ಹೊಟ್ಟೆಯ ಬೊಜ್ಜು

ಹೊಟ್ಟೆಯ ಬೊಜ್ಜು – ಇದಕ್ಕೆ ಕಾರಣ ನಾವು ಅತಿಯಾಗಿ ಸೇವಿಸುವ ಕಾರ್ಬೋಹೈಡ್ರೇಡ್ ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ ಮುಂತಾದ ಏಕದಳ ಧಾನ್ಯಗಳನ್ನು ನಾವು ಅತಿಯಾಗಿ ಸೇವಿಸುತ್ತೇವೆ

ಅತಿ ತೂಕ ಹೊಂದಿರುವ ನೂರರಲ್ಲಿ 95 ಜನ ನಮಗೆ ಹೊಟ್ಟೆಯ ಬೊಜ್ಜು ದೊಡ್ಡ ಸಮಸ್ಯೆಯಾಗಿದೆ; ಅದನ್ನು ಗುಣಪಡಿಸಿಕೊಡಿ ಎಂದು ಕೇಳಿಕೊಳ್ಳುತ್ತಾರೆ. ಬೊಜ್ಜನ್ನು ಕರಗಿಸಿಕೊಳ್ಳಲು ಮಾಡುವ ಪ್ರಯತ್ನಗಳಿಂದ ಕೈಕಾಲುಗಳು ಸಣ್ಣಗಾಗುತ್ತವೆಯೇ ಹೊರತು ಹೊಟ್ಟೆಯ ಬೊಜ್ಜು ಮಾತ್ರ ಒಂದಿಂಚು ಕರಗುವುದಿಲ್ಲ ಎಂಬುದು ಬಹುತೇಕ ಎಲ್ಲರ ಸಮಸ್ಯೆ. ಈ ಹೊಟ್ಟೆಯ ಬೊಜ್ಜಿನ ಕಾರಣದಿಂದಾಗಿಯೇ ಡಯಾಬಿಟೀಸ್, ಬಿಪಿ, ಪಿಸಿಓಡಿ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಬೊಜ್ಜಿನ ಸಮಸ್ಯೆ ಇದ್ದರೂ ಅವರಲ್ಲಿ ಇಡೀ ದೇಹವೂ ದಪ್ಪವಾಗಿರುತ್ತದೆ; ಆದರೆ ಭಾರತೀಯರಲ್ಲಿ ಮಾತ್ರ ಕೈ ಕಾಲು ಸಣ್ಣಗಿದ್ದು ಹೊಟ್ಟೆ ಮಾತ್ರ ಊದಿಕೊಂಡಿರುತ್ತದೆ. ಇದಕ್ಕೆ ಕಾರಣ ನಾವು ಅತಿಯಾಗಿ ಸೇವಿಸುವ ಕಾರ್ಬೋಹೈಡ್ರೇಡ್ ಅಂದರೆ ಅಕ್ಕಿ, ಗೋಧಿ, ರಾಗಿ, ಜೋಳ ಮುಂತಾದ ಏಕದಳ ಧಾನ್ಯಗಳನ್ನು ನಾವು ಅತಿಯಾಗಿ ಸೇವಿಸುತ್ತೇವೆ. ಹಾಗಾಗಿ ಹೊಟ್ಟೆಯ ಬೊಜ್ಜು ಹೆಚ್ಚಿರುವವರು ಸಾಧ್ಯವಾದಷ್ಟು ಕಾರ್ಬೋಹೈಡ್ರೇಟ್ ಆಹಾರಗಳನ್ನು ಕಡಿಮೆ ಮಾಡುತ್ತಾ ಪ್ರೋಟೀನ್ ಮತ್ತು ಒಳ್ಳೆಯ ಕೊಬ್ಬುಗಳನ್ನು ಹೆಚ್ಚು ಸೇವಿಸುತ್ತಾ ಹೋಗಬೇಕು.

hotteya-bojju-obesity

ಒಟ್ಟಿನಲ್ಲಿ ಹಲವಾರು ತೊಂದರೆಗಳಿಗೆ ಕಾರಣವಾಗುವ ಈ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳುವ ವಿಧಾನಗಳ ಬಗ್ಗೆ ಇಂದು ತಿಳಿದುಕೊಳ್ಳೋಣ. ನಾರಿನ ಅಂಶ ಅಧಿಕವಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಾವು ತೆಗೆದುಕೊಂಡಿರುವ ಆಹಾರ ನಮ್ಮ ಜೀರ್ಣಾಂಗ ವ್ಯೂಹದಲ್ಲಿ ನಿಧಾನವಾಗಿ ಚಲಿಸುವಂತೆ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಬೊಜ್ಜು ಶೇಖರವಾಗುವ ತೀವ್ರತೆ ತುಂಬಾ ಕಡಿಮೆಯಾಗುತ್ತದೆ. ಹಾಗಾಗಿ ಹಣ್ಣುಗಳು, ತರಕಾರಿಗಳು, ಮೆಂತೆಕಾಳು, ಎಲ್ಲಾ ರೀತಿಯ ಬೀನ್ಸ್ ಗಳನ್ನು ಹೆಚ್ಚಾಗಿ ಸೇವಿಸಬೇಕು. ಪ್ರೋಟೀನ್ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ನಿಧಾನವಾಗಿ ನಮ್ಮ ಊಟದಲ್ಲಿ ಹೆಚ್ಚಿಸುತ್ತಾ ಹೋಗುವುದರಿಂದ ಕೇವಲ ಬೊಜ್ಜೊಂದೇ ಅಲ್ಲದೇ ಹಲವು ರೀತಿಯ ಚಯಾಪಚಯ ಸಮಸ್ಯೆಗಳು (metabolic disorders) ಹತೋಟಿಗೆ ಬರಲು ಸಹಾಯವಾಗುತ್ತದೆ. ಪ್ರೋಟೀನ್ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದರ ಜೊತೆಗೆ ಮಾಂಸಖಂಡದ ಶಕ್ತಿಯನ್ನು ಕಾಪಾಡುತ್ತದೆ. ಹಾಗಾಗಿ ತೂಕ ಕಡಿಮೆಯಾದರೂ ನಮ್ಮ ದೇಹದ ಶಕ್ತಿ ಕಡಿಮೆಯಾಗುವುದಿಲ್ಲ. ಆದ ಕಾರಣ  ಬೇಳೆ-ಕಾಳುಗಳನ್ನು ನಮ್ಮ ಊಟದಲ್ಲಿ ಹೆಚ್ಚಿಸುತ್ತಾ ಹೋಗಬೇಕು. ಮಾಂಸಹಾರಿಗಳು ಮೀನು, ಮೊಟ್ಟೆ ಮತ್ತು ಮಾಂಸಗಳನ್ನು ಹೆಚ್ಚು ಸೇವಿಸಿ, ಧಾನ್ಯಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಲು ಪ್ರಯತ್ನಿಸಬೇಕು. ಆದರೆ ಇವುಗಳನ್ನು ಎಣ್ಣೆಯಲ್ಲಿ ಕರಿದು ಸೇವಿಸಬಾರದು.

ಮಾನಸಿಕ ಒತ್ತಡದ ಕಾರಣದಿಂದ “ಕಾರ್ಟಿಸೋಲ್” ಎಂಬ ಹಾರ್ಮೋನು ಹೆಚ್ಚಾಗಿ ಬಿಡುಗಡೆಯಾಗಿ ಇದು ಕೂಡ ಹೊಟ್ಟೆಯ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇದನ್ನು ಹಲವಾರು ಸಂಶೋಧನೆಗಳು ಸಾಬೀತುಪಡಿಸಿವೆ. ಇನ್ನು ನಾವು ಹಲವಾರು ವಿಧಗಳಲ್ಲಿ ಸಕ್ಕರೆಯನ್ನು ಸೇವಿಸುತ್ತೇವೆ; ಅತಿ ಅಪಾಯಕಾರಿಯಾದ ಇದನ್ನು ಪೂರ್ತಿಯಾಗಿ ತ್ಯಜಿಸಲೇಬೇಕಾಗುತ್ತದೆ. ಇಡೀ ದಿನ ಕುಳಿತೇ ಕೆಲಸ ಮಾಡುವವರಿಗೆ ಹೊಟ್ಟೆಯ ಬೊಜ್ಜು ಹೆಚ್ಚು. ಆ ರೀತಿಯ ಕೆಲಸ ಇರುವವರು ಪ್ರತಿದಿನ ಕನಿಷ್ಠ ಅರ್ಧ ಘಂಟೆಯಾದರೂ ವ್ಯಾಯಾಮಗಳನ್ನು ಮಾಡಲೇಬೇಕು. ಸೂರ್ಯ ನಮಸ್ಕಾರ, ಕೆಲವು ಆಸನಗಳು, ಏರೋಬಿಕ್ ವ್ಯಾಯಾಮಗಳು ತುಂಬಾ ಪರಿಣಾಮಕಾರಿ. ಸರಿಯಾದ ಪ್ರಮಾಣದಲ್ಲಿ ನಿದ್ದೆಯನ್ನು ಮಾಡದೇ ಹೋದರೆ ಅಂದರೆ ಕನಿಷ್ಠ ಆರೇಳು ತಾಸು ನಿದ್ದೆ ಮಾಡದೇ ಇರುವವರಿಗೆ ಆಗಲೇ ಇರುವ ಹೊಟ್ಟೆಯ ಬೊಜ್ಜು ಹೆಚ್ಚುತ್ತಾ ಹೋಗುತ್ತದೆ ಎಂಬುದನ್ನು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ. ಹಾಗೆಯೇ ಹಗಲು ನಿದ್ದೆಯಿಂದ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.

ಪ್ರೊಬಯೋಟಿಕ್ ಗಳು (Probiotics) ಒಮೆಗಾ ತ್ರಿ (Omega 3), ವೇ ಪ್ರೊಟೀನ್ (Whey protein) ಗಳಂತಹ ಪೂರಕ ಆಹಾರೌಷಧಗಳನ್ನು ಮತ್ತು ಗ್ರೀನ್ ಟೀ ಯಂತಹ ಪಾನೀಯಗಳನ್ನು ಸೇವಿಸುವುದರಿಂದಲೂ ಬೊಜ್ಜು ಕಡಿಮೆಯಾಗಲು ಸಹಾಯವಾಗುತ್ತದೆ. ಮೊಬೈಲ್ ಪಾರಿತೋಷಕ ಪಡೆದ “ಮಧ್ಯಂತ ಉಪವಾಸ” ಅಂದರೆ intermittent fasting ಹೊಟ್ಟೆಯ ಬೊಜ್ಜನ್ನು ಕರಗಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. 24 ಗಂಟೆಗಳಲ್ಲಿ ಎಂಟು ತಾಸು ಆಹಾರವನ್ನು ಸೇವಿಸಿದರೆ ಇನ್ನು 16 ತಾಸು ನೀರಿನ ಹೊರತಾಗಿ ಬೇರೆ ಏನನ್ನೂ ಸೇವಿಸದೇ ಉಪವಾಸ ಮಾಡಬೇಕು. ಪ್ರಾರಂಭದಲ್ಲಿ 12 ರಿಂದ 14 ತಾಸು ಉಪವಾಸ ಮಾಡುತ್ತಾ ನಿಧಾನವಾಗಿ ಪ್ರತಿದಿನ 16 ತಾಸು ಉಪವಾಸ ಮಾಡುವ ರೂಢಿ ಮಾಡಿಕೊಳ್ಳಬೇಕು. ಎಂಟು ತಾಸುಗಳ ಅವಧಿಯಲ್ಲಿ ಆಹಾರ ಸೇವಿಸಬಹುದಾದರೂ ಮೇಲೆ ಹೇಳಿದ ಎಲ್ಲ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು ಬೊಜ್ಜನ್ನು ಕರಗಿಸಲು ಸಹಾಯ ಮಾಡುವ ಆಹಾರಗಳನ್ನು ಮಾತ್ರ ಸೇವಿಸಬೇಕು.

ಈ ಸಮಸ್ಯೆ ಅತಿಯಾಗಿ ಕಾಡುತ್ತಿರುವವರು ಇವುಗಳ ಜೊತೆಗೆ ಹೊಟ್ಟೆಯ ಬೊಜ್ಜನ್ನು ಕರಗಿಸಲೆಂದೇ ಇರುವ ಪ್ರಕೃತಿ ಚಿಕಿತ್ಸೆಗಳು, ಆಯುರ್ವೇದ ಚಿಕಿತ್ಸೆಗಳನ್ನು ಕನಿಷ್ಠ 10 ದಿನ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ನಿವಾರಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ಒಟ್ಟಿನಲ್ಲಿ ಹೊಟ್ಟೆಯ ಬೊಜ್ಜು ಹೆಚ್ಚಾಗಲು ಬಿಡಬಾರದು; ಹೆಚ್ಚಾದರೆ ಆದಷ್ಟು ಬೇಗ ಅದನ್ನು ನಿವಾರಿಸಿಕೊಳ್ಳಲೇಬೇಕು.

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!