ಪೌರರಕ್ಷಣಾ ಪಡೆ : ಸಂಕಷ್ಟ ಪರಿಸ್ಥಿತಿಗಳಲ್ಲಿ ಜೀವ ಸಂರಕ್ಷಣೆ, ಸಹಾಯ.

ನಾಗರಿಕ ರಕ್ಷಣಾ ಪಡೆ ಅಥವಾ ಪೌರರಕ್ಷಣಾ ಪಡೆ ಸಂಕಷ್ಟ ಪರಿಸ್ಥಿತಿಗಳಲ್ಲಿ ಜೀವ ಸಂರಕ್ಷಣೆ, ನಿಮ್ಮ ಸ್ವಂತ ಹಾಗೂ ಇತರರ ಯೋಗಕ್ಷೇಮಗಳನ್ನು ಕಾಪಾಡಿ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ದುಡಿಯುವ ಸಂಘಟನೆ.

poura-rakshana-padeನಾಗರಿಕ ಜೀವನದ ಮೇಲೆ ವಿಮಾನ ದಾಳಿ, ಭೂಕಂಪ, ನೆರೆಹಾವಳಿ ಅಥವಾ ಗುಂಪು ಗಲಭೆ ಇತ್ಯಾದಿಗಳಿಂದುಂಟಾಗುವ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ದುಡಿಯುವ ಸಂಘಟನೆಯೇ ನಾಗರಿಕ ರಕ್ಷಣಾ ಪಡೆ ಅಥವಾ ಪೌರರಕ್ಷಣಾ ಪಡೆ. ಈ ಸಂಘಟನೆಯು ಸಂಕಷ್ಟ ಪರಿಸ್ಥಿತಿಗಳಲ್ಲಿ ಜೀವ ಸಂರಕ್ಷಣೆಗಾಗಿ, ಆಸ್ತಿ ನಷ್ಟವನ್ನು ಕನಷ್ಟೀಕರಿಸಲು ಉತ್ಪಾದಕತೆಯ ಅವಿರತ ಮುಂದುವರಿಕೆಯನ್ನು ಖಾತರೀಪಡಿಸಲು ಹಾಗೂ ಪ್ರಜೆಗಳ ಆತ್ಮಸ್ಥೈರ್ಯ ಕಾಪಾಡಲು ಸದಾ ಶ್ರಮಿಸುತ್ತದೆ. ದಾಳಿಯ ನಂತರ ಅಗತ್ಯ ಸೇವೆಗಳು, ಕೈಗಾರಿಕಾ ಘಟಕಗಳು ಮತ್ತು ಇತರ ನಾಗರಿಕ ಕ್ಷೇತ್ರಗಳಲ್ಲಿ ಅತಿ ಶೀಘ್ರವಾಗಿ ಸಾಮಾನ್ಯ ಸ್ಥಿತಿ ಮರಳಿಸುವತ್ತ ಇದು ದುಡಿಯುತ್ತದೆ.

ನಾಗರಿಕ ರಕ್ಷಣೆಯ ಮಹತ್ವವೇನು?

ಮನೋಯುದ್ಧ ಅಥವಾ ಮಾನಸಿಕ ದಾಳಿಯು ಜನರಲ್ಲಿ, ಭಯ, ಆತಂಕಗಳನ್ನು ಹುಟ್ಟಿಸಿ, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಅವರ ನಿರೋಧಕ ಶಕ್ತಿಯನ್ನು ಮುರಿಯಲು ಉದ್ದೇಶಿಸುತ್ತದೆ. ನಾಗರಿಕ ರಕ್ಷಣೆಯ ಮಹತ್ವವೆಂದರೆ ನಾಗರಿಕ ಜನಸಮುದಾಯದ ಮನೋಸ್ಥೈರ್ಯ, ಆತ್ಮಸ್ಥೈರ್ಯಗಳನ್ನು ಹೆಚ್ಚಿಸಿ ಮನೋಯುದ್ಧವನ್ನು ತಡೆಗಟ್ಟುವುದು. ನಾಗರಿಕರಾದ ನೀವು ದೇಶದ ಗೌರವ, ಸ್ವಾತಂತ್ರ್ಯಗಳನ್ನು ಕಾಪಾಡುವಲ್ಲಿ ಯಾವುದೇ ಯೋಧರಷ್ಟು ತತ್ಪರರಾಗಿದ್ದೀರಿ.

ಸಂಕಷ್ಟ ಪರಿಸ್ಥಿತಿ ಅಥವಾ ಗುಂಪು ಗಲಭೆಯ ನಂತರದ ಸಮಸ್ಯೆಗಳು:

pourarakshanapade1. ಪ್ರತಿ ದುರ್ಘಟನೆಯೂ ಕೆಳಕಂಡಂತಹ ಜಟಿಲ, ಕಠಿಣ ಸಮಸ್ಯೆಗಳನ್ನು ಸೃಷ್ಠಿಸುತ್ತದೆ.

2. ಜನಗಳ ಸಾವು, ನೋವುಗಳು

3. ಅನಾರೋಗ್ಯಕರ ಪರಿಸ್ಥಿತಿಗಳು ಹಾಗೂ ಸಾಂಕ್ರಾಮಿಕ ರೋಗಗಳು

4. ಪ್ರಾಣಿಗಳ ಸಾವು, ನೋವುಗಳು

5. ಮುರಿದ, ಬಿದ್ದ ಕಟ್ಟಡಗಳು

6. ಮುರಿದು ಬಿದ್ದ ಕಟ್ಟಡಗಳಡಿ ಸಿಲುಕಿರುವ ಜನಗಳು

7. ಶಿಥಿಲಗೊಂಡ ಅಗತ್ಯ ಸೇವೆಗಳು

8. ಬೃಹತ್ ಪ್ರಮಾಣದ ಅಗ್ನಿ ಅನಾಹುತಗಳು

9. ಭೂ ಸಮಾದಿ ಹೊಂದಿದ ಅಥವಾ ನಾಶವಾದ ಆಸ್ತಿ ಪಾಸ್ತಿಗಳು

10. ಆಹಾರ, ವಸತಿ, ಬಟ್ಟೆ ಕಳೆದುಕೊಂಡ ನಿರಾಶ್ರಿತ ಜನರು

11. ಚದುರಿದ ಕುಟುಂಬದ ಸದಸ್ಯರು

12. ಪ್ರಾಣಿಗಳನ್ನು ಸ್ಥಳಾಂತರಿಸುವುದು

13. ಆತಂಕ ಪರಿಸ್ಥಿತಿ ಮತ್ತು ಸುಳ್ಳು ವದಂತಿಗಳು

14. ಕಾನೂನು ಮತ್ತು ಶಾಂತಿ ಪಾಲನೆಯ ಸಮಸ್ಯೆಗಳು

15. ಬೇರೆ ಬೇರೆ ಪ್ರದೇಶಗಳಲ್ಲಿ ಸಂಭವಿಸುವ ಹಾನಿ, ನಷ್ಟಗಳು

ವಾರ್ಡನ್ (ರಕ್ಷಕ):

ವಾರ್ಡನ್‍ರೇ ನಾಗರಿಕ ರಕ್ಷಣಾ ಸಂಘಟನೆಯ ಬೆನ್ನೆಲುಬು. ಅವರು ತಮ್ಮ ಪ್ರದೇಶದ ಜನತೆಯ ಮಿತ್ರ, ದಾರ್ಶನಿಕ, ಮಾರ್ಗದರ್ಶಕರಾಗಿರುತ್ತಾರೆ ಮತ್ತು ನಾಗರಿಕ ರಕ್ಷಣಾಅಧಿಕಾರಿಗಳ ಕಣ್ಣು, ಕಿವಿಗಳಾಗಿರುತ್ತಾರೆ. ಸಾಧಾರಣವಾಗಿ ಅವರು ಪ್ರದೇಶದ ಸ್ಥಳೀಯ ನಿವಾಸಿಯಾಗಿದ್ದು, ತನ್ನ ಪ್ರದೇಶ ಹಾಗೂ ಅಲ್ಲಿಯ ಜನಗಳ ಬಗ್ಗೆ ಉತ್ತಮ ಮಾಹಿತಿ ಹೊಂದಿರುತ್ತಾರೆ.

ನಾಗರಿಕ ರಕ್ಷಣಾ ಕರ್ತವ್ಯಗಳು:

pourarakshana-pade1. ವಿಮಾನದಾಳಿ ಪರಿಹಾರ: ಪ್ರಭಾವಿತ ಪ್ರದೇಶಗಳಿಗೆ ಪರಿಹಾರ ಒದಗಿಸುವುದು ಮತ್ತು ಸ್ಥಳೀಯ ಅನಾಹುತಗಳನ್ನು ಎದುರಿಸಲು “ಗೃಹ ಅಗ್ನಿಶಾಮಕ ತಂಡ” (ಹೌಸ್ ಫೈರ್‍ಪಾರ್ಟಿಸ್) ಗಳನ್ನು ಸಂಘಟಿಸುವುದು.

2. ಅಪಘಾತ ಸೇವೆಗಳು: ಅಪಘಾತಕ್ಕೊಳಗಾದವರಿಗೆ ವೈದ್ಯಕೀಯ ಸೇವೆ ಹಾಗೂ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಒದಗಿಸುವುದು..

3. ನಿಯಂತ್ರಣ ಹಾಗೂ ಸಂಪರ್ಕ ಕೇಂದ್ರ ಸೇವೆಗಳು : ಅಪಘಾತ ಸ್ಥಳಗಳಿಗೆ ಪರಿಹಾರ ತಂಡಗಳನ್ನು ರವಾನಿಸುವ ನಾಗರಿಕ ರಕ್ಷಣಾ ದಳದ ನರ ಕೇಂದ್ರವೇ ಈ ನಿಯಂತ್ರಣ ಕೇಂದ್ರ..

4. ಪಾರು ಮಾಡುವ ಸೇವೆಗಳು: ಗೃಹರಕ್ಷಕ ದಳದ ರಕ್ಷಣಾ ತಂಡಗಳು ಹಾನಿಗೊಂಡ ಮತ್ತು ಎತ್ತರದ ಕಟ್ಟಡಗಳಲ್ಲಿ ಸಿಲುಕಿರುವ ಜನರನ್ನು ಪಾರು ಮಾಡುವುದು, ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಒದಗಿಸುವುದು ಮತ್ತು ಶವಗಳನ್ನು ಹೊರತೆಗೆಯುವ ಸೇವೆಗಳನ್ನು ಒದಗಿಸುತ್ತದೆ.

5. ಅಗ್ನಿಶಾಮಕ ಪೂರಕ ಸೇವೆ: ಟ್ರೇಲರ್ ಪಂಪುಗಳ ಸಹಾಯದಿಂದ ಸಣ್ಣ ಪುಟ್ಟ ಅಗ್ನಿ ಅನಾಹುತಗಳನ್ನು ಎದುರಿಸಲು ತರಬೇತಿ ಪಡೆದ ಸ್ವಯಂ ಸೇವಕರ ಒಂದು ತಂಡ.

6. ಕ್ಷೇಮಾಭ್ಯದಯ ಸೇವೆ: ಅಪಾಯ ಸ್ಥಾನದಿಂದ ಸ್ಥಳಾಂತರ, ಮಾಹಿತಿ ಹಸ್ತ ಪತ್ರಗಳ ವಿತರಣೆ, ಆಹಾರ, ವಸ್ತ್ರಗಳು ಸೇರಿದಂತೆ ನಿರಾಶ್ರಿತರ ಶುಷ್ರೂಷೆ, ಮಾಹಿತಿ ಒದಗಿಸುವ ಮತ್ತು ನೋಂದಣಿ ಕಾರ್ಯಗಳಲ್ಲಿ ನೆರವಾಗುವುದು.

7. ಕೇಂದ್ರ ಕಾರ್ಯಾಲಯ ಸೇವೆ: ನಾಗರಿಕ ರಕ್ಷಣಾ ಸಂಘಟನೆಯ ಆಯೋಜನೆ, ಕಾರ್ಯಾಚರಣೆ ಹಾಗೂ ನಿಯಂತ್ರಣ, ವಿಮಾನದಾಳಿ ಮುನ್ನೆಚ್ಚರಿಕೆಗಳ ಪ್ರಸಾರ ಮತ್ತು ಕತ್ತಲೀಕರಣದ (ಬ್ಲ್ಯಾಕ್‍ಔಟ್) ಏರ್ಪಾಟುಗಳು.

ಯಾರು ಸೇರಬಹುದು?

ಅರ್ಹತೆ-ನೀವು 15 ವರ್ಷದ ಮೇಲ್ಪಟ್ಟ ವಯಸ್ಸಿನವರಾಗಿದ್ದು, ಕನಿಷ್ಟ ಪ್ರಾಥಮಿಕ ಶಾಲೆಯಿಂದ ಉತ್ತೀರ್ಣರಾಗಿದ್ದು, ದೈಹಿಕವಾಗಿ ಸಶಕ್ತ ಹಾಗೂ ಬುದ್ಧಿ ಚಾತುರ್ಯದಲ್ಲಿ ಚುರುಕಾಗಿದ್ದರೆ ನಾಗರಿಕ ರಕ್ಷಣಾ ದಳವನ್ನು ಸೇರಲು ಅರ್ಹರು.

ನೀವು ಹೇಗೆ ನೆರವಾಗಬಹುದು?

1. ನೀವು ನಾಗರಿಕ ರಕ್ಷಣಾ ದಳದಲ್ಲಿ ಏನು ಕಲಿಯುತ್ತೀರಿ ಮತ್ತು ಕಲಿತುದನ್ನು ಎಷ್ಟು ಚೆನ್ನಾಗಿ ಕಾರ್ಯಗತಗೊಳಿಸುತ್ತೀರಿ ಎಂಬುದು ಸಂಕಷ್ಟ ಸಮಯಗಳಲ್ಲಿ ನಿಜವಾದ ಪರಿಣಾಮ ಬೀರಿ ನಿಮ್ಮ ದೇಶದ ಹಾಗೂ ಅದರ ಪ್ರಜೆಗಳ ಕ್ಷೇಮಾಭ್ಯುದಯ ಕಾಪಾಡಬಲ್ಲದು.

2. ಸ್ವಯಂ ಸೇವಕರಾದ ನೀವು ಅತೀ ದೊಡ್ಡ ಜವಾಬ್ದಾರಿ ಹೊತ್ತಿರುತ್ತೀರಿ. ಅದಕ್ಕೋಸ್ಕರ ಉತ್ತಮ ತರಬೇತಿ ಅತ್ಯವಶ್ಯಕ. ನಾಗರಿಕ ರಕ್ಷಣಾ ಸೇವೆಗಳಿಗೆ ಸ್ವಯಂಪ್ರೇರಣೆಯಿಂದ ತರಬೇತಿ ಪಡೆದು ದೇಶದ ಸ್ವತಂತ್ರಕ್ಕಾಗಿ ತಮ್ಮನ್ನು ಮುಡುಪಾಗಿಸಲು ಇಚ್ಛೆಯುಳ್ಳ ಸ್ತ್ರೀ, ಪುರುಷರ ಅಗತ್ಯವಿದೆ.

3. ಆದ್ದರಿಂದ ನೀವು ಇನ್ನು ತಡಮಾಡದೇ ತಕ್ಷಣ ನಿಮಗೆ ಇಷ್ಟವೆನಿಸಿದ ಸೇವೆಗೆ ಸ್ವತ: ಮುಂಬನ್ನಿ.

4. ನೀವು ದೈಹಿಕವಾಗಿ ಸಶಕ್ತರು ಹಾಗೂ ತಾಂತ್ರಿಕ ಮನೋವೃತ್ತಿ ಉಳ್ಳವರಾಗಿದ್ದರೆ, ರಕ್ಷಣಾ ಸೇವೆ ಅಥವಾ ಅಗ್ನಿಶಾಮಕ ಪೂರಕ ಸೇವೆಯನ್ನು ಸೇರಿರಿ.

5. ನೀವು ಕ್ಷೇಮಾಭ್ಯುದಯ ಮನೋಪ್ರವೃತ್ತಿ ಉಳ್ಳವರಾಗಿದ್ದರೆ ಕ್ಷೇಮಾಭ್ಯುದಯ ಸೇವೆಯನ್ನು ಸೇರಿರಿ.

6. ನೀವು ರೇಡಿಯೋ ಆಪರೇಟರ್ ಅಥವಾ ಟೆಲಿಫೋನ್ ಆಪರೇಟರ್ ಆಗಿದ್ದರೆ ಸಂಪರ್ಕಸೇವೆಯನ್ನು ಸೇರಿರಿ.

ಇನ್ನು ಸಮಯ ಕಳೆದುಕೊಳ್ಳಬೇಡಿ. ನಿಮ್ಮ ಸ್ಥಳೀಯ ನಾಗರಿಕ ರಕ್ಷಣಾ ಕಛೇರಿಯನ್ನು ಸಂಪರ್ಕಿಸಿ. ಸೇರಿಕೊಳ್ಳಿರಿ. ತಕ್ಷಣ ಸಂಘಟಿತ ನಾಗರಿಕ ರಕ್ಷಣಾ ಸೇವೆಯಲ್ಲಿ ತರಬೇತಿ ಪ್ರಾರಂಭಿಸಿರಿ. ಸಂಕಷ್ಟ ಸಂದರ್ಭಗಳಲ್ಲಿ ನಿಮ್ಮ ಸ್ವಂತ ಹಾಗೂ ಇತರರ ಯೋಗಕ್ಷೇಮಗಳನ್ನು ಕಾಪಾಡಿಕೊಳ್ಳುವುದೇ ದೇಶ ರಕ್ಷಣೆಯ ಮೊದಲ ಹೆಜ್ಜೆ.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787

ಡಾ| ಮುರಲೀ ಮೋಹನ್ ಚೂಂತಾರು

ಚೀಫ್ ವಾರ್ಡನ್-ಪೌರರಕ್ಷಣಾ ಪಡೆ,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!