ಕೆಂಗಣ್ಣುಅಥವಾ ಮದ್ರಾಸ್ ಐ ಗೆ ಮುಂಜಾಗ್ರತೆಯೇ ಮದ್ದು……

ಕೆಂಗಣ್ಣುಅಥವಾ ಮದ್ರಾಸ್ ಐ ಗೆ ಮುಂಜಾಗ್ರತೆಯೇ ಮದ್ದು. ತ್ವರಿತವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆ ಕೆಂಗಣ್ಣು ಒಂದಿಷ್ಟು ದಿನಗಳಿಂದ ಕೆಂಗಣ್ಣಿನ ಸೋಂಕು ತೀವ್ರವಾಗಿದ್ದು ಸಾಂಕ್ರಾಮಿಕ ಸ್ವರೂಪ ತಾಳಿದೆ. ಈ ರೋಗ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ ಚಿಕಿತ್ಸೆ ವಿಳಂಬವಾದರೆ ದೃಷ್ಟಿಗೆ ತೊಂದರೆಯಾಗಬಹುದು.

kengannu-or-Madras-eye

ದಾವಣಗೇರಿಯಿಂದ ಬಾದಾಮಿಗೆ ಹೊರಟಿದ್ದೆ. ಸಂಜೆಯಾಗಿತ್ತು. ಬಸ್ಸಿಗಾಗಿ ಕಾಯುತ್ತಿದ್ದೆ. ಐರಾವತ ಬಸ್ ಬಂತು. ಬಸ್ ಹತ್ತಿ ಕಿಟಕಿಯ ಮಗ್ಗಲು ಕುಳಿತೆ. ನನ್ನ ಪಕ್ಕದ ಖಾಲಿ ಇದ್ದ ಸೀಟಿಗೆ ಕಪ್ಪು ಕನ್ನಡಕ ಧರಿಸಿದ್ದ ಯುವಕ ಬಂದು ಕೂತ. ಹಗಲಿನಲ್ಲಿ ಗಾಗಲ್ ಹಾಕುವುದನ್ನು ನೋಡಿದ್ದೆ. ಕತ್ತಲಲ್ಲೂ ಹಾಕಿಕೊಂಡದ್ದು ಕಂಡು ಸೋಜಿಗವಾಯಿತು. ಕನ್ನಡಕ ತೆಗೆದು ಕಣ್ಣು ಉಜ್ಜಿಕೊಳ್ಳುತ್ತ ‘ ಕಣ್ಣಾಗ ಉಸುಗು ತುಂಬಿದ್ಹಂಗ ಆಗೇತಿ ನೋಡ್ರಿ ‘ ಅಂದ. ನೋಡಿದರೆ ಕಣ್ಣು ಕೆಪಾಗ ಅಂಜುರಿಯ್ಹಂಗ ಆಗಿದ್ವು . ಪಾಪ ಅನಸ್ತು. ಹಾದಿಯುದ್ದಕ್ಕೂ ಕಣ್ಣು ನೋವಿನ ಬವಣೆ ವಿವರಿಸಿದ. ಊರು ಬಂತು. ಬಸ್ಸು ಇಳಿದು ಮನೆಗೆ ಬಂದು ಊಟ ಮಾಡಿ ಮಲಗಿಕೊಂಡೆ .

ಬೆಳಿಗ್ಗೆ ಇದ್ದಾಗ ಕಣ್ಣಲ್ಲಿ ಉರಿ. ಕಣ್ಣಲ್ಲಿ ಮಣ್ಣು ಬಿದ್ದ ಅನುಭವ, ತುರಿಕೆ. ತಿಕ್ಕಿಕೊಳ್ಳಬೇಕೆಂಬ ತವಕ. ಕಣ್ಣು ತೆರೆಯಲು ಆಗುತ್ತಿಲ್ಲ. ದಳ ದಳ ನೀರು ಕಡಿಯುತ್ತಿತ್ತು. ಕನ್ನಡಿಯಲ್ಲಿ ನೋಡಿಕೊಂಡೆ .ಕಣ್ಣು ಕೆಂಪಾಗಿತ್ತು. ನನಗೂ ಕೆಂಗಣ್ಣು ಬಂದಿತ್ತು. ಇಷ್ಟು ತ್ವರಿತವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆ ಕೆಂಗಣ್ಣು. ಮನುಷ್ಯ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಬಾರಿ ಕೆಂಗಣ್ಣಿನಿಂದ ಕಂಗಾಲಾಗುವುದು ಸಹಜ. ಒಂದಿಷ್ಟು ದಿನಗಳಿಂದ ಕೆಂಗಣ್ಣಿನ ಸೋಂಕು ತೀವ್ರವಾಗಿದ್ದು ಸಾಂಕ್ರಾಮಿಕ ಸ್ವರೂಪ ತಾಳಿದೆ.

ಕಣ್ಣು ಕೆಂಪಾಗಲು ಅನೇಕ ಕಾರಣಗಳಿದ್ದರೂ, ಅತ್ಯಂತ ಸಾಮಾನ್ಯ ಕಾರಣವೆಂದರೆ ಕಣ್ಣಿನ ಬಿಳಿಯ ಭಾಗವನ್ನು ಆವರಿಸಿರುವ ಕಂಜೆಕ್ಟವಾ ಎಂಬ ತೆಳುವಾದ ಸೂಕ್ಷ್ಮ ಪೊರೆಯ ಉರಿಯೂತ. ಕಂಜೆಕ್ಟವಾ ಅಕ್ರಮ ಪ್ರವೇಶ ಮಾಡುವ ವ್ಯಕ್ತಿಗಳಿಂದ ಮನೆಯನ್ನು ರಕ್ಷಿಸುವ ಕಾವಲುಗಾರನಿದ್ದಂತೆ. ಆದರೆ ಕೆಲವು ಉಗ್ರಗಾಮಿ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ, ಕಾವಲುಗಾರನ ಗತಿ ಏನಾಗಬಹುದೆಂದು ಊಹಿಸಿಕೊಳ್ಳಿ . ಅವನು ತನ್ನೆಲ್ಲ ಶಕ್ತಿಯನ್ನು ವ್ಯಯಿಸಿ, ಅವರೊಡನೆ ಕಾದಾಡುತ್ತಾನೆ ಹಾಗೂ ಮನೆಯ ಒಳಗಿನವರನ್ನು ರಕ್ಷಿಸುತ್ತಾನೆ.

ಈ ಕಾದಾಟದಲ್ಲಿ ತಾನೇ ತೀವ್ರವಾಗಿ ಘಾಸಿಗೊಂಡು ನೋವನ್ನು ಅನುಭವಿಸುತ್ತಾನೆ. ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ರೂಪದಲ್ಲಿ ಕೆಲವು ಉಗ್ರಗಾಮಿಗಳು ಕಣ್ಣಿನೊಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ, ಕಂಜೆಕ್ಟವಾಕ್ಕೆ ಕಾವಲುಗಾರನಿಗೆ ಆದಂಥ ಗತಿಯೇ ಆಗುತ್ತದೆ. ಇಡಿಯಾಗಿ ಕಣ್ಣೇನೊ ರಕ್ಷಿಸಲ್ಪಡುತ್ತದೆ. ಆದರೆ ,ಕಂಜೆಕ್ಟವಾ ಉರಿಯೂತಕ್ಕೆ ಒಳಗಾಗುತ್ತದೆ. ಈ ಸ್ಥಿತಿಗೆ ವೈದ್ಯಕೀಯ ಪರಿಭಾಷೆಯಲ್ಲಿ ಕಂಜೆಕ್ಟಿವೈಟಿಸ್ (Conjunctivitis) ಎನ್ನುತ್ತಾರೆ. ಜನಸಾಮಾನ್ಯರು ‘ಕೆಂಗಣ್ಣು’, ‘ಮದ್ರಾಸ್ ಕಣ್ಣು’ಎಂದೆಲ್ಲಾ ಕರೆಯುತ್ತಾರೆ. ಈ ರೋಗ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ ಚಿಕಿತ್ಸೆ ವಿಳಂಬವಾದರೆ ದೃಷ್ಟಿಗೆ ತೊಂದರೆಯಾಗಬಹುದು .

ರೋಗ ಕಾರಕ :

ಈ ರೋಗದ ಅದಿಶಯನ ಕಾಲ 12-24  ಗಂಟೆಗಳು. ಸೋಂಕು ತಗುಲಿದ 4-6 ಗಂಟೆಗಳೊಳಗಾಗಿ ರೋಗ ತೀವ್ರ ಸ್ವರೂಪ ತಾಳಬಹುದು. ಇದು ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗಬಹುದು. ಸ್ವರಸ್ಯವೆಂದರೆ, ಬ್ಯಾಕ್ಟೀರಿಯಾಗಳು ಅಲ್ಲದ ಮತ್ತು ವೈರಸ್ ಗಳೂ ಅಲ್ಲದ ಇನ್ನೊಂದು ಗುಂಪಿನ ಸೂಕ್ಮಾಣುಗಳಿಂದಲೂ ಕಂಜೆಕ್ಟಿವೈಟಿಸ್ ಉಂಟಾಗಬಹುದು. ಈ ಮಧ್ಯರ‍್ತಿ ಸೂಕ್ಷ್ಮಾಣುಗಳನ್ನು ‘ ಕ್ಲಮೇಡಿಯಾ ‘ ಎನ್ನಲಾಗುತ್ತದೆ. ಕ್ಲಮೇಡಿಯಾ ಮೇಲಂಗಿಯನ್ನು ಸುತ್ತಿಕೊಂಡಿರುವಂತೆ ಕಾಣುತ್ತದೆ ( ಗ್ರೀಕ್ ನಲ್ಲಿ ‘ ಕ್ಲೆಮಿಸ್ ‘ ಎಂದರೆ ‘ಮೇಲಂಗಿ’).

ಇವು ಬ್ಯಾಕ್ಟೀರಿಯಾಗಳಿಗಿಂತಲೂ ಚಿಕ್ಕವಾಗಿರುತ್ತವೆ. ವೈರಸ್ ಗಳಿಗಿಂತಲೂ ದೊಡ್ಡವಾಗಿರುತ್ತವೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳೆರಡರ ಗುಣಲಕ್ಷಣಗಳನ್ನು ಇವು ಹೊಂದಿರುತ್ತವೆ. ಆದುದರಿಂದ ಬ್ಯಾಕ್ಟೀರಿಯಾಗಳಂತೆ ಭಾಗವಾಗುತ್ತ, ದ್ವಿಗುಣಿಸಲ್ಪಡುತ್ತವೆ. ವೈರಸ್ ಗಳಂತೆ ಜೀವಕೋಶಗಳೊಳಗೆ, ಇವು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಮಧ್ಯೆ ‘ಕಳಚಿದ ಕೊಂಡಿ’ ಗಳಾಗಿರಬಹುದೆಂದು ಅನ್ನಿಸಿದರೂ ,ವಾಸ್ತವವಾಗಿ ಹಾಗಿರುವುದಿಲ್ಲ. ಕೆಂಗಣ್ಣಿಗೆ ಇತರೆ ಕಾರಣಗಳೆಂದರೆ ಅರ‍್ಜಿ ಮತ್ತು ಟಾಕ್ಸಿಕ್ ಕಂಜೆಕ್ಟಿವೈಟಿಸ್ ಉಂಟು ಮಾಡುವ ಬಾಹ್ಯ ದೂಳು ಮತ್ತು ಧೂಮ, ಈಜುಗೊಳಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕ್ಲೋರಿನ್ ಇತ್ಯಾದಿ.

ರೋಗ ಪ್ರಸಾರ :

ಈ ರೋಗ ಎಲ್ಲ ವಯೋಮಾನದವರನ್ನು ಕಾಡುತ್ತದೆ. ಸೋಂಕು ಕಾಣಿಸಿಕೊಂಡ ವ್ಯಕ್ತಿಗಳನ್ನು ಸ್ಪರ್ಶಿಸಿದರೆ ಅಥವಾ ಸೋಂಕು ಬಂದಿರುವ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಮುಟ್ಟಿದರೆ ಕೂಡಾ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ. ನೊಣಗಳು, ನೊರಜುಗಳಂತಹ ಕೀಟಗಳೂ ರೋಗಿಯಿಂದ ಇತರರಿಗೆ ರೋಗವನ್ನು ಹರಡುತ್ತವೆ .ರೋಗ ಇರುವ ವ್ಯಕ್ತಿ ಈಜಾಡಿದ ಈಜುಗೊಳದಲ್ಲಿ ಬೇರೆಯವರೂ ಈಜಾಡುವುದರಿಂದ ಅವರಿಗೆ ಈ ರೋಗ ಮುತ್ತುವುದು. ಕೆಂಗಣ್ಣು ಬಂದವರ ಕಣ್ಣನ್ನು ದಿಟ್ಟಿಸಿ ನೋಡಿದರೆ ಸೋಂಕು ಹರಡುತ್ತದೆ ಎನ್ನುವುದು ಸುಳ್ಳು.

ರೋಗದ ಲಕ್ಷಣಗಳು :

ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಉರಿಯಾಗುವುದರೊಂದಿಗೆ ರೋಗ ಪ್ರಾರಂಭವಾಗುತ್ತದೆ. ಕಣ್ಣುಗಳು ಕೆಂಪಗೆ ಕಾಣುತ್ತವೆ. ಕಣ್ಣಿನ ರೆಪ್ಪೆಗಳು ಊದಿಕೊಳ್ಳುತ್ತವೆ. ಕಣ್ಣಿನಿಂದ ಯಾವಾಗಲೂ ಅತಿಯಾಗಿ ಕಣ್ಣೀರು ಬರುತ್ತಿರುತ್ತದೆ. ಕಣ್ಣುಗಳನ್ನು ಮುಚ್ಚುವಾಗ ಮತ್ತು ತೆರೆಯುವಾಗ ಬಹಳ ಕಷ್ಟವಾಗುತ್ತದೆ. ಬೆಳಕಿಗೆ ಕಣ್ಣುಗಳನ್ನು ತೆರೆದಾಗ ಉರಿಯುವ, ಮರಳು ಬಿದ್ದಂತಹ ಅನುಭವ ಮತ್ತು ನೋವು ಉಂಟಾಗುತ್ತದೆ. ಈ ಲಕ್ಷಣವು ತಾಂತ್ರಿಕವಾಗಿ ‘ಪೋಟೋ ಪೋಬಿಯಾ’ ಎನಿಸಿಕೊಳ್ಳುತ್ತದೆ ( ಗ್ರೀಕ್ ನಲ್ಲಿ ‘ಬೆಳಕಿನ ಭಯ ‘). ಕಣ್ಣಿನಿಂದ ಸ್ರವಿಸಲ್ಪಟ್ಟ ವಸ್ತುವಿನ ಸ್ವಭಾವವು ಕೆಲವೊಮ್ಮೆ ಆಕ್ರಮಣಕಾರಿ ಸೂಕ್ಷ್ಮ ಜೀವಿಯು ವೈರಸ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಗಟ್ಟಿಯಾದ, ಅಂಟು ಅಂಟಾದ ,ಕೀವಿನಂಥ ವಸ್ತು ತಪ್ಪಿತಸ್ಥ ಸೂಕ್ಷ್ಮಜೀವಿ ಬ್ಯಾಕ್ಟೀರಿಯಾ ಎಂಬುದನ್ನು ಸೂಚಿಸುತ್ತದೆ. ರೋಗಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ, ಕಣ್ಣಿನ ಗುಡ್ಡೆಯ ಪಟಿಲ ಹುಣ್ಣಾಗುವುದಕ್ಕೆ ದಾರಿಯಾಗುತ್ತದೆ ಹಾಗೂ ಪಟಿಲ ಯಾವಾಗಲೂ ಮಸುಕಾಗಿರುತ್ತದೆ .

ನೇತ್ರ ತಜ್ಞರನ್ನು ಸಂರ‍್ಕಿಸಿ :

ಈ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ನೇತ್ರ ತಜ್ಞರನ್ನು ಕಂಡು, ಅವರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ, ಸೂಕ್ತ ಚಿಕಿತ್ಸೆ ಪಡೆಯುವೈದು ಒಳ್ಳೆಯದು. ಜೀವಿರೋಧಕಯುಕ್ತ ಕಣ್ಣಿನ ಹನಿಗಳನ್ನು ನೇತ್ರ ತಜ್ಞರು ಹೇಳಿದಂತೆ ಹಾಕಿಕೊಳ್ಳಬೇಕು. ಕಣ್ಣುರಿ ಮತ್ತು ನೋವು ನಿವಾರಣೆಗೆ ಮಾತ್ರೆಗಳನ್ನುಸೇವಿಸಬೇಕು. ದ್ವಿತೀಯ ಸೋಂಕು ಕಾಣಿಸಿಕೊಂಡಾಗ ಸೂಕ್ತ ಜೀವಿರೋಧಕಗಳನ್ನು ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಈ ಸೋಂಕು 5 ರಿಂದ 7 ದಿನಗಳವರೆಗೆ ಇರುತ್ತದೆ. ದೃಷ್ಟಿಗೆ ಹಾನಿಯಾಗುವುದು ಅಪರೂಪ. ಹಾಗಾದಲ್ಲಿ ಗಂಭೀರ ಚಿಕಿತ್ಸೆ ನೀಡಬೇಕಾಗುತ್ತದೆ. ಇದಕ್ಕೆ ಎಂದೂ ಅವಕಾಶ ನೀಡಬೇಡಿ .

ಸಮಸ್ಯೆ ಸಂಕೀರ್ಣ ವಾಗುವುದು ಸಾಮಾನ್ಯವಾಗಿ ಮನೆ ಮದ್ದು ಮಾಡುವುದರಿಂದ ಮತ್ತು ಸ್ಟೆರಾಯ್ಡ್ ಯುಕ್ತ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ. ಆದ್ದರಿಂದ ಸ್ವಯಂ ಚಿಕಿತ್ಸೆ ಪಡೆಯಬಾರದು. ಈ ಸರಳ ವಿಧಾನಗಳನ್ನು ಅನುಸರಿಸುವುದರಿಂದ, ಶುದ್ಧತೆ ಕಾಪಾಡಿಕೊಳ್ಳುವುದರಿಂದ ನಿಮ್ಮ ಕುಟುಂಬ ಹಾಗೂ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಅರ‍್ಜಿಯ ಮತ್ತು ರಾಸಾಯನಿಕ ಕಂಜೆಕ್ಟಿವೈಟಿಸ್ ನಲ್ಲಿ ಸರಿಯಾದ ಕಾರಣಗಳನ್ನು ಪತ್ತೆ ಹಚ್ಚಿ ಅದನ್ನು ದೂರವಿಡಬೇಕು. ಎಲ್ಲ ಮುಂಜಾಗ್ರತೆಗಳನ್ನು ಅನುಸರಿಸಿದ ನಂತರವೂ ಕೆಂಗಣ್ಣು ಕಾಣಿಸಿಕೊಂಡರೆ, ಕಣ್ಣುಗಳು ಕೆಂಪಾಗಿರುವುದನ್ನು ಗಮನಿಸಿದ ಕೂಡಲೇ , ವೈದ್ಯರನ್ನು ಕಾಣಲು ಮರೆಯಬಾರದು .

Also Read: Understanding Pink Eye Conjunctivitis – Causes and Treatment 

ಮುಂಜಾಗ್ರತೆಯೇ ಮದ್ದು :

* ವಾತಾವರಣದ ಬದಲಾವಣೆಯಿಂದ ಈ ಸೋಂಕು ತ್ವರಿತವಾಗಿ ಹರಡುತ್ತಿದೆ. ಹಾಗಾಗಿ  ಗುಂಪು ಗುಂಪಾಗಿ ಸೇರಬೇಡಿ . ಸಭೆ ,ಸಮಾರಂಭಗಳಿಗೆ ಹೋಗಬೇಡಿ.
* ವೈಯಕ್ತಿಕ ಸ್ವಚ್ಛತೆ, ಆರೋಗ್ಯ ರಕ್ಷಣೆ ಮತ್ತು ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಡುವುದು ಈ ರೋಗದ ವಿರುದ್ಧ ವಹಿಸಬಹುದಾದ ಅತ್ಯಂತ ಉತ್ತಮ ಮುನ್ನೆಚ್ಛರಿಕೆ .
* ಈ ರೋಗವಿರುವ ಮಕ್ಕಳು  ಗುಣವಾಗುವವರೆಗೆ ಶಾಲೆಗೆ ಹೋಗಬಾರದು .
* ಕೆಂಗಣ್ಣಿನ ಸಾಂಕ್ರಾಮಿಕವಿದ್ದಾಗ ಈಜುಗೊಳದಲ್ಲಿ ಸ್ನಾನ ಮಾಡಬೇಡಿ .
* ರೋಗಿ ಬಳಸಿದ ಟವೆಲ್, ಕರವಸ್ತ್ರ ಇತರ ಬಟ್ಟೆ ಬರೆಗಳನ್ನು ಬಿಸಿ ನೀರಿನಲ್ಲಿ ತೊಳೆದು ಸ್ವಚ್ಛ ಮಾಡುವುದು ಉತ್ತಮ.
* ಸೋಂಕಿತ ವ್ಯಕ್ತಿ ಕಣ್ಣನ್ನು ಹೆಚ್ಚಾಗಿ ಮುಟ್ಟಬಾರದು. ದಿನಕ್ಕೆ 3 ರಿಂದ 4 ಸಲ ಕಣ್ಣುಗಳನ್ನು ಸ್ವಚ್ಛ ನೀರಿನಲ್ಲಿ ತೊಳೆಯಬೇಕು .
* ಕಾಂಟ್ಯಾಕ್ಟ ಲೆನ್ಸ್ ಬಳಸುತ್ತಿದ್ದರೆ ಅವುಗಳನ್ನು ತೆಗೆದಿಡಿ .
* ಸೋಂಕಿದ್ದವರು ಬೇರೆಯವರ ಕೈ ಕುಲುಕಬಾರದು .
* ಕಾಡಿಗೆ ಹಚ್ಚುವ ಹವ್ಯಾಸವನ್ನು ಬಿಡಬೇಕು.ಸೌಂದರ್ಯ ಉತ್ಪನ್ನಗಳನ್ನು ಬಳಸಬೇಡಿ .
* ಹೆಚ್ಚು ಬೆಳಕಿನಿಂದ ಕಣ್ಣನ್ನು ರಕ್ಷಿಸಲು ಕಪ್ಪು ಕನ್ನಡಕ ಧರಿಸಬೇಕು .
* ರೋಗವಿರುವವರು ಬಳಸಿದ ಕಪ್ಪು ಕನ್ನಡಕವನ್ನು ಇತರರು ಬಳಸಬಾರದು .

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ-587 201
ಜಿಲ್ಲಾ : ಬಾಗಲಕೋಟೆ
ಮೊ : 94480 36207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!