ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ.

ಜಂಕ್ ಫುಡ್ ಯಾವಾಗಲಾದರೊಮ್ಮೆ ತಿನ್ನುವುದು ತಪ್ಪಲ್ಲ. ಆದರೆ ಮೂರೂ ಹೊತ್ತು ಅದನ್ನೇ ತಿನ್ನುವುದನ್ನು ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. ಜಂಕ್‍ಪುಡ್ ನಿಷೇಧಿಸುವುದು ಸುಲಭದ ಮಾತಲ್ಲ.ಆರೋಗ್ಯ ಪೂರ್ಣ ಆಹಾರ ಪದ್ಧತಿಯನ್ನು ಬಳಸಿಕೊಂಡಲ್ಲಿ ನಾವೆಲ್ಲರೂ  ಸುಖವಾಗಿ ನೆಮ್ಮದಿಯಿಂದ ಬದುಕಬಹುದು.

 junk-food

“ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ ಬದುಕಬೇಡಿ” ಎಂಬ ಮಾತನ್ನು ಪ್ರಾಯಶಃ ಇಂದಿನ ಕಾಲಘಟ್ಟದಲ್ಲಿ ನಮ್ಮ ಯುವಜನತೆ ಮತ್ತು ಮಕ್ಕಳಿಗೆ ಪುನಃ ನೆನಪಿಸಿಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ. ನಮ್ಮ ದೇಹದ ದೈಹಿಕ, ಮಾನಸಿಕ ಬೌದ್ಧಿಕ ಮತ್ತು ಸರ್ವತೋಮುಖ ಬೆಳವಣಿಗೆಯಲ್ಲಿ ನಮ್ಮ ಆಹಾರ, ಬಹುಮುಖ್ಯ ಪಾತ್ರ ವಹಿಸುತ್ತದೆ. ಬಹಳಷ್ಟು ರೀತಿಯ ಆಧುನಿಕ ರೋಗಗಳನ್ನು ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಡುಗೊಳಿಸಿ ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟಬಹುದು ಎಂಬುದು ಇತ್ತೀಚಿನ ಸಂಶೋಧನೆಗಳಿಂದ ನಮಗೆಲ್ಲ ತಿಳಿದೇ ಇದೆ. ಆದರೂ ರಾತ್ರಿ ಕಂಡ ಬಾವಿಗೆ ಹಗಲು ಯಾಕಾಗಿ ಹಾರುತ್ತಿದ್ದೇವೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬೊಜ್ಜು, ಅಧಿಕ ರಕ್ತದೊತ್ತಡ, ಸಕ್ಕರೆಕಾಯಿಲೆ ಇತ್ಯಾದಿ ರೋಗಗಳು ಹಿಂದಿನ ಕಾಲದಲ್ಲಿ ನಡುವಯಸ್ಕರಲ್ಲಿ ಮತ್ತು ಇಳಿ ಪ್ರಾಯದಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಚಿಕ್ಕ ಮಕ್ಕಳಲ್ಲಿ, ಯುವಕ-ಯುವತಿಯರಲ್ಲಿ ಕಂಡುಬರುವುದು ಸೋಜಿಗವೇ ಸರಿ. ಮಕ್ಕಳಲ್ಲಿ ದೈಹಿಕ ವ್ಯಾಯಾಮದ ಜೊತೆಗೆ, ವಿಟಾಮಿನ್, ಪ್ರೋಟೀನ್, ಲವಣಾಂಶ, ಪೋಷಕಾಂಶ ಮತ್ತು ಶರ್ಕರ ಪಿಷ್ಠಾದಿಗಳಿಂದ ಕೂಡಿದ ಸಮತೋಲಿತ  ಆಹಾರ ಅತೀ ಅಗತ್ಯ ಎಂದು ಸಂಶೋಧನೆಗಳಿಂದ ನಿರೂಪಿಸಲ್ಪಟ್ಟಿದೆ. ಇದೆಲ್ಲಾ ಗೊತ್ತಿದ್ದೂ ಹಾಳು ಮೂಳು ತಿಂದು ದೇಹವನ್ನು ಜಳ್ಳಾಗಿಸಿ ಖಾಯಿಲೆಯ ಕಾರ್ಖಾನೆಯಾಗಿ ಮಾಡುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಹೆತ್ತವರಿಗೆ ಸಾಧ್ಯವಾಗುತ್ತಿಲ್ಲ.

ಏನಿದು ಜಂಕ್ ಫುಡ್ ?

ಬೆಳೆಯುತ್ತಿರುವ ಮಕ್ಕಳಿಗೆ ಸಮತೋಲಿತ ಆಹಾರ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅತೀ ಅಗತ್ಯ ವಿಟಾಮಿನ್, ಪ್ರೋಟಿನ್ ಪೋಷಕಾಂಶ ಮತ್ತು ಖನಿಜಾಂಶ ವಿಲ್ಲದ ಕೇವಲ ಉಪ್ಪಿನಂಶ, ಕೊಬ್ಬು ಮತ್ತು ಕ್ಯಾಲರಿಗಳಿಂದ ಕೂಡಿದ, ಕೇವಲ ಬಾಯಿ ರುಚಿಗಾಗಿ ಮಾಡಿದ ಬುರ್ಜ್ಜರ್, ಪಿಜ್ಜಾ, ಕುರುಕಲು ತಿಂಡಿಗಳು, ಕರಿದ ತಿಂಡಿಗಳು ( ಲೇಸ್ & ಕುರುಕುರೆ) ಚಾಕಲೇಟ್‍ಗಳು, ಐಸ್‍ಕ್ರೀಂಗಳು, ಇಂಗಾಲಯುಕ್ತ ಪೇಯಗಳು (ಕೋಕೋ & ಪೆಪ್ಸಿ) ಮತ್ತು ರಾಸಾಯನಿಕಯುಕ್ತ ದಿಡೀರ್ ಆಹಾರಗಳಾದ ಮ್ಯಾಗಿ ಮತ್ತು ನ್ಯೂಡಲ್ಸ್‍ಗಳನ್ನು ಜಂಕ್ ಪುಡ್ ಎಂದು ಕರೆಯಲಾಗುತ್ತದೆ. ಯಾವಾಗಲಾದರೊಮ್ಮೆ ಇಂತಹ ಜಂಕ್ ಫುಡ್ ತಿನ್ನುವುದು ತಪ್ಪಲ್ಲ. ಆದರೆ ಮೂರೂ ಹೊತ್ತು ಅದನ್ನೇ ತಿನ್ನುವುದನ್ನು ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. ಕೇವಲ ಬಾಯಿರುಚಿಗಾಗಿ ಸೇವಿಸುವ ಈ ದಿಡೀರ್ ಆಹಾರ, ಮಕ್ಕಳಿಂದ ಹಿಡಿದು ಹಲ್ಲಿಲ್ಲದ ಮುದುಕರಿಗೂ ಬಹಳ ಇಷ್ಟವಾಗಿರುವುದೇ ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ.

ಈ ಜಂಕ್ ಫುಡ್ ಗಳನ್ನು ಕ್ಷಣಮಾತ್ರದಲ್ಲಿ ತಯಾರಿಸಬಹುದು. ಹಸಿವೆ ಕೂಡ ತಕ್ಷಣವೇ ಮಾಯವಾಗಿ ಬಿಡುತ್ತವೆ. ಕೇವಲ ಕೊಬ್ಬು ಮತ್ತು ಕ್ಯಾಲರಿಯಿಂದ ಕೂಡಿದ, ರುಚಿಗಾಗಿ ಸೇರಿಸಿದ ರಾಸಾಯನಿಕಗಳು, ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೇ ಹಾಳು ಮಾಡಿ, ದೇಹದ ಮೇಲೆ ವ್ಯತಿರಕ್ತ ಪರಿಣಾಮ ಬೀರಿ ಬಿಡುತ್ತದೆ. ಇಂತಹ ಆಹಾರಗಳು ನಮ್ಮ ದೇಹದ ಯಕೃತ್ತು, ಪಿತ್ತಜನಾಕಾಂಗ, ಕಿಡ್ನಿ ಮತ್ತು ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡಿ, ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ ದೇಹವನ್ನು ಕೊಬ್ಬು, ಬೊಜ್ಜು ತುಂಬಿದ ಕಾಯಿಲೆಗಳ ಹಂದರವಾಗಿ ಮಾರ್ಪಡು ಮಾಡಿ ದೇಹದ ಎಲ್ಲಾ ಅಂಗಾಂಗಗಳನ್ನು ಒಂದೊಂದಾಗಿ ಆಫೋಷನ ತೆಗೆದುಕೊಂಡು ಬಿಡುತ್ತದೆ.

ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ ಬೆಳವಣಿಗೆ ಕುಂಠಿತಗೊಂಡು, ಆಧುನಿಕತೆಯ ರೋಗಗಳಾದ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಘಾತ ಮುಂತಾದ ಮಾರಣಾಂತಿಕ ರೋಗಗಳಿಗೆ ಮುನ್ನುಡಿ ಬರೆಯುತ್ತದೆ. ಇನ್ನೊಂದು ಅಘಾತಕಾರಿ ವಿಚಾರವೆಂದರೆ, ಈ ರೆಡಿಮೆಡ್ ಕುರುಕಲು ತಿಂಡಿಗಳು ಹಾಳಾಗದಂತೆ, ಪ್ಲಾಸ್ಟಿಕ್ ಪಾಕೆಟ್‍ಗಳಲ್ಲಿ ತುಂಬಿಸಿ, ರಾಸಾಯನಿಕ ಮತ್ತು ಕೃತಕ ಬಣ್ಣಗಳನ್ನು ಸೇರಿಸುವುದರಿಂದರಿಂದ, ಕ್ಯಾನ್ಸರ್ ರೋಗ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹೇಗೆ ತಡೆಗಟ್ಟಬಹುದು ?

1. ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಮಕ್ಕಳಿಗೆ, ಆಹಾರ ಪದ್ಧತಿ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯ ಬಗ್ಗೆ ತಿಳಿ ಹೇಳಬೇಕು. ಹಿರಿಯರು ಮತ್ತು ಹೆತ್ತವರು ಕೂಡಾ ಕಿರಿಯರಿಗೆ ಮಾದರಿಯಾಗುವ ರೀತಿಯಲ್ಲಿ ಆಹಾರ ಪದ್ಧತಿ, ಮತ್ತು ಜೀವನ ಶೈಲಿ ಅಳವಡಿಸಿಕೊಳ್ಳಬೇಕು.

2. ಟಿ.ವಿ, ಅಂತರ್ಜಾಲ, ದೃಶ್ಯ ಮಾಧ್ಯಮ ಮತ್ತು ಸಂಪರ್ಕ ಮಾಧ್ಯಮಗಳಲ್ಲಿ ಜಂಕ್ ಫುಡ್ ಗಳ ಜಾಹಿರಾತುಗಳನ್ನು ನಿಷೇಧಿಸಬೇಕು. ಚಿಕ್ಕ ಮಕ್ಕಳು ದೃಶ್ಯಮಾಧ್ಯಮಗಳಲ್ಲಿ ಬರುವ ಜಾಹಿರಾತುಗಳಿಗೆ ಬಹಳ ಬೇಗ ಮಾರು ಹೋಗುತ್ತಾರೆ.

3. ಶಾಲಾ ಕಾಲೇಜುಗಳ ಸುತ್ತ, ಜಂಕ್ ಪುಡ್ ಮತ್ತು ಅನಾರೋಗ್ಯಕ್ಕೆ ಮುನ್ನುಡಿ ಬರೆಯುವ ಎಲ್ಲಾ ರೀತಿಯ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಬೇಕು. ಇತ್ತೀಚೆಗೆ ವಿಜ್ಞಾನ ಮತ್ತು ಪರಿಸರ ಅಧ್ಯಾಯನ ಕೇಂದ್ರ, ಶಾಲೆಯಿಂದ 500 ಯಾರ್ಡ್‍ಗಳ ಒಳಗೆ ಈ ರೀತಿಯ ಜಂಕ್ ಫುಡ್ ಮಾರಾಟ ನಿಷೇಧ ಮಾಡಿರುವುದು ತುಂಬಾ ಸಂತಸದ ವಿಚಾರ.

4. ಮನೆಯಲ್ಲಿ ಹೆತ್ತವರೂ ಕೂಡಾ ಮಕ್ಕಳಿಗೆ ಬುತ್ತಿ ಅಥವಾ ಲಂಚ್ ಬಾಕ್ಸ್‍ಗಳಿಗೆ ಕರಿದ ಮತ್ತು ಕೊಬ್ಬು ತುಂಬಿದ ಆಹಾರವನ್ನು ಹಾಕಲೇ ಬಾರದು ಬದಲಾಗಿ, ಚೆನ್ನಾಗಿ ಬೇಯಿಸಿದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ನೀಡಿದ್ದಲ್ಲಿ ಉತ್ತಮ. ಇದನ್ನು ಶಾಲೆಯಲ್ಲಿ ಶಿಕ್ಷಕರು ಪ್ರೋತ್ಸಾಹಿಸಬೇಕು. ಮತ್ತು ಕರಿದ ಮತ್ತು ಕುರುಕಲು ಸಿದ್ಧ ಆಹಾರ ತಾರದಂತೆ ಮಕ್ಕಳಿಗೆ ತಿಳಿ ಹೇಳಬೇಕು. ಒಂದು ವೇಳೆ ಹೆತ್ತವರು ಹೇಳಿದರೂ ಕೇಳದ ಮಕ್ಕಳು, ಶಿಕ್ಷಕರ ಮಾತನ್ನು ಯಾವತ್ತೂ ಮೀರುವುದಿಲ್ಲ ಎಂಬುದು ತಮಗೆಲ್ಲ ತಿಳಿದ ವಿಚಾರ. ಅಮ್ಮನ ಕೈ ತುತ್ತು ಅಥವಾ ಅಮ್ಮನ ಕೈಯಾರೆ ಮಾಡಿದ ತಿಂಡಿಯಷ್ಟು ಸಂಪೂರ್ಣ ಸಮತೋಲಿತ ಆಹಾರ ಈ ಜಗತ್ತಿನಲ್ಲಿ ಯಾವೂದೂ ಇಲ್ಲ ಎಂಬ ಅಂಶ ಮಕ್ಕಳಿಗೆ ಮನದಟ್ಟು ಮಾಡುವ ಗುರುತರ ಜವಾಬ್ದಾರಿ ಹೆತ್ತವರ ಮತ್ತು ಶಿಕ್ಷಕರ ಮೇಲೆ ಇದೆ.

5. ಇತ್ತೀಚಿನ ಇನ್ನೊಂದು ಗಮನಾರ್ಹ ಬೆಳವಣಿಗೆ ಏನೆಂದರೆ ‘ಜಂಕ್ ಫುಡ್ ’ ಅನುಮೋಡಿಸುವ ಸಿನಿಮಾ ತಾರೆಯರಿಗೆ, ಜನಪ್ರಿಯ ಕ್ರೀಡಾ ಪಟುಗಳಿಗೆ, ಕ್ರಿಕೆಟ್ ತಾರೆಗಳಿಗೆ ವಿಜ್ಞಾನ ಮತ್ತು ಪರಿಸರ ಅಧ್ಯಾಯನ ಕೇಂದ್ರ (ಸಿ.ಎಸ್.ಇ) ಖಾರವಾಗಿ ಪ್ರತಿಕ್ರಿಯೆ ನೀಡಿದೆ. ಮತ್ತು ಸರಕಾರ ಈ ವಿಷಯದ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕೆಂದು ಆದೇಶಿಸಿದೆ. ಮಕ್ಕಳ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಮಾರಕವಾಗುವ ಎಲ್ಲಾ ಪ್ರಕ್ರಿಯೆಗಳನ್ನು ನಿಷೇಧಿಸುವತ್ತ ಗಮನಾರ್ಹ ಹೆಜ್ಜೆ ಇಟ್ಟಿದೆ.

ಆದರೆ ಈ ಕೆಲಸ ಅಷ್ಟು ಸುಲಭವಲ್ಲ ಯಾಕೆಂದರೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ, ದೇಶ ವಿದೇಶಗಳ ದೊಡ್ಡ ದೊಡ್ಡ ಕಾರ್ಪೋರೇಟ್ ದಿಗ್ಗಜರನ್ನು ಮಾಣಿಸುವುದು ಮತ್ತು ಜಂಕ್‍ಪುಡ್ ನಿಷೇಧಿಸುವುದು ಸುಲಭದ ಮಾತಲ್ಲ. ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸಿ, ಜಂಕ್ ಫುಡ್ ಗಳ ನಿಷೇದಕ್ಕಿಂತ, ತಿರಸ್ಕರಿಸುವ ಪ್ರಕ್ರಿಯೆಗೆ ಹೆಚ್ಚಿನ ಚಾಲನೆ ಮತ್ತು ದಿಕ್ಕು ದೊರೆತಲ್ಲಿ, ನಮ್ಮ ಯುವ ಜನಾಂಗ ಮತ್ತು ಮಕ್ಕಳ ಆರೋಗ್ಯ ವೃದ್ಧಿಸಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುವಲ್ಲಿ ಎಳ್ಳಷ್ಟು ಸಂಶಯವಿಲ್ಲ.

ಮುಕ್ತಾಯಕ್ಕೆ ಮುನ್ನ ….

‘ಆರೋಗ್ಯವೇ ಭಾಗ್ಯ’ ಅರೋಗ್ಯಕ್ಕಿಂತ ಮಿಗಿಲಾದ ಮತ್ತೊಂದು ವಸ್ತು ಇನ್ನೊಂದಿಲ್ಲ. ಎಲ್ಲವೂ ಇದ್ದು, ಆರೋಗ್ಯವಿಲ್ಲದಿದ್ದಲ್ಲಿ ಏನು ಬಂತು. ಒಂದು ಹಳ್ಳಿಯ, ಊರಿನ, ಗ್ರಾಮದ, ರಾಜ್ಯದ, ದೇಶದ, ಪ್ರತಿ ಮಗುವೂ ಅಥವಾ ಪ್ರಜೆಯು ಆರೋಗ್ಯವಾಗಿದ್ದಲ್ಲಿ ಮಾತ್ರ ಸುದೃಢವಾದ ಸಮೃದ್ಧವಾದ ಮತ್ತು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಸಾಧ್ಯ. ಆರೋಗ್ಯವಂತ ಯುವ ಜನತೆಯಿಂದ ಮಾತ್ರ ಆರ್ಥಿಕವಾಗಿ ಸದೃಢವಾದ ರಾಷ್ಟ್ರ ನಿರ್ಮಾಣ ಸಾಧ್ಯ. ಶಾರೀರಿಕ ವ್ಯಾಯಾಮದ ಜೊತೆಗೆ, ಆರೋಗ್ಯ ಪೂರ್ಣ ಆಹಾರ ಪದ್ಧತಿಯನ್ನು ಬಳಸಿಕೊಂಡಲ್ಲಿ ನಾವೆಲ್ಲರೂ ನೂರುಕಾಲ ಸುಖವಾಗಿ ನೆಮ್ಮದಿಯಿಂದ ಬದುಕಬಹುದು ಮತ್ತು ರಾಜ್ಯದ, ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಿಕೊಳ್ಳಬಹುದು.

ಕೊನೆಯ ಕಿವಿ ಮಾತು

ತಿನ್ನುವಾಗ ನೂರು ವರ್ಷಗಳ ಕಾಲ ಬದುಕುವುದಕ್ಕಾಗಿ ತಿನ್ನಿ, ಆದರೆ ಕೆಲಸ ಮಾಡುವಾಗ ನಾಳೆ ಸಾಯುತ್ತೇನೆ ಎಂಬಂತೆ ದುಡಿಯಿರಿ.

dr-muralee-mohan

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!