ಸ್ನೇಹಿತರು
“ನನಗೆ ಆಚೆ ಮನೆಯ ಶಾಂತಿಯೊಂದಿಗೆ ಆಡಬೇಕು”
“ಅವಳು ಅಪ್ಪಅಮ್ಮನ ಜೊತೆ ಹೊರಗೆ ಹೋದ್ನಲ್ಲ. ಇವತ್ತು ನಾನು ನಿನ್ನ ಜೊತೆ ಆಡ್ತೀನಿ”
“ಬೇಡ, ನನಗೆ ಶಾಂತಿ ಜೊತೆನೇ ಆಟ ಆಡಬೇಕು”
ವಯಸ್ಸಾಗುತ್ತಾ ಮಕ್ಕಳು ಸ್ನೇಹಿತರ ವಿಷಯದಲ್ಲಿ ಹಠ ಮಾಡತೊಡಗುತ್ತಾರೆ. ಈ ಹಠ ಹೆತ್ತವರ ಕೋಪಕ್ಕೆ ನಿಮಿತ್ತವಾಗುತ್ತದೆ. ಮಕ್ಕಳಿಗೆ ಯಾವಾಗಲೂ ಆಟವಾಡಲು ಅವರದ್ದೇ ವಯಸ್ಸಿನವರನ್ನು ಬಯಸುತ್ತಾರೆ. ಅಪ್ಪ ಅಮ್ಮಂದಿರು ಜೊತೆಗೆ ಆಡಲು ಇಚ್ಚಿಸಿದರೂ ಅವರು ಮಕ್ಕಳಿಗೆ ಸರಿಯಾದ ಕಂಪೆನಿ ಆಗಲಾರರು. ಸ್ನೇಹಿತರನ್ನು ಅನುಕರಿಸಲಿರುವ ಸಾಮಥ್ರ್ಯ, ಅವರದ್ದೆಲ್ಲಾ ತನ್ನದೆಂಬ ಭಾವನೆ ಮಕ್ಕಳಲ್ಲಿರುತ್ತದೆ.
ಮಕ್ಕಳು ಕೆಲವೊಮ್ಮೆ ಅವರ ಸ್ನೇಹಿತರೊಂದಿಗೆ ಮಾತ್ರ ಬೆರೆಯುವುದನ್ನು ಕಂಡಾಗ ಹೆತ್ತವರಿಗೆ ಏನೋ ಕಳೆದುಕೊಂಡಂತಹ ಭಾವವುಂಟಾಗುತ್ತದೆ. ಮಗುವಿನ ಬೆಳವಣಿಗೆಯಲ್ಲಿ ಸ್ನೇಹಿತರು ಪ್ರಮುಖ ಪಾತ್ರ ವಹಿಸುತ್ತಾರೆಂಬುದನ್ನು ಹೆತ್ತವರು ಅರಿತಿರಬೇಕು. ಆತ್ಮೀಯತೆ, ಪ್ರಾಮಾಣಿಕತೆ, ಪ್ರೀತಿಗಳಿರುವ ಸ್ನೇಹಿತರನ್ನು ಪತ್ತೆ ಹಚ್ಚುವುದು ಹೇಗೆಂದು ಹೆತ್ತವರು ಮಗುವಿಗೆ ಹೇಳಿಕೊಡಬೇಕು. ಮಗುವಿಗೆ ಮೆಚ್ಚಿನ ಸ್ನೇಹಿತರು ಯಾರ್ಯಾರು? ಅವರ ಗುಣಗಳು ಏನೇನು? ಇಂತಹ ವಿವೇಚನೆ ಮಕ್ಕಳಲ್ಲಿ ಬೆಳೆದರೆ ಮುಂದೆ ಒಳ್ಳೆಯ ಸ್ನೇಹಿತರನ್ನು, ರೂಂಮೇಟ್ಸ್‍ಗಳನ್ನು ಆಯ್ದುಕೊಳ್ಳುವುದರಲ್ಲಿ ಅವರು ಯಶಸ್ವಿಯಾಗುತ್ತಾರೆ.
ಹಾಡು, ಡ್ಯಾನ್ಸು ಮತ್ತು ಚಿತ್ರರಚನೆ
ಗಣಿತ, ವಿಜ್ಞಾನ, ಭೂಶಾಸ್ತ್ರಗಳು ಮುಖ್ಯ ವಿಷಯಗಳೇ, ದೊಡ್ಡದಾದ ಮೇಲೆ ಕೆಲಸ ಗಳಿಸಲು ಇವುಗಳ ತಿಳುವಳಿಕೆ ಅನಿವಾರ್ಯ. ಆದರೆ ಯಾವಾಗಲೂ ಅದೇ ಆದರೆ? ಮಗು `ಕಲರಿಂಗ್’ ಪುಸ್ತಕ ತೆಗೆದು ಬಣ್ಣ ಹಚ್ಚಿದರೆ, “ನಿನಗೆ ಹೋಂ ವರ್ಕ್ ಇಲ್ಲವೇ?” ಎಂದು ಕೋಪದಿಂದ ಗದರುವ ತಂದೆ ತಾಯಿಯರು ಇಲ್ಲದಿಲ್ಲ. ಮಗುವಿನ ಸೃಜನಾತ್ಮಕ ಸಾಮಥ್ರ್ಯವನ್ನು ಗುರುತಿಸುವುದು ತಂದೆ ತಾಯಿಗಳ ಕರ್ತವ್ಯವಾಗಬೇಕು. ಅದಕ್ಕೆ ಅವಕಾಶವನ್ನೂ ಮಾಡಿಕೊಡಬೇಕು. ಆಗಷ್ಟೇ ಮಕ್ಕಳ ಭಾವನೆ, ನಿರೀಕ್ಷೆ, ಮನಸ್ಸಿನೊಳಗಿರುವುದನ್ನು ಹೊರಗೆ ಪ್ರಕಟಪಡಿಸಲು ಸಾಧ್ಯ. ಕೇವಲ ಪಠ್ಯಪುಸ್ತಕಗಳನ್ನು ಮಾತ್ರ ತೆಗೆದುಕೊಡುವ ತಂದೆ ತಾಯಂದಿರು ಗಮನಿಸಬೇಕಾದ ಅಂಶವೊಂದಿದೆ.
ಮಗುವಿನ ಪಠ್ಯೇತರ ಆಸಕ್ತಿಗಳನ್ನು ಗುರುತಿಸಿ ಅದಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸಿದರೆ ಮಕ್ಕಳ ಮಾನಸಿಕ ವಿಕಸನಕ್ಕೆ ಅದು ಕಾರಣವಾಗಬಹುದು. ಚಿತ್ರ ಬರೆಯುವುದು, ಪೇಂಟಿಂಗ್, ಡ್ಯಾನ್ಸ್, ಹಾಡುಗಾರಿಕೆ, ಸಂಗೀತೋಪಕರಣಗಳ ವಾದನ… ಮುಂತಾದವುಗಳಲ್ಲಿ ಆಸಕ್ತಿ ಇರುವುದನ್ನು ಗಮನಿಸಿ ಪ್ರೋತ್ಸಾಹಿಸಬೇಕು. ಮಗು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮನೆ ಸ್ವಲ್ಪ ಗಲೀಜಾಗುವುದು ಸಹಜ. ಅದನ್ನು ಕಂಡು ಮಕ್ಕಳನ್ನು ಗದರುವುದು ಹೊಡೆಯುವುದು ಮಾಡಿದರೆ ಮಕ್ಕಳ ಬೆಳವಣಿಗೆಯನ್ನು ಮೊಟಕುಗೊಳಿಸಿದಂತಾಗುತ್ತದೆ. ಆದ್ದರಿಂದ ಮಕ್ಕಳನ್ನು ಇಂತಹ ಸಂದರ್ಭದಲ್ಲಿ ಗದರುವುದು ತರವಲ್ಲ.
ಭಾವನೆಗಳಿಗೆ ಸ್ವಾತಂತ್ರ್ಯ
ಕೆಲವು ಮಕ್ಕಳಿಗೆ ಸದಾ ಏನಾದರೊಂದು ಹೊಸತು ಮಾಡಬೇಕೆನಿಸುತ್ತದೆ. ಮಗು ವಿಜ್ಞಾನಿಗಳಂತೆ ಯಾವಾಗಲೂ ಪರೀಕ್ಷೆಗಳನ್ನು ನಡೆಸುತ್ತಿರುತ್ತದೆ. ಸ್ವಯಂ ಕಲಿತು ಮಕ್ಕಳು ಬೆಳೆಯುತ್ತವೆ. ಆದರೆ ಕೆಲವು ಹೆತ್ತವರು ಯಾವಾಗಲೂ ಮಕ್ಕಳ ಸ್ವಾತಂತ್ರ್ಯದಲ್ಲಿ ತಲೆ ತೂರಿಸುತ್ತಿರುತ್ತಾರೆ. ಹಾಗೆ ಮಾಡು, ಹೀಗೆ ಮಾಡು ಎಂದು ಹಿಂದೆ ಬೀಳುತ್ತಾರೆ. ಮಕ್ಕಳ ಮಾನಸಿಕ ಬೆಳವಣಿಗೆಗೆ ಮೂಲವಾಗುವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಅವರು ನೋಡಿದ ಸಿನಿಮಾದ ಕುರಿತು, ಕೇಳಿದ ಕತೆಯ ಬಗ್ಗೆಯೆಲ್ಲಾ ಅವರು ಅವರದ್ದೇ ರೀತಿಯಲ್ಲಿ ವರ್ಣಿಸಲಿ. ಕ್ರಿಯಾತ್ಮಕ ವಿಷಯದಲ್ಲಿ ಅವರು ತೊಡಗಿಸಿಕೊಂಡಾಗ ಅದನ್ನು ಟೀಕೆ ಮಾಡದಿರಿ.
ಪ್ರಚೋದನೆ
ಹಿರಿಯರ ಜಗತ್ತಿನಲ್ಲಿ ಕೆಲಸಕ್ಕೆ ಪ್ರಚೋದನೆ ಪಡೆಯಲು ಅನೇಕ ವಿಷಯಗಳಿವೆ. ಮೋಟಿವೇಶನ್ ಸ್ಪೀಚ್, ವಿಜಯ ಮಂತ್ರಗಳು.. ಸೆಮಿನಾರುಗಳು, ಉತ್ತಮ ವ್ಯಾಖ್ಯೆಗಳು, ಪುಸ್ತಕಗಳು, ಇವೆಲ್ಲವು ನಮ್ಮನ್ನು ಉತ್ತೇಜಿತರನ್ನಾಗಿ ಮಾಡುತ್ತದೆ. ಉತ್ತಮ ಕ್ವಟೇಷನ್ನುಗಳು, ಪುಸ್ತಕಗಳು, ಇವೆಲ್ಲವೂ ನಾವು ನಮ್ಮನ್ನೇ ಉತ್ತೇಜಿಸಲು ಸಹಕಾರಿಯಾಗಿರುತ್ತದೆ. ಆದರೆ ಮಕ್ಕಳ ವಿಚಾರದಲ್ಲಿ ಇದು ನಡೆಯುತ್ತಿಲ್ಲ. ಚೆನ್ನಾಗಿದೆ, ಪರವಾಗಿಲ್ಲ ಎಂದೆಲ್ಲಾ ಹೇಳಿ ಮಗುವನ್ನು ಅಭಿನಂದಿಸುವುದು ಪ್ರಶಂಸೆಯಷ್ಟೆ ಆಗುತ್ತದೆ. ಮಗುವಿನ ಸಾಮಥ್ರ್ಯದ ಬಗ್ಗೆ ತಂದೆ ತಾಯಿಯರಲ್ಲಿ ಮೊದಲು ನಂಬಿಕೆ ಇರಬೇಕು.
“ನಿನಗೆ ಚೆನ್ನಾಗಿ ಚಿತ್ರ ಬರೆಯಲು ಬರುತ್ತೆ, ದೊಡ್ಡವನಾದ ಮೇಲೆ ಪೇಯಿಟಿಂಗ್ ಕ್ಲಾಸಿಗೆ ಸೇರುವಿಯಂತೆ”, ಮಗೂ ನೀನು ಚೆನ್ನಾಗಿ ಹಾಡ್ತಿದ್ದೀಯಾಂತ ಟೀಚರ್ ಹೇಳಿದರು. ಆದರೆ ಇನ್ನೂ ಚೆನ್ನಾಗಿ ಪ್ರಾಕ್ಟೀಸ್ ಮಾಡಿದರೆ ಇನ್ನೂ ಜಾಣ ಮರಿಯಾಗುತ್ತೀಯಂತೆ. ಹೀಗೆ ಎಲ್ಲಾ ವಿಷಯಗಳಲ್ಲೂ ಪಾಸಿಟಿವ್ ಆಗಿ ಶಕ್ತಿ ನೀಡುವಂತೆ ಮಕ್ಕಳಿಗೆ ಹೇಳಬೇಕು. ಮೋಟಿವೇಷನ್ ನೀಡುವಾಗ ಮಕ್ಕಳಿಗೆ ಅವರದ್ದೆ ಆದ ಸ್ವಾತಂತ್ರ್ಯ ನೀಡಬೇಕು. ಆದರೆ ಅದೇ ಮಕ್ಕಳಿಗೆ ಒತ್ತಡವಾಗದಂತೆ ಎಚ್ಚರ ವಹಿಸಬೇಕು. ಅವರಿಗೆ ಯಾವ ರೀತಿಯ ಕಲರ್ ಪೆನ್ಸಿಲ್ ಬೇಕೋ ಅದನ್ನು ಕೊಡಿಸಬೇಕು. ನಿಮಗೆ ಇಷ್ಟವಾದುದನ್ನಲ್ಲ.
-ಶ್ರೀಮಾ