ನಾವು ಚಕ್ಕೆಯನ್ನು ಏಕೆ ಬಳಸಬೇಕು

ನಾವು ಚಕ್ಕೆಯನ್ನು ಏಕೆ ಬಳಸಬೇಕು ಎಂದರೆ ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ.

ಚಕ್ಕೆಯ ಗುಣಗಳ ಬಗ್ಗೆ ತಿಳಿದರೆ ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಇರುವುದಿಲ್ಲ . ಆರೋಗ್ಯದ ಮೇಲೆ ಅದು ತರುವ ಧನಾತ್ಮಕ ಬದಲಾವಣೆಗಳ ಬಗ್ಗೆಯೂ ಒಮ್ಮೆ ನೆನಪಾಗಿಯೇ ಆಗುತ್ತದೆ. ಅಷ್ಟು ಆರೋಗ್ಯಕರವಾದದ್ದು ಚಕ್ಕೆ.  ಆಯುರ್ವೇದದಲ್ಲಿ ಹೇಳಿದ ತ್ರಿಜಾತಕ ಚೂರ್ಣದಲ್ಲಿ ಇದೂ ಒಂದು. ಕೇವಲ ಆಯುರ್ವೇದವೊಂದೇ ಅಲ್ಲ ಇತ್ತೀಚೆಗಿನ ಸಂಶೋಧನೆಗಳೂ ಕೂಡಾ ಇದು ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ ಎಂದು ಹೇಳುತ್ತಿವೆ. ಇನ್ಸುಲಿನ್ ಅನ್ನು ದೇಹ ಬಳಸಿಕೊಳ್ಳುವಂತೆ ಮಾಡಿ (ಇನ್ಸುಲಿನ್ ಸೆನ್ಸೆಟಿವಿಟಿಯನ್ನು ಹೆಚ್ಚಿಸಿ) ಮಧುಮೇಹ, ಪಿಸಿಓಡಿಯಂತಹ ಸಮಸ್ಯೆಗಳನ್ನು ಇದು ಹತೋಟಿಯಲ್ಲಿಡುತ್ತದೆ.

Naavu chakkeyannu yeke balasabeeku

ಇನ್ಸುಲಿನ್ ಬಿಡುಗಡೆ ಸರಿಯಾಗಿ ಆಗುವಂತೆ ಮಾಡುವ ಗುಣವೂ ಇದಕ್ಕಿದೆ. ಅಷ್ಟೇ ಅಲ್ಲ, ಗ್ಲೂಕೋಸ್ ಅನ್ನು ದೇಹ ಹೀರಿಕೊಳ್ಳುವ ವೇಗವನ್ನೂ ಇದು ನಿಯಂತ್ರಿಸುತ್ತದೆ. ಈ ಕಾರಣದಿಂದ ಬೊಜ್ಜು ಬರದಂತೆ ತಡೆಯುತ್ತದೆ ಮತ್ತು ಇಡೀ ದಿನ ನಮ್ಮ ದೇಹದಲ್ಲಿನ ಸಕ್ಕರೆಯ ಮಟ್ಟ ಸಮತೋಲನದಲ್ಲಿರುವಂತೆ ಮಾಡುತ್ತದೆ. ಹೀಗಾಗಿ ಮಧುಮೇಹದ ಅಡ್ಡ ಪರಿಣಾಮವಾಗಿ ಕಿಡ್ನಿ, ಕಣ್ಣು, ಹೄದಯಕ್ಕೆ ಸಮಸ್ಯೆಯಾಗುವುದನ್ನು ಇದು ತಡೆಯುತ್ತದೆ.

ಆಯಷ್ ಸಚಿವಾಲಯವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ದೇಶದಾದ್ಯಂತ ಎಲ್ಲರಿಗೂ ತೆಗೆದುಕೊಳ್ಳಲು ಹೇಳಿರುವ ಆಯಷ್ ಕ್ವಾಥದಲ್ಲಿ ದಾಲ್ಚಿನ್ನಿಯೂ ಒಂದು ಪ್ರಮುಖ ಘಟಕ. ಅವರು ಸಾವಿರಾರು ಅಯುರ್ವೇದ ಔಷಧಿ ದ್ರವ್ಯಗಳಲ್ಲಿ ದಾಲ್ಚಿನ್ನಿಯನ್ನೇ ಆಯ್ದುಕೊಂಡಿದ್ದಾರೆಂದರೆ ಅದು ಎಷ್ಟು ಅದ್ಭುತವಾದ ದ್ರವ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಹಲವು ರೀತಿಯ ವೈರಸ್ ಗಳನ್ನು ನಿರೋಧಿಸುವ ಗುಣವಿದೆ. ಇದು ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಗ್ಯಾಸ್ ತುಂಬುವುದು, ಹೊಟ್ಟೆನೋವು, ಸರಿಯಾಗಿ ಹಸಿವಾಗದೇ ಇರುವ ಸಮಸ್ಯೆಗಳಲ್ಲಿ ಇದರ ಬಳಕೆ ತುಂಬಾ ಪ್ರಯೋಜನಕಾರಿ.

ಭೇದಿ, ಆಮಶಂಕೆಯಂತಹ ಸಮಸ್ಯೆಗಳಲ್ಲಿಯೂ ಇದನ್ನು ಬಳಸಬಹುದು. ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಬಹುತೇಕ ಎಲ್ಲಾ ಸಮಸ್ಯೆಗಳಲ್ಲೂ ಇದರಿಂದ ಅನುಕೂಲವಾಗುತ್ತದೆ. ಕೆಮ್ಮು, ಕಫ, ದಮ್ಮು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಇತರೇ ಹಲವಾರು ಸಮಸ್ಯೆಗಳಲ್ಲಿ ಇದು ಸಹಕಾರಿ. ಶ್ವಾಸಕೋಶದ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಡೆಯುವ ಶಕ್ತಿ ಇದಕ್ಕಿದೆ. ಸ್ವರವನ್ನು ಸುಧಾರಿಸುತ್ತದೆ. ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಪದೇ ಪದೇ ಕಾಡುವ ಅಲರ್ಜಿಯ ಸಮಸ್ಯೆಯನ್ನು ಬಹಳ ಬೇಗ ಹತೋಟಿಗೆ ತರುತ್ತದೆ. ಆಯುರ್ವೇದದ ಪ್ರಸಿದ್ಧ ಕೆಮ್ಮಿನ ಚೂರ್ಣವಾದ “ಸಿತೋಪಲಾದಿ ಚೂರ್ಣ”ದಲ್ಲಿ ಇದೂ ಒಂದು ಘಟಕ. ಕ್ಯಾನ್ಸರ್ ಸಮಸ್ಯೆಯಲ್ಲಿ ಇದರ ಬಳಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ.

ಭಾವಪ್ರಕಾಶ ನಿಘಂಟುವಿನಲ್ಲಿ “ಶುಕ್ರಲಾ ಬಲ್ಯಾ ವರ್ಣ್ಯಾ” ಎಂದು ಹೇಳಿದ್ದಾರೆ. ಅಂದರೆ ವೀರ್ಯದ ಗುಣವನ್ನು ಹೆಚ್ಚಿಸುತ್ತದೆ, ಲೈಂಗಿಕ ಶಕ್ತಿಯನ್ನು ವರ್ಧಿಸುತ್ತದೆ, ಬಲವನ್ನು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ದಿನಕ್ಕೆ ಒಂದರಿಂದ ಮೂರು ಗ್ರಾಂ ದಾಲ್ಚಿನ್ನಿಯನ್ನು ಅಡುಗೆಯಲ್ಲಿ ಬಳಸಬಹುದು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಅರ್ಧ ಚಮಚ ಪುಡಿಗೆ ಒಂದು ಚಮಚ ಜೇನುತುಪ್ಪ ಹಾಕಿ ಸೇವಿಸುವುದರಿಂದ ಅಲರ್ಜಿ, ಕೆಮ್ಮು, ಬೊಜ್ಜು, ಮೂತ್ರಪಿಂಡದ ಸಮಸ್ಯೆಗಳು, ಹೊಟ್ಟೆ ಉಬ್ಬರದಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿರುವವರಿಗೆ ತುಂಬಾ ಅನುಕೂಲವಾಗುತ್ತದೆ. ಮಧುಮೇಹಿಗಳು ಬಿಸಿನೀರಿನಲ್ಲಿ ಸೇವಿಸಬಹುದು. ಕಫ, ಕೆಮ್ಮು, ಗಂಟಲು ಕೆರೆತ , ಗಂಟಲು ಮತ್ತು ಬಾಯಿ ಒಣಗುವ ಸಮಸ್ಯೆ ಇದ್ದಾಗ ಅರ್ಧ ಚಮಚ ಚಕ್ಕೆ ಪುಡಿ, ಒಂದು ಚಮಚ ಏಲಕ್ಕಿ, ಎರಡು ಚಮಚ ಹಿಪ್ಪಲಿಯ ಪುಡಿಯನ್ನು ಸೇರಿಸಿ ಇಟ್ಟುಕೊಂಡು ಕಾಲು ಚಮಚದಷ್ಟು ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಆಹಾರದ ಮೊದಲು ಜೇನುತುಪ್ಪದಲ್ಲಿ ತೆಗೆದುಕೊಳ್ಳಬೇಕು. ಇವೆಲ್ಲವೂ ಆಯುರ್ವೇದ ಅಥವಾ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತವೆ. ಆದರೆ ಚಕ್ಕೆಯನ್ನು ಅಂಗಡಿಗಳಲ್ಲಿ ತೆಗೆದುಕೊಳ್ಳುವಾಗ ಕಾಳಜಿ ಅಗತ್ಯ. ಕೆಲವು ಕಡೆ ಯಾವುದೋ ಮರದ ತೊಗಟೆಗೆ ಕೃತ್ರಿಮ ಪರಿಮಳವನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ.

ಹಾಗಾಗಿ ದಾಲ್ಚಿನ್ನಿಯ ಮರ ಇದ್ದರೆ ಅದರ ಸಣ್ಣ ರೆಂಬೆಗಳನ್ನು ಕತ್ತರಿಸಿ ಮಧ್ಯದಲ್ಲಿ ಸೀಳಿ ಸಣ್ಣ ಸಣ್ಣ ತುಂಡುಗಳನ್ನಾಗಿಸಿ ಚೆನ್ನಾಗಿ ಒಣಗಿಸಿಟ್ಟುಕೊಂಡರೆ ಉತ್ತಮ. ಮಲೆನಾಡಿನಲ್ಲಿ ಈ ಮರ ಸುಲಭವಾಗಿ ಕಾಣಸಿಗುತ್ತದೆ. ಇದಕ್ಕೆ ಪರಿಮಳ ಅಷ್ಟೊಂದು ಇರುವುದಿಲ್ಲ. ಆದರೆ ಆರೋಗ್ಯಕ್ಕೆ ಉತ್ತಮವಾದದ್ದಾಗಿರುತ್ತದೆ.

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!