ಮಂಕಿ ಪಾಕ್ಸ್ : ಆತಂಕ ಬೇಡ ಎಚ್ಚರಿಕೆ ಇರಲಿ.

ಮಂಕಿ ಪಾಕ್ಸ್  ಕೊರೊನಾ ಮೂಲವಾದ ಚೀನಾದಲ್ಲಿ ಕಂಡು ಬಂದಿದ್ದು ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ದೂಡಿದೆ. ಕೊರೊನಾ ಕಾಟಕ್ಕೆ ತತ್ತರಿಸಿ ಹೋಗಿರುವ ಜನ, ಇದೊಂದು ಅದರ ಹೊಸ ರೂಪವಿರಬಹುದೆಂದು ಭಯ ಪಡುವ ಅವಶ್ಯಕತೆ ಇಲ್ಲ. ಕೊರೊನಾಕ್ಕೂ ಮಂಕಿ ಪಾಕ್ಸ್ ಗೂ ಸಂಬಂಧವಿಲ್ಲ. ಇದನ್ನು ಕಡೆಗಣಿಸದೇ ಈಗಿನಿಂದಲೇ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕಾದದ್ದು ಅತ್ಯಗತ್ಯವಾಗಿದೆ.

ಮಂಕಿ ಪಾಕ್ಸ್ : ಆತಂಕ ಬೇಡ ಎಚ್ಚರಿಕೆ ಇರಲಿ.

ಕೊರೊನಾ ಮೂಲವಾದ ಚೀನಾದಲ್ಲಿ ಮಂಕಿ ಪಾಕ್ಸ್ ಕಂಡು ಬಂದಿದ್ದು, ಒಬ್ಬ ವ್ಯಕ್ತಿಯನ್ನು ಬಲಿ ಪಡೆದು ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ವೈರಸ್ ನ ಭೀತಿ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ದೂಡಿದೆ. ಇಲ್ಲಿವರೆಗೆ ಮಂಗಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ವೈರಸ್ ಇದೇ ಮೊದಲ ಬಾರಿ ಮನುಷ್ಯನಿಗೂ ಹರಡಿದ್ದು, ಕೊರೊನಾದಂತೆ ಇದನ್ನು ಕಡೆಗಣಿಸದೇ ಈಗಿನಿಂದಲೇ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕಾದದ್ದು ಅತ್ಯಗತ್ಯವಾಗಿದೆ. ಚೀನಾದ ಸಂಶೋಧನಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೀಜಿಂಗ್ ಮೂಲದ 53 ವರ್ಷದ ಪಶು ವೈದ್ಯಾಧಿಕಾರಿ ಮಂಕಿ ಪಾಕ್ಸ್ ಸೋಂಕಿಗೊಳಪಟ್ಟಿದ್ದರು. ಆಗ ಅವರಲ್ಲಿ ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡು ಬಂದವು ಎಂದು ಚೀನಾ ‘ ಸಿಡಿಸಿ ವಾರ ಪತ್ರಿಕೆ ‘ ವರದಿ ಮಾಡಿತು. ಲಕ್ಷಣಗಳು ವರದಿಯಾದ ಬಳಿಕ ಪಶು ವೈದ್ಯ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳ ಮೆಟ್ಟಿಲು ತುಳಿದಿದ್ದರು. ಚಿಕಿತ್ಸೆ ಫಲಿಸದೇ ಅಸುನೀಗಿದ್ದರು. ಇದರೊಂದಿಗೆ ‘ ಮಂಕಿ ಪಾಕ್ಸ್ ‘ ಮೊದಲ ಬಲಿಯಾಗಿದ್ದರು.

ಈ ಶತಮಾನ ಹೊಸ ಹೊಸ ರೋಗಗಳಿಗೆ ಹೆಸರಾಗುತ್ತಿದೆ. ಜಗತ್ತು ಪ್ರಳಯವಾಗುವುದೆಂದು ದೃಶ್ಯ ಮಾಧ್ಯಮಗಳು ಬಹಳ ದಿನಗಳಿಂದ ಭವಿಷ್ಯ ನುಡಿಯುತ್ತ ಬಂದಿವೆ. ಅವರ ಭವಿಷ್ಯ ಈಡೇರಿಲ್ಲ. ನಿಜ. ಆದರೆ, ಅವರು ಕಿವಿ ಮರ್ರ ಅನ್ನುವಹಾಗೆ ಕಾಲಕ್ಕೊಂದು ಕಾರಣ ಕೊಡುವುದನ್ನು ಬಿಟ್ಟಿಲ್ಲ. ಜನರಲ್ಲಿ ಭಯ, ಭೀತಿ ತುಂಬುವುದನ್ನು ನಿಲ್ಲಿಸಿಲ್ಲ. ಕೊರೊನಾ ಅಬ್ಬರಿಸುವಾಗ, ಮಾದ್ಯಮಗಳು ಬೊಬ್ಬೆಯಿಟ್ಟು ಜನರಲ್ಲಿ ಭಯ, ಭೀತಿ, ಆತಂಕ ಹುಟ್ಟಿಸಿದ್ದು ಸುಳ್ಳಲ್ಲ. ಇನ್ನಷ್ಟು ದಿನ ಬದುಕುವವರು ದೃಶ್ಯ ಮಾಧ್ಯಮದವರು ಟಿಆರ್ ಪಿ ಗಿಟ್ಟಿಸಲು ಚೀರಿದ್ದನ್ನು ನೋಡಿ ಬೆಚ್ಚಿ ಬಿದ್ದರು. ಅಂಜಿದವರ ಬದುಕು ಕೊಚ್ಚಿಹೋದದ್ದು ನಿಜ. ಆದರೂ ಹೊಸ ಕಾಯಿಲೆಯೊಂದು ಕಾಣಿಸಿಕೊಂಡಾಗ ಜನ ಹೆದರುವಂತೆ ಅಬ್ಬರಿಸುವುದನ್ನು ಬಿಟ್ಟು, ಜನ ಜಾಗೃತಿಗಾಗಿ ಉಪಯುಕ್ತ ಮಾಹಿತಿ ಒದಗಿಸಿದರೆ ಅಪಾಯಗಳು ತಪ್ಪಬಹುದು ! ಮಾದ್ಯಮಗಳು ಬೆಂಕಿಗೆ ತುಪ್ಪಾ ಸುರಿಯುವ ಕೆಲಸ ಮಾಡಬಾರದು !! ನಂದಿಸಲು ನೀರು ಹಾಕಲು ಮರೆಯಬಾರದು !!!

ವೈದ್ಯಕೀಯ ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ ಪ್ರತಿ ಹತ್ತು ವರ್ಷಕ್ಕೊಮ್ಮೆ ಹೊಸ ಮಾದರಿಯ ವಿಷಭರಿತ ವೈರಸ್ ಗಳು ಕಾಣಿಸುವುದು ಸಾಮಾನ್ಯ. ನೂರು ವರ್ಷಕ್ಕೊಮ್ಮೆ ಒಂದು ‘ಪ್ಯಾಂಡೆಮಿಕ್ ‘ಬರುತ್ತದೆ. ಅದೇ ಈಗ ಕೊರೊನಾ ರೂಪದಲ್ಲಿ ಬಂದಿದೆ. ಕೆಲವೊಮ್ಮೆ ರೋಗಗಳು ಪ್ರಣಿಗಳಿಂದ ಮತ್ತು ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ. ಇವಕ್ಕೆ ‘ಝೂನಾಟಿಕ್ ಡಿಸಿಜಿಸ್ ‘ ಎಂದು ಕರೆಯುವರು. ಈಗ ಕಾಣಿಸಿಕೊಂಡಿರುವ ‘ಮಂಕಿ ಪಾಕ್ಸ್ ‘ ಕೂಡ ಈ ಗುಂಪಿಗೆ ಸೇರಿದ್ದು. ಕೊರೊನಾ ಕಾಟಕ್ಕೆ ತತ್ತರಿಸಿ ಹೋಗಿರುವ ಜನ, ಇದೊಂದು ಅದರ ಹೊಸ ರೂಪವಿರಬಹುದೆಂದು ಭಯ ಪಡುವ ಅವಶ್ಯಕತೆ ಇಲ್ಲ. ಕೊರೊನಾಕ್ಕೂ ಮಂಕಿ ಪಾಕ್ಸ್ ಗೂ ಸಂಬಂಧವಿಲ್ಲ.

Also Read: The threat of Zika virus : The zoonotic invasion 

ಇತಿಹಾಸ :

ಹಾಗೆ ನೋಡಿದರೆ ಇದೇನೂ ಹೊಸ ಕಾಯಿಲೆಯಲ್ಲ. 1958 ರಷ್ಟು ಹಿಂದೆಯೇ ಇದನ್ನು ಗುರುತಿಸಲಾಗಿದೆ. ಇದೊಂದು ವೈರಸ್ ನಿಂದ ಬರುವ ಕಾಯಿಲೆ. 1970 ರಲ್ಲಿ ಸೋಂಕಿತ ಮನುಷ್ಯನನ್ನು ಕಾಂಗೋ ದೇಶದಲ್ಲಿ ಪತ್ತೆ ಹಚ್ಚಲಾಗಿತ್ತು. ಪತ್ತೆಯಾದ ರೋಗಿಗಳು ಆಫ್ರಿಕಾ ಖಂಡದಲ್ಲಿ ವಾಸಿಸುವವರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಹೊಸ ರೋಗಗಳಿಗೆಲ್ಲ ಆಫ್ರಿಕಾ ಉಗಮಸ್ಥಾನವಾಗಿರುವುದು ವಿಪರ್ಯಾಸ. ಮಂಕಿ ಪಾಕ್ಸ್ ವೈರಸ್ ಇಲಿಗಳಲ್ಲಿ ಮತ್ತು ಕೋತಿಗಳಲ್ಲಿ ಕಂಡು ಬರುವುದು ಸಾಮಾನ್ಯ. ಸೋಂಕಿಗೀಡಾದ ಪ್ರಾಣಿಗಳು ಮನುಷ್ಯನ ಸಂಪರ್ಕಕ್ಕೆ ಬಂದಾಗ ಅವರಿಗೂ ಹರಡುವ ಸಾಧ್ಯತೆ ಇರುತ್ತದೆ. 2003 ರಲ್ಲಿ ಅಮೆರಿಕದಲ್ಲಿ 47 ರೋಗಿಗಳು ಪತ್ತೆಯಾಗಿದ್ದರು. ಆಫ್ರಿಕಾದಿಂದ ತರಿಸಿಕೊಂಡ ಪ್ರಾಣಿಗಳ ಮೂಲಕ ಸೋಂಕು ಅಮೆರಿಕಾಕ್ಕೆ ಕಾಲಿಟ್ಟಿತ್ತು ಎಂಬುದನ್ನು ಸಂಶೋಧಕರು ನಂತರ ಸ್ಪಷ್ಟ ಪಡಿಸಿದ್ದರು.

ರೋಗಕಾರಕ :

ಇತ್ತೀಚೆಗೆ ಅಂತಾರಾಷ್ಟ್ರೀಯ ಸೋಂಕುಗಳಿಗೆ ರಂಜಿತ ಸುದ್ದಿ ಮಾಡುವುದೇ ಮಾಧ್ಯಮಗಳ ಕೆಲಸವಾಗಿಬಿಟ್ಟಿದೆ. ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ, ಎಚ್ಚರಿಕೆ ಅಗತ್ಯ ಎಂಬುದನ್ನು ಮರೆಯುವಂತಿಲ್ಲ. ಮಂಕಿ ಪಾಕ್ಸ್ ವೈರಸ್ ಪಾಕ್ಸ್ ವಿರಿಡೆ ಕುಟುಂಬದಲ್ಲಿ ಆರ್ಥೊಪಾಕ್ಸ್ ವೈರಸ್ ಕುಲಕ್ಕೆ ಸೇರಿದ ಒಂದು ವೈರಸ್. ಇದು ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣ ವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ.ಪ್ರಯಾಣದಲ್ಲಾಗಿರುವ ಕ್ರಾಂತಿಯಿಂದಾಗಿ ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿಯಂತಾಗಿರುವುದರಿಂದಾಗಿ ಇತರ ಪ್ರದೇಶಗಳಿಗೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕಲು ಬರುವುದಿಲ್ಲ.

ಪ್ರಸರಣಾಕಾಂಡ :

ಮಂಕಿ ಪಾಕ್ಸ್ ಮಾನವರಲ್ಲಿ ಕಾಣುವುದು ಬಹಳ ಅಪರೂಪ. ಸೋಂಕಿತ ಪ್ರಾಣಿಗಳ ರಕ್ತ, ದೇಹದಿಂದ ಸ್ರವಿಸುವ ದ್ರವಗಳು ಮನುಷ್ಯನ ದೇಹ ಪ್ರವೇಶಿಸಿದಾಗ ಅಥವಾ ಸೋಂಕಿತ ದ್ರವಗಳು ಮಾನವರ ದೇಹದ ಮೇಲಾಗಿರುವ ಗಾಯಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಈ ರೋಗ ಹರಡುವ ಸಾಧ್ಯತೆ ಇದೆ. ಸೋಂಕಿತ ಪ್ರಾಣಿಗಳ ಮಾಂಸ ಅಥವಾ ಅದರ ಉತ್ಪನ್ನಗಳನ್ನು ಚೆನ್ನಾಗಿ ಬೇಯಿಸದೇ ಸೇವಿಸಿದಾಗ ಮಂಕಿ ಪಾಕ್ಸ್ ವೈರಸ್ ಹರಡಬಹುದಾಗಿದೆ. ಸೋಂಕಿತ ವ್ಯಕ್ತಿಯೊಟದಿಗೆ ಬೇರೆಯವರು ಸಂರ್ಕಕ್ಕೆ ಬಂದಾಗಲೂ ರೋಗ ಹರಡಬಹುದು.

ಸೋಂಕಿತ ವ್ಯಕ್ತಿ ಸೀನುವ ಇಲ್ಲವೆ ಕೆಮ್ಮುವ ಮೂಲಕ ರೋಗಾಣುಗಳನ್ನು ಹೊರಗಿನ ಪರಿಸರಕ್ಕೆ ಉಡುಗೊರೆ ನೀಡುತ್ತಾನೆ. ಇವು ಆರೋಗ್ಯವಂತರ ದೇಹ ಪ್ರವೇಶಿಸಿದಲ್ಲಿ ರೋಗಕ್ಕೆ ನಾಂದಿ ಹಾಡಬಹುದು. ಸೋಂಕಿತ ವ್ಯಕ್ತಿಯ ಜನನಾಂಗದಲ್ಲಿ ಮಂಕಿ ಪಾಕ್ಸ್ ಗುಳ್ಳೆಗಳಿದ್ದರೆ, ಲೈಂಗಿಕ ಕ್ರಿಯೆಯಿಂದ ರೋಗ ಹರಡುವ ಸಾಧ್ಯತೆ ಇದೆ. ಈ ವೈರಸ್ ಉಸಿರಾಟದ ಮೂಲಕವೂ ಹರಡುವುದುಕಂಡು ಬಂದಿರುವುದರಿಂದ ,ಪ್ರಾಣಿ ಪ್ರಿಯರು ಈ ಕಡೆ ಎಚ್ಚರ ವಹಿಸಬೇಕು. ಸಾಕು ಪ್ರಾಣಿಗಳನ್ನು ಸೋಂಕಿತ ಪ್ರಾಣಿಗಳ ಮತ್ತು ವ್ಯಕ್ತಿಯ ಸಮೀಪ ಸೇರುವುದನ್ನು ತಡೆಯಬೇಕು ಮತ್ತು ಸೋಂಕಿನ ಲಕ್ಷಣಗಳಿದ್ದರೆ ಪಶು ವೈದ್ಯರ ಸಲಹೆ ಪಡೆಯಬೇಕು.

ಪ್ರಕಟಣಾಕಾಂಡ :

ವೈರಸ್ ಗಳು ದೇಹ ಪ್ರವೇಶಿಸಿದ ನಂತರ ಜೀವಕೋಶಗಳಲ್ಲಿ ಬೆಳೆದು ಲಕ್ಷಣಗಳನ್ನು ಹೊರ ಹಾಕಲು 5 ರಿಂದ 21 ದಿನಗಳ ಕಾಲ ಬೇಕಾಗುತ್ತದೆ. ಜ್ವರ, ಚರ್ಮದ ಮೇಲೆ ದದ್ದುಗಳು, ತೀವ್ರವಾದ ತಲೆನೋವು, ಮೈ ಕೈ ನೋವು, ಸ್ನಾಯುಗಳ ನೋವು, ಶಕ್ತಿಹೀನತೆ, ಸುಸ್ತು, ಆಲಸ್ಯತನ, ಹಾಲ್ರರಸ ಗ್ರಂಥಿಗಳ ಊತ ಕಂಡು ಬರುವುದು. ಜ್ವರ ಕಾಣಿಸಿಕೊಂಡ 1 – 3 ದಿನಗಳಲ್ಲಿ ರೋಗಿಯ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳಬಹುದು. ಅವು ಮುಖದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಅಲ್ಲದೆ ಅಂಗೈ, ಅಂಗಾಲು, ಬಾಯಿಯ ಒಳಾವರಣ, ಜನನಾಂಗಗಳ ಮೇಲೆ, ಕಣ್ಣಿನ ರೆಪ್ಪೆ ಮತ್ತು ಕಣ್ಣಿನ ಹೊರಪದರಾದ ಕಂಜೆಕ್ಟೈವಾ ಮತ್ತು ಪಾರದರ್ಶಕ ಕಾರ್ನಿಯಾಗಳಲ್ಲಿ ದದ್ದುಗಳು ಕಾಣಿಸಿಕೊಳ್ಳಬಹುದು. ದದ್ದುಗಳು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ನೀರು ತುಂಬಿದ, ಕೀವು ತುಂಬಿದ ಗುಳ್ಳೆಗಳಾಗಿ ಮಾರ್ಪಾಡಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಕಣ್ಣಿನ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇರುತ್ತದೆ.

ರೋಗ ನಿಧಾನ:

ಗೋಚರಸುವ ಲಕ್ಷಣಗಳಿಂದಲೇ ರೋಗ ಪತ್ತೆ ಹಚ್ಚಲು ಸಾಧ್ಯ. ಎಲ್ಲಾ ಸಿಡುಬುಗಳು ಒಂದೇ ಅಲ್ಲ. ಮಂಕಿ ಪಾಕ್ಸ್, ಸ್ಮಾಲ್ ಪಾಕ್ಸ್, ಚಿಕನ್ ಪಾಕ್ಸ್ ಒಂದೇ ಕುಟುಂಬದ ಸದಸ್ಯರಾದರೂ, ಅವು ಬೇರೆ ಬೇರೆ ತಂತ್ರಾಂಶಗಳನ್ನು ಹೊಂದಿವೆ. ಹಾಗಾಗಿ ಇದನ್ನು ಕಂಡು ಹಿಡಿಯಲು ಪಿ.ಸಿ.ಆರ್. ಟೆಸ್ಟ್ ಮಾಡಬೇಕಾಗುವುದು.

ಉಪಚಾರ :

ಇದು ವೈರಸ್ ನಿಂದ ಬರುವ ಕಾಯಿಲೆಯಾಗಿರುವುದರಿಂದ ನಿಶ್ಚಿತ ಚಿಕಿತ್ಸೆ ಇಲ್ಲ. ದೇಹದ ಅತ್ಯುತ್ತಮ ರೋಗ ಪ್ರತಿರೋಧಕ ಶಕ್ತಿಯೇ ಇದು ಗುಣಮುಖವಾಗುವಲ್ಲಿ ಪ್ರಮುಖ ಪಾತ್ರ ವಹಿಸುವುದು. ರೋಗಿಯನ್ನು ಪ್ರತ್ಯೇಕವಾಗಿಟ್ಟು, ತ್ರಾಸಿಗೆ ತಕ್ಕ ಚಿಕಿತ್ಸೆ ನೀಡುವುದೊಂದೇ ಈಗಿರುವ ಚಿಕಿತ್ಸೆ. ರೋಗಿಗೆ ಹೆಚ್ಚಿಗೆ ದ್ರವ ಆಹಾರ ಸೇವಿಸಲು ಕೊಡಬೇಕು. ಸತ್ವಯುತ, ಶಕ್ತಿಯುತ, ಸಮತೋಲನ ಆಹಾರ ತಗೆದುಕೊಳ್ಳಬೇಕು. ದದ್ದುಗಳಿಂದ ತುರಿಕೆ ಸಾಮಾನ್ಯ. ತುರಿಕೆ ನಿರೋಧಕ ಮದ್ದುಗಳನ್ನು ಸೇವಿಸಬೇಕು. ಕೆಲಮಿನ್ ಲೋಷನ್ ಮೈಗೆ ಹಚ್ಚಿಕೊಳ್ಳಬೇಕು.

ಸಿಡುಬಿನ ವಿರುದ್ದ ಬಳಸುವ ಲಸಿಕೆ, ಮಂಕಿ ಪಾಕ್ಸ್ ರೋಗವನ್ನು ತಡೆಗಟ್ಟುವಲ್ಲಿ ಶೇ.85 ರಷ್ಟು ಪರಿಣಾಮಕಾರಿ ಎಂದು ತಿಳಿದಿದೆ. ಆದ್ದರಿಂದ ಮಂಕಿ ಪಾಕ್ಸ್ ನ ಗಂಭೀರ ಲಕ್ಷಣಗಳನ್ನು ತಡೆಗಟ್ಟಲು ಸಿಡುಬು ಲಸಿಕೆಯನ್ನು ತಗೆದುಕೊಂಡಿದ್ದರೆ ಹೆದರುವ ಅವಶ್ಯಕತೆಯಿಲ್ಲ. ಸೋಂಕಿನ ಸಂಶಯ ಇದ್ದವರು ರೋಗ ಲಕ್ಷಣಗಳು ತೋರುವ ಮುನ್ನ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಸಲಹೆ ಸೂಚನೆ ಪಡೆಯಬೇಕು. ಅಕಸ್ಮಾತ್ ಸೋಂಕಿಗೊಳಗಾಗಿದ್ದರೂ, ಸಮರ್ಪಕ ಔಷಧಿಗಳನ್ನು ನೀಡುವರು.

Also Read: ಮನುಕುಲವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ವೈರಸ್ 

ಮುಂಜಾಗೃತಾ ಕ್ರಮಗಳು :

* ಸೋಂಕಿನ ರೋಗ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಸ್ವ- ಚಿಕಿತ್ಸೆ ಅಪಾಯಕಾರಿ.

* ಸೋಂಕಿತರನ್ನು ಪ್ರತ್ಯೇಕವಾಗಿರಿಸಬೇಕು.

* ಶುಚಿತ್ವ ಹಾಗೂ ನೈರ್ಮಲ್ಯತೆ ಕಾಪಾಡಿಕೊಳ್ಳಬೇಕು.

* ಆರೋಗ್ಯಕರ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು.

* ಜನದಟ್ಟನೆಯಿಂದ ದೂರವಿರಿ.

* ಆರೋಗ್ಯಕರ ಜೀವನಶೈಲಿ ಅನುಸರಿಸಿ. * ಸ್ವಪರಿವರ್ತನೆಯಿಂದ ಸೋಂಕು ಸಮುದಾಯದಲ್ಲಿ ಹರಡದಂತೆ ಎಚ್ಚರವಹಿಸೋಣ

* ಭಯ, ಆತಂಕಗಳು ನಮ್ಮ ರೋಗ ನಿರೋಧಕ ಶಕ್ತಿ, ನಿರ್ಣಯ ಶಕ್ತಿ ಕುಗ್ಗಿಸುತ್ತವೆ. ಮಂಕುತಿಮ್ಮನ ಕಗ್ಗದ ಈ ಸಾಲುಗಳನ್ನು ನೆನಪಿನಲ್ಲಿಡಿ——-
“ಕಳವಳವ ನೀಗಿ ಬಿಡು ತಳಮಳವ ದೂರವಿಡು
ಕಳೆ ,ತಳ್ಳು ಗಲಭೆ ಗಾಬರಿಯ ಮನದಿಂದ …….”

* ಸಿಡುಬಿನ ವಿರುದ್ದ ಬಳಸುವ ಲಸಿಕೆ, ಮಂಕಿ ಪಾಕ್ಸ್ ರೋಗವನ್ನು ತಡೆಗಟ್ಟುವಲ್ಲಿ ಶೇ.85 ರಷ್ಟು ಪರಿಣಾಮಕಾರಿ ಎಂದು ತಿಳಿದಿದೆ. ಆದ್ದರಿಂದ ಮಂಕಿ ಪಾಕ್ಸ್ ನ ಗಂಭೀರ ಲಕ್ಷಣಗಳನ್ನು ತಡೆಗಟ್ಟಲು ಸಿಡುಬು ಲಸಿಕೆಯನ್ನು ತಗೆದುಕೊಂಡಿದ್ದರೆ ಹೆದರುವ ಅವಶ್ಯಕತೆಯಿಲ್ಲ

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ
ಮೊ : 9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!