Health Vision

ಹೈ ಬ್ಲಡ್ ಪ್ರೆಷರ್ – ಹೈಪರ್‍ಟೆನ್ಷನ್ ನಿಯಂತ್ರಣ ಹೇಗೆ?

 

 

 

 

 

 

 

 

 

ಹೈ ಬ್ಲಡ್ ಪ್ರೆಷರ್ ಅಥವಾ ಹೈಪರ್‍ಟೆನ್ಷನ್– ಇದು ಯಾರಲ್ಲಿ ಬೇಕಾದರೂ ಬರಬಹುದು. ವಯಸ್ಸಾದಂತೆ, ಬೀಪಿ ಬರುವ ಅವಕಾಶ ಹೆಚ್ಚುತ್ತದೆ. ಅತಿಯಾದ ತೂಕ ಹೊಂದಿದ್ದರೆ ಅಥವಾ ಸಕ್ಕರೆ ಕಾಯಿಲೆ ಇದ್ದಾಗಇದು ಕಾಣಿಸಿಕೊಳ್ಳುವುದು ಹೆಚ್ಚು.
ಮೊದಲೆಲ್ಲ ಪಾಶ್ವಿಮಾತ್ಯ ಜಗತ್ತಿನ ಜನಸಂಖ್ಯೆಯಲ್ಲಿ ಮಾತ್ರ ಕಂಡುಬರುವ ಕಾಯಿಲೆ ಎಂದೆಲ್ಲ ಪರಿಗಣಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಜಗತ್ತಿನಾದ್ಯಂತ ದೊಡ್ಡ ಸಮಸ್ಯೆ ಎಂದಾಗಿದೆ. ಜೊತೆಗೆ ಭಾರತದಂತಹ ದೇಶದಲ್ಲಿ ವಿಪರೀತ ಎನ್ನಿಸುವಷ್ಟು ಬೃಹದಾಕಾರದ ಸಮಸ್ಯೆಯಾಗಿ ಉದ್ಭವಿಸಿದೆ.
ಭಾರತೀಯರಲ್ಲಿ ಹೆಚ್ಚು!
ಕೆಲವೊಂದು ವೈಜ್ಞಾನಿಕ ಅಧ್ಯಯನಗಳ ಕಡೆ ಗಮನಿಹರಿಸಿದರೆ ಭಾರತದಲ್ಲಿ ವಾಸಿಸುತ್ತಿರುವ ಮತ್ತು ಹೊರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಲ್ಲಿಯೂ ಹೃದ್ರೋಗ ಅತಿಯಾಗಿ ಹೆಚ್ಚಾಗಿ ಕಂಡುಬರುವುದನ್ನು ಸೂಚಿಸುತ್ತದೆ. ದೌರ್ಭಾಗ್ಯದ ವಿಷಯವೇನೆಂದರೆ ಭಾರತದಲ್ಲಿ ವಾಸಿಸುತ್ತಿರುವ ಅಥವಾ ಹೊರದೇಶದಲ್ಲಿರುವ ಉನ್ನತ ವರ್ಗದ ಭಾರತೀಯರು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಹೃದ್ರೋಗವನ್ನು ಹೆಚ್ಚು ಕಡಿಮೆ ಸಮಾನವಾಗಿ ಹೊಂದುವ ಅಪಾಯಎದುರಿಸುತ್ತಿದ್ದಾರೆ.
ಕಳೆದ 25 ವರ್ಷಗಳಲ್ಲಿ ಹಲವು ಅಧ್ಯಯನಗಳಿಂದ ಅಧಿಕ ರಕ್ತದೊತ್ತಡದ ನಿಯಂತ್ರಣದ ಪ್ರಾಮುಖ್ಯತೆ ತಿಳಿಯಲ್ಟಟ್ಟಿದೆ. ಅಧಿಕ ರಕ್ತದೊತ್ತಡ-ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ಬ್ಲಡ್‍ಪ್ರೆಷರ್ ಎರಡೂ ಹೆಚ್ಚಿದರೆ, ಆರೋಗ್ಯಕ್ಕೆ ಮಾರಕ. ಪರಿಣಾಮಕಾರಿ ಬ್ಲಡ್ ಪ್ರೆಷರ್ ನಿಯಂತ್ರಣ ಅತಿ ಅವಶ್ಯಕ. ಮತ್ತದನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸುವ ಅಗತ್ಯವಿದೆ. ಯಾವುದೇ ಬಗೆಯ ನಿರ್ಲಕ್ಷ್ಯ ಅಥವಾ ತಡಮಾಡುವುದರಿಂದ ಸದಾ ಅಧಿಕ ರಕ್ತದೊತ್ತಡ ಇರುವ ಸ್ಥಿತಿಯಿಂದಹಾನಿಯೂ ಹೆಚ್ಚಾಗುತ್ತ ಹೋಗುತ್ತದೆ.
ಹೃದಯ-ಮೆದುಳು-ಕಿಡ್ನಿ
ಅನಿಯಂತ್ರಿತ ರಕ್ತದೊತ್ತಡದಿಂದ 3 ಅಂಗಗಳು ಆ ಹಾನಿಯನ್ನು ತೀವ್ರವಾಗಿ ಅನುಭವಿಸಬೇಕಾಗುತ್ತದೆ. ಅವು-ಹೃದಯ, ಮೆದುಳು ಮತ್ತು ಕಿಡ್ನಿಗಳು. ಸರಿಯಾದ ರಕ್ತದೊತ್ತಡವನ್ನು ಕಾಪಾಡಿಕೊಂಡರೆ ಈ ಅಂಗಗಳನ್ನು ಆರೋಗ್ಯಕರ ಮತ್ತು ಉತ್ತಮ ಸ್ಥಿತಿಯಲ್ಲಿ ರಕ್ಷಿಸಿದಂತೆ. ಪಾಶ್ವಿಮಾತ್ಯ ದೇಶಗಳು ಅನಿಯಂತ್ರಿತ ರಕ್ತದೊತ್ತಡದ ಎರಡು ಅತಿ ಗಂಭೀರ ದುಷ್ಟರಿಣಾಮಗಳಾದ ಹೃದ್ರೋಗ ಮತ್ತು ಪಾಶ್ರ್ವವಾಯುವಿನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಯಶಸ್ಸು ಕಾಣಲಾಗಿದೆ.
ಆದರೆ, ಭಾರತದಲ್ಲಿ ತೊಂದರೆಯ ಪತ್ತೆ ಮತ್ತು ಅಧಿಕ ರಕ್ತದೊತ್ತಡದ ಸೂಕ್ತ ನಿಯಂತ್ರಣದ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಜ್ಞಾನದ ಕೊರತೆ, ಜಾಗೃತಿಯ ಕೊರತೆ, ಸಂಪನ್ಮೂಲಗಳ ಕೊರತೆ, ವೈದ್ಯಕೀಯ ಸೌಲಭ್ಯಗಳು, ಔಷಧಿಗಳು ಸಿಗದಿರುವುದು, ಅನಕ್ಷರತೆ ಮತ್ತು ಬಡತನ ಇವೆಲ್ಲವೂ ಒಳ್ಳೆಯ ಫಲಿತಾಂಶ ದೊರೆಯದೇ ಇರಲು ಹಲವು ಕಾರಣಗಳು.
ವಯಸ್ಸಿಗೆ ಮುನ್ನ ಸಾವು
ಅಧಿಕ ರಕ್ತದೊತ್ತಡ ಇರುವ ಶೇ.20ರಷ್ಟು ಕಡಿಮೆ ಸಂಖ್ಯೆಯಷ್ಟು ಭಾರತೀಯರು ಉತ್ತಮ ರಕ್ತದೊತ್ತಡ ನಿಯಂತ್ರಣ ಮಾಡುತ್ತಿರಬಹುದು ಎಂಬುದು ಒಂದು ಶೈಕ್ಷಣಿಕ ಊಹೆ. ಆದ್ದರಿಂದಲೇ ಅಧಿಕ ರಕ್ತದೊತ್ತಡದ ದುಷ್ಪರಿಣಾಮಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಕ್ತನಾಳಗಳ ಸಂಬಂಧಿ ಹೃದ್ರೋಗ, ಹೃದಯಾಘಾತ, ಹೃದಯ ವೈಫಲ್ಯ, ಲಕ್ವ ಮತ್ತು ಕಿಡ್ನಿ ವೈಫಲ್ಯದಂಥ ದುಷ್ಪರಿಣಾಮಗಳ ರೂಪದಲ್ಲಿ ಆಗಿ ಇವೆಲ್ಲದರ ಒಟ್ಟು `ಉಡುಗೊರೆ’ ಎಂದರೆ ವಯಸ್ಸಿಗೆಮುನ್ನವೇ ಸಾವನ್ನಪ್ಪುವುದು!
ದುರುದೃಷ್ಟವಶಾತ್, ಹೆಚ್ಚಿನ ಪ್ರಕರಣಗಳಲ್ಲಿ ಅಧಿಕ ರಕ್ತದೊತ್ತಡವು ಕಣ್ಣಿಗೆ ಕಾಣಿಸುವಂಥ ಕೆಲವೇ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಅದೇ ಕಾರಣಕ್ಕೆ ಇದನ್ನು ವೈದ್ಯರು, ವಿಜ್ಞಾನಿಗಳು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ. ಇಂದಿಗೂ ಕೂಡ ಅತಿಯಾದ ರಕ್ತದೊತ್ತಡದಿಂದ ಬಳಲುವ ಸಹಸ್ರಾರು ಮಂದಿ, ಅದು ತಮಗಿದೆ ಎಂದು ತಿಳಿಯದೆ, ಕೆಲ ಗಂಭೀರ ಮತ್ತು ಹೆಚ್ಚಿನ ವೇಳೆ ಜೀವಕ್ಕೆ ಅಪಾಯವಾಗುವಂಥ ಬೀಪಿಗೆ, ಚಿಕಿತ್ಸೆ ಪಡೆಯುವಕಾರಣ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ಬಂದಾಗಲೇ ಅರಿವಿಗೆ ಬರುವುದು. ಆದ್ದರಿಂದಲೇ  ರೋಗಿ ಮತ್ತು ವೈದ್ಯರ ಕಡೆಯಿಂದಲೂ ಉನ್ನತ ಮಟ್ಟದ ಜಾಗೃತಿ-ಎಚ್ಚರ ಇರುವುದು ಅವಶ್ಯ.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

Back To Top