊಟ್ಟೆ ಕೆಡುವುದು
10. ಸೀಸನ್ ತಕ್ಕಂತೆ ಬರುವ ಹಣ್ಣುಗಳು ಮುಖ್ಯವಾಗಿ ಕಿತ್ತಳೆ, ಮೂಸಂಬಿಗಳಂತಹ ಸಿಟ್ರಸ್ ಹಣ್ಣುಗಳು ಬೇಳೆ, ಮೊಳಕೆಕಟ್ಟಿಸಿದ ಕಾಳುಗಳು, ತರಕಾರಿ, ಸೊಪ್ಪು, ಡ್ರೈ ಫ್ರೂಟ್ ಮತ್ತು ನಟ್ಸ್ ಮೊಟ್ಟೆ, ಮೀನು, ಮಾಂಸ ಇವುಗಳಿಂದ ಮಗುವಿನ ಇಮ್ಮ್ಯೂನಿಟಿ ಬಲವಾಗುತ್ತದೆಯೇ ಹೊರತು ಸಂಸ್ಕರಿಸಿದ, ಡಬ್ಬಗಳಲ್ಲಿ, ಬಣ್ಣ ಬಣ್ಣಗಳಲ್ಲಿ ಬರುವ ಅಂಗಡಿಗಳಲ್ಲಿ ಸಿಗುವ ಕೃತಕ ಆಹಾರಗಳಿಂದಲ್ಲ.
Also Read: ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ.
11. ಮಗುವನ್ನು ನಿಮ್ಮ ಸೂತ್ರದಗೊಂಬೆಯಾಗಿಸದಿರಿ, ಅದಕ್ಕೆ ಯೋಚಿಸಲು, ಸರಿ ತಪ್ಪುಗಳನ್ನು ನಿರ್ಧರಿಸಲು ಬಿಡಿ, ಮಾರ್ಗದರ್ಶಕರಾಗಿ, ನಿಯಂತ್ರಕರಾಗದಿರಿ.
ಮಗು ಮಳೆಯಲ್ಲಿ ನೆನೆದರೆ, ಮಣ್ಣಲಿ ಆಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗಲು ಸಾಧ್ಯವೇ ?
ಆರಂಭದಲ್ಲಿ ಈ ಮೇಲಿನವುಗಳನ್ನು ಪಾಲಿಸಿದಾಗ ನಿಮ್ಮ ಮಗು ಅನಾರೋಗ್ಯಕ್ಕೀಡಾಗುವುದು ಸಹಜ, ಉದಾಹರಣೆಗೆ – ಚಳಿ ಗಾಳಿಯಲ್ಲಿ ಮಗುವನ್ನು ಆಡಲು ಬಿಟ್ಟರೆ ಕೆಲವೊಮ್ಮೆ ಮಗುವಿಗೆ ನೆಗಡಿ, ಕೆಮ್ಮು ಉಂಟಾಗಬಹುದು, ಹಾಗಂತ ಮಗುವನ್ನು ಆಡಲು ಬಿಡದೇ ಇದ್ದರೆ ಚಳಿ ಗಾಳಿಯಲ್ಲಿ ಯಾವುದೇ ಅರೋಗ್ಯ ಸಮಸ್ಯೆಗಳು ಆಗದಂತೆ ಅಥವಾ ಸಮಸ್ಯೆಗಳಾದರೂ ದೇಹವೇ ಅದನ್ನು ಗುಣಪಡಿಸಿಕೊಳ್ಳುವಂತೆ, ದೇಹವನ್ನು ಸಂರಕ್ಷಿಸುವ ರೋಗ ಪ್ರತಿರೋಧಕ ಶಕ್ತಿಯ ಬೆಳವಣಿಗೆ ಆಗುವುದೇ ಇಲ್ಲ. ಕೆಲಸಮಯದ ನಂತರ ನಿಮ್ಮ ಮಗುವಿನ ಇಮ್ಮ್ಯೂನಿಟಿ ಬಲಗೊಳ್ಳುತ್ತದೆ ಆಗ ಸಣ್ಣ ಪುಟ್ಟ ಚಳಿ ಮಳೆ ಇತ್ಯಾದಿಗಳು ನಿಮ್ಮ ಮಗುವಿನ ಆರೋಗ್ಯದಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ, ಒಂದು ಪಕ್ಷ ಸಣ್ಣ ಪುಟ್ಟ ಸಮಸ್ಯೆ ಉಂಟಾದರೆ ಅವು ತಂತಾನೇ ಸರಿಹೋಗುತ್ತವೆ, ವಿಶ್ರಾಂತಿ ಮತ್ತು ಸಮಂಜಸ ಉಪಚಾರವಷ್ಟೇ ಸಾಕು, ಪ್ರತಿಯೊಂದಕ್ಕೂ ವೈದ್ಯರ ಬಳಿಗೆ ಓಡುವುದು ತಪ್ಪುತ್ತದೆ.
ಅತಿಯಾದ ಶುಚಿತ್ವ ಮತ್ತು ಅರೋಗ್ಯ
ನಮ್ಮ ದೇಹವನ್ನು ಮತ್ತು ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿ (cleanness) ಇಟ್ಟುಕೊಳ್ಳುವುದು ತುಂಬಾ ಮುಖ್ಯ, ಇದರಿಂದ ಮಲೇರಿಯ, ಡೆಂಗು, ಟೈಫಾಯ್ಡ್ಗಳಂತಹಾ ಅನೇಕ ರೋಗಗಳನ್ನು ಬರದಂತೆ ತಡೆಗಟ್ಟಬಹುದು. ಆದರೆ ಅತೀ ಶುಚಿತ್ವವೂ ಆರೋಗ್ಯಕ್ಕೆ ಮಾರಕ ಎಂದರೆ ನಂಬುವುದು ಕಷ್ಟ, ಆದರೆ ಇದು ಸತ್ಯ. ಕೆಲವೊಂದು ಪೋಷಕರು ತಮ್ಮ ಮಗುವನ್ನು ಎಂದೂ ಬರೀ ನೆಲದಲ್ಲಿ ಆಡಲು, ಸಾಕು ಪ್ರಾಣಿಗಳ ಬಳಿಗೆಹೋಗಲು, ಅವನ್ನು ಮುಟ್ಟಲು ಬಿಡುವುದಿಲ್ಲ, ಇಂತಹ ಮಕ್ಕಳಲ್ಲಿ ಅಸ್ತಮಾ, ಅಲರ್ಜಿಯಂತಹ ತೊಂದರೆಗಳು ಬರುತ್ತವೆಂದು ಅಮೆರಿಕಾ ಮತ್ತು ಹಾರ್ವಾರ್ಡ್ ವೈದ್ಯಕೀಯ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.
ಮಗುವಿನ ಚರ್ಮದಲ್ಲಿನ ನೈಸರ್ಗಿಕ ನೀರಿನಾಂಶ, ಎಣ್ಣೆಯಂಶಗಳು ಇರುತ್ತವೆ, ಪದೇ ಪದೇ ಹ್ಯಾಂಡ್ ವಾಶ್ ಹಾಕಿ ಕೈ ತೊಳೆಯುವುದು, ಹೆಚ್ಚು ಬಾರಿ ಸ್ನಾನ ಮಾಡಿಸುವುದು, ಜಾಹಿರಾತಿನ ಮೋಡಿಗೊಳಗಾಗಿ ಯಾವ್ಯಾವ್ದೋ ಎಣ್ಣೆ, ಲೋಷನ್ ಹಚ್ಚುವುದು, ಇತ್ಯಾದಿಗಳು ಮಗುವಿನ ಚರ್ಮವನ್ನು ಒಣಗಿಸುತ್ತವೆ, ಇದರಿಂದ ಕೆಲವು ಚರ್ಮದ ತೊಂದರೆಗಳು ಬರುವ ಸಂಭವವಿದೆ. ಇನ್ನು ಏರ್ ಪ್ಯೂರಿಫಯರ್, ಏರ್ ಕಂಡಿಷನರ್ (AC) ಗಳಲ್ಲೇ ಬೆಳೆಯುವ ಮಕ್ಕಳ ಆರೋಗ್ಯವೂ ಇನ್ನೂ ಹದಗೆಡುತ್ತದೆ.
ಹಳ್ಳಿ ಮಕ್ಕಳು V/s ಪೇಟೆ (city) ಮಕ್ಕಳು
ಯೋಚಿಸಿ ಹಳ್ಳಿಗಳಲ್ಲಿ ಬೆಳೆಯುವ ಮಕ್ಕಳು ಮಣ್ಣಲ್ಲಿ ಬಿದ್ದು ಕೆಸರಲ್ಲಿ ಹೊರಳಾಡಿ, ಸಿಕ್ಕದ್ದನ್ನು ತಿಂದು, ಚಳಿ ಮಳೆ ಗಾಳಿಗಳಲ್ಲಿಯೇ ಆಡಿದರೂ ಏಕೆ ಆರೋಗ್ಯವಾಗಿರುತ್ತವೆ ಅದೇ ನಾಜೂಕಾಗಿ ಬೆಳೆಸಿದ ಸಿಟಿಯಲ್ಲಿನ ಮಕ್ಕಳು ಎಲ್ಲ ಆಧುನಿಕ ಸವಲತ್ತು, ಪೌಷ್ಟಿಕ ಆಹಾರ, ಕೈಗೆಟುಕುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ, ವೈದ್ಯರ ಚಿಕಿತ್ಸೆ ಹೈಜೀನಿಕ್ ಪರಿಸರ ಇವೆಲ್ಲವಿದ್ದರೂ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತವೆ ?
ರೋಗಪ್ರತಿರೋಧಕ ಶಕ್ತಿಯನ್ನು ಸಂರಕ್ಷಿಸುವ ಹಾಗೂ ಹೆಚ್ಚಿಸುವ ಹೋಮಿಯೋಪಥಿ ಚಿಕಿತ್ಸಾ ಪದ್ದತಿಯ ವಿಶೇಷತೆಗಳು
1. ಹೋಮಿಯೋಪಥಿ ಚಿಕಿತ್ಸೆಯ ಮುಖ್ಯ ಗುರಿ ದೇಹದ ರೋಗಪ್ರತಿರೋಧಕ ಶಕ್ತಿಯನ್ನು ಬಲಪಡಿಸುವುದು ಮತ್ತು ಮಗು ಪ್ರತಿಯೊಂದಕ್ಕೂ ಔಷಧಿಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸುವುದು. ಹೋಮಿಯೋಪಥಿ ತಾತ್ಕಾಲಿಕ ಶಮನ ನೀಡದೆ, ರೋಗದ ಮೂಲವನ್ನು ಗುಣಪಡಿಸುತ್ತದೆ
2. ಸ್ಟೀರಾಯ್ಡ್, ಅಂಟಿಬಿಯಾಟಿಕ್ ಬಳಕೆ ಹೋಮಿಯೋಪಥಿ ಪದ್ದತಿಯಲಿಲ್ಲ
3. ನಿಮಗೆ ಗೊತ್ತಿರಬಹುದು ನಮ್ಮ ದೇಹದಲ್ಲಿ ಟ್ರಿಲಿಯನ್ ಗಟ್ಟಲೆ ಬ್ಯಾಕ್ಟೀರಿಯಾ, ವೈರಸ್, ಮತ್ತಿತರೇ ಸೂಕ್ಶ್ಮಾಣು ಗಳಿವೆ, ಅವೆಲ್ಲವೂ ಹಾನಿಕಾರಕವಲ್ಲ, ಎಷ್ಟೊಂದು ಬ್ಯಾಕ್ಟೀರಿಯಾ ನಮಗೆ ಉಪಕಾರಿಯಾಗಿ ಕೆಲಸಮಾಡುತ್ತವೆ.
4. ರೋಗಾಣುಗಳು ನಮ್ಮ ಸುತ್ತಮುತ್ತಲೂ ಇವೆ, ನಾವು ಅವುಗಳನ್ನು ನಿವಾರಿಸುವ ಪ್ರಯತ್ನ ಮಾಡಿದಷ್ಟು ಅವು ಬಲಗೊಳ್ಳುತ್ತವೆ, ಉದಾ- ಆಂಟಿಬಯೋಟಿಕ್ ರೆಸಿಸ್ಟನ್ಸ ಅಥವಾ ಡ್ರಗ್ ರೆಸಿಸ್ಟನ್ಸ ಮೈಕ್ರೋಬ್ಸ್ ಇದು ಈಗ ಆಧುನಿಕ ವೈದ್ಯಕೀಯ ಜಗತ್ತಿಗೆ ಒಂದು ದೊಡ್ಡ ಭೀತಿಯನ್ನುಟುಮಾಡಿದೆ, ಗೂಗಲ್ ಮಾಡಿ ನಿಮಗೆ ವಿಸ್ತಾರವಾಗಿ ತಿಳಿಯುತ್ತದೆ. ಹಿಂದೆ ಯಾವ ಆಂಟಿಬಯೋಟಿಕ್ ಮಾತ್ರೆಗಳು ರೋಗಾಣು ಅಥವಾ ಬ್ಯಾಕ್ಟೀರಿಯಾವನ್ನು ಸಾಯಿಸಲು ಶಕ್ತವಾಗಿದ್ದವೋ ಅವು ಈಗ ಕೆಲಸಕ್ಕೆ ಬಾರದಂತಾಗಿವೆ.
5. ಆದರೆ ಹೋಮಿಯೋಪಥಿಯಲ್ಲಿ ಹಾಗಿಲ್ಲ, ಹೋಮಿಯೋ ಔಷಧಿಗಳು ರೋಗಾಣುಗಳನ್ನು ಸಾಯಿಸುವುದಿಲ್ಲ, ರೋಗಿಯ ದೇಹವನ್ನು, ರೋಗಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ, ಈ ಮೂಲಕ ದೇಹವೇ ರೋಗಾಣುಗಳ ಹಿಡಿತದಿಂದ ಹೊರಬರುತ್ತದೆ, ಆರೋಗ್ಯ ಸ್ಥಿರಗೊಳ್ಳುತ್ತದೆ.
6. ನೈಸರ್ಗಿಕ ಮೂಲಗಳಾದ ಸಸ್ಯಗಳು, ವಸ್ತುಗಳಿಂದ ತಯಾರಿಸಲ್ಪಟ್ಟ ಹೋಮಿಯೋ ಔಷಧಿಗಳು ಅಡ್ಡಪರಿಣಾಮ ಉಂಟು ಮಾಡುವುದಿಲ್ಲ
7. ಹೋಮಿಯೋಪಥಿಯ ಹೋಲಿಸ್ಟಿಕ್ ಸಿದ್ಧಾಂತದ ಪ್ರಕಾರ ಮಗುವಿನ ವಿವಿಧ ಅರೋಗ್ಯ ಸಮಸ್ಯೆಗಳನ್ನು ಹೋಮಿಯೋ ಚಿಕಿತ್ಸೆಯಿಂದ ಗುಣಪಡಿಸಬಹುದು, ಹೊಟ್ಟೆಯ ಸಮಸ್ಯೆಗೆ ಒಬ್ಬ ಸ್ಪೆಷಲಿಸ್ಟ್, ಶೀತಕ್ಕೆ ಒಬ್ಬ ಸ್ಪೆಷಲಿಸ್ಟ್ ಹಾಗೂ ಚರ್ಮದ ಕಾಯಿಲೆಗೆ ಇನ್ನೊಬ್ಬ ಸ್ಪೆಷಲಿಸ್ಟ್ ವೈದ್ಯರ ಬಳಿಗೆ ಹೋಗುವ ಜಂಜಾಟವಿರುವುದಿಲ್ಲ.
8. ಬಾಲ್ಯದಲ್ಲಿ ಕೆಮ್ಮು, ಅಲ್ಲರ್ಜಿ, ಶೀತಗಳಿಂದ ಪದೇ ಪದೇ ಬಳಲುವ ಮಕ್ಕಳು ದೊಡ್ಡವರಾದ ಮೇಲೆ ಆಸ್ತಮಾ, ಅಡಿನಾಯ್ಡ್ಸ್ ತೊಂದರೆಯಿಂದ ಬಳಲುವುದನ್ನು ತಡೆಯಲು ಸೂಕ್ತವಾದ ಹೋಮಿಯೋ ಚಿಕಿತ್ಸೆಯಿಂದ ಸಾಧ್ಯ.
9. ಹೋಮಿಯೋ ಔಷಧಿಗಳು ಮಕ್ಕಳ ಸ್ನೇಹಿಯಾಗಿದ್ದು, ಕಹಿ, ಘಾಟು ಅಥವಾ ತೀಕ್ಷ್ಣ ವಾಗಿರುವುದಿಲ್ಲ
ಪೋಷಕರೇ ದಯವಿಟ್ಟು ಗಮನಿಸಿ :
1. ಅತಿಯಾದ ಕಾಳಜಿ, ತುಂಬಾ ನಾಜೂಕಾಗಿ ಮಗುವನ್ನು ಬೆಳೆಸುವುದು ಮಗುವಿನ ಆರೋಗ್ಯಕ್ಕೆ ಮಾರಕ, ಹಾಗೆಯೇ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು, ಜಗಳಗಳು ಮಗುವಿನ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರಲಿ.
2. ರೋಗಾಣು, ಶುಚಿತ್ವದ ಬಗ್ಗೆ ಅತಿಯಾದ ಗೀಳು ಬಿಡಿ, ಬಾಲ್ಯದಲ್ಲಿಯೇ ರೋಗಾಣುಗಳಿಗೆ, ಚಳಿ ಮಳೆಗಳಿಗೆ ಒಗ್ಗಿಕೊಂಡರೆ ಮಾತ್ರ ಮಗುವಿನ ರೋಗಪ್ರತಿರೋಧಕ ಶಕ್ತಿ ಬಲಗೊಳ್ಳಲು ಸಾಧ್ಯ, ಆಗಲೇ ಮಗುವಿನ ದೇಹ ರೋಗ ಬರದಂತೆ ಮತ್ತು ಬಂದಾಗ ಹೆಚ್ಚು ಹಾನಿಗೊಳಗಾಗದಂತೆ ಸಧೃಢವಾಗಲು ಸಾಧ್ಯ.
3, ಪೋಷಕರೇ ಯೋಚಿಸಿ ನೀವು ಸದೃಢ ಮನಸ್ಸು ಮತ್ತು ದೇಹದ ಆರೋಗ್ಯವಂತ ಮಗುವನ್ನು ಬೆಳೆಸುತ್ತಿದ್ದೀರಾ ಅಥವಾ ನಿಮ್ಮ ಮಗುವನ್ನು ಶೋ ಕೇಸಿನಲ್ಲಿಡುವ ಗೊಂಬೆಯನ್ನಾಗಿಸುತ್ತಿದ್ದೀರಾ ?
ಸಧೃಢ ಮಗು..
ಬಿದ್ದೇಳು ಬಿದ್ದೇಳು ಓ ಮಗುವೇ
ಜೀವನದಲ್ಲಿ ಎಂದೂ ಬೀಳದವನು
ಮುಗ್ಗರಿಸಿ ಬಿದ್ದಾಗ ಏಳುವುದು ಕಷ್ಟಸಾಧ್ಯ
ಮಣ್ಣಲ್ಲಿ ಆಡು, ಕೆಸರಲ್ಲಿ ಓಡು
ಮಳೆಯಲ್ಲಿ ನೆನೆ, ಬಿಸಿಲಲ್ಲಿ ನೆಡೆ
ಇವೇ ನಿನ್ನನ್ನು ಕರೆದೊಯ್ಯುವವು ಸಧೃಢ ಆರೋಗ್ಯದ ಕಡೆ
ನಿಮ್ಮ ಮಗು = ಶೋ ಕೇಸಿನ ಮುದ್ದು ಗೊಂಬೆ…
ಮಗೂ .. ಕಾದುಆರಿಸಿದ ನೀರುಮಾತ್ರಾ ಕುಡೀ
ಬರಿಗಾಲಲ್ಲಿ ನೆಡೆಬೇಡ, ಮಳೆಯಲ್ಲಿ ನೆನೆಬೇಡ,
ಚಳಿಯಲ್ಲಿ ಆಡ್ಬೇಡಾ ಹೊರಗೆ ಹೋಗ್ಬೇಡ
ಸ್ವೇಟರ್ ಯಾವಾಗ್ಲೂ ಹಾಕ್ಕೋ , ಗ್ಲೋವ್ಸ್, ಕ್ಯಾಪ್ ತೆಗೆಲೇಬೇಡ
ಅವನಜೊತೆ ಆಡ್ಬೇಡಾ ಅವ್ನಿಗೆ ಶೀತ ಇದೆ
ಅವ್ಳ ಫುಡ್ ಶೇರ್ ಮಾಡ್ಬೇಡ ಹೊಟ್ಟೆ ಕೆಡುತ್ತೆ
ಮಗೂ … ಅಲ್ಲಿ ಕೂತ್ಕೋಬೇಡ ಡಸ್ಟ್ ಇದೆ ವೀಜಿಂಗ್ ಬರುತ್ತೇ
ಅದನ್ನ ಮುಟ್ಟಬೇಡ ಮುಟ್ಟಿದ್ರೆ ಅಲರ್ಜಿ ಆಗುತ್ತೇ
ಹ್ಯಾಂಡ್ ವಾಶ್ನಿಂದಾ ಕೈತೊಳ್ಕೊ ಇಲ್ಲಾಂದ್ರೆ ಇನ್ಫೆಕ್ಷನ್ ಆಗುತ್ತೇ
ಅದನ್ನ ಹತ್ತಬೇಡಾ ಬಿದ್ರೆ ಗಾಯ ಆಗುತ್ತೆ,
ನೀರಲ್ಲಾಡ್ಬೇಡ ಪುಟ್ಟಾ ಶೀತ ಆಗ್ಬಿಡುತ್ತೇ
ಮಗೂ .. ಯಾಕೆ ಅರ್ಧ ಕೆ .ಜಿ. ತೂಕ ಕಡಿಮೇ ಆಗಿದೀಯಾ ?
ಇಗೋ ತಿನ್ನು ಮಲ್ಟಿ ಗ್ರೇನ್ ಬ್ರೆಡ್ಡು ಬಿಸ್ಕೆಟ್ಟು
ಸ್ಯಾಂಡ್ವಿಚ್ ಜೊತೆ ಸಾಸ್, ಚೀಸ್ ಹಾಕ್ಕೋ
ನಿನ್ನಿಷ್ಟದ ಪಿಜ್ಜಾ ಆರ್ಡರ್ ಮಾಡ್ಲಾ? ಗಾರ್ಲಿಕ್ ಬ್ರೆಡ್ ?
ಮಗೂ .. ಬೇಜಾರಾದ್ರೆ ಟಿವಿ ಹಾಕ್ಕೋ
ಟ್ಯಾಬ್ ಇದೆ ಗೇಮ್ಸ್ ಆಡ್ಕೋ, ವಾಟ್ಸಾಪ್ ಇದೆ ಚಾಟ್ ಮಾಡ್ಕೋ
ಮನೆಯಿಂದ ಹೊರಗೆ ಮಾತ್ರಾ ಹೋಗ್ಬೇಡ
ಹಸಿವಾದ್ರೆ ಫ್ರಿಜ್ಜಲ್ಲಿದೆ ಏನಾದ್ರೂ ತಿನ್ಕೋ
ನಮಗೆ ಜಾಸ್ತಿ ಟೈಮಿರಲ್ಲಾ ನಿನ್ನ ಹೆಲ್ತ್ ನೀನು ಸರೀಗೆ ನೋಡ್ಕೋ
ಡಾ. ತೇಜಸ್ವಿ ಕೆ.ಪಿ.
ಸುರಭಿ ಹೋಮಿಯೋ ಕ್ಲಿನಿಕ್, #823, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 4ನೇ ಬ್ಲಾಕ್, ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
ಲ್ಯಾಂಡ್ಮಾರ್ಕ್ – ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ
ಮೊ: 9731133819