ಇಲಿ ಜ್ವರ ಬ್ಯಾಕ್ಟೀರಿಯಾ ಸೂಕ್ಷ್ಮಾಣುವಿನಿಂದ ಉಂಟಾಗುವ ಕಾಯಿಲೆ. ಸಮ್ಮಿಶ್ರ ಲಕ್ಷಣಗಳು ಕಂಡುಬರುವುದರಿಂದ ವೈದ್ಯರು ಕೂಡ ಇದನ್ನು ಶ್ವಾಸಕೋಶದ ಸೋಂಕು ಎಂದು ತಪ್ಪಾಗಿ ನಿರ್ಧರಿಸಬಹುದು. ಈಗಿನ ಸಂದರ್ಭದಲ್ಲಂತೂ ಇಲಿಜ್ವರವನ್ನು ಮರೆತು, ಕೊರೋನಾ ಪರೀಕ್ಷೆಗೆ ಸೂಚಿಸಬಹುದು.
ಇತ್ತೀಚೆಗೆ ರೋಗಿಯೊಬ್ಬ ನಿಶ್ಶಕ್ತ ಸ್ಥಿತಿಯಲ್ಲಿ ನನ್ನ ಚಿಕಿತ್ಸಾಲಯಕ್ಕೆ ಬಂದಿದ್ದ. ಅದಾಗಲೇ ಇಬ್ಬರು ವೈದ್ಯರ ಚಿಕಿತ್ಸೆಯನ್ನು ಪಡೆದುಕೊಂಡಿದ್ದ ಈ ವ್ಯಕ್ತಿ, ನನ್ನ ಬಳಿಬಂದು ಎರಡು ದಿನಗಳ ಮಟ್ಟಿಗೆ ಗ್ಯಾಸ್ಟಿಕ್ ಮಾತ್ರೆ ಹಾಗೂ ಜ್ವರದ ಮಾತ್ರೆ ಗಳನ್ನು ಕೇಳಿದ್ದ. ಆದರೆ ಆ ಮಾತ್ರೆಗಳನ್ನು ಕೊಡಲು ಒಲ್ಲದ ನಾನು, ಆತನಿಗೆ ತಪಾಸಣೆಗೆ ಸೂಚಿಸಿದೆ. ತಪಾಸಣೆ ಮಾಡಿಸಿಕೊಂಡು ಬಂದ ನಂತರ ನಾನು ಸಂದೇಹಿಸಿ ದಂತೆ ಅದು ಸಾಮಾನ್ಯ ಜ್ವರ ಆಗಿರದೆ, ಸ್ಪಷ್ಟವಾಗಿ ಇಲಿಜ್ವರ ಆಗಿತ್ತು. ಲಿವರಿಗೆ ಆದ ಹಾನಿಯನ್ನು ಹಾಗೂ ಕಿಡ್ನಿ ವೈಫಲ್ಯವನ್ನು ತಪಾಸಣಾ ವರದಿಗಳು ಅತ್ಯಂತ ಸ್ಪಷ್ಟವಾಗಿ ಸೂಚಿಸುತ್ತಿದ್ದವು. 45 ರಿಂದ ಕಡಿಮೆ ಇರಬೇಕಾದ ಯೂರಿಯಾ ಪ್ರಮಾಣವು 150ಕ್ಕೆ ಜಿಗಿದಿತ್ತು. ಬಿಲಿರುಬಿನ್ ಮಟ್ಟ ಅಧಿಕಗೊಂಡು ಹಳದಿ ಕಾಯಿಲೆಯನ್ನು ಸೂಚಿಸುತ್ತಿತ್ತು. ಕೆಂಪಾದ ಕಣ್ಣುಗಳು ಗಂಭೀರತೆಯನ್ನು ಕನ್ನಡಿ ಹಿಡಿದು ತೋರಿಸುತ್ತಿತ್ತು.
ಆತನನ್ನು ದೊಡ್ಡನಗರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೋಗಲು ಹೇಳಿದರೆ, ಆತನ ಕಡೆಯವರು ಕೇಳಿದ ಪ್ರಶ್ನೆ -” ಇನ್ನೂ ಎರಡು ದಿನ ಕಳೆದು ಹೋದರೆ ಆಗದೇ?” . ನಾನೆಂದೆ-” ಬದುಕಿ ಉಳಿದರೆ ಹೋಗಬಹುದು”. ನನ್ನ ಮಾತಿನಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೋಗಿಯ ಕಡೆಯವರು, ಬೆಳಗ್ಗೆ ನಾನು ಸೂಚಿಸಿದ್ದರೂ, ಕೊನೆಗೆ ಸಂಜೆಯ ಹೊತ್ತಿಗೆ ಹೆಚ್ಚಿನ ಚಿಕಿತ್ಸೆಗೆ ದೊಡ್ಡಾಸ್ಪತ್ರೆ ತಲುಪಿದರು. ಆದರೆ ಎಲ್ಲಾ ಚಿಕಿತ್ಸಾ ಪ್ರಯತ್ನಗಳ ನಂತರವೂ ರೋಗಿ ಮರುದಿನ ಮರಣವನ್ನಪ್ಪಿದ. ಇಲಿಜ್ವರದಿಂದ ಆತನ ಸಾವು ಸ್ಪಷ್ಟವಾಗಿತ್ತು. ಆದರೆ, ಇದಕ್ಕಿಂತಲೂ ಆಘಾತಕಾರಿ ಸಂಗತಿಯೆಂದರೆ ಮಾರನೆಯ ದಿನ ಪತ್ರಿಕೆಗಳಲ್ಲಿ ಆತನ ಸಾವು ಕೊರೋನಾದಿಂದ ಆದ ಸಾವು ಎಂದು ವರದಿಯಾಗಿತ್ತು!!!
ಹಾಗಾದರೆ, ಈ ಕಾಯಿಲೆ ಅಷ್ಟು ನಿಗೂಢವೇ?
ರೋಗಿ ಗಳಿಂದಲೂ, ವೈದ್ಯರಿಂದಲೂ ಗುರುತಿಸಲ್ಪಡದೆ, ನುಣುಚಿಕೊಳ್ಳುವ ಇಲಿಜ್ವರದ ಕಥೆಯೇನು? ನೋಡೋಣ. ಇದು ರಕ್ತದ ಸೂಕ್ಷ್ಮಾಣು ಸೋಂಕು. ಸ್ಪೈರೋಕಿಟ್ ವರ್ಗದ ಲೆಪ್ತೋಸ್ಪಿರ ಎಂಬ ಬ್ಯಾಕ್ಟೀರಿಯಾ ಸೂಕ್ಷ್ಮಾಣುವಿನಿಂದ ಉಂಟಾಗುವ ಕಾಯಿಲೆ. ಇದರಲ್ಲಿ ಆರಂಭದಲ್ಲಿ ಲಕ್ಷಣಗಳು ಇಲ್ಲದೆ ಇರಬಹುದು ಅಥವಾ ತಲೆನೋವು ಮಾಂಸಖಂಡಗಳ ಸೆಳೆತ ಹಾಗೂ ಜ್ವರ ಇತ್ಯಾದಿ ಮೃದು ಲಕ್ಷಣಗಳಿರಬಹುದು. ಸೂಕ್ಷ್ಮಾಣು ದೇಹದೊಳಕ್ಕೆ ಪ್ರವೇಶಿಸಿದ ನಂತರ ಒಂದರಿಂದ ಎರಡು ವಾರಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಕುಪ್ರಾಣಿಗಳಿಂದ ಹಿಡಿದು ಕಾಡು ಪ್ರಾಣಿಗಳ ವರೆಗೆ- ಇದನ್ನು ಹರಡಬಲ್ಲದು. ಇದರಲ್ಲಿ ಸಾವಿನ ಸಂಭವ 5 ರಿಂದ 10 %. ಶ್ವಾಸಕೋಶಕ್ಕೆ ವ್ಯಾಪಿಸಿದಾಗ ಸಾವಿನ ಸಂಭವನೀಯತೆ 50 ರಿಂದ 70%. ಪ್ರತಿವರ್ಷ ಒಂದು ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗುತ್ತಾರೆ. ಅವರಲ್ಲಿ ಸರಾಸರಿ ವರ್ಷಕ್ಕೆ 58,900 ಜನರು ಸಾಯ್ತಾರೆ.
ಪ್ರಾಣಿಗಳ ಮೂತ್ರ, ಸೋಂಕಿತ ವಾದ ನೀರು ಅಥವಾ ಮಣ್ಣಿನ ಮೂಲಕ ಈ ಸೂಕ್ಷ್ಮಾಣುಗಳು ಹರಡುತ್ತವೆ. ಮನುಷ್ಯರಲ್ಲಿನ ಕಣ್ಣು ,ಮೂಗು, ಬಾಯಿಯಲ್ಲಿನ ಶ್ಲೇಷ್ಮಲ ಪೊರೆಯ ಮೂಲಕ ಅಥವಾ ಚರ್ಮದಲ್ಲಿನ ಗಾಯ ಮತ್ತು ಬಿರುಕುಗಳ ಮೂಲಕ ಮಾನವ ದೇಹದೊಳಗೆ ಪ್ರವೇಶ ಪಡೆಯುತ್ತವೆ. ರೈತರು ಹಾಗೂ ಸ್ಲಮ್ ಏರಿಯಾಗಳಲ್ಲಿ ವಾಸಿಸುವ ಜನರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಧಾರಾಕಾರ ಮಳೆ ಬಂದ ನಂತರ ಈ ಸೂಕ್ಷ್ಮಾಣು ಹರಡುವಿಕೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಾಣುಗಳು ರಕ್ತದ ಮೂಲಕ ಮಾನವ ದೇಹದ ಎಲ್ಲಾ ಅಂಗಗಳಿಗೂ ತಲುಪುತ್ತವೆ.
ಲಕ್ಷಣಗಳು:
—————–
ಎರಡು ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಂದನೆಯದು ಆರಂಭದ ಹಂತ. ಇದು 5 ರಿಂದ 7 ದಿನಗಳವರೆಗೆ ಇರುತ್ತದೆ. ಇದನ್ನು ಎಕ್ಯೂಟ್ ಫೇಸ್ ಎಂದು ಕರೆಯಲಾಗುತ್ತದೆ. ನಂತರ ಲಕ್ಷಣಗಳು ಕಡಿಮೆಯಾಗುತ್ತವೆ. ರೋಗಿಗೆ ತಾನು ಜ್ವರದಿಂದ ಮುಕ್ತನಾದೆ ಎಂಬ ಭಾವನೆ ಬರುತ್ತದೆ. ಆದರೆ ಕೆಲವೇ ದಿನಗಳ ನಂತರ ಮತ್ತೂ ತೀವ್ರವಾದ ಲಕ್ಷಣಗಳು ಗೋಚರಿಸುತ್ತವೆ. ಆಗ ಅದನ್ನು ಎರಡನೆಯ ಹಂತವೆಂದು ಕರೆಯಲಾಗುತ್ತದೆ. ಎರಡನೆಯ ಹಂತವು ನಾಲ್ಕರಿಂದ 30 ದಿನಗಳ ಅಂತರದಲ್ಲಿ ಕಾಣಿಸಿಕೊಳ್ಳಬಹುದು. ಆಗ ಮಿದುಳಿನಿಂದ ತೊಡಗಿ ಕಿಡ್ನಿಯ ವರೆಗೆ ಏನು ಬೇಕಾದರೂ ಹಾನಿ ಸಂಭವಿಸಬಹುದು.
ಒಂದನೆಯ ಹಂತದ ಆ ಸಂದರ್ಭದಲ್ಲಿ ,
1. ಚಳಿ ನಡುಕದಿಂದ ಕೂಡಿದ ಜ್ವರ
2. ತೀವ್ರವಾದ ತಲೆನೋವು, ಕೆನ್ನೆ ಹಾಗೂ ಹಣೆಯ ಮಧ್ಯಭಾಗದಲ್ಲಿ ಹೆಚ್ಚಾಗಿರುತ್ತದೆ.
3. ಮಾಂಸಖಂಡಗಳ ಸೆಳೆತ, ಮೀನ ಖಂಡಗಳು ಹಾಗೂ ಸೊಂಟದ ಭಾಗದಲ್ಲಿ ಹೆಚ್ಚಾಗಿರುತ್ತದೆ.
4. ಹೊಟ್ಟೆ ನೋವು, ಪಿತ್ತಕೋಶದ ಉರಿಯೂತದಿಂದ ಅಥವಾ ಮೇದೋಜೀರಕ ಗ್ರಂಥಿಯ ಉರಿಯೂತದಿಂದ ಕಾಣಿಸಿಕೊಳ್ಳುತ್ತದೆ.
5. ಕಣ್ಣಿನ ಹಿಂಭಾಗದಲ್ಲಿ ನೋವು.
6. ಬೆಳಕನ್ನು ನೋಡಲು ಕಷ್ಟವಾಗುವುದು
7. ಸ್ರಾವ ಇಲ್ಲದ ಕೆಂಗಣ್ಣು
8. ಕಣ್ಣಿನ ಸೂಕ್ಷ್ಮ ರಕ್ತನಾಳಗಳಿಂದ ರಕ್ತಸ್ರಾವ
9. ಹಳದಿ ರೋಗ( ಜಾಂಡಿಸ್)
10. ಒಣಕೆಮ್ಮು(20-57% ಜನರಲ್ಲಿ)
11. ವಾಕರಿಕೆ, ವಾಂತಿ, ಹೊಟ್ಟೆ ನೋವು, ಅತಿಸಾರ
12. ಲಿಂಫ್ ಗ್ರಂಥಿಗಳು, ಲಿವರ್ ಹಾಗೂ ಪ್ಲೀಹ ಊದಿಕೊಳ್ಳುವುದು.
ಚರ್ಮದಲ್ಲಿ ಗಂಧೆಗಳು ಇದ್ದಾಗ ಡೆಂಗ್ಯೂ ಅಥವಾ ಚಿಕನ್ ಗುನ್ಯಾ ರೋಗವನ್ನು ಸಂದೇಹಿಸಬಹುದು. ಬಹುತೇಕ ಇಲಿಜ್ವರ ದಲ್ಲಿ ಚರ್ಮದಲ್ಲಿ ಗಂಧೆಗಳು ಬೀಳುವುದಿಲ್ಲ. 90% ಜನರಲ್ಲಿ ಇದು ಮೃದು ರೂಪದಲ್ಲಿ ಬಂದು ಹೋಗುತ್ತದೆ. 10% ಜನರಲ್ಲಿ ತೀವ್ರ ಸ್ವರೂಪವನ್ನು ಪಡೆಯುತ್ತದೆ.
ಎರಡನೆಯ ಹಂತದ ಲಕ್ಷಣಗಳು-
1. ಮೆನಿಂಜೈಟಿಸ್, ಅಂದರೆ ಮೆದುಳಿನ ಹೊರ ಪೊರೆಯ ಉರಿಯೂತ. ಆಗ ತಲೆ ನೋವು ,ಕುತ್ತಿಗೆ ಬಿಗಿತ ಹಾಗೂ ವಾಂತಿ ಕಾಣಿಸಿಕೊಳ್ಳಬಹುದು.
2. ಮೂತ್ರ ಪಿಂಡಗಳ ಹಾನಿ, ಇದರಿಂದ ಮೂತ್ರದ ಪ್ರಮಾಣದಲ್ಲಿ ಕಡಿಮೆಯಾಗುವುದು
3. ರಕ್ತಸ್ರಾವ– ಮೂಗು, ಜಠರ, ಶಾಸಕೋಶ ಗಳಲ್ಲಿ ರಕ್ತಸ್ರಾವ ಉಂಟಾಗಬಹುದು.
4. ಶ್ವಾಸಕೋಶ ಹಾನಿಗೊಳ್ಳುವುದರಿಂದ ಉಸಿರಾಟದ ವೈಫಲ್ಯ ಉಂಟಾಗಬಹುದು. ಆಗ ಮರಣದ ಸಾಧ್ಯತೆ ಹೆಚ್ಚು.
5. ಪಕ್ಷವಾತ, ಮಿದುಳುಬಳ್ಳಿಯ ಉರಿಯೂತ, ಹಾಗೂ ನರಗಳ ಹಾನಿಯಿಂದ ಮಾಂಸಖಂಡಗಳ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ.
6. ಲಿವರ್ ಹಾನಿಗೊಳ್ಳುವುದರಿಂದ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ.
7. ಹೃದಯಕ್ಕೆ ಉಂಟಾಗುವ ಹಾನಿಯಿಂದ ಹೃದಯದ ಗತಿಯಲ್ಲಿ ವ್ಯತ್ಯಾಸ.
ಪತ್ತೆಹಚ್ಚುವಿಕೆ:
——————–
ತಪಾಸಣಾ ವಿಧಾನಗಳ ಮೂಲಕ ಬಹುಬೇಗನೆ ಪತ್ತೆಹಚ್ಚುವುದು ಸಾಧ್ಯ.
ರಕ್ತಪರೀಕ್ಷೆ ಮಾಡಿಸಿದಾಗ ರಕ್ತದಲ್ಲಿನ,
1. ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿರಬಹುದು.
2. ಒಟ್ಟು ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚಾಗಿರಬಹುದು.
3. ಪ್ಲೇಟ್ಲೆಟ್ ಕಣಗಳ ಸಂಖ್ಯೆ ತುಂಬಾ ಕಡಿಮೆ ಇರಬಹುದು .
4. ಈ.ಎಸ್ .ಆರ್ ಹೆಚ್ಚಾಗಿರುತ್ತದೆ.
5. ಸಿ-ರಿಯಾಕ್ಟಿವ್ ಪ್ರೋಟೀನ್ ಅಧಿಕವಾಗಿರುತ್ತದೆ.
6. ರಕ್ತದಲ್ಲಿನ ಯೂರಿಯಾ ಪ್ರಮಾಣ ಹಾಗೂ ಕ್ರಿಯಾಟಿನಿನ್ ಪ್ರಮಾಣ ಅಧಿಕಗೊಂಡಿದ್ದಾಗ ಕಿಡ್ನಿ ವೈಫಲ್ಯವನ್ನು ಅರಿಯಬಹುದು.
7. ರಕ್ತದಲ್ಲಿನ ಬಿಲಿರುಬಿನ್ ಅಂಶವು ಅಧಿಕಗೊಂಡ ದ್ದನ್ನು ಕಂಡುಕೊಂಡು ಲಿವರ್ ಹಾನಿಗೊಂಡದ್ದನ್ನು ತಿಳಿಯಬಹುದು.
8. ಲೆಪ್ತೋಸ್ಪಿರ ರಾಪಿಡ್ ಅಂಡಿಜನ್ ಟೆಸ್ಟ್ ಮಾಡಿದಾಗ ಪೊಸಿಟಿವ್ ಬರಬಹುದು.
9. ಎಲಿಸಾ ಟೆಸ್ಟ್ ಮಾಡುವುದರ ಮೂಲಕ ರಕ್ತದಲ್ಲಿ ಈ ಬ್ಯಾಕ್ಟೀರಿಯಾಗಳ ಡಿ .ಎನ್ .ಎ ಅಂಶವನ್ನು ಗುರುತಿಸಿ, ಇಲಿಜ್ವರ ರೋಗವನ್ನು ದೃಢೀಕರಿಸಿ ಬಹುದು.
ಮೂತ್ರದ ಪರೀಕ್ಷೆ ಮಾಡಿಸಿದಾಗ, ಮೂತ್ರದಲ್ಲಿ ಪ್ರೊಟೀನ್ ಅಂಶ, ಬಿಳಿ ರಕ್ತ ಕಣಗಳ ಅಂಶ, ಕೆಂಪು ರಕ್ತಕಣಗಳ ಅಂಶ ಅಧಿಕವಾಗಿ ಕಂಡು ಬರುವುದು. ಎಕ್ಸರೇ ಮಾಡಿಸಿದಾಗ, ಶ್ವಾಸಕೋಶದಲ್ಲಿ ಕಲೆಗಳು ಕಂಡುಬರುವುದು. ಸಮ್ಮಿಶ್ರ ಲಕ್ಷಣಗಳು ಕಂಡುಬರುವುದರಿಂದ ವೈದ್ಯರು ಕೂಡ ಇದನ್ನು ಶ್ವಾಸಕೋಶದ ಸೋಂಕು ಎಂದು ತಪ್ಪಾಗಿ ನಿರ್ಧರಿಸಬಹುದು. ಈಗಿನ ಸಂದರ್ಭದಲ್ಲಂತೂ ಕೊರೋನಾ ರೋಗ ಎಂದು ಸಂದೇಹಿಸಿ, ಇಲಿಜ್ವರವನ್ನು ಮರೆತು, ಕೊರೋನಾ ಪರೀಕ್ಷೆಗೆ ಸೂಚಿಸಬಹುದು!? ಇಂತಹ ಎಡವಟ್ಟುಗಳು ಅನೇಕ ಘಟಿಸಿವೆ!
ಚಿಕಿತ್ಸೆ:
———-
ಆರಂಭದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ಯಶಸ್ವಿಯಾಗಿ ರೋಗಿ ಗುಣಮುಖನಾಗುತ್ತಾನೆ. ಡಾಕ್ಸಿ ಸೈಕ್ಲಿನ್ ಮಾತ್ರೆ, ಪೆನ್ಸಿಲಿನ್ ಇಂಜೆಕ್ಷನ್, ಸೆಫ್ ಟ್ರಯಾಕ್ಸೋನ್ ಇನ್ಸ್ಪೆಕ್ಷನ್ ಗಳ ಮೂಲಕ ಚಿಕಿತ್ಸೆ ನೀಡಬಹುದು. ಎರಡನೆಯ ಹಂತವನ್ನು ತಲುಪಿ, ಲಿವರ್ ನ ಹಾನಿ ಹಾಗೂ ಕಿಡ್ನಿ ವೈಫಲ್ಯಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆಗಳ ಅಗತ್ಯವಿದೆ. ಡಯಾಲಿಸಿಸ್ ಬೇಕಾಗಬಹುದು. ಶ್ವಾಸಕೋಶದ ವೈಫಲ್ಯ ಉಂಟಾದಲ್ಲಿ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದ ಅಗತ್ಯ ಉಂಟಾಗುತ್ತದೆ. ಇಲಿಜ್ವರದಿಂದ ಗುಣಮುಖವಾದ ನಂತರವೂ ಕೂಡ ಸುಸ್ತು, ನಿಶ್ಯಕ್ತಿ, ಮಾಂಸಖಂಡಗಳ ಸೆಳೆತ, ತಲೆನೋವು ಇತ್ಯಾದಿ ಲಕ್ಷಣಗಳು ದಿನಗಳ ತನಕ ಮುಂದುವರಿಯಬಹುದು. 21% ಜನರಲ್ಲಿ ಎರಡು ವರ್ಷಗಳ ತನಕವೂ ಈ ಲಕ್ಷಣಗಳು ಮುಂದುವರಿದ ಉದಾಹರಣೆಗಳು ಇವೆ.
ತಡೆಗಟ್ಟುವಿಕೆ:
——————–
1. ಸೂಕ್ಷ್ಮಾಣುಗಳ ಸಂಪರ್ಕಕ್ಕೆ ಬಾರದಂತೆ ಹೊರಗಿನ ಚಟುವಟಿಕೆಯಲ್ಲಿ ತೊಡಗಿದ್ದಾಗ ರಕ್ಷಾಕವಚ ಗಳನ್ನು ಧರಿಸಬೇಕು.
2.ಪ್ರಾಣಿಗಳ ಸಂಪರ್ಕಕ್ಕೆ ಬಂದ ನಂತರ ಕೈಕಾಲುಗಳನ್ನು ಸಾಬೂನು ನೀರಿನಿಂದ ಚೆನ್ನಾಗಿ ತೊಳೆಯಬೇಕು.
3. ಸೂಕ್ಷ್ಮಾಣು ಸೋಂಕಿನ ಸಾಧ್ಯತೆ ಇರುವವರಲ್ಲಿ, ಅಂತಹ ಪರಿಸರಕ್ಕೆ ತೆಗೆದುಕೊಳ್ಳುವವರಲ್ಲಿ , ವಾರಕ್ಕೆ ಒಂದರಂತೆ ಡಾಕ್ಸಿ ಸೈಕ್ಲಿನ್ ಮಾತ್ರೆಯನ್ನು ತೆಗೆದುಕೊಳ್ಳುವುದಕ್ಕೆ ಸೂಚಿಸಬೇಕು.
4. ಪ್ರವಾಹ ಬಂದಾಗ, ನೀರಿನ ಮೂಲಕ ಈ ಸೂಕ್ಷ್ಮಾಣುಗಳ ಹರಡುವಿಕೆ ಹೆಚ್ಚುವುದರಿಂದ, ಪ್ರವಾಹ ನಿಯಂತ್ರಣ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ಪೀಡಿತ ಪ್ರದೇಶದಲ್ಲಿ ಇರುವ ಜನರಿಗೆ ಡಾಕ್ಸಿ ಸೈಕ್ಲಿನ್ ಮಾತ್ರೆಗಳನ್ನು ಸರಬರಾಜು ಮಾಡಬೇಕು.
5. ಇಲಿ ಮುಂತಾದ ದಂಶಕ ಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವದಕ್ಕೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.
6. ನೈರ್ಮಲ್ಯದ ಮಟ್ಟವನ್ನು ಸೂಕ್ತ ಕ್ರಮಗಳ ಮೂಲಕ ಹೆಚ್ಚಿಸಿಕೊಳ್ಳಬೇಕು.
7. ಕೃಷಿಕರು, ಗಣಿ ಕಾರ್ಮಿಕರು, ತ್ಯಾಜ್ಯ ನಿರ್ವಾಹಕರು, ಕಸಾಯಿಖಾನೆಯ ಸಿಬ್ಬಂದಿಗಳು, ಪಶುವೈದ್ಯಕೀಯ ಸಿಬ್ಬಂದಿಗಳು, ಮೀನಿನ ಉದ್ಯಮ ಮಾಡುವವರು, ಡೈರಿ ಕಾರ್ಮಿಕರು, ಮಿಲಿಟರಿಯವರು ಚಟುವಟಿಕೆಗಳಲ್ಲಿ ತೊಡಗಿದ್ದಾಗ ಈ ಸೂಕ್ಷ್ಮಾಣುವಿನ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಅತ್ಯಂತ ಹೆಚ್ಚಾಗಿದೆ. ಆದುದರಿಂದ ಇವರೆಲ್ಲಾ ಸೂಕ್ತ ತಡೆಗಟ್ಟುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
8. ಮನೆಯಿಂದ ಹೊರಗೆ ಹೋಗುವಾಗ ಚಪ್ಪಲಿಗಳನ್ನು ಅಥವಾ ಬೂಟ್ ಗಳನ್ನು ಮರೆಯದೆ ಧರಿಸಬೇಕು.
Watch video on Rat fever: ಇಲಿ ಜ್ವರ – ಆತಂಕ ತಂದಿರುವ ಹೊಸ ರೋಗ – Rat fever
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಪ್ರಸಾದ್ ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ, ಪುತ್ತೂರು ದ.ಕ..
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ
ಮೊಬೈಲ್ :9740545979
rpbangaradka@gmail.com.