ಮಧ್ಯಮ ವಯಸ್ಸಿನ ಮಹಿಳೆಗೆ ಬೊಜ್ಜು ಬರುವುದೇಕೆ?

ಮಧ್ಯಮ ವಯಸ್ಸಿನ ಮಹಿಳೆಗೆ ಬೊಜ್ಜು ಬರುವುದೇಕೆ? ತಮ್ಮ ಚಟುವಟಿಕೆಗಳಿಗೆ ತಕ್ಕಂತೆ ಆಹಾರ ಸೇವನೆಯಲ್ಲಿ ಮಾರ್ಪಾಡನ್ನು ಮಹಿಳೆಯರು ಸಾಮಾನ್ಯವಾಗಿ ಮಾಡುವದಿಲ್ಲವಾದ್ದರಿಂದ ತಮಗೆ ಅರಿವಿಲ್ಲದಂತೆ ಬೊಜ್ಜಿನ ಬೆಳೆವಣಿಗೆಯತ್ತ ಹೆಜ್ಜೆ ಹಾಕುತ್ತಾರೆ.

ಮಹಿಳೆ ಮಧ್ಯಮ ವಯಸ್ಸಿಗೆ ಹೆಜ್ಜೆ ಇಟ್ಟಾಗ ಬೊಜ್ಜು ಬರಲು ಪ್ರಾರಂಭವಾಗುತ್ತದೆ. ಮಹಿಳೆಯ 40-50 ನೇ ವಯೋಮಾನವನ್ನು ಬೊಜ್ಜು ಬೆಳೆಯುವ ಕಾಲ ಎಂದು ಕರೆಯುತ್ತಾರೆ. ವಯಸ್ಸು ಆದಂತೆಲ್ಲ ಶರೀರದಲ್ಲಿಯ ಹಾರ್ಮೋನಗಳ ಅಸಮತೋಲನೆ ತಲೆದೋರುತ್ತದೆ.ಸಂತೋಷ, ಮೃಷ್ಟಾನ್ನ ಉಂಡ ಐಷಾರಾಮಿನ ಜೀವನ, ಚಟುವಟಿಕೆ ರಹಿತ ಚದುರಂಗದಾಟಕ್ಕೆ ಅನುವು ಮಾಡುತ್ತದೆ. ಬೊಜ್ಜಿನ ಬೆಳವಣಿಗೆಗೆ ನಾಂದಿಹಾಡುತ್ತದೆ.

ನಲವತ್ತು ವಸಂತಗಳು ದಾಟಿದ ನಂತರ ಮೆದುಳಿನ ಅಡಿಯಲ್ಲಿಯ ಪಿಟ್ಯುಟರಿ ಗ್ರಂಥಿಯ ಪ್ರಚೋದನೆಗೆ ಮಹಿಳೆಯರ ಕಿಬ್ಬೊಟ್ಟೆಯ ಬುಡದಲ್ಲಿಯ ಅಂಡಾಶಯಗಳು ಪ್ರತಿಕ್ರಿಯಿಸುವುದಿಲ್ಲ. ಅಥವಾ ಅಲ್ಪ ಸ್ವಲ್ಪ ಸ್ಪಂದಿಸಬಹುದು. ಹೀಗಾಗಿ ಲೈಂಗಿಕ ರಸದೂತವಾದ ಈಸ್ಟ್ರೋಜೆನ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದು. ಥೈರೈಡ್ ಗ್ರಂಥಿಯ ಹಾರ್ಮೋನ್‍ಗಳು ಶರೀರದ ಚಯಾಪಚಯ (Metabolism) ಕ್ರಿಯೆಗೆ ಹೇಗೆ ಅವಶ್ಯವೋ ಹಾಗೆ ಇಸ್ಟ್ರೋಜನ್ ಕೂಡಾ.

ಶರೀರದಲ್ಲಿ ಇಸ್ಟ್ರೋಜನ್ ಹೆಚ್ಚಿದಂತೆ ಚಯಾಚಪಯ ಕ್ರಿಯೆ ಹೆಚ್ಚಾಗುತ್ತೆದೆ. ಆಮ್ಲಜನಕದ ಉಪಯೋಗದಲ್ಲಿ ಹೆಚ್ಚಳವಾಗುತ್ತದೆ. ಕ್ಯಾಲರಿಗಳ ಕೋರಿಕೆ ಬಹಳವಾಗುತ್ತದೆ. ಇಸ್ಟ್ರೋಜನ್‍ ಕೊರತೆ ಮದ್ಯಮ ವಯಸ್ಸಿನ ಮಹಿಳೆಯರಲ್ಲಿ ತಲೆದೋರುವದರಿಂದ ಇವುಗಳ ತದ್ವಿರುದ್ಧದ ಪರಿಣಾಮಗಳಿಗೆ ಹಾದಿ ಮಾಡಿ ಕೊಡುತ್ತದೆ. ಜೊತೆಗೆ ತಮ್ಮ ಚಟುವಟಿಕೆಗಳಿಗೆ ತಕ್ಕಂತೆ ಆಹಾರ ಸೇವನೆಯಲ್ಲಿ ಮಾರ್ಪಾಡನ್ನು ಮಹಿಳೆಯರು ಸಾಮಾನ್ಯವಾಗಿ ಮಾಡುವದಿಲ್ಲವಾದ್ದರಿಂದ ತಮಗೆ ಅರಿವಿಲ್ಲದಂತೆ ಬೊಜ್ಜಿನ ಬೆಳೆವಣಿಗೆಯತ್ತ ಹೆಜ್ಜೆ ಹಾಕುತ್ತಾರೆ.

ಮಧ್ಯಮ ವಯಸ್ಸಿನಲ್ಲಿ ಮಹಿಳೆಯರು ಮಕ್ಕಳನ್ನು ಬೆಳೆಸುವ ದೃಹಿಕ, ಮಾನಸಿಕ ಒತ್ತಡ ಹಾಗೂ ಪರಿಶ್ರಮಗಳ ಬಂಧನದಿಂದ ಬಿಡುಗಡೆ ಪಡೆದಿರುತ್ತಾರೆ. ಈ ಹಂತದಲ್ಲಿ ಬದುಕು ಸರ್ವೇ ಸಾಮಾನ್ಯವಾಗಿ ಶಾಂತಿ ಹಾಗೂ ಆಲಸ್ಯಗಳ ಸಂಗಮವಾಗಿರುತ್ತದೆ. ಶಕ್ತಿಯ ವಿನಿಯೋಗ ಕಡಿಮೆಯಾಗಿರುತ್ತದೆ. ಆದರೆ ಹೆಚ್ಚಿನ ತಿನ್ನುವ ಹವ್ಯಾಸ, ಐಷಾರಾಮಿನ ಮನೋಭಾವ ಬಲಿಯುತ್ತಿರುತ್ತದೆ. ಇವೆಲ್ಲವುಗಳ ಪರಿಣಾಮಗಳು ಒಂದಕ್ಕೊಂದು ಪೂರಕ, ಪೋಷಕಗಳಾಗಿ ಸಹಕರಿಸುತ್ತವೆ. ಬೊಜ್ಜು ಶೇಖರಣೆಗೆ ಸಹಾಯಕವಾಗುತ್ತದೆ. ಬೊಜ್ಜು ಶೇಖರಣೆ ಆಲಸ್ಯತನಕ್ಕೂ, ಆಲಸ್ಯತನ ಬೊಜ್ಜು ಶೇಖರಣೆಗೂ ಎಡೆ ಮಾಡಿಕೊಡುತ್ತದೆ. ಹೀಗಾಗಿ ಒಮ್ಮೆ ಆದಿ ಅಂತ್ಯಗಳಿಲ್ಲದ ಈ ವಿಷವೃತ್ತದ ತಿರುಗುಣಿ ಮಡುವಿಗೆ ಸಿಕ್ಕ ಮಧ್ಯಮ ವಯಸ್ಸಿನ ಮಹಿಳೆ ಹೊರಬರಲು ಹೋರಾಡಬೇಕಾಗುತ್ತದೆ. ಇದಕ್ಕೆ ದೃಡವಾದ, ಅಚಲವಾದ ಮನೋನಿರ್ಧಾರ ಅತ್ಯಗತ್ಯ.

ಹೆಚ್ಚುವರಿ ತೂಕ” (Over Weight) ಹಾಗೂ ಬೊಜ್ಜು (Obese) ಒಂದೆ ಅರ್ಥ ಬರುವ ಪದಗಳಲ್ಲ. ಹೆಚ್ಚುವರಿ ತೂಕದವರು ಬೊಜ್ಜಿನವರಾಗಿರಲಿಕ್ಕಿಲ್ಲ.ಕ್ರಿಡಾಪಟುಗಳಲ್ಲಿ,ಪರಿಶ್ರಮ ಜೀವಿಗಳಲ್ಲಿ ಮಾಂಸಖಂಡಗಳು ಬಲಿಷ್ಠವಾಗಿ ಬೆಳವಣಿಗೆಯಾಗುವುದರಿಂದಾಗಿ ತೂಕದಲ್ಲಿ ಹೆಚ್ಚುವರಿ ಹಣಿಕೆ ಹಾಕಬಹುದೇ ವಿನಃ ಬೊಜ್ಜಿನಿಂದೇನೋ ಅಲ್ಲ. ಬೊಜ್ಜಿನ ಮಧ್ಯಮ ವಯಸ್ಸಿನ ಮಹಿಳೆಗೆ ಬೊಜ್ಜು ಬರುವುದೇಕೆ?ಮಹಿಳೆಯರಲ್ಲಿ ಹೃದ್ರೋಗ, ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆಗಳ ಪಿತ್ತಕೋಶದ ರೋಗಗಳ ಸಕ್ಕರೆ ಕಾಯಿಲೆಯ ಹಾವಳಿ, ಹಾಹಾಕಾರ ಹೆಚ್ಚು ಎಂಬುದು ಅಂಕಿ ಸಂಖ್ಯೆಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ. 

ಮಹಿಳೆಯರು ಸಾಮಾನ್ಯವಾಗಿ ಬೊಜ್ಜಿನ ಪ್ರಜ್ಞೆ ಚಿತ್ತದಲ್ಲಿ ಚುಚ್ಚುವಾಗ, ನಿಯಂತ್ರಣಕ್ಕೆ ಪಥ್ಯದ ಗೀಳಿನಲ್ಲಿ ಗೋಳಾಡುವರು. ಇಂತಹ ಅತಿರಥ ಮಹಾರಥ ಪ್ರಯತ್ನಗಳ ಫಲವಾಗಿ ಪ್ರಾರಂಭದ ಮೂರು ನಾಲ್ಕು ವಾರಗಳಲ್ಲಿ ಸ್ವಲ್ಪ ಇಳಿಸುವಲ್ಲಿ ಯಶಸ್ವಿಯಾದರೂ, ಪಥ್ಯದ ಗೀಳಿಗೆ ಜೋತುಬೀಳುವುದು ಮುಂದುವರೆದಾಗ, ಬೇಸರದಿಂದಾಗಿ ಇಳಿದ ಬೊಜ್ಜು ಬೆಳೆದು ಮೊದಲಿನ ಸ್ಥಿತಿಗೆ ಮುಟ್ಟುತ್ತದೆ. ಹೀಗಾಗಿ ಹಲವಾರು ಬಾರಿ ನಿರ್ಧಾರಗಳಿಂದ ಪ್ರಾರಂಭವಾಗುವ ‘ಪಥ್ಯದ ಗೀಳು’ ಅಷ್ಟೇ ಸಲ ವಿಫಲವಾಗುವುದು ಸರ್ವೇಸಾಮಾನ್ಯ.

1. ಆಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮ ಬೊಜ್ಜು ಕರಗಿಸುವ ಭಿನ್ನ ಭಿನ್ನ ಸಾಧನೆಗಳೆಂದು ತಿಳಿಯದೇ ಬಾಳಿನ ಭಾಗಗಳೆಂದು ಬಗೆದು ಬದುಕು ಸಾಗಿಸಬೇಕು.

2. ಎಷ್ಟು ತಿನ್ನುತ್ತೇವೆ ಅನ್ನುವುದು ಮುಖ್ಯವಲ್ಲ. ಏನು ತಿನ್ನುತ್ತೇವೆ ಎಂಬುದು ಮುಖ್ಯ.

3. ಬೊಜ್ಜು ಇಳಿಸುವ ಭರದಲ್ಲಿ ಅಲ್ಲಸಲ್ಲದ ಅಪಾಯಕರ ಉಪಾಯಗಳಿಗೆ, ಪ್ರಯತ್ನಗಳಿಗೆ ವಿದಾಯ ಹೇಳಬೇಕು.

4. ಶರೀರಕ್ಕೆ ಎಲ್ಲ ಜೀವಸತ್ವ ಲವಣಾಂಶಗಳನ್ನು ಪೂರೈಸುವ ಸಮತೋಲ ಆಹಾರ ಸೇವನೆಗೆ ಸ್ವಾಗತಿಸಬೇಕು.

5. ಬೊಜ್ಜು ಶೇಖರಣೆಗೆ ಸಹಾಯಕವಾಗುವ ಸ್ನಿಗ್ಧ ಪದಾರ್ಥಗಳನ್ನು ವರ್ಜಿಸಬೇಕು.

6. ಕಡಿಮೆ ಕ್ಯಾಲರಿ ಕೊಡುವ ಪದಾರ್ಥ ಸೇವನೆಗೆ ಪ್ರೋತ್ಸಾಹಿಸಬೇಕು.

7. Balanced Diet to Boost and not to burst the body, ವಿಶ್ವ ಆರೋಗ್ಯ ಸಮತೋಲನ ಆಹಾರ ತಂಡದವರು ಹೇಳಿದಂತೆ ಎಚ್ಚರಿಕೆ ವಹಿಸಬೇಕು.

ಮಹಿಳೆಯರು ಮನೆಗೆಲಸ ಮಾಡುವಾಗ ಆಮ್ಲಜನಕದ ವಿನಿಯೋಗ, ಕ್ಯಾಲರಿಗಳ ಖರ್ಚು ಹೆಚ್ಚುತ್ತದೆ ಎಂಬುದು ಆಹಾರ ಸಂಶೋಧನಾ ಕೇಂದ್ರದ ಅಧ್ಯಯನಗಳಿಂದ ಖಚಿತವಾಗಿದೆ. ಬೊಜ್ಜು ಕರಗಿಸಲು ಆಟದ ಬಯಲಿನ ವ್ಯಾಯಾಮ ಬೇಕೆಂದೇನೂ ಇಲ್ಲ. ಮನೆಯಲ್ಲಿ ಕಸಮುಸುರೆ ಕೆಲಸ, ನೆಲ ಸಾರಿಸುವುದು, ತೊಳೆಯುವುದು, ಕಪಾಟು ಸ್ವಚ್ಛ ಮಾಡಿ ಪಾತ್ರೆ ಪಗಡಿಗಳನ್ನು ಓರಣವಾಗಿ ಹೊಂದಿಸಿಬಿಡುವುದು. ಬಟ್ಟೆ ಬರೆ ತೊಳೆಯುವುದು ಕ್ಯಾಲರಿಗಳ ಖರ್ಚಿಗೆ ಬೊಜ್ಜು ಇಳಿಕೆಗೆ, ಮೈಮಾಟ ಚಿನ್ನಾಗಿ ಉಳಿಯಲು ಸಹಾಯಕವಾಗುತ್ತದೆ ಎಂಬುದನ್ನು ಮಧ್ಯಮ ವಯಸ್ಸಿನ ಮಹಿಳೆಯರು ನೆನಪಿಡಬೇಕು. ಇದರಿಂದ ದೈಹಿಕ, ಮಾನಸಿಕ, ಸ್ವಾಸ್ಥ್ಯಕ್ಕೆ ಭದ್ರ ಬುನಾದಿಯಾಗುವುದಲ್ಲದೇ, ಆಹಾರಸೇವನೆ ಹಾಗೂ ಬೊಜ್ಜು ಶೇಖರಣೆಯ ನಡುವಿನ ಶೀತಲ ಸಮರ ಶಾಂತಿಯಲ್ಲಿ ಕೊನೆಗೊಳ್ಳುತ್ತದೆ. ಆಳು ನಂಬಿ ಗೋಳಾಡುವುದು ತಪ್ಪುತ್ತದೆ.

dr Karaveeraprabhu-Kyalakonda.

ಡಾ|| ಕರವೀರಪ್ರಭು ಕ್ಯಾಲಕೊಂಡ

ಕ್ಯಾಲಕೊಂಡ ಆಸ್ಪತ್ರೆ,
ಕಾಲೇಜ ರೋಡ.
ಬಾದಾಮಿ-587201
ಜಿಲ್ಲಾ: ಬಾಗಲಕೋಟ.
ಮೋ: 9448036207
ಇ-ಮೇಲ್:drkvkyalakond@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!