ದೀಪಾವಳಿ:  ಬೇಡ ಪಟಾಕಿಗಳ ಹಾವಳಿ


ದೀಪಗಳ ಹಬ್ಬ ದೀಪಾವಳಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಪಟಾಕಿ-ಸಿಡಿಮದ್ದುಗಳು, ಬಾಣ-ಬಿರುಸುಗಳು. ಈ ಹಬ್ಬದ ವೇಳೆ ಸಾವಿರಾರು ಕೋಟಿ ರೂಪಾಯಿ ಮೌಲ್ಯ ಪಟಾಕಿಗಳು ಸುಡಲ್ಪಡುತ್ತವೆ ಎಂಬುದು ಒಂದು ಅಂದಾಜು. ಇದು ಆಚರಣೆ, ಸಂತೋಷ ಮತ್ತು ಸಂಭ್ರಮದ ಪ್ರತೀಕವಾದರೂ ಈ ಪಟಾಕಿಗಳು ಮತ್ತು ಬಾಣಬಿರುಸುಗಳಿಂದ ಸಂಭವಿಸಿರುವ ಅನಾಹುತ, ದುರಂತಗಳಿಗೆ ಲೆಕ್ಕವಿಲ್ಲ.
ಭಾರೀ ಶಬ್ದ ಮಾಡುವ ಅಪಾಯಕಾರಿ ಪಟಾಕಿಗಳನ್ನು ನಿಷೇಧಿಸಲಾಗಿದ್ದು, ಈ ಸಂಬಂಧ ಸ್ಫೋಟಕಗಳ ಕಾಯ್ದೆ ಮತ್ತು ನಿಯಮಗಳು ಎಂಬ ಕಾನೂನೇ ಇದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ದುರದೃಷ್ಟಕರ. ಉತ್ತಮ ಗುಣಮಟ್ಟದ ಪಟಾಕಿಗಳು, ಸಿಡಿಮದ್ದುಗಳ ತಯಾರಿಕೆ, ಅವುಗಳ ಸಂಗ್ರಹ, ಅಪಾಯಕಾರಿ ಸಿಡಿಮದ್ದನ್ನು ಬಳಸದಿರುವಿಕೆ ಮುಂತಾದ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ಈ ಕಾರಣದಿಂದ ಇಡೀ ವಾತಾವರಣ ಕಲುಷಿತಗೊಳ್ಳುತ್ತಿದೆ. ಆಸ್ತಮಾ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಈ ಸಂದರ್ಭದಲ್ಲಿ ಉಲ್ಬಣಿಸುತ್ತಿವೆ. ಇದರ ಜೊತೆಗೆ ಪಟಾಕಿಗಳ ಸ್ಫೋಟದಿಂದ ಉಂಟಾಗುವ ಹಾನಿಯನ್ನು ಕಡೆಗಣಿಸುವಂತಿಲ್ಲ. ಭಾರೀ ಶಬ್ದದ ಪಟಾಕಿ-ಸಿಡಿಮದ್ದುಗಳಿಂದ ಶ್ರವಣಶಕ್ತಿ ಕುಂದುತ್ತದೆ. ಅಜಾಗರೂಕತೆಯಿಂದ ಸುಟ್ಟಗಾಯಗಳಾಗುತ್ತವೆ. ಅಮೂಲ್ಯವಾದ ಕಣ್ಣುಗಳಿಗೆ ಹಾನಿಯಾಗುತ್ತದೆ. ಬೆಲೆ ಬಾಳುವ ಬಟ್ಟೆಗಳು ತೂತು ಬಿದ್ದು ಹಾಳಾಗುತ್ತವೆ. ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಸಾಕು ಪ್ರಾಣಿಗಳು ಹಿಂಸೆಗೆ ಒಳಗಾಗುತ್ತವೆ. ಹೀಗೆ ತೊಂದರೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇನ್ನು ದೀಪಾವಳಿ ಎಂದರೆ ಕೇವಲ ಪಟಾಕಿಗಳನ್ನು ಸುಡುವುದು ಎನ್ನುವಷ್ಟರ ಮಟ್ಟಿಗೆ ಈ ಹಬ್ಬ ಇತ್ತೀಚಿನ ವರ್ಷಗಳಲ್ಲಿ ಆಚರಿಸಲ್ಪಡುತ್ತಿರುವುದು ದುರದೃಷ್ಟಕರ. ಆದರೆ ಇದಕ್ಕೆ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಹಬ್ಬದಲ್ಲಿ ಪಟಾಕಿ, ಸಿಡಿಮದ್ದುಗಳು ಮತ್ತು ಬಾಣಬಿರುಸುಗಳದ್ದೇ ಕಾರುಬಾರು ಆಗಿರುವಾಗ ಒಂದಷ್ಟು ಮುನ್ನೆಚ್ಚರಿಕೆಗಳನ್ನು ಖಂಡಿತವಾಗಿ ವಹಿಸಬೇಕಾಗುತ್ತದೆ.

ಸಲಹೆ, ಸೂಚನೆ ಮತ್ತು ಮುನ್ನೆಚ್ಚರಿಕೆ

  • ಪಟಾಕಿಗಳನ್ನು ಖರೀದಿಸುವಾಗ ಅವು ಒಳ್ಳೆಯ ಗುಣಮಟ್ಟದವು ಎಂಬುದುನ್ನು ಖಚಿತಪಡಿಸಿಕೊಳ್ಳಿ. ಅಗ್ಗದ ಬೆಲೆಯೆಂದು ಕಳಪೆ ಪಟಾಕಿಗಳ ಖರೀದಿ ಅಪಾಯಕ್ಕೆ ಆಹ್ವಾನ ನೀಡಿದಂತೆ.
  • ಮಕ್ಕಳು ಪಟಾಕಿಗಳನ್ನು ಸಿಡಿಸುವಾಗ ಅವರ ಬಗ್ಗೆ ಗಮನವಿರಲಿ. ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು. ಒಮ್ಮೆ ಉಪಯೋಗಿಸಲ್ಪಟ್ಟ ಯಾವುದೇ ಬಗೆಯ ಪಟಾಕಿಗಳನ್ನು ಪುನ: ಹೊತ್ತಿಸಿ ನೋಡುವುದಕ್ಕೆ ಹೋಗಬಾರದು.
  • ಮನೆಯೊಳಗೆ ಪಟಾಕಿಗಳನ್ನು ಸುಡುವ ಸಂಭ್ರಮ ಬೇಡ. ಆದಷ್ಟು ಮನೆಯ ಹೊರಗಡೆ ಸಾಧ್ಯವಾದರೆ ಕಾಂಪೌಂಡಿನ ಆಚೆಗೆ ಸುಡಬೇಕು. ಭಾರೀ ಶಬ್ದ ಮಾಡುವ ಆಟಂಬಾಂಬ್‍ನಂಥ ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದು ಕ್ಷೇಮಕರ.
  • ಸುರ್‍ಸುರ್ ಬತ್ತಿ ಹೊತ್ತಿಸುವಾಗ ಹೊರ ಹೊಮ್ಮುವ ಕಿಡಿಗಳು ದೇಹಕ್ಕೆ ತಾಗದಂತಿರಲಿ. ಅವುಗಳನ್ನು ಗಾಳಿಯಲ್ಲಿ ವೃತ್ತಾಕಾರವಾಗಿ ತಿರುಗಿಸುವುದು ಬೇಡ. ಪಟಾಕಿ ಸುಡುವಾಗ ಪರಸ್ಪರ ಚೇಪ್ಟೆ, ತುಂಟಾಟ, ಹುಡುಗಾಟಗಳಿಗೆ ಅವಕಾಶ ಇಲ್ಲದಿರಲಿ.
  • ಹೂಕುಂಡ, ಭೂಚಕ್ರ ಮುಂತಾದವುಗಳನ್ನು ಕೆಳಗೆ ಬಾಗಿ ಹಚ್ಚುವಾಗ ವಿಶೇಷ ಎಚ್ಚರಿಕೆ ಇರಲಿ. ಅವುಗಳಿಗೆ ಬೆಂಕಿ ಹಚ್ಚಿದ ನಂತರ ಆರಿ ಹೋಗಿರಬಹುದೆಂಬ ಆತುರದಲ್ಲಿ ಹೋಗಿ ಪರೀಕ್ಷೆ ಮಾಡುವುದು ಅಪಾಯಕಾರಿ. ಹಠಾತ್ ಅವು ಸಿಡಿಯಬಹುದು.
  • ಸಿಡಿಯುವ ಪಟಾಕಿಗಳನ್ನು ಕೈಯಲ್ಲಿ ಹಿಡಿದುಕೊಂಡು ಹೊತ್ತಿಸಲೇಬಾರದು. ಮಕ್ಕಳು ಇದನ್ನು ಧೈರ್ಯದ ಸಂಕೇತವೆಂದು ಭಾವಿಸುತ್ತಾರೆ. ಇದರ ಅಪಾಯದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು.
  • ರಾಕೆಟ್ ಪಟಾಕಿಗಳನ್ನು ಹಚ್ಚುವಾಗ ವಿಶೇಷ ಎಚ್ಚರಿಕೆ ಅಗತ್ಯ. ಅವು ನೇರವಾಗಿ ಮೇಲ್ಮುಖವಾಗಿ ಹಾರುವಂತಿರಬೇಕು. ಕೈಯಲ್ಲಿ ಹಿಡಿದು ಬೆಂಕಿ ಹಚ್ಚಿ ರಾಕೆಟ್‍ನನ್ನು ಹಾರಿ ಬಿಡುವುದು ತುಂಬಾ ಅಪಾಯಕಾರಿ.
  • ಪಟಾಕಿಯನ್ನು ಹಚ್ಚುವಾಗ ಮಕ್ಕಳ ಜೇಬುಗಳಲ್ಲಿ ಬೇರೆ ಪಟಾಕಿಗಳು ಇರದಂತೆ ಎಚ್ಚರವಹಿಸಬೇಕು. ಯಾವುದೇ ಪಟಾಕಿಯ ಕಿಡಿ ಅವುಗಳಿಗೆ ತಗುಲಿದರೆ ಅನಾಹುತ ತಪ್ಪಿದ್ದಲ್ಲ.
  • ಯಾವುದೇ ಬಗೆಯ ಪಟಾಕಿಗಳನ್ನು ಹೊತ್ತಿಸುವಾಗ ನೈಲಾನ್ ಬಟ್ಟೆ ಧರಿಸದಂತೆ ಎಚ್ಚರವಹಿಸಿ. ಹತ್ತಿ ಬಟ್ಟೆ ಧರಿಸುವುದು ಬಹಳ ಕ್ಷೇಮಕರ.
  • ಪಟಾಕಿಗಳನ್ನು ಹಚ್ಚುವಾಗ ಚಪ್ಪಲಿಗಳನ್ನು ಧರಿಸಬೇಕು. ಮಕ್ಕಳು ಅವಸರದಲ್ಲಿ ಬರಿಗಾಲಲ್ಲಿ ಓಡಾಡುತ್ತಾರೆ. ಭೂಚಕ್ರ, ಸುರ್‍ಸುರ್ ಬತ್ತಿ, ಹೂಕುಂಡ ಮುಂತಾದವು ಸುಟ್ಟು ಹೋದ ನಂತರವೂ ಬಿಸಿಯಾಗಿರುತ್ತದೆ. ಬರಿಕಾಲಿಗೆ ತಗುಲಿ ಸುಟ್ಟ ಗಾಯವಾಗಬಹುದು. ಅಂತೆಯೇ ಇಂತಹ ಪಟಾಕಿಗಳನ್ನು ಹಚ್ಚಿದ ಮೇಲೆ ಒಂದು ಮೂಲೆಯಲ್ಲಿ ಸುರಕ್ಷಿತವಾಗಿ ರಾಶಿ ಹಾಕುವುದು ಒಳ್ಳೆಯದು.
  • ಪಟಾಕಿಗಳನ್ನು ಹಚ್ಚುವಾಗಿ ಮನೆಯ ಮುಂಭಾಗದಲ್ಲಿ ನೀರಿನ ಬಕೆಟ್‍ನನ್ನು ಇಟ್ಟುಕೊಳ್ಳುವುದು ಉಪಯುಕ್ತ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೀರಿಗಾಗಿ ಪರದಾಡುವುದು ಇದರಿಂದ ತಪ್ಪುತ್ತದೆ.
  • ಪಟಾಕಿಗಳನ್ನು ಸುಡುವಾಗ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದೇ ಇರುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ಖಂಡಿತ ಸಲ್ಲದು. ಪ್ರಥಮ ಚಿಕಿತ್ಸೆ ನೀಡಲು ಸಾಮಗ್ರಿಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು.
  • ವಿವಿಧ ಬಗೆಯ ಪಟಾಕಿಗಳು, ಮತಾಪುಗಳನ್ನು ಸುಡುವುದು ಸಂತೋಷವನ್ನು ಉಂಟು ಮಾಡುವುದು. ಆದರೆ ಈ ಸಂತೋಷ, ಸಂಭ್ರಮ ದುರಂತಕ್ಕೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆ ಸದಾ ಇರಲಿ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!