ಪವಿತ್ರ ತುಳಸಿ ದಿವ್ಯೌಷಧಿಯೂ ಹೌದು

ಪವಿತ್ರ ತುಳಸಿ ದಿವ್ಯೌಷಧಿಯೂ ಹೌದು. ಹಾಗಾಗಿ ಅಸ್ತಮಾ, ಅಲರ್ಜಿ, ಕೆಮ್ಮು, ದಮ್ಮಿಗೆ ಸಂಬಂಧಿಸಿದ ಬಹುತೇಕ ಆಯುರ್ವೇದ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ದೇಹದಲ್ಲಿ ವಾತವನ್ನು ಕಡಿಮೆ ಮಾಡುವ ಗುಣ ತುಳಸಿಗಿದೆ.

ತುಳಸಿ ಎಂಬ ಶಬ್ದದ ಅರ್ಥವೇ “ಸಾಟಿಯಿಲ್ಲದ್ದು” ಎಂದು. ಅದಕ್ಕೆ ಪಾವನಿ, ದೇವದುಂದುಭಿ ಎಂಬೆಲ್ಲಾ ಹೆಸರುಗಳಿವೆ. ಅದಕ್ಕೆ ಕಾರಣ ಅದಕ್ಕಿರುವ ದೈವಸಮಾನ ಗುಣಗಳು. ನಮ್ಮ ಮನೆಯ ಮುಂದೆ ಇದ್ದು ದುಷ್ಟ ಜಂತುಗಳಿಂದ ನಮ್ಮನ್ನು ಸದಾ ಕಾಯುತ್ತದೆ ಎಂಬ ಕಾರಣಕ್ಕೇ ಅದಕ್ಕೆ ಪೂಜೆ ಮಾಡುವುದು. ಇದನ್ನು ಆಧುನಿಕ ವಿಜ್ಞಾನ ಕೂಡಾ ಒಪ್ಪಿಕೊಳ್ಳುತ್ತದೆ. ತುಳಸಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಗಳನ್ನು ಕೊಲ್ಲುವ ಶಕ್ತಿ ಇದೆ ಎಂಬುದು ಸಾಬೀತಾಗಿದೆ. ಹಾಗಾಗಿಯೇ ಇದಕ್ಕೆ ಆಯುರ್ವೇದದಲ್ಲಿ ಭೂತಘ್ನಿ, ಅಪೇತರಾಕ್ಷಸಿ ಎಂಬ ಹೆಸರುಗಳಿಂದ ಕರೆದಿದ್ದಾರೆ.

Pavitra tulasi divyaushadhiyu haudu

ಇದೇ ಕಾರಣಕ್ಕೆ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆಯುಷ್ ಮಂತ್ರಾಲಯವು ಹೇಳಿದ “ಆಯುಷ್ ಕ್ವಾಥ”ದಲ್ಲಿ ತುಳಸಿಯನ್ನು ಪ್ರಧಾನ ದ್ರವ್ಯವಾಗಿ ಬಳಸಿದ್ದು. ತುಳಸಿಗೆ ಉಷ್ಣ ಗುಣವಿದೆ. ದೇಹದಲ್ಲಿ ಶೀತದ ಕಾರಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೊರೋನಾ ಕೂಡಾ ಶೀತವನ್ನು ತರುವ ಒಂದು ವೈರಸ್ಸೇ ಆಗಿದೆ. ಕಫವನ್ನು ಕಿತ್ತು ಹೊರತರುವ, ತನ್ಮೂಲಕ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸುವ ಶಕ್ತಿ ತುಳಸಿಗಿದೆ. ಹಾಗಾಗಿ ಅಸ್ತಮಾ, ಅಲರ್ಜಿ, ಕೆಮ್ಮು, ದಮ್ಮಿಗೆ ಸಂಬಂಧಿಸಿದ ಬಹುತೇಕ ಆಯುರ್ವೇದ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ದೇಹದಲ್ಲಿ ವಾತವನ್ನು ಕಡಿಮೆ ಮಾಡುವ ಗುಣ ತುಳಸಿಗಿದೆ.

ಹಾಗಾಗಿ ತುಳಸಿಯ ಸೇವನೆಯಿಂದ ಗಂಟು ನೋವು, ಬಾವುಗಳು ಕಡಿಮೆಯಾಗುತ್ತವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ವಿಶೇಷವಾಗಿ ಹಸಿವು ಕಡಿಮೆ ಇರುವವರಲ್ಲಿ ಇದು ಸಹಕಾರಿ. ಹೊಟ್ಟೆಯೊಳಗಿನ ಕ್ರಿಮಿಗಳನ್ನೂ ಕೊಲ್ಲುವ ಶಕ್ತಿ ಇದಕ್ಕಿದೆ. ಬಾಯಿ ವಾಸನೆ ಬರುವವರಿಗೆ ಇದು ತುಂಬಾ ಪ್ರಯೋಜನಕಾರಿ. ಊಟವಾದ ತಕ್ಷಣ ಇದರ ಎರಡು ಎಲೆಗಳನ್ನು ಜಗಿದು ತಿಂದರೆ ಬಾಯಿ ವಾಸನೆ ಕಡಿಮೆಯಾಗುತ್ತದೆ. ಮೌಥ್ ಫ್ರೆಶನರ್ ಥರ ಆ ಕ್ಷಣಕ್ಕಷ್ಟೇ ವಾಸನೆ ಕಡಿಮೆ ಮಾಡುವುದಲ್ಲ. ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಮಾಡಿ, ಉಪಕಾರಿಯಾದ ಬ್ಯಾಕ್ಟೀರಿಯಾಗಳಿಗೆ ತೊಂದರೆ ಮಾಡದೇ ಈ ಕೆಲಸವನ್ನು ಮಾಡುತ್ತದೆ. ದೇಹದಲ್ಲಿರುವ ವಿಷದ ಅಂಶಗಳನ್ನು ಕಡಿಮೆ ಮಾಡುವಲ್ಲೂ ಇದು ಸಹಕಾರಿ. ಇದರಿಂದ ರಕ್ತಶುದ್ಧಿಯಾಗುತ್ತದೆ.

ಕಫ ದೋಷದ ಕಾರಣದಿಂದ ಚರ್ಮರೋಗವಿದ್ದರೆ ಸರಿಯಾಗುತ್ತದೆ. ಆಯುರ್ವೇದದಲ್ಲಿ ಕೆಲವು ದ್ರವ್ಯಗಳ ವಿಷಾಂಶವನ್ನು ತೆಗೆದು ಶುದ್ಧೀಕರಿಸಲೂ ತುಳಸಿಯ ರಸವನ್ನು ಬಳಸುತ್ತಾರೆ.  ಇದರ ಎಲೆಗಳನ್ನು ಉಗಿಯಲ್ಲಿ ಮೆತ್ತಗಾಗಿಸಿಕೊಂಡು ನಂತರ ಹಿಂಡಬೇಕು. ಆಗ ಮಾತ್ರ ರಸವನ್ನು ಇದು ಬಿಡುತ್ತದೆ. ಹೀಗೆ ತೆಗೆದ ತುಳಸಿ ರಸ ಅರ್ಧ ಚಮಚ, ದೊಡ್ಡ ಪತ್ರೆಯ ರಸ ಅರ್ಧ ಚಮಚ, ಜೊತೆಗೆ ಜೇನುತುಪ್ಪ ಒಂದು ಚಮಚ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಫ, ಕೆಮ್ಮು, ಅಲರ್ಜಿ, ಅಸ್ತಮಾದಂತಹ ಸಮಸ್ಯೆ ಇರುವವರಿಗೆ ತುಂಬಾ ಸಹಾಯವಾಗುತ್ತದೆ. ಗಂಟಲು ಕೆರೆತ, ಎಷ್ಟು ಕೆಮ್ಮಿದರೂ ಕಫ ಹೊರಬರುವುದಿಲ್ಲ ಎಂಬಂಥಾ ತೊಂದರೆ ಇದ್ದರೆ ಅದು ಸರಿಯಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಹತ್ತು ತುಳಸಿ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಬತ್ತಿಸಿ ಸೋಸಿ ಅದಕ್ಕೆ ಎರಡು ಚಿಟಿಕೆ ಅರಿಶಿನ, ಒಂದು ಚಿಟಿಕೆ ಚಕ್ಕೆ ಹಾಕಿ ತಣಿದ ನಂತರ ಜೇನುತುಪ್ಪ ಹಾಕಿ ಕುಡಿಯಬಹುದು. ತುಳಸಿಯನ್ನು ಹಾಲಿನ ಜೊತೆ ಕುಡಿಯುವುದು ಸರಿಯಲ್ಲ. ವೈರಸ್ ನಿರೋಧಕ ಗುಣವಿರುವ ಕಾರಣ ಈ ಸಮಯದಲ್ಲಿ ಇದು ಹೆಚ್ಚು ಉಪಯೋಗಿ. ಅದ್ಭುತವಾದದ್ದಾದರೂ ಇದು ಉಷ್ಣ ಗುಣ ಹೊಂದಿರುವ ಕಾರಣ ಇದನ್ನು ಬಳಸುವಾಗ ಸ್ವಲ್ಪ ಕಾಳಜಿ ಬೇಕು. ದೀರ್ಘಕಾಲದವರೆಗೆ ನಿತ್ಯ ಸೇವನೆ ಸರಿಯಲ್ಲ. ಗರ್ಭಿಣಿಯರು ಇದನ್ನು ವೈದ್ಯರ ಸಲಹೆಯಿಲ್ಲದೇ ಸೇವಿಸಬಾರದು.  ಮಕ್ಕಳು, ಬಾಣಂತಿಯರು ಸೇವಿಸಬಹುದು ಆದರೆ ಪ್ರಮಾಣ ಸ್ವಲ್ಪ ಕಡಿಮೆಯಿರಬೇಕು.

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!