ನಿಕೋಡಮಸ್ ಕಾಂಪ್ಲೆಕ್ಸ್ ಮತ್ತು ನಾವು!

ನಿಕೋಡಮಸ್ ಕಾಂಪ್ಲೆಕ್ಸ್  ಅನ್ನೋದನ್ನ ಎಷ್ಟು ಜನ ಕೇಳಿದಿರೋ ಇಲ್ವೋ ಗೊತ್ತಿಲ್ಲ. ಆದ್ರೆ ಈ ಕಾಂಪ್ಲೆಕ್ಸ್ ಅನ್ನೋ ಹೆಸರು ಕೇಳ್ತಾ ಇದ್ದ ಹಾಗೆ ಶಾಪಿಂಗ್ ಕಾಂಪ್ಲೆಕ್ಸು, ಬಿಲ್ಡಿಂಗ್ ಕಾಂಪ್ಲೆಕ್ಸುಗಳನ್ನ ನಿಮ್ಮ ಮೈಂಡ್‍ಗೆ ತಂದುಕೊಂಡ್ರೆ ಪ್ಲೀಸ್ ಅದನ್ನೆಲ್ಲಾ ಬಿಟ್ಟಾಕಿ ಇಲ್ಲಿ ಓದಿ. ಯಾಕಂದ್ರೆ ನಿಕೋಡಮಸ್ ಕಾಂಪ್ಲೆಕ್ಸ್ ಅನ್ನೋದು ವ್ಯವಹಾರಕ್ಕೆ ಸಂಬಂಧಿಸಿದ ಜಾಗವಲ್ಲ, ಇದೊಂದು ಭಾವನೆಗಳಿಗೆ ಸಂಬಂಧಿಸಿದ ವಿಷಯ!

ನಿಕೋಡಮಸ್ ಕಾಂಪ್ಲೆಕ್ಸ್ ಮತ್ತು ನಾವು!

‘ನಿಕೋಡಮಸ್ ಕಾಂಪ್ಲೆಕ್ಸ್’ ಇದು ಮನಃಶಾಸ್ತ್ರದಲ್ಲಿ ಬರುವಂತಹ ಪದ. ಬೈಬಲ್‍ನ ಒಂದು ಕಥೆ ಈ ಹೆಸರು ಬರಲು ಕಾರಣ. ನಿಕೋಡಮಸ್ ಎನ್ನುವುದು ಒಬ್ಬಾತನ ಒಂದು ಹೆಸರು. ಆತ ಜೀಸಸ್‍ನ ಅಪ್ಪಟ ಅಭಿಮಾನಿ. ಆದ್ರೆ ಆತನಿಗೆ ಜೀಸಸ್ ಕುರಿತು ಯಾರ ಮುಂದಾದರೂ ಪ್ರಸ್ತಾಪ ಮಾಡುವುದೆಂದ್ರೆ ವಿಪರೀತ ಹಿಂಜರಿಕೆ. ಮನದಲ್ಲಿ ಅಷ್ಟು ಅಭಿಮಾನವಿದ್ದರೂ, ಬಹಳವಾಗಿ ಆರಾಧಿಸ್ತಾ ಇದ್ದರೂ ತುಂಬಾ ಹಿಂಜರಿಕೆಯಿಂದ ಎಷ್ಟೋ ಭೇಟಿಯನ್ನು ತಪ್ಪಿಸಿಕೊಳ್ತಾ ಇದ್ದ. ಜೀಸಸ್‍ಗೆ ಹೇಗೋ ಈತನ ವಿಷಯ ಗೊತ್ತಾಯ್ತು. ಒಮ್ಮೆ ರಾತ್ರಿ ಜೀಸಸ್ ಈತನನ್ನು ಭೇಟಿಮಾಡಿ ಆತನ ತೊಂದರೆಯನ್ನು ಪರಿಹರಿಸಿದರು. ಆತನ ಸಮಸ್ಯೆಯನ್ನು ಜೀಸಸ್ ಬಗೆಹರಿಸಿದ.

ನಿಕೋಡಮಸ್ ಕಾಂಪ್ಲೆಕ್ಸ್ ಲಕ್ಷಣಗಳು:

ಆದರೆ ಈಗಲೂ ನಮ್ಮ ನಿಮ್ಮ ನಡುವೆ ಅಥವಾ ಸಂದರ್ಭಾನುಸಾರ ನಾವೇ ನಿಕೋಡಮಸ್ ತರದ ಹಿಂಜರಿಕೆಗೆ ಒಳಗಾಗ್ತಾನೆ ಇರ್ತೇವೆ. ಈ ಕಾಲದಲ್ಲಿ ನಮ್ಮನ್ನ ನಿಕೋಡಮಸ್ ಹಾಗೆ ಸರಿಮಾಡೋಕೆ ಕ್ರಿಸ್ತ ಬರಲಿ, ಕೃಷ್ಣ ಬರಲಿ ಎಂದು ಕಾಯ್ತಾ ಕೂರಕ್ಕಾಗ್ತದಾ? ಮನೆಗೆ ಸಡನ್ನಾಗಿ ಯಾರಾದ್ರೂ ಬಂದ್ರೆ ಏನ್ ಮಾತಾಡೋದು ಅಂತಾ ಗೊತ್ತಾಗಲ್ಲ. ಹೊಸಬರ ಜೊತೆಗೆ ಹೇಗೆ ಪರಿಚಯ ಮಾಡ್ಕೋಬೇಕು ಅಂತಾ ಗಲಿಬಿಲಿಗೊಳ್ತೇವೆ. ಕಾಲೇಜಲ್ಲಿ ಹುಡುಗಿಯರ ಜೊತೆ ಮಾತಾಡಬೇಕು ಅಂತ ಎಷ್ಟೋ ಹುಡುಗರು ಮನಸ್ಸಲ್ಲಿ ಅಂದುಕೊಂಡ್ರೂ ಧೈರ್ಯ ಸಾಕಾಗದೇ ಸುಮ್ನಾಗಿರ್ತಾರೆ. ಆಫೀಸಲ್ಲಿ ಮುಖ್ಯಾಧಿಕಾರಿಗೆ ತುಂಬಾ ಹೇಳ್ಬೇಕು ಅಂದ್ಕೊಂಡಿದ್ರೂ ಅವ್ರು ಏನಂದುಕೊಳ್ತಾರೋ ಅಂತಾ ಸುಮ್ಮನಾಗ್ತೇವೆ. ಸಭೆಯಲ್ಲಿ ಪ್ರಶ್ನೆ ಮಾಡ್ವಾಗ ಉತ್ತರ ಗೊತ್ತಿದ್ದರೂ ಹೇಳಲು ಏನೋ ಹಿಂಜರಿಕೆ. ಎದೆ ನಗಾರಿ ತರ ಡವಡವ ಅಂತಾ ಸೌಂಡ್ ಮಾಡ್ತಾ ಇರ್ತದೆ. ಇವೆಲ್ಲಾ ನಿಕೋಡಮಸ್ ಕಾಂಪ್ಲೆಕ್ಸ್ ಲಕ್ಷಣಗಳು.

ಈ ಕಾಂಪ್ಲೆಕ್ಸ್ ಇದ್ರೆ ಪ್ರತಿ ಸಣ್ಣ ವಿಷಯಕ್ಕೂ ಅತಿಯಾದ ಆಲೋಚನೆ ಬರತ್ತೆ. ಆದರೆ ಎದುರಿನ ವ್ಯಕ್ತಿಗಳು ಏನಂದುಕೊಳ್ತಾರೋ ಅಂತಾ ಅರ್ಥವಿಲ್ಲದ ಉದ್ವೇಗದಿಂದ ನಮ್ಮ ಮನಸ್ಸಲ್ಲಿ ಇರೋದನ್ನು ಏನೂ ನಾವು ಹೇಳಿಕೊಳ್ಳೋದೇ ಇಲ್ಲ. ಇದು ಖಂಡಿತಾ ಭಯವಲ್ಲ. ಅದೊಂದು ತೆರನಾದ ಗಾಬರಿಯಿಂದ ಕೂಡಿದ ನಾಚಿಕೆ. ಹಾಗಿದ್ರೆ ಇದಕ್ಕೆ ಪರಿಹಾರವೇನು? ಪರಿಹಾರ ಇನ್ನೇನು-ನಾವೇ ಇದಕ್ಕೆ ಪರಿಹಾರ. ಬದಲಾಯಿಸಿಕೊಳ್ಳಬೇಕಾದ ನಮ್ಮ ಆಲೋಚನಾ ದಾಟಿಯೇ ಇದಕ್ಕೆ ಸೊಲ್ಯೂಶನ್ನು.! We are born to express not to impress! ಅನ್ನೋದು ಯಾವಾಗಲೂ ನಮ್ಮ ಮೈಂಡಲ್ಲಿರಲಿ!

ಮನೋಭಾವ ಬದಲಾಗಬೇಕು:

fear

ಬೇರೆಯವರ ಬಗ್ಗೆ ಜಾಸ್ತಿ ಯೋಚಿಸ್ತಾ ಯೋಚಿಸ್ತಾ ನಮ್ಮ ಬಗ್ಗೆ ಆಲೋಚಿಸುವುದನ್ನೇ ಮರೆತಿದ್ದೇವೆ. ಮೊದಲು ನಮ್ಮ ಈ ಮನೋಭಾವ ಬದಲಾಗಬೇಕು. ನಮ್ಮ ಜೀವನವನ್ನ ನಮ್ಮಷ್ಟು ಸುಂದರವಾಗಿ ಬೇರೆ ಯಾರು ತಾನೆ ಕಲ್ಪಿಸಿಕೊಳ್ಳೋದಕ್ಕೆ ಸಾಧ್ಯ. ಮನಸಿಗೆ ಸರಿ ಅನ್ನಿಸಿದ್ದನ್ನ ಹೇಳಿ ಬಿಡಬೇಕು. ನಾವೇನಾದ್ರೂ ತಪ್ಪು ಹೇಳಿದ್ರೆ ತಪ್ಪಾಗ್ಲಿ ಬಿಡಿ! ಸರಿಮಾಡಿಕೊಂಡ್ರಾಯ್ತು. ಆ ಟೈಮಲ್ಲೆಲ್ಲಾ ಮಾತು ಆಡಿದರೆ, ಮುತ್ತು ಒಡೆದರೆ ಅಂತಾ ಗಾದೆ ನೆನಪು ಮಾಡ್ಕೊಳ್ತಾ ಕುಂತ್ರೆ ನಮ್ಮ ಅವಕಾಶ ಬೇರೆ ಯಾರಾದ್ರೂ ದೋಚಿಕೊಂಡು ಹೋಗಬಹುದು. ಯಾಕಂದ್ರೆ ಈಗಿನ ಜನರೇಶನ್ನು ಫುಲ್ಲು ಫಾಸ್ಟಿದೆ. ಮೇಲಾಗಿ ನಾವು ಹೇಳಿದ್ದು ಸರಿ, ತಪ್ಪು ಅಂತಾ ಯೋಚಿಸುವಷ್ಟು ವ್ಯವಧಾನ ಈಗಿನವರಿಗೆ ಎಲ್ಲಿದೆ?

ಬೇಕಂತಲೇ ಹೆಸರು ಮಾಡಬೇಕಂತ ಅಸಂಬದ್ಧವಾಗಿ ಮಾತಾಡೋ ಈ ಟ್ರೆಂಡಲ್ಲಿ ನಾವು ಹೇಳೋದೋ, ಬೇಡ್ವೋ ಅಂತಾ ಇದ್ರೆ ನಮ್ಮಷ್ಟು ದಡ್ಡರು ಇನ್ಯಾರಿಲ್ಲ! ಇನ್ನಾದ್ರೂ ಬದಲಾಗೋಣ ನಿಕೋಡಮಸ್ ಕಾಂಪ್ಲೆಕ್ಸ್‍ನಿಂದ ಹೊರಬರೋಕೆ ಸ್ವಯಂ ಪ್ರೇರಣೆಯಿಂದ ಖಂಡಿತಾ ಸಾಧ್ಯ. ಅದೂ ಕಷ್ಟ ಅಂದ್ರೆ ನುರಿತ ಕೌನ್ಸೆಲರ್ ಇಂದ ಕೌನ್ಸೆಲಿಂಗ್ ತಗೋಳಿ. ಏನಾದ್ರೂ ಮಾಡಿ ನಿಕೋಡಮಸ್ ಕಾಂಪ್ಲೆಕ್ಸ್ ಎನ್ನುವ ವ್ಯಾಧಿಯಿಂದ ಹೊರಬನ್ನಿ. ಯಾಕಂದ್ರೆ ಈ ಚಿಕ್ಕ ಹಿಂಜರಿಕೆ ನಮ್ಮ ಸಮಾಜದಲ್ಲಿನ ಬಹಳಷ್ಟು ಜನರ ಅನೇಕ ಬಂಗಾರದಂತಹ ಅವಕಾಶಗಳನ್ನ ಕಿತ್ಕೊಂಡಿದೆ. ಇನ್ನು ಮುಂದಾದ್ರೂ ಇವೆಲ್ಲವುಗಳಿಂದ ಮುಕ್ತವಾಗಿ ಅಂದ್ಕೊಂಡದ್ದು ಸಾಧಿಸಲು ಕಾರ್ಯಗತರಾಗೋಣ. ಲೈಫಲ್ಲಿ ಏನಾದ್ರೂ ಒಂದು ಮಾಡೋಣ. ನಾವು ಹೊಗೆ ಹಾಕಿಸಿಕೊಂಡ ಮೇಲೂ ಕೆಲ ದಿನ ಇರೋದು ಅಂದ್ರೆ ನಮ್ಮ ಸಾಧನೆ ಮತ್ತು ಮಾಡಿದ ಹೆಸರು ಮಾತ್ರ!

ಸಚಿನ್ ಶರ್ಮಾ ಬೆಂಗಳೂರು ಆರೋಗ್ಯ ಚಿಂತಕರು ಮೊ: 9036723369

ಸಚಿನ್ ಶರ್ಮಾ ಬೆಂಗಳೂರು
ಆರೋಗ್ಯ ಚಿಂತಕರು
ಮೊ: 9036723369

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!