ಮರೆವು ಕಾಯಿಲೆಯ ಆರಂಭವೇ?

ಮರೆವು ಕಾಯಿಲೆಯ ಆರಂಭವೇ? ಮೊಬೈಲು ಎತ್ತಿಕೊಳ್ಳುವುದನ್ನು ಮರೆಯುವುದರಿಂದ ಎ.ಟಿ.ಎಂ. ಪಿನ್ ನಂಬರ್ ಮರೆಯುವವರೆಗೆ ದೈನಂದಿನ ಜೀವನದಲ್ಲಿ ಅದೆಷ್ಟೋ ಮರೆವುಗಳು ನಮಗಾಗುತ್ತದೆ. 

ಮರೆವು ಕಾಯಿಲೆಯ ಆರಂಭವೇ?ನಿಮ್ಮ ಗ್ಯಾಸ್ ಕನೆಕ್ಷನ್‍ನ ಕನ್‍ಸ್ಯೂಮರ್ ನಂಬರ್ ಎಷ್ಟು? ಅತ್ಯಂತ ನಿಕಟ ಸಂಬಂಧಿಕರ ಅಥವಾ ಗೆಳೆಯರ ಮೊಬೈಲು ನಂಬರನ್ನು ಹೇಳಬಲ್ಲಿರಾ? ಅಪ್ಪ ಅಮ್ಮನ ಹುಟ್ಟಿದ ದಿನಾಂಕ…? ಮಗ ಅಥವಾ ಮಗಳ ಹುಟ್ಟಿದ ದಿನಾಂಕ? ಪ್ರಾಣ ಸ್ನೇಹಿತನ ವಾಹನದ ನಂಬರ್? ಬದುಕಿನಲ್ಲಿ ನೆನಪಿಡಬೇಕಾದ ಅನೇಕ ವಿಷಯಗಳು ಈಗ ಹಲವರ ತಲೆಯಲ್ಲಿ ತಂಗಿ ನಿಲ್ಲುತ್ತಿಲ್ಲವೆಂಬುದು ಸತ್ಯ. ಅಷ್ಟೇ ಅಲ್ಲ, ನಮ್ಮ ವೆಹಿಕಲ್‍ನ ಕೀಯನ್ನು ಎಲ್ಲಿಟ್ಟೆದ್ದೇನೆಂಬ ನೆನಪು ಮಾಸಿ ಹೋಗಿ ಮನೆಯಲ್ಲಿ ನಡೆಯುವ ರಂಪಾಟಕ್ಕೆ ಕೊನೆಯುಂಟೇ? ಮೊಬೈಲ್ ಫೋನ್ ತೆಗೆದುಕೊಳ್ಳುವುದನ್ನು ಮರೆತು ಬಿಟ್ಟರೆ ಇಡೀ ದಿನ ಅಯೋಮಯ. ಪಾಸ್ ವರ್ಡ್ ಮರೆತು ಹೋಗಿದ್ದರಿಂದ ಯಾರನ್ನೋ ಶಪಿಸಿ ಎಟಿಎಂನ ಮುಂದೆ ನಿಂತು ಚಡಪಡಿಸುವುದರಿಂದ ಏನು ಪ್ರಯೋಜನ? ಸ್ಟೌವ್‍ನ ಮೇಲೆ ಹಾಲು ಕಾಯಿಸಲು ಇಟ್ಟು ಬೇರೇನೋ ಕೆಲಸ ಮಾಡುತ್ತಿದ್ದರೆ ಹಾಲು ಉಕ್ಕಿ ಸ್ವೌವ್‍ನ ಸುತ್ತ ಬಿಸಿ ಹಾಲಿನ ಅಭಿಷೇಕವಾಗಿರುತ್ತದೆ.
ಈಗ ನೀವು ಯೋಚಿಸುತ್ತಿರಬಹುದು, “ನನಗೂ ಇಂತಹದೊಂದು ಅನುಭವ ಆಗಿದೆಯಲ್ಲ” ಎಂದು. `ಮರೆವಿನ ಕಾಯಿಲೆ’ (ಅಲ್‍ಝೈಮರ್) ಬಂದಿದೆಯೆಂದು ಆತಂಕ ಪಡಬೇಕಿಲ್ಲ. ಇದು ಸೂಡೋ ಡಿಮೆನ್‍ಶ್ಯಾ (ಮಿಥ್ಯಾ ಸ್ಮೃತಿಭ್ರಂಶ) ಎಂಬ ಸಣ್ಣ ಕಾಯಿಲೆಯಷ್ಟೇ. ಇಂತಹ ಸಣ್ಣ ಸಣ್ಣ ವಿಚಾರಗಳು ಮರೆಯುವುದರಿಂದ ಮರೆಯುವ ಕಾಯಿಲೆಯೆಂದು ಭಾವಿಸುವವರು ಹೆಚ್ಚಾಗಿದ್ದಾರೆಂದು ವೈದ್ಯರುಗಳು ಹೇಳುತ್ತಾರೆ. ಯುವಕರಲ್ಲೇ ಇದು ಹೆಚ್ಚಾಗಿ ಕಂಡುಬರುತ್ತಿದೆಯಂತೆ.

ಸೂಡೋ ಡಿಮೆನ್‍ಶ್ಯಾ-ಮಿಥ್ಯಾ ಸ್ಮೃತಿಭ್ರಂಶ:

ಮರೆವಿನ ಕಾಯಿಲೆ ಇದೆಯೆಂದು ಡಾಕ್ಟರರ ಬಳಿಗೆ ಹೋಗುವವರು ಬಹುತೇಕ ಮಂದಿ ಯುವಕರು. ಇದು ಮರೆವಿನ ಕಾಯಿಲೆ ಅಲ್ಲವಾದರೂ ಗಂಭೀರ ವಿಷಯವೇ. ಮರೆವಿನ ಕಾಯಿಲೆಗೆ ತುತ್ತಾಗಿದ್ದೇನೆಂದು ತಪ್ಪಾಗಿ ಭಾವಿಸಿಕೊಳ್ಳುತ್ತಾರೆ.ಮಾನಸಿಕ ಸಂಘರ್ಷವೇ ಈ ರೋಗಾವಸ್ಥೆಗೆ ಪ್ರಮುಖ ಕಾರಣ. ಮಾನಸಿಕ ಸಂಘರ್ಷ ನೆನಪನ್ನು ವಿವಿಧ ರೀತಿಯಲ್ಲಿ ಹಾನಿಗೊಳಪಡಿಸುತ್ತದೆ. ವೃತ್ತಿನಿರತ ಅನೇಕ ಯುವಕರು ಈಗ ಮಾನಸಿಕ   ಒತ್ತಡವನ್ನು ಅನುಭವಿಸುತ್ತಿದ್ದಾರೆ. ಗುರಿಮುಟ್ಟಲು (ಟಾರ್ಗೆಟ್) ನಡೆಯುವ ಧಾವಂತ ಇಂದಿನ ನೌಕರರನ್ನು ಮಾನಸಿಕ ಒತ್ತಡದ ಗುಲಾಮರನ್ನಾಗಿಸುತ್ತಿದೆ. ವೃತ್ತಿ ವೈವಿದ್ಯತೆಗಾಗಿ ಇಂದಿನ ಯುವಕರು ಓದಿನ ಒತ್ತಡಕ್ಕೆ ಈಡಾಗುತ್ತಿದ್ದಾರೆ. ಅದು ಅವರ ಮನೋಸ್ಥಿತಿಯನ್ನು ಅಲ್ಲೋಲಕಲ್ಲೋಲಗೊಳಿಸುತ್ತದೆ. ಒಂದೇ ಸಮಯದಲ್ಲಿ ಒಂದಕ್ಕಿಂತಲೂ ಹೆಚ್ಚಿಗೆ ಕೆಲಸಗಳನ್ನು ಮಾಡಿ ತಮ್ಮ ವೃತ್ತಿ ಜೀವನವನ್ನು ಸುಧಾರಿಸಲು ಇಂದಿನ ಯುವಕರು ತಹತಹಿಸುತ್ತಾರೆ. ಆಫೀಸಿನ ಕೆಲಸದ ಒತ್ತಡ ಅನಿವಾರ್ಯವಾಗಿ ಮನೆಗೂ ಸ್ಥಳಾಂತರಗೊಳ್ಳುತ್ತದೆ.

ಮನೆಯವರೊಂದಿಗೆ ನಗುನಗುತ ಮಾತಾಡುವುದಕ್ಕಾಗಲಿ ಮಕ್ಕಳೊಂದಿಗೆ ಆಟವಾಡುವುದಕ್ಕಾಗಿ ಅವರ ಮನಸ್ಸು ಒಡಂಬಡುವುದಿಲ್ಲ. ಈ ಅವಸ್ಥೆ ಸೂಡೋಡಿಮೆನ್‍ಶ್ಯಾ ಎಂಬ ಮರೆವಿನ ಕಾಯಿಲೆಗೆ ಕೊಂಡೊಯ್ಯುತ್ತದೆ. ಮಾನಸಿಕ ಒತ್ತಡದಿಂದ ಮೆದುಳಿನ ಕೊಗ್ನಿಟೀವ್ ಫಂಕ್ಷನ್ ದಾರಿ ತಪ್ಪುತ್ತದೆ. ಮೆದುಳಿನೊಳಗಿನ ಒಟ್ಟು ಕೆಲಸ ಕಾರ್ಯಗಳಿಂದಲಷ್ಟೆ ನೆನಪು ಸರಿಯಾಗಿ ಪ್ರವರ್ತಿಸುವುದು. ಮೊದಲು ಪರಿಚಯಿಸಲ್ಪಟ್ಟ ಒಬ್ಬರ ಮುಖ ಮತ್ತು ಹೆಸರು ಮೆದುಳಿನ ಎರಡು ಸ್ಥಳಗಳಲ್ಲಿ ಉಳಿದುಕೊಳ್ಳುತ್ತದೆ. ಸ್ವಲ್ಪ ದಿನಗಳ ನಂತರ ಮತ್ತೆ ಅವರ ಭೇಟಿಯಾಗುತ್ತದೆ. ಮೆದುಳಿನ ಒಂದು ಸ್ಥಳದಿಂದ ಅವರ ಮುಖ ನಮ್ಮ ನೆನಪಿಗೆ ಬರುತ್ತದೆ. ಆದರೆ ಅವರ ಹೆಸರನ್ನು ಉಳಿಸಿಕೊಂಡ ಪಕ್ಕದ ಸ್ಥಳ ತಕ್ಷಣ ಜೀವತಳೆಯುವುದಿಲ್ಲ. ಅದರಿಂದ ಕೊಗ್ನಿಟೀವ್ ಫಂಕ್ಷನ್ ತೊಂದರೆಗೊಳಗಾಗುತ್ತದೆ. ಪರಿಣಾಮವಾಗಿ ವ್ಯಕ್ತಿಯ ಹೆಸರು ನೆನಪಿಗೆ ಬರದೇ ಹೋಗುತ್ತದೆ. ಹೀಗಾಗುವುದು ಮಾನಸಿಕ ಒತ್ತಡ ತೀವ್ರವಾದಾಗ ಹಸರು, ಫೋನ್ ನಂಬರ್, ಸ್ಕೂಟರ್ ಕೀ ನೆನಪಿಗೆ ಬಾರದೇ ಹೋಗುವುದು ಇಂತಹ ಸಮಯದಲ್ಲೇ.
ಮರೆವಿನ ಕುರಿತಾದ ಭಯ:
ಆದರೆ ಈ ಮರೆವು ಅಲ್ಲಿಗೆ ಮುಗಿಯುವುದಿಲ್ಲ. ಅದು ಭಯವಾಗಿ ಬದಲಾಗಿ ಮನಸ್ಸಿನಲ್ಲೇ ಉಳಿದು ಬಿಡುತ್ತದೆ. ಒಂದಕ್ಕಿಂತಲೂ ಹೆಚ್ಚಿಗೆ ಕಾಲ ಹೀಗಾದಾಗ ಮರೆವಿನ ಕಾಯಿಲೆ ಎಂದು ಖಚಿತಪಡಿಸಿ ಸೂಡೋಡಿಮೆನ್‍ಶ್ಯಾ ಎಂಬ ಅವಸ್ಥೆಗೆ ಈಡಾಗುತ್ತಾರೆ. ರುಚಿಯಾಗಿ ಅಡುಗೆ ಮಾಡುವ ಗೃಹಿಣಿ ನಡುವೆ ಸಾಂಬಾರಿಗೆ ಉಪ್ಪು ಹಾಕುವುದನ್ನು ಮರೆತು ಬಿಡುತ್ತಾಳೆ. ಗ್ಯಾಸ್ ಸ್ಟೌವ್ ಆನ್ ಮಾಡಿಟ್ಟು ವಾಷಿಂಗ್ ಮೆಷಿನ್‍ನಲ್ಲಿ ಬಟ್ಟೆ ಹಾಕಲು ಹೋಗುತ್ತಾಳೆ. ಇದನ್ನು ಮರೆವಿನ ಕಾಯಿಲೆ ಎಂದರೆ ಒಪ್ಪಲಾದಿತೇ? ಮತ್ತೊಂದು ಅರ್ಥದಲ್ಲಿ ಇದಕ್ಕೆ ಬೇಜವಾಬ್ದಾರಿ ಎನ್ನಬೇಕಾಗುತ್ತದೆ. ಸಾಂಬಾರು ತಯಾರಿಸುವಾಗ ತರಕಾರಿ ಹೆಚ್ಚುವುದರಿಂದ ಹಿಡಿದು ಒಗ್ಗರಣೆ ಹಾಕುವವರೆಗೆ ಎಲ್ಲವನ್ನು ಚಾಚೂ ತಪ್ಪದೆ ಸರಿಯಾಗಿ ಮಾಡಬೇಕು. ಅದನ್ನು ಮರೆಯುವುದರಿಂದ ಅದನ್ನು ಕಾಯಿಲೆ ಎಂದು ಹೇಳಲಾಗುವುದಿಲ್ಲ.

ದಿನವೂ ಅಗತ್ಯವಿರುವ ವಿಷಯವನ್ನು ಜ್ಞಾಪಿಸಿಕೊಳ್ಳಲು ಮೆದುಳಿಗೆ ಸುಲಭ. ಕಂಪ್ಯೂಟರ್‍ನಲ್ಲಿ ಇತ್ತೀಚೆಗಿನ ಐಟಂಗಳಿಗಾಗಿ ಫೈಲನ್ನು ಓಪನ್ ಮಾಡುವುದು ಬಹಳ ಸುಲಭ. ಅಗತ್ಯವಿಲ್ಲದ ವಿಷಯಗಳು ನಿಧಾನವಾಗಿ ಮರೆವಿಗೆ ತಳ್ಳಲ್ಪಡುತ್ತದೆ. ನಿಮ್ಮ ಎಲ್ಲಾ ಎಟಿಎಂ ಕಾರ್ಡ್‍ಗಳ ನಂಬರನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕೆಂದಿಲ್ಲ. ಒಂದಕ್ಕಿಂತಲೂ ಹೆಚ್ಚಿಗೆ ಇ-ಮೇಲ್ ಐಡಿಗಳು ಇರುವವರು, ಉಪಯೋಗಿಸದೆ ಇರುವ ಪಾಸ್‍ವರ್ಡ್‍ಗಳು ಮರೆತು ಹೋಗಿಬಿಡುತ್ತವೆ. ಆದರೆ ಇವೆಲ್ಲಾ ಮರೆವಿನ ಪ್ರಭಾವದಿಂದಲ್ಲ. ಭಯಪಡುವ ಅಗತ್ಯವೂ ಇಲ್ಲ. ಲೈಂಗಿಕ ಶೋಷಣೆ, ಮಾನಭಂಗ ಮುಂತಾದ ತೀವ್ರವಾದ ಮಾನಸಿಕ ಹಿಂಸೆಗಳು, ಅಪಘಾತಗಳಿಂದ ಉಂಟಾಗುವ ಭಯ, ಸಮಾಜದ ಭಯ… ಇವೆಲ್ಲಾ ಮನಸ್ಸನ್ನು ಸಂಘರ್ಷಭರಿತವನ್ನಾಗಿಸುತ್ತದೆ. ಆ ಮೂಲಕ ಮರೆವಿನತ್ತ ಕೊಂಡೊಯ್ಯುತ್ತದೆ. ಮನೆ ಅಥವಾ ಆಫೀಸಿನ ಮಾನಸಿಕ ಹಿಂಸೆಗಳನ್ನು ಅನುಭವಿಸುವುದರಿಂದ ವ್ಯಕ್ತಿಯ ಮೆದುಳಿನ ಜ್ಞಾಪಕದ ಭಾಗಗಳು ಹಾನಿಗೀಡಾಗುವ ಸಾಧ್ಯತೆಯಿದೆಯೆಂದು ಅಧ್ಯಯನಗಳು ಹೇಳುತ್ತವೆ.

ಕುತೂಹಲ ಮತ್ತು ಖಿನ್ನತೆ (ಆಂಕ್ಸಿಟಿ ಡಿಪ್ರೆಷನ್) ಕಾಣುವುದು ಸಾಮಾನ್ಯವಾಗಿ ಯುವಕರಲ್ಲಿ. ತನಗೆ ಹಳೆಯದಂತೆ ಅಥವಾ ಹಿಂದಿನಂತೆ ವೇಗವಾಗಿ ಕೆಲಸಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂಬ ಭಾವನೆ ಆತಂಕವನ್ನು ಹೆಚ್ಚಿಸುವುದೂ ಅಲ್ಲದೆ ಮಿಥ್ಯಾಸ್ಮೃತಿಭ್ರಂಶವನ್ನು ಉಂಟುಮಾಡುತ್ತದೆ, ಟೆನ್ಷನ್ ಕಡಿಮೆ ಮಾಡಲು ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುವುದು ಹೊಸ ವಿಚಾರವೇನೂ ಅಲ್ಲ. ಆದರೆ ಇದು ಸೂಡೋಡಿಮೆನ್‍ಶ್ಯಾವನ್ನು ಹೆಚ್ಚಿಸುತ್ತದೆಂಬ ಸತ್ಯ ಅವರಿಗೆ ತಿಳಿಯುವುದಿಲ್ಲ. ಇಂತಹವರು ಮಾನಸಿಕವಾಗಿ ಸದೃಢರಾಗದ ಹೊರತು ಅನ್ಯ ಪರಿಹಾರವಿಲ್ಲ. ಯೋಗದಂತಹ ಚಟುವಟಿಕೆಗಳಲ್ಲಿ ತಲ್ಲೀನರಾಗುವುದರಿಂದ ಇದನ್ನು ದೂರಗೊಳಿಸಬಹುದು. ಬದುಕಿನ ಶೈಲಿಯನ್ನು ಬದಲಾಯಿಸುವುದು, ಮಾನಸಿಕ ಘರ್ಷಣೆಗಳನ್ನುಂಟುಮಾಡುವ ಪರಿಸರದಿಂದ ದೂರ ಸರಿಯುವುದು… ಇವೇ ಸೂಡೋಡಿಮೆನ್‍ಶ್ಯಾಕ್ಕಿರುವ ಪ್ರಮುಖ ಪರಿಹಾರಗಳು. ತೀವ್ರ ವಿಷಾದದತ್ತ ರೋಗಿ ಸಯುತ್ತಿದ್ದರೆ ಡಾಕ್ಟರ್ ಅದಕ್ಕೆ ಸೂಕ್ತ ಔಷಧಿಯನ್ನು ನೀಡುತ್ತಾರೆ.

ಇಮ್ಮಡಿಯಾಗುತ್ತಿರುವ ಲೆಕ್ಕಾಚಾರಗಳು:

ಆದರೆ ಶಾಶ್ವತ ಮರೆವುಗಳು ಅಲ್‍ಝೈಮರ್‍ಗೆ ದಾರಿ ತೆರೆಯುತ್ತದೆಂದು ವೈದ್ಯರು ಹೇಳುತ್ತಾರೆ. ಸ್ಮತಿಭ್ರಂಶದ ಕಾಯಿಲೆಗೆ ಈಡಾದವರ ಸಂಖ್ಯೆ ಹೆಚ್ಚಾಗುತ್ತಿದೆಯೆಂದು ಅಧ್ಯಯನಗಳು ಸಾರುತ್ತವೆ. ಈಗ ಜಗತ್ತಿನಲ್ಲಿ 50 ಮಿಲಿಯನ್ ಜನ ಡಿಮೆನ್‍ಶ್ಯಾ ಕಾಯಿಲೆ ಇದೆ. ಪ್ರತಿ ವರ್ಷ, ಸುಮಾರು 10 ಮಿಲಿಯನ್ ಹೊಸ ಪ್ರಕರಣಗಳು ಕಂಡುಬರುತ್ತವೆ. ಡಿಮೆನ್‍ಶ್ಯಾ ಸಾಮಾನ್ಯವಾಗಿ 60 ವರ್ಷ ವಯಸ್ಸಿನ ನಂತರ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆ. ತುಂಬಾ ಅಪರೂಪಕ್ಕೆ 60 ವರ್ಷಕ್ಕೆ ಮುಂಚೆ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಪರುಷರಿಗಿಂತಲೂ ಆಯಸ್ಸು ಹೆಚ್ಚಿಗೆ ಇರುವುದು ಮಹಿಳೆಯರಿಗೆ. ಆದ್ದರಿಂದ ಭಾರತದಲ್ಲಿ ಡಿಮೆನ್‍ಶ್ಯಾ ರೋಗಳಿಗೆ ಬಲಿಯಾಗುವವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. 60 ವರ್ಷ ದಾಟಿದ ಕೂಡಲೇ ಅಲ್‍ಝೈಮರ್ ಶೇ.5ರಷ್ಟು ಮಂದಿಗೆ ಕಾಣಿಸಿಕೊಳ್ಳುತ್ತದೆ. 65 ವರ್ಷ ವಯಸ್ಸಿನವರೆಗೆ ಶೇ.10, 80ರವರೆಗೆ ಶೇ.20 ಸಾಧ್ಯತೆಯಿದೆ.

ಸಹಜ ವಾರ್ಧಕ್ಯದಲ್ಲಿರುವರೊಂದಿಗೆ (ನಾರ್ಮಲ್ ಏಜಿಂಗ್) ನೆನಪಿನ ಶಕ್ತಿಯನ್ನು ಪರಿಶೀಲಿಸಿದಾಗ ಡಿಮೆನ್‍ಶ್ಯಾಯಾದ ನೆನಪಿನ ಶಕ್ತಿಗೆ ಇನ್ನು ಕೆಲವು ವಿಶೇಷತೆಗಳಿವೆ. ಇಲ್ಲಿ ಭೂತಕಾಲದ ನೆನಪುಗಳು ಸರಿಯಾಗಿರುತ್ತವೆ. ಆದರೆ ಸ್ವಲ್ಪ ಮುಂಚೆ ನಡೆದ ಘಟನೆಗಳು ಮರೆತು ಹೋಗುತ್ತವೆ. ಮರೆವು ಕಾಯಿಲೆಯ ಅತ್ಯಂತ ಗಮನ ಸೆಳೆಯುವ ಲಕ್ಷಣ ಇದಾಗಿರುತ್ತದೆ. ಇಂತಹದೊಂದು ಅವಸ್ಥೆಯನ್ನು ರೋಗಿಯ ಜೊತೆಗೆ ಬರುವವರು ಗಮನಿಸುವುದಿಲ್ಲ. ಬಾಲ್ಯಕಾಲದಲ್ಲಿ ಸೇವಿಸಿದ ರುಚಿಯಾದ ಆಹಾರದ ಕುರಿತು ಯೋಚಿಸುವಾಗ ಇಂದು ಬೆಳಗ್ಗೆ ತಿಂದದ್ದು ಏನೆಂಬುದು ಮರೆತು ಹೋಗಿರುತ್ತದೆ. ಮನೆಯಲ್ಲಿರುವ ಇತರರು ರೋಗಿಗೆ ಮಾನಸಿಕ ಹಿಂಸೆಯಾಗಿ ಕಾಡತೊಡಗುತ್ತಾರೆ. ಮನೆಯ ದಾರಿ ಎಷ್ಟೇ ಪರಿಚಿತವಾಗಿದ್ದರೂ ಹಾದಿ ತಪ್ಪುತ್ತದೆ. ಬಟ್ಟೆ ತೊಟ್ಟಿದ್ದೇನೆಂದುಕೊಂಡು ಹೊರಡುತ್ತಾರೆ. ಗೊತ್ತಿಲ್ಲದೆ ಎದ್ದು ನಡೆಯುತ್ತಾರೆ. ತನಗೆ ಇಂತಹದೊಂದು ಕಾಯಿಲೆ ಇದೆಯೆಂಬ ವಿಷಯ ಕೂಡ ರೋಗಿಗೆ ತಿಳಿಯಲಾರದು.

ಚೆನ್ನಾಗಿ ಮಾತನಾಡುವವರು ಇದ್ದಕ್ಕಿದ್ದಂತೆ ಮೌನಿಯಾಗುತ್ತಾರೆ. ಹೆಚ್ಚು ಮಾತನಾಡದ ವ್ಯಕ್ತಿ ವಾಚಾಳಿಯಾಗುತ್ತಾನೆ. ಇವೆಲ್ಲವೂ ಅಲ್‍ಝೈಮರ್‍ನ ಲಕ್ಷಣಗಳು. ಮನಸ್ಸನ್ನು ಬಂಧಿಸುವ ಮೆದುಳಿನ ಭಾಗದಲ್ಲಿ ಬರುವ ತಪ್ಪಿನಿಂದ ಹೀಗಾಗುತ್ತದೆ. ರಕ್ತ ಪರಿಶೀಲನೆಯಿಂದ ಬೇರೆ ಯಾವುದೇ ಕಾಯಿಲೆಯನ್ನು ಗುರುತಿಸಬಹುದು. ಆದರೆ ಅಲ್‍ಝೈಮರ್ ಎಂಬ ಕಾಯಿಲೆಯನ್ನು ರಕ್ತ ಪರಿಶೋಧನೆಯಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ. ವಯಸ್ಸು ಹೆಚ್ಚಾಗಿ ಮುಪ್ಪು ಬಂದಾಗ ಡಿಮೆನ್‍ಶ್ಯಾ ಬರುತ್ತದೆ. ಮೆದುಳಿನ ಟ್ಯೂಮರ್, ಥೈರಾಯ್ಡ್, ಟಿ.ಬಿ. ರಕ್ತದೊತ್ತಡ, ಪಾಶ್ರ್ವವಾಯು, ತಲೆಯೊಳಗೆ ದ್ರವ ತುಂಬುವುದು, ಬಿ-12 ವಿಟಮಿನ್‍ಗಳ ಕೊರತೆ – ಇವೆಲ್ಲವೂ ಡಿಮೆನ್‍ಶ್ಯಾ ಕಾಯಿಲೆಗೆ ಹೇತುಗಳಾಗಿವೆ.

ಮರೆವು ಕಾಯಿಲೆಯನ್ನು ತಡೆಯುವುದು ಹೇಗೆ?

ಮರೆವಿನಿಂದ ಪಾರಾಗಲು ಕೆಲವು ವಿಷಯಗಳತ್ತ ಗಮನ ಹರಿಸಬೇಕಾಗಿದೆ.
1. ಮನಸ್ಸು ಮತ್ತು ಶರೀರವನ್ನು ಎಚ್ಚರಿಕೆಯಿಂದಿರಿಸುವುದು.
2. ಬದುಕಿನಲ್ಲಿ ಶಿಸ್ತನ್ನು ಅಳವಡಿಸುವುದು.
3. ಹೊಗೆ ಬತ್ತಿ ಸೇದುವುದು, ಮದ್ಯಪಾನ ಮುಂತಾದ ದುರಭ್ಯಾಸಗಳಿಗೆ ವಿದಾಯ ಹೇಳುವುದು.
4. ಜೀವಸತ್ವ `ಡಿ’ ಇರುವ ಮೀನುಗಳಾದ ಬಂಗುಡೆ, ಮತ್ತಿ, ಹಾಲು, ಮೊಟ್ಟೆಯ ಹಳದಿ, ಚೀಸ್ ಮುಂತಾದ ಆಹಾರ ಪದಾರ್ಥಗಳನ್ನು, ಮೀನಿನೆಣ್ಣೆಯ ಮಾತ್ರೆಗಳನ್ನು ಸೇವಿಸಬೇಕು. ನೆನಪುಗಳನ್ನು ಉದ್ದೀಪನಗೊಳಿಸಲು ಆಪಲ್ ಜ್ಯೂಸ್ ಕುಡಿಯಬೇಕು. ಸಾಕಷ್ಟು ಮೀನು ತಿನ್ನುವುದರಿಂದಲೂ ನೆನಪಿನ ಶಕ್ತಿಯ ವೃದ್ಧಿಗೊಳಿಸಬಹುದು.
5. ಚಿಂತನೆಯನ್ನು ಸದಾ ಚುರುಕುಗೊಳಿಸುತ್ತಿರಬೇಕು. ಮೆದುಳು ಯಾವಾಗಲೂ ಕೆಲಸ ನಿರ್ವಹಿಸುತ್ತಿದ್ದರೆ ಸೆಲ್ಲುಗಳು ಪರಸ್ಪರ ವಿಚಾರವಿನಿಮಯ ಕಳೆದುಕೊಳ್ಳದೆ ಇರಲು ನೆರವಾಗುತ್ತದೆ. ಐವತ್ತೈದು ವಯಸ್ಸಿನ ನಂತರದವರು ಒಂದು ಗಂಟೆಯ ಕಾಲವಾದರೂ ಇಂಟರ್‍ನೆಟ್‍ನೊಂದಿಗೆ ಒಡನಾಡಬೇಕು. ಇದರಿಂದ ನೆನಪಿನ ಶಕ್ತಿ ಚುರುಕುಗೊಳ್ಳುತ್ತದೆ.
6. ಹೊಸ ಭಾಷೆಗಳನ್ನು ಕಲಿಯುವುದು, ಮಕ್ಕಳಿಗೆ ಕವಿತೆಗಳನ್ನು ಬಾಯಿಪಾಠ ಮಾಡಿಸುವುದು, ಪದಬಂಧ, ನಂಬರಿನ ಆಟ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳವುದು ನೆನಪಿನ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

7. ವ್ಯಾಯಾಮ, ಧ್ಯಾನ, ಯೋಗ ಮುಂತಾದವುಗಳು ಫಲ ನೀಡುತ್ತದೆ. ಮನಸ್ಸನ್ನು ಸದಾ ಉಲ್ಲಾಸಭರಿತವನ್ನಾಗಿ ಮಾಡುವುದು ಮತ್ತು ಪುಸ್ತಕಗಳನ್ನು ಓದುವುದು ಸೂಕ್ತ.

ಕೆ.ಕೆ. ಗಂಗಾಧರನ್ ಮೊ. : 9945976401

ಕೆ.ಕೆ. ಗಂಗಾಧರನ್
ಮೊ. : 9945976401

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!