Health Vision

Health Vision

SUBSCRIBE

Magazine

Click Here

ಮಧುಮೇಹದಿಂದ ಬರುವ ಕಾಲಿನ ತೊಂದರೆಗಳಿಗೆ ನಿಸರ್ಗದತ್ತ ಪರಿಹಾರ

“ಜಿತೇನ ಲಭ್ಯತೇ ಲಕ್ಷ್ಮಿಃ ಮೃತೇನಾಪಿ ಸುರಾಂಗನಾ|
ಕ್ಷಣವಿಧ್ವಂಸಿ ಕಾಯೇಸ್ಮಿನ್ ಕಾ ಚಿಂತಾ ಮರಣೀರಣೀ||”
‘ಶಿಲಾಶಾಸನವು ಹೇಳುವಂತೆ ಜೀವನ ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗಲಕ್ಷ್ಮಿ; ಹೇಗೂ ಈ ಶರೀರ ಒಂದು ದಿನ ಅಳಿಯುವುದು ಇದ್ದೇ ಇದೆ ಅಂದಾಗ ಮರಣಕ್ಕಾಗಿ ಹಾಗೂ ಹೋರಾಟಕ್ಕಾಗಿ ಚಿಂತಿಸುವುದೇಕೆ” ಎಂಬಂತೆ ನಾವು ಇಂದಿನ ಕಾಲದಲ್ಲಿ ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳಿಗೂ ಚಿಂತೆಯನ್ನು ಮಾಡಿಕೊಳ್ಳುತ್ತ ನಮ್ಮೆದುರಿಗೆ ಸುಲಭವಾಗಿ ದೊರೆಯುವ ಪರಿಹಾರವನ್ನು ನಿರ್ಲಕ್ಷಿಸುತ್ತ ಆರೋಗ್ಯ ರಕ್ಷಣೆಗಾಗಿ ಹೆಣಗಾಡುತ್ತಿದ್ದೇವೆ. ಅಂತಹ ಪರಿಹಾರೋಪಾಯಗಳಲ್ಲಿ ಅಗ್ರಸ್ಥಾನ ಪಡೆಯುವಂತದ್ದು ಪ್ರಕೃತಿ ಚಿಕಿತ್ಸೆ ಮನೆಮದ್ದು.
ಇಂದಿನ ಕಾಲದಲ್ಲಿ ನಮ್ಮ ನಡುವೆ ಸಾಮಾನ್ಯವಾಗಿ ಕಾಣುವಂತಹ, ಕಾಡುವಂತಹ ಸಮಸ್ಯೆ ‘ಮಧುಮೇಹ’. ಈ ಮಧುಮೇಹದಿಂದ ಬರುವಂತಹ ಕಾಲು ಉರಿ ಹಾಗೂ ಕಾಲಿಗೆ ಜೋಮು ಹಿಡಿಯುವುದನ್ನು ಕಡಿಮೆ ಮಾಡಲು ಸುಲಭವಾಗಿ ಯಾವ ಯಾವ ರೀತಿಯಾದ ಕ್ರಮಗಳನ್ನು ಅನುಸರಿಸಬೇಕೆಂಬುದಾಗಿ ಈ ಕೆಳಗೆ ನೀಡಲಾಗಿದೆ.
ಯಾವಾಗಿನಂತೆ ಕುರ್ಚಿಯ ಮೇಲೆ ಕುಳಿತು 300 ಬಾರಿ ದಿನಕ್ಕೆ ಮೂರು ಸಲದಂತೆ ಮೇಲೆ ಕೆಳಗೆ ತೂಗು ಆಡಿಸಿದರೆ ಕಾಲಿನ ತೊಂದರೆ ಕಡಿಮೆ ಯಾಗುತ್ತದೆ.

 • ಗ್ರೀನ್ ಜ್ಯೂಸ್ ಥೆರಪಿ: ಸುಲಭವಾಗಿ ದೊರೆಯುವ ಹಸಿರು ಸೊಪ್ಪುಗಳನ್ನು (ಉದಾಹರಣೆಗೆ ನುಗ್ಗೆ ಸೊಪ್ಪು, ಕೊತ್ತುಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇತ್ಯಾದಿ) ತೆಗೆದುಕೊಂಡು ಜೊತೆಯಲ್ಲಿ ಒಂದು ಚಮಚ ಅಗಸೆಬೀಜ, ಒಂದು ಚಮಚ ಕಪ್ಪು ಎಳ್ಳು, ಹಾಗೂ ಅದಕ್ಕೆ ಒಂದು ಗ್ಲಾಸ್ ನೀರನ್ನು ಹಾಕಿ ಮಿಕ್ಸರ್‍ನಲ್ಲಿ ರುಬ್ಬಿಕೊಂಡು ಜ್ಯೂಸ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಹಸಿದ ಹೊಟ್ಟೆಯಲ್ಲಿ ಕುಡಿಯುತ್ತ ಬಂದರೆ ಸಕ್ಕರೆ ಪ್ರಮಾಣವು ದೇಹದಲ್ಲಿ ಹತೋಟಿಗೆ ಬಂದು ಕಾಲಿನ ಉರಿ ಹಾಗೂ ಉಳಿದ ಕಾಲಿನ ತೊಂದರೆಗಳು ಶಮನವಾಗುತ್ತದೆ.
 • ಚಿಕ್ಕುಹಣ್ಣು, ಬಾಳೆ ಹಣ್ಣು, ಹಲಸಿನಹಣ್ಣು ಹಾಗೂ ಮಾವಿನ ಹಣ್ಣು ಇವನ್ನು ಹೊರತು ಪಡಿಸಿ ಉಳಿದಂತೆ ಕಲ್ಲಂಗಡಿ ಹಣ್ಣು, ಸೇಬು ಹಣ್ಣು, ಮೊಸಂಬಿ, ಕರಬೂಜ, ದಾಳಿಂಬೆ, ಪಪ್ಪಾಯ ಇಂತಹವುಗಳನ್ನು ಸೇವಿಸುತ್ತ ಬಂದಲ್ಲಿ ಹಣ್ಣುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ದೊರೆತು ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿ ಕಾಲುಗಳಿಗೆ ಸದೃಢತೆಯನ್ನು ನೀಡುತ್ತದೆ. ಬೇಕಾದಲ್ಲಿ ದಾಲ್ಚಿನ್ನಿ ಪುಡಿಯನ್ನು ಇದರೊಂದಿಗೆ ಬಳಸಿದಾಗ, ಅದೂ ಸಹ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
 • ನೆಲ್ಲಿಕಾಯಿಯ ಬಳಕೆಯು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡಲು ಬಹುಪಕಾರಿಯಾಗಿದೆ.
 • ಅದರಂತೆ ಸೌತೆಕಾಯಿ, ಮೂಲಂಗಿಯಂತಹ ಹೆಚ್ಚು ನೀರಿನ ಪ್ರಮಾಣ ಹೊಂದಿರುವ ಹಾಗೂ ಪೋಷಕಾಂಶಗಳನ್ನು ಹೊಂದಿರುವ ತರಕಾರಿಗಳ ಉಪಯೋಗವು ಮಧುಮೇಹ ಕಾಯಿಲೆಗೆ ಪರಿಹಾರ.
 • ವೀಟ್‍ಗ್ರಾಸ್ ಅಥವಾ ಗೋಧಿಹುಲ್ಲಿನ ತಾಜಾರಸವನ್ನು ಮೂರು ತಿಂಗಳವರೆಗೆ ತೆಗೆದುಕೊಳ್ಳುತ್ತ ಬಂದಲ್ಲಿ ಕಾಲಲ್ಲಾಗುವ ಉರಿ ಹಾಗೂ ಇನ್ನಿತರ ಕಾಲಿನ ಗಾಯಗಳು, ತೊಂದರೆಗಳು ಕಡಿಮೆಯಾಗುತ್ತ ಬರುತ್ತದೆ.
 • ದಾಲ್ಚಿನ್ನಿ ಚಕ್ಕೆಯು ಮಧುಮೇಹ ಖಾಯಿಲೆಯ ನಿಯಂತ್ರಣಕ್ಕೆ ಅತ್ಯಂತ ಉಪಯೋಗಕಾರಿಯಾಗಿದ್ದು, ಇದು ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ದ್ವಿಗುಣ ಹಾಗೂ ದೇಹಕ್ಕೆ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಒದಗಿಸಲು ಕಾರಣೀಭೂತವಾಗುತ್ತದೆ.
 • ವಾಲ್‍ನಟ್ (ಅಕ್ರೂಟ) ಅನ್ನು ಹಾಗೂ ಉಳಿದ ನಟ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ಆರೋಗ್ಯಕ್ಕೆ ಅತ್ಯುತ್ತಮವಾದುದು. ವಾಲ್‍ನಟ್‍ನಲ್ಲಿನ ಮೆಗ್ನಿಷಿಯಂ ಅಂಶವು ದೇಹಕ್ಕೆ ಅಗತ್ಯವಾಗಿದ್ದು ಮಧುಮೇಹ ರೋಗಿಗಳಿಗೆ ಅತ್ಯುಪಯುಕ್ತವಾಗಿದೆ.
 • ಅಗಸೆಬೀಜವು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
 • ಹಸಿಶುಂಠಿಯು ನೋವು ನಿವಾರಕವಾಗಿದ್ದು ಕಾಲುನೋವು ಶಮನಕ್ಕೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ,
 • ಬೇಯಿಸಿದ ಅಥವಾ ಹಸಿಯಾದ ಕಡಲೆಕಾಯಿ ಬೀಜವನ್ನು (ಶೇಂಗಾ) ಹೆಚ್ಚಾಗಿ ಉಪಯೋಗಿಸಬೇಕು.
 • ಅಲಸಂದಿಕಾಳು, ಕೆಂಪು ಕಡಲೆ ಹಾಗೂ ಇನ್ನಿತರೆ ಮೊಳಕೆಕಾಳನ್ನು ತಿನ್ನುವುದು ಮಧುಮೇಹಿಗಳಿಗೆ ಉತ್ತಮ.
 • ಮೆಂತ್ಯೆಯನ್ನು ಮಜ್ಜಿಗೆಯೊಂದಿಗೆ ಸೇರಿಸಿ ಉಪಯೋಗಿಸಬೇಕು.
 • ಕಪ್ಪು ಎಳ್ಳು ಹಾಗೂ ಬಿಳಿ ಎಳ್ಳುಗಳ ಹೆಚ್ಚಿನ ಬಳಕೆಯು ಸಕ್ಕರೆ ಕಾಯಿಲೆ ಇರುವವರಿಗೆ ಆರೋಗ್ಯ ವರ್ಧನೆಗೆ ಸಹಕಾರಿ.
 • ಗ್ರೀನ್ ಟೀಯ ಬಳಕೆ (ಅದಕ್ಕೆ ಬೇಕಾದಲ್ಲಿ ನಿಂಬೆರಸ ಶುಂಠಿ ಮತ್ತು ಚಕ್ಕೆ ಪುಡಿಯನ್ನು ಸೇರಿಸಿಕೊಂಡು) ಮಾಡಿದಲ್ಲಿ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
 • ಪ್ರತಿದಿನ ಬೆಳಿಗ್ಗೆ ಅರ್ಧಗ್ಲಾಸ್ ಹಾಗಲಕಾಯಿಯ ರಸವನ್ನು ತೆಗೆದು ಅಥವಾ ಜ್ಯೂಸ ಮಾಡಿಕೊಂಡು ಕುಡಿಯುವುದು. ಇದರಿಂದ ಸಕ್ಕರೆ ಕಾಯಿಲೆ ಹತೋಟಿಗೆ ಬಂದು ಕಾಲು ಉರಿ, ಕಾಲು ಜೋಮು ಬರುವುದು. ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
  ಹೀಗೆ ಈ ಮೇಲಿನಂತೆ ಸುಲಭವಾದ ವಿಧಾನಗಳನ್ನು ಅನುಸರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಹಾಗೆಯೇ ಇದರಿಂದ ಬರುವಂತಹ ಕಾಲು ಉರಿ, ಕಾಲು ಜೋಮು, ಕಾಲು ನೋವು ಇವುಗಳನ್ನು ಸಹ ಬಗೆಹರಿಸಿಕೊಳ್ಳಬಹುದು.
 • ಒಂದು ಪಾತ್ರೆಯಲ್ಲಿ ಅರ್ಧ ಚಮಚದಷ್ಟು ತ್ರಿಫಲಾ ಪೌಡರ್ ಹಾಗೂ ಅಷ್ಟೇ ಪ್ರಮಾಣದ ಅಮೃತ ಬಳ್ಳಿಯಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಹಾಕಿ ಸರಿಯಾಗಿ ಕದಕಬೇಕು. ಹೀಗೆ ತಯಾರಿಸಿಕೊಂಡಂತಹ ದ್ರವ್ಯವನ್ನು ಪ್ರತಿನಿತ್ಯ ಕುಡಿಯುತ್ತ ಬಂದಲ್ಲಿ ಸಕ್ಕರೆ ಪ್ರಮಾಣವನ್ನು ದೇಹದಲ್ಲಿ ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಸ್ವಲ್ಪ ಒಗರು ರುಚಿಯನ್ನು ಹೊಂದಿರುವ ಈ ಮಿಶ್ರಣವನ್ನು ಸೇವಿಸಿದ ನಂತರದಲ್ಲಿ ಬೇಕಾದಲ್ಲಿ ಅರ್ಧ ಲೋಟ ಬರಿಯ ಹಾಲನ್ನೂ ಸಹ ಕುಡಿಯಬಹುದು.
 • ಎರಡು ಬಾದಾಮಿ, ಅರ್ಧಚಮಚದಷ್ಟು ಕಲ್ಲಂಗಡಿ ಹಣ್ಣಿನ ಬೀಜಗಳು ಮತ್ತು ಒಂದು ಏಲಕ್ಕಿ (ಸಿಪ್ಪೆ ತೆಗೆದು)ಯನ್ನು ತರಿತರಿಯಾಗಿ ಜಜ್ಜಿಕೊಳ್ಳಬೇಕು. ಅದಕ್ಕೆ ಒಂದೊಂದು ಚಮಚ ತರಿಯಾಗಿ ಪೇಸ್ಟ್ ಮಾಡಿಟ್ಟುಕೊಂಡ ಬೂದು ಗುಂಬಳಕಾಯಿ ಹಾಗೂ ಬೆಟ್ಟದ ನೆಲ್ಲಿಕಾಯಿಯನ್ನು ಹಾಕಿ ಆ ಮಿಶ್ರಣಕ್ಕೆ ನೀರನ್ನು ಸೇರಿಸಿ ಕುಡಿಯಬೇಕು. ಪ್ರತಿನಿತ್ಯ ದಿನಕ್ಕೆ ಎರಡು ಬಾರಿಯಂತೆ ಆಹಾರಕ್ಕೆ ಮೊದಲು ಅಥವಾ ನಂತರದ ಒಂದು ತಾಸಿಗೆ ಕುಡಿಯುತ್ತ ಬಂದರೆ ಮಧುಮೇಹ ನಿಯಂತ್ರಣದಲ್ಲಿ ಬಂದು ಕಾಲಿನ ತೊಂದರೆಗಳು ಉಪಶಮನವಾಗುತ್ತವೆ.
 • ಕುದಿಯುತ್ತಿರುವ ನೀರಿಗೆ ಅರ್ಧ ಚಮಚ ಜ್ಯೇಷ್ಠಮಧು ಪೌಡರ್, ಅಷ್ಟೇ ಪ್ರಮಾದ ಶತಾವರಿ ಪುಡಿ ಹಾಗೂ ಸ್ವಲ್ಪ ಅಶ್ವಗಂಧ ಪುಡಿಯನ್ನು ಹಾಕಿ 5 ನಿಮಿಷ ಮಂದಗತಿಯ ಬೆಂಕಿಯಲ್ಲಿ ಕುದಿಯಲು ಬಿಡಬೇಕು. ನಂತರದಲ್ಲಿ ಅದನ್ನು ಕುಡಿಯಬೇಕು. ಹೀಗೆ ಪ್ರತಿದಿನ ಮಾಡುತ್ತ ಬಂದಲ್ಲಿ 30 ದಿನಗಳಲ್ಲಿ ಇದರ ಉತ್ತಮ ಪರಿಣಾಮಗಳು ತಿಳಿದು ಆರೋಗ್ಯ ಸಂರಚನೆಯಲ್ಲಿ ಅನುಕೂಲವಾಗುತ್ತದೆ.
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Back To Top