“ಬಾಡಿಗೆ ತಾಯಿ” – ಬಂಜೆತನದಿಂದ ಬಳಲುವವರಿಗೆ ಒಂದು ವರ

ಮದುವೆ ಆದ ದಂಪತಿಗಳ ಜೀವನದಲ್ಲಿ ಹಣ, ಆಸ್ತಿ, ಅಧಿಕಾರ, ಅಂತಸ್ತು, ವಿದ್ಯೆ, ಬಂಧು-ಮಿತ್ರರು, ಪ್ರೀತಿ ಪಾತ್ರರು ಯಾರೆಲ್ಲಾ, ಏನೆಲ್ಲಾ ಇದ್ದರೂ ವಂಶವನ್ನು ಬೆಳಗಿಸಲು ಮಗುವೊಂದಿಲ್ಲದಿದ್ದರೆ ಬಾಳು ಶೂನ್ಯವೆನಿಸುತ್ತದೆ. ‘ಮಕ್ಕಳಿಲ್ಲದ ಮನೆ ಮನೆಯಲ್ಲ’ ಎಂದು ಜಾನಪದದಲ್ಲಿ ಬರುವ ಮಾತು ನೂರಕ್ಕೆ ನೂರರಷ್ಟು ಸತ್ಯ.
ಮನಸ್ಸಿನಲ್ಲಿ ಎಷ್ಟೇ ನೋವು, ಕಷ್ಟ, ಒತ್ತಡಗಳಿದ್ದರೂ ಮನೆಗೆ ಬಂದ ತಕ್ಷಣ ಮಗು ಕರೆಯುವ ಅಮ್ಮ/ಅಪ್ಪ ಎನ್ನುವ ತೊದಲುನುಡಿಯಲ್ಲಿ ಅದೇನೋ ಮೋಡಿ ಇದೆಯೋ, ಆ ಕ್ಷಣದಲ್ಲಿಯೇ ಮನಸ್ಸಿನಲ್ಲಿದ್ದ ಒತ್ತಡ, ಚಿಂತೆಗಳೆಲ್ಲವೂ ದೂರವಾಗಿ ಮಗುವಿನ ಜೊತೆ ಮಗುವಾಗಿ ಬಿಡುತ್ತಾರೆ. ಅಂತಹ ಮೋಡಿಗಾರಿಕೆ ಮಗುವಿನ ಮುದ್ದು ನಗೆಯಲ್ಲಿ, ತೊದಲು ನುಡಿಯಲ್ಲಿ, ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುವಲ್ಲಿ, ಅಳುವಿನಲ್ಲಿ ಇರುತ್ತದೆ. ಮಗು ಅತ್ತರೂ ಚೆನ್ನ, ನಕ್ಕರೂ ಚೆನ್ನ. ಮಗು ದೇವರಿಗೆ ಸಮಾನ.
ಬಂಜೆತನ:

  • ಮದುವೆ ಆಗಿ ಒಂದು ವರ್ಷವಾದರೂ ಗರ್ಭಧರಿಸದಿದ್ದರೆ ಅದನ್ನು ಬಂಜೆತನ ಎಂದು ಕರೆಯುತ್ತಾರೆ. ಇದಕ್ಕೆ ಹಲವಾರು ಕಾರಣಗಳಿರುತ್ತವೆ.
  • ಪುರುಷ ಪ್ರಧಾನ ಕಾರಣಗಳು
  • ಸ್ತ್ರೀ ಪ್ರಧಾನ ಕಾರಣಗಳು
  • ಇಬ್ಬರಲ್ಲೂ ನ್ಯೂನತೆಗಳು
  • ನಿರ್ದಿಷ್ಟ ಕಾರಣ ಇಲ್ಲದೇ ಇರುವಂತಹ ಸಾಧ್ಯತೆಗಳು.

ಈ ಎಲ್ಲಾ ಕಾರಣಗಳಿಗೂ ಒಂದೊಂದು ಪರಿಹಾರ, ಚಿಕಿತ್ಸೆಗಳು ಇದ್ದೇ ಇರುತ್ತವೆ. ವೈದ್ಯಕೀಯ ತಂತ್ರಜ್ಞಾನ ಇದು ಅಗಾಧವಾಗಿ ಅಭಿವೃದ್ಧಿ ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ ಕೃತಕ ಗರ್ಭಧಾರಣೆ, ಪ್ರನಾಳ ಶಿಶು ಇತ್ಯಾದಿ ತಂತ್ರಜ್ಞಾನಗಳಿವೆ. ಕೆಲವು ಸಾರಿ ಈ ಎಲ್ಲ ತಂತ್ರಗಳೂ ಫಲಿಸದೇ ಇದ್ದಾಗ ಮಗುವನ್ನು ದತ್ತು ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಬಾಡಿಗೆ ತಾಯಿ ಮೊರೆ ಹೋಗಬೇಕಾಗುತ್ತದೆ.
ಬಾಡಿಗೆ ತಾಯಿ
ಇದೊಂದು ಕೃತಕ ಪುನರುತ್ಪಾದನಾ ವಿಧಾನ. ಬಾಡಿಗೆ ತಾಯಿಯೆಂದರೆ ಮಕ್ಕಳಿಲ್ಲದ ದಂಪತಿಗಳಿಗೋಸ್ಕರ ಓರ್ವ ಮಹಿಳೆ ಗರ್ಭಧರಿಸಿ ಮಗುವನ್ನು ಹೆತ್ತು ನಂತರ ಆ ದಂಪತಿಗಳಿಗೆ ನೀಡುವುದು. ಈ ಓರ್ವ ಮಹಿಳೆಯೇ “ಬಾಡಿಗೆ ತಾಯಿ” ಈಕೆ ಹೆತ್ತ ಮಗುವೇ “ಬಾಡಿಗೆ ಮಗು” ಈ ಬಾಡಿಗೆ ತಾಯಿಯನ್ನು ನೇಮಿಸುವ ದಂಪತಿಗಳೇ “ಪೋಷಕ ದಂಪತಿಗಳು”.
ಬಂಜೆತನದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಾರಣಾಂತರಗಳಿಂದ ಗರ್ಭವತಿ ಆಗಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾದಾಗ ಈ ಅಂತಿಮ ವಿಧಾನವನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಅಂಡೋತ್ಪಾದನೆ ಸ್ಥಗಿತವಾದಾಗ ಅಥವಾ ಗರ್ಭಕೋಶದ ತೊಂದರೆ ಇದ್ದಾಗ ಗರ್ಭಧರಿಸುವ ಸಾಧ್ಯತೆ ಬಹಳಷ್ಟು ಕಡಿಮೆ. ಇಂತಹ ಸಂದರ್ಭದಲ್ಲಿ ಈ ಕೃತಕ ವಿಧಾನವನ್ನು ಅಳವಡಿಸಿಕೊಳ್ಳಬಹುದು.
ಬಾಡಿಗೆ ತಾಯಿಯರಲ್ಲಿ ಎರಡು ವಿಧ

  • ಸಾಂಪ್ರದಾಯಿಕ ಬಾಡಿಗೆ ತಾಯಿ ((Traditional Surrogate): ಈ ವಿಧಾನದಲ್ಲಿ ಮಹಿಳೆ ತನ್ನ ಅಂಡಾಣು ಮತ್ತು ಗರ್ಭಕೋಶ ಎರಡನ್ನೂ ಬಾಡಿಗೆ/ಎರವಲು ನೀಡುವಳು. ಈಕೆ ಮಗುವಿನ ಅನುವಂಶಿಕ ತಾಯಿ (Genetic Mother) ಕೂಡ ಆಗುತ್ತಾಳೆ.
  • ಪೂರ್ಣ ಬಾಡಿಗೆ ತಾಯಿ (Full Surrogate): ಈ ವಿಧಾನದಲ್ಲಿ ಮಹಿಳೆ ತನ್ನ ಗರ್ಭಕೋಶವನ್ನು ಮಾತ್ರ ಬಾಡಿಗೆ/ಎರವಲು ನೀಡುತ್ತಾಳೆ. ಪ್ರನಾಳ ಶಿಶು ವಿಧಾನದಿಂದ ಭ್ರೂಣವನ್ನು ಶರೀರದ ಹೊರಗೆ ಉತ್ಪಾದಿಸಿ ನಂತರ ಬಾಡಿಗೆ ತಾಯಿಯ ಗರ್ಭದಲ್ಲಿ ಇರಿಸಲಾಗುವುದು. ಭ್ರೂಣವು ಬಾಡಿಗೆ ತಾಯಿಯ ಗರ್ಭಕೋಶದಲ್ಲಿ ಬೆಳೆಯುತ್ತದೆ.
  • ಬಾಡಿಗೆ ಮಗು: ಬಾಡಿಗೆ ತಾಯಿಯಿಂದ ಪಡೆದ ಮಗುವನ್ನು ಬಾಡಿಗೆ ಮಗು ಎನ್ನಬಹುದು. ಈ ರೀತಿ ಜನಿಸಿದ ಬಾಡಿಗೆ ಮಗುವಿಗೆ ಎರಡಕ್ಕಿಂತ ಹೆಚ್ಚು ಪೋಷಕರಿರಬಹುದು. ಹೇಗೆಂದರೆ,
  • ಮಗುವನ್ನು ಬಾಡಿಗೆ ಪಡೆದು ಸಾಕುವ ತಾಯಿ ಮತ್ತು ತಂದೆ-ಪೋಷಕ ದಂಪತಿಗಳು.
  • ಬಾಡಿಗೆ ತಾಯಿ ಮತ್ತು ಆಕೆಯ ಗಂಡ
  • ಅಂಡಾಣು ಕೊಟ್ಟ ತಾಯಿ (Genetic Mother) ಮತ್ತು ಆಕೆಯ ಗಂಡ.
  • ವೀರ್ಯಾಣು ಕೊಟ್ಟ ತಂದೆ (Genetic Father) ಮತ್ತು ಆತನ ಹೆಂಡತಿ

ಕೆಲವು ಸಾರಿ ಜನ್ಮಕೊಟ್ಟ ತಾಯಿ ಮತ್ತು ಅಂಡಾಣು ಕೊಟ್ಟ ತಾಯಿ ಒಂದೇ ಆಗಿರಬಹುದು. ಹಾಗೆಯೇ ಸಾಕುವ ತಂದೆ ಮತ್ತು ಜೀವಕೋಶ ಕೊಟ್ಟ ತಂದೆ ಒಬ್ಬರೇ ಆಗಿರಬಹುದು. ಹೀಗೆ ಮಗುವು ಒಂದು ಗರ್ಭಕೋಶದಲ್ಲಿ ಹುಟ್ಟಿ ಬೇರೊಂದು ಮಡಿಲನ್ನು ಸೇರಿ ಹಲವಾರು ಪೋಷಕರನ್ನು ಹೊಂದುತ್ತದೆ. ಹೀಗೆ ಹುಟ್ಟಿದ ಮಗುವಿಗೆ ಸಾಕು ತಂದೆ-ತಾಯಿಗಳಲ್ಲದೆ ಜನ್ಮಕೊಟ್ಟ ತಂದೆ-ತಾಯಿಯಲ್ಲದೆ ಇವರ ಮಕ್ಕಳೂ ಸಹ ರಕ್ತ ಸಂಬಂಧಿಗಳಾಗಿರುತ್ತಾರೆ. ಪೋಷಕರ ತಂದೆ ಮತ್ತು ಪೋಷಕ ತಾಯಿ ಒಂದೇ ದಂಪತಿಗಳಾಗಿರಬಹುದು.

ಯಾರು ಬಾಡಿಗೆ ತಾಯಿ ಆಗಬಹುದು?

ಓರ್ವ ಮಹಿಳೆ ಬಾಡಿಗೆ ತಾಯಿಯಾಗಲು ಕೆಲವೊಂದು ಅರ್ಹತೆ ಮತ್ತು ನಿಯಮಗಳಿರುತ್ತವೆ. ಅವುಗಳೆಂದರೆ,

  • 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು.
  • ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರಬೇಕು.
  • ಯಾವುದೇ ಖಾಯಿಲೆಗಳಿರಬಾರದು. ಉದಾಹರಣೆಗೆ: ವಂಶಪರಂಪರೆ ಖಾಯಿಲೆಗಳಿರಬಾರದು, ಯಾವುದೇ ವಿಧವಾದ ಲೈಂಗಿಕ ರೋಗಗಳಿಗೆ (AIDS ಇತ್ಯಾದಿ) ತುತ್ತಾಗಿರಬಾರದು.
  • ದುಶ್ಚಟಗಳಿಂದ ದೂರ ಇರಬೇಕು.
  • ಈಗಾಗಲೇ ಮದುವೆ ಆಗಿದ್ದು, ಮಕ್ಕಳೂ ಇದ್ದರೆ ಉತ್ತಮ.

ಬಾಡಿಗೆ ತಾಯಿಯ ರೀತಿಗಳು:
ಬಾಡಿಗೆ ತಾಯಿಯಾಗಿ ಕರ್ತವ್ಯ ನಿರ್ವಹಿಸುವ ಮಹಿಳೆಯರನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು.
ಉಚಿತ ಸೇವೆ ನೀಡುವವರು: ಪ್ರೀತಿಪಾತ್ರರಿಗೋಸ್ಕರ ಸಂಪೂರ್ಣ ಉಚಿತವಾಗಿ ಸೇವೆ ನೀಡುತ್ತಾರೆ. ಸಾಮಾನ್ಯವಾಗಿ ಪೋಷಕ ದಂಪತಿಗಳ ಹತ್ತಿರ ಸಂಬಂಧಿಗಳಾದ ಅಕ್ಕ, ತಂಗಿ, ತಾಯಿ, ಮಗಳು ಮುಂತಾದವರು ಈ ಕರ್ತವ್ಯವನ್ನು ನಿರ್ವಹಿಸುವರು.
ಭಾಗಶಃ ಸೇವೆ ನೀಡುವವರು: ಔಷಧೋಪಚಾರ ಮತ್ತು ಹೆರಿಗೆಯ ಖರ್ಚು ಮಾತ್ರ ಪಡೆಯುವವರು. ಇಂತಹವರು ಸಾಮಾನ್ಯವಾಗಿ ಪೋಷಕ ದಂಪತಿಗಳ ಸ್ನೇಹಿತರು ಮತ್ತು ಸಂಬಂಧಿಗಳಾಗಿರುತ್ತಾರೆ.
ಹಣಕ್ಕಾಗಿ ಮಗುವನ್ನು ಹೆರುವವರು: ಇವರು ಔಷಧೋಪಚಾರ ಮತ್ತು ಹೆರಿಗೆಯ ಖರ್ಚು ಅಲ್ಲದೆ ತಾವು ನೀಡುವ ಸೇವೆಗೆ ಸಂಭಾವನೆ ಪಡೆಯುವವರು. ಈ ಸಂಭಾವನೆಯ ಮೊತ್ತ ಮೊದಲೇ ನಿರ್ಧಾರವಾಗಿರುತ್ತದೆ.
ಬಾಡಿಗೆ ತಾಯಿ ಮಾಡುವ ವಿಧಾನ
ಸಾಂಪ್ರದಾಯಿಕ ಬಾಡಿಗೆ ತಾಯಿ: ಪೋಷಕ ತಂದೆಯಾಗುವ ವ್ಯಕ್ತಿಯ ವೀರ್ಯವನ್ನು ಬಾಡಿಗೆ ತಾಯಿಯ ಗರ್ಭಕೋಶದ/ಯೋನಿಯ ಒಳಕ್ಕೆ ಕೃತಕವಾಗಿ ಹಾಯಿಸಲಾಗುವುದು. ಹೀಗೆ ಗರ್ಭಿಣಿ ಆದ ಬಾಡಿಗೆ ತಾಯಿ ಮಗುವನ್ನು ಹೆತ್ತು ನಂತರ ಪೋಷಕ ತಂದೆಗೆ (ದಂಪತಿಗಳಿಗೆ) ನೀಡುವಳು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬಾಡಿಗೆ ತಾಯಿ ತನ್ನ ಅಂಡಾಣುವನ್ನು ನೀಡಿರುತ್ತಾಳೆ. ಆಕೆಯ ವರ್ಣತಂತುಗಳು ಮತ್ತು ವಂಶವಾಹಿಗಳು ಮಗುವಿಗೆ ಸೇರಿರುತ್ತವೆ. ಪೋಷಕ ತಂದೆ ಅನುವಂಶಿಕ ತಂದೆ (Genetic Father) ಕೂಡ ಆಗಿರುತ್ತಾನೆ. ದಾನಿಯ ವೀರ್ಯಾಣುವನ್ನು ಉಪಯೋಗಿಸಿಯೂ ಮಗುವನ್ನು ಪಡೆಯಬಹುದು. ಆಗ ಮಗುವಿಗೆ ಅನುವಂಶಿಕ ತಂದೆ ದಾನಿಯೂ ಆಗಿರುತ್ತಾನೆ.

ಪೂರ್ಣ ಬಾಡಿಗೆ ತಾಯಿ: ಈ ವಿಧಾನದಲ್ಲಿ ಬಾಡಿಗೆ ತಾಯಿ ತನ್ನ ಗರ್ಭಕೋಶವನ್ನಷ್ಟೆ ಎರವಲು ನೀಡುತ್ತಾಳೆ. ತನ್ನ ಅಂಡಾಣುವನ್ನು ನೀಡಿರುವುದಿಲ್ಲ. ಆದ್ದರಿಂದ ಆಕೆಯ ವರ್ಣತಂತುಗಳು ಮತ್ತು ವಂಶವಾಹಿಗಳು ಮಗುವಿನಲ್ಲಿ ಸೇರಿರುವುದಿಲ್ಲ. 3 ರಿಂದ 4 ದಿನ ಹೊರಗೆ ಬೆಳೆದ ಭ್ರೂಣವನ್ನು ಪ್ರಣಾಳ ಶಿಶು ವಿಧಾನದಿಂದ (IVF) ಗರ್ಭಕೋಶದ ಒಳಗೆ ಹಸ್ತಾಂತರಿಸಲಾಗುತ್ತದೆ. ಮಗುವಿನ ಪೋಷಕ ತಂದೆ/ತಾಯಿಗಳು ಬಾಡಿಗೆ ಪಡೆಯುವ ತಂದೆ/ತಾಯಿಗಳೇ ಆಗಿರಬಹುದು. ಅಥವಾ ಇನ್ಯಾರೋ ದಾನಿಗಳಾಗಿರಬಹುದು. ಅಂದರೆ ಅಂಡಾಣು ಅಥವಾ ವೀರ್ಯಾಣುಗಳನ್ನು ಬೇರ ಬೇರೆ ದಾನಿಗಳಿಂದ ಪಡೆದಿರಬಹುದು.
ಬಾಡಿಗೆ ತಾಯಿ ಮತ್ತು ಮಗುವಿನ ಬಗ್ಗೆ ಕಾನೂನು ಏನು ಹೇಳುತ್ತದೆ?
ನಮ್ಮ ದೇಶದಲ್ಲಿ ಸದ್ಯಕ್ಕೆ ಬಾಡಿಗೆ ತಾಯಿಯನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಯಾವುದೇ ಕಾನೂನುಗಳು ಇಲ್ಲ. ಆದರೂ ಸಹ ಬಾಡಿಗೆ ತಾಯಿಯ ಸಂಪೂರ್ಣ ಒಪ್ಪಿಗೆ, ಬಾಡಿಗೆ ತೆಗೆದುಕೊಳ್ಳುವ ದಂಪತಿಗಳ ಪೂರ್ಣ ಒಪ್ಪಿಗೆ ಮತ್ತು ಇವರ ಮಧ್ಯೆ ಆಗುವ ಒಪ್ಪಂದ ಎಲ್ಲವೂ ಲಿಖಿತ ರೂಪದಲ್ಲಿ ಸಾಕ್ಷಿಗಳ ಸಮೇತ ಆಗುವುದು ಒಳ್ಳೆಯದು ಮತ್ತು ಎಲ್ಲರಿಗೂ ಕ್ಷೇಮ. ಕಾನೂನಿನ ಪ್ರಕಾರ ಹೆತ್ತ ತಾಯಿಯೇ ಮಗುವಿನ ನಿಜವಾದ ತಾಯಿ, ಆಕೆಯ ಗಂಡನೇ ನಿಜವಾದ ತಂದೆ, ಮಗುವನ್ನು ಪಡೆದ ದಂಪತಿಗಳು ಪೋಷಕ ತಂದೆ-ತಾಯಿಗಳಾಗುತ್ತಾರೆ. ಇವರುಗಳು ಕಾನೂನಿನ ರೀತಿ ದತ್ತು ಸ್ವೀಕರಿಸಿ ನೋಂದಾವಣೆ ಮಾಡಿಸಿಕೊಳ್ಳಬೇಕು. ಆಗ ಇವರು ಕಾನೂನಿನಡಿ ಹಕ್ಕುದಾರ ತಂದೆ-ತಾಯಿಗಳಾಗುತ್ತಾರೆ. ಬಾಡಿಗೆ ಮಗು ಕಾನೂನು ರೀತಿಯಲ್ಲಿ ದತ್ತು ತೆಗೆದುಕೊಂಡ ಮಗು ಆಗುತ್ತದೆ.
ಮಾನಸಿಕ ಒತ್ತಡಗಳು:
ಬಾಡಿಗೆ ತಾಯಿ, ಬಾಡಿಗೆ ಮಗು, ಪೋಷಕ ದಂಪತಿಗಳು ಮತ್ತು ಇವರೆಲ್ಲರ ರಕ್ರ ಸಂಬಂಧಿಗಳಲ್ಲಿ ಹಲವಾರು ರೀತಿಯ ಮಾನಸಿಕ ಒತ್ತಡಗಳು ಉಂಟಾಗುತ್ತವೆ.
ಬಾಡಿಗೆ ತಾಯಿಗೆ ಉಂಟಾಗುವ ಮಾನಸಿಕ ಒತ್ತಡಗಳು: ಬಾಡಿಗೆ ತಾಯಿ ಕೆಲವೊಂದು ಸಾರಿ ಆಕೆಗೆ ತೀರಾ ಅನಿವಾರ್ಯತೆಯಿಂದಲೋ ಅಥವಾ ಹಣದ ಅವಶ್ಯಕತೆಯಿಂದಲೋ ಒಬ್ಬ ಮಹಿಳೆ ಬಾಡಿಗೆ ತಾಯಿಯಾಗಬಹುದು. ಮಗು ಹೆತ್ತ ಬಳಿಕ ಆಕೆಗೆ ಮಗುವಿನ ಮೇಲೆ ಮಮತೆ, ವಾತ್ಸಲ್ಯ ಬೆಳೆಯಬಹುದು. ಮತ್ತೆ ನಾನು ಹೀಗೆ ಬಾಡಿಗೆ ತಾಯಿಯಾದರೆ ಮುಂದೆ ಸಮಾಜ ತನ್ನನ್ನು ಹೇಗೆ ಪರಿಗಣಿಸುತ್ತದೆಯೇ ಎನ್ನುವ ಭಾವನೆ, ಅಂಜಿಕೆ, ಭಯ ಇರಬಹುದು. ಹೀಗೆ ಆಕೆಗೆ ಅನೇಕ ರೀತಿಯ ಮಾನಸಿಕ ಒತ್ತಡಗಳಿರುತ್ತವೆ. ಹೆತ್ತ ನಂತರ ಮಗುವನ್ನು ಕೊಡುವಾಗ ಹಲವಾರು ರೀತಿಯ ಮಾನಸಿಕ ವ್ಯಾಕುಲತೆ ಉಂಟಾಗಬಹುದು.
ಪೋಷಕ ತಾಯಿಗಿರುವ ಮಾನಸಿಕ ಒತ್ತಡಗಳು: ಪೋಷಕ ತಾಯಿಗೂ ಹಲವಾರು ರೀತಿಯ ಮಾನಸಿಕ ಒತ್ತಡಗಳುಂಟಾಗುತ್ತವೆ. ಆಕೆ ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಾಳೆ. ಈ ರೀತಿಯಲ್ಲಿ ಮಗುವನ್ನು ಪಡೆದರೂ ಆಕೆಯನ್ನು ಮೊದಲಿಗೆ ‘ಬಂಜೆ’ ಎಂದು ಕುಟುಂಬ ಮತ್ತು ಸಮಾಜ ಕಾಣುತ್ತದೆ. ಆ ಮಗುವಿಗೂ ಮುಂದೆ ಸರಿಯಾದ ಮಾನ್ಯತೆ, ಗುರುತು ಸಿಗುವುದಿಲ್ಲವೇನೋ ಎಂಬ ಆತಂಕ ಆಕೆಯಲ್ಲಿಯೂ ಇರುತ್ತದೆ. ಮಗು ತನ್ನದಲ್ಲ ಎಂಬ ಕೀಳರಿಮೆ ಉಂಟಾಗಬಹುದು. ಮುಂದೆ ಮಗು ತನ್ನನ್ನು ‘ಅಮ್ಮ’ ಎಂದು ಪ್ರೀತಿಸದೇ ಇರಬಹುದೆಂಬ ಭಯ ಇರುತ್ತದೆ. ಈ ರೀತಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಪೋಷಕ ತಂದೆಯ ಮಾನಸಿಕ ಒತ್ತಡಗಳು: ಪೋಷಕ ತಾಯಿಗಿರುವಂತಹ ಮಾನಸಿಕ ಒತ್ತಡಗಳೇ ಪೋಷಕ ತಂದೆಗೂ ಇರುತ್ತವೆ.
ಬಾಡಿಗೆ ಮಗವಿನ ಮಾನಸಿಕ ಒತ್ತಡಗಳು: ಮೊದಲಿಗೆ ಮಗು ಪೋಷಕ ತಂದೆ-ತಾಯಿಯನ್ನು ತನ್ನ ನಿಜವಾದ ತಂದೆ, ತಾಯಿಯರೆಂದು ತಿಳಿದಿರುತ್ತದೆ. ನಂತರ ತನ್ನ ಹುಟ್ಟಿನ ವಿಷಯ ಗೊತ್ತಾದಾಗ ತನಗೆ ಜನ್ಮ ನೀಡಿದ ಬಾಡಿಗೆ ತಾಯಿಯ ಬಗ್ಗೆ, ವೀರ್ಯಾಣು ನೀಡಿದ ವಂಶವಾಹಿನಿ ತಂದೆ ಬಗ್ಗೆ, ಅಂಡಾಣು ನೀಡಿದ ವಂಶವಾಹಿನಿ ತಾಯಿ ಬಗ್ಗೆ ಪ್ರೀತಿ ಗೌರವಗಳು ಮೂಡಿಬರಬಹುದು. ಅವರೆಲ್ಲರ ಮಕ್ಕಳ ಜೊತೆ ಮಮತೆ ಮೂಡಬಹುದು. ಪೋಷಕ ತಂದೆ ತಾಯಿಯರ ಬಗ್ಗೆ ತಾತ್ಸಾರ ಮೂಡಬಹುದು. ತನ್ನ ಜನ್ಮ ರಹಸ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಹುದು.
ಇತರರಿಗೆ: ಬಾಡಿಗೆ ಪಡೆದ ತಂದೆಗೆ, ಬಾಡಿಗೆ ತಾಯಿಯ ಗಂಡನಿಗೆ, ಅವರ ಮಕ್ಕಳಿಗೆ, ಅಂಡಾಣು ಮತ್ತು ವೀರ್ಯಾಣು ನೀಡಿದ ಅವರ ಮಕ್ಕಳಿಗೆ ಹೀಗೆ ವಿಧ ವಿಧವಾದ ರಕ್ತ ಸಂಬಂಧಿಗಳಿಗೆ ಅವರದೇ ಆದ ಮಾನಸಿಕ ಒತ್ತಡಗಳು ಉಂಟಾಗಬಹುದು.

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!