ಕಿಡ್ನಿ ಕಲ್ಲು ತೊಂದರೆಗೆ ನಿರ್ಧಿಷ್ಟ ಕಾರಣಗಳು ಇನ್ನೂ ತಿಳಿದಿಲ್ಲ. ಶಸ್ತ್ರ ಚಿಕಿತ್ಸೆಯಿಲ್ಲದೆಯೇ ಅನೇಕ ಕಿಡ್ನಿ ಕಲ್ಲುಗಳನ್ನು ಹೋಮಿಯೋ ಔಷಧಿಗಳಿಂದ ನಿವಾರಿಸಬಹುದು. ಸಮರ್ಪಕವಾದ ಹೋಮಿಯೋ ಚಿಕಿತ್ಸೆಯಿಂದ ಕಿಡ್ನಿ ಸ್ಟೋನ್ಸ್ ತೊಂದರೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಸಾಧ್ಯ,
ಡಾಕ್ಟ್ರೇ ನಂಗೆ ಸ್ವಲ್ಪ ದಿನಗಳಿಂದ ಬಲಗಡೆ ಕೆಳಬೆನ್ನು ನೋವುಬರ್ತಿರುತ್ತೆ, ಮೂತ್ರಮಾಡುವಾಗ ತುಂಬಾ ಉರಿಯಾಗುತ್ತೆ, ಮೊನ್ನೆ ರಾತ್ರಿಯಂತೂ ತುಂಬಾ ಜಾಸ್ತಿಯಾಯ್ತು, ಆಸ್ಪತ್ರೆಗೆ ಅಡ್ಮಿಟ್ ಆಗಿದ್ದೆ, ಡಾಕ್ಟ್ರು ಎಲ್ಲಾ ಪರೀಕ್ಷೆ ಮಾಡ್ಸಿದ್ರು ಕಿಡ್ನಿಯಲ್ಲಿ ಸ್ಟೋನ್ ಇದೆ ಅಂದ್ರು, ಸದ್ಯಕ್ಕೆ ಗುಳಿಗೆ ಟಾನಿಕ್ಕು ಕೊಟ್ಟಿದಾರೆ, ಆಪರೇಷನ್ನು ಮಾಡ್ಬೇಕು ಅಂದ್ರು, ನಮ್ಮ ಮನೆ ಪಕ್ಕದವ್ರು ನಿಮ್ಮ್ ಬಗ್ಗೆ ಹೇಳಿದ್ರು, ಅವ್ರಿಗೂ ಕಿಡ್ನಿ ಸ್ಟೋನ್ ಇತ್ತಂತಲ್ಲಾ, ಅಪರೇಷನ್ನಿಲ್ಲದಂಗೆ ನೀವು ಏನೋ ಹೋಮಿಯೋಪಥಿ ಮೆಡಿಸಿನ್ ಕೊಟ್ಟು ಗುಣಮಾಡಿದ್ರಂತಲ್ಲ, ನಂಗೂ ಒಳ್ಳೆ ಗುಳಿಗೆ ಕೊಡ್ರೀ, ನಿಮ್ಮ ನಂಬಿಕೊಂಡು ಬಂದಿದೀನಿ ಎಂದು ರಫೀಕ್ ಈಗ್ಗೆ ಸುಮಾರು 4 ತಿಂಗಳು ಹಿಂದೆ ನನ್ನ ಕ್ಲಿನಿಕ್ಕಿಗೆ ಬಂದರು, ಅವರ ಬ್ಲಡ್ ರಿಪೋರ್ಟ್, ಎಕ್ಸ್ರೇ, ಸ್ಕ್ಯಾನ್ ನೋಡಿದಾಗ ತಿಳಿದದ್ದು ಇಷ್ಟು ರಫೀಕ್ ಅವರ ಬಲಗಡೆ ಕಿಡ್ನಿಯಲ್ಲಿ 4 ಕಿಡ್ನಿ ಸ್ಟೋನ್ಸ್ ಇರುವುದು ಗೊತ್ತಾಯಿತು. 30 ವರ್ಷದ ರಫೀಕ್ ಒಬ್ಬ ಕ್ಯಾಬ್ ಚಾಲಕ, ಅವರ ಕೇಸ್ ಹಿಸ್ಟರಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಲೈಕೋಪೋಡಿಯಂ (Lycopodium) ಎಂಬ ಹೋಮಿಯೋ ಔಷಧಿಯನ್ನು 1000 M ಅಂಶದಲ್ಲಿ ನೀಡಿದೆ, ಹಾಗೆಯೇ ಅನುಗುಣವಾದ ಆಹಾರ, ಪಥ್ಯದ ಬಗ್ಗೆ ಸಲಹೆಗಳನ್ನೂ ತಿಳಿಸಿ ಎರಡು ವಾರಗಳ ನಂತರ ಬರುವಂತೆ ಹೇಳಿದೆ.
ಸುಮಾರು ಎರಡು ತಿಂಗಳು ಕಳೆದಮೇಲೆ ರಫೀಕ್ ನನ್ನನ್ನು ಸಂದರ್ಶಿಸಿದ, ಏನಪ್ಪಾ ಈಗ ಬಂದ್ರೆ ಹೆಂಗೆ ? ನಾನು ಹೇಳಿದ ಹಂಗೆ ರೆಗ್ಯುಲರ್ ಮೆಡಿಸಿನ್ ತಗೆದುಕೊಳ್ಳದಿದ್ದರೆ ಕಿಡ್ನಿ ಸ್ಟೋನ್ ತೊಂದರೆ ಹೇಗೆ ಸರಿಹೋಗುತ್ತೆ ? ಎಂದು ಸ್ವಲ್ಪ ಸಿಟ್ಟಿನಿಂದಲೇ ಹೇಳಿದೆ, ಆಗ ರಫೀಕ್, ಸಾರ್ ಮಾಫ್ ಕರೋ ಸಾರ್ ಎಂದು ಹೇಳ್ತಾ ಜೋಬಿನಿಂದ ಒಂದು ಪ್ಲಾಸ್ಟಿಕ್ ಕವರ್ ತೆಗೆದು ಅದ್ರಲ್ಲಿಂದ ಸಣ್ಣ ಸಣ್ಣ 3 ಕಲ್ಲು ತೆಗೆದಿಟ್ಟು ಹೇಳಿದ, ಸಾರ್ ಸ್ಟೋನ್ ನಿಮ್ಮ ಮೆಡಿಸಿನ್ ತಗೊಂಡು ಒಂದ್ ವಾರಕ್ಕೆ ಯೂರಿನ್ ಮಾಡುವಾಗ ಬಂದುಬಿಡ್ತು ಸಾರ್, ನಿಮಗೆ ತೋರ್ಸೋಣ ಅಂತ ಎತ್ತಿಟ್ಕೊಂಡೆ, ಆಮೇಲೆ ನಾನು ನಾರ್ಥ್ ಇಂಡಿಯಾ ಟೂರ್ ಹೋಗ್ಬಿಟ್ಟೆ ಸಾರ್ ಬರೋಕಾಗ್ಲಿಲ್ಲ ಎಂದ. ಅವನು ವಾರದ ಹಿಂದೆ ಮಾಡಿಸಿದ ಸ್ಕ್ಯಾನ್ ರಿಪೋರ್ಟಿನಲ್ಲೂ ಕಿಡ್ನಿ ಸ್ಟೊನ್ಸ್ ಇದ್ದ ಯಾವ ಕುರುಹೂ ಇರಲಿಲ್ಲ. ಪರ್ವಾಗಿಲ್ಲ ಈಗಾದ್ರೂ ಬಂದ್ಯಲ್ಲ ಅಂತ ಹೇಳಿ ಅವನಿಗೆ ಕಿಡ್ನಿ ಸ್ಟೋನ್ಸ್ ಮರುಕಳಿಸದಂತೆ ಕೆಲವು ಔಷಧಿಗಳನ್ನು ಹಾಗು ಸಲಹೆಗಳನ್ನು ನೀಡಿ ಕಳಿಸಿದೆ.
ಕಿಡ್ನಿಯಲ್ಲಿ ಕಲ್ಲುಗಳು ಹೇಗೆ ಉಂಟಾಗುತ್ತವೆ?
ಇದಕ್ಕೆ ನಿರ್ಧಿಷ್ಟ ಕಾರಣಗಳು ಇನ್ನೂ ತಿಳಿದಿಲ್ಲ, ಕೆಲ ಸಂಭವನೀಯ ಕಾರಣಗಳು ಹೀಗಿವೆ
1. ವಿಟಮಿನ್ A ಕೊರತೆ
2. ಉಷ್ಣ ಮತ್ತು ಶುಷ್ಕ ಹವಾಮಾನ
3. ಪದೇ ಪದೇ ಉಂಟಾಗುವ ಮೂತ್ರದ ಸೋಂಕು (Urinary tract infections)
4. ಅನುವಂಶೀಯತೆ (Hereditary), ತಂದೆ ತಾಯಿ ಅಥವಾ ಹತ್ತಿರದ ಕುಟುಂಬದ ಸದಸ್ಯರಲ್ಲಿದ್ದರೆ
5. ಮೂತ್ರದ ಸರಾಗ ವಿಸರ್ಜನೆಗೆ ಏನಾದರೂ ಅಡ್ಡಿಗಳಿದ್ದರೆ
6. ಪ್ಯಾರಾ ಥೈರಾಯ್ಡ್ ಗ್ರಂಥಿಯ ತೊಂದರೆಗಳಿದ್ದರೆ (Hyper hyperparathyroidism), ಇವರಲ್ಲಿ ಕಿಡ್ನಿ ಕಲ್ಲುಗಳು ಆಗಾಗ ಆಗುತ್ತಲೇ ಇರುತ್ತವೆ
7. ಕಿಡ್ನಿ ಸ್ಟೋನ್ಸ್ ಹೆಂಗಸರಿಗಿಂತ ಗಂಡಸರಲ್ಲೇ ಜಾಸ್ತಿ ಉಂಟಾಗುತ್ತವೆ.
Also Read: Pain killers can damage kidneys.
ಕಿಡ್ನಿ ಕಲ್ಲುಗಳು ಯಾವುದರಿಂದ ಮಾಡಲ್ಪಟ್ಟಿರುತ್ತವೆ ?
ಹೆಚ್ಚಿನ ಕಲ್ಲುಗಳು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿರುತ್ತವೆ , ಈ ಕಿಡ್ನಿ ಕಲ್ಲುಗಳು ಕೆಳಗಿನ ವಿಧಗಳಲ್ಲಿ ಕಂಡುಬರುತ್ತವೆ
1. ಕ್ಯಾಲ್ಸಿಯಂಆಕ್ಸಲೇಟ್ ಕಲ್ಲುಗಳು (75%): ಇವುಗಳು ಉಂಟಾಗುವ ಸಂಭವನೀಯತೆ ಬೇರೆಲ್ಲವುಕ್ಕಿಂತ ಹೆಚ್ಚು. ಈ ಕಲ್ಲುಗಳು ಗಟ್ಟಿಯಾಗಿದ್ದು, ಚೂಪಾದ ಮೊನೆಗಳನ್ನು ಹೊಂದಿರುತ್ತವೆ, ಇವೇನಾದರೂ ಕಿಡ್ನಿ ಅಥವಾ ಮೂತ್ರನಾಳದಲ್ಲಿ ಸಿಕ್ಕಿ ಹಾಕಿಕೊಂಡರೆ, ರೋಗಿಯು ತೀವ್ರವಾದ ನೋವು, ರಕ್ತಮಿಶ್ರಿತ ಮೂತ್ರಗಳಂತಹ ತೊಂದರೆಯನ್ನು ಅನುಭವಿಸುತ್ತಾನೆ.
2. ಕ್ಯಾಲ್ಸಿಯಂ ಫಾಸ್ಪೇಟ್ ಕಲ್ಲುಗಳು (10-15%) : ಈಮೃದುವಾದ ಕಲ್ಲುಗಳು ಕೆಲವೊಮ್ಮೆ ಯಾವ ತೊಂದರೆಯನ್ನೂ ಕೊಡುವುದಿಲ್ಲ (Asymptomatic), ಇವುಆಕಸ್ಮಿಕವಾಗಿ ಬೇರೆಯಾವುದೂ ತೊಂದರೆಗೆ ಎಕ್ಷ ರೇ ಅಥವಾ ಸ್ಕ್ಯಾನ್ ಮಾಡಿಸಿದಾಗ ಪತ್ತೆಯಾಗುತ್ತವೆ.
3. ಯೂರಿಕ್ ಆಸಿಡ್ ಕಲ್ಲುಗಳು (5%): ನಮ್ಮ ರಕ್ತದಲ್ಲಿನಯೂರಿಕ್ ಆಸಿಡ್ ಪ್ರಮಾಣ 7 mg ಗಿಂತಾಹೆಚ್ಚು ಇರುವವರಲ್ಲಿ ಈ ಕಲ್ಲುಗಳು ಉಂಟಾಗುತ್ತವೆ. ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಗೌಟ್ (Gout) ಎಂಬ ಕೀಲುಗಳ ಉರಿಯೂತ (Gouty Arthritis) ಉಂಟಾಗಬಹುದು.
ಕಿಡ್ನಿ ಸ್ಟೋನ್ಸ್ ಲಕ್ಷಣಗಳು (signs & symptoms):
1. ಮೂತ್ರ ವಿಸರ್ಜನೆಯಲ್ಲಿ ಉರಿ, ನೋವು
2, ಕಲ್ಲುಗಳು ಕಿಡ್ನಿಯಲ್ಲಿದ್ದರೆ ಕೆಳಬೆನ್ನಿನ ಬಲ ಅಥವಾ ಎಡ ಭಾಗದಲ್ಲಿ ನೋವು ಕಂಡುಬರುತ್ತದೆ
3. ಕಲ್ಲು ಮೂತ್ರನಾಳದಲ್ಲಿ ಸಿಕ್ಕಿಹಾಕಿಕೊಂಡು ಅಡಚಣೆ ಉಂಟುಮಾಡುತ್ತಿದ್ದರೆ (block) ತೀವ್ರವಾದ ಯಾತನಾಮಯ ನೋವು ಉಂಟಾಗುತ್ತದೆ
4. ಕೆಲವೊಮ್ಮೆ ಮೇಲಿನ ನೋವು ಕೆಳಗಿನ ತನಕ ವಿಸ್ತರಿಸಬಹುದು (Radiating pain)
5. ಕೆಲವರಲ್ಲಿ ನೋವೇ ಇಲ್ಲದಿರುವುದು(Asymptomatic)
6. ವಾಕರಿಕೆ, ವಾಂತಿ, ಜ್ವರ
7. ಉರಿಮೂತ್ರ, ರಕ್ತಮಿಶ್ರಿತ ಮೂತ್ರ ಇತ್ಯಾದಿ
ಕಿಡ್ನಿ ಸ್ಟೋನ್ ಇರುವಿಕೆಯನ್ನು ಪತ್ತೆ ಹಚ್ಚುವುದು ಹೇಗೆ ?
ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ನಿಮ್ಮ ವೈದ್ಯರು ಮಾಡಲು ಹೇಳುತ್ತಾರೆ
1. ರಕ್ತ ಪರೀಕ್ಷೆ: ಇದರಿಂದ ಹೆಚ್ಚು ಕ್ಯಾಲ್ಸಿಯಂ ಅಥವಾ ಯೂರಿಕ್ ಆಸಿಡ್ ಪ್ರಮಾಣ ಪತ್ತೆಹಚ್ಚಬಹುದು
2. ಮೂತ್ರಪರೀಕ್ಷೆ:
3. ಎಕ್ಸ್-ರೇ: ಇದರಿಂದ ಸಣ್ಣ ಗಾತ್ರದ ಕಲ್ಲುಗಳು ಪತ್ತೆಹಚ್ಚಲು ಅಸಾಧ್ಯ
4. ಸ್ಕ್ಯಾನ್ : ಇದರಿಂದ ಕಲ್ಲುಗಳಿರುವ ಸ್ಥಳ ಮತ್ತು ಕಲ್ಲುಗಳ ಗಾತ್ರ ನಿಖರವಾಗಿ ಗೊತ್ತಾಗುತ್ತದೆ.
ಕಿಡ್ನಿ ಸ್ಟೋನ್ಸ್ ಬರದಂತೆ ತಡೆಗಟ್ಟುವುದು ಹೇಗೆ ?
1. ಮೂತ್ರವನ್ನು ತುಂಬಾ ಹೊತ್ತು ತಡೆದು ಹಿಡಿಯಬೇಡಿ
2. ದಿನಕ್ಕೆ 2-3 ಲೀಟರ್ ನೀರು, ಮಜ್ಜಿಗೆ ಇತ್ಯಾದಿ ಕುಡಿಯಿರಿ
3. ಬೇಸಿಗೆಯಲ್ಲಂತೂ ಆಗಾಗ ನೀರು ಕುಡಿಯುತ್ತಲೇಯಿರಿ
4. ನಿಮ್ಮ ಮೂತ್ರ ನೀರಿನಂತೆ ಕ್ಲಿಯರ್ ಇದ್ದರೆ, ನೀವು ಚನ್ನಾಗಿ ನೀರು ಕುಡಿಯುತ್ತಿದ್ದೀರಿ ಎಂದರ್ಥ
5. ಹೆಚ್ಚು ಉಪ್ಪು ಅಥವಾ ಉಪ್ಪಿನ ಪದಾರ್ಥ ಸೇವನೆ ಒಳ್ಳೆಯದಲ್ಲ
6. ಈಗಾಗಲೇ ಆಕ್ಸಲೇಟ್ ಸ್ಟೋನ್ಸ್ ಹೊಂದಿದ್ದವರು ರುಬಾರ್ಬ್, ಬೀಟ್ರೂಟ್, ಬಸಳೆ ಸೊಪ್ಪು, ಗೆಣಸು, ಕಡಲೆ, ಗೋಡಂಬಿಯಂತಹ ಬೀಜ ಧಾನ್ಯಗಳು, ಚಹಾ, ಚಾಕೊಲೇಟ್, ಮತ್ತು ಸೋಯಾಯುಕ್ತ ಆಹಾರಗಳನ್ನು ತಿನ್ನಬಾರದು.
7. ಜೀವನ ಶೈಲಿಯ ಬದಲಾವಣೆಯೂ ಮುಖ್ಯ
8. ಕುರ್ಚಿ ಮತ್ತು ಟೇಬಲ್ಲಿಗೆ ನಮ್ಮನ್ನು ಅಂಟಿಸಿಬಿಡುವ ವೃತ್ತಿಗಳು, ಅಸಹಜಆಹಾರ, ಅತಿಯಾದ ಮದ್ಯ ಸೇವನೆ, ಮಾನಸಿಕ ಒತ್ತಡ ಇತ್ಯಾದಿಗಳು ಕಿಡ್ನಿ ಸ್ಟೋನ್ಸ್ ಉಂಟಾಗಲು ಪೂರಕಗಳಾಗಿವೆ.
ಕಿಡ್ನಿ ಸ್ಟೋನ್ಸ್ ಇರುವವರಲ್ಲಿ ಅನುಸರಿಸಬೇಕಾದ ಆಹಾರ–ಪಥ್ಯ
1. ಹರಿವೆ, ಬಸಳೆ ಸೊಪ್ಪು, ಸ್ಟ್ರಾಬೆರ್ರಿ ಹಣ್ಣು, ಮುಳ್ಳು ಸೌತೆ ಗಳನ್ನು ಸೇವಿಸಬಾರದು
2. ಹಾಲು ಮಾತು ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಂಶ ಜಾಸ್ತಿ ಹಾಗಾಗಿ ಇವನ್ನು ಕಡಿಮೆ ಸೇವಿಸಿ
3. ಮಾಂಸ, ಲಿವರ್ ಮತ್ತು ದ್ವಿದಳ ಧಾನ್ಯಗಳಲ್ಲಿ ಯೂರಿಕ್ ಆಸಿಡ್ ಇರುತ್ತದೆ, ಇವನ್ನು ಕಡಿಮೆ ಮಾಡಿ
4. ದಿನಕ್ಕೆ 2-3 ಲೀಟರ್ ನೀರು ಕುಡಿಯುವುದು ಒಳ್ಳೆಯದು
ಆಹಾರ ಪಥ್ಯದ ಸಲಹೆಗಳು ಎಲ್ಲರಿಗೂ ಒಂದೇ ಆಗಿರುವುದಿಲ್ಲ, ಅವರವರ ಲಕ್ಷಣಗಳಮೇಲೆ, ಯಾವ ತರಹದ ಸ್ಟೋನ್ ಇದೆ ಎಂಬುವುದರಮೇಲೂ ನಿರ್ಭರಿಸುತ್ತವೆ, ಹಾಗಾಗಿ ನಿಮ್ಮ ವೈದ್ಯರ ಸಲಹೆಯ ಪ್ರಕಾರ ಆಹಾರ ಪಥ್ಯವನ್ನು ಅನುಸರಿಬೇಕಾಗುತ್ತದೆ.
ಕಿಡ್ನಿ ಸ್ಟೋನ್ ಚಿಕಿತ್ಸೆ ಹೇಗೆ ?
1. ಹೆಚ್ಚು ಬಾಧೆಕೊಡದ ಸಣ್ಣ ಸ್ಟೋನ್ಸ್
ಸಣ್ಣ ಕಲ್ಲುಗಳು ಅನೇಕ ಸಾರಿ ಏನೂ ಚಿಕಿತ್ಸೆಯಿಲ್ಲದೇ ಮೂತ್ರದ ಮೂಲಕ ಹೊರಹೋಗಿಬಿಡುತ್ತವೆ, ಎಲ್ಲಾ ಕಿಡ್ನಿ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ (Surgery) ಬೇಕಾಗಿಲ್ಲ.
ದಿನಕ್ಕೆ ಸುಮಾರು 2-3 ಲೀಟರ್ ನೀರು ಕುಡಿಯುವುದು ಪ್ರಯೋಜನಕಾರಿ.
2. ಬಾಧೆ ಕೊಡುವ ಸಣ್ಣ ಸ್ಟೋನ್ಸ್
ಇಂತಹವುಗಳಿಗೆ ಹೋಮಿಯೋಪಥಿ ಚಿಕಿತ್ಸೆ ಹೆಚ್ಚು ಫಲಕಾರಿ, ಶಸ್ತ್ರಚಿಕಿತ್ಸೆಯಿಲ್ಲದೆಯೇ ಔಷಧಿಗಳಮೂಲಕವೇ ಇವುಗಳ ನಿವಾರಣೆ ಸಾಧ್ಯ.
3. ದೊಡ್ಡ ಗಾತ್ರದ ಕಿಡ್ನಿ ಸ್ಟೋನ್ಸ್
ಕೆಲವೊಮ್ಮೆ ಮನುಷ್ಯನ ಮೂತ್ರನಾಳದ ಅಗಲಕ್ಕಿಂತ ದೊಡ್ಡ ಗಾತ್ರದ ಕಲ್ಲುಗಳು, ಎಷ್ಟೇ ಔಷಧಿಕೊಟ್ಟರೂ ಮೂತ್ರದ ಮೂಲಕ ಹೊರಹೋಗುವುದಿಲ್ಲ, ಇಂತಹವು ಕೆಲವೊಮ್ಮೆ ಸಿಕ್ಕಿಹಾಕಿಕೊಂಡು ತೀವ್ರವಾದ ನೋವು, ರಕ್ತಮಿಶ್ರಿತ ಮೂತ್ರಗಳಂತಹ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತವೆ, ಇದರಿಂದ ಕಿಡ್ನಿ ಹಾಳಾಗುವ ಸಾಧ್ಯತೆಯೂ ಉಂಟು, ಇಂತಹ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ.
ದೊಡ್ಡ ಕಿಡ್ನಿ ಕಲ್ಲುಗಳನ್ನು ಶಾಕ್ ವೇವ್ ಮೂಲಕ ತುಂಡರಿಸಿ ಚಿಕ್ಕ ಚಿಕ್ಕ ಚೂರುಗಳನ್ನು ಮಾಡಿ ಮೂತ್ರದ ಮೂಲಕ ಹೊರಹೋಗುವಂತೆ ಮಾಡುವ ಆಧುನಿಕ ಶಸ್ತ್ರ ಚಿಕಿತ್ಸೆ ಈಗ ಹೆಚ್ಚು ಪ್ರಚಲಿತ.
ಈ ಮೇಲಿನ ಶಾಕ್ ವೇವ್ ಚಿಕಿತ್ಸೆ ಫಲಕಾರಿಯಾಗದಿದ್ದರೆ ಲಿಥೊಟೊಮಿ ಎಂಬ ಇನ್ನೊಂದು ವಿಧದ ಶಸ್ತ್ರ ಚಿಕಿತ್ಸೆ ಲಭ್ಯ, ಇದಕ್ಕೆ ಬೆನ್ನಿನ ಭಾಗದಲ್ಲಿ ಒಂದು ಚಿಕ್ಕ ರಂಧ್ರ (Incision) ಮಾಡಿ ಅದರಮೂಲಕ ಕಲ್ಲನ್ನು ಹೊರತೆಗೆಯಲಾಗುತ್ತದೆ
ಕಿಡ್ನಿ ಸ್ಟೋನ್ಸ್— ಹೋಮಿಯೋ ಚಿಕಿತ್ಸೆ
1. ಶಸ್ತ್ರ ಚಿಕಿತ್ಸೆಯಿಲ್ಲದೆಯೇ ಅನೇಕ ಕಿಡ್ನಿ ಕಲ್ಲುಗಳನ್ನು ಹೋಮಿಯೋ ಔಷಧಿಗಳಿಂದ ನಿವಾರಿಸಬಹುದು,
2. ಕೆಲವರಲ್ಲಿ ಶಸ್ತ್ರ ಚಿಕಿತ್ಸೆಯ ನಂತರವೂ ಮತ್ತೆ ಮತ್ತೆ ಕಲ್ಲುಗಳು ಉಂಟಾಗುವ ಸಾಧ್ಯತೆ ಇರುತ್ತದೆ, ಅಂತಹವರಲ್ಲಿ ಹೋಮಿಯೋ ಚಿಕಿತ್ಸೆಯಿಂದ ಮರುಕಳಿಸುವ (recurrence) ಸಾಧ್ಯತೆಗಳನ್ನು ತಡೆಗಟ್ಟಬಹುದು.
3. ಹೊಮಿಯೋ ವೈದ್ಯಕೀಯದ ಮೈಯಾಸಂ ಸಿದ್ಧಾಂತದ ಪ್ರಕಾರ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು ಒಂದು ತರಹದ ಅಸಹಜ ಅಥವಾ ಅತಿರೇಕದ ದೇಹ ಪ್ರವೃತ್ತಿ (Tendency) ಆಗಿರುತ್ತದೆ, ಸಾಮಾನ್ಯವಾಗಿ ಎಲ್ಲರೂ ತಿಳಿದ ಹಾಗೆ ಬರೀ ನೀರು ಕಡಿಮೆ ಕುಡಿದ ಮಾತ್ರಕ್ಕೆ ಎಲ್ಲರಲ್ಲಿ ಕಿಡ್ನಿ ಕಲ್ಲು ಬೆಳೆಯಲು ಸಾಧ್ಯವಿಲ್ಲ.
4. ಹೋಮಿಯೋ ಔಷಧಿಗಳು ಕಿಡ್ನಿ ಕಲ್ಲಿನಿಂದ ಬಳಲುವ ರೋಗಿಯ ನೋವು, ಉರಿ, ರಕ್ತಮೂತ್ರ ಇತ್ಯಾದಿಗಳನ್ನುಪರಿಣಾಮಕಾರಿಯಾಗಿ ಶಮನ ಮಾಡುವುದಲ್ಲದೇ, ರೋಗದ ಮೂಲಕಾರಣವಾದ ಅತಿರೇಕದ ದೇಹ ಪ್ರವೃತ್ತಿಯನ್ನು (Stone forming Tendency) ಗುಣಪಡಿಸುವುದರ ಮೂಲಕ ಶಾಶ್ವತ ನಿರ್ಮೂಲನೆ ಸಾಧ್ಯ.
5. ಸಮರ್ಪಕವಾದ ಹೋಮಿಯೋಚಿಕಿತ್ಸೆಯಿಂದ ಕಿಡ್ನಿ ಸ್ಟೋನ್ಸ್ ತೊಂದರೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಸಾಧ್ಯ, ಕಿಡ್ನಿ ಕಲ್ಲಿನ ತೊಂದರೆಯಿಂದ ಬಳಲುತ್ತಿರುವ ಅನೇಕರಲ್ಲಿ ಶಸ್ತ್ರ ಚಿಕಿತ್ಸೆ (Surgery) ಮತ್ತು ಅನವಶ್ಯಕ ಹಣದ ಖರ್ಚ ಎರಡನ್ನೂ ತಪ್ಪಿಸಬಹುದು.
Also read: ವಿಶ್ವ ಕಿಡ್ನಿ ದಿನ – ಮಾರ್ಚ್ 10 : ನಿಮಗಿರುವುದು ಎರಡೇ ಕಿಡ್ನಿ… ಕಾಪಾಡಿಕೊಳ್ಳಿ
ಡಾ. ತೇಜಸ್ವಿ ಕೆ.ಪಿ.
ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು
ಸುರಭಿ ಹೋಮಿಯೋ ಕ್ಲಿನಿಕ್, ನಂದಾವತ್ ಕಾಂಪ್ಲೆಕ್ಸ್, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯರಸ್ತೆ, ಬೆಂಗಳೂರು-97 ಮೊ: 97311 33819