ಕೊರೊನಾ ಸೋಂಕು ಅವಾಂತರ – ಕಡೆಗಣಿಸಿದ ಕಾಯಿಲೆಗಳು……

ಕೊರೊನಾ ಸೋಂಕು ಅವಾಂತರ ಸೃಷ್ಟಿಸುವುದರ ಜೊತೆಗೆ ಆರೋಗ್ಯದ ಅಡಿಗಲ್ಲನ್ನೇ ಬುಡಮೇಲು ಮಾಡಿರುವುದಂತೂ ವಾಸ್ತವ. ಕೊರೊನಾ ಕರಿನೆರಳಿನಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ನಲುಗಿ ಹೋಗಿದೆ. ಜತೆಗೆ ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳೂ ಮುಗ್ಗರಿಸಿವೆ. ‘Non-covid-19’ ರೋಗಿಗಳನ್ನು ಕಡೆಗಣಿಸಬೇಡಿ ಎಂಬ ಕೂಗು ಹೆಚ್ಚಾಗುತ್ತಿದೆ.

ಕೊರೊನಾ ಸೋಂಕು ಅವಾಂತರ - ಕಡೆಗಣಿಸಿದ ಕಾಯಿಲೆಗಳು......ಕೊರೊನಾ ವೈರಸ್ ಸೋಂಕು ಏರು ಮುಖದಲ್ಲೇ ಲಂಗುಲಗಾಮ ಇಲ್ಲದೆ ಸಾಗುತ್ತಿದೆ. ಜಗದಲ್ಲಿ ಯುದ್ಧ ನಡೆಯಲಿಲ್ಲ. ಮದ್ದು ಗುಂಡುಗಳು ಸಿಡಿಯಲಿಲ್ಲ. ಬಾಂಬುಗಳು ಸ್ಪೋಟಗೊಳ್ಳಲಿಲ್ಲ. ನಿಜ. ಯುದ್ಧವನ್ನೂ ಮೀರಿಸುವಷ್ಟು ಹೆಣಗಳು ಈ ನೆಲದಲ್ಲಿ ಬಿದ್ದದ್ದಂತೂ ಸತ್ಯ. ಎಚ್ಚರಿಕೆ ಇರಲಿ ಎಂದು ಒತ್ತಿ ಹೇಳುತ್ತಿದ್ದರೂ, ಜನರಲ್ಲಿ ಭಯ, ಭೀತಿ ಬಿಟ್ಟಿಲ್ಲ. ಅಪ್ಪಿಕೊಂಡ ಆತಂಕ ದೂರವಾಗಿಲ್ಲ. ಹೆಸರೇ ಬೆಚ್ಚಿ ಬೀಳಿಸುವಂತಿದೆ. ಸಾಂಕ್ರಾಮಿಕವಾಗಿರುವ ‘ಕೋವಿಡ್ 19 ಪಿಡುಗಿನ ಹೋರಾಟದಲ್ಲಿ ಲಾಕ್ ಡೌನ್ ಕ್ರಮ ಅಂತಿಮ ಅಸ್ತ್ರವಲ್ಲ. ಅದು ಈ ರೋಗದ ವಿರುದ್ಧದ ಹೋರಾಟಕ್ಕೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲು ಒಂದು ಅವಕಾಶ ಅಷ್ಟೇ ‘ ಎನ್ನುವ ಮಾತನ್ನು ದೇಶದ ನೀತಿ ನಿರೂಪಕರು ಹಲವು ಬಾರಿ ಹೇಳಿದ್ದಾರೆ. ಆ ಮಾತು ನಿಜ ಕೂಡ.

ಆಸ್ಪತ್ರೆಗಳು ಎಲ್ಲರಿಗೂ ಮುಕ್ತವಾಗಿರಬೇಕು. ಎಲ್ಲ ರೋಗಿಗಳನ್ನು ನೋಡಲು ಅನುವು ಮಾಡಿ ಕೊಡಬೇಕು. ಕೊರೊನಾ ಸೋಂಕು ಬೆಂಬಿಡದ ಭೂತದಂತೆ ಕಾಡುತ್ತಿರುವುದರಿಂದ, ಇಡೀ ಜಗತ್ತೇ ಅದರ ಮುಂದೆ ಮಂಡಿಯೂರಿ ತಲೆತಗ್ಗಿಸಿ ನಿಂತಾಗಲೂ, ಇತರ ರೋಗಿಗಳ ನಿರ್ಲಕ್ಷ ಖಂಡಿತ ಸಲ್ಲದು. “ಆರೋಗ್ಯ ಸೇವೆ ಪಡೆಯುವ ಹಕ್ಕು, ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲೇ ಬರುತ್ತದೆ ” ಎಂದು ಸುಪ್ರೀಂಕೋರ್ಟ್ ಹೇಳಿರುವ ಮಾತುಗಳನ್ನು ಸರಕಾರಗಳು ನೆನಪಿಸಿಕೊಳ್ಳಬೇಕು. ಯಾವುದೇ ಸಾಂಕ್ರಾಮಿಕಗಳ ಸ್ಪೋಟಗೊಂಡಾಗ ಅದಕ್ಕೆ ಆಧ್ಯತೆ ನೀಡಬೇಕು. ನಿಜ. ಆದರೆ, ಅದರ ಕರಾಳ ನೆರಳಲ್ಲಿ ಉಳಿದ ರೋಗಗಳು ನಲುಗಿ ಹೋಗಬಾರದು. ಜನರ ಆರೋಗ್ಯ ಹಾಳಾಗಬಾರದು. ಸಾವು ನೋವಿಗೆ ಸಂಚಗಾರ ನೀಡಬಾರದು.

ಮನ ಕಲುಕುವ ಘಟನೆ:

ನೊಯಿಡಾದಲ್ಲಿ ಗರ್ಭಿಣಿಯೊಬ್ಬಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಳು. ಅವುಳಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದವು. ಸತತ 13 ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿದರು. ಕೊರೊನಾ ಹಾವಳಿ ಇದ್ದ ಕಾರಣ ಕೋವಿಡ್ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು, ವರದಿ ಪಡೆದುಕೊಂಡು ಬಂದ ಮೇಲೆ ನೋಡುವುದಾಗಿ ಕಡ್ಡಿ ಮುರಿದು ಎರಡು ತುಂಡು ಮಾಡಿದಂತೆ ಹೇಳಿದರು. ಎಲ್ಲ ಆಸ್ಪತ್ರೆಯವರೂ ಇದೇ ಸಬೂಬು ಹೇಳಿ ಸಾಗು ಹಾಕಿದರು. ಕೊನೆಗೆ ಆಂಬ್ಯುಲೆನ್ಸ್ ನಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.ಇದು ಯಾರ ಮನವನ್ನು ಕಲುಕದೇ ಇರದು.

ಗರ್ಭಿಣಿಯರು ಆರೋಗ್ಯ ತಪಾಸಣೆಗೆ ಬಂದರೆ, ಟಿ.ಟಿ.ಚುಚ್ಚುಮದ್ದು ತಗೆದುಕೊಳ್ಳಬೇಕಿದೆ ಎಂದು ಹೇಳಿದರೆ, ಮಕ್ಕಳನ್ನು ಲಸಿಕೆಗಾಗಿ ಸರಕಾರಿ ಆಸ್ಪತ್ರೆಗೆ ಕರೆತಂದರೆ ಅವರ ಆರೋಗ್ಯ ತಪಾಸಣೆಯನ್ನು ಮಾಡದೇ, ಲಸಿಕೆಯನ್ನು ನೀಡದೇ,ಈಗ ಕೊರೊನಾ ಇರುವುದರಿಂದ ಆಸ್ಪತ್ರೆ ಸಮೀಪ ಗರ್ಭಿಣಿಯರನ್ನು, ಮಕ್ಕಳನ್ನು ತರಬೇಡಿ ಎಂಬ ಭಯ ಭೀತಿಯ ಸಂದೇಶ ನೀಡಿ ಸಾಗು ಹಾಕಿದ್ದಾರೆ. ಹೀಗಾಗಿ ಕೊರೊನಾ ಕರಿನೆರಳಿನಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ನಲುಗಿ ಹೋಗಿದೆ. ಜತೆಗೆ ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳೂ ಮುಗ್ಗರಿಸಿವೆ. ಇದು ನಮ್ಮ ದೇಶದಲ್ಲಿ ಮಾತ್ರ ನಡೆದಿಲ್ಲ. ಪ್ರಪಂಚದ ಎಲ್ಲೆಡೆ ಆಗಿದೆ……. ಅಂಗನವಾಡಿಯಲ್ಲಿ ಅಶಕ್ತ ಮಕ್ಕಳ ಆರೋಗ್ಯ ತಪಾಸಣೆ, ಲಸಿಕೆ ವಿತರಣೆ ಕಾರ್ಯಕ್ರಮ ಜರುಗಿಲ್ಲ .ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಅಸಾಂಕ್ರಾಮಿಕ ಕಾಯಿಲೆಗಳ ಪತ್ತೆ ಹಚ್ಚುವ, ಚಿಕಿತ್ಸೆ ನೀಡುವ ಯೋಜನೆಗೂ ಎಳ್ಳು ನೀರು ಬಿಟ್ಟಿದೆ.

ನಿರ್ಲಕ್ಷ ಸರಿಯಲ್ಲ:

ಕೊರೊನಾ ಸೋಂಕು ಅವಾಂತರ - ಕಡೆಗಣಿಸಿದ ಕಾಯಿಲೆಗಳು......ಕೊರೊನಾದ ಈ ಆರ್ಭಟದ ಮಧ್ಯೆ ಇತರ ರೋಗಗಳ ತೊಂದರೆಗೆ ಒಳಗಾದವರನ್ನು ಕಡೆಗಣಿಸುವುದು, ನಿರ್ಲಕ್ಷಿಸುವುದು ಎಳ್ಳಷ್ಟೂ ಸರಿಯಲ್ಲ. ಈಗ ಯಾರಿಗಾದರೂ ಜ್ವರ, ನೆಗಡಿ, ಕೆಮ್ಮು ಬಂತೆಂದರೆ ಹೆದರಿ ನಡಗುವ ಸ್ಥಿತಿ ಇದೆ. ಏಕಂದರೆ ಜ್ವರ ಎಂದರೆ ಕೊರೊನಾ ಎಂದು ತಪ್ಪಾಗಿ ಭಾವಿಸುವ ಪರಿಪಾಟ ಹೆಚ್ಚುತ್ತಿದೆ. ಜ್ವರ ಅನೇಕ ರೋಗಗಳಲ್ಲಿ ಪ್ರಕಟಗೊಳ್ಳುವ ಒಂದು ಲಕ್ಷಣ. ಜ್ವರದಿಂದ ಬಳಲುವವರು ಆಸ್ಪತ್ರೆಗೆ ಬಂದರೆ, ಅವರನ್ನು ಒಳರೋಗಿಯಾಗಿ ಸೇರಿಸಿಕೊಳ್ಳುವುದು ಒತ್ತಟ್ಟಿಗಿರಲಿ, ಅವರ ತಪಾಸಣೆ ಮಾಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ರೋಗಿಗಳು ಮೊದಲು ಕೊರೊನಾ ಸೋಂಕು ತಪಾಸಣಾ ಆಸ್ಪತ್ರೆಗಳಿಗೆ ಹೋಗಿ, ‘ಸ್ವಾಬ ಟೆಸ್ಟ್ ‘ ಮಾಡಿಸಿಕೊಂಡು, ಅದು ಕೊರೊನಾ ಸೋಂಕಿನ ಜ್ವರ ಅಲ್ಲ ಎಂಬುದನ್ನು ಸಾಬೀತು ನಡೆಸಿಕೊಂಡು ಬರುವ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.

ಅನಾರೋಗ್ಯಕ್ಕೆ ಒಳಗಾದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆಗಳು ಅಷ್ಟಿಷ್ಟಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೇ ಜನರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವತ್ತ ಸರಕಾರ ತಕ್ಷಣ ಗಮನ ಸರಿಸಬೇಕು. ಅಗತ್ಯ ಬಿದ್ದರೆ, ಈಗಿರುವ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಬೇಕು. ಕೋವಿಡ್ ಬಾಧಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯ ಸಿಬ್ಬಂದಿಯನ್ನು ‘ಕೋವಿಡ್ ಹೋರಾಟಗಾರರು ‘(Covid wariers )ಎಂದು ಗೌರವಿಸಿ ಇಡೀ ದೇಶ ಕೊಂಡಾಡುತ್ತಿದೆ. ವೈದ್ಯ ಸಮುದಾಯದ ಬಗ್ಗೆ ಈಗ ಎಲ್ಲೆಡೆ ಕೈತಜ್ಞತಾ ಭಾವವೂ ಇದೆ. “ವೈದ್ಯೊ ನಾರಾಯಣೋ ಹರಿ ” ಎಂಬ ಅಭಿಪ್ರಾಯ ಜನರಲ್ಲಿ ಗಟ್ಟಿಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯರು ಇತರ ರೋಗಗಳತ್ತ ಗಮನ ಹರಿಸುವುದನ್ನು ಮರೆಯಬಾರದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಕೊರೊನಾ ಪೂರ್ವದ ಎಷ್ಟೋ ವಿಷಯಗಳು ಈಗ ನಿರ್ಲಕ್ಷಿತವಾಗಿವೆ. ಕೊರೊನಾ ಪೆಡಂಭೂತ ಜಗತ್ತನ್ನು ಕದಂಬ ಬಾಹುವಿನಲ್ಲಿ ಬಂಧಿಸಿ ಹಿಂಡಿ ಹಿಪ್ಪಿಮಾಡುತ್ತಿರುವ ಈ ಹೊತ್ತಿನಲ್ಲಿ ಸಣ್ಣ ಸಣ್ಣ ಭೂತಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಇಂತಹ ಅನಾರೋಗ್ಯಕರ ಬದಲಾವಣೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಗಮನಿಸಿದೆ.ಇಂದು ಜಗತ್ತಿನಾದ್ಯಂತ ವೈದ್ಯರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಆಧ್ಯತೆ ಗಮನಾರ್ಹವಾಗಿ ಬದಲಾಗಿದೆ. ಈ ಕೊರೊನಾ ದೆಸೆಯಿಂದ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ರಾಷ್ಟ್ರೀಯ ಆರೋಗ್ಯ ಮಿಶನ್ ನ ವರದಿಯು 2020 ರ ಮಾರ್ಚ , ಎಪ್ರಿಲ್ ಮತ್ತು ಮೇ ತಿಂಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿಸಂಖ್ಯೆಗಳನ್ನು ಒಂದು ವರ್ಷದ ಹಿಂದಿನ ಸ್ಥಿತಿಗೆ, ಅಂದರೆ 2019 ರ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ, ಈ ಬಾರಿ ಅದಕ್ಕಿಂತ ಒಂದು ಲಕ್ಷ ಕಡಿಮೆ ಕ್ಯಾನ್ಸರ್ ರೋಗಿಗಳು ದಾಖಲಾಗಿದ್ದಾರಂತೆ, ಕ್ಷಯ ರೋಗಿಗಳ ವಿಷಯದಲ್ಲೂ ಹೀಗೆ ಆಗಿದ್ದು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಕ್ಷಯ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಭಾರತದಲ್ಲಿ ವ್ಯಕ್ತಿಯೊಬ್ಬನಲ್ಲಿ ಕ್ಷಯ ರೋಗ ಪತ್ತೆಯಾದರೆ, ಆ ವ್ಯಕ್ತಿಯ ಹೆಸರನ್ನು National Tuberculosis Elimination ಕಾರ್ಯಕ್ರಮದಡಿ ದಾಖಲಿಸಿಕೊಳ್ಳಲಾಗುತ್ತದೆ. ಈ ರೋಗಿಗಳಿಗೆ ಸರಿಯಾಗಿ ಔಷಧ ಪೂರೈಕೆಯಾಗುವುದನ್ನು ಖಾತ್ರಿ ಪಡಿಸುವ ಜವಾಬ್ದಾರಿಯನ್ನು ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ ವಹಿಸಲಾಗುತ್ತದೆ. ಇದಷ್ಟೇ ಅಲ್ಲದೇ ರೋಗಿಯ ಓಡಾಟ, ಆತನ ಸಂಪರ್ಕಕ್ಕೆ ಬಂದವರ ವಿವರಗಳನ್ನು ದಾಖಲಿಸುವುದು ಕೂಡ ಆರೋಗ್ಯ ಕಾರ್ಯಕರ್ತರ ಜವಾಬ್ದಾರಿಯಾಗಿರುತ್ತದೆ. ಆದರೆ, ಭಾರತದಲ್ಲೀಗ ಬಹುತೇಕ ಆರೋಗ್ಯ ಕಾರ್ಯಕರ್ತರು, ಕೊವಿಡ್-19 ವಿರುದ್ಧದ ಹೋರಾಟದಲ್ಲಿ ತೊಡಗಿರುವುದರಿಂದಾಗಿ ಟಿ.ಬಿ.ರೋಗಿಗಳಿಗೆ ವಿಪರೀತ ತೊಂದರೆಯಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಂತೂ ಸಕಾಲಕ್ಕೆ ಔಷಧ ಸಿಗದೇ ಪರದಾಡಿದ್ದಾರೆ. ಈಗ ಕ್ಷಯ ರೋಗಿಗಳ ಮೇಲೆ ನಿಗಾ ಇಡುವ ವ್ಯವಸ್ಥೆಯೇ ದುರ್ಬಲವಾಗಿರುವುದರಿಂದಾಗಿ, ಕ್ಷಯದಿಂದ ಸಾಯುತ್ತಿರುವವರ ಸಂಖ್ಯೆಯೂ ನಿಖರವಾಗಿ ತಿಳಿಯುತ್ತಿಲ್ಲ.

ಮೇ ತಿಂಗಳಲ್ಲಿ ಮರಣ ಪ್ರಮಾಣ 

  1. ಕೋವಿಡ್-19.                         4098
  2. ಹೃದ್ರೋಗ.                           24,476
  3. ಮಧುಮೇಹ.                            4191
  4. ಕ್ಷಯ                                        3129
  5. ನ್ಯೂಮೋನಿಯಾ                        1678
  6. ಅಸ್ತಮಾ                                     809
  7. ಮಲೇರಿಯಾ                               445

( ಕೋವಿಡ್ ಬಿಟ್ಟು ಉಳಿದ ರೋಗಿಗಳ ಮರಣ ಪ್ರಮಾಣದ ಸರಾಸರಿ 2015 – 2019 ರ ವರೆಗಿನ ಅಂಕಿಸಂಖ್ಯೆಗಳನ್ನು ಆಧರಿಸಿದೆ)

ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಕೊರೊನಾ ಪೀಡಿತ ಬೃಹತ್ ಹರವಿನಿಂದಾಗಿ ಅಪರಿಮಿತ ಒತ್ತಡ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿಯೇ ಅನ್ಯ ರೋಗಿಗಳಿಗೆ ಪ್ರವೇಶ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಕಾರಣಕ್ಕಾಗಿಯೇ ‘Non-covid-19’ ರೋಗಿಗಳನ್ನು ಕಡೆಗಣಿಸಬೇಡಿ ಎಂಬ ಕೂಗು ಹೆಚ್ಚಾಗುತ್ತಿದೆ. “ಮಹಾನಗರಗಳಲ್ಲಂತೂ ಕೊರೊನಾ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಜಾಗ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಲಾರಂಭಿಸಿದೆ. ಹೀಗಿರುವಾಗ ಅನ್ಯ ರೋಗಿಗಳನ್ನು ಕೇಳುವವರೇ ಇಲ್ಲವಾಗಿದೆ. ಹೃದ್ರೋಗ, ಕ್ಷಯ ಹಾಗೂ ಕ್ಯಾನ್ಸರ್ ರೋಗಿಗಳ ಪಡಿಪಾಟಲನ್ನು ನೋಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕೊರೊನಾ ‘ಪೀಕ್’ ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಸೇವೆಗಳ ಸ್ಥಿತಿ ಎಷ್ಟು ಹದಗೆಡಲಿದೆಯೋ ಎಂದು ಆತಂಕವಾಗುತ್ತದೆ ” ಎನ್ನುವ ಮುಂಬೈನ ಖ್ಯಾತ ಪತ್ರಕರ್ತರ ಮಾತು ಅರ್ಥಪೂರ್ಣವಾಗಿದೆ.
ಗರ್ಭಿಣಿಯರ ಗೋಳು  :

ಕೊರೊನಾ ಮಹಾಮಾರಿ ವೈರಸ್ ಸೋಂಕು ತಮಗೂ ಬರಬಹುದೆಂಬ ಭೀತಿಯಲ್ಲಿ ಜಗತ್ತಿನಾದ್ಯಂತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳ ಮುಟ್ಟಿ, ತಟ್ಟಿ ನೋಡುವುದಿರಲಿ, ಹತ್ತಿರ ಹೋಗಲು ಹೆದರುವ ವಾತಾವರಣ ಲಾಕ್ ಡೌನ್ ಆರಂಭದಲ್ಲಿ ನಿರ್ಮಾಣವಾಗಿತ್ತು. ಅದರ ನೇರ ಪರಿಣಾಮ ಗರ್ಭಿಣಿಯರ ಮೇಲೆ ಆಯಿತು. ಗರ್ಭಿಣಿ, ಗರ್ಭಧರಿಸಿದ ಮೊದಲ ತಿಂಗಳಿಂದ ಕಾಲಕಾಲಕ್ಕೆ ವೈದ್ಯರ ಭೇಟಿ ನೀಡಿ, ಆರೋಗ್ಯ ತಪಾಸಣೆಯನ್ನು, ಸಕಾಲಿಕ ಸಲಹೆ ಸೂಚನೆಗಳನ್ನು ಪಡೆಯುವುದು ಅವಶ್ಯ ಮತ್ತು ಅನಿವಾರ್ಯ ಕೂಡ. ಗರ್ಭಿಣಿಯರನ್ನು ಕ್ರಮಬದ್ದ, ವ್ಯವಸ್ಥಿತ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದನ್ನು ” ಪ್ರಸೂತಿ ಪೂರ್ವ ಪರಾಮರಿಕೆ(Antinatal care ) ಎಂದು ಕರೆಯುತ್ತಾರೆ. ಗರ್ಭಧಾರಣೆಯು ಸುಸೂತ್ರವಾಗಿ ಮುಂದುವರೆದು, ಹೆರಿಗೆಯು ನಿರಾತಂಕವಾಗಿ ನಡೆದು, ಆರೋಗ್ಯವಂತ ತಾಯಿ ಮತ್ತು  ಆರೋಗ್ಯಶಾಲಿ ಮಗು ನಡೆಯುವುದೇ ಪ್ರಸೂತಿ ಪೂರ್ವ ಪರಾಮರಿಕೆಯ ಗುರಿ. 4 ರಿಂದ 28 ವಾರಗಳ ನಡುವೆ ಪ್ರತಿ ತಿಂಗಳಿಗೊಮ್ಮೆ, ನಂತರ 28 -36 ವಾರಗಳ ನಡುವೆ ಪ್ರತಿ 15 ದಿನಗಳಿಗೊಮ್ಮೆ, ಆ ಮೇಲೆ ಹೆರಿಗೆಯಾಗುವ ವರೆಗೆ ಪ್ರತಿ ವಾರಕ್ಕೊಮ್ಮೆ ವೈದ್ಯರ ಭೇಟಿ, ತಪಾಸಣೆ, ಸೂಕ್ತ ಸಲಹೆ ಸೂಚನೆ ಅತೀ ಅವಶ್ಯ.

corona-and-pregnancyಆದರೆ, ಕೊರೊನಾ ಸೋಂಕಿನ ಸುನಾಮಿಗೆ ತತ್ತರಿಸಿದ ಜಗತ್ತಿನಲ್ಲಿ ಎಲ್ಲಾ ಲೆಕ್ಕಾಚಾರಗಳು ಏರುಪೇರಾಗಿವೆ. ಸಧ್ಯದ ಸ್ಥಿತಿಯಲ್ಲಿ ತಬ್ಬಿಬ್ಬಾದ ವೈದ್ಯರು ಟೆಲಿಮೆಡಿಸಿನ್ ತಂತ್ರಜ್ಞಾನದ ಮೊರೆ ಹೋದರು. ಟೆಲಿಮೆಡಿಸಿನ್ ವೈದ್ಯರಿಗೆ ಮಾತ್ರವಲ್ಲ, ಗರ್ಭಿಣಿ ಯರಿಗೂ ಮತ್ತು ಅವರ ಗರ್ಭದಲ್ಲಿರುವ ಮಗುವಿನ ದೃಷ್ಟಿಯಿಂದಲೂ ಸುರಕ್ಷಿತ ವಿಧಾನ ಎಂಬುದು ಹಲವಾರು ವೈದ್ಯರ ಅಭಿಪ್ರಾಯ. ತಾಯಿ ಮತ್ತು ಭವಿಷ್ಯದ ಮಗು ಆಸ್ಪತ್ರೆಗೆ ಬಂದು ಕೊರೊನಾದಂಥ ಸೋಂಕಿನ ಬಳುವಳಿ ಪಡೆದುಕೊಳ್ಳುವ ಅಪಾಯಕ್ಕಿಂತ ಮನಿಯಲ್ಲಿಯೇ ಇದ್ದು, ಟೆಲಿಮೆಡಿಸಿನ್ ಮೂಲಕ ವೈದ್ಯರ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯುವುದು ಒಳ್ಳೆಯದು ಎಂಬುದು ಟೆಲಿಮೆಡಿಸಿನ್ ವೈದ್ಯರ ಅಭಿಮತ. ಟೆಲಿಮೆಡಿಸಿನ್ ಸಣ್ಣ ಪುಟ್ಟ ಕಾಯಿಲೆಗಳಿಗೆ ಉಪಯುಕ್ತ .ಗರ್ಭಿಣಿಯರ ಕ್ಷೇತ್ರಕ್ಕಂತೂ ಇದು ಸೂಕ್ತವಲ್ಲ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯ.

ಕೊರೊನಾ ಮಹಾಮಾರಿ ಸಾಂಕ್ರಾಮಿಕದಲ್ಲಿ ಗರ್ಭಿಣಿಯರು ಅನುಭವಿಸಿದ ಗೋಳು ಅಷ್ಟಿಷ್ಟಲ್ಲ. ಹೆರಿಗೆ ವೇಳೆಯಲ್ಲಿ ಆಸ್ಪತ್ರೆಗಳ ಮೆಟ್ಟಿಲು ಹತ್ತಿ ಇಳಿದು ಸಾಕು ಸಾಕಾಗಿ ಹೋಗಿದೆ. ಸಕಾಲದಲ್ಲಿ ವೈದ್ಯರ ಸೇವೆ ಸಿಗದಿದ್ದಕ್ಕೆ ಸಾವುಗಳು ಸಂಭವಿಸಿರುವ ವರದಿಗುಳಾಗಿವೆ. ಇದು ಹಲವು ಗರ್ಭಿಣಿ ಸ್ತ್ರೀಯರ ಮಾನಸಿಕ ವ್ಯವಸ್ಥೆಯನ್ನು ಕುಬ್ಜಗೊಳಿಸಿದೆ. ” ಹರಿಗೆ ಎಂದರೆ ಇನ್ನೊಮ್ಮೆ ಹುಟ್ಟಿ ಬಂದಂತೆ “ಎಂಬ ನಂಬಿಕೆಗೆ ಎಡೆಕೊಟ್ಟರೆ, ಈ ಭ್ರಮೆಯಿಂದಲೇ  ಹೆರಿಗೆಯ ಕಾಲಕ್ಕೆ ಪ್ರಾಣಾಪಾಯ ಆಗಬಹುದು. ಗರ್ಭಿಣಿಯರ ಕೋವಿಡ್-19 ಪೂರ್ವದ ನಿಯಮಿತ ತಪಾಸಣೆಗಳು,ಈ ದಿನಗಳಲ್ಲಿ ರದ್ದಾಗಿರುವುದು ಗರ್ಭಿಣಿಯರಿಗೆ ತೊಂದರೆ ಉಂಟು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಕಾಯಿಲೆ ಹರಡುವುದರ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ನಂತರ ಜಗತ್ತಿನಾದ್ಯಂತ ಆಸ್ಪತ್ರೆಗಳು ದಿಢೀರ್ ಎಂದು ಮುಚ್ಚಲ್ಪಟ್ಟವು.

ತುರ್ತು ಸಂದರ್ಭಗಳಲ್ಲಿ ಮಾತ್ರ ವೈದ್ಯರನ್ನು ಮುಖತ: ಭೇಟಿ ಮಾಡಬೇಕು ಎಂದು ಅಮೆರಿಕಾದ ಸಿಡಿಸಿ ಮತ್ತು ಇಂಗ್ಲಂಡಿನ ರಾಷ್ಟ್ರೀಯ ಆರೋಗ್ಯ ಸೇವೆಯ ಸಂಸ್ಥೆ ನಿರ್ದೇಶನ ನೀಡಿದ್ದರಿಂದ, ವೈದ್ಯರೊಡನೆಯ ಎಲ್ಲಾ ಸಾಮಾನ್ಯ ಭೇಟಿಗಳನ್ನು ಮುಂದೂಡಲಾಯಿತು. ದಿನನಿತ್ಯ ನಡೆಯಬೇಕಿದ್ದ ಶಸ್ತ್ರಚಿಕಿತ್ಸೆಗಳು ರದ್ದಾಗತೊಡಗಿದವು. ಸಾಮಾನ್ಯ ರೋಗಿಗಳು ಅಂತರ್ಜಾಲ ಅಥವಾ ಪೋನ್ ಮೂಲಕ ವೈದ್ಯರನ್ನು ಸಂಪರ್ಕಿಸಬೇಕಾಗಿ ಬಂತು. ಆಗ ರೋಗಿಗಳ ಮನದಲ್ಲಿ ಹೆದರಿಕೆ ಮತ್ತು ಆತಂಕ, ಅಭದ್ರತೆ ಆವರಿಸಿಕೊಂಡಿತು. ಭಾರತದಲ್ಲಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ವೈದ್ಯಕೀಯ ಪ್ರಸಿದ್ಧ ನಿಯತಕಾಲಿಕ ‘ಬ್ರಿಟಿಷ್ ಮೆಡಿಕಲ್ ಜರ್ನಲ್ ‘ ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನದಲ್ಲಿ ಕೋವಿಡ್-19 ಮತ್ತು ಅದಿಲ್ಲದೆ ಇತರ ರೋಗಗಳಿಂದ ಸತ್ತವರ ಅಂಕಿಅಂಶಗಳನ್ನು ನೀಡಿದೆ. ತಜ್ಞ ವೈದ್ಯರ ಪ್ರಕಾರ ಎಂದಿನ ಆಸ್ಪತ್ರೆ ಸೇವೆಗಳು ಸಾರ್ವಜನಿಕರಿಗೆ ಸಿಗುತ್ತಿದ್ದರೆ, ಇದರಲ್ಲಿನ ಎಷ್ಟೋ ಮರಣಗಳನ್ನು ತಪ್ಪಿಸಬಹುದಾಗಿತ್ತು. ಇದರಿಂದ ಎಚ್ಚತ್ತ  ಇಂಗ್ಲಂಡ್, ಅಮೇರಿಕ ತಮ್ಮ ಆರೋಗ್ಯ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಬದಲಿಸಿಕೊಂಡರು. ಈ ಬದಲಾವಣೆ ನಮ್ಮ ದೇಶಕ್ಕೂ ಅನಿವಾರ್ಯ ಎಂಬುದನ್ನು ಮರೆಯುವಂತಿಲ್ಲ.

ಪುಟ್ಟ ಮಕ್ಕಳಿಗೂ ಕೊರೊನಾ ಪೆಟ್ಟು:

COVID-and-children” ಮಕ್ಕಳೇ ನಾಡಿನ ದೊಡ್ಡ ಸಂಪತ್ತು “ಎಂದು ಇಂಗ್ಲೀಷ್ ಲೇಖಕ ಜಾನ್ ರಸ್ಕಿನ್ ನುಡಿದಿದ್ದಾನೆ. “ಮುಂಜಾವು ದಿನವನ್ನು ತೋರಿಸಿದಂತೆ ಬಾಲ್ಯ ಮನುಷ್ಯನನ್ನು ತೋರಿಸುತ್ತದೆ” ಎಂದು ಇಂಗ್ಲೀಷ್ ಕವಿ ಜಾನ್ ಮಿಲ್ಟನ್ ಹಾಡಿದ್ದಾನೆ. ಆರೋಗ್ಯ ನಮ್ಮ ಸಾಮಾಜಿಕ ಮತ್ತುಆರ್ಥಿಕ ಬೆಳವಣಿಗೆಗೆ ಬಹು ಮುಖ್ಯ. ಮಗುವಿನ ಆರೋಗ್ಯ ವಯಸ್ಕನ ಆರೋಗ್ಯದೊಡನೆ ನೇರ ಸಂಪರ್ಕವನ್ನು ಹೊಂದಿರುವುದರಿಂದ ಅವರ ಆರೋಗ್ಯದಾಯಕ ಗಮನ ಹರಿಸಲೇ ಬೇಕು. “ಬಾಳ ಸಂಪುಟದಲ್ಲಿ ಬಾಲ್ಯವೆಂಬುವುದೊಂದು ಅಳಿಸಲಾಗದ ಮಧುರ ಭಾವಗೀತೆ “ಎಂದು ಕವಿ ಚೆನ್ನವೀರ ಕಣವಿಯವರು ಕವಿತೆ ಕಟ್ಟಿ ಹಾಡಿದ್ದಾರೆ. ಅದಕ್ಕಾಗಿಯೇ ಮಕ್ಕಳಿಗಾಗಿ ಆರೋಗ್ಯಕರ ಪರಿಸರ ನಿರ್ಮಿಸಿ ಅವರ ಜೀವನದ ಭವಿಷ್ಯ ರೂಪಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಸಮಯೋಚಿತ ಮತ್ತು ಸ್ವಾಗತಾರ್ಹ.

ಮಕ್ಕಳು ಆರೋಗ್ಯದಿಂದ ಸುಖಜೀವನವನ್ನು ದೀರ್ಘಕಾಲ ಮಾಡಬೇಕೆಂಬುದು ಪ್ರತಿಯೊಬ್ಬ ತಂದೆ- ತಾಯಿಗಳ ಅಪೇಕ್ಷೆ. ಅವರು ಆರೋಗ್ಯದಿಂದ ಬಲಗೊಳ್ಳುವುದರ ಬುನಾದಿ, ಜೀವನ ಉಗಮವಾದ ಮೊದಲ ಘಟ್ಟದಲ್ಲಿಯೇ ಹಾಕಲ್ಪಡುತ್ತದೆ. ಆದುದರಿಂದಾಗಿಯೇ ಜೋಸೆಫ್ ಔಬರ್ನ ಹೇಳಿದ ಮಾತು-“ಮಗುವನ್ನು ಬೆಳೆಸುವಾಗ ಅವರ ವೃದ್ದಾಪ್ಯವನ್ನು ಗಮನಿಸು”.ಇದು ಸರ್ವ ಕಾಲಿಕ ಸತ್ಯ! ಮಕ್ಕಳಿಗೆ ಮಾರಕವಾದ ರೋಗಗಳೆಂದರೆ – ಕ್ಷಯ, ಪೋಲಿಯೋ, ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ದಡಾರ, ಹೆಪಟೈಟಿಸ್ ಬಿ, ಮಿದುಳು ಜ್ವರ….... ವೈದ್ಯಕೀಯ ಎಷ್ಟೇ ಮುಂದುವರೆದಿದ್ದರೂ, ರೋಗಾಣುಗಳ ಸಾಗರದಲ್ಲೇ ಈಜಾಡುತ್ತಿರುವ ಜನರು, ಅವುಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಈ ಸಮತೋಲನದಲ್ಲಿ ಸ್ವಲ್ಪು ವ್ಯತ್ಯಾಸವಾದರೂ ಸಾಕು, ರೋಗಾಣುಗಳು ಮನಷ್ಯನ ಮೇಲೆ ಆಕ್ರಮಣ ಮಾಡುತ್ತವೆ. ಈ ಯುದ್ಧದಲ್ಲಿ ಮನುಷ್ಯ ಜಯಶಾಲಿಯಾದರೆ, ರೋಗ ಲಕ್ಷಣಗಳು ಹಣಕಿ ಹಾಕುವುದಿಲ್ಲ. ಸೋತರೆ ರೋಗಿಯಾಗುತ್ತಾನೆ. ಅಷ್ಟೇ ಅಲ್ಲ ರೋಗ ಪ್ರಸಾರದ ಕೇಂದ್ರವೂ ಆಗುತ್ತಾನೆ. ಈ ರೀತಿಯ ಸೋಂಕು ರೋಗಗಳಿಗೆ ಎಳೆ ವಯಸ್ಸಿನವರು ಸುಲಭವಾಗಿ ತುತ್ತಾಗುತ್ತಾರೆ. ಆದ್ದರಿಂದ ಆ ವಯಸ್ಸು, ಆರೋಗ್ಯದ ದೃಷ್ಟಿಯಿಂದ ” ಅಪಾಯಕಾರಿ ಹಂತ ” ಎಂದು ಪರಿಗಣಿಸಲಾಗಿದೆ.

ಲಸಿಕೆ ನೀಡಿಕೆಯೊಂದೇ ಮೂರು ಮಿಲಿಯನ್ ಮಕ್ಕಳ ಸಾವನ್ನು ತಡೆಗಟ್ಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಲಸಿಕೆಗಳಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕೃತ್ರಿಮವಾಗಿ ಹೆಚ್ಚಿಸಿಕೊಳ್ಳಬಹುದು. ಲಸಿಕೆಗಳು ರೋಗಗಳ ವಿರುದ್ಧ ಹೋರಾಡುವ ಸೈನಿಕರನ್ನು ತರಬೇತಿಗೊಳಿಸುವ ಕಾರ್ಯವನ್ನೇ ಮಾಡುತ್ತದೆ.” ಲಸಿಕೆ ” ಎಂಬುದು ” ರಸಿಕೆ ” ಎಂಬ ಪದದ ರೂಪಾಂತರ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆಗಳಿಂದ ಕಾಪಾಡುವ ವಿಶಿಷ್ಟ ಶಕ್ತಿ ಲಸಿಕೆಗಳಿದೆ. ಆದ್ದರಿಂದ ಲಸಿಕೆಗಳನ್ನು “ಜೈವಿಕ ಗುರಾಣಿ ” ಎನ್ನಬಹುದು. ಕೋವಿಡ್-19 ಕಾಯಿಲೆ ಹೂಂಕರಿಸಿದ ನಂತರ ಮಕ್ಕಳಿಗೆ ಕೊಡುತ್ತಿದ್ದ ವಿವಿಧ ರೋಗಗಳ ವಿರುದ್ಧದ ಲಸಿಕೆಗಳ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತಿರುವುದು ಎಲ್ಲಡೆ ಆರೋಗ್ಯ ತಜ್ಞರ ಗಮನಕ್ಕೆ ಬಂದಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ಗಮನಿಸಿದೆ. ಲಾಕ್ ಡೌನ್ ಮತ್ತು ಜನರು ಮನೆಯಲ್ಲಿಯೇ ಬಂಧಿಯಾಗಿರುವ ಪರಿಣಾಮ, ಜತೆಗೆ ಆಸ್ಪತ್ರೆಗಳಲ್ಲಿನ ವೈದ್ಯರ ಸಂದರ್ಶನ ರದ್ದಾಗಿರುವುದು – ಈ ಎಲ್ಲದರ ಕ್ರೋಢೀಕೃತ ಪರಿಣಾಮ ಎನ್ನಬಹುದು . ಪ್ರಪಂಚದಾದ್ಯಂತ ಸುಮಾರು 11.7 ಕೋಟಿ ಮಕ್ಕಳು ಈ ದೆಸೆಯಿಂದ ಲಸಿಕೆಗಳಿಂದ ವಂಚಿತರಾಗಿರುವರೆಂದು ಇಂಗ್ಲಂಡ್ ನ ಯುನಿಸೆಫ್ ನ ನಿರ್ದೇಶಕರಾದ ಸಾಚಾ ದೇಶಮುಖ್ ಅಭಿಪ್ರಾಯ ಪಡುತ್ತಾರೆ.

ಜಗತ್ತಿನಾದ್ಯಂತ ಕೋಟ್ಯಾಂತರ ಮಕ್ಕಳಿಗೆ ಲಸಿಕೆ ಸಿಗದಿರುವುದರಿಂದ ದಡಾರ, ಪೋಲಿಯೋ, ನಾಯಿಕೆಮ್ಮು ಮೊದಲಾದ ರೋಗಗಳು ಭೀಕರ ರೀತಿಯಲ್ಲಿ ಕಾಣಿಸಿಕೊಂಡು, ಮಕ್ಕಳ ಜೀವವನ್ನು ಕುಕ್ಕಿ ಕುಕ್ಕಿ ಹೆಕ್ಕಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ.ಟೆಡ್ರೊಸ್ ಅದಾನೋಮ್ ಘೆಬ್ರಿಯೊಸಸ್ ವಿಶ್ವ ಆರೋಗ್ಯ ಸಂಸ್ಥೆಯ ಗೊತ್ತು ಗುರಿಗಳನ್ನು ಮುಟ್ಟುವುದು ತುಂಬಾ ನಿಧಾನವಾಗುತ್ತಿದೆ. ಕೋವಿಡ್-19 ದೆಸೆಯಿಂದ ಅದು ತುಂಬಾ ಭಿನ್ನವಾಗಬಹುದು ಎಂದು ಅಭಿಪ್ರಾಯ ಪಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು ಸಸ್ಟೇನಬಲ್ ಡವಲಪ್ ಮೆಂಟ್ ,ಬಡತನ ಮತ್ತು ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ 2030 ರ ಹೊತ್ತಿನತನಕ ಒಂದು ಭವಿಷ್ಯದ ಯೋಜನೆಯನ್ನು ರೂಪಿಸಿದೆ. ಅವೇ ಸಸ್ಟೇನಬಲ್ ಡವಲಪ್ ಮೆಂಟ್ ಗೊತ್ತುಗುರಿಗಳು. ಕೋವಿಡ್-19 ಮಹಾಮಾರಿ ಸಾಂಕ್ರಾಮಿಕ ರೋಗ ನಮ್ಮೆಲ್ಲ ಭವಿಷ್ಯದ ಯೋಜನೆಗಳನ್ನು ತಲೆಕೆಳಗಾಗಿಸಿದೆ.

ಕೋವಿಡ್-19 ನಂತಹ ಕಾಯಿಲೆ ಹೊಸದಾಗಿ ಹುಟ್ಟುವುದರ ಬಗ್ಗೆ ಮತ್ತು ಆರೋಗ್ಯ ಸಂಬಂಧಿ ಅಪಾಯವನ್ನು ಎದುರಿಸಲು ನಾವು ಮೊದಲಿನಿಂದ ಸಿದ್ದತೆ ನಡೆಸಬೇಕಾಗುತ್ತದೆ. ಈ ವಿಷಯದಲ್ಲಿ ನಾವು ಸೂಕ್ತ ಎಚ್ಚರ ವಹಿಸದಿದ್ದರೆ ಆರೋಗ್ಯದ ದುಷ್ಪರಿಣಾಮಗಳನ್ನು ಮಾತ್ರ ಎದುರಿಸುವುದಿಲ್ಲ, ಹಾಗೆಯೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿಯೂ ತೀವ್ರ ರೀತಿಯ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ. ಲಾಕ್ ಡೌನ್ ಮತ್ತು ನಂತರದ ದಿನಗಳಲ್ಲಿ ಸಾಮಾನ್ಯ ಸಾರಿಗೆ ವ್ಯವಸ್ಥೆ- ಬಸ್, ರೈಲು, ವಿಮಾನಗಳು ಎಂದಿನಂತೆ ಚಲಿಸುತ್ತಿಲ್ಲವಾದ್ದರಿಂದ ಜನಸಾನ್ಯರಿಗೆ ತುಂಬಾ ತೊಂದರೆ ಆಗಿದೆ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಬಂದವರು ಕೊರೊನಾ ಅಂತಾ ಹೌಹಾರುವ ಸ್ಥಿತಿ ಇಂದು ನಿರ್ಮಾಣವಾಗಿದೆ.

ಕಿವಿ, ಗಂಟಲು, ಮೂಗಿನ ತೊಂದರೆಗಳ ನಿವಾರಣೆಗೂ, ಅಂಧತ್ವ ನಿವಾರಣೆಗೂ ಈ ಹಿಂದಿನಂತೆ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿಲ್ಲ. ಕೆಮ್ಮಿದರೆ, ಸೀನಿದರೆ ಜನ ಅನುಮಾನದಿಂದ ನೋಡುವಂತಾಗಿದೆ. ವೈದ್ಯರು ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗೆ ಆಸ್ಪತ್ರೆಗೆ ಬರಬೇಡಿ. ತುರ್ತು ಚಿಕಿತ್ಸೆಗೆ ಮಾತ್ರ ಬನ್ನಿ ಎನ್ನುತ್ತಾರೆ.ಟೆಲಿಮೆಡಿಸಿನ್ ದಿಂದ ರೋಗಿಗಳ ತೊಂದರೆಗಳಿಗೆ ಔಷಧ ತಿಳಿಸಬಹುದಾಗಿದೆ. ಅಮೂಲಾಗ್ರ ರೋಗಿಯ ತಪಾಸಣೆ ಆಗುವುದಿಲ್ಲ. ಗರ್ಭಿಣಿಯರ ವಿಷಯದಲ್ಲಂತೂ ಟೆಲಿಮೆಡಿಸಿನ್ನಿಂದ ಗರ್ಭಿಣಿಯರ ಮತ್ತು ಭವಿಷ್ಯದ ಶಿಶುವಿನ ಆರೋಗ್ಯದಬಗ್ಗೆ ನಿಖರವಾಗಿ ಹೇಳಲು ಬರುವುದಿಲ್ಲ. ಹೆರಿಗೆ ಹಂತಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಹುಟ್ಟಿದ ಮಕ್ಕಳ ತೊಂದರೆಗಳ ನಿವಾರಣೆಯಾಗುವುದಿಲ್ಲ. ಈ ಎಲ್ಲ ‘ ಇಲ್ಲ ‘ಗಳ ನಡುವೆ ಕೊರೊನಾ ಸೋಂಕಿನಿಂದಾಗಿ ಉಳಿದ ರೋಗಗಳು ನಿರ್ಲಕ್ಷಕ್ಕೊಳಗಾಗಿರುವುದಂತೂ ಸತ್ಯ. ಹೀಗೆ ಮುಂದುವರೆದರೆ ಮಳೆಗಾಲದ ಮಾರಿಗಳಾದ ಅತಿಸಾರ, ಮಲೇರಿಯಾ, ದೆಂಗ್ಯೂ, ಚಿಕೂನಗುನ್ಯಾ, ಟೈಫಾಯ್ಡ್, ಕಾಮಾಲೆಗಳ ಕದಂಬ ಬಾಹುಗಳಲ್ಲಿ ಜನ ಕುತ್ತುಸಿರು ಬಿಟ್ಟು, ತತ್ತರಿಸಿ ಹೋಗುವಲ್ಲಿ ಸಂಶಯವಿಲ್ಲ. ಕೊರೊನಾ ಸೋಂಕು ಅನೇಕ ಅವಾಂತರಗಳನ್ನು ಸೃಷ್ಟಿಸುವುದರ ಜೊತೆಗೆ ಆರೋಗ್ಯದ ಅಡಿಗಲ್ಲನ್ನೇ ಬುಡಮೇಲು ಮಾಡಿರುವುದಂತೂ ವಾಸ್ತವ.

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು

ಕ್ಯಾಲಕೊಂಡ ಆಸ್ಪತ್ರೆ , ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ  Mob:9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!