ಹೃದಯ ಮಾಂಸಖಂಡಗಳ ಕುಗ್ಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ರಕ್ತ ನಾಳಗಳ ಪ್ರತಿರೋಧದಿಂದಲೂ ಹೈಪರ್ಟೆನ್ಷನ್ ಉಂಟಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ವೇಳೆ ಹೃದಯದ ಸಂಕೋಚನವು ಆರ್ಟರಿಗಳ ವಿಸ್ತರಣೆಗೆ ಒತ್ತಡ ಹಾಕುತ್ತದೆ. ಹೃದಯವು ಸಂಕುಚಿತಗೊಂಡಾಗ ಒತ್ತಡ ಹೆಚ್ಚಾಗುತ್ತದೆ ಹಾಗೂ ಅದು ವಿಶ್ರಾಂತಿಯಲ್ಲಿದ್ದಾಗ ಒತ್ತಡವು ಕಡಿಮೆಯಾಗುತ್ತದೆ.
ಅಧಿಕ ರಕ್ತದೊತ್ತಡ ಅಥವಾ ಹೈಪರ್ಟೆನ್ಷನ್ ಒಂದು ವಿಭಿನ್ನ ರೋಗ. ಅಧಿಕ ಬಿಪಿ ಹೊಂದಿರುವ ಬಹುತೇಕ ಮಂದಿಗೆ ಹಲವಾರು ವರ್ಷಗಳ ತನಕ ಯಾವುದೇ ರೋಗ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಇದು ಕಾಲಕ್ರಮೇಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಂಥ ಬಹುಮುಖ್ಯ ಅಂಗಗಳಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಆದಷ್ಟೂ ಮುಂಚಿತವಾಗಿ ಹೈಪರ್ಟೆನ್ಷನ್ನನ್ನು ಗುರುತಿಸಿ ಚಿಕಿತ್ಸೆ ನೀಡುವುದು ತುಂಬಾ ಅಗತ್ಯವಾಗಿರುತ್ತದೆ. ಆ ಮೂಲಕ ಇಂಥ ಅಮೂಲ್ಯ ಅಂಗಗಳು ಹಾನಿಗೀಡಾಗುವುದನ್ನು ತಪ್ಪಿಸಬಹುದು. ಈಗಾಗಲೇ ಹೇಳಿರುವಂತೆ ರೋಗಿಗಳಿಗೆ ಅಧಿಕ ರಕ್ತದೊತ್ತಡದ ಯಾವುದೇ ನಿರ್ದಿಷ್ಟ ಚಿಹ್ನೆ ಮತ್ತು ಲಕ್ಷಣಗಳು ಗೋಚರಿಸದೇ ಇರುವುದರಿಂದ, ಯಾವುದೇ ಸಣ್ಣ ಅನಾರೋಗ್ಯಕ್ಕಾಗಿ ವೈದ್ಯರ ಬಳಿ ಹೋದಾಗ ಹೈಪರ್ಟೆನ್ಷನ್ ಪತ್ತೆಯಾಗುತ್ತದೆ.
ರಕ್ತದೊತ್ತಡ ಎಂದರೇನು ?
ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ ಪ್ರವಹಿಸುವಿಕೆ ಎಂದರ್ಥ. ಅಪಧಮನಿಗಳು ರಕ್ತನಾಳಗಳಾಗಿದ್ದು ಹೃದಯದಿಂದ ದೇಹಕ್ಕೆ ರಕ್ತವನ್ನು ಪೂರೈಸುತ್ತವೆ. ಇಡೀ ದಿನ ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬರುತ್ತದೆ. ಆದರೆ ಸಾಮಾನ್ಯ ರಕ್ತದೊತ್ತಡವು 120ಎಂಎಂಎಚ್ಜಿ ಸಿಸ್ಟೋಲಿಕ್ (ಸಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಸಂಕುಚಿತವಾದಾಗ ರಕ್ತನಾಳಗಳ ಮೇಲೆ ಬೀಳುವ ಒತ್ತಡ) ಹಾಗೂ 80ಎಂಎಂಎಚ್ಜಿ ಡಿಸ್ಟೋಲಿಕ್ ರಕ್ತದೊತ್ತಡ (ಡಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಬಡಿತದ ನಡುವೆ ಹೃದಯ ವಿಶ್ರಮಿಸಿದಾಗ ಉಂಟಾಗುವ ಒತ್ತಡ ಎಂದರ್ಥ)
ಅಧಿಕ ರಕ್ತದೊತ್ತಡ ಎಂದರೇನು ?
ರಕ್ತದ ಒತ್ತಡದಲ್ಲಿ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಅಥವಾ ಹೈಪರ್ಟೆನ್ಷನ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವು ಕಾರ್ಡಿಯೋವ್ಯಾಸ್ಕುಲರ್ ರೋಗಗಳು, ಮೂತ್ರಪಿಂಡ ರೋಗಗಳು ಮತ್ತು ಪಾಶ್ರ್ವವಾಯು ಗಂಡಾಂತರವನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡದ ಚಿಹ್ನೆಗಳು ಮತ್ತು ಲಕ್ಷಣಗಳೇನು ?
ಅಧಿಕ ರಕ್ತದೊತ್ತಡ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಸಾಂದರ್ಭಿಕವಾಗಿ ತಲೆನೋವು ಉಂಟು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಅಥವಾ ಮೌನ ಹಂತಕ ಎಂದು ಕರೆಯಲಾಗುತ್ತದೆ. ಯಾವುದೇ ಚಿಹ್ನೆ ಅಥವಾ ಲಕ್ಷಣಗಳು ಇಲ್ಲದೇ ಹೃದಯ, ರಕ್ತನಾಳಗಳು, ಮೂತ್ರಪಿಂಡ ಹಾಗೂ ದೇಹದ ಇತರ ಭಾಗಗಳಿಗೆ ಇದು ಹಾನಿಯನ್ನು ಮುಂದುವರೆಸುವುದರಿಂದ ಹೀಗೆ ಬಣ್ಣಿಲಾಗಿದೆ. ಬಹುತೇಕ ರಕ್ತದೊತ್ತಡದ ಪ್ರಕರಣಗಳಲ್ಲಿ ರಕ್ತದೊತ್ತಡ ಇರುವುದೇ ತಿಳಿಯದ ಕಾರಣ ಅಗಾಗ ರಕ್ತದೊತ್ತಡವನ್ನು ತಪಾಸಣೆಗೆ ಒಳಪಡಿಸುವುದು ತುಂಬಾ ಮುಖ್ಯವಾಗಿರುತ್ತದೆ.
ಅಧಿಕ ರಕ್ತದೊತ್ತಡ ಹೊಂದುವ ಗಂಡಾಂತರ ನಿಮಗಿದೆಯೇ?
- ಕೆಲವು ಆರೋಗ್ಯ ಸ್ಥಿತಿಗಳು, ಹಾಗೆಯೇ ಜೀವನ ಶೈಲಿ ಮತ್ತು ವಂಶವಾಹಿ ಅಂಶಗಳು ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವ ಗಂಡಾಂತರಕ್ಕೆ ಕೊಡುಗೆ ನೀಡುತ್ತವೆ. ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಗಂಡಾಂತರದ ಸಂಗತಿಗಳೆಂದರೆ :
- ವೃದ್ದಾಪ್ಯ : ವಯಸ್ಸಾದಂತೆ ಅಧಿಕ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುತ್ತದೆ. 45 ವರ್ಷ ಮೇಲ್ಪಟ್ಟ ಪುರುಷರು ಹಾಗೂ 55 ವರ್ಷ ಮೇಲ್ಪಟ್ಟ ಮಹಿಳೆಯರು ಅಧಿಕ ರಕ್ತದೊತ್ತಡಕ್ಕೆ ಒಳಗಾಗುವ ಸಂಭವ ಹೆಚ್ಚಾಗಿರುತ್ತದೆ.
- ಅತಿಯಾದ ತೂಕ ಮತ್ತು ಬೊಜ್ಜು : ಸಾಮಾನ್ಯಕ್ಕಿಂತ ಅಧಿಕ ದೇಹ ತೂಕವಿದ್ದರೆ ಅಧಿಕ ರಕ್ತದೊತ್ತಡ ಗಂಡಾಂತರ ಹೆಚ್ಚಾಗಿರುತ್ತದೆ.
- ಲಿಂಗ : ವಯಸ್ಕ ಮಹಿಳೆಯರಲ್ಲಿ ವಯಸ್ಕ ಪುರುಷರಿಗಿಂತ ಅಧಿಕ ರಕ್ತದೊತ್ತಡದ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಯುವತಿಯರಲ್ಲಿ ಯುವಕರಿಗಿಂತ ಅಧಿಕ ರಕ್ತದೊತ್ತಡದ ಸಾಧ್ಯತೆ ಹೆಚ್ಚಾಗಿರುತ್ತದೆ. 50 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬರುತ್ತದೆ.
- ಅನಾರೋಗ್ಯಕರ ಜೀವನಶೈಲಿ : ಅತಿಯಾದ ಸೋಡಿಯಂ (ಉಪ್ಪು) ಆಹಾರ ಪದಾರ್ಥಗಳು, ಆಲ್ಕೋಹಾಲ್ ಸೇವನೆ, ಧೂಮಪಾನ, ಸಾಕಷ್ಟು ದೈಹಿಕ ಚಟುವಟಿಕೆಗಳು ಇಲ್ಲದಿರುವಿಕೆ, ಆಹಾರದಲ್ಲಿ ಸಾಕಷ್ಟು ಪೋಟ್ಯಾಷಿಯಂ ಬಳಸದಿರುವಿಕೆ
- ಅಧಿಕ ರಕ್ತದೊತ್ತಡದ ಕೌಟುಂಬಿಕ ಹಿನ್ನಲೆ
- ದೀರ್ಘಕಾಲದ ಒತ್ತಡ
ಯಾವುದೇ ಚಿಕಿತ್ಸೆಯನ್ನು ಪಡೆಯಲು ವಿಫಲವಾದರೆ ಏನು ತೊಡಕುಗಳು ಉಂಟಾಗುತ್ತವೆ ?
- ಹೃದ್ರೋಗ : ಹೃದಯ ವೈಫಲ್ಯ. ದೇಹಕ್ಕೆ ಹೃದಯದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ತ ಪಂಪ್ ಮಾಡುವಲ್ಲಿ ಸಾಧ್ಯವಾಗದಿರುವಿಕೆ, ಹೃದಯಾಘಾತ.
- ಪಾಶ್ರ್ವವಾಯು : ಮೆದುಳಿನ ಪ್ರದೇಶಕ್ಕೆ ರಕ್ತ ಪೂರೈಕೆ ಕುಂಠಿತವಾದಾಗ ಪಾಶ್ರ್ವವಾಯು ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಮಂದಿ ಪಾಶ್ರ್ವವಾಯುವಿಗೆ ಒಳಗಾಗುವ ಸಾಧ್ಯತೆ ನಾಲ್ಕರಿಂದ ಆರು ಪಟ್ಟು ಹೆಚ್ಚಾಗಿರುತ್ತದೆ.
- ಮೂತ್ರಪಿಂಡ ರೋಗ : ಮೂತ್ರಪಿಂಡ ವೈಫಲ್ಯ. ಮೂತ್ರಪಿಂಡದಲ್ಲಿನ ರಕ್ತನಾಳಗಳು ಕಿರಿದಾಗುವುದರಿಂದ ಕಿಡ್ನಿ ವಿಫಲತೆಗೆ ಕಾರಣವಾಗುತ್ತದೆ.
- ನೇತ್ರ ಸಮಸ್ಯೆ : ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡದಿದ್ದರೆ ನೇತ್ರ ದೃಷ್ಟಿಗೆ ಧಕ್ಕೆಯಾಗಿ ರೆಟಿನಾದಲ್ಲಿನ ರಕ್ತನಾಳಗಳ ಹಾನಿಗೆ ಕಾರಣವಾಗುತ್ತದೆ. ಈ ದೋಷವನ್ನು ಹೈಪರ್ಟೆನ್ಸಿವ್ ರೆಟಿನೋಪಥಿ ಎಂದು ಕರೆಯುತ್ತಾರೆ.
- ಅಪಧಮನಿಯ ಊದುವಿಕೆ : ಅನ್ಯೂರಿಸಮ್ ಅಥವಾ ಅಪಧಮಿನಿಯ ಊದುವಿಕೆ ಎಂದರೆ ರಕ್ತನಾಳದ ಗೋಡೆಯಲ್ಲಿನ ಅಸಾಧಾರಣ ಊತ ಮತ್ತು ಹೃದಯದಿಂದ ದೇಹಕ್ಕೆ ರಕ್ತವನ್ನು ಕೊಂಡೊಯ್ಯವ ಮುಖ್ಯ/ಅಪಧಮನಿಯು ಊದಿಕೊಳ್ಳುವಿಕೆಯ ಸಾಮಾನ್ಯ ಜಾಗವಾಗಿರುತ್ತದೆ.
ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವುದು ಹೇಗೆ ?
ರಕ್ತದ ಒತ್ತಡವನ್ನು ಸಾಮಾನ್ಯ ಮಟ್ಟದಲ್ಲಿ ಇರಿಸಲು ಯಾವುದೇ ವಯೋಮಾನದ ಮಂದಿ ಪ್ರತಿ ದಿನ ಕ್ರಮ ಕೈಗೊಳ್ಳಬಹುದು. ಆರೋಗ್ಯಕರ ಜೀವನಶೈಲಿ ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಕಾರಿ.
ಜೀವನಶೈಲಿ ಕ್ರಮಗಳು
ಅರೋಗ್ಯಕರ ಆಹಾರ ಸೇವನೆ : ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಇವುಗಳಲ್ಲಿ ಪೋಟ್ಯಾಷಿಯಂ ಮತ್ತು ಫೈಬರ್ ಸಮೃದ್ದವಾಗಿರುತ್ತವೆ. ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟೆರಾಲ್ ಕಡಿಮೆ ಇರುವ ಅಹಾರಗಳನ್ನು ತಿನ್ನಿ. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಸೋಡಿಯಂನನ್ನು ನಿಯಂತ್ರಿಸಿ. ಅನೇಕ ಸಂಸ್ಕರಿತ ಆಹಾರಗಳು ಮತ್ತು ರೆಸ್ಟೋರೆಂಟ್ ಉಪಹಾರ-ಊಟಗಳಲ್ಲಿ ಸೋಡಿಯಂ ಸಾರಾಂಶ ಅಧಿಕವಾಗಿರುತ್ತದೆ.
ಆರೋಗ್ಯಕರ ತೂಕ ನಿರ್ವಹಣೆ : ಅತಿಯಾದ ತೂಕ ಹೊಂದುವುದರಿಂದ ಅಧಿಕ ರಕ್ತದೊತ್ತಡದ ಗಂಡಾಂತರಗಳು ಹೆಚ್ಚಾಗುತ್ತವೆ. ಆದ್ದರಿಂದ ತೂಕವನ್ನು ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು.
ದೈಹಿಕ ಚಟುವಟಿಕೆ : ದೈಹಿಕವಾಗಿ ಚಟುವಟಿಕೆಯಿಂದ ಇದ್ದರೆ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದು.
ಧೂಮಪಾನ ಮಾಡಬೇಡಿ.
ಆಲ್ಕೋಹಾಲ್ ಸೇವನೆಯನ್ನು ಇತಿಮಿತಿಗೊಳಿಸಿ.
ಚಿಕಿತ್ಸೆ ಆಯ್ಕೆಗಳು ಯಾವುವು ?
- ಚಿಕಿತ್ಸೆ ಗುರಿ : ವಯಸ್ಕರಲ್ಲಿ ಚಿಕಿತ್ಸೆಯ ಗುರಿಯು ರಕ್ತದೊತ್ತಡವನ್ನು 140/90 ಎಂಎಂಎಚ್ಜಿಗಿಂತ ಕಡಿಮೆ ಮಟ್ಟದಲ್ಲಿ ಇರಿಸುವುದಾಗಿದೆ. ಡಯಾಬಿಟಿಸ್ ಮತ್ತು ದೀರ್ಘಕಾಲದ ಮೂತ್ರಪಿಂಡ ರೋಗಗಳನ್ನು ಹೊಂದಿರುವ ವಯಸ್ಕರರು ರಕ್ತದೊತ್ತಡವನ್ನು 130/30 ಎಂಎಂಎಚ್ಜಿಗಿಂತ ಕಡಿಮೆ ಮಟ್ಟದಲ್ಲಿ ನಿಯಂತ್ರಿಸುವುದು ಉತ್ತಮ.
- ಜೀವನಶೈಲಿ ಬದಲಾವಣೆ : ಆರೋಗ್ಯಕರ ಜೀವನಶೈಲಿ ಅಭ್ಯಾಸಗಳು ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಕಾರಿ. ಈ ಅರೋಗ್ಯಕರ ಅಭ್ಯಾಸಗಳೆಂದರೆ :
- ಆರೋಗ್ಯಕರ ಪಥ್ಯಾಹಾರ ಪಾಲನೆ
- ದೈಹಿಕವಾಗಿ ಚಟುವಟಿಕೆಯಿಂದ ಇರುವಿಕೆ
- ಆರೋಗ್ಯಕರ ತೂಕ ನಿರ್ವಹಣೆ
- ಧೂಮಪಾನ ತ್ಯಜಿಸುವಿಕೆ
- ಒತ್ತಡ ನಿರ್ವಹಣೆ ಹಾಗೂ ಒತ್ತಡವನ್ನು ನಿರ್ವಹಣೆಯನ್ನು ಕಲಿಯುವಿಕೆ
- ಔಷಧಿಗಳು : ಇಂದಿನ ರಕ್ತದೊತ್ತಡದ ಔಷಧಿಗಳು ಬಹುತೇಕ ಮಂದಿಯ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸುರಕ್ಷಿತ ರೀತಿಯಲ್ಲಿ ನೆರವಾಗುತ್ತದೆ. ಇಂಥ ಔಷಧಿಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಅಡ್ಡಪರಿಣಾಮಗಳು ಏನೇ ಇದ್ದರೂ ಅದು ಲಘು ಪ್ರಮಾಣದ್ದಾಗಿರುತ್ತದೆ. ಈ ಔಷಧಿಗಳನ್ನು ನಿಮಗೆ ಚಿಕಿತ್ಸೆ ನೀಡುವ ವೈದ್ಯರು ಅಥವಾ ಕುಟುಂಬ ವೈದ್ಯರು ನಿರ್ಧರಿಸುತ್ತಾರೆ. ಹಾಗಾಗಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದರೂ ವೈದ್ಯರ ಗಮನಕ್ಕೆ ತರಬೇಕು. ರೋಗಿಗಳು ತಮಗೆ ತಾವೇ ಈ ಔಷಧಿಗಳ ಸೇವನೆಯನ್ನು ನಿಲ್ಲಿಸಬಾರದು.
- ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಔಷಧಿಗಳು ವಿಭಿನ್ನ ರೀತಿಯಲ್ಲಿ ನೆರವಾಗುತ್ತವೆ. ರಕ್ತದೊತ್ತಡವನ್ನು ಇಳಿಸಲು ಕೆಲವು ಔಷಧಿಗಳು ಕೆಲವು ಔಷಧಿಗಳು ದೇಹದಿಂದ ಹೆಚ್ಚುವರಿ ದ್ರವ ಹಾಗೂ ಉಪ್ಪಿನ ಅಂಶವನ್ನು ತೆಗೆದು ಹಾಕುತ್ತವೆ. ಇತರ ಔಷಧಿಗಳು ಹೃದಯ ಬಡಿತವನ್ನು ಕಡಿಮೆ ಮಾಡಿ ವಿಶ್ರಾಂತಿ ನೀಡುತ್ತದೆ ಹಾಗೂ ಕಿರಿದಾದ ರಕ್ತನಾಳಗಳನ್ನು ದೊಡ್ಡದು ಮಾಡುತ್ತದೆ.
ಹೈಪರ್ಟೆನ್ಷನ್ನನ್ನು ಅರ್ಥ ಮಾಡಿಕೊಳ್ಳಿ
ಹೈಪರ್ಟೆನ್ಷನ್ ಚಿಹ್ನೆ ಮತ್ತು ಲಕ್ಷಣಗಳು
ಕೆಲವು ಮಂದಿಯಲ್ಲಿ ತಲೆನೋವು, ಮಂಪರು, ಸುಸ್ತು ಅಥವಾ ಮೈಕೈ ನೋವು, ತಲೆ ಸುತ್ತುವಿಕೆ, ವಾಂತಿ ಕಂಡುಬರಬಹುದು.
ಇವರಲ್ಲಿ ಕೆಲವರಿಗೆ ಕಾಲಕ್ರಮೇಣ ಎದೆಯಲ್ಲಿ ನೋವು ಕಾಣಿಸಿಕೊಂಡು ಉಸಿರಾಟಕ್ಕೆ ಕಷ್ಟವಾಗಬಹುದು.
ಹೃದಯದಲ್ಲಿ ನೋವು. ದೀರ್ಘಕಾಲದ ಅನಿಯಂತ್ರಿತ ಅಧಿಕ ರಕ್ತದೊತ್ತಡವು ಹೃದಯದ ಮೇಲೆ ಪರಿಣಾಮ ಉಂಟು ಮಾಡಿ ಹೃದಯಾಘಾತಕ್ಕೂ ಎಡೆ ಮಾಡಿಕೊಡಬಹುದು ಹಾಗೂ ನಂತರ ಹೃದಯದ ಸಮರ್ಪಕ ಕಾರ್ಯನಿರ್ವಹಣೆಗೆ ಅಡಚಣೆ ಉಂಟು ಮಾಡಬಹುದು.
ಇದು ಮೆದುಳಿನ ಮೇಲೆ ಪರಿಣಾಮ ಬೀರಿ ಪಾಶ್ರ್ವವಾಯುವಿಗೂ ಕಾರಣವಾಗಬಹುದು.
ಇದೇ ರೀತಿ ಮೂತ್ರಪಿಂಡಗಳು ಸಹ ಹಾನಿಗೀಡಾಗಿ, ಅವುಗಳ ಕಾರ್ಯನಿರ್ವಹಣೆಗೂ ತೊಂದೆರೆಯಾಗಬಹುದು.
ರಕ್ತನಾಳಗಳಿಗೂ ಸಹ ಇದರಿಂದ ದುಷ್ಪರಿಣಾಮ ಉಂಟಾಗುತ್ತದೆ.
ದೃಷ್ಟಿ ಮಂದವಾಗುವುದರೊಂದಿಗೆ ಕಣ್ಣುಗಳ ಮೇಲೂ ಇದು ಪರಿಣಾಮ ಬೀರುತ್ತದೆ.
ಆದ್ದರಿಂದ ಸಾಧ್ಯವಾದಷ್ಟೂ ಮುನ್ನವೇ ಅಧಿಕ ರಕ್ತದೊತ್ತಡವನ್ನು ಪತ್ತೆ ಮಾಡಿ, ಅದನ್ನು ನಿರ್ಲಕ್ಷಿಸದೇ, ಸೂಕ್ತ ಚಿಕಿತ್ಸೆ ಆರಂಭಿಸುವುದು ಅತ್ಯಗತ್ಯ.
ಹೈಪರ್ಟೆನ್ಷನ್ಗೆ ಕಾರಣಗಳು
ಬಹುತೇಕ ಮಂದಿಯಲ್ಲಿ ಅಧಿಕ ರಕ್ತದೊತ್ತಡಕ್ಕೆ ನಿಖರವಾದ ಕಾರಣ ತಿಳಿದು ಬರುವುದಿಲ್ಲ. ಹೆಚ್ಚು ನೆತ್ತರೊತ್ತಡ ಇರುವ ಸಣ್ಣ ಸಂಖ್ಯೆಯ ಜನರಲ್ಲಿ ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ಪತ್ತೆ ಮಾಡಬಹುದು. ಅಧಿಕ ರಕ್ತದೊತ್ತಡಕ್ಕೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅದನ್ನು ನಿಯಂತ್ರಣದಲ್ಲಿಡಬಹುದಾದ ಕಾರಣ ಹೈಪರ್ಟೆನ್ಷನ್ಗೆ ಕಾರಣವಾಗುವ ಅಂಶಗಳನ್ನು ಗುರುತಿಸುವುದು ಮುಖ್ಯ.
ನಿಮಗೆ ಹೈಪರ್ಟೆನ್ಷನ್ ಬರುವ ಸಂಭವಾಂಶ ಇದೆಯೇ ?
ಕೆಲವು ಆರೋಗ್ಯ ಸ್ಥಿತಿಗಳು ಹಾಗೂ ಜೀವನಶೈಲಿ ಮತ್ತು ವಂಶವಾಹಿ ಅಂಶಗಳು ಅಧಿಕ ರಕ್ತದೊತ್ತಡ ಉಂಟಾಗಲು ತನ್ನ ಕೊಡುಗೆಯನ್ನು ನೀಡುತ್ತದೆ. ಹೈಪರ್ಟೆನ್ಷನ್ನ ಗಂಡಾಂತರ ಅಂಶಗಳೆಂದರೆ :
ವೃದ್ದಾಪ್ಯ : ವಯೋಮಾನ ಹೆಚ್ಚಾದಂತೆಲ್ಲ ರಕ್ತದೊತ್ತಡ ಹೆಚ್ಚಾಗುತ್ತದೆ. 45 ವರ್ಷಗಳಿಗೆ ಮೇಲ್ಪಟ್ಟ ಪುರುಷರು ಮತ್ತು 55 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಅತಿಯಾದ ತೂಕ ಮತ್ತು ಸ್ಥೂಲಕಾಯ : ಸಾಮಾನ್ಯಕ್ಕಿಂತ ಹೆಚ್ಚಿನ ತೂಕ ಹೊಂದಿರುವವರು ಹಾಗೂ ಸ್ಥೂಲಕಾಯರಲ್ಲಿ ಹೈಪರ್ಟೆನ್ಷನ್ ಸಂಭವಾಂಶ ಅಧಿಕವಾಗಿರುತ್ತದೆ.
ಲಿಂಗ : ಯುವತಿಯರಿಗಿಂತ ಯುವಕರಲ್ಲಿ ಅಧಿಕ ರಕ್ತದೊತ್ತಡದ ಸಂಭವಾಂಶ ಹೆಚ್ಚಾಗಿರುತ್ತದೆ. ಆದರೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಹೈಪರ್ಟೆನ್ಷನ್ಗೆ ಒಳಗಾಗುತ್ತಾರೆ. 60 ವರ್ಷಗಳ ತರುವಾಯ ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಅಧಿಕ ರಕ್ತದೊತ್ತಡ ಸಾಧ್ಯತೆ ಅಧಿಕವಾಗಿರುತ್ತದೆ.
ಅನಾರೋಗ್ಯಕರ ಜೀವನಶೈಲಿ : ಆಲ್ಕೋಹಾಲ್ ಸೇವನೆ, ಧೂಮಪಾನ, ಸಾಕಷ್ಟು ದೈಹಿಕ ಚಟುವಟಿಕೆ ಇಲ್ಲದಿರುವಿಕೆ, ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಸಿಯಂ ಸೇವಿಸದಿರುವಿಕೆ.
ಹೈಪರ್ಟೆನ್ಷನ್ನ ಕೌಟುಂಬಿಕ ಇತಿಹಾಸ : ಮಧ್ಯ ವಯಸ್ಸಿನಲ್ಲಿ ಕಂಡುಬರುವ ಅಧಿಕ ರಕ್ತದೊತ್ತಡಕ್ಕೆ ಅನುವಂಶೀಯತೆ ಕಾರಣವಾಗುತ್ತದೆ. ತಂದೆ ತಾಯಿ ಇಬ್ಬರಿಗೂ ಅಧಿಕ ರಕ್ತದೊತ್ತಡ ಇದ್ದರೆ ಅವರ ಮಕ್ಕಳಿಗೂ ಹೈಪರ್ಟೆನ್ಷನ್ ಬರುವ ಸಾಧ್ಯತೆ ಶೇಕಡ 25ರಷ್ಟು ಹೆಚ್ಚಾಗಿರುತ್ತದೆ.
ದೀರ್ಘಕಾಲದ ಒತ್ತಡ : ಮಾನಸಿಕ ಒತ್ತಡ, ಭಾವನಾತ್ಮಕ ಗೊಂದಲಗಳು, ಉದ್ವೇಗ ಇವೆಲ್ಲವೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಮಂದಿ ಅಗಾಗ ಕಿರಿಕಿರಿಗೆ ಒಳಗಾಗುತ್ತಾರೆ, ಕ್ಷುಲ್ಲಕ ಕಾರಣಗಳಿಗಾಗಿ ಕೋಪಗೊಳ್ಳುತ್ತಾರೆ. ಸುಲಭವಾಗಿ ಭಾವನಾತ್ಮಕತೆಗೆ ಗುರಿಯಾಗುತ್ತಾರೆ ಹಾಗೂ ಕಟ್ಟುನಿಟ್ಟಿನ ಶಿಸ್ತು ಅಳವಡಿಸಿಕೊಳ್ಳಲು ಯತ್ನಿಸುತ್ತಾರೆ.
ವಿಪರೀತ ಸೋಡಿಯಂ (ಉಪ್ಪು) ಸೇವನೆ : ಉಪಾಹಾರ ಮತ್ತು ಊಟಗಳಲ್ಲಿ ಯಾರು ಅಧಿಕ ಪ್ರಮಾಣದ ಉಪ್ಪು ಸೇವಿಸುತ್ತಾರೋ ಅವರಿಗೆ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಉಪ್ಪು ರಕ್ತ ನಾಳಗಳಲ್ಲಿ ಕ್ರೋಢೀಕರಣಗೊಂಡು ಧಮನಿಗಳು ಕುಗ್ಗುವಿಕೆಗೆ ಎಡೆ ಮಾಡಿಕೊಡುವುದರಿಂದ ಹೈಪರ್ಟೆನ್ಷನ್ಗೆ ಕಾರಣವಾಗುತ್ತದೆ. ಆದ್ದರಿಂದ ರಕ್ತದ ಏರೋತ್ತಡ ಹೊಂದಿರುವವರು ತಮ್ಮ ಆಹಾರ ಕ್ರಮದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಉಪ್ಪು ಸೇವನೆಯನ್ನು ಕಡಿಮೆಗೊಳಿಸಬೇಕು.
ಇತರೆ ರೋಗಗಳು : ಮೂತ್ರಪಿಂಡ ರೋಗಗಳು, ರೆನಲ್ ಆರ್ಟರಿ ಸ್ಟೆನೊಸಿಸ್, ಆಯೋರ್ಟಾ ಕೋಆರ್ಕ್ಟೇಷನ್, ಎಂಡೋಕ್ರೈನ್ ಗ್ರಂಥಿಗಳ ರೋಗ ಮತ್ತು ಕೆಲವು ನರ ದೋಷಗಳು ಅಧಿಕ ರಕ್ತದೊತ್ತಡಕ್ಕೆ ಎಡೆ ಮಾಡಿಕೊಡುತ್ತದೆ.
ಕೆಲವು ಪ್ರಕರಣಗಳಲ್ಲಿ ದೀರ್ಘಕಾಲದ ಮೌಖಿಕ ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದಲೂ ಅಧಿಕ ರಕ್ತದೊತ್ತಡ ಕಂಡು ಬರಬಹುದು.
ಚಿಕಿತ್ಸೆ ಪಡೆಯಲು ವಿಫಲವಾದರೆ ಉಂಟಾಗುವ ತೊಡಕುಗಳು
ಹೈಪರ್ಟೆನ್ಷನ್ಗೆ ಚಿಕಿತ್ಸೆ ಪಡೆಯದಿದ್ದರೆ, ಅದು ಬಹು ತೊಡಕುಗಳಿಗೆ ಎಡೆ ಮಾಡಿಕೊಡುತ್ತದೆ. ಅವುಗಳೆಂದರೆ :
- ಹೃದ್ರೋಗ : ಹೃದಯ ವೈಫಲ್ಯ-ದೇಹಕ್ಕೆ ಸಾಕಷ್ಟು ರಕ್ತ ಪಂಪ್ ಮಾಡಲು ಹೃದಯ ವಿಫಲಗೊಳ್ಳುವ ಪರಿಸ್ಥಿತಿಯಿಂದ ಹೃದಯಾಘಾತ ಸಂಭವಿಸುತ್ತದೆ.
- ಪಾಶ್ರ್ವವಾಯ : ಮೆದುಳಿನ ಪ್ರದೇಶವೊಂದಕ್ಕೆ ರಕ್ತ ಪ್ರವಹಿಸುವಿಕೆ ನಿಂತಾಗ ಪಾಶ್ರ್ವವಾಯು ಅಥವಾ ಸ್ಟ್ರೋಕ್ ಸಂಭವಿಸುತ್ತದೆ. ಹೈಪರ್ಟೆನ್ಷನ್ ಹೊಂದಿರುವ ಮಂದಿಯಲ್ಲಿ ಅರ್ಧಾಂಗವಾಯು ಉಂಟಾಗುವ ಸಾಧ್ಯತೆ ನಾಲ್ಕರಿಂದ ಆರು ಪಟ್ಟು ಅಧಿಕವಾಗಿರುತ್ತದೆ.
- ಮೂತ್ರಪಿಂಡ ರೋಗ : ಮೂತ್ರಪಿಂಡ ವೈಫಲ್ಯ-ಕಿಡ್ನಿಗಳಲ್ಲಿನ ರಕ್ತ ನಾಳಗಳು ಕಿರಿದಾಗಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ.
- ನೇತ್ರ ರೋಗ : ಚಿಕಿತ್ಸೆರಹಿತ ಹೈಪರ್ಟೆನ್ಷನ್ ದೃಷ್ಟಿಗೂ ಹಾನಿಯುಂಟು ಮಾಡುತ್ತದೆ. ಇದರಿಂದ ರೆಟಿನಾದಲ್ಲಿನ ಸೂಕ್ಷ್ಮ ರಕ್ತನಾಳಗಳಿಗೆ ಧಕ್ಕೆಯಾಗುತ್ತದೆ. ಇದನ್ನು ಹೈಪರ್ಟೆನ್ಸಿವ್ ರೆಟಿನೋಪಥಿ ಎಂದು ಕರೆಯಲಾಗುತ್ತದೆ.
- ಒಡೆತಗಳು : ಆರ್ಟರಿಯ ಗೋಡೆಯಲ್ಲಿ ಅಸಾಧಾರಣ ಊತವನ್ನು ಅನ್ಯೂರಿಸಂ ಎನ್ನುವರು. ಮುಖ್ಯ ಆರ್ಟರಿಯಲ್ಲಿ ಅನ್ಯೂರಿಸಂಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com