ಮನೋ ಒತ್ತಡ ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರ ಮೇಲೂ ಪರಿಣಾಮ ಬೀರುತ್ತದೆ. ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ.
ಮನೋ ಒತ್ತಡವನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಅವಿಶ್ರಾಂತಿ ಉಂಟು ಮಾಡುವ ಯಾವುದೇ ಭೌತಿಕ, ರಾಸಾಯನಿಕ ಅಥವಾ ಭಾವನಾತ್ಮಕ ಅಂಶ. ಇದು ರೋಗ ಕಾರಣದಲ್ಲಿ ಒಂದು ಅಂಶವಾಗಬಹುದು.ಆಘಾತ, ಸೋಂಕುಗಳು, ವಿಷಯುಕ್ತತೆ, ಅನಾರೋಗ್ಯ ಮತ್ತು ಯಾವುದೇ ರೀತಿಯ ಗಾಯಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಮನೋ ಒತ್ತಡ ಹಾಗೂ ಮಾನಸಿಕ ದುಗುಡದ ಭಾವನಾತ್ಮಕ ಕಾರಣಗಳು ಅನೇಕ ಹಾಗೂ ವಿಭಿನ್ನ. ಅನೇಕ ಮಂದಿ ಮಾನಸಿಕ ದುಗುಡದ ಪದವನ್ನು ಮನೋ ಒತ್ತಡ ವ್ಯಾಖ್ಯಾನಿಸಿದರೆ, ವಿಜ್ಞಾನಿಗಳು ಮತ್ತು ವೈದ್ಯರು ಈ ಪದವನ್ನು, ದೈಹಿಕ ಕಾರ್ಯಗಳ ಸ್ಥಿರತೆ ಮತ್ತು ಸಮತೋಲನಕ್ಕೆ ಅಡ್ಡಿ ಉಂಟು ಮಾಡುವ ಯಾವುದೇ ಪ್ರಬಲತೆ ಎಂದು ಹೇಳಿದ್ದಾರೆ.
ಎಲ್ಲ ರೀತಿಯ ಒತ್ತಡಗಳು ಕೆಟ್ಟದ್ದೇ? ಖಂಡಿತಾ ಇಲ್ಲ. ಲಘು ಪ್ರಮಾಣದ ಮನೋ ಒತ್ತಡ ಮತ್ತು ಮಾನಸಿಕ ಉದ್ವೇಗವು ಕೆಲವೊಮ್ಮೆ ಪ್ರಯೋಜನಕಾರಿಯಾಗಬಹುದು.ಅದೇ ರೀತಿ, ವ್ಯಾಯಾಮವು ದೇಹದ ಕೆ¯ವು ಕಾರ್ಯಗಳ ಮೇಲೆ ತಾತ್ಕಾಲಿಕ ಒತ್ತಡ ಉಂಟು ಮಾಡಬಹುದು. ಆದರೆ, ಇದರ ಆರೋಗ್ಯಕರ ಪ್ರಯೋಜನಗಳು ನಿವಿರ್ವಾದ. ಮನೋ ಒತ್ತಡವು ವಿಪರೀತವಾದಾಗ ಅಥವಾ ಅದರ ಕಳಪೆ ನಿರ್ವಹಣೆಯಿಂದ ಮಾತ್ರ ಮಾನಸಿಕ ಒತ್ತಡದ ನಕಾರಾತ್ಮಕ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.
ಒತ್ತಡದಲ್ಲಿ ಇರುವವರಿಗೆ ಒಂದು ಮುಖ್ಯ ಗುರಿ ಎಂದರೆ ಜೀವನ ಒತ್ತಡ ನಿರ್ವಹಣೆ. ಒತ್ತಡವನ್ನು ನಿರ್ಮೂಲನೆ ಮಾಡುವುದು ಅವಾಸ್ತವಿಕ, ಏಕೆಂದರೆ ಒತ್ತಡವು ಸಹಜ ಜೀವನದ ಒಂದು ಭಾಗ. ಒತ್ತಡವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಹಾಗೂ ಅದನ್ನು ಮಾಡುವುದು ಸಲಹೆಗೆ ಯೋಗ್ಯವೂ ಅಗಿರುವುದಿಲ್ಲ. ಬದಲಿಗೆ, ನಾವು ಒತ್ತಡವನ್ನು ನಿಭಾಯಿಸುವುದನ್ನು ಕಲಿಯುವುದರಿಂದ, ನಮ್ಮ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು.
ಒತ್ತಡಕ್ಕೆ ಯಾರು ಒಳಗಾಗುತ್ತಾರೆ?
ಒತ್ತಡವು ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರ ಮೇಲೂ ಪರಿಣಾಮ ಬೀರುತ್ತದೆ. ವ್ಯಕ್ತಿಗಳಲ್ಲಿ ಒತ್ತಡದ ಮಟ್ಟಗಳನ್ನು ಊಹಿಸಲು ಅನ್ವಯಿಸುವ ಬಾಹ್ಯ ಮಾಪನಗಳಿಲ್ಲ. ಸಾಂಪ್ರದಾಯಿಕ ಒತ್ತಡದಿಂದ ಕೆಲಸದ ಸ್ಥಳದಲ್ಲಿನ ಒತ್ತಡದ ಅನುಭವವನ್ನು ಹೊಂದಲು ಸಾಧ್ಯವಿಲ್ಲ. ಒಂದು ಮಗುವಿನ ಪೋಷಕರಿಗೆ ಹಲವಾರು ಮಕ್ಕಳ ಪೋಷಕರಿಗಿಂತ ಪೋಷಣೆಗೆ ಸಂಬಂಧಪಟ್ಟಂತೆ ಹೆಚ್ಚು ಒತ್ತಡ ಇರಬಹುದು. ನಮ್ಮ ಜೀವನದ ಒತ್ತಡದ ಮಟ್ಟವು ನಮ್ಮ ದೈಹಿಕ ಆರೋಗ್ಯ, ನಮ್ಮ ಪರಸ್ಪರ ಸಂಬಂಧಗಳ ಗುಣಮಟ್ಟ, ನಾವು ಕೈಗೊಳ್ಳುವ ಬದ್ದತೆಗಳು ಮತ್ತು ಜವಾಬ್ದಾರಿ, ಇತರರು ಅವಲಂಬಿಸಿರುವ ಮಟ್ಟ ಮತ್ತು ನಮ್ಮ ನಿರೀಕ್ಷೆಗಳು, ಇತರರಿಂದ ನಮಗೆ ಲಭಿಸುವ ಬೆಂಬಲ ಹಾಗೂ ನಮ್ಮ ಜೀವನದಲ್ಲಿ ಇತ್ತೀಚೆಗೆ ಘಟಿಸಿದ ಬದಲಾವಣೆಗಳ ಸಂಖ್ಯೆ ಅಥವಾ ಆಘಾತಕಾರಿ ಘಟನೆಗಳಂಥ ವ್ಯಕ್ತಿಗತ ಅಂಶಗಳ ಮೇಲೆ ಹೆಚ್ಚಾಗಿ ಅವಲಂಬಿಸಿರುತ್ತದೆ.
ಆದಾಗ್ಯೂ, ಕೆಲವು ಸಾಮಾನ್ಯ ಸಂಗತಿಗಳನ್ನು ಈ ಸಂಬಂಧ ಉಲ್ಲೇಖಿಸಬಹುದು. ಸದೃಢ ಸಾಮಾಜಿಕ ಸಹಕಾರ ಜಾಲಗಳನ್ನು ಹೊಂದಿರುವ ಜನರನ್ನು (ಕುಟುಂಬ, ಬಂಧು-ಮಿತ್ರರು, ಧಾರ್ಮಿಕ ಸಂಘಟನೆಗಳು ಅಥವಾ ಇತರ ಸಾಮಾಜಿಕ ಸಮೂಹಗಳು) ಸಾಮಾಜಿಕ ಸಂಪರ್ಕಗಳು ಇಲ್ಲದ ಜನರೊಂದಿಗೆ ಹೋಲಿಸಿದಾಗ ಅವರಲ್ಲಿ ಕಡಿಮೆ ಪ್ರಮಾಣದ ಒತ್ತಡ ಹಾಗೂ ಸಮಗ್ರ ಸುಧಾರಿತ ಮಾನಸಿಕ ಆರೋಗ್ಯ ಕಂಡು ಬರುತ್ತದೆ.ದುರ್ಬಲ ಪೋಷಕಾಂಶದ ಮಂದಿ, ಸಾಕಷ್ಟು ನಿದ್ರೆ ಇಲ್ಲದವರು ಅಥವಾ ದೈಹಿಕವಾಗಿ ಅನಾರೋಗ್ಯವಾಗಿರುವವರಲ್ಲಿ ದಿನನಿತ್ಯದ ಒತ್ತಡ ಮತ್ತು ಮನೋ ದುಗುಡವನ್ನು ನಿಭಾಯಿಸುವ ಸಾಮಥ್ರ್ಯ ಕಡಿಮೆ ಇರುತ್ತದೆ.
ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ. ಸಾಕಷ್ಟು ಪ್ರಮಾಣದಲ್ಲಿ ಹರ್ಬಲ್ ಗ್ರೀನ್ ಟೀ ಬಳಕೆಯಿಂದ ಒತ್ತಡವನ್ನು ನಿವಾರಿಸಬಹುದು. ಒತ್ತಡದಾಯಕ ಪರಿಸರದಲ್ಲಿ ಕೆಲಸ ಮಾಡುವವರು ಪ್ರತಿ ದಿನ ಎರಡು-ಮೂರು ಬಾರಿ ಒಂದು ಕಪ್ ಗಿಡಮೂಲಿಕೆಯ ಹಸಿರು ಚಹಾ ಸೇವಿಸಿದರೆ ಒತ್ತಡವು ಗಣನೀಯವಾಗಿ ಕಡಿಮೆಯಾಗುತ್ತದೆ. ಒತ್ತಡವನ್ನು ತಪ್ಪಿಸಲು ಯಾವುದೇ ನಿದ್ರೆ ಮಾತ್ರೆಗಳು ಅಥವಾ ಆಲ್ಕೋಹಾಲ್‍ನನ್ನು ಬಳಸಬಾರದು. ನೀವಾಗಿಯೇ ನಿಮ್ಮ ಒತ್ತಡವನ್ನು ಹತೋಟಿಯಲ್ಲಿ ಇಡಲು ಸಾಧ್ಯವಾಗದಿದ್ದರೆ, ಪರಿಸ್ಥಿತಿ ಹದಗೆಡುವುದಕ್ಕೂ ಮುನ್ನ ನಿಮ್ಮ ಕುಟುಂಬ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ನಮ್ಮ ಬದುಕಿನ ಬಹುತೇಕ ಸಮಯ ಕುಟುಂಬ, ಕೆಲಸ ಮತ್ತು ಸಮುದಾಯ ಕರ್ತವ್ಯಗಳಿಂದ ತುಂಬಿರುತ್ತದೆ ಹಾಗೂ ಎಲ್ಲೋ ಒಂದು ಕಡೆ ನಾವು ಬರಿಗೈಯಲ್ಲಿ ತೆರಳುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಆದ್ದರಿಂದ ನಮ್ಮ ಮನಸ್ಸನ್ನು ತುಂಬಲು ನೆರವಾಗುವಂತೆ ಕೆಲವು ತಕ್ಷಣ ಒತ್ತಡ ನಿವಾರಕಗಳನ್ನು ಇಲ್ಲಿ ನೀಡಲಾಗಿದೆ.
1. ತಾಳ್ಮೆಯಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೋಪ ಅಥವಾ ಉದ್ವಿಗ್ನಗೊಳ್ಳದಂತೆ ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡಿಕೊಳ್ಳಿ. ಅಗತ್ಯವಿಲ್ಲದೇ ವಿನಾಕಾರಣ ವ್ಯರ್ಥ ಆಲೋಚನೆ ಮತ್ತು ಶಕ್ತಿಯನ್ನು ನೀವು ನಷ್ಟ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ಪರಿಣಾಮಕಾರಿ ಕೋಪ ನಿಯಂತ್ರಣವು ನಿಜವಾದ ಒತ್ತಡ ನಿವಾರಕ.
2. ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿ. ಒತ್ತಡದ ಸನ್ನಿವೇಶಗಳು ಘಟಿಸುವುದಕ್ಕೂ ಮುನ್ನ ಮೂರು ಬಾರಿ ಆಳವಾಗಿ ಉಸಿರಾಡಿ ಉಸಿರನ್ನು ನಿಧಾನವಾಗಿ ಬಿಡಿ.
3. ಒತ್ತಡದಿಂದ ವಿಪರೀತ ದಣಿವಾದ ಭಾವನೆ ಉಂಟಾದಾಗಲೆಲ್ಲ ನಿಧಾನವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಮಾತನ್ನು ನಿಧಾನಗೊಳಿಸುವುದರಿಂದ ನೀವು ಕಡಿಮೆ ಭಾವೋದ್ವೇಗಕ್ಕೆ ಒಳಗಾದಂತೆ ಹಾಗೂ ಯಾವುದೇ ಸನ್ನಿವೇಶವನ್ನು ಹೆಚ್ಚು ನಿಯಂತ್ರಣದಲ್ಲಿ ಇಟ್ಟುಕೊಂಡಂತೆ ಕಂಡುಬರುತ್ತದೆ.
4. ಪರಿಣಾಮಕಾರಿ ಸಮಯ ನಿರ್ವಹಣೆ ಕಾರ್ಯತಂತ್ರ ರೂಪಿಸಿ. ನೀವು ಮಾಡಬೇಕಾದ ಸರಳ ಸಂಗತಿಯನ್ನು ತಕ್ಷಣ ಮಾಡಿ.
5. ಸಾಕಷ್ಟು ನೀರು ಕುಡಿಯಿರಿ ಹಾಗೂ ಸಣ್ಣ ಪ್ರಮಾಣದಲ್ಲಿ ಪೌಷ್ಟಿಕ ಉಪಾಹರ ಸೇವಿಸಿ. ಹಸಿವು ಮತ್ತು ನಿರ್ಜಲೀಕರಣವು ಅರಿವಿಗೆ ಬರುವುದಕ್ಕೆ ಮುನ್ನವೇ, ಉದ್ರಿಕ್ತಗೊಳ್ಳಿಸುತ್ತದೆ ಹಾಗೂ ಉದ್ವೇಗ ಮತ್ತು ಒತ್ತಡದ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.
6. ತಲೆ ಮತ್ತು ಹೆಗಲುಗಳನ್ನು ಮೇಲಕ್ಕೆ ಹಿಡಿಟ್ಟುಕೊಳ್ಳಿ ಹಾಗೂ ಬಗ್ಗುವಿಕೆ ಅಥವಾ ಇಳಿಸುವಿಕೆಯನ್ನು ನಿಯಂತ್ರಿಸಿ. ದೋಷಪೂರಿತ ದೇಹ ಭಂಗಿಯೂ ಸ್ನಾಯು ಒತ್ತಡ, ನೋವು ಹಾಗೂ ಒತ್ತಡ ಹೆಚ್ಚಳಕ್ಕೆ ಎಡೆ ಮಾಡಿಕೊಡುತ್ತದೆ. ದಿನದ ಬಹುತೇಕ ಸಮಯವನ್ನು ಮೇಜಿನ ಮೇಲೆ ಕಳೆಯುವವರಿದ್ದರೆ, ಪುನರಾವರ್ತಿತ ಒತ್ತಡ ಗಾಯಗಳು ಹಾಗೂ ಮಾಂಸಖಂಡದ ಊತವನ್ನು ತಪ್ಪಿಸಬಹುದು. ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಿದ ತತ್ವಗಳನ್ನು ಪ್ರತಿಬಿಂಬಿಸುವ ಮೂಲಕ, ಕೆಲಸ ಮಾಡುವ ಸ್ಥಳವನ್ನು ಬದಲಿಸಿಕೊಳ್ಳುವ ಮುಖಾಂತರ ಈ ಸಮಸ್ಯೆಗಳಿಂದ ದೂರಾಗಬಹುದು.
7. ಕೆಲಸವನ್ನು ಬದಿಗೊತ್ತಿ, ಮನೆಗೆಲಸದಲ್ಲಿ ಅಥವಾ ಮಲಗುವುದಕ್ಕೆ ಮುನ್ನ ಕೆಲ ಕಾಲ ಕುಟುಂಬದ ಸದಸ್ಯರೊಂದಿಗೆ ಕಳೆಯಿರಿ ಹಾಗೂ ನಿಮಗೆ ನೀವೇ ವಿರಮಿಸಲು ಅವಕಾಶ ನೀಡಿ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com