ಯಶಸ್ವಿ ಬದುಕಿಗೆ 2 ಚಿಕ್ಕ ಕಥೆಗಳು
1. ನಮ್ಮಲ್ಲಿಯ ತಪ್ಪುಗಳನ್ನು ಮೊದಲು ಒಪ್ಪಿಕೊಂಡು ಬಿಟ್ಟಲ್ಲಿ ಅದು ಇತರರ ತಪ್ಪು ವರ್ತನೆಯನ್ನೂ ಬದಲಿಸಲು ನೆರವಾಗಬಲ್ಲುದು.
2. ಧೈರ್ಯ, ನಂಬಿಕೆ ಮೂಡಿಸಿ. ತಪ್ಪುಗಳಿಗೇ ಪ್ರಾಧಾನ್ಯತೆ ನೀಡದೇ ನವಿರಾಗಿ ತಿದ್ದಿ ಮತ್ತು ತಪ್ಪುಗಳನ್ನು ಕ್ಷಮಿಸಿ ಬಿಡಿ.
ಅಮೇರಿಕಾದ ಮೇರಿಲ್ಯಾಂಡ್‍ನ ಕ್ಲಾರೆನ್ಸ್ ಎಂಬಾತನ ಹದಿನೈದು ವರ್ಷದ ಮಗ ಆಗ ತಾನೆ ಸಿಗರೇಟು ಸೇದುವ ಚಟ ಅಂಟಿಸಿಕೊಂಟಿದ್ದ. ಈ ಕ್ಲಾರೆನ್ಸ್ ಎಂಬಾತನೇನೂ ಸಾಚಾ ಅಂದುಕೊಳ್ಳಬೇಡಿ. ಆತ ಹಾಗೂ ಆತನ ಪತ್ನಿ ಇಬ್ಬರೂ ಕೂಡಾ ಸಿಗರೇಟು ಸೇದುವವರಾಗಿದ್ದರು. ಆದರೂ ಅವರಿಗೆ ತಮ್ಮ ಮಗ ಸಿಗರೇಟು ಸೇದುವುದು ಇಷ್ಟವಿರಲಿಲ್ಲ. ಅವನಿಗೆ ಹೇಗೆ ಚಟ ಬಿಡಿಸುವುದೆಂದೇ ಅವರಿಗೆ ಅರ್ಥವಾಗಲಿಲ್ಲ. ಏಕೆಂದರೆ ಸ್ವತಃ ಇವರಿಗೂ ಆ ಚಟ ಅಂಟಿದ್ದು ಬಿಡಲಾರದ ಕಗ್ಗಂಟಾಗಿತ್ತು. ಆದರೂ ಪ್ರಯತ್ನ ಮಾಡೋಣವೆಂದು, ಒಂದು ದಿನ ಕ್ಲಾರೆನ್ಸ್ ತನ್ನ ಮಗನನ್ನು ಬಳಿ ಕರೆದ.
ತಾನು ಆತನ ವಯಸ್ಸಿನಲ್ಲಿ ಸಿಗರೇಟು ಸೇದುವುದು ಹೇಗೆ ಕಲಿತೆ, ಈಗ ಅದು ಹೇಗೆ ದುಶ್ಚಟವಾಗಿದೆ., ಅದನ್ನು ಬಿಡಬೇಕೆಂದರೂ ಹೇಗೆ ಬಿಡಲಾಗುತ್ತಿಲ್ಲ ಎಂಬುದನ್ನೆಲ್ಲಾ ವಿವರವಾಗಿ ಹೇಳಿದ. ಈ ಚಟದಿಂದಾಗಿ ಹೇಗೆ ಕೆಮ್ಮುಅಂಟಿಕೊಂಡಿತು, ಅದೆಷ್ಟು ಕಿರಿಕಿರಿ ತಾನು ಅನುಭವಿಸುತ್ತಿರುವೆ ಎಂಬುದನ್ನೂ ಮಗನ ಬಳಿ ಹೇಳಿಕೊಂಡ. ಸಿಗರೇಟು ಸೇದುವುದನ್ನು ತಕ್ಷಣ ನಿಲ್ಲಿಸು ಎಂದಾಗಲಿ, ಮಗನನ್ನು ಹೊಡೆದು ಬಡಿದು ಮಾಡುವುದಾಗಲಿ ಆತ ಏನನ್ನೂ ಮಾಡಿರಲಿಲ್ಲ. ಸಿಗರೇಟಿನ ಅಪಾಯದ ಕುರಿತು ಎಚ್ಚರಿಕೆಯನ್ನೂ ನೀಡಲಿಲ್ಲ. ತಾನು ಹೇಗೆ ಸಿಗರೇಟಿನ ದಾಸನಾದೆ ಮತ್ತು ಈಗ ಅದರಿಂದ ಅನುಭವಿಸುತ್ತಿರುವ ಕಷ್ಟ ಏನು ಎಂಬುದನ್ನು ಮಾತ್ರ ವಿವರಿಸಿ ಹೇಳಿದ್ದ.
ಮಗ ಒಂದು ಕ್ಷಣ ಯೋಚಿಸಿದ. ವಿದ್ಯಾಭ್ಯಾಸ ಮುಗಿಯುವವರೆಗೂ ಸಿಗರೇಟು ಮುಟ್ಟಬಾರದೆಂದು ತನ್ನಲ್ಲೇ ತೀರ್ಮಾನಿಸಿಕೊಂಡ. ವರ್ಷಗಳು ಉರುಳಿದವು. ಮತ್ತವ ಸಿಗರೇಟು ಮುಟ್ಟಲೇಇಲ್ಲ! ಆತನಲ್ಲಿ ಸಿಗರೇಟು ಸೇದಬೇಕೆಂಬ ಬಯಕೆಯೂ ಹುಟ್ಟಲಿಲ್ಲ. ಇತ್ತ ಕ್ಲಾರೆನ್ಸ್ ಕೂಡಾ ಹಠಕ್ಕೆ ಬಿದ್ದು ತನ್ನ ಚಟವನ್ನೂ ಬಿಟ್ಟುಬಿಟ್ಟ. ಅಂದು ಕ್ಲಾರೆನ್ಸ್ ನಡೆದುಕೊಂಡ ರೀತಿ ಒಬ್ಬ ಉತ್ತಮ ನಾಯಕ ಅಳವಡಿಸಿಕೊಳ್ಳಲೇಬೇಕಾದ ಸೂತ್ರ. ಆತ ಇನ್ನೊಬ್ಬರನ್ನು ಬರೀ ಟೀಕಿಸಲಿಲ್ಲ. ಬದಲಾಗಿ ತನ್ನ ತಪ್ಪಿನ ಬಗ್ಗೆ ಮಾತನಾಡಿದ, ನಂತರ ತಿಳಿಹೇಳಿದ. ನಮ್ಮ ದೈನಂದಿನ ಬದುಕಿನಲ್ಲಿಯೂ ಇಂಥ ನೂರಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಹೊಗಳಿಕೆಯನ್ನು ಸಮರ್ಪಕವಾಗಿ ಬಳಸಿದಲ್ಲಿ ಅದೊಂದು ಪವಾಡವನ್ನೂ ನಿರ್ಮಿಸಬಲ್ಲುವು. ನಮ್ಮಲ್ಲಿಯ ತಪ್ಪುಗಳನ್ನು ಮೊದಲು ಒಪ್ಪಿಕೊಂಡು ಬಿಟ್ಟಲ್ಲಿ ಅದು ಇತರರ ತಪ್ಪು ವರ್ತನೆಯನ್ನೂ ಬದಲಿಸಲು ನೆರವಾಗಬಲ್ಲುದು.
Also Read: ಲೈಫ್‍ನ ಫಾರ್ಮುಲಾ – ಗುರಿ ಇಲ್ಲದೇ ಸಾಧನೆ ಅಸಾಧ್ಯ.
**
ನನ್ನ ಸ್ನೇಹಿತನ ಮಗನೊಬ್ಬನಿಗೆ ಗಣಿತವೆಂದರೆ ಕಬ್ಬಿಣದ ಕಡಲೆಯಾಗಿತ್ತು. ವಯಸ್ಸು ಹದಿನೈದಾದರೂ ಲೆಕ್ಕದಲ್ಲಿ ಬರೀ ತಪ್ಪುಗಳನ್ನೇ ಮಾಡುತ್ತಿದ್ದ. ಆತನಿಗೆ ಸರಿಯಾಗಿ ಇಂಗ್ಲೀಷ್ ಓದಲು ಬರುತ್ತಿರಲಿಲ್ಲ, ಒತ್ತಕ್ಷರದ ಮಾತೃಭಾಷೆಯನ್ನೂ ತಪ್ಪುತಪ್ಪಾಗಿ ಬರೆದುಬಿಡುತ್ತಿದ್ದ. ಪಠ್ಯ ವಿಷಯದಲ್ಲಿ ತೀರಾ ಹಿಂದುಳಿದಿದ್ದ ಆತ! ಅವನ ವಿಷಯವಾಗಿ ನನ್ನ ಸ್ನೇಹಿತನೂ ಮತ್ತು ಅವನ ಹೆಂಡತಿಯೂ ತುಂಬಾ ನೊಂದುಕೊಂಡಿದ್ದರು. ಆತನನ್ನು ಸರಿಮಾಡಲಾಗದ ದಡ್ಡನೆಂದು ಅವರೂ ತಿಳಿದು ಸುಮ್ಮನಾಗಿದ್ದರು. ಅವರ ಬವಣೆ ನನ್ನ ಗಮನಕ್ಕೆ ಬಂತು, ನನಗೆ ಪರಿಚಯವಿದ್ದ ಮನಃಶಾಸ್ತ್ರಜ್ಞರನ್ನು ಒಮ್ಮೆ ಭೇಟಿಮಾಡಿ ಎಂದು ಸಲಹೆ ಕೊಟ್ಟಿದ್ದೆ.
ನಂತರ ಬಹಳ ದಿನಗಳ ಕಾಲ ನನ್ನ ಮತ್ತು ಆ ನನ್ನ ಸ್ನೇಹಿತನ ಭೇಟಿ ಸಾಧ್ಯವಾಗಿರಲಿಲ್ಲ. ಒಂದು ದಿನ ತನ್ನ ಹೆಂಡತಿ ಮಗನ ಸಮೇತ ಸಡನ್ನಾಗಿ ನನ್ನಕಚೇರಿಗೆ ಬಂದ, ಸ್ವೀಟ್ ನೀಡಿದ. ಉಭಯ ಕುಶಲೋಪರಿಯ ನಂತರ ನನಗೆ ತಿಳಿದು ಬಂದದ್ದೇನೆಂದರೆ ಆತನ ಮಗನ ಬಗ್ಗೆ ಆತನಿಗಿದ್ದ ನಿಲುವು ಈಗ ಸಂಪೂರ್ಣ ಬದಲಾಗಿತ್ತು, ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ಬಾಲಕ ಎಂದು ಸರ್ಕಾರ ಆತನನ್ನು ಸನ್ಮಾಸಿಸಲು ಪತ್ರ ಕಳಿಸಿತ್ತು. ಆತನನ್ನು ಭವಿಷ್ಯದ ವಿಜ್ಞಾನಿ ಎಂದು ಗೌರವಿಸಿತ್ತು, ದೇಶದ ಕೆಲವೇ ಕೆಲವು ಮಕ್ಕಳಿಗೆ ಸಿಗುವ ಪ್ರತಿಷ್ಠಿತ ಪುರಸ್ಕಾರ ಆತನಿಗೆ ದೊರಕಿತ್ತು. ನನಗೂ ಆತನ ಸಾಧನೆ ಕಂಡು ಸಂತೋಷವಾಯಿತು. ಆದರೆ ಆತ ಹೀಗೆ ಬದಲಾಗಲು ಕಾರಣವಾದರೂ ಏನು?
ಆ ಹುಡುಗನಿಗೆ ಇಂಗ್ಲೀಷ್ ವಿಷಯದಲ್ಲಿ ಗೊಂದಲವಿದ್ದರೂ, ಸರಿಯಾಗ ಬರೆಯಲು, ಲೆಕ್ಕ ಮಾಡಲು ಬರದಿದ್ದರೂ ಅವನಲ್ಲೊಂದು ವಿಶೇಷ ಪ್ರತಿಭೆಯಿತ್ತು. ಮೊಬೈಲು, ಕಂಪ್ಯೂಟರು ವಿಷಯದಲ್ಲಿ ಅವನಿಗೆ ವಿಶೇಷ ಆಸಕ್ತಿಯಿತ್ತು. ಅದರ ರಿಪೇರಿಯನ್ನು, ಸಾಫ್ಟ್ವೇರ್ ಸಮಸ್ಯೆಗಳನ್ನೂ ಆತ ಸುಲಭವಾಗಿ ಗುರುತಿಸುತ್ತಿದ್ದ ಮತ್ತು ಕೆಲವನ್ನು ಪರಿಹರಿಸುತ್ತಿದ್ದ. ಕ್ರಮೇಣ ಹೊಸ ಹೊಸ ಆವಿಷ್ಕಾರದತ್ತ ಯೋಚಿಸುತ್ತಿದ್ದ. ಈ ಅಂಶವನ್ನು ಮನಃಶಾಸ್ತ್ರಜ್ಞರು ಗುರುತಿಸಿ ಇವನನ್ನು ಆ ನಿಟ್ಟಿನಲ್ಲಿಯೇ ಪ್ರೋತ್ಸಾಹಿಸಿದ್ದರು.
ಅವರ ಪ್ರತಿಮಾತುಗಳು ಕೂಡಾ ಇವನಲ್ಲಿ ಪ್ರೋತ್ಸಾಹ ಹೆಚ್ಚಿಸಿತ್ತು. ಅವನಲ್ಲಿನ ಸಾಮಥ್ರ್ಯವನ್ನು ಮನಗಂಡಿದ್ದ ಆ ಹುಡುಗ!. ‘ದಡ್ಡ ಶಿಖಾಮಣಿ’, ಪೆದ್ದ ಎಂದೆಲ್ಲಾ ಅಪಹಾಸ್ಯಕ್ಕೆ ಒಳಗಾಗಿದ್ದವ ಕ್ರಮೇಣ ಇತರ ವಿಷಯಗಳಲ್ಲಿಯೂ ಪ್ರಗತಿ ಸಾಧಿಸಲಾರಂಭಿಸಿದ್ದ. ಕಲಿಯುವುದು ಎಷ್ಟು ಸುಲಭವೆಂದು ಮನದಟ್ಟಾಗಿತ್ತು ಆತನಿಗೆ. ಅಂದು ಮನಃಶಾಸ್ತ್ರಜ್ಞರು ನೀಡಿದ ಉತ್ತೇಜನ, ಕಲಿಸಿಕೊಟ್ಟ ವಿಧಾನ ಇವನನ್ನುಅದ್ಭುತ ಬಾಲ ಸಾಧಕನಾಗಿ ಬದಲಾಯಿಸಿತ್ತು.
ಇದೊಂದು ಉದಾಹರಣೆ ಮಾತ್ರ. ಇಂತಹ ಬಹಳಷ್ಟು ಸನ್ನಿವೇಶಗಳು ನನ್ನ ನಡುವಿನಲ್ಲಿ ನಡೆದಿವೆ ಮತ್ತು ನಡೆಯುತ್ತಲಿವೆ. ನಾವು ಕೊಡುವ ಪ್ರೋತ್ಸಾಹ, ಪ್ರಶಂಸೆ ನಿಜಕ್ಕೂ ಕೆಲಸಮಾಡುತ್ತದೆ. ಸಾಧ್ಯವಾದಷ್ಟು ಇತರರಲ್ಲಿ ಆತ್ಮವಿಶ್ವಾಸವನ್ನು ತುಂಬಿ. ಧೈರ್ಯ, ನಂಬಿಕೆ ಮೂಡಿಸಿ. ತಪ್ಪುಗಳಿಗೇ ಪ್ರಾಧಾನ್ಯತೆ ನೀಡದೇ ನವಿರಾಗಿ ತಿದ್ದಿ ಮತ್ತು ತಪ್ಪುಗಳನ್ನು ಕ್ಷಮಿಸಿ ಬಿಡಿ. ಯಶಸ್ವಿ ಬದುಕಿಗೆ ಇದೇ ಈ ದಿನದ ಸೂತ್ರ.
(ಡೇಲ್‍ಕಾರ್ನೆಗಿ, ಅಮೇರಿಕಾ ಅವರ ಪುಸ್ತಕದಿಂದ)