ಮಕ್ಕಳಲ್ಲಿ ಕಲಿಕಾ ನ್ಯೂನತೆ ನಿವಾರಣೆ ಹೇಗೆ ?

ಕಲಿಕಾ ನ್ಯೂನತೆ ಅಥವಾ ಲರ್ನಿಂಗ್ ಡಿಸಬಿಲಿಟಿ (ಎಲ್‍ಡಿ) ದೋಷವಿರುವ ಮಗುವು ಕಲಿಕಾ ಅಸಮರ್ಥತೆಯನ್ನು ಹೊಂದಿರುತ್ತದೆ. ಇಂಥ ಮಕ್ಕಳು ಬರವಣಿಗೆ (ಡೈಸ್‍ಗ್ರಾಫಿಯಾ), ಸಂಖ್ಯೆಗಳ ಗುರುತಿಸುವಿಕೆಯಲ್ಲಿ ತೊಡಕು (ಡೈಸ್‍ಕ್ಯಾಲ್ಕುಲಾ) ಅಥವಾ ಓದುವಿಕೆ (ಡೈಸ್‍ಲೆಕ್ಸಿಯಾ) ತೊಂದರೆಗಳಂಥ ಕಲಿಕಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲದರಲ್ಲಿ ಇತರೆ ಯಾವುದೇ ಮಕ್ಕಳಲ್ಲಿ ಇರುವ ಎಲ್ಲ ಸಾಮಥ್ರ್ಯಗಳನ್ನು ಹೊಂದಿರುತ್ತಾರೆ.
ನಿರ್ದಿಷ್ಟ ಕಲಿಕಾ ದೌರ್ಬಲ್ಯ ಅಥವಾ ಲರ್ನಿಂಗ್ ಡಿಸಬಿಲಿಟಿ ದೋಷದಲ್ಲಿ ಡೈಸ್‍ಗ್ರಾಫಿಯಾ ಅಂದರೆ ಬರವಣಿಗೆ ತೊಂದರೆ ಸಹ ಒಂದು. ಈ ದೋಷವಿರುವ ಮಕ್ಕಳು ಬರವಣಿಗೆಯಲ್ಲಿ ಕಷ್ಟಪಡುತ್ತಾರೆ. ಇದರ ಪರಿಣಾಮವಾಗಿ ಸರಿಯಲ್ಲದ ಮತ್ತು ದೋಷಪೂರಿತ ಬರವಣಿಗೆಗೆ ಕಾರಣವಾಗುತ್ತದೆ. ಈ ದೋಷವು ವಿವಿಧ ಹಂತದಲ್ಲಿ ಕಂಡುಬಂದರೂ ಮಗುವಿನ ಬುದ್ದಿವಂತಿಕೆ, ಜಾಣತನ ಮತ್ತು ಓದುವ ಸಾಮಥ್ರ್ಯಕ್ಕೆ ಅಡ್ಡಿಯಾಗುವುದಿಲ್ಲ.
ಇನ್ನು ಎಲ್‍ಡಿ ನ್ಯೂನತೆಯಲ್ಲಿ ಡೈಸ್‍ಲೆಕ್ಸಿಯಾ ಅಥವಾ ಓದುವ ಸಮಸ್ಯೆ ಇನ್ನೊಂದು ಬಗೆಯದು. ಇದರಲ್ಲಿ ಓದುವ ತೊಂದರೆ ಜೊತೆಗೆ ಬರವಣಿಗೆ ಮತ್ತು ಮೌಖಿಕ ಭಾಷೆ ಈ ಎರಡರಲ್ಲೂ ಮಕ್ಕಳು ತೊಂದರೆ ಅನುಭವಿಸುತ್ತಾರೆ. ವ್ಯಕ್ತಿಗತ ಹಾಗೂ ಎಲ್ಲ ಸಾಮಥ್ರ್ಯವಿರುವ ಮಕ್ಕಳ ನಡುವೆ ಇದರ ವ್ಯತ್ಯಾಸ ಕಂಡುಬರುತ್ತದೆ. ಕೆಲವೊಮ್ಮೆ ಇಂಥ ದೋಷವಿರುವವರು ವಿಭಿನ್ನ ಪ್ರತಿಭೆಗಳನ್ನು ಹೊಂದಿರುತ್ತಾರೆ.
ನಿರ್ದಿಷ್ಟ ಕಲಿಕಾ ದೌರ್ಬಲ್ಯದಲ್ಲಿ ಕಂಡು ಬರುವ ಮತ್ತೊಂದು ದೋಷವೆಂದರೆ ಡೈಸ್‍ಕ್ಯಾಲ್ಕುಲಾ ಅಥವಾ ಸಂಖ್ಯೆಗಳ ತೊಡಕು. ಈ ದೋಷವಿರುವ ಮಕ್ಕಳು ಕೂಡುವಿಕೆ, ಕಳೆಯುವಿಕೆ, ಗುಣಕಾರ, ಭಾಗಕಾರ ಮತ್ತು ಮೆಂಟಲ್ ಅರ್ಥ್‍ಮೆಟಿಕ್‍ನಂಥ ಗಣಿತ ಕೌಶಲ್ಯಗಳ ಸಮಸ್ಯೆ ಹೊಂದಿರುತ್ತಾರೆ. ಡೈಸ್‍ಕ್ಯಾಲ್ಕುಲಾ ಸಮಸ್ಯೆ ಎದುರಿಸುತ್ತಿರುವವರು ಸಮಯ ಮತ್ತು ದಿಕ್ಕಿನ ಅಮೂರ್ತ ಪರಿಕಲ್ಪನೆ ಹಾಗೂ ಘಟನೆಗಳ ದಿನವನ್ನು ನೆನಪಿಸಿಕೊಳ್ಳುವಲ್ಲಿ ಸಹ ಕಷ್ಟಪಡುತ್ತಾರೆ.
ಸನ್ನಿವೇಶಗಳು
ಸಹಪಾಠಿಗಳನ್ನು ಅನುಸರಿಸಲು ಕಷ್ಟಪಡುತ್ತಾರೆ. ತಾವು ಉತ್ತಮರಲ್ಲ ಅಥವಾ ಮೂರ್ಖರೆಂಬ ಭಾವನೆ ಅವರಲ್ಲಿ ಉಂಟಾಗುತ್ತದೆ.
ಪಾಠ-ಪ್ರವಚನಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಾರೆ. ಶಾಲಾ ಕಾರ್ಯಗಳನ್ನು ಮಾಡುವುದರಿಂದ ತಪ್ಪಿಸಿಕೊಳ್ಳುತ್ತಾರೆ.
ಕಷ್ಟಪಡುವಿಕೆ, ದೌರ್ಬಲ್ಯ ಮತ್ತು ಅಸಮರ್ಥತೆಯಿಂದ ಅವರಲ್ಲಿ ಆತ್ಮವಿಶ್ವಾಸ ಕುಸಿಯುತ್ತದೆ.
ಕೋಪಗೊಳ್ಳುವಿಕೆ, ಹತಾಶೆ ಮತ್ತು ಖಿನ್ನತೆಗಳು ನಡವಳಿಕೆ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.
ಚೇತರಿಕೆ
ಸಮಸ್ಯೆಯನ್ನು ಸೂಕ್ತವಾಗಿ ಗುರುತಿಸುವಿಕೆ, ವಿಶೇಷ ಶಿಕ್ಷಕರಿಂದ ಬೆಂಬಲ ಹಾಗೂ ನಡವಳಿಕೆ ತೊಂದರೆಗಳ ಕೌಟುಂಬಿಕ ನಿರ್ವಹಣೆ
ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ ಬೆಂಬಲ ಮತ್ತು ಸಹಕಾರ ನೀಡುವ ಮಾರ್ಗಗಳು
ಮಾತನಾಡುವಾಗ ಸ್ಪಷ್ಟತೆ : ದೀರ್ಘ ಮತ್ತು ಸಂಕೀರ್ಣ ವಾಕ್ಯಗಳು ಮತ್ತು ಸೂಚಕಗಳನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು.
ಎಲ್‍ಡಿ ದೋಷವಿರುವವರ ಜೊತೆ ಮುಖಾಮುಖಿ ಸಂವಾದ ನಡೆಸಬೇಕು. ಕಣ್ಣಿನ ಸಂಪರ್ಕ ಮತ್ತು ಅವರ ಮಟ್ಟದಲ್ಲಿ ಮಾತುಕತೆ ನಡೆಸುವುದರಿಂದ ಸಹಕಾರಿಯಾಗುತ್ತದೆ.
ಯಾವುದೇ ಸೂಚನೆಗಳು ಎರಡು ವಾಕ್ಯಗಳ ಬದಲಿಗೆ ಒಂದು ವಾಕ್ಯದಲ್ಲಿ ಇದ್ದರೆ ಉತ್ತಮ.
ಮಗುವಿನ ಜೀವನದಲ್ಲಿ ಗೊಂದಲ ಮತ್ತು ಗಲಿಬಿಲಿಯನ್ನು ಕಡಿಮೆ ಮಾಡಬೇಕು. ಮಗುವಿಗೆ ಆಟವಾಡಲು ಏಕಕಾಲದಲ್ಲಿ ಒಟ್ಟಿಗೆ ಅನೇಕ ಆಟಿಕೆಗಳನ್ನು ನೀಡುವ ಬದಲು ಎರಡು ಆಥವಾ ಮೂರು ಆಟದ ಸಾಮಾನುಗಳನ್ನು ನೀಡುವುದು ಒಳ್ಳೆಯದು.
ಎಲ್‍ಡಿ ದೋಷವಿರುವ ಮಗುವಿಗೆ ಸ್ಪಷ್ಟ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಉದಾಹರಣೆಗೆ ನೀನು ಬೆಕ್ಕಿನ ಜೊತೆ ಆಡಲು ಬಯಸುವೆಯಾ ಅಥವಾ ಮೊಲದ ಜೊತೆ ಆಟವಾಡಲು ಇಚ್ಚಿಸುತ್ತೀಯಾ ಈ ರೀತಿಯ ಆಯ್ಕೆಗಳನ್ನು ನೀಡಬೇಕು.
ನಿರ್ದಿಷ್ಟ ಕಲಿಕಾ ದೌರ್ಬಲ್ಯವಿರುವ ಮಕ್ಕಳು ಕಡಿಮೆ ಮಟ್ಟದ ಆತ್ಮಗೌರವ ಹೊಂದಿರುತ್ತಾರೆ. ಹಾಗಾಗಿ ಇದನ್ನು ಗಮನಿಸಿ ಅವರ ಪ್ರಯತ್ನಿಗಳಿಗೆ ಹಾಗೂ ಸಣ್ಣದಾದರೂ ಅವರು ಸಾಧಿಸುವ ಯಶಸ್ಸುಗಳಿಗೆ ಉಡುಗೊರೆಗಳನ್ನು ನೀಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಕ್ರೀಡೆಗಳು, ಕಲೆ ಅಥವಾ ಸಂಗೀತದಂಥ ಪಠ್ಯೇತರ ಮತ್ತು ಶೈಕ್ಷಣಿಕವಲ್ಲದ ಕ್ಷೇತ್ರಗಳಲ್ಲಿ ಪೈಪೋಟಿ ನೀಡುವಂತೆ ಅವರನ್ನು ಅಭಿವೃದ್ದಿಗೊಳಿಸಬೇಕು. ಇದು ಸಮಸ್ಯೆ ಇರುವವವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಉಂಟು ಮಾಡುವ ಜೊತೆಗೆ ಅವರಲ್ಲಿ ಅತ್ಮಗೌರವವನ್ನೂ ವೃದ್ದಿಸುತ್ತದೆ.
ಮಕ್ಕಳಲ್ಲಿ ಓದಿನ ಆಸಕ್ತಿ ವೃದ್ದಿಸುವ ವಿಧಾನ
ಓದುವ ಶಕ್ತಿ ಒಂದು ಪ್ರಬಲ ಅಸ್ತ್ರ. ಇದು ಕೇವಲ ಜ್ಞಾನ, ಮಾಹಿತಿ, ಉದ್ಯೋಗ ಮತ್ತು ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳ ಭೌದ್ದಿಕ ಬೆಳವಣೆಗೆಗೆ ವ್ಯಕ್ತಿತ್ವ ವಿಕಸನಕ್ಕೂ ಇದು ನೆರವಾಗುತ್ತದೆ. ಕ್ರಮಬದ್ದ ಓದು ವಿಶಿಷ್ಟ ಅರಿವು ಮತ್ತು ಸಂವೇದನೆಗಳನ್ನು ಬೆಳೆಸಿಕೊಳ್ಳಲು ತರಬೇತಿ ನೀಡುತ್ತದೆ.
ಟಿವಿ, ಕಂಪ್ಯೂಟರ್, ಲ್ಯಾಪ್‍ಟಾಪ್, ಮೊಬೈಲ್, ಟ್ಯಾಬ್ಲೆಟ್ ಹಾಗೂ ಆಧುನಿಕ ಜೀವನ ಶೈಲಿ ಮಕ್ಕಳಲ್ಲಿ ಓದಿನ ಹವ್ಯಾಸ ಕಡಿಮೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಓದಿನ ಮಹತ್ವದ ಬಗ್ಗೆ ಆಸಕ್ತಿ ಮೂಡಿಸುವುದು ಪಾಲಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಲು ಹಾಗೂ ಅವರಲ್ಲಿ ಕಂಡುಬರುವ ಕಲಿಕಾ ನ್ಯೂನತೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು.
ಓದುವಿಕೆ ಮಕ್ಕಳಲ್ಲಿ ಕಾಲ್ಪನಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮಕ್ಕಳಲ್ಲಿ ತ್ವರಿತ ಕಲಿಕೆ, ವಿಸ್ತೃತ ದೃಷ್ಟಿಕೋನಗಳನ್ನು ವೃದ್ದಿಸುವ ಜೊತೆಗೆ ವಿಭಿನ್ನ ಜನಾಂಗ ಮತ್ತು ಸ್ಥಳಗಳ ಮಾಹಿತಿಯನ್ನು ಪಡೆಯಲು ಸಹಕರಿಸುತ್ತದೆ. ಇದು ಮಕ್ಕಳ ಕಲ್ಪನಾ ಶಕ್ತಿ ಮತ್ತು ಕುತೂಹಲವನ್ನು ಪ್ರೋತ್ಸಾಹಿಸುತ್ತದೆ. ಮಕ್ಕಳ ಸಂಕೀರ್ಣ ಯೋಚನಾ ಕೌಶಲ್ಯವನ್ನು ಬೆಳೆಸುವುದರ ಜೊತೆಗೆ ಅವರನ್ನು ಪ್ರಜ್ಞಾವಂತ ಪ್ರಜೆಗಳಾಗಿ ರೂಪಿಸುತ್ತವೆ. ಆದರೆ ನವ ಪೀಳಿಗೆಯು ಮೌಖಿಕತೆಯಿಂದ ನೇರವಾಗಿ ಸಾಂಕೇತಿಕರಣದೆಡೆಗೆ ಸಾಗುವುದರ ದಿಸೆಯಲ್ಲಿ ಓದುವ ಮತ್ತು ಬರೆಯುವ ಹವ್ಯಾಸದಿಂದ ವಂಚಿತರಾಗಿ ಅಪಾಯದ ಅಂಚಿನಲ್ಲಿದ್ದಾರೆ.
ವಾಚನಾಭಿರುಚಿಯು ಮಕ್ಕಳಲ್ಲಿ ವಿಷಯ ಗ್ರಹಣಾಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮಕ್ಕಳು ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯವನ್ನು ಉತ್ತಮ ರೀತಿಯಲ್ಲಿ ಗ್ರಹಿಸಲು ಶಕ್ತರಾಗುತ್ತಾರೆ. ಆದರೆ ಕಲಿಯುವಿಕೆಯಲ್ಲಿ ತೊಡಕುಗಳನ್ನು ಎದುರಿಸುವ ಮಕ್ಕಳು ಓದುವಿಕೆ ಮತ್ತು ಭಾಷಾ ಕೌಶಲ್ಯದಿಂದ ವಿಮುಖರಾಗುತ್ತಾರೆ. ಗಮನಾರ್ಹವಲ್ಲದ ಓದುವ ಹವ್ಯಾಸವಿರುವ ಮಕ್ಕಳು ಹೆಚ್ಚಾಗಿ ತರಗತಿಯಲ್ಲಿ ನಿಕೃಷ್ಟ ಶ್ರೇಣಿಯನ್ನು ಪಡೆಯುವುದರ ಜೊತೆಗೆ ಬಹುಬೇಗ ಚಿತ್ತಭ್ರಮಣೆಗೆ ಒಳಗಾಗುತ್ತಾರೆ ಹಾಗೂ ಅತಿ ಶೀಘ್ರ ಆಶಾಭಂಗಕ್ಕೆ ಒಳಗಾಗುತ್ತಾರೆ. ಹೀಗೆ ಅವರ ಸ್ವಭಾವದಲ್ಲಿ ಅಸ್ವಾಭಾವಿಕ ಬದಲಾವಣೆ ಕಂಡುಬರುತ್ತದೆ. ಮುಂದೊಮ್ಮೆ ಅವರು ಶಾಲೆಯ ವಾತಾವರಣವನ್ನು ದ್ವೇಷಿಸಿತೊಡಬಹುದು ಅಥವಾ ತರಗತಿಗಳೆಂದರೆ ಹೆದರಬಹುದು ಅಥವಾ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು.
ಮಕ್ಕಳ ಓದುವ ಹವ್ಯಾಸ ಹಾಗೂ ಇತರ ಗುಣಲಕ್ಷಣಗಳಾದ ಬರವಣಿಗೆ, ಸಾಕ್ಷರತೆ, ಮಾನಸಿಕ ಸ್ವಾಸ್ಥ್ಯ ಮತ್ತು ಸಾಮಾಜಿಕ ನಡವಳಿಕೆಗಳ ನಡುವೆ ಅಸಮತೋಲನ ಸಂಬಂಧವಿರುವುದು ಹಲವಾರು ಅಧ್ಯಯನಗಳಿಂದ ಕಂಡುಬಂದಿದೆ. ಇದರೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಕರ್ತವ್ಯ ವಿಮುಖತೆ ಮತ್ತು ಅಸಮರ್ಪಕ ಓದುವಿಕೆಯು ನೇರ ಸಂಬಂಧ ಹೊಂದಿರುವುದು ತಿಳಿದು ಬಂದಿದೆ. ಅಂದರೆ, ಓದುವಿಕೆಯಲ್ಲಿ ಅತಿ ಹೆಚ್ಚಿನ ತೊಡಕು ಅಥವಾ ಕಲಿಕಾ ನ್ಯೂನತೆಗಳನ್ನು ಅನುಭವಿಸುವವರು ಅತಿ ಹೆಚ್ಚು ಕರ್ತವ್ಯ ವಿಮುಖತೆಯನ್ನು ಮೈಗೂಡಿಸಿಕೊಂಡಿರುತ್ತಾರೆ.
ಮಕ್ಕಳು ತಮ್ಮ ಮೊದಲ ದಿನದಲ್ಲಿಯೇ ಓದುವ ಮತ್ತು ಬರೆಯುವ ಹವ್ಯಾಸದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದರೆ, ಅದು ಅವರ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗೂ ಮಾರಕವಾಗುತ್ತದೆ. ಅಲ್ಲದೇ ಅವರು ಕರ್ತವ್ಯ ಭ್ರಷ್ಟರಾಗುವಲ್ಲಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೂಲೆ ಗುಂಪು ಮಾಡುವಲ್ಲಿ ಪ್ರೇರಣೆ ನೀಡುತ್ತದೆ.
ಎಂಟರಿಂದ ಹದಿಮೂರು ವಯೋಮಾನ ವಿರಾಮದ ಓದಿಗೆ ಪರ್ವ ಕಾಲ. ಈ ವಯಸ್ಸಿನಲ್ಲಿ ಮಕ್ಕಳು ಓದುವುದರಲ್ಲಿ ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದರಲ್ಲಿ ಅತೀವ ಆಸಕ್ತಿ ಹೊಂದಿರುತ್ತಾರೆ. ಇದೇ ವಯಸ್ಸಿನಲ್ಲಿ ಬೆಳೆಸಿಕೊಂಡ ವಾಚನಾಭಿರುಚಿ ಜೀವನ ಪರ್ಯಂಥ ಉಳಿಯಲು ಮತ್ತು ಬೆಳೆಯಲು ಸಾಧ್ಯ. ಈ ವೇಳೆಯಲ್ಲಿ ಅವರನ್ನು ಓದಿಗೆ ಹಚ್ಚದಿದ್ದರೆ ನಂತರದ ದಿನಗಳಲ್ಲಿ ಬೆಳೆದಂತೆ ಆಸಕ್ತಿ ಕುಂದುತ್ತಾ ಹೋಗುತ್ತದೆ.
ವಾಚನಾಭಿರುಚಿಯನ್ನು ಆಸಕ್ತಿದಾಯಕವಾಗಿಸಲು ಹಾಗೂ ಕಲಿಕಾ ನ್ಯೂನತೆಗಳನ್ನು ಸರಿಪಡಿಸಲು ಹಲವಾರು ಮಾರ್ಗೋಪಾಯಗಳಿವೆ.
ಪ್ರತ್ಯೇಕ ಓದುವ ಸ್ಥಳ ನಿರ್ಮಿಸಿ : ನಿಮ್ಮ ಮನೆಗಳಲ್ಲಿ ಮಕ್ಕಳಿಗೆ ಆರಾಮದಾಯಕ, ಪ್ರಶಾಂತವಾದ ಮತ್ತು ಆದರ್ಶಪ್ರಾಯವಾಗಿರುವ ಓದುವ ಸ್ಥಳ ಸೃಷ್ಟಿಸಿ. ಮನೆಯಲ್ಲಿ ಲಭ್ಯವಿರುವ ಪುಸ್ತಕಗಳನ್ನು ಈ ಸ್ಥಳದ ಸಮೀಪದಲ್ಲಿ ಅಚ್ಚುಕಟ್ಟಾಗಿ ಜೋಡಿಸಿರಿ.
ಪುಸ್ತಕಗಳ ಆಯ್ಕೆಗೆ ಸಹಕರಿಸಿ : ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯವನ್ನು ರೂಪಿಸಿಕೊಳ್ಳಿ. ಮಕ್ಕಳಿಗೆ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಲು ಸಹಕರಿಸಿ
ನಿಯಮಿತ ಸಮಯ ನಿಗದಿಗೊಳಿಸಿ : ಓದುವುದಕ್ಕೆ ಒಂದು ನಿಯಮಿತ ಸಮಯವನ್ನು ನಿಗದಿಗೊಳಿಸಿ. ದಿನವೊಂದಕ್ಕೆ 30 ರಿಂದ 45 ನಿಮಿಷ ಓದುವುದರಲ್ಲಿ ಕಳೆಯುವಂತೆ ಮಕ್ಕಳಿಗೆ ಪ್ರೇರಣೆ ನೀಡಿ. ಈ ನಿಯಮಿತ ಸಮಯದಲ್ಲಿ ಮಕ್ಕಳನ್ನು ಓದಲು ತೊಡಗಿಸಿರಿ.
ಉತ್ತಮ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿ : ನಿಗದಿಗೊಳಿಸಿದ ಸಮಯದಲ್ಲಿ ಒಂದು ಉತ್ತಮ ಪುಸ್ತಕ ಓದಲು ಅರ್ಧದಷ್ಟು ಸಮಯ ಮೀಸಲಿಡುವಂತೆ ಸೂಚಿಸಿ. ಒಳ್ಳೆಯ ಪುಸ್ತಕ ಅಂದರೆ ಒಂದು ಉತ್ತಮ ಬೆಳವಣಿಗೆ. ಇದನ್ನು ಬಹು ದಿನಗಳ ತನಕ ಮಕ್ಕಳಲ್ಲಿ ಸ್ವಲ್ಪ ಸ್ವಲ್ಪ ಓದಲು ಅಭ್ಯಾಸ ಮಾಡಿಸಿ. ಇದರಿಂದ ಮಕ್ಕಳಲ್ಲಿ ಒಂದು ಬಗೆಯ ಕುತೂಹಲ ಮೂಡುವುದರಿಂದ ಮಕ್ಕಳು ವಾಚನಾಭಿರುಚಿಯನ್ನು ಬೆಳೆಸಿಕೊಳ್ಳುತ್ತಾರೆ.
ಮಕ್ಕಳೊಂದಿಗೆ ಸಮಯ ಕಳೆಯಿರಿ : ನಿಗದಿಗೊಳಿಸಿದ ಸಮಯದಲ್ಲಿ ಮಕ್ಕಳೊಂದಿಗೆ ನೀವೂ ಓದಲು ಕುಳಿತುಕೊಳ್ಳಿ. ಅಲ್ಲದೇ ನೀವು ಓದುವ ವಿಷಯದ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿರಿ.
ಕುಟುಂಬದ ವಾಚನಾ ಭಿರುಚಿ ಹೆಚ್ಚಿಸಿ : ರಜಾ ದಿನಗಳಲ್ಲಿ ಇಡೀ ಕುಟುಂಬವೇ ಜೊತೆಗೆ ಸೇರಿ ಓದಲು ಕುಳಿತುಕೊಳ್ಳಿ. ಇದು ಮಕ್ಕಳಲ್ಲಿ ಓದಿನ ಬಗ್ಗೆ ಉತ್ಸುಕತೆಯನ್ನು ಹೆಚ್ಚಿಸುತ್ತದೆ.
ವಾಚನಾಭಿರುಚಿಯನ್ನು ಹಾಸ್ಯಮಯವಾಗಿಸಿ : ಸಮಯ ದೊರೆತಾಗಲೆಲ್ಲ ಮಕ್ಕಳಿಗೆ ಯಾವುದಾದರೊಂದು ಪುಸ್ತಕ ಓದಿ ಅದರಲ್ಲಿರುವ ಸನ್ನಿವೇಶಗಳನ್ನು ನಟಿಸಿ ತೋರಿಸಿ. ಇದು ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿ, ವಾಚನಾಭಿರುಚಿಯನ್ನು ವಿನೋದಮಯವಾಗಿಸುತ್ತದೆ.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!