ಗರುಡ ಪುರಾಣದಲ್ಲಿ ಶರೀರ ಶಾಸ್ತ್ರ

ಗರುಡ ಪುರಾಣದಲ್ಲಿ ಶರೀರ ಶಾಸ್ತ್ರ ವಿವರಣೆಯು ಪ್ರತಿಯೊಬ್ಬರಿಗೂ ತಿಳಿಯುವಂತೆ ಪುರಾಣ ರೂಪದಲ್ಲಿದೆ. ಭಗವಾನ್ ಮಹಾವಿಷ್ಣು ಗರುಡನಿಗೆ ಹೇಳಿದ ಪಾಪ ಪುಣ್ಯಗಳ ವಿಚಾರ ನಿರೂಪಣೆ ಗರುಡ ಪುರಾಣವೆಂದು ಖ್ಯಾತಿವೆತ್ತಿದೆ.

ಗರುಡ ಪುರಾಣದಲ್ಲಿ ಶರೀರ ಶಾಸ್ತ್ರ

ಗರುಡ ಪುರಾಣ ಅಷ್ಟಾದಶ ಪುರಾಣಗಳಲ್ಲೊಂದು. ಭಗವಾನ್ ಮಹಾವಿಷ್ಣು ಗರುಡನಿಗೆ ಹೇಳಿದ ಪಾಪ ಪುಣ್ಯಗಳ ವಿಚಾರ ನಿರೂಪಣೆ ಗರುಡ ಪುರಾಣವೆಂದು ಖ್ಯಾತಿವೆತ್ತಿದೆ. ಸೂತ ಪುರಾಣಿಕರು ಪ್ರತಿಯೊಬ್ಬರಿಗೂ ತಿಳಿಯುವಂತೆ ಪುರಾಣ ರೂಪದಲ್ಲಿ ತಿಳಿಸಿ ಹೇಳಿದರು. ಗರುಡ ಪುರಾಣದಲ್ಲಿ ಮೃತ್ಯುವಿನ ನಂತರ ಜೀವಾತ್ಮನು ಸೂಕ್ಷ್ಮ ಶರೀರ ಧಾರಣೆ ಮಾಡಿ ಸ್ವರ್ಗ ಅಥವಾ ನರಕ ಲೋಕದತ್ತ ಪ್ರಯಾಣ ಮಾಡುವುದು ಮತ್ತು ಆ ಜೀವಿಯ ಉದ್ದಾರಕ್ಕಾಗಿ ಪುತ್ರ ಪೌತ್ರದಿ ಕುಟುಂಬ ಜನರ ಕರ್ತವ್ಯವೇನು? ಇವೆಲ್ಲದರ ವಿವರಣೆಯು ಈ ಪುರಾಣದಲ್ಲಿದೆ.

1977, ನಾನು ಎಂಬಿಬಿಎಸ್ ಪೂರ್ಣ ಮಾಡಿ ನನ್ನ ತಂದೆಯ ಮುಂದೆ ನನ್ನ ವೈದ್ಯಕೀಯ ಜ್ಞಾನವನ್ನು ಪ್ರದರ್ಶಿಸಲು, ಅವರು ಗರುಡ ಪುರಾಣದ ಪುಸ್ತಕವನ್ನು ಕೊಟ್ಟು, ಅಧ್ಯಾಯ ಆರು ಮತ್ತು ಹದಿನೈದು ಓದು ಎಂದರು. ನಾನು ಕಲಿತ ವೈದ್ಯಕೀಯ ವಿಷಯ ಅನಾಟಮಿ, ಎಂಬ್ರಿಯಾಲಜಿ, ಅಬಸ್ಟೆಸ್ಟ್ರಿಕ್ಸ್ ಗರುಡ ಪುರಾಣದಲ್ಲಿ ಸವಿಸ್ತಾರವಾಗಿ ಬರೆದಿರುವುದನ್ನು ಓದಿ ನಮ್ಮ ಋಷಿಮುನಿಗಳ ಬಗ್ಗೆ ಹೆಮ್ಮೆ ಮತ್ತು ಗೌರವ ಉಂಟಾಯಿತು. ಗರುಡ ಪುರಾಣದಲ್ಲಿ ಬರೆದಿರುವ ವಿಷಯಗಳನ್ನು ಯಥಾವತ್ತಾಗಿ ಬರೆದಿರುವೆನು.

1. ಋತುಕಾಲದಲ್ಲಿ (ಮೆನ್ಟ್ರುಯೇಷನ್) ಸ್ತ್ರೀಯರಿಂದ ನಾಲ್ಕು ದಿನಗಳು ದೂರವಿರಬೇಕು. ನಾಲ್ಕನೆಯ ದಿನದಿಂದ ಒಂದು ವಾರದವರೆಗೆ ಗರ್ಭಧಾರಣೆಯಾದರೆ ಮಲಿನ ಮನೋವೃತ್ತಿಯ ಸಂತಾನದ ಜನ್ಮವಾಗುತ್ತದೆ. ಋತುಕಾಲದ ಸಮಸಂಖ್ಯೆಯ ರಾತ್ರಿಗಳಲ್ಲಿ 8, 10, 12, 14, 16, 18, 20 ರಾತ್ರಿಗಳಲ್ಲಿ ಗರ್ಭದಾನ ಮಾಡುವುದರಿಂದ ಗಂಡು ಸಂತಾನವಾಗುತ್ತದೆ. ಋತುಕಾಲದ ಬೆಸ ಸಂಖ್ಯೆಯ ರಾತ್ರಿಗಳಲ್ಲಿ 9, 11, 13, 15, 17, 19, 21 ರಾತ್ರಿಗಳಲ್ಲಿ ಗರ್ಭದಾನ ಮಾಡುವುದರಿಂದ ಹೆಣ್ಣು ಸಂತಾನವಾಗುತ್ತದೆ.

2. ಹದಿನಾಲ್ಕನೆಯ ರಾತ್ರಿಯಲ್ಲಿ ಗರ್ಭದಾನವಾದರೆ ಗುಣವಂತ, ಭಾಗ್ಯವಂತ ಮತ್ತ ಧಾರ್ಮಿಕ ಮನೋವೃತ್ತಿಯ ಪುತ್ರನ ಜನ್ಮವಾಗುತ್ತದೆ.

3. ಗರ್ಭದಾನದ ಸಮಯದಲ್ಲಿ ಪುರುಷನ ಮನೋವೃತ್ತಿಯ ಪ್ರಕಾರ ಸಂಭವನೀಯ ಜೀವ ಗರ್ಭದಲ್ಲಿ ಪುವಿಷ್ಟವಾಗುತ್ತದೆ. ಜೀವವು ತಾನು ಭೂಮಿಯಲ್ಲಿ ಆವಿರ್ಭವಿಸಲು ಪುರುಷನ ವೀರ್ಯಾಣುವನ್ನು (ಸ್ಪರ್ಮ್) ಆಶ್ರಯಿಸಿ ಸ್ತ್ರೀಯೊಬ್ಬಳ ಗರ್ಭವನ್ನು ಪ್ರವೇಶಿಸುತ್ತದೆ. ಜೀವವು ಬೀಜದ ಸ್ವರೂಪವನ್ನು ಧಾರಣೆಮಾಡಿ, ಚೈತನ್ಯಾಂಶ ಪುರುಷನ ಶುಕ್ರದಲ್ಲಿ ಸ್ಥಿತವಿರುತ್ತದೆ.

garuda-purana ಗರುಡ ಪುರಾಣದಲ್ಲಿ ಶರೀರ ಶಾಸ್ತ್ರ

4. ಪುರುಷನ ಕಾಮವಾಸನೆ, ಚಿತ್ತವೃತ್ತಿ ಹಾಗು ಶುಕ್ರ (ಸೆಮೆನ್) ಒಂದು ವೇಳೆ ಏಕತತ್ವವನ್ನು ಪ್ರಾಪ್ತಿ ಹೊಂದಿದರೆ ಆಗ ಸ್ತ್ರೀಯ ಗರ್ಭಾಶಯದಲ್ಲಿ ಪುರುಷನು ದ್ರವಿತನಾಗುತ್ತಾನೆ (ಸೆಮೆನ್ ಇಜಾಕುಲೇಷನ್). ಸ್ತ್ರೀಯ ಗರ್ಭಾಶಯದಲ್ಲಿ ಶುಕ್ರ (ಸ್ಪರ್ಮ್) ಮತ್ತು ಗರ್ಭಾಣು (ಓವಮ್) ಸಂಯೋಗವಾಗಿ ಸ್ಥಿರವಾಗಿ ಪಿಂಡದ ಉತ್ಪತ್ತಿಯಾಗುತ್ತದೆ. (ಜೈಗೋಟ್)

5. ಅದು ಒಂದನೆಯ ರಾತ್ರಿಯಲ್ಲಿ ಕಲಲ (ಮೊರುಲ) ಎಂಬ ಹೆಸರಿನಿಂದಲೂ, ಐದನೇ ರಾತ್ರಿಯಲ್ಲಿ ಬುದ್ಬುದ (ಬ್ಲಸ್ಟೋಸಿಸ್ಟ್), ಹತ್ತನೆಯ ರಾತ್ರಿಯಲ್ಲಿ ಕರ್ಕಂದವೆಂದು (ಎಂಬ್ರಿಯೋ) ಬಳಿಕ ಪಶಂಡ (ಫಿಯೋಟಸ್) ಎಂದು ತಿಳಿಯಲ್ಪಡುತ್ತದೆ.

6. ಮೊದಲ ತಿಂಗಳಲ್ಲಿ ತಲೆ ಹುಟ್ಟಿ, ಎರಡನೇ ತಿಂಗಳಲ್ಲಿ ಭುಜಗಳು, ಮೂರನೇಯ ತಿಂಗಳಲ್ಲಿ ಕೂದಲು, ಉಗುರು, ಚರ್ಮ, ಮೂಳೆ, ಲಿಂಗ ಮತ್ತು ಹತ್ತು ದ್ವಾರ ಇವೆಲ್ಲ ಉಂಟಾಗುತ್ತದೆ.

7. ನಾಲ್ಕು ತಿಂಗಳುಗಳಾದಾಗ ಧಾತುಗಳು ಅಂದರೆ ರಸ, ರಕ್ತ, ಮಾಂಸ, ಮೇದಸ್ಸು, ಮಜ್ಜಾ ಮತ್ತು ಶುಕ್ರ ಉಂಟಾಗುತ್ತದೆ. ಧಾತುಗಳು ಬೆಳೆಯಲು ತಾಯಿಯು ಸೇವಿಸುವ ಅನ್ನ ಆಹಾರ ಪಾನಗಳೇ ಆಧಾರ. ಐದು ತಿಂಗಳುಗಳಾದಾಗ ಹಸಿವು ಬಾಯಾರಿಕೆಗಳು ಉಂಟಾಗುತ್ತವೆ.

8. ಆರನೆಯ ತಿಂಗಳಲ್ಲಿ ಜಠಾಯುವಿನಲ್ಲಿ ಸುತ್ತಿಕೊಂಡ ಆಜೀವ ತಾಯಿಯ ಗರ್ಭಾಶಯದ ಒಳಗೆ ಬಲಭಾಗಕ್ಕೆ ಚಲಿಸತೊಡಗುತ್ತದೆ. (ಅಮ್ನಿಯೋಟಿಕ್ ಮೆಂಬ್ರೇನ್)

9. ಪಿಂಡದ ಬೆಳವಣಿಗೆಯು ಪಂಚಭೂತಗಳಿಂದ ಆಗಿದೆ. ಇದೆ ಪ್ರಕೃತಿ ತತ್ವ. ಭೂಮಿ, ನೀರು, ಅಗ್ನಿ, ವಾಯು ಹಾಗೂ ಆಕಾಶ ಇವೇ ಪಂಚಭೂತಗಳು.

10. ಚರ್ಮ, ಮೂಳೆ, ನಾಡಿ, ಮಾಂಸ, ಕೂದಲು ಇವು ಭೂಮಿಯ ಗುಣಗಳು (ಸಪೋರ್ಟಿಂಗ್ ಅಂಡ್ ಕವರಿಂಗ್ ಸ್ಟ್ರಕ್ಚರ್ ಆಫ್ ಬಾಡಿ).

11. ಜೊಲ್ಲು, ರಕ್ತ, ಮಜ್ಜೆ, ವೀರ್ಯ ಮತ್ತು ಮೂತ್ರ ಇವು ಜಲದ ಗುಣಗಳು (ಫ್ಲೂಯಿಡ್ ಪಾರ್ಟ್ ಆಫ್ ಬಾಡಿ).

12. ಹಸಿವು, ದಾಹ, ಆಲಸ್ಯ, ನಿದ್ರೆ ಮತ್ತು ಕಾಂತಿ ಇವು ತೇಜದ ಗುಣಗಳು (ಮೆಟಬಾಲಿಸಮ್).

13. ಹಿಗ್ಗುವುದು, ಕುಗ್ಗುವುದು, ಓಟ, ಜಿಗಿತ, ಚಂಚಲತೆ ಇವೆಲ್ಲ ಗಾಳಿಯ ಗುಣಗಳು (ಮೂವ್‍ಮೆಂಟ್).

14. ಶಬ್ದ, ಶೂನ್ಯ, ಗಾಂಭೀರ್ಯ, ಶ್ರವಣ ಮತ್ತು ಸರ್ವ ಸಂಶಯ ಇವು ಆಕಾಶದ ಗುಣಗೂ (ಕ್ಯಾವಿಟೀಸ್ & ಫೀಲಿಂಗ್ಸ್).

15.ಮನಸ್ಸು, ಬುದ್ದಿ, ಅಹಂಕಾರ, ಹೃದಯ ಇವು ಅಂತಃಕರಣಕ್ಕೆ ಸಂಬಂಧಿಸಿದ ಗುಣಗಳು. ಈ ಗುಣಗಳು ಮನುಷ್ಯನು ಪೂರ್ವಜನ್ಮದಲ್ಲಿ ಮಾಡಿರಬಹುದಾದ ಕರ್ಮಗಳಿಗನುಸಾರ ಇರುತ್ತವೆ. ಇವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.

16. ದೇಹದ ಅಂಗಗಳು ಐದು. ಇವು ಜ್ಞಾನೇಂದ್ರಿಯಗಳು- ಕಣ್ಣು, ಕಿವಿ, ಚರ್ಮ, ನಾಲಿಗೆ, ಮೂಗು.

17. ಕರ್ಮೇಂದ್ರಿಯಗಳು ಐದು –ಬಾಯಿ, ಕೈ, ಕಾಲು, ಗುದ, ಹಾಗೂ ಗುಪ್ತ.

18. ಶರೀರದ ಮದ್ಯದಲ್ಲಿ ಹತ್ತು ಪ್ರದಾನ ನಾಡಿಗಳಿವೆ. ಇಡ, ಪಿಂಗಳ, ಸುಕ್ಷುಮ್ನ, ಗಾಂಧಾರಿ, ಗಜಜಿಹ್ವಾ, ಪುಷಾ, ಯಶಸ್ವಿನೀ, ಅಲಂಭುಷಾ, ಕೂಹು, ಶಂಖಿನಿ ಇವು ಹತ್ತು ನಾಡಿಗಳು (ನ್ಯೂರೋ ಎಂಡೋಕ್ರೇನ್ ಸಿಸ್ಟಮ್)

19.ಹತ್ತು ಪ್ರಾಣವಾಯುಗಳು – ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ, ನಾಗ, ಕೂರ್ಮ, ಕೃಕಲ, ದೇವದತ್ತ ಮತ್ತು ಧನಂಜಯ ಇವು ಹತ್ತು ಪ್ರಾಣವಾಯು. ಹೃದಯದಲ್ಲಿ ಪ್ರಾಣವಾಯು, ಗುದದಲ್ಲಿ ಅಪಾನವಾಯು, ನಾಭಿಮಂಡಲದಲ್ಲಿ ಸಮಾನವಾಯು, ಕಂಠದಲ್ಲಿ ಉದಾನವಾಯು ಮತ್ತು ಸಂಪೂರ್ಣ ಶರೀರದಲ್ಲಿ ವ್ಯಾನವಾಯು ವ್ಯಾಪ್ತವಾಗಿದೆ.

20. ನಾವು ತಿಂದ ಅನ್ನವೆಲ್ಲವೂ ನಮ್ಮ ದೇಹದಲ್ಲಿಯೇ ಉಳಿಯುವುದಿಲ್ಲ. ವ್ಯಾನವು ಅದನ್ನು ಎರಡು ಭಾಗಗಳಾಗಿ ವಿಭಾಗಿಸುವುದು. ಗುದ ಭಾಗದಲ್ಲಿ ವ್ಯಾನವು ಪ್ರವೇಶಿಸಿ, ಅನ್ನ ನೀರುಗಳನ್ನು ಪ್ರತ್ಯೇಕಿಸುತ್ತದೆ. ಅಗ್ನಿಯ ಮೇಲೆ ನೀರು ಇದ್ದು, ನೀರ ಮೇಲೆ ಅನ್ನವಿರುತ್ತದೆ. ಅಗ್ನಿಯ ಕೆಳಗೆ ಪ್ರಾಣವಾಯು ಸದಾ ನೆಲೆಸಿ ಅಗ್ನಿಯನ್ನು ಮೆಲ್ಲಗೆ ಉರಿಸುವುದು. ಪ್ರಾಣವಾಯುವಿನಿಂದ ಪ್ರಕಾಶಗೊಂಡ ಅಗ್ನಿಯು ಮಲವನ್ನು ಅನ್ನರಸವನ್ನು ಪ್ರತ್ಯೇಕಿಸುವುದು.

21.ಅನ್ನರಸವನ್ನು ವ್ಯಾನವು ಎಲ್ಲೆಡೆಗೆ ಮುಟ್ಟುವಂತೆ ಮಾಡುವುದಲ್ಲದೆ, ಮಲವನ್ನು ವಿಂಗಡಿಸಿ, ಕಿವಿ, ಕಣ್ಣು, ಮೂಗು, ನಾಲಿಗೆ, ಹಲ್ಲು, ಹೊಕ್ಕಳು, ಮಲದ್ವಾರ, ಉಗುರು, ಗುಪ್ತೇಂದ್ರಿಯ, ನರಗಳು, ತಲೆ ಹಾಗೂ ರೋಮಗಳು ಹೀಗೆ ಈ ಹನ್ನೆರಡು ದ್ವಾರಗಳ ಮೂಲಕ ಹೊರಹಾಕುತ್ತದೆ. ಈ ಹನ್ನೆರಡು ದ್ವಾರಗಳನ್ನು ಮಲಸ್ಥಾನಗಳೆಂದಿದ್ದಾರೆ.

22. ಆತ್ಮನಿಂದ ಹೀಗೆ ಎಲ್ಲ ವಾಯುಗಳು ಬಲಗೊಂಡ ದೇಹದ ಎಲ್ಲ ಕ್ರಿಯೆಗಳು ಜರುಗುವಂತೆ ಮಾಡುತ್ತದೆ.

23. ಶರೀರದ ವಿವಿಧ ಅಂಶಗಳು – ರೋಮಗಳು ಮೂರುವರೆ ಕೋಟಿ ಇವೆ. ತಲೆತುಂಬ ಕೂದಲುಗಳಿದ್ದು ಇವೇ ಏಳು ಲಕ್ಷವಾಗುತ್ತದೆ. ಕಾಲು ಕೈ ಬೆರಳುಗಳಲ್ಲಿ ಒಟ್ಟು ಇಪ್ಪತ್ತು ಉಗುರುಗಳಿರುತ್ತವೆ. ಹಲ್ಲುಗಳು ಮೂವತ್ತೆರಡು. ಅಸ್ತಿಗಳು ಮುನ್ನೂರಾ ಅರವತ್ತು ಇವೆ. ನಾಲ್ಕು ತೊಲ ಮಾಂಸ, ಇನ್ನೂರು ಎಂಬತ್ತು ತೊಲ ಚರ್ಮ, ನಲವತ್ತು ತೊಲ ಕೊಬ್ಬು, ಹನ್ನೆರಡು ತೊಲ ಮಹಾರಕ್ತ, ನಲವತ್ತೆಂಟು ತೊಲ ಮಜ್ಜೆ, ಹಾಗು ಧಾತಗಳಿವೆ. ನಾಡಿಗಳು ಕೋಟ್ಯಾವಧಿ, ಇನ್ನೂರು ತೊಲ ಪಿತ್ತ, ಒಂದು ನೂರು ತೊಲ ಶ್ಲೇಷ್ಮ ಇವೆ. ದೇಹದಿಂದ ಹನ್ನೆರಡು ಮಲಸ್ಥಾನಗಳಿಂದ ಹೊರಬೀಳುವ ಮಲಕ್ಕೆ ಲೆಕ್ಕವಿಲ್ಲ. ಇವೆಲ್ಲವೂ ಶರೀರದ ವ್ಯಾವಹಾರಿಕ ಲಕ್ಷಣಗಳಾಗಿದ್ದು, ಎಲ್ಲರೂ ಇದಕ್ಕೆ ಬದ್ಧರಾಗಿರುವರು. ಇಂತಹ ಅದ್ಭುತ ಗರುಡ ಪುರಾಣವನ್ನು ಎಲ್ಲರೂ ಓದಬೇಕು.

Also Read: ನಮ್ಮ ದೇಹದಲ್ಲಿನ ಚಕ್ರಗಳು ಮತ್ತು ಆರೋಗ್ಯ

Dr-K-Hanumanthiya.

ಡಾ. ಕೆ. ಹನುಮಂತಯ್ಯ-ಚರ್ಮರೋಗ ತಜ್ನರು

Mob:9844232679

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!