ರೋಗ ನಿರೋಧಕ ಶಕ್ತಿ ಕೇವಲ ಒಂದಿಷ್ಟು ಮಾತ್ರೆಗಳನ್ನು ನುಂಗಿಬಿಟ್ಟರೆ ಹೆಚ್ಚುತ್ತದೆ ಎಂಬ ಕಲ್ಪನೆ ತಪ್ಪು. ಆಹಾರ ಚೆನ್ನಾಗಿದ್ದರೆ ದೇಹ ತನ್ನಿಂದ ತಾನೇ ಸ್ವಾಸ್ಥ್ಯವನ್ನು ಹೊಂದುತ್ತಾ ಹೋಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಯಾವುದೋ ವೈರಸ್ ಅಥವಾ ಫಂಗಸ್ ವಿರುದ್ಧವಷ್ಟೇ ಅಲ್ಲ; ಯಾವುದೇ ಖಾಯಿಲೆಯೂ ಹತ್ತಿರ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಕಳೆದ ಒಂದು ವರ್ಷದಿಂದ ನಾವೆಲ್ಲಾ ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆಯೇ ಯೋಚಿಸುತ್ತಿದ್ದೇವೆ. ಆದರೆ ರೋಗ ನಿರೋಧಕ ಶಕ್ತಿ ಎಂದರೆ ಇಂದು ಬಿತ್ತಿ ನಾಳೆ ಬೆಳೆ ತೆಗೆಯಲು ಸಾಧ್ಯವಿಲ್ಲ. ಕೇವಲ ಒಂದಿಷ್ಟು ಮಾತ್ರೆಗಳನ್ನು ನುಂಗಿಬಿಟ್ಟರೆ ಅದು ಹೆಚ್ಚುತ್ತದೆ ಎಂಬ ಕಲ್ಪನೆಯೂ ತಪ್ಪು. ನಮ್ಮ ಇಮ್ಯುನಿಟಿಹೆಚ್ಚಲು ಬೇಕಾದ ಮುಖ್ಯ ವಿಷಯಗಳ ಬಗ್ಗೆ ಇಂದು ತಿಳಿದುಕೊಳ್ಳೋಣ. ಇವುಗಳ ವಿಷಯದಲ್ಲಿ ಸರಿಯಾದ ಕಾಳಜಿ ವಹಿಸಿದರೆ ಯಾವುದೋ ವೈರಸ್ ಅಥವಾ ಫಂಗಸ್ ವಿರುದ್ಧವಷ್ಟೇ ಅಲ್ಲ; ಯಾವುದೇ ಖಾಯಿಲೆಯೂ ಹತ್ತಿರ ಬರದಂತೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
1. ಆಹಾರ: ಆಯುರ್ವೇದ ಹೇಳುವಂತೆ ನಮ್ಮ ದೇಹದ ಪ್ರತಿ ಕಣಕಣವೂ ನಮ್ಮ ಆಹಾರದ ಮೇಲೆಯೇ ಅವಲಂಬಿತವಾಗಿದೆ. ಆಹಾರ ಚೆನ್ನಾಗಿದ್ದರೆ ದೇಹ ತನ್ನಿಂದ ತಾನೇ ಸ್ವಾಸ್ಥ್ಯವನ್ನು ಹೊಂದುತ್ತಾ ಹೋಗುತ್ತದೆ. ಹಣ್ಣುಗಳು, ತರಕಾರಿಗಳು, ನಟ್ ಗಳು ಮುಂತಾದ ನಿಸರ್ಗದತ್ತ ಆಹಾರಗಳಲ್ಲಿವಿವಿಧ ರೀತಿಯ ಪೋಷಕಾಂಶಗಳು ಹೇರಳವಾಗಿರುತ್ತವೆ. ಅವುಗಳನ್ನು ಸರಿಯಾಗಿ ಸೇವಿಸುವವನಿಗೆ ಮಾತ್ರೆಗಳ ಅವಶ್ಯಕತೆ ಕಡಿಮೆಯಿರುತ್ತದೆ. ಪ್ರಕೃತಿ ನಮಗೆ ಕೊಡುವಂತಹ ನೈಸರ್ಗಿಕ ಆಹಾರ ಪದಾರ್ಥಗಳನ್ನು ಆಯಾ ಕಾಲಕ್ಕೆ ಸೇವಿಸುತ್ತಾ ಬಂದರೆ ಅದಕ್ಕಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿವರ್ಧಕ ಇನ್ನೊಂದಿಲ್ಲ.
ಮಾವು, ಹಲಸು, ದಾಳಿಂಬೆ, ನೇರಳೆ ಮುಂತಾದ ಹಣ್ಣುಗಳನ್ನು ಆಯಾ ಕಾಲಕ್ಕೆ ಸೇವಿಸುವುದರಿಂದ ಆ ಕಾಲದಲ್ಲಿ ನಮ್ಮ ದೇಹಕ್ಕೆ ಯಾವ ಪೋಷಕಾಂಶ ಹೆಚ್ಚು ಬೇಕೋ ಅದು ಸಿಗುತ್ತದೆ. ಎಷ್ಟೋ ಜನರ ಊಟವೆಂದರೆ ಅನ್ನ ಮೊಸರು ಅಥವಾ ಅನ್ನ ಸಾರು. ಆದರೆ ಅದು ಅಪೂರ್ಣವಾದದ್ದು. ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್, ಕೊಬ್ಬು ಮತ್ತು ಸೂಕ್ಶ್ಮ ಪೋಷಕಾಂಶಗಳನ್ನು ಸೇವಿಸಲೇಬೇಕು. ಹಾಗಾಗಿ ಶುದ್ಧ ಎಣ್ಣೆ, ತುಪ್ಪ, ಹಣ್ಣುಗಳು, ಬೇಳೆ ಕಾಳುಗಳ ಸೇವನೆ ಅತ್ಯಂತ ಅವಶ್ಯಕ. ಮಾಂಸಾಹಾರಿಗಳಾಗಿದ್ದರೆ ವಾರಕ್ಕೊಂದೆರಡು ಬಾರಿ ರಾಸಾಯನಿಕ ರಹಿತಬೇಯಿಸಿದ ಮಾಂಸಾಹಾರವನ್ನು ಸೇವಿಸುವುದು ಹಿತಕಾರಿ. ಎಲ್ಲವೂ ಒಳ್ಳೆಯದೇ ಆದರೂ ಪ್ರಮಾಣದಲ್ಲಿ ಮಿತಿ ಕೂಡಾ ಅವಶ್ಯಕ.
2. ವ್ಯಾಯಾಮ: ಒಂದೆರಡು ತಲೆಮಾರುಗಳ ಹಿಂದಿನವರಿಗೆ ಇರದಿದ್ದ ಖಾಯಿಲೆಗಳೆಲ್ಲಾ ನಮ್ಮನ್ನೇಕೆ ಕಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೂ ಅವರಿಗೂ ದೈಹಿಕ ವ್ಯಾಯಾಮದಲ್ಲಿರುವ ಅಗಾಧ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ವ್ಯಾಯಾಮದಿಂದ ಸಿಗುವ ರೋಗ ನಿರೋಧಕ ಶಕ್ತಿಯನ್ನು ಹಣ ಕೊಟ್ಟು ಪಡೆಯಲು ಸಾಧ್ಯವಿಲ್ಲ. ಹಾಗಾಗಿಯೋಗಾಸನ, ಪ್ರಾಣಾಯಾಮ, ನಡಿಗೆಮುಂತಾದವುಗಳನ್ನು ನಿತ್ಯವೂ ಮಾಡುವುದು ಇಮ್ಯುನಿಟಿ ಹೆಚ್ಚಾಗಲು ಅತ್ಯಂತ ಅವಶ್ಯವಾದದ್ದು.
3. ದಿನಚರಿ: ಶಿಸ್ತಿಲ್ಲದ ದಿನಚರಿಯಿಂದ ನಮಗೇ ಗೊತ್ತಿಲ್ಲದೇ ನಮ್ಮ ರೋಗ ನಿರೋಧಕ ಶಕ್ತಿ ತುಸುತುಸುವಾಗಿ ನಾಶವಾಗುತ್ತಾ ಹೋಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಹಿಡಿದು ರಾತ್ರಿ ಬೇಗ ಮಲಗುವವರೆಗೆ ಎಲ್ಲಾ ರೀತಿಯ ದಿನಚರಿಗಳನ್ನು ಸರಿಯಾಗಿ ಪಾಲಿಸುವವನಿಗೆ ಸುಲಭವಾಗಿ ರೋಗ ಬಾರದೆಂದು ಆಯುರ್ವೇದ ಹೇಳುತ್ತದೆ. ಗಂಡೂಷ (ಆಯಿಲ್ ಪುಲ್ಲಿಂಗ್), ಅಭ್ಯಂಗ (ಎಣ್ಣೆ ಸ್ನಾನ), ಧ್ಯಾನ, ನಿಗದಿತ ಸಮಯದಲ್ಲಿ ಆಹಾರ ಸೇವನೆ, ಮಲಮೂತ್ರಾದಿ ಪ್ರಕೃತಿಯ ಕರೆಗಳನ್ನು ತಡೆಯದೇ ಇರುವುದು, ಇವನ್ನೆಲ್ಲಾ ಸರಿಯಾಗಿ ಪಾಲಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಸಾಬೀತಾಗಿರುವ ವಿಷಯ.
4. ಮನಸ್ಸು: ದೇಹದ ನೂರು ಪಟ್ಟು ಶಕ್ತಿಯುತವಾದದ್ದು ಮನಸ್ಸು. ಭಯ, ಚಿಂತೆ, ಅಸೂಯೆಗಳಂತಹ ಋಣಾತ್ಮಕ ಶಕ್ತಿಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ಸಾಂಕ್ರಾಮಿಕ ರೋಗಗಳು ಹರಡಿದಾಗ ಭಯವು ಇಮ್ಯುನಿಟಿಯನ್ನು ಕಡಿಮೆಗೊಳಿಸಿ ಹೆಚ್ಚೆಚ್ಚು ಜನರು ಸಮಸ್ಯೆಗೆ ಒಳಗಾಗುತ್ತಾರೆ ಎಂಬುದು ಸಾಬೀತಾಗಿದೆ. ಹಾಗಾಗಿ ಸಾಧ್ಯವಾದಷ್ಟು ಪ್ರೀತಿ, ತೃಪ್ತಿ, ಶಾಂತ ಮನಸ್ಥಿತಿಯನ್ನು ತಂದುಕೊಳ್ಳಬೇಕಾಗಿದೆ.
5. ಚಟರಹಿತ ಜೀವನಶೈಲಿ: ಉತ್ತಮ ಗುಣಗಳನ್ನು ಹೊಂದಿರುವ ಆಹಾರಗಳು ಚಟವಾಗುವುದಿಲ್ಲ. ಒಂದು ದಿನ ಬಿಟ್ಟರೆ ತಳಮಳ ಅಥವಾ ವಿಚಿತ್ರ ಸಮಸ್ಯೆಗಳೇನೂ ಆಗುವುದಿಲ್ಲ. ಆದರೆ ವಿಷವನ್ನು ಹೊಂದಿದ ಆಹಾರ ಪದಾರ್ಥಗಳ ಸೇವನೆ ರೂಢಿಯಾದರೆ ಬಿಡುವುದು ಕಷ್ಟವಾಗುತ್ತದೆ. ಹಾಗಾಗಿಯೇ ತಂಬಾಕು, ಮದ್ಯಗಳಂತಹವು ಚಟವಾಗುವುದು. ಈ ವಿಷದ್ರವ್ಯಗಳ ಸೇವನೆಯಿಂದ ದೇಹದಲ್ಲಿರುವ ಓಜಸ್ಸು ಕ್ಷೀಣವಾಗಿ ರೋಗ ನಿರೋಧಕ ಶಕ್ತಿ ನಾಶವಾಗಿ ಹೋಗುತ್ತದೆ ಎನ್ನುತ್ತದೆ ಆಯುರ್ವೇದ. ಹಾಗಾಗಿ ಇವುಗಳನ್ನು ತ್ಯಜಿಸಬೇಕಾದ್ದು ಅತ್ಯಂತ ಅವಶ್ಯಕ. ಇಲ್ಲದೇ ಹೋದರೆ ಕೇವಲ ವೈರಸ್ ಅಥವಾ ಫಂಗಸ್ ಗಳಷ್ಟೇ ಅಲ್ಲ ಎಲ್ಲಾ ರೀತಿಯ ಖಾಯಿಲೆಗಳೂ ನಮ್ಮನ್ನು ಕಾಡುತ್ತವೆ.
Watch our Video: ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?
