ಡಯಾಬಿಟಿಸ್ ಇದೆಯೆ? ಚಿಂತೆ ಬೇಡ.ಇದಕ್ಕೆ ಆರೋಗ್ಯಕರ ಪಥ್ಯಾಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ಚಿಕಿತ್ಸೆ ನೀಡಬಹುದು. ಇದರೊಂದಿಗೆ ಔಷಧ ಮತ್ತು/ಅಥವಾ ಕೆಲವೊಮ್ಮೆ ಇನ್ಸುಲಿನ್ ಬೇಕಾಗುತ್ತದೆ.
ಡಯಾಬಿಟಿಸ್ ರೋಗಿ ಎಂದು ಒಮ್ಮೆ ನಿರ್ಧರಿತವಾದರೆ ಅಥವಾ ತನಗೆ ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದರೆ ಅದು ವ್ಯಕ್ತಿಯ ದಿನನಿತ್ಯದ ಜೀವನದೊಂದಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತದೆ. ದೇಹವು ಸರಿಯಾದ ರೀತಿಯಲ್ಲಿ ಗ್ಲುಕೋಸ್‍ನನ್ನು ಬಳಸದೇ ಇರುವುದರಿಂದ ರಕ್ತದಲ್ಲಿ ತುಂಬಾ ಅಧಿಕವಾದ ಸಕ್ಕರೆ ಪ್ರಮಾಣ ಇರುವ ಸ್ಥಿತಿಯೇ ಡಯಾಬಿಟಿಸ್. ಇದನ್ನು ಮಧುಮೇಹ ಅಥವಾ ಸಕ್ಕರೆರೋಗ ಅಥವಾ ಸಿಹಿಮೂತ್ರ ರೋಗ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ದೇಹವು ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸದೇ ಇರುವುದು ಅಥವಾ ಇನ್ಸುಲಿನ್ ಇಲ್ಲದಿರುವುದು. ದೇಹದ ಕೋಶಗಳಿಗೆ ಗ್ಲುಕೋಸ್ ಪ್ರವೇಶಿಸಲು ನೆರವಾಗುವ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ (ಇದನ್ನು ಇನ್ಸುಲಿನ್ ಪ್ರತಿರೋಧಕ ಎನ್ನುತ್ತಾರೆ).
ಪಾಂಕ್ರಿಯಾ ಅಥವಾ ಮೆದೋಜ್ಜಿರಕ ಗ್ರಂಥಿ ಇನ್ಸುಲಿನ್‍ನನ್ನು ಉತ್ಪಾದಿಸಲಿದ್ದು, ದೇಹ ಕೋಶಗಳಿಗೆ ಗ್ಲುಕೋಸ್ ಪ್ರವೇಶಿಸಲು ಅವಕಾಶ ನೀಡುತ್ತದೆ. ಅಲ್ಲಿ ಇದು ಶಕ್ತಿಗಾಗಿ ಇಂಧನವಾಗಿ ಬಳಸಲ್ಪಡುವುದರಿಂದ ನಾವು ಕೆಲಸ ಮಾಡಲು, ಆಟವಾಡಲು ಹಾಗೂ ಸಾಮಾನ್ಯವಾಗಿ ನಮ್ಮ ಜೀವನ ನಡೆಸಲು ಬಲ ನೀಡುತ್ತದೆ. ಇದು ಬದುಕಿಗೆ ತುಂಬಾ ಮುಖ್ಯ. ಪಚನಕಾರಿ ಕಾರ್ಬೋಹೈಡ್ರೆಟ್‍ಗಳಿಂದ ಗ್ಲುಕೋಸ್ ಬರುತ್ತದೆ ಹಾಗೂ ಲಿವರ್ ಸಹ ಗ್ಲುಕೋಸ್‍ನನ್ನು ಉತ್ಪಾದಿಸುತ್ತದೆ. ಕಾರ್ಬೋಹೈಡ್ರೆಟ್‍ಗಳು ಬ್ರೇಡ್, ಆಲೂಗಡ್ಡೆ ಮತ್ತು ಚಪಾತಿಯಂಥ ಪಿಷ್ಟ ಆಹಾರಗಳು, ಕೆಲವು ಡೇರಿ ಉತ್ಪನ್ನಗಳು, ಸಕ್ಕರೆ ಹಾಗೂ ಇತರ ಸಿಹಿ ಪದಾರ್ಥಗಳು ಸೇರಿದಂತೆ ಅನೇಕ ರೀತಿಯ ಆಹಾರ ಮತ್ತು ಪಾನೀಯಗಳಿಂದಲೂ ಗ್ಲುಕೋಸ್ ಲಭಿಸುತ್ತದೆ. ಡಯಾಬಿಟಿಸ್ ಇದ್ದರೆ, ದೇಹವು ಈ ಗ್ಲುಕೋಸ್‍ನನ್ನು ಸರಿಯಾಗಿ ಬಳಸುವುದಿಲ್ಲ. ಇದರಿಂದ ಇದು ರಕ್ತದಲ್ಲಿ ಸೇರಿಕೊಳ್ಳುತ್ತದೆ ಹಾಗೂ ಗ್ಲುಕೋಸ್‍ನನ್ನು ಇಂಧನವಾಗಿ ಬಳಸಲು ಸಾಧ್ಯವಾಗುವುದಿಲ್ಲ.
ಟೈಪ್ 1 ಡಯಾಬಿಟಿಸ್ ಎಂದರೇನು?
ದೇಹದಲ್ಲಿರುವ ಇನ್ಸುಲಿನ್ ಉತ್ಪಾದಿಸುವ ಕೋಶಗಳು ನಾಶವಾಗಿ, ದೇಹವು ಯಾವುದೇ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಟೈಪ್ 1 ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ.
ಇನ್ಸುಲಿನ್ ದೇಹದ ಕೋಶಗಳಿಗೆ ಬಾಗಿಲು ತೆಗೆಯುವ ಕೀಲಿ ಕೈ. ಒಮ್ಮೆ ಬಾಗಿಲು ತೆರೆದುಕೊಂಡರೆ ಕೋಶಗಳಿಗೆ ಗ್ಲುಕೋಸ್ ಪ್ರವೇಶಿಸುತ್ತದೆ. ಅಲ್ಲಿ ಅದು ಇಂಧನವಾಗಿ ಬಳಸಲ್ಪಡುತ್ತದೆ. ಟೈಪ್ 1 ಡಯಾಬಿಟಿಸ್‍ನಲ್ಲಿ ದೇಹವು ಯಾವುದೇ ಇನ್ಸುಲಿನ್‍ನನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಾಗಿಲು ತೆಗೆಯಲು ಕೀಲಿ ಕೈ ಇರುವುದಿಲ್ಲ. ಇದರಿಂದಾಗಿ ರಕ್ತದಲ್ಲಿ ಗ್ಲುಕೋಸ್ ಶೇಖರಣೆಗೊಳ್ಳುತ್ತದೆ.
ಇನ್ಸುಲಿನ್ ಉತ್ಪಾದಿಸುವ ಕೋಶಗಳು ಏಕೆ ನಾಶವಾಗುತ್ತವೆ ಎಂಬುದು ಯಾರಿಗೂ ನಿಖರವಾಗಿ ಗೊತ್ತಾಗಿಲ್ಲ. ಅದರೆ, ಕೋಶಗಳಿಗೆ ದೇಹವು ಅಸಾಧಾರಣ ಪ್ರತಿಕ್ರಿಯೆ ಹೊಂದಿರುವುದು ಬಹುತೇಕ ಸಂಭವನೀಯ ಕಾರಣವಾಗಿದೆ. ವೈರಾಣು ಅಥವಾ ಇತರ ಸೋಂಕಿನಿಂದ ಇದು ಉಂಟಾಗಬಹುದು. ಟೈಪ್ 1 ಡಯಾಬಿಟಿಸ್ ಯಾವ ವಯಸ್ಸಿನಲ್ಲೂ ಬೇಕಾದರೂ ಕಂಡುಬರಬಹುದು. ಆದರೆ, ಸಾಮಾನ್ಯವಾಗಿ 40 ವರ್ಷಗಳಿಗೂ ಮುನ್ನ ಗೋಚರಿಸುತ್ತದೆ. ವಿಶೇಷವಾಗಿ ಬಾಲ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಡಯಾಬಿಟಿಸ್ ಇರುವ ಎಲ್ಲ ಜನರ ಶೇ.10ಕ್ಕಿಂತ ಕಡಿಮೆ ಮಂದಿಯಲ್ಲಿ ಟೈಪ್ 1 ಡಯಾಬಿಟಿಸ್ ಕಂಡುಬರುತ್ತದೆ. ಇದಕ್ಕೆ ದಿನನಿತ್ಯ ಇನ್ಸುಲಿನ್ ಚುಚ್ಚುಮದ್ದು, ಆರೋಗ್ಯಕರ ಪಥ್ಯಾಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯಿಂದ ಚಿಕಿತ್ಸೆ ನೀಡಲಾಗುತ್ತದೆ.
ಟೈಪ್ 2 ಡಯಾಬಿಟಿಸ್ ಎಂದರೇನು?
ದೇಹವು ಸಾಕಷ್ಟು ಮಟ್ಟದಲ್ಲಿ ಅಲ್ಲದೇ ಸ್ವಲ್ಪ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವಾಗ ಅಥವಾ ಉತ್ಪಾದಿಸಲ್ಪಟ್ಟ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿದ್ದಾಗ (ಇನ್ಸುಲಿನ್ ಪ್ರತಿರೋಧಕ ಎಂದು ಕರೆಯಲಾಗುತ್ತದೆ) ಟೈಪ್ 2 ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್ ಕೋಶಗಳಿಗೆ ಬಾಗಿಲು ತೆಗೆಯುವ ಕೀಲಿ ಕೈ ಆಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಸಾಕಷ್ಟು ಇನ್ಸುಲಿನ್ ಇಲ್ಲದಿದ್ದರೆ ಅಥವಾ ಅದು ಸರಿಯಾಗಿ ಕೆಲಸ ಮಾಡದಿದ್ದರೆ ಕೋಶಗಳಿಗೆ ಭಾಗಶ: ಬಾಗಿಲು ತೆರೆದುಕೊಳ್ಳುತ್ತದೆ (ಅಥವಾ ತೆರೆದುಕೊಳ್ಳುವುದೇ ಇಲ್ಲ) ಹಾಗೂ ರಕ್ತದಲ್ಲಿ ಗ್ಲುಕೋಸ್ ಸಂಗ್ರಹಗೊಳ್ಳುತ್ತದೆ.
ಟೈಪ್ 2 ಡಯಾಬಿಟಿಸ್ ದಕ್ಷಿಣ ಏಷ್ಯಾ ಮತ್ತು ಕಪ್ಪು ಜನರಲ್ಲಿ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದರೂ, ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. 25 ವರ್ಷದವರಲ್ಲೂ ಇದು ಒಮ್ಮೊಮ್ಮೆ ಗೋಚರಿಸುತ್ತದೆ. ಇದು ಎಲ್ಲ ಜನಾಂಗದ ಸ್ಥೂಲಕಾಯ ಮಕ್ಕಳು, ಕಿಶೋರಾವಸ್ಥೆಯಲ್ಲಿರುವವರು ಹಾಗೂ ಯುವಜನತೆಯಲ್ಲಿ ತೀರಾ ಸಾಮಾನ್ಯವಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಆರೋಗ್ಯಕರ ಪಥ್ಯಾಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ಚಿಕಿತ್ಸೆ ನೀಡಬಹುದು. ಇದರೊಂದಿಗೆ ಔಷಧ ಮತ್ತು/ಅಥವಾ ಕೆಲವೊಮ್ಮೆ ಇನ್ಸುಲಿನ್ ಬೇಕಾಗುತ್ತದೆ.
ಪ್ರಿ ಡಯಾಬಿಟಿಸ್ ಎಂದರೇನು?
ಸಾಮಾನ್ಯಕ್ಕಿಂತ ಅಧಿಕ ಮಟ್ಟದಲ್ಲಿ ಆದರೆ, ಡಯಾಬಿಟಿಸ್ ಎಂದು ರೋಗ ನಿರ್ಧಾರ ಮಾಡುವ ಮಟ್ಟದಲ್ಲಿ ಇಲ್ಲದಿದ್ದಾಗ ಪ್ರಿ ಡಯಾಬಿಟಿಸ್ ಗೋಚರಿಸುತ್ತದೆ. ಪ್ರಿ ಡಯಾಬಿಟಿಸ್ ಇರುವ ವ್ಯಕ್ತಿಗಳು ಟೈಪ್ 2 ಡಯಾಬಿಟಿಸ್‍ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಪ್ರಿ ಡಯಾಬಿಟಿಸ್ ಹೊಂದಿರುವವರು ಹೃದ್ರೋಗಗಳನ್ನು ಹೊಂದುವ ಸಂಭವೂ ಆಧಿಕವಾಗಿರುತ್ತದೆ ಎಂಬುದು ಸಹ ದೃಢಪಟ್ಟಿದೆ. ಇಲ್ಲಿ ನೆನಪಿಡಬೇಕಾದ ಮುಖ್ಯ ಸಂಗತಿ ಎಂದರೆ, ಪ್ರಿ ಡಯಾಬಿಟಿಸ್ ಇರುವುದು ದೃಢಪಟ್ಟರೆ, ಟೈಪ್ 2 ಡಯಾಬಿಟಿಸ್ ಮತ್ತು/ಅಥವಾ ಹೃದ್ರೋಗಗಳನ್ನು ತಡೆಗಟ್ಟಲು ಅಥವಾ ವಿಳಂಬ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸೂಕ್ತ ರೀತಿಯ ಜೀವನ ಶೈಲಿ ಬದಲಾವಣೆಗಳಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ಹಿಂದಿರುಗಿಸಲು ಸಾಧ್ಯವಿದೆ.
ಡಯಾಬಿಟಿಸ್ ರೋಗಲಕ್ಷಣಗಳು:
ಡಯಾಬಿಟಿಸ್‍ನ ಮುಖ್ಯ ರೋಗಲಕ್ಷಣಗಳು ಈ ಕೆಳಕಂಡಂತೆ ಇರಬಹುದು :
1. ನಿರ್ದಿಷ್ಟವಾಗಿ ರಾತ್ರಿ ವೇಳೆ, ಸಾಮಾನ್ಯಕ್ಕಿಂತ ಅಧಿಕ ಮೂತ್ರ ವಿಸರ್ಜನೆ
2. ಹೆಚ್ಚಿದ ಬಾಯಾರಿಕೆ
3. ವಿಪರೀತ ಆಯಾಸ
4. ವಿವರಿಸಲಾಗದ ದೇಹ ತೂಕ ಇಳಿಕೆ
5. ಜನನಾಂಗದ ಬಳಿ ತುರಿಕೆ ಅಥವಾ ಸಾಮಾನ್ಯ ನವೆ, ಕೆರೆತ
6. ಗಾಯಗಳು ನಿಧಾನವಾಗಿ ಗುಣಮುಖವಾಗುವಿಕೆ
7. ದೃಷ್ಟಿ ಮಬ್ಬಾಗುವಿಕೆ
8. ಟೈಪ್ 1 ಡಯಾಬಿಟಿಸ್‍ನಲ್ಲಿ ರೋಗಲಕ್ಷಣ ಮತ್ತು ಚಿಹ್ನೆಗಳು ಸಾಮಾನ್ಯವಾಗಿ ತೀರಾ ಸ್ಪಷ್ಟ ಹಾಗೂ ಕೆಲವೇ ವಾರಗಳಲ್ಲಿ ತ್ವರಿತವಾಗಿ ಬೆಳವಣಿಗೆಯಾಗುತ್ತದೆ. ಒಮ್ಮೆ ಡಯಾಬಿಟಿಸ್‍ಗೆ ಚಿಕಿತ್ಸೆ ನೀಡಿದರೆ ಮತ್ತು ನಿಯಂತ್ರಣದಲ್ಲಿದ್ದರೆ ರೋಗಲಕ್ಷಣಗಳು ತ್ವರಿತವಾಗಿ ಪುನರ್ಜೀತವಾಗುತ್ತವೆ.
9. ಟೈಪ್ 2 ಡಯಾಬಿಟಿಸ್‍ನಲ್ಲಿ ಸ್ಥಿತಿಯು ವರ್ಷಗಳ ಅವಧಿಗೆ ನಿಧಾನವಾಗಿ ಬೆಳವಣಿಗೆಯಾಗುವುದರಿಂದ ಹಾಗೂ ವೈದ್ಯಕೀಯ ತಪಾಸಣೆ ವೇಳೆ ಮಾತ್ರ ಪತ್ತೆಯಾಗುವುದರಿಂದ ರೋಗಲಕ್ಷಣ ಮತ್ತು ಚಿಹ್ನೆಗಳು ಸ್ಪಷ್ಟವಾಗಿ ಕಂಡುಬರುವುದಿಲ್ಲ. ಒಮ್ಮೆ ಡಯಾಬಿಟಿಸ್‍ಗೆ ಚಿಕಿತ್ಸೆ ನೀಡಿದರೆ ಮತ್ತು ನಿಯಂತ್ರಣದಲ್ಲಿದ್ದರೆ ರೋಗಲಕ್ಷಣಗಳು ತ್ವರಿತವಾಗಿ ಪುನರ್ಜೀತವಾಗುತ್ತವೆ.
ಡಯಾಬಿಟಿಸ್ ರೋಗದ ಸಾಧ್ಯತೆ ಅಂಶಗಳು:
1. ಟೈಪ್ 2 ಡಯಾಬಿಟಿಸ್ ಹೊಂದಿರುವ ಕುಟಂಬದ ಒಬ್ಬ ಸದಸ್ಯರಿಗೆ ಮಧುಮೇಹ ಇದ್ದರೆ (ಪೋಷಕರು ಅಥವಾ ಸೋದರ ಅಥವಾ ಸೋದರಿ)
2. ಅತಿಯಾದ ತೂಕ ಹೊಂದಿದ್ದರೆ ಅಥವಾ ಸೊಂಟದ ಸುತ್ತಳತೆ 31.5 ಅಂಗುಲವಿದ್ದರೆ ಅಥವಾ ಮಹಿಳೆಯರ ಸೊಂಟದ ಸುತ್ತಳತೆ 36 ಅಂಗುಲವಿದ್ದರೆ
3. ಅಧಿಕ ರಕ್ತದೊತ್ತಡವಿದ್ದರೆ, ಅಧಿಕ ಕೊಲೆಸ್ಟರಾಲ್ ಇದ್ದರೆ ಅಥವಾ ಹೃದಯಾಘಾತ ಅಥವಾ ಪಾಶ್ರ್ವವಾಯು ಆಗಿದ್ದರೆ
4. ಪಾಲಿಸಿಸ್ಟಿಕ್ ಒವರಿ ಸಿಂಡ್ರೂಮ್ ಹೊಂದಿದ್ದರೆ ಮತ್ತು ಅತಿಯಾದ ತೂಕ ಹೊಂದಿದ್ದರೆ
5. ಕುಗ್ಗಿದ ಗ್ಲುಕೋಸ್ ಸಹನೆ (ಇಂಪೇರ್ಡ್ ಗ್ಲುಕೋಸ್ ಟಾಲೆರೆನ್ಸ್-ಐಜಿಟಿ) ಅಥವಾ ಇಂಪೇರ್ಡ್ ಫಾಸ್ಟಿಂಗ್ ಗ್ಲುಕೋಸ್ (ಐಎಫ್‍ಜಿ) ಅಥವಾ ನಾನ್-ಡಯಾಬಿಟಿಸ್ ಹೈಪರ್‍ಗ್ಲೆಸೆಮಿಯಾ (ಎನ್‍ಡಿಎಚ್) ಇದೆ ಎಂದು ತಿಳಿಸಿದ್ದರೆ
6. ಗರ್ಭಧಾರಣೆ ಸಂದರ್ಭದಲ್ಲಿ ಕಂಡು ಬರುವ ಡಯಾಬಿಟಿಸ್ ಹೊಂದಿದ್ದರೆ
ಡಯಾಬಿಟಿಸ್‍ನ ತೊಡಕುಗಳು:
1. ಅಲ್ಪಾವಧಿ ತೊಡಕುಗಳು ಕೆಟೊಅಸಿಡೋಸಿಸ್ ಹಾಗೂ ಹೈಪರ್‍ಗ್ಲೆಸಿಮಿಯಾ ಅಥವಾ ಹೈಪೋಗ್ಲಿಸಿಮಿಯಾ ಸಮಸ್ಯೆಯನ್ನು ಒಳಗೊಂಡಿರುತ್ತದೆ.
2. ದೀರ್ಘಕಾಲದ ತನಕ ಹತೋಟಿಯಲ್ಲಿ ಇಲ್ಲದ ಡಯಾಬಿಟಿಸ್‍ನಿಂದ ಕಣ್ಣುಗಳು, ಹೃದಯ, ಮೂತ್ರಪಿಂಡಗಳು, ನರಗಳು ಹಾಗೂ ಪಾದಕ್ಕೆ ಹಾನಿಯಾಗಬಹುದು.
ಹೈಪೋಗ್ಲಿಸಿಮಿಯಾ:
ಹೈಪೋಗ್ಲಿಸಿಮಿಯಾ ಒಂದು ರೋಗಲಕ್ಷಣವಾಗಿದ್ದು, ಅದನ್ನು ಪತ್ತೆ ಮಾಡಲು ಮತ್ತು ನಿರ್ವಹಣೆ ಮಾಡುವುದನ್ನು ಕಲಿತುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿಯುವುದನ್ನು ಹೈಪೋಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ. ಡಯಾಬಿಟಿಸ್ ರೋಗಿ ತುಂಬಾ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿದ್ದರೆ, ವಿಳಂಬದ ಊಟ ಅಥವಾ ಸಾಮಾನ್ಯವಲ್ಲದ ಊಟ, ವಿಪರೀತ ಕೆಲಸ ಇತ್ಯಾದಿ ಸನ್ನಿವೇಶದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಹೈಪೋಗ್ಲಿಸಿಮಿಯಾ ಲಕ್ಷಣ ಮತ್ತು ಚಿಹ್ನೆಗಳು: ಮಂಪರು, ಉದ್ವೇಗ, ಬೆವರು, ಹಸಿವು, ದೃಷ್ಟಿ ಮಬ್ಬಾಗುವಿಕೆ, ಹೃದಯ ಜೋರಾಗಿ ಬಡಿದುಕೊಳ್ಳುವಿಕೆ, ಭಾವನೆಗಳ ತೊಯ್ದಾಟ, ಕಿರಿಕಿರಿ, ತಲೆನೋವು, ನಡುಕ, ಆಯಾಸ.
ನಿರ್ವಹಣೆ:
1. 3 ಚಮಚಗಳಷ್ಟು ಗ್ಲುಕೋಸ್ ಪೌಡರ್
2. ಹಣ್ಣಿನ ರಸ ಅಥವಾ 100 ಮಿ.ಲೀ ಅಥವಾ ಅರ್ಧ ಕಪ್ ಎಂದಿನ ಸಾಫ್ಟ್ ಡ್ರಿಂಕ್
3. 1 ಟೀ ಚಮಚ ಸಕ್ಕರೆ
4. ಒಂದು ಸಲ ಊಟ
5. ಅನುಮಾನವಿದ್ದರೆ ಚಿಕಿತ್ಸೆಗೆ ಒಳಗಾಗಬೇಕು
6. ವ್ಯಾಯಾಮ: ಬ್ಲಡ್ ಷುಗರ್ ನಿಯಂತ್ರಣವನ್ನು ಸುಧಾರಿಸುತ್ತದೆ ಹಾಗೂ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡುತ್ತದೆ ಅಥವಾ ತಡೆಗಟ್ಟುತ್ತದೆ.ವ್ಯಾಯಾಮವನ್ನು ಕ್ರಮೇಣ ಆರಂಭಿಸಬೇಕು ಹಾಗೂ ನಿಮಗೆ ಸಾಧ್ಯವಾದಷ್ಟು ಮಾತ್ರ ಮಾಡಬೇಕು.ಖಾಲಿ ಹೊಟ್ಟೆಯಲ್ಲಿ, ಇನ್ಸುಲಿನ್ ತೆಗೆದುಕೊಂಡ ತಕ್ಷಣ ವ್ಯಾಯಾಮ ಮಾಡಬಾರದು
7. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮಗೆ ಕಡಿಮೆ ಪ್ರಮಾಣದ ಇನ್ಸುಲಿನ್ ಬೇಕಾಗುತ್ತದ
1. ಗಾಯ, ತರುಚಿರುವಿಕೆ ಮತ್ತು ಹುಣ್ಣುಗಳಿಗಾಗಿ ಪ್ರತಿದಿನ ತಪಾಸಣೆ ನಡೆಸಿ. ನಿಮ್ಮ ಬೆರಳು ಸಂಧಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ
2. ಬರಿಗಾಲಲ್ಲಿ ನಡೆಯಬೇಡಿ
3. ಯಾವುದೇ ಹೊರ ವಸ್ತುವಿಗಾಗಿ ನಿಮ್ಮ ಷೂಗಳನ್ನು ದಿನವೂ ಪರಿಶೀಲಿಸಿ
4. ವೈದ್ಯಕೀಯ ನೆರವು ಇಲ್ಲದೇ ಯಾವುದೇ ಆಣಿಗಳನ್ನು ತೆಗೆಯಬೇಡಿ
5. ಸರಿಯಾಗಿ ಹೊಂದಿಕೊಳ್ಳುವ ಕಾಟನ್ ಸಾಕ್ಸ್ ಹಾಕಿಕೊಳ್ಳಿ
6. ಉಗುರನ್ನು ಎಚ್ಚರಿಕೆಯಿಂದ ಕತ್ತರಿಸಿ.
ಡಾ. ಶ್ರೀಹರಿ ಮೋಹನ್ ಕುಲಕರ್ಣಿ
ಮೋಹನ್ ಮ್ಯಾಟ್ರಿಕ್ಸ್, 450, 12ನೇ ಅಡ್ಡರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, 2ನೇ ಹಂತ, ಜಿ.ಡಿ. ನಾಯ್ಡು ಹಾಲ್ ರಸ್ತೆ, ಮಹಾಲಕ್ಷ್ಮೀಪುರ, ಬೆಂಗಳೂರು-86
ದೂ.: 91-80-23592255/66/77 ಮೊ.: 9900075376