ಹೆರಿಗೆ ನಂತರದ ಖಿನ್ನತೆ – ಬೇಬಿ ಬ್ಲೂಸ್

ಹೆರಿಗೆ ನಂತರದ ಖಿನ್ನತೆ – ಬೇಬಿ ಬ್ಲೂಸ್ ಸಹಜವಾಗಿಯೇ ಹಲವು ಮಹಿಳೆಯರಲ್ಲಿ ಕಂಡುಬರುತ್ತದೆ. ಹೆರಿಗೆ ನಂತರ ಉಂಟಾಗುವ ಯಾವುದೇ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ನಿರ್ಲಕ್ಷಿಸಲೇ ಬಾರದು.  ಪದೇ ಪದೇ ಕಾಣುವ ಖಿನ್ನತೆ, ಹತಾಶೆ ಮನೋಭಾವ, ಆತ್ಮಹತ್ಯೆ ಪ್ರಚೋದನೆ ಹಾಗೂ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಮಾಡಬಾರದು. ತಕ್ಷಣವೇ ಮನೋ ವೈದ್ಯರ ಸಲಹೆ ಹಾಗೂ ಕುಟುಂಬಸ್ಥರ ಸಾಂತ್ವನ ಹಾಗೂ ನೈತಿಕ ಬೆಂಬಲ ಅತೀ ಅಗತ್ಯವಾಗಿರುತ್ತದೆ.

hHerige-nantarada-khinnate-Babyblues.

ಹೆರಿಗೆ ನಂತರದ ಖಿನ್ನತೆ ಸಹಜವಾಗಿಯೇ ಹಲವು ಮಹಿಳೆಯರಲ್ಲಿ ಕಂಡುಬರುತ್ತದೆ. ಒಂದು ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 22% ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹೆರಿಗೆ ನಂತರ ರಸದೂತಗಳ ಸ್ರವಿಸುವಿಕೆಯು ಹೆರಿಗೆ ಮೊದಲಿನ ಪ್ರಮಾಣಕ್ಕೆ ಬರುತ್ತದೆ, ಹೆರಿಗೆ ಬಳಿಕ 2 ವಾರದಲ್ಲಿ ಈ ರೀತಿ ರಸದೂತಗಳ ಪ್ರಮಾಣ ಕುಸಿಯುತ್ತದೆ. ಈ ಸಂದರ್ಭದಲ್ಲಿ ಮಹಿಳೆಗೆ ಸಹಜವಾಗಿಯೇ ಮಾನಸಿಕ ತುಮುಲ, ಉದ್ವೇಗ ಮತ್ತು ಹತಾಶೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಗು ಹುಟ್ಟಿದ ಬಳಿಕ ಉಂಟಾಗುವ ಈ ರೀತಿಯ ಮಾನಸಿಕ ಸ್ಥಿತಿಗೆ “ಬೇಬಿ ಬ್ಲೂಸ್ “ಎನ್ನಲಾಗುತ್ತದೆ. ಸುಮಾರು 70% ತಾಯಂದಿರು ಈ ಸಮಸ್ಯೆಗೆ ತುತ್ತಾಗುತ್ತಾರೆ ಮತ್ತು ಇದು ಕೆಲವು ವಾರಗಳಿಗೆ ಸೀಮಿತವಾಗಿ ಆಪ್ತ ಸಮಾಲೋಚನೆಯಿಂದ, ಕುಟುಂಬಸ್ಥರ ಸಹಾಯದಿಂದ ಅಥವಾ ತನ್ನಿಂದ ತಾನೇ ಸರಿಯಾಗಬಹುದು.

ಈ ಸಂದರ್ಭದಲ್ಲಿ ಗುರುತಿಸಿ, ಮಾನಸಿಕ ಸಾಂತ್ವನ, ವೈದ್ಯಕೀಯ ಚಿಕಿತ್ಸೆ ನೀಡಬೇಕಾಗುತ್ತದೆ ಇಲ್ಲವಾದಲ್ಲಿ ಶೇಕಡಾ 22ರಷ್ಟು ಮಹಿಳೆಯರಲ್ಲಿ ಈ ಮನೋಸ್ಥಿತಿ ಗಂಭೀರ ಸ್ವರೂಪದ ಮಾನಸಿಕ ಖಿನ್ನತೆಯಲ್ಲಿ ಪರ್ಯಯವಾಸವಾಗುತ್ತದೆ. ಕೆಲವೊಮ್ಮೆ ಆತ್ಮಹತ್ಯೆಯವರೆಗೂ ತಲುಪುವ ಸಾಧ್ಯತೆ ಇರುತ್ತದೆ. 2017 ರಲ್ಲಿ ಸುಮಾರು 38 ಅಧ್ಯಯನಗಳ ಪ್ರಕಾರ ಸುಮಾರು 20, 043 ಮಹಿಳೆಯರಲ್ಲಿ ಈ ಖಿನ್ನತೆ ಬಗ್ಗೆ ಸರ್ವೆ ನಡೆಸಲಾಗಿತ್ತು. ಇದರ ಪ್ರಕಾರ 25 ಶೇಕಡಾಕ್ಕಿಂತ ಹೆಚ್ಚು ಮಹಿಳೆಯರು ಈ ಖಿನ್ನತೆಗೆ ತುತ್ತಾಗಿರುವುದು ತಿಳಿದು ಬಂದಿದೆ. ಹೆರಿಗೆ ನಂತರ ಉಂಟಾಗುವ ರಸದೂತಗಳ ಏರಿಳಿತದಿಂದಾಗಿ ಮೆದುಳಿನಲ್ಲಿ ಮತ್ತು ಇತರ ಜೀವಕೋಶಗಳಲ್ಲಿ ಸಹಜವಾಗಿಯೇ ಜೈವಿಕ ಪ್ರಕ್ರಿಯೆಗಳು ನಿಧಾನಗೊಂಡು ಮಾನಸಿಕ ಉದ್ವೇಗ, ಆವೇಶ, ಹತಾಶೆ ನಿದ್ರಾಹಿನತೆಗಳಿಗೆ ಕಾರಣವಾಗುತ್ತದೆ ಎಂದೂ ಅಧ್ಯಯನಗಳಿಂದ ತಿಳಿದು ಬಂದಿದೆ.

ಲಕ್ಷಣಗಳು ಏನು?

1. ಮೂಡ್ ಬದಲಾವಣೆ, ಉದ್ವೇಗ, ದುಖಃ
2. ಮಾನಸಿಕ ಕಿರಿ ಕಿರಿ, ವಿನಾಕಾರಣ ಅಳುವುದು
3. ಕೆಲಸದಲ್ಲಿ ಗಮನವಿಲ್ಲದಿರುವುದು
4. ಅಜೀರ್ಣ ಮತ್ತು ಹಸಿವಿಲ್ಲದಿರುವುದು
5. ನಿದ್ರಾಹೀನತೆ ಮತ್ತು ಮಾನಸಿಕ ತುಮುಲತೆ

ಈ ಎಲ್ಲಾ ಲಕ್ಷಣಗಳು ಆರಂಭಿಕ ಹಂತದಲ್ಲಿ ಹೆರಿಗೆ ನಂತರ ಒಂದೆರಡು ವಾರಗಳಲ್ಲಿ ಕಂಡುಬರುತ್ತದೆ. ಈ ಹಂತದಲ್ಲಿ ಗುರುತಿಸಿ ಸಾಂತ್ವನ ಹಾಗೂ ಆಪ್ತ ಸಮಾತೋಲನೆ ಮಾಡದೇ ಇದ್ದಲ್ಲಿ ಖಿನ್ನತೆಯ ಹಂತಕ್ಕೆ ಮುಂದುವರೆಯಬಹುದು. ಮುಂದುವರೆದ ಹಂತದಲ್ಲಿ ಮೇಲೆ ತಿಳಿಸಿದ ಎಲ್ಲಾ ಲಕ್ಷಣಗಳು ಹೆಚ್ಚು ತೀವ್ರ ರೂಪದಲ್ಲಿ ಕಾಡುವ ಸಾಧ್ಯತೆ ಇರುತ್ತದೆ.

6. ಮಗುವಿನ ಜೊತೆ ಯಾವುದೇ ಮಾನಸಿಕ ಆತ್ಮೀಯತೆ ಇಲ್ಲದಿರುವುದು.
7. ಕುಟುಂಬಸ್ಥರು, ಪೋಷಕರು ಹಾಗೂ ಪತಿಯಿಂದ ದೂರವಾಗಿ ಏಕಾಂಗಿಯಾಗಿ ಇರುವುದು.
8. ಅತಿಯಾದ ಮೂಡ್ ಬದಲಾವಣೆ, ವಿಪರೀತವಾಗಿ ಅಳುವುದು, ಕಾರಣವಿಲ್ಲದೆ ರೇಗಾಡುವುದು ಕಾಣಿಸಿಕೊಳ್ಳುತ್ತದೆ.
9. ಅತಿಯಾದ ಹಸಿವು ಹಾಗೂ ಅತಿಯಾಗಿ ತಿನ್ನುವುದು ಕೆಲವೊಮ್ಮೆ ಹಸಿವಿಲ್ಲದಿರುವುದು.
10. ವಿಪರೀತ ಸುಸ್ತು, ರಕ್ತಹೀನತೆ ಮತ್ತು ಎಲ್ಲಾ ಕೆಲಸದಲ್ಲಿ ನಿರಾಸಕ್ತಿ.
11. ಅತಿಯಾಗಿ ನಿದ್ರಿಸುವುದು ಮತ್ತು ಅತಿಯಾದ ನಿದ್ರಾಹೀನತೆ ಎರಡೂ ಕಾಣಿಸಿಕೊಳ್ಳಬಹುದು.
12. ಏಕಾಂಗಿತನ, ಅಸಹಾಯಕತೆ, ಅಪರಾಧಿ ಭಾವ, ತಪ್ಪಿತಸ್ಥ ಭಾವ ಉಪಯೋಗ ಶೂನ್ಯ ಭಾವನೆ ಕಾಣಿಸಿಕೊಳ್ಳುವುದು
13. ಮಾನಸಿಕ ಕಿರಿಕಿರಿ, ಯೋಚನಾ ಸಾಮಥ್ರ್ಯ ಕುಗ್ಗುವಿಕೆ, ನಿರ್ಣಯ ತೆಗೆದುಕೊಳ್ಳದಿರುವುದು
14. ಪದೇ ಪದೇ ಸಾವಿನ ಬಗ್ಗೆ ಯೋಚಿಸುವುದು ಮತ್ತು ಅದರ ಬಗ್ಗೆ ಹೆಚ್ಚು ಮಾತನಾಡುವುದು
15. ತನಗೆ, ತನ್ನವರಿಗೆ ಹಾಗೂ ಮಗುವಿಗೆ ಗಾಯಗೊಳಿಸುವ ಪ್ರವೃತ್ತಿ ಕಂಡು ಬರಲೂ ಬಹುದು
16. ತಾವು ಉತ್ತಮ ತಾಯಿ ಅಲ್ಲ ಎಂಬ ಹತಾಶಾ ಭಾವ ಮಾಡುವುದು
17. ಜೀವನದಲ್ಲಿ ನಿರಾಸಕ್ತಿ, ತಾನು ಮೊದಲು ಖುಷಿಪಟ್ಟು ಮಾಡುತ್ತಿದ್ದ ಕೆಲಸಗಳನ್ನು ದ್ವೇಷಿಸುವುದು ಉದಾಹರಣೆಗೆ ಓದುವುದು, ಟಿವಿ ನೋಡುವುದು ಹರಟೆ ಹೊಡೆಯುವುದು ಇತ್ಯಾದಿ

ಈ ಹಂತದಲ್ಲಿ ತಕ್ಷಣವೇ ವೈದ್ಯರ ಬಳಿ ತೋರಿಸಿ ಆಪ್ತ ಸಮಾಲೋಚನೆ ಅತೀ ಅಗತ್ಯ, ಮನೋ ವೈದ್ಯರಿಂದ ದೈರ್ಯ ನೀಡಿ, ಕುಟುಂಬಸ್ಥರು ಹಾಗೂ ಪತಿ ಮಾನಸಿಕ, ನೈತಿಕ ಬೆಂಬಲ ನೀಡಬೇಕು.

18. ತಾನು ಎಲ್ಲಿದ್ದೇನೆ ಏನು ಮಾಡುತ್ತಿದ್ದೇನೆ ಎಂಬೂದರ ಪರಿಯೆ ಇಲ್ಲದಿರುವುದು. ತಾನು ಮತ್ತು ತನ್ನ ಮಗುವಿನ ಮೇಲೆ ವಿಪರೀತ ಮೋಹ ಮತ್ತು ಅತಿಯಾದ ವಾತ್ಸಲ್ಯ ಕಂಡುಬರುತ್ತದೆ.
19. ತೀವ್ರ, ಹತಾಶೆ, ದುಖಃ, ಅತಂಕ, ಖಿನ್ನತೆ, ಮಗುವನ್ನು ನೋಡಿಕೊಳ್ಳಲು ಅಸಮರ್ಥತೆ, ಹೆಚ್ಚು ಉಗ್ರವಾಗಿ ಕಾಡಬಹುದು
20. ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಅನಗತ್ಯ ಚಿಂತೆ ಮಾಡುವುದು ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು ಮತ್ತು ಒಂದು ಹಂತದಲ್ಲಿ ಆತ್ಮಹತ್ಯೆ ಪ್ರಯತ್ನವನ್ನೂ ಮಾಡುವ ಸಾಧ್ಯತೆ ಇರುತ್ತದೆ.

ಯಾರಿಗೆ ಈ ಹೆರಿಗೆ ನಂತರದ ಖಿನ್ನತೆ ಬರುವ ಸಾಧ್ಯತೆ ಹೆಚ್ಚಿರುತ್ತದೆ?

1. ಮಹಿಳೆಗೆ ತಾಯಿಯಾದ ಬಳಿಕ ಕುಟುಂಬಸ್ಥರಿಂದ , ಪೋಷಕರಿಂದ, ಪತಿಯಿಂದ ಸೂಕ್ತ ನೈತಿಕ ಬೆಂಬಲ ಸಿಗದಿದ್ದಾಗ ಹೆಂಡತಿ ಮಾತ್ರ ಮನೆಯಲ್ಲಿದ್ದಾಗ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ.

2. ಆರ್ಥಿಕ ಅಡಚಣೆ ಮತ್ತು ಮಗು ಬೇಡದೇ ಇದ್ದಾಗ ಆಕಸ್ಮಿಕವಾಗಿ ಮಗುವಾದಾಗ, ತಂದೆ ತಾಯಿ ಆಗಲು ಸಾಕಷ್ಟು ಮಾನಸಿಕ, ದೈಹಿಕ ಪೂರ್ವ ತಯಾರಿ ಇಲ್ಲದೇ ಇದ್ದಾಗ ಈ ಸಮಸ್ಯೆ ಬರುತ್ತದೆ

3. ಹುಟ್ಟಿದ ಮಗುವಿನ ದೈಹಿಕ ಅಥವಾ ಮಾನಸಿಕ ಆರೋಗ್ಯ ಸರಿ ಇಲ್ಲದೇ ಇದ್ದಾಗ, ಅವಳಿ ಮಕ್ಕಳು ಜನಿಸಿದಾಗ, ಮೊಲೆ ಹಾಲು ನೀಡಲು ಸಮಸ್ಯೆ ಇದ್ದಾಗ ಈ ಸಮಸ್ಯೆ ಕಂಡು ಬರಬಹುದು

4. ಕುಟುಂಬದ ಇತರೆ ಸದಸ್ಯರಲ್ಲಿ ಆತ್ಮಹತ್ಯೆ ಪ್ರವೃತ್ತಿ ಇದ್ದಲ್ಲಿ ಅಥವಾ ತಾಯಿಯಾದ ಮಹಿಳೆಗೆ ಯಾವುದಾದರೂ ಮಾನಸಿಕ ಖಿನ್ನತೆ ಮೊದಲೇ ಇದ್ದಲ್ಲಿ, ಈ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ

5. ಸಣ್ಣ ಪ್ರಾಯದಲ್ಲಿ ಮದುವೆಯಾಗಿ ತಾಯಿಯಾದ ಮಹಿಳೆಗೆ ಯಾವುದೇ ಮಾನಸಿಕ ಸಿದ್ಧತೆ ಇಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಮಗು ಹುಟ್ಟಿ ದೊಡ್ಡ ಜವಾಬ್ದಾರಿ ಸಿಕ್ಕಿದಾಗ ಮತ್ತು ಕುಟುಂಬಸ್ಥರಿಂದ ಯಾವುದೇ ಹೆಚ್ಚಿನ ಮಾನಸಿಕ ನೈತಿಕ ಬೆಂಬಲ ಸಿಗದೇ ಇದ್ದಾಗ ಖಿನ್ನತೆ ಹೆಚ್ಚು ಕಂಡುಬರುತ್ತದೆ.

Also Read:ಖಿನ್ನತೆ -ಬೇಡ ಚಿಂತೆ 

ಹೇಗೆ ತಡೆಗಟ್ಟಬಹುದು?

1. ಮದುವೆಯಾದ ಬಳಿಕ, ತಾಯಿಯಾಗುವ ಮೊದಲು ಮಹಿಳೆಗೆ ಸಾಕಷ್ಟು ಮಾನಸಿಕ ತರಬೇತಿಗೆ ತಯಾರಿ ಮತ್ತು ಪೂರ್ವ ಸಿದ್ಥತೆ ಅತೀ ಅಗತ್ಯ. ಮದುವೆಯಾದ ಬಳಿಕ ತಾಯಂದಿರು, ಪೊಷಕರು ಹಾಗೂ ವೈದ್ಯರು ಮದುವೆಯಾದ ಮಹಿಳೆಗೆ ಸಾಕಷ್ಟು ದೈರ್ಯ ತುಂಬಿ ತಾಯ್ತನದ ಜವಾಬ್ದಾರಿಗಳ ಬಗ್ಗೆ ತಿಳಿಹೇಳಬೇಕು.

2. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಯಾದ ಮಹಿಳೆಯ ದೇಹದಲ್ಲಿ ಹಾಗೂ ಮನಸ್ಸಿನಲ್ಲಿ ಉಂಟಾಗುವ ಬದಲಾವಣೆ ಬಗ್ಗೆ ತಿಳಿಹೇಳ ಬೇಕು. ರಸದೂತಗಳ ಪರಿಣಾಮದಿಂದ ಉಂಟಾಗುವ ಮಾನಸಿಕ ತುಮುಲ, ಏರಿಳಿತ, ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಕುಟುಂಬದಲ್ಲಿ ಆತ್ಮಹತ್ಯೆ ಪ್ರವೃತ್ತಿ ಇದ್ದಲ್ಲಿ ಮೊದಲೇ ಅಂತಹಾ ಕುಟುಂಬದ ಮಹಿಳೆಯರನ್ನು ಸಾಕಷ್ಟು ಆಪ್ತ ಸಮಾಲೋಚನೆ ನಡೆಸಿ ಮಾನಸಿಕವಾಗಿ ಕುಗ್ಗದಂತೆ ತಯಾರಿ ಮಾಡಬೇಕು.

3. ಮಗು ಹುಟ್ಟಿದ ಬಳಿಕ ತಾಯಿಯಾದ ಮಹಿಳೆಗೆ ಪತಿ, ಪೋಷಕರು ಮತ್ತು ಕುಟುಂಬಸ್ಥರು ಸಂಪೂರ್ಣ ಸಹಕಾರ ನೀಡಬೇಕು. ಮಗುವನ್ನು ಹೊತ್ತು ಹೆತ್ತು ಸಾಕುವುದು ಬರೀ ತಾಯಿಯಾದವಳ ಕರ್ತವ್ಯ ಮಾತ್ರ ಅಲ್ಲ ಎಂದು ಮನವರಿಕೆ ಮಾಡಿ, ಎಲ್ಲರೂ ಸಾಮೂಹಿಕ ಹೊಣೆಗಾರಿಕೆ ತೆಗೆದುಕೊಳ್ಳಬೇಕು. ತಾಯಿಗಿರುವ ಜವಾಬ್ದಾರಿಯಷ್ಟೇ ಜವಾಬ್ದಾರಿ, ತಂದೆಗೂ ಇರುತ್ತದೆ.

ಇಷ್ಟೆಲ್ಲಾ ಜಾಗ್ರತೆ ವಹಿಸಿದ ಬಳಿಕವೂ ತಾಯಿಯಾದವಳಲ್ಲಿ ಏಕಾಂಗಿತನ, ಹತಾಶೆ ಮತ್ತು ಉದ್ವೇಗ ಕಂಡುಬಂದಲ್ಲಿ ತಕ್ಷಣವೇ ಮನೋ ವೈದ್ಯರ ಬಳಿ ತೋರಿಸಿಕೊಳ್ಳತಕ್ಕದ್ದು. ರೋಗಿಯ ರೋಗದ ಲಕ್ಷಣಗಳು, ರೋಗದ ತೀವ್ರತೆ ಮತ್ತು ರೋಗದ ಚರಿತ್ರೆ, ಮಾನಸಿಕ ಸ್ಥಿತಿಯ ಹಿನ್ನಲೆಯನ್ನು ಅರಿತ ಬಳಿಕ ವೈದ್ಯರು ಸೂಕ್ತ ಚಿಕಿತ್ಸೆ ಆರಂಭದಲ್ಲಿಯೇ ನೀಡಿದಲ್ಲಿ ಮುಂದೆ ಬರುವ ಅನಾಹುತವನ್ನು ತಡೆಗಟ್ಟಲು ಖಂಡಿತಾ ಸಾಧ್ಯವಿದೆ.

ಯಾವಾಗ ವೈದ್ಯರನ್ನು ಕಾಣಬೇಕು?

1. ಲಕ್ಷಣಗಳು ಎರಡು ವಾರಗಳ ಬಳಿಕವೂ ಕಡಿಮೆಯಾಗದಿದ್ದಲ್ಲಿ
2. ಲಕ್ಷಣಗಳು ಮತ್ತಷ್ಟು ಉಗ್ರವಾಗಿ ಮತ್ತು ತೀವ್ರವಾಗಿ ಕಂಡು ಬಂದಲ್ಲಿ
3. ತಾಯಿ ತನ್ನ ಮತ್ತು ಮಗುವಿನ ಆರೈಕೆ ಮಾಡಲು ಸಾಧ್ಯವಾಗದಿದ್ದಾಗ
4. ಮಹಿಳೆ ತನ್ನನ್ನು ಮತ್ತು ಮಗುವನ್ನು ಗಾಯಗೊಳಿಸುವ, ಹಲ್ಲೆ ಮಾಡುವ ಮನೋಸ್ಥಿತಿ ಕಂಡು ಬಂದಲ್ಲಿ
5. ತಾಯಿ ತನ್ನ ದೈನಂದಿನ ಚಟುವಟಿಕೆ ಮಾಡಲು ಸಾಧ್ಯವಾಗದಿದ್ದಾಗ

ಕೊನೆಮಾತು:

ಹೆರಿಗೆ ನಂತರ ಬರುವ ಖಿನ್ನತೆಯ ಸ್ವರೂಪಗಳನ್ನು ಮತ್ತು ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ, ತಜ್ಞರಿಂದ ಚಿಕಿತ್ಸೆ ಪಡೆಯಬೇಕು. ಪ್ರಾಥಮಿಕ ಹಂತದಲ್ಲಿಯೇ, ಪತಿ, ಪೋಷಕರು ಅಥವಾ ಕುಟುಂಬದ ಸದಸ್ಯರು, ಹೆರಿಗೆ ನಂತರ ಮಹಿಳೆಯರಲ್ಲಾಗುವ ಬದಲಾವಣೆಗಳನ್ನು ಗುರುತಿಸಿ, ಆಕೆಗೆ ಮಾನಸಿಕ ಸಾಂತ್ವನ ಮತ್ತು ದೈರ್ಯ ನೀಡಬೇಕು. ಮಗುವಿನ ಆರೈಕೆಯಲ್ಲಿ ಕುಟುಂಬದ ಇತರ ಸದಸ್ಯರು ತಾಯಿಗೆ ಸಹಾಯ ಮಾಡಿ ಮಾನಸಿಕ ಸ್ಥೈರ್ಯವನ್ನು ನೀಡಬೇಕಾಗುತ್ತದೆ. ತಾಯಿಯಾದ ಮಹಿಳೆಯ ಭಾವನೆಗಳ ಏರಿಳಿತವನ್ನು ಸೂಕ್ಮವಾಗಿ ಅರಿತು ಗೌರವಿಸಬೇಕು. ಅಂತಹಾ ಮಹಿಳೆಯರ ದುಃಖಗಳಿಗೆ ಕಿವಿಯಾಗಬೇಕು. ಪತಿ, ಕುಟುಂಬಸ್ಥರ ಬೆಂಬಲದಿಂದ ಈ ರೀತಿಯ ಮಾನಸಿಕ ಖಿನ್ನತೆಯನ್ನು ಎದುರಿಸಲು ಮಹಿಳೆಗೆ ಸಾಧ್ಯವಾಗುತ್ತದೆ. ಹೆರಿಗೆ ನಂತರ ಉಂಟಾಗುವ ಯಾವುದೇ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ನಿರ್ಲಕ್ಷಿಸಲೇ ಬಾರದು.

ಹಲವಾರು ಮಹಿಳೆಯರು ಗರ್ಭವಸ್ಥೆಯಲ್ಲಿರುವಾಗಲೇ ಮುಂದಿನ ತಾಯ್ತನದ ದಿನಗಳ ಬಗ್ಗೆ ಆತಂಕ ಹಾಗೂ ಅವ್ಯಕ್ತ ಭಯ ವ್ಯಕ್ತಪಡಿಸುತ್ತಾರೆ. ಈ ಹಂತದಲ್ಲಿಯೇ ತಾಯ್ತನವನ್ನು ಸಮರ್ಥವಾಗಿ ನಿಭಾಯಿಸಲು ಮಹಿಳೆಯನ್ನು ಮಾನಸಿಕವಾಗಿ ತಯಾರು ಮಾಡಬೇಕು. ಇಲ್ಲ ಪೋಷಕರ, ಪತಿ, ಕುಟುಂಬಸ್ಥರು ಹಾಗೂ ವೈದ್ಯರ ಹೊಣೆಗಾರಿಕೆ ಹೆಚ್ಚಿರುತ್ತದೆ. ಪದೇ ಪದೇ ಕಾಣುವ ಖಿನ್ನತೆ, ಹತಾಶೆ ಮನೋಭಾವ, ಆತ್ಮಹತ್ಯೆ ಪ್ರಚೋದನೆ ಹಾಗೂ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಮಾಡಬಾರದು. ತಕ್ಷಣವೇ ಮನೋ ವೈದ್ಯರ ಸಲಹೆ ಹಾಗೂ ಕುಟುಂಬಸ್ಥರ ಸಾಂತ್ವನ ಹಾಗೂ ನೈತಿಕ ಬೆಂಬಲ ಅತೀ ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ಸಮಸ್ಯೆ ಬಿಗಡಾಯಿಸಿ ಪರಿಸ್ಥಿತಿ ಕೈಮೀರಿ ಹೋಗುವ ಎಲ್ಲಾ ಸಾಧ್ಯತೆ ಇರುತ್ತದೆ.

dr-muralee-mohan

ಡಾ|| ಮುರಲೀ ಮೋಹನ್‍ಚೂಂತಾರು
ಮೊ : 9845135787
Email: drmuraleechoontharu@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!