ಸುಶಾಂತ್ ಸಿಂಗ್ ರಾಜಪೂತ್- ಒತ್ತಡ ತಾಳಲಾರದೆ ಆತ್ಮಹತ್ಯೆ?

ಸುಶಾಂತ್ ಸಿಂಗ್ ರಾಜಪೂತ್ ವೃತ್ತಿ ಜೀವನದಲ್ಲಿನ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ .ಆತನ ಸಾವಿನೊಂದಿಗೆ ಬಾಲಿವುಡ್‍ನ ಒಳಗಿನ ಸ್ವಜನಪಕ್ಷಪಾತ, ಹುಳುಕುಗಳು ಮತ್ತು ಬಣ್ಣದ ಭ್ರಮಾಲೋಕದ ಒಳಗಿನ ಕಟುಸತ್ಯಗಳು ಒಂದೊಂದಾಗಿ ಹೊರ ಬರತೊಡಗಿದೆ.

sushanth-singh-rajputhಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರುತ್ತಿರುವ ಒಂದು ಶಬ್ಧ ಎಂದರೆ ನೆಪೊಟಿಸಮ್. ಅಚ್ಚ ಕನ್ನಡದಲ್ಲಿ ಇದಕ್ಕೆ ಸ್ವಜನಪಕ್ಷಪಾತ ಎನ್ನುತ್ತಾರೆ. ಉನ್ನತ ಹುದ್ದೆ ಅಥವಾ ಸ್ಥಾನದಲ್ಲಿರುವ ವ್ಯಕ್ತಿ ತನಗೆ ಬೇಗಾದವರನ್ನೇ ಗುರುತಿಸಿ ಅವರಿಗೆ ಹೆಚ್ಚು ಹೆಚ್ಚು ಅವಕಾಶ ನೀಡಿ ಅವರಿಗೆ ಪ್ರತಿಭೆ ಸಾಮಥ್ರ್ಯ ಇಲ್ಲದಿದ್ದರೂ ಅವರಿಗೆ ಪದೇ ಪದೇ ಅವಕಾಶ ನೀಡಿ ಅವರನ್ನೇ ಮುಂದೆ ತರುವ ಹುನ್ನಾರ ಮಾಡುವುದನ್ನೇ ವಿಶಾಲಾರ್ಥದಲ್ಲಿ ಸ್ವಜನಪಕ್ಷಪಾತ ಎನ್ನುತ್ತಾರೆ. ಈ ರೀತಿ ಮಾಡಿದಾಗ ಪ್ರತಿಭೆ ಇರುವವರಿಗೆ ಅವಕಾಶ ವಂಚಿತವಾಗಿ ಅವರಿಗೆ ಸಿಗಬೇಕಾದ ಅವಕಾಶಗಳು ಬತ್ತಿ ಹೋಗಿ ಅಥವಾ ಸಿಗದಂತಾಗಿ ಅಂತಹಾ ಪ್ರತಿಭೆಗಳಿಗೆ ಅನವಶ್ಯಕವಾಗಿ ಮಾನಸಿಕ ಒತ್ತಡ ಉಂಟಾಗಿ ಖಿನ್ನತೆಗೆ ಒಳಗಾಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‍ನಲ್ಲಿ ನಡೆದ ವಿದ್ಯಮಾನಗಳೇ ಇದಕ್ಕೆ ಸಾಕ್ಷಿ. ಮೊನ್ನೆ ತಾನೇ ಬಾಲಿವುಡ್‍ನ ಪ್ರತಿಭಾನ್ವಿತ ನಟ ಮತ್ತು ಕಿರುತೆರೆಯ ಯಶಸ್ವಿ ನಟ ಸುಶಾಂತ್ ಸಿಂಗ್ ರಾಜಪೂತ್ ವೃತ್ತಿ ಜೀವನದಲ್ಲಿನ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ವಿಚಾರ ಇನ್ನೂ ಹಸಿರಾಗಿಯೇ ಇದೆ. ಅತ್ಯಂತ ಪ್ರತಿಭಾವಂತ ಮತ್ತು ಸುಶಿಕ್ಷಿತ ನಟನಾಗಿದ್ದ ಆತ ಬಹಳಷ್ಟು ಕನಸು ಮತ್ತು ಆಶೋತ್ತರಗಳನ್ನು ಇಟ್ಟುಕೊಂಡು ಬಾಲಿವುಡ್‍ನ ರಂಗಿನ ಲೋಕಕ್ಕೆ ಬಂದಿದ್ದ. ಕಿರುತೆರೆಯಲ್ಲಿ ಬಹಳ ಯಶಸ್ವಿ ನಟನಾಗಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದ. ಅತ್ಯಂತ ಕಡಿಮೆ ಅವಧಿಯಲ್ಲಿ 11 ಚಿತ್ರಗಳಲ್ಲಿ ನಟಿಸಿದ್ದ. ಯಾವುದೇ ಗಾಡ್‍ಫಾದರ್ ಅಥವಾ ಕೌಟುಂಬಿಕ ಹಿನ್ನೆಲೆ ಇರದಿದ್ದರೂ ಸ್ವಂತ ಪ್ರತಿಭೆ ಪರಿಶ್ರಮ ಮತ್ತು ಅಗಾಧವಾದ ಪ್ರಯತ್ನಗಳಿಂದ ಮೇಲೆ ಬಂದಿದ್ದ. ನಾಲ್ಕೈದು ಚಿತ್ರಗಳನ್ನು ನೀಡಿದ್ದ.

‘ಚಿಚ್ಚೋರಿ’ ಎಂಬ ಆತನ ಚಿತ್ರ ಮಕ್ಕಳ ಮಾನಸಿಕ ಒತ್ತಡಗಳನ್ನು ನಿಭಾಯಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ಬಗ್ಗೆಯೇ ಕೇಂದ್ರೀಕೃತವಾಗಿತ್ತು. ಹೆತ್ತವರು ಮಕ್ಕಳನ್ನು ಹೇಗೆ ಬೆಳೆಸಬೇಕು ಮತ್ತು ಮಕ್ಕಳ ಕನಸನ್ನು ನನಸಾಗಿಸಲು ಹೇಗೆ ಜವಾಬ್ದಾರಿ ನಿಭಾಯಿಸಬೇಕು ಮತ್ತು ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಹೇಡಿತನ ಎಂಬ ಸಂದೇಶವನ್ನು ಸಮಾಜಕ್ಕೆ ಬಹಳ ಪರಿಣಾಮಕಾರಿಯಾಗಿ ನೀಡಿದ್ದ. ಆದರೆ ವಿಪರ್ಯಾಸವೆಂದರೆ ಆ ಚಿತ್ತ ಬಿಡುಗಡೆಯಾಗಿ ಒಂದು ವರ್ಷದೊಳಗೆ ವೃತ್ತಿಜೀವನದ ಸ್ವಜನಪಕ್ಷಪಾತ ಮತ್ತು ಪ್ರತಿಭೆಗಳಿದ್ದರೂ ಸಿಗದ ಅವಕಾಶಗಳಿಂದ ಹತಾಶೆಗೊಂಡು ತನ್ನ ಜೀವನದ ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಠಾತ್ತನೆ ಹೊರಟು ಹೋಗಿ ಬಿಟ್ಟಿದ್ದ. ಎಲ್ಲವೂ ಇದ್ದರೂ ಏನೂ ಇಲ್ಲದವರ ರೀತಿಯಲ್ಲಿ ಇಹಲೋಕದ ವ್ಯಾಪಾರವನ್ನು ಮುಗಿಸಿಬಿಟ್ಟಿದ್ದ.

ಕಾರು, ಮನೆ, ಬಂಗಲೆ, ಕೈಕಾಲಿಗೊಬ್ಬರಂತೆ ಆಳುಕಾಳು, ವೈಭವೋಪೇತ ಕಾರುಗಳು, ಚಂದ್ರಲೋಕದಲ್ಲಿ ಒಂದು ಸೈಟ್ ಹೀಗೆ ತನ್ನ ಎಲ್ಲ ಕನಸುಗಳನ್ನು ಸಾಕಾರಗೊಳಿಸಿದರೂ, ಮನದೊಳಗಿನ ಆತಂಕ, ಉದ್ವೇಗ ಮತ್ತು ಭವಿಷ್ಯದ ಬಗೆಗಿನ ಅನಗತ್ಯ ಚಿಂತೆಯಿಂದಾಗಿ ನೂರಾರು ವರ್ಷಗಳ ಕಾಲ ಬದುಕಿ ಬೆಳಗಬೇಕಿದ್ದ ಜೀವವೊಂದು ಕ್ಷಣಾರ್ಧದ ತುರ್ತು ನಿರ್ಧಾರಗಳಿಂದಾಗಿ ಬತ್ತಿಹೋಗಿದ್ದು ವಿಪರ್ಯಾಸದ ಪರಮಾವಧಿ ಎಂದರೂ ತಪ್ಪಲ್ಲ. ತಾನು ಆತ್ಮಹತ್ಯೆ ಮಾಡುವಾಗ ಯಾವುದೇ ಸುಳಿವು ನೀಡದೆ ಸಾವಿನಲ್ಲೂ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ಬರಬಾರದ ಲೋಕಕ್ಕೆ ತೆರಳಿದ್ದ. ತನ್ನ ಸ್ವಂತ ಪ್ರತಿಭೆ ಪರಿಶ್ರಮ ಮತ್ತು ಧನಾತ್ಮಕ ಮನೋಭಾವದಿಂದಲೇ ಎಲ್ಲವನ್ನು ಎದುರಿಸಿ ಸಾಧನೆಯ ಉತ್ತುಂಗಕ್ಕೆ ಏರಿ, ಅದೇ ವೇಗದಲ್ಲಿ ಎಲ್ಲವನ್ನೂ ತೊರೆದು ಸಾವಿಗೆ ಶರಣಾಗತಿಯಾಗಿದ್ದ. ಆತನ ಸಾವಿನೊಂದಿಗೆ ಬಾಲಿವುಡ್‍ನ ಒಳಗಿನ ಸ್ವಜನಪಕ್ಷಪಾತ, ಹುಳುಕುಗಳು ಮತ್ತು ಬಣ್ಣದ ಭ್ರಮಾಲೋಕದ ಒಳಗಿನ ಕಟುಸತ್ಯಗಳು ಒಂದೊಂದಾಗಿ ಹೊರ ಬರತೊಡಗಿದೆ.

ಹಿನ್ನೆಲೆ ಏನು?

ಸುಶಾಂತ್ ಸಿಂಗ್ ರಾಜಪೂತ್- ಒತ್ತಡ ತಾಳಲಾರದೆ ಆತ್ಮಹತ್ಯೆ?ಒಂದಷ್ಟು ನಟರು ಸುಶಾಂತ್ ಸಿಂಗ್ ಪರವಾಗಿ ಧ್ವನಿಸೇರಿಸಿ ಮಾತನಾಡಲು ಆರಂಭಿಸಿದ್ದಾರೆ. ಇದೇನು ಬಾಲಿವುಡ್‍ನ ಮೊದಲ ಆತ್ಮಹತ್ಯೆಯಲ್ಲ. ಈ ಹಿಂದೆಯೂ ಹಲವಾರು ಆತ್ಮಹತ್ಯೆ ನಡೆದಿತ್ತು. ಮುಂದೆಯೂ ನಡೆಯುತ್ತಲೇ ಇರುತ್ತದೆ. ಆದರೆ ಇದು ಯಾಕಾಗಿ ನಡೆಯುತ್ತದೆ ಎಂಬುದಂತೂ ಚಿದಂಬರ ರಹಸ್ಯವಾಗಿಯೇ ಎಲ್ಲರನ್ನೂ ಕಾಡುತ್ತದೆ. ಬಾಲಿವುಡ್ ಎನ್ನುವುದು ಒಂದು ಅಗಾಧವಾದ ಸಮುದ್ರವಿದ್ದಂತೆ. ವಿಶಾಲವಾದ ಸಮುದ್ರದಲ್ಲಿ ಈಜಿ ಜಯಿಸುವುದು ಅಷ್ಟು ಸುಲಭವಲ್ಲ. ಬರೀ ಪ್ರತಿಭೆಯಿದ್ದರೆ ಸಾಲದು. ಇತರ ಅರ್ಹತೆಗಳೂ ಇರಬೇಕು ಎನ್ನುವುದು ಎಲ್ಲರಿಗೂ ತಿಳಿದ ಕಟು ಸತ್ಯ. ಚಮಚಾಗಿರಿ, ಚೇಲಾಗಿರಿ ಮತ್ತು ಜೀ ಹುಜೂರ್ ಮುಂತಾದ ಸಕಲ ಗುಣಗಳನ್ನು ಮೈಗೂಡಿಸಿಕೊಂಡಲ್ಲಿ ಬಹಳ ಬೇಗನೆ ಬೆಳೆಯಬಹುದು ಎಂದು ಇತಿಹಾಸದಿಂದ ನಮಗೆ ತಿಳಿದಿದೆ. ಬಾಲಿವುಡ್‍ನಲ್ಲಿ ಬಹಳ ವರ್ಷಗಳಿಂದ ಕಪೂರ್‍ಗಳು, ಖಾನ್‍ಗಳು ಮತ್ತು ಛೋಪ್ರಾಗಳು ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಮತ್ತು ಬಹಳಷ್ಟು ನಿಯಂತ್ರಣ ಸಾಧಿಸಿದೆ.

ಬಾಲಿವುಡ್‍ನಲ್ಲಿ ಯಾರೇ ಹೊಸಬರು ಬಂದರೂ ಅವರನ್ನು ತುಳಿಯುವ ಪ್ರಯತ್ನ ನಿರಂತರ ನಡೆಯುತ್ತದೆ ಎಂಬುದು ಹೊಸ ನಟರ ಒಮ್ಮತದ ಅಭಿಪ್ರಾಯ. ಹೊರಗಿನಿಂದಲೇ ಬಾಲಿವುಡ್‍ನ್ನು ನಿಯಂತ್ರಿಸುವ ವ್ಯಕ್ತಿಗಳಿಗೆ ಸಲಾಮು ಹಾಕುತ್ತಾ ಅವರ ಬೇಕು ಬೇಡಗಳ ಸುತ್ತ ಗಿರಕಿ ಹೊಡೆಯುತ್ತಾ ಅವರನ್ನು ಸಂತಸಪಡಿಸಿದಲ್ಲಿ ಮಾತ್ರ ಹೆಚ್ಚು ಹೆಚ್ಚು ಅವಕಾಶಗಳು ಮತ್ತು ದೊಡ್ಡ ಬ್ಯಾನರಿನ ಚಿತ್ರಗಳು ಸುಲಭವಾಗಿ ಸಿಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಯಾವಾಗ ಅವರನ್ನು ನಿರ್ಲಕ್ಷಿಸಿ ತಮ್ಮದೇ ಸ್ವಂತ ಪರಿಶ್ರಮ, ಪ್ರತಿಭೆಯಿಂದ ಮೇಲೆ ಬರಲು ಹೊಸ ನಟರು ಆರಂಭಿಸಿದಾಗ ಈ ಚಿತ್ರ ರಂಗದ ಅನಭಿಷಿಕ್ತ ದೊರೆಗಳು ತಮ್ಮ ಪ್ರಭಾವವನ್ನು ಬಳಸಿ ಪ್ರತಿಭಾವವಂತ ಹೊಸ ನಟರಿಗೆ ಅವಕಾಶ ಸಿಗದಂತೆ ನೋಡಿಕೊಳ್ಳುತ್ತಾರೆ. ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಸಿಗುವಂತೆ ನೋಡಿಕೊಳ್ಳುತ್ತಾರೆ. ತಮ್ಮ ವಂಶದ ಕುಡಿಗಳಿಗೆ ಮಾತ್ರ ಅವಕಾಶ ಸಿಗುವಂತೆ ನೋಡುತ್ತಾರೆ. ಪ್ರತಿಭೆ ಇದ್ದವರನ್ನು ಬದಿಗೆ ತಳ್ಳಿ ಅವರಿಗೆ ಸಿಕ್ಕಿದ ಅವಕಾಶಗಳನ್ನು ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಯಾರೋ ಹೊಸ ನಟರು ತಮ್ಮ ಪ್ರತಿಭೆಯಿಂದ ಮೇಲೆ ಬಂದು ಹಿಟ್ ಚಿತ್ರ ನೀಡಿದಾಗ ತಮ್ಮ ಪ್ರಭಾವ ಬಳಸಿ ಮತ್ತೆ ಅವರಿಗೆ ಅವಕಾಶ ಸಿಗದಂತೆ ನೋಡಿಕೊಳ್ಳುತ್ತಾರೆ. ಈ ಕಾರಣದಿಂದ ‘ಚಿಚ್ಚೋರಿ’, ‘ಎಂ.ಎಸ್. ಧೋನಿ’ ಎಂಬ ಹಿಟ್ ಚಿತ್ರ ನೀಡಿದ ಸುಶಾಂತ್ ಸಿಂಗ್ ರಾಜಪೂತ್‍ಗೆ ಮತ್ತೆ ಅವಕಾಶ ಸಿಗದಂತೆ ಬಾಲಿವುಡ್‍ನ ಅಗೋಚರ ಶಕ್ತಿಗಳು ನೋಡಿಕೊಂಡವು. ಸಿಕ್ಕಿದ 11 ಅವಕಾಶಗಳನ್ನು ತಪ್ಪಿ ಹೋಗುವಂತೆ ಮಾಡಿದರು ಎಂಬುದು ಬಾಲಿವುಡ್ ಪಡಸಾಲೆಯಲ್ಲಿ ಗುಸು ಗುಸು ಹಸಿಬಿಸಿ ಸುದ್ದಿ. ಬಹಳಷ್ಟು ಕನಸಿನ ಮೂಟೆಗಳನ್ನು ಹೊತ್ತುಕೊಂಡು ಬಾಲಿವುಡ್‍ಗೆ ಬಂದು ಕಠಿಣ ಪರಿಶ್ರಮದ ಛಾಪನ್ನು ಮೂಡಿಸಿ ಯುವಜನರ ಕಣ್ಮಣಿಯಾಗಿ ಸುಶಾಂತ್ ಸಿಂಗ್ ರಾಜಪೂತ್ ಎಲ್ಲ ಅವಕಾಶಗಳನ್ನು ಬಾಚತೊಡಗಿದಾಗ ಸಹಜವಾಗಿಯೇ ಬಾಲಿವುಡ್‍ನ ಅನಭಿಷಿಕ್ತ ದೊರೆಗಳಿಗೆ ಅಭದ್ರತೆ ಕಾಡತೊಡಗಿತ್ತು.

ಇದರ ಜೊತೆಗೆ ಸುಶಾಂತ್‍ಸಿಂಗ್ ಯಾರಿಗೂ ಡೊಗ್ಗು ಸಲಾಮು ಹಾಕದೆ, ಯಾರ ತಂಟೆಗೂ ಹೋಗದೆ ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ. ಆದರೆ ಬಾಲಿವುಡ್‍ನ ಅಗೋಚರ ಶಕ್ತಿಗಳು ಸುಶಾಂತ್ ಸಿಂಗ್‍ನನ್ನು ತಮ್ಮ ಒಳ ವಲಯಕ್ಕೆ ಸೇರಿಸಿಕೊಳ್ಳಲು ತಯಾರಿರಲೇ ಇಲ್ಲ. ಇದು ಸುಶಾಂತ್ ಸಿಂಗ್‍ಗೆ ಅರ್ಥವಾಗಿತ್ತು. ಆದರೆ ಅದಾಗಲೇ ಕಾಲ ಮಿಂಚಿಹೋಗಿತ್ತು. ಸಿಕ್ಕಿದ 11 ಚಿತ್ರಗಳು ಕಾರಣವಿಲ್ಲದೆ ಅಗೋಚರ ಶಕ್ತಿಗಳ ಪ್ರಭಾವದಿಂದಾಗಿ ತಪ್ಪಿಹೋಗಿತ್ತು. ಇದನ್ನೇ ಸುಶಾಂತ್ ತನ್ನ ಟ್ವೀಟರ್ ಖಾತೆಯಲ್ಲಿ ನೋವಿನಿಂದ, ಹತಾಶೆಯಿಂದ ಹಲವಾರು ಬಾರಿ ಹಂಚಿಕೊಂಡಿದ್ದ. ಬಾಲಿವುಡ್‍ನ ಹಲವಾರು ಹೈ ಪ್ರೋಪೈಲ್ ಪಾರ್ಟಿಗಳಿಗೆ ಸುಶಾಂತ್‍ನಂತಹಾ ಪ್ರತಿಭಾವಂತ ನಟನಿಗೆ ಆಹ್ವಾನವೇ ಇರುತ್ತಿರಲಿಲ್ಲ. ಹಿಂದಿ ಚಿತ್ರರಂಗ ಆತನನ್ನು ಹೊರಗಿನವನಂತೆ ಕಾಣುತ್ತಿತ್ತು. ಕಿರುತೆರೆಯಿಂದ ಬಂದ ನಟ ಎಂಬ ತಾತ್ಸಾರ ಭಾವ ಹೆಚ್ಚಿನವರಲ್ಲಿ ಇತ್ತು.

ಮನಸ್ಸಿನ ನೆಮ್ಮದಿ ಹಾಳಾಗಿತ್ತು:

sushanth-singh-depressionಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿಥ್ ಕರಣ್’ ಕಾರ್ಯಕ್ರಮದಲ್ಲಿ ಮಹೇಶ್ ಭಟ್ ಮಗಳಾದ ಆಲಿಯಾ ಭಟ್‍ಗೆ ಕರಣ್‍ಜೋಹಾರ್ ರಣಧೀರ್ ಕಪೂರ್, ರಣಬೀರ್ ಸಿಂಗ್  ಮತ್ತು ಸುಶಾಂತ್ ಸಿಂಗ್ ಈ ಮೂವರಲ್ಲಿ ಯಾರ ಜೊತೆ ಡೇಟಿಂಗ್ ಮಾಡಲು ಇಷ್ಟಪಡುತ್ತೀರಿ ಎಂದು ಕೇಳಿದಾಗ ಆಲಿಯಾ ಭಟ್ ಯಾರು ಸುಶಾಂತ್ ಸಿಂಗ್ ರಾಜಪೂತ್ ಎಂಬ ಉಡಾಫೆಯ ಮತ್ತು ಸೊಕ್ಕಿನ ಉತ್ತರ ನೀಡಿದಳು. ಅವಾಗಲೇ ಹೆಚ್ಚಿನ ಬಾಲಿವುಡ್ ನಟನಟಿಯರಿಗೆ ಸುಶಾಂತ್ ಸಿಂಗ್‍ನ ನಟನಾ ಕೌಶಲ್ಯ ಮತ್ತು ಪ್ರತಿಭೆಯಿಂದಾಗಿ ನಿದ್ದೆಯಿಲ್ಲದ ರಾತ್ರಿಗಳು ಉಂಟಾಗಿದೆ ಎಂದು ಸಾಬೀತಾಗಿತ್ತು. ಒಟ್ಟಿನಲ್ಲಿ ಯಾವುದೇ ಗಾಢ್‍ಫಾದರ್ ಇಲ್ಲದೆ ಯಾವ ಅಡ್ಡ ದಾರಿ ಹಿಡಿಯದೇ ತನ್ನದೇ ಪ್ರತಿಭೆ, ನೃತ್ಯ ಸಾಮಥ್ರ್ಯ ಮತ್ತು ಸಾಧನೆಯಿಂದ ಮೇಲೆ ಬಂದ ಸುಶಾಂತ್ ಸಿಂಗ್‍ಗೆ ತನ್ನದೇ ಮನೆಯಲ್ಲಿ ಹೊರಗಿನವರಂತೆ ಇರಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.

ಇದ್ದ ಅವಕಾಶಗಳು ಬಾಲಿವುಡ್‍ನ ದೊಡ್ಡ ಕುಳಗಳ ಸಣ್ಣ ಮನಸ್ಸಿನಿಂದ ಮತ್ತು ಸ್ವಜನಪಕ್ಷಪಾತದಿಂದಾಗಿ ತಪ್ಪಿ ಹೋಗಿತ್ತು. ಕನಸು ಮತ್ತು ಕಲ್ಪನೆಯೊಂದಿಗೆ ಬಾಲಿವುಡ್‍ವೇರಿ ಇನ್ನೇನು ತನ್ನ ಕನಸುಗಳು ನನಸಾಗಿ ಜೀವನ ಒಂದು ಹದಕ್ಕೆ ಬಂದು ನಿಂತಾಗ ನಿಟ್ಟುಸಿರು ಬಿಡುವಾಗ, ಬಂದ ಅವಕಾಶಗಳೆಲ್ಲಾ ಒಂದೊಂದಾಗಿ ತಪ್ಪಿ ಹೋಗಿ ಸ್ವಜನಪಕ್ಷಪಾತಕ್ಕೆ ತನ್ನದ್ದಲ್ಲದ ತಪ್ಪಿಗೆ ಬಲಿಯಾಗಿ ಕನಸಿನ ಸಾಥ್‍ಗಳು ಕಳಚಿ ಬಿದ್ದಾಗ ಸುಶಾಂತ್‍ಸಿಂಗ್ ರಾಜಪೂತ್ ಮಾನಸಿಕವಾಗಿ ಬಹಳ ಕುಗ್ಗಿಹೋದ. ಸಣ್ಣ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯೊಂದಿಗಿನ ಮನಸ್ತಾಪ, ದೀರ್ಘಕಾಲದ ಗೆಳತಿಯೊಂದಿಗಿನ ಜಗಳ, ಮಾಜಿ ಮ್ಯಾನೇಜರ್ ಆತ್ಮಹತ್ಯೆ ಎಲ್ಲವೂ ಒಟ್ಟಾಗಿ ಆತನನ್ನು ತೀವ್ರವಾಗಿ ಕಾಡತೊಡಗಿತ್ತು. ಆತನ ಕನಸುಗಳೆಲ್ಲಾ ನುಚ್ಚುನೂರಾಗ ತೊಡಗಿತ್ತು. ಆತನ ಅಗಾಧ ಪ್ರತಿಭೆ ಮತ್ತು ಛಲವೇ ಆತನ ಶತ್ರುವಾಗಿ ಕಾಡತೊಡಗಿತ್ತು.

ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲದಿಂದಲೇ ಬಂದು ಸಾಧಿಸಲು ಆರಂಭಿಸಿದಾಗಲೇ ವಿಘ್ನಗಳು ಸಾಲುಸಾಲಾಗಿ ಬರತೊಡಗಿತ್ತು. ಕೈಗೆ ಸಿಕ್ಕಿದ ಅವಕಾಶ ಬಾಯಿಗೆ ಬರಲೇ ಇಲ್ಲ. ಕಾರು, ಬಂಗಲೆ, ಆಳುಕಾಳು ಇದ್ದರೂ ಖರ್ಚು ಮಾಡಿದಷ್ಟು ಮುಗಿಯದ ಹಣ ಇದ್ಯಾವುದೂ ಆತನಿಗೆ ನೆಮ್ಮದಿ ನೀಡಲಿಲ್ಲ. ಅಭದ್ರತೆ ಕಾಡತೊಡಗಿತ್ತು. ನಿಂತ ನೆಲವೇ ಕುಸಿದಂತೆ ಭಾಸವಾಗಿತ್ತು. ಸೋಲನ್ನು ಸವಾಲಾಗಿ ಸ್ವೀಕರಿಸಿ ಜಗತ್ತನ್ನು ಎದುರಿಸಿ ಸಾಧಿಸಿ ತೋರಿಸಬೇಕು ಎಂಬ ಸಂದೇಶವನ್ನು ಯುವಜನತೆಗೆ ನೀಡಿ ಯುವಜನರ ಕಣ್ಮಣಿಯಾಗಿ ಬೆಳೆದಿದ್ದ ಸುಶಾಂತ್‍ಸಿಂಗ್ ತನಗರಿವಿಲ್ಲದೇ ಬಾಲಿವುಡ್‍ನ ಮೋಸದ ಹುನ್ನಾರಕ್ಕೆ ಸಿಲುಕಿ ವಿಲವಿಲನೆ ಒದ್ದಾಡತೊಡಗಿದ್ದ. ಮನಸ್ಸಿನ ನೆಮ್ಮದಿ ಹಾಳಾಗಿತ್ತು. ಎಲ್ಲವೂ ಇದ್ದರೂ ಏನೂ ಇಲ್ಲದವರ ರೀತಿ ಆತನ ಬದುಕು ಆಗಿತ್ತು. ಜೀವನ ಶಾಶ್ವತವಲ್ಲ, ಎಲ್ಲವೂ ನಶ್ವರ ಎಂಬ ಸತ್ಯದ ಅರಿವು ಆತನಿಗೆ ಬಹಳ ಬೇಗನೆ ಅರಿವಾಗಿತ್ತು. ಇನ್ನು ಈ ಜಗತ್ತಿನ ಕಪಟ ನಾಟಕ ಸೂತ್ರಧಾರರ ಜೊತೆ ಹೊಯ್ದಾಟ ಮಾಡುವುದರ ಬದಲು ಶಾಶ್ವತವಾಗಿ ಸಮಸ್ಯೆಗೆ ಪರಿಹಾರ ಸಾವು ಎಂಬ ತಪ್ಪು ನಿರ್ಧಾರಕ್ಕೆ ಬಂದೇ ಬಿಟ್ಟಿದ್ದ. ಹಿಂದಿ ಚಿತ್ರರಂಗ ಒಂದು ಅದ್ಭುತ ಪ್ರತಿಭೆಯನ್ನು ಶಾಶ್ವತವಾಗಿ ಕಳೆದುಕೊಂಡಿತ್ತು. ಹಿಂದಿ ಚಿತ್ರರಂಗದ ಆಗಸದಲ್ಲಿ ಸುಶಾಂತ್ ಸಿಂಗ್ ಎಂಬ ಮಿನುಗು ತಾರೆಯ ಆಟ ಅಲ್ಲಿಗೆ ಮುಕ್ತಾಯವಾಗಿತ್ತು.

ಕೊನೆಮಾತು:

ವರದಿಗಳ ಪ್ರಕಾರ ಸುಶಾಂತ್ ಸಿಂಗ್ ರಾಜಪೂತ್ ಅವರ ಬಳಿ ಇದ್ದ ಸಂಪತ್ತಿನ ಒಟ್ಟು ಮೌಲ್ಯ 60 ಕೋಟಿ, ಚಿತ್ರವೊಂದಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆಯುತ್ತಿದ್ದರು ಮತ್ತು ಜಾಹೀರಾತುಗಳ ಶೂಟಿಂಗ್‍ಗೆ ಸುಮಾರು ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಮುಂಬಯಿಯಲ್ಲೊಂದು ಐಷಾರಾಮಿ 20 ಕೋಟಿಯ ಪಂಟ್‍ಹೌಸ್, ಐಷಾರಾಮಿ ನಾಲ್ಕೈದು ಕಾರುಗಳು,  ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ರೀತಿ ಬದುಕುತ್ತಿದ್ದ ಪ್ರತಿಭಾವಂತ ಸುಶಾಂತ್ ಆಗಿದ್ದ. ತಾನು ಕನಸು ಕಂಡಿದ್ದ 50 ಕನಸುಗಳ ಪಟ್ಟಿ ಮಾಡಿ ಒಂದೊಂದಾಗಿ ಅವೆಲ್ಲವನ್ನೂ ನನಸಾಗಿಸುತ್ತಾ ದಾಪುಗಾಲು ಹಾಕುತ್ತಾ ಬಾಲಿವುಡ್‍ನಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದ್ದ. ಆದರೆ ವಿಧಿ ಬರಹ ಬೇರೆಯೇ ಇತ್ತು. ಆತನ ವೇಗೋತ್ಕರ್ಷದ ಏಳಿಗೆಯನ್ನು ಬಾಲಿವುಡ್‍ನ ಸ್ವಯಂಘೋಷಿತ ಅನಭಿಷಿಕ್ತ ಸ್ವಜನಪಕ್ಷಪಾತಿ ದೊರೆಗಳು ಒಪ್ಪಲು ತಯಾರಿರಲೇ ಇಲ್ಲ. ಆತನ ಎಲ್ಲ ಚಿತ್ರಗಳಿಗೆ ಅಡ್ಡಿಪಡಿಸಲಾರಂಭಿಸಿದರು.

ಆರು ತಿಂಗಳಲ್ಲಿ ಸಹಿ ಹಾಕಿದ 6 ಚಿತ್ರಗಳನ್ನು ಮೇಲಿಂದ ಮೇಲೆ ಕಳೆದುಕೊಂಡ ಸುಶಾಂತ್ ಸಿಂಗ್ ರಾಜಪೂತ್ ಧರೆಗಿಳಿದುಹೋಗಿದ್ದು, ಜೊತೆಗಿದ್ದ ಜೀವನ ಗೆಳತಿಯೂ ದೂರವಾದಾಗ ಖಿನ್ನತೆಗೊಳಗಾಗಿ ಔಷಧಿಯ ಮೊರೆಹೋಗಿದ್ದ. ತನ್ನ ಮನದಾಳದ ನೋವನ್ನು ಟ್ವಿಟರ್ ಮುಖಾಂತರ ನಿರಂತರವಾಗಿ ಹೊರಹಾಕುತ್ತಿದ್ದ. ತನ್ನ ಸಾವಿನ ಎರಡು ದಿನಗಳ ಮೊದಲು 2002ರಲ್ಲಿ ತನ್ನಿಂದ ದೂರವಾದ ತಾಯಿಯ ಭಾವಚಿತ್ರದ ಜೊತೆಗೆ ತನ್ನ ಭಾವಚಿತ್ರವನ್ನು ಹಾಕಿ ಹೀಗೆ ಬರೆದುಕೊಂಡಿದ್ದ. “ಕಳೆದು ಹೋದ ಮುಖ್ಯವಾದ ದಿನಗಳು ಕಣ್ಣೀರಿನ ಜೊತೆಗೆ ಆವಿಯಾಗುತ್ತಿದೆ. ನವನವೀನ ಕನಸುಗಳು ಮತ್ತಷ್ಟು ಮುಗುಳು ನಗೆ ತರಿಸುತ್ತಿದೆ ಮತ್ತು ಕ್ಷಣಿಕ ಜೀವನವನ್ನು ಕೆತ್ತನೆ ಮಾಡುತ್ತಿದೆ. ಇವೆರಡರ ನಡುವಿನ ಕೊಂಡಿಯಾಗಿ ನನ್ನ ಜೀವನ ರಥ ಸಾಗುತ್ತಿದೆ, ಅಮ್ಮಾ ನಿನ್ನ ನೆನಪಾಗುತ್ತದೆ” ಎಂದು ತನ್ನ ಇನ್‍ಸ್ಟ್ರಾಗ್ರಾಂ ಪೇಜ್‍ನಲ್ಲಿ ತನ್ನ ಮನದಾಳದ ನೋವನ್ನು ಹೊರಹಾಕಿದ್ದ.

ಇದಾಗಿ ನಾಲ್ಕೇ ದಿನದಲ್ಲಿ ಸುಶಾಂತ್ ಸಿಂಗ್ ರಾಜಪೂತ್ ಎಂಬ ಪ್ರತಿಭಾನ್ವಿತ, ಸುಶಿಕ್ಷಿತ ಮತ್ತು ಮೇಧಾವಿ ನಟನೊಬ್ಬ ಆತ್ಮಹತ್ಯೆಗೆ ಶರಣಾಗಿ ಬಾಲಿವುಡ್‍ನ ಸ್ವಜನಪಕ್ಷಪಾತಕ್ಕೆ ಜೀವಂತ ಸಾಕ್ಷಿಯಾಗಿ ಬಾಲಿವುಡ್‍ನ ಕರಾಳ ಮುಖವನ್ನು ಹೊರಜಗತ್ತಿಗೆ ತೆರೆದಿಟ್ಟಿದ್ದಾನೆ. ಜೀವನದುದ್ದಕ್ಕೂ ತನ್ನನ ನೇರ, ದಿಟ್ಟ ಮತ್ತು ಸತ್ಯಸಂಧತೆಗಾಗಿ ಬದುಕಿ ಸಾವಿನಲ್ಲೂ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿ ಥಳಕು ಬಳುಕಿನ ಬಾಲಿವುಡ್‍ನ ದೊಡ್ಡ ಮನುಷ್ಯರ ಸಣ್ಣತನವನ್ನು ಬಯಲು ಮಾಡಿ ಬರಲಾರದ ಲೋಕಕ್ಕೆ ನಡೆದೇ ಬಿಟ್ಟಿದ್ದ. ಚಿತ್ರರಂಗಕ್ಕೆ ಬಂದು ಕೇವಲ 5 ವರ್ಷಗಳಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಸೃಷ್ಟಿಸಿಕೊಂಡು ಬರೀ ನಟನೆಯಿಂದಲೇ ಜನಮನವನ್ನು ಗೆದ್ದ ಈ ಪ್ರತಿಭಾವಂತ ನಟನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ. ಇನ್ನಾದರೂ ಬಾಲಿವುಡ್‍ನ ದೊಟ್ಟ ಕುಳಗಳು ತನ್ನ ಹುಳುಕುತನವನ್ನು ಬಿಟ್ಟು ಸ್ವಜನಪಕ್ಷಪಾತ ಬದಿಗಿರಿಸಿ ನೈಜ ಪ್ರತಿಭೆಗಳಿಗೆ ಅವಕಾಶ ನೀಡಲಿ ಎಂದು ಆಶಿಸೋಣ. ಅದುವೇ ಸುಶಾಂತ್ ಸಿಂಗ್ ರಾಜಪೂತ್‍ಗೆ ಸಲ್ಲಿಸುವ ದೊಡ್ಡ ಗೌರವ ಎಂದರೆ ತಪ್ಪಾಗಲಾರದು.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!