ಥೈರಾಯಿಡ್ ಗ್ರಂಥಿ ಆರೋಗ್ಯ ಅತೀ ಅವಶ್ಯಕ.

ಥೈರಾಯಿಡ್ ಗ್ರಂಥಿ ಆರೋಗ್ಯ ಅತೀ ಅವಶ್ಯಕ. ಥೈರಾಯಿಡ್ ಗ್ರಂಥಿ ಆರೋಗ್ಯ ಅತೀ ಅವಶ್ಯಕ. ಥೈರಾಯಿಡ್ ಗ್ರಂಥಿ ನಮ್ಮ ದೇಹದ ಅತಿ ಮುಖ್ಯವಾದ ಗ್ರಂಥಿಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ.

ಅಚ್ಚ ಕನ್ನಡದಲ್ಲಿ ಈ ಗ್ರಂಥಿಯನ್ನು ಗುರಾಣಿ ಗ್ರಂಥಿ ಎಂದು ಕರೆಯುತ್ತಾರೆ. ಗುರಾಣಿ ಗ್ರಂಥಿಯಿಂದ ಸ್ರವಿಸಲ್ಪಡುವ ರಸದೂತಗಳು ನಮ್ಮ ದೇಹದ ಜೀವಕೋಶಗಳ ಕಾರ್ಯವನ್ನು ನಿಯಂತ್ರಿಸುತ್ತದೆ. ಜಗತ್ತಿನ ಜನಸಂಖ್ಯೆಯ 2 ರಿಂದ 3 ಶೇಕಡಾ ಮಂದಿ ಈ ಥೈರಾಯಿಡ್ ಸಂಬಂಧಿ ಖಾಯಿಲೆಯಿಂದ ಬಳಲುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ನಮ್ಮ ಗಂಟಲಿನ ಮೆಲ್ಭಾಗದಲ್ಲಿ ಗಾಳಿ ಕೊಳವೆಯ (Trachea) ಮುಂಭಾಗದಲ್ಲಿ ಈ ಗ್ರಂಥಿ ಸಾಮಾನ್ಯವಾಗಿ ಚಿಟ್ಟೆಯಾಕಾರದಲ್ಲಿ ಇರುತ್ತದೆ. ಸುಮಾರು 30 ರಿಂದ 40 ಗ್ರಾಂ ತೂಕವಿರುವ ಈ ಗುರಾಣಿ ಗ್ರಂಥಿ, ದೇಹದ ಜೀವಕೋಶಗಳ ಹೆಚ್ಚಿನ ಕೆಲಸಗಳನ್ನು ತನ್ನ ರಸದೂತಗಳ ಮುಖಾಂತರ ಹತೋಟಿಯಲ್ಲಿಡುತ್ತದೆ. ಎಡ ಮತ್ತು ಬಲ ಭಾಗದ ಲೋಬ್ ಅಥವಾ ಹಾಳೆಗಳು ಇದ್ದು, ನಡುವೆ ಎರಡು ಹಾಳೆಗಳು ಒಂದಕ್ಕೊಂದು ಸೇತುವೆಯಂತೆ ಕೂಡಿಕೊಂಡಿದೆ. ಗಾತ್ರದಲ್ಲಿ ಬಹಳ ಚಿಕ್ಕದಾದರೂ ಈ ಗುರಾಣಿ ಗ್ರಂಥಿ ಮಾಡುವ ಕೆಲಸ ಮಾತ್ರ ಊಹೆಗೂ ನಿಲುಕದ್ದು. ನಾವು ಸೇವಿಸುವ ಆಹಾರದಲ್ಲಿನ ಅಯೋಡಿನ್ ಲವಣಗಳನ್ನು ಬಳಸಿಕೊಂಡು T3 ಮತ್ತು T4 ಎಂಬ ರಸದೂತಗಳನ್ನು ನಿರಂತರವಾಗಿ ಉತ್ಪತ್ತಿ ಮಾಡುತ್ತಿರುತ್ತದೆ. ಈ ರಸದೂತಗಳು ರಕ್ತಕ್ಕೆ ಸೇರಿ, ದೇಹದೆಲ್ಲೆಡೆ ಸಂಚರಿಸಿ, ದೇಹದ ಜೀವಕೋಶಗಳ ಕಾರ್ಯವನ್ನು ಹತೋಟಿಯಲ್ಲಿಡುತ್ತದೆ. ದೇಹದಲ್ಲಿ ಜೀವಕೋಶಗಳ BMR ಎಂದರೆ ಜೀವಕೋಶಗಳ ಮೂಲಭೂತ ಜೈವಿಕ ಪ್ರಕ್ರಿಯೆಯನ್ನು ತನ್ನ ಸಂಪೂರ್ಣ ಹತೋಟಿಯಲ್ಲಿಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತದೆ.

ಥೈರಾಯಿಡ್ ಅಥವಾ ಗುರಾಣಿ ಗ್ರಂಥಿ ನಮ್ಮ ದೇಹದ ಚಾಲಕ ಇದ್ದಂತೆ. ಗುರಾಣಿ ಗ್ರಂಥಿಯಿಂದ ಸ್ರವಿಸಲ್ಪಡುವ ರಸರೂಪ ನಮ್ಮ ದೇಹದ ಪ್ರತಿಯೊಂದು ಜೀವಕೋಶಗಳ ಜೈವಿಕ ಕ್ರಿಯೆಗೆ ಅತೀ ಅವಶ್ಯಕ. ನಾವು ಸೇವಿಸಿದ ಆಹಾರದಲ್ಲಿನ ಶಕ್ತಿಯನ್ನು ಉತ್ಕರ್ಷಣ ಮಾಡಿ, ಶಕ್ತಿಯನ್ನು ಬಿಡುಗಡೆ ಮಾಡಲು ಜೀವಕೋಶಗಳಿಗೆ ಈ ರಸದೂತಗಳು ಅತೀ ಅಗತ್ಯ. ಹೀಗೆ ಜೀವಕೋಶಗಳ ಕಾರ್ಯಕ್ಷಮತೆ, ದೈಹಿಕ ಬೆಳವಣಿಗೆ ಮತ್ತು ವಿಕಸನ, ಹದಿಹರೆಯದಲ್ಲಿ ಲೈಂಗಿಕ ಬೆಳವಣಿಗೆಯ ಮೇಲೆ ಈ ರಸದೂತಗಳು ಸಂಪೂರ್ಣ ಪ್ರಭಾವ ಬೀರುತ್ತದೆ. ಗುರಾಣಿ ಗ್ರಂಥಿಯ ರಸದೂತಗಳ ಏರಿಕೆ ಮತ್ತು ಇಳಿಕೆಯಿಂದ ದೇಹದಲ್ಲಿ ವ್ಯಾಪಕ ಬದಲಾವಣೆಗೆ ಕಾರಣೀಭೂತವಾಗುತ್ತದೆ. ಒಟ್ಟಿನಲ್ಲಿ ಗಾತ್ರದಲ್ಲಿ ಚಿಕ್ಕದಾದರೂ ನಮ್ಮ ದೇಹದ ಹೆಚ್ಚಿನ ಜೈವಿಕ ಕ್ರಿಯೆಗಳ ಮೇಲೆ ಅಗಾಧ ಪರಿಣಾಮ ಬೀರಿ ದೈಹಿಕ, ಮಾನಸಿಕ ಮತ್ತು ಭೌತಿಕ ಬೆಳವಣಿಗೆಗೆ ನಾಂದಿ ಹಾಡುವ ಈ ಗುರಾಣಿ ಗ್ರಂಥಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲರೂ ಕಾಲಕಾಲಕ್ಕೆ ವೈದ್ಯರ ಬಳಿ ಪರೀಕ್ಷಿಸಿ ಗುರಾಣಿ ಗ್ರಂಥಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಮುಂದೆ ಬಂದೊದಗುವ ತೊಂದರೆಗಳನ್ನು, ಆರಂಭಿಕ ಹಂತದಲ್ಲಿಯೇ ಹೊಸಕಿ ಹಾಕಬಹುದು.

ಥೈರಾಯಿಡ್ ರಸದೂತಗಳು

1. ಗುರಾಣಿ ಗ್ರಂಥಿಯಿಂದ ಮುಖ್ಯವಾಗಿ ಎರಡು ಹಾರ್ಮೋನ್‍ಗಳು ಉತ್ಪತ್ತಿಯಾಗುತ್ತದೆ.

2. ಥೈರಾಕ್ಸಿನ್ (Thyroxin) ಇದನ್ನು T4 ಎಂದು ಕರೆಯುತ್ತಾರೆ.

3. ಟ್ರೈ ಐಯಡೊ ಟೈರೋನಿನ್ (Tri Iodo thyronine) ಇದನ್ನು T3 ಎಂದು ಕರೆಯುತ್ತಾರೆ.

ದೇಹದ ಅವಶ್ಯಕತೆಗನುಗುಣವಾಗಿ ಈ ರಸದೂತಗಳು ಗುರಾಣಿ ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ದೇಹದ ತೂಕ, ಲಿಂಗ ಮತ್ತು ವಯಸ್ಸಿಗೆ ಅನುಗುಣವಾಗಿ ಈ ರಸದೂತಗಳ ಪ್ರಮಾಣ ನಿರ್ಧರಿಸಲ್ಪಡುತ್ತದೆ, ಅದೇ ರೀತಿ ನಮ್ಮ ದೇಹದಲ್ಲಿನ ಅಯೋಡಿನ್ ಪ್ರಮಾಣ ಮತ್ತು ನಾವು ಸೇವಿಸುವ ಆಹಾರದಲ್ಲಿನ ಅಯೋಡಿನ್ ಪ್ರಮಾಣ ಕೂಡಾ ಈ T3 ಮತ್ತು T4 ರಸದೂತಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ಉದಾಹರಣೆಗೆ ನಮ್ಮ ದೇಹದಲ್ಲಿನ ಲವಣಗಳನ್ನು ಅಯೋಡಿನ್ ಅಂಶ ಕಡಿಮೆಯಾದಲ್ಲಿ T3 ಮತ್ತು T4 ಅಂಶ ಜಾಸ್ತಿಯಾಗಿ ಅಯೋಡಿನ್ ಸೋಸುವಿಕೆಯನ್ನು ಹೆಚ್ಚಿಸುತ್ತದೆ. ಅದೇ ರೀತಿ ಮೆದುಳಿನ ಪಿಟ್ಯುಟರಿ ಎಂಬ ಗ್ರಂಥಿಯಿಂದ ಸ್ರವಿಸಲ್ಪಡುವ TSH ಎಂಬ ರಸದೂತ ಕೂಡಾ T3 ಮತ್ತು T4 ಪ್ರಮಾಣವನ್ನು ಹೆಚ್ಚು ಕಡಮೆಯಾಗುವಂತೆ ಮಾಡುತ್ತದೆ.

ದೇಹದಲ್ಲಿ T3 ಮತ್ತು T4 ಅಂಶ ಕಡಮೆಯಾದಂತೆ TSH ರಸದೂತಗಳ ಪ್ರಮಾಣ ಜಾಸ್ತಿಯಾಗಿ ಗುರಾಣಿ ಗ್ರಂಥಿಯಿಂದ ಹೆಚ್ಚು ಹೆಚ್ಚು T3 ಮತ್ತು T4 ರಸದೂತ ಸೃವಿಸುವಂತೆ ಪ್ರಚೋದಿಸುತ್ತದೆ. ಒಟ್ಟಿನಲ್ಲಿ ದೇಹದ ಎಲ್ಲಾ ಜೀವಕೋಶಗಳ ಕಾರ್ಯಕ್ಷಮತೆಯನ್ನು ಗುರಾಣಿ ಗ್ರಂಥಿಗಳು ತಮ್ಮ ರಸದೂತಗಳ ಮುಖಾಂತರ ನಿಯಂತ್ರಣ ಮಾಡುತ್ತದೆ. ಥೈರಾಯಿಡ್ ಸಮಸ್ಯೆಯನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ – ಹೈಪರ್ ಥೈರಾಯಿಡಿಸಮ್ ಮತ್ತು ಹೈಪೋ ಥೆರಾಯಿಡಿಸಮ್. ಹೈಪರ್ ಥೈರಾಯಿಡಿಸಮ್ ರೋಗದಲ್ಲಿ ಅಗತ್ಯಕ್ಕಿಂತ ಜಾಸ್ತಿಯಾಗಿ ಥೈರಾಯಿಡ್ ರಸದೂತಗಳು ಸ್ರವಿಸಲ್ಪಡುತ್ತದೆ. ಮತ್ತು ಹೈಪೋ ಥೈರಾಯಿಡಿಸಮ್ ಖಾಯಿಲೆಯಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಸದೂತಗಳು ಸ್ರವಿಸಲ್ಪಡುತ್ತದೆ. ಒಟ್ಟಿನಲ್ಲಿ ರಸದೂತಗಳು ಹೆಚ್ಚಾದರೂ ಕಡಮೆಯಾದರೂ ಸಮಸ್ಯೆಗಳು ಉದ್ಭವವಾಗುತ್ತದೆ. ಸಾಮಾನ್ಯವಾಗಿ ಶೇಕಡಾ 20 ಮಂದಿಯಲ್ಲಿ ಹೈಪರ್ ಥೈರಾಯಿಡ್ ಸಮಸ್ಯೆ ಕಂಡು ಬರುತ್ತದೆ, ಉಳಿದ ಶೇಕಡಾ 80 ಜನರಲ್ಲಿ ಹೈಪೋ ಥೈರಾಯಿಡ್ ಸಮಸ್ಯೆ ಕಂಡು ಬರಬಹುದು. ಹೆಚ್ಚು ಕಡಿಮೆ 20 ಮತ್ತು 40ರ ವಯಸ್ಸಿನ ಆಸುಪಾಸಿನಲ್ಲಿ ಈ ರೋಗ ಹೆಚ್ಚು ಕಾಣಸಿಕೊಳ್ಳುತ್ತದೆ.

ಹೈಪರ್ ಥೈರಾಯಿಡಿಸಮ್ ಖಾಯಿಲೆ

Thyroid-Awareness-1. ಅಗತ್ಯಕ್ಕಿಂತ ಜಾಸ್ತಿ T3 ಮತ್ತು T4 ರಸದೂತಗಳ ಸ್ರವಿಸಿದಾಗ ಹಲವಾರು ಸಮಸ್ಯೆಗಳು ದೇಹವನ್ನು ಕಾಡುತ್ತದೆ. ಗ್ರೇವ್ ಖಾಯಿಲೆ ಎಂಬ ರೋಗವಿರುವವರಲ್ಲಿ, ಥೈರಾಯಿಡ್ ಗ್ರಂಥಿಯ ಸೋಂಕು (Thyroiditis) ಉಂಟಾದಾಗ, ಥೈರಾಯಿಡ್ ಗ್ರಂಥಿಯ ಗಡ್ಡೆಗಳಲ್ಲಿ ಈ ರೀತಿ ಅತಿಯಾದ ರಸದೂತಗಳು ಸ್ರವಿಸಲ್ಪಡುತ್ತದೆ.

2. ಗಾಬರಿಯಾಗುವುದು, ಅತಿಯಾಗಿ ಸ್ಪಂದಿಸುವುದು, ಬೇಸರ ಮಾನಸಿಕ ಒತ್ತಡ ಕಿರಿಕಿರಿ ಇತ್ಯಾದಿ.

3. ಅತಿಯಾಗಿ ಬೆವರುವುದು, ಎದೆ ಬಡಿತ ಜೋರಾಗುವುದು.

4. ನಿದ್ರಾಹೀನತೆ ದೇಹದ ತೂಕ ಕಡಮೆಯಾಗುವುದು.

5. ಥೈರಾಯಿಡ್ ಗ್ರಂಥಿಗಳು ಹಿಗ್ಗುವುದು, ಮಾಂಸಖಂಡಗಳ ಬಲಹೀನತೆ ಉಂಟಾಗುವುದು.

6. ಕೈಕಾಲುಗಳ ನಡುಕ, ಬಿಸಿಯನ್ನು ತಾಳಲಾಗದಿರುವುದು, ಉಷ್ಣತೆ.

7. ಅನಿಯಮಿತ ಮುಟ್ಟು, ಬಂಜೆತನ, ಸಂತಾನ ಹೀನತೆ.

8. ಕಣ್ಣುಗಳು ಮಂಜಾಗುವುದು, ಎರೆಡೆರಡು ವಸ್ತುಗಳು ಕಾಣುವುದು, ಕಣ್ಣು ಗುಡ್ಡೆಗಳು ದೊಡ್ಡದಾದಂತೆ ಭಾಸವಾಗುವುದು.

ಕಂಡು ಹಿಡಿಯುವುದು ಹೇಗೆ?

1. ರಸದೂತಗಳ ಪರೀಕ್ಷೆ – T3, T4, TSHಗಳ ಪ್ರಮಾಣವನ್ನು ಪರೀಕ್ಷಿಸಿ ರೋಗ ಪತ್ತೆ ಹಚ್ಚಲಾಗುತ್ತದೆ.

2. ಥೈರಾಯಿಡ್ ಗ್ರಂಥಿಗಳ ಸ್ಕಾನಿಂಗ್ ತಪಾಸಣೆ ಮಾಡಿಸುವುದು.

3. ಸೂಜಿ ಬಯಾಸ್ಸಿ (FNAC)ಎಂಬ ವಿಧಾನದ ಮುಖಾಂತರ ಥೈರಾಯಿಡ್ ಗ್ರಂಥಿಗಳ ರಚನೆಯನ್ನು ಸೂಕ್ಷ್ಮ ದರ್ಶಕಗಳ ಮೂಲಕ ಪರೀಕ್ಷಿಸಿ, ರೋಗದ ಮೂಲಕಾರಣವನ್ನು ಪತ್ತೆ ಹಚ್ಚಲಾಗುತ್ತದೆ.

ಚಿಕಿತ್ಸೆ
ಯಾವ ಕಾರಣದಿಂದ ಹೈಪರ್ ಥೈರಾಯಿಡ್ ಸಮಸ್ಯೆ ಬಂದಿದೆ ಎಂದು ತಿಳಿದ ಬಳಿಕ ವೈದ್ಯರೇ ಚಿಕಿತ್ಸೆ ನಿರ್ಧರಿಸುತ್ತಾರೆ. ಕೆಲವೊಮ್ಮೆ ಔಷಧಿಗಳ ಮುಖಾಂತರ ಅಥವಾ ಇನ್ನೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದರೆ ಶಸ್ತ್ರ ಚಿಕಿತ್ಸೆಯ ಮುಖಾಂತರ ರೋಗ ಪೂರಿತ ಗಡ್ಡೆಯನ್ನು ಕತ್ತರಿಸಿ ತೆಗೆದು ರೋಗವನ್ನು ಗುಣಪಡಿಸುತ್ತಾರೆ.

ಹೈಪೋ ಥೈರಾಯಿಡಿಸಮ್:

ದೇಹದ ಜೀವಕೋಶಗಳ ಅವಶ್ಯಕತೆಗಿಂತ ಕಡಮೆ ಪ್ರಮಾಣದಲ್ಲಿ T3, T4 ರಸದೂತಗಳು ಸ್ರವಿಸುವಿಕೆ ಉಂಟಾದಾಗ ಈ ರೀತಿಯ ಖಾಯಿಲೆಯನ್ನು ಹೈಪೋ ಥೈರಾಯಿಡಿಸಮ್ ಎಂದು ಕರೆಯಲಾಗುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ದೇಹದ ಜೀವಕೋಶಗಳ ಮೇಲೆಯೇ ತಿರುಗಿ ಬಿದ್ದಾಗ ಗುರಾಣಿ ಗ್ರಂಥಿಗಳಿಗೆ ಹಾನಿಯಾಗಿ T3, T4 ರಸದೂತಗಳ ಸ್ರವಿಸುವಿಕೆ ಕುಂಠಿತವಾಗುತ್ತದೆ, ಇದನ್ನು ಹಾಶಿಮಟೋ ಥೈರಾಯಿಡಿಟಿಸ್ (Hashimoto’s Thyroiditis) ಎನ್ನುತ್ತಾರೆ. ಅಯೋಡಿನ್ ಕೊರತೆಯಿಂದಲೂ ಈ ರೋಗ ಬರುವ ಸಾಧ್ಯತೆ ಇರುತ್ತದೆ. ಹೆರಿಗೆಯ ಬಳಿಕವೂ ಹೆಂಗಸರಲ್ಲಿ ಈ ರೋಗ ಸುಮಾರು 8ರಿಂದ 10 ಶೇಕಡಾ ಮಹಿಳೆಯರಿಗೆ ಬರುವ ಸಾಧ್ಯತೆ ಇರುತ್ತದೆ.

ರೋಗದ ಲಕ್ಷಣಗಳು:

1. ನಿರುತ್ಸಾಹ, ಬಲ ಹೀನತೆ, ಅತಿಯಾದ ಸುಸ್ತು ಕಾಣಿಸಿಕೊಳ್ಳುತ್ತದೆ.

2. ಅತಿಯಾದ ನಿದ್ರೆ, ಚರ್ಮ ಒಣಗಿ ಕಾಂತಿ ಕಳೆದುಕೊಳ್ಳುವುದು, ಕಡಮೆ ಬೆವರುವಿಕೆ, ಇತ್ಯಾದಿ.

3. ದೇಹದ ತೂಕ ಏರುವಿಕೆ, ಮರೆತನ, ಬಂಜೆತನ, ಅತಿಯಾದ ರಕ್ತಸ್ರಾವ, ಗಡಸುಧ್ವನಿ, ಅತಿಶೀತ.

4. ಮಲಬದ್ಧತೆ, ಅಜೀರ್ಣ, ತಲೆಕೂದಲು ಉದುರುವುದು, ಚಳಿಯನ್ನು ತಡೆಯಲು ಸಾಧ್ಯವಾಗದಿರುವುದು, ಇತ್ಯಾದಿ ಕಾಣಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಬೇರೆ ಬೇರೆ ರಸದೂತಗಳ ಸ್ರವಿಸುವಿಕೆಯಲ್ಲಿನ ವ್ಯತ್ಯಾಸ ಮತ್ತು ಥೈರಾಯಿಡ್ ಹಾರ್ಮೋನುಗಳ ನಡುವಿನ ಹೊಂದಾಣಿಕೆ ಇಲ್ಲದೇ ರೋಗದ ಲಕ್ಷಣಗಳು ಹೆಚ್ಚು ನಿಖರವಾಗಿ ಕಾಣಿಸಿಕೊಳ್ಳುತ್ತದೆ.

5. ಕೊರಳು ಉಬ್ಬಿದಂತಾಗುವುದು, ಮಕ್ಕಳಲ್ಲಿ ಎತ್ತರ ಬೆಳೆಯುವುದು ಕುಂಠಿತವಾಗುವುದು, ಹೆಣ್ಣು ಮಕ್ಕಳಲ್ಲಿ ಮೈ ನೆರೆಯುವುದು ತಡವಾಗುವುದು. ಈ ಲಕ್ಷಣಗಳು ಕಂಡು ಬಂದ ಕೂಡಲೆ T3 ಮತ್ತು T4 ರಸದೂತಗಳ ಪರೀಕ್ಷೆ ಮಾಡಿಸಬೇಕು. ಕೆಲವೊಮ್ಮೆ ಈ ರಸದೂತಗಳ ಸರಿಯಾದ ಪ್ರಮಾಣದಲ್ಲಿ ಇರುತ್ತದೆ ಆದರೆ TSH ಪ್ರಮಾಣ ತುಂಬಾ ಜಾಸ್ತಿ ಇರುತ್ತದೆ. ಇದು ಥೈರಾಯಿಡ್ ಗ್ರಂಥಿಯ ಕಾರ್ಯವೈಖರಿ ಕುಸಿಯುತ್ತದೆ ಎಂಬುದನ್ನು ಪ್ರಮಾಣೀಕರಿಸುತ್ತದೆ.

ಪತ್ತೆ ಹಚ್ಚುವುದು ಹೇಗೆ?

1. ರಸದೂತಗಳ ಪರೀಕ್ಷೆ : T3, T4, TSH ರಸದೂತಗಳ ಪ್ರಮಾಣವನ್ನು ಪರೀಕ್ಷಿಸಬೇಕು.

2. ಥೈರಾಯಿಡ್ ಗ್ರಂಥಿಯ ಸ್ಕಾನಿಂಗ್ ತಪಾಸಣೆ.

3. ದೇಹದ ಸಂಪೂರ್ಣ ತಪಾಸಣೆ ಮತ್ತು ರೋಗದ ಚರಿತ್ರೆಯ ವಿವರವನ್ನು ದಾಖಲಿಸುವುದು.

ಚಿಕಿತ್ಸೆ ಹೇಗೆ?

1. ಥೈರಾಯಿಡ್ ರಸದೂತಗಳನ್ನು ಮಾತ್ರೆಗಳ ರೂಪದಲ್ಲಿ ನೀಡಲಾಗುತ್ತದೆ. ಹೆಚ್ಚಾಗಿ ಜೀವನ ಪರ್ಯಂತ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಮಕ್ಕಳು, ವೃದ್ಧರು ಮತ್ತು ಹೃದ್ರೋಗಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಔಷಧ ಆರಂಭಿಸಿ, ಕ್ರಮೇಣ ಔಷಧಿಯ ಪ್ರಮಾಣವನ್ನು ಹೆಚ್ಚಿಸುತ್ತಾರೆ. ವೈದ್ಯರ ನಿರ್ದೇಶನದಂತೆ ಚಾಚೂ ತಪ್ಪದೆ ಔಷಧಿ ಸೇವಿಸಬೇಕು.

2. ಥೈರಾಯಿಡ್ ಔಷಧಿಯನ್ನು ಊಟಕ್ಕಿಂತ ಮೊದಲೇ ಸೇವಿಸಬೇಕಾಗುತ್ತದೆ. ಗರ್ಭವತಿಯಾಗಿದ್ದಾಗ ಮತ್ತು ಮುಟ್ಟಿನ ಸಂದರ್ಭದಲ್ಲಿಯೂ, ಔಷಧಿ ಸೇವನೆ ಅಗತ್ಯ. ಗರ್ಭಿಣಿಯಾಗಿದ್ದಾಗ ಥೈರಾಯಿಡ್ ರಸದೂತಗಳ ಅಗತ್ಯ ಹೆಚ್ಚಾಗಿರುತ್ತದೆ. ಹೈಪೋ ಥೈರಾಡಿಯಿಸಮ್‍ನಿಂದ ಬಳಲುತ್ತಿರುವವರು ವಿಟಮಿನ್ ಬಿ ಮತ್ತು ಕಬ್ಬಿಣದ ಅಂಶ ಜಾಸ್ತಿ ಇರುವ ದ್ವಿದಳ ಧಾನ್ಯಗಳು, ತಾಜಾ ಹಣ್ಣುಗಳು, ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಅಯೋಡಿನ್ ಅಂಶವಿರುವ ಉಪ್ಪು ಅಧಿಕ ಸೇವಿಸಬೇಕಾಗುತ್ತದೆ.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com email: drmuraleemohan@gmail.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!