ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕ

ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕ. ಧೂಮಪಾನ ಮಾಡುವವರಿಗೆ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಹೆಚ್ಚು ಇರುತ್ತದೆ.ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸುತ್ತದೆ ಎನ್ನಲಾಗಿದೆ. ಕೋವಿಡ್-19 ಸೋಂಕು ತಗಲಿದಾಗ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. 

ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕಜಾಗತಿಕವಾಗಿ ವಿಶ್ವದಲ್ಲಿ ವಾರ್ಷಿಕವಾಗಿ 7 ಮಿಲಿಯನ್ ಅಂದರೆ 70 ಲಕ್ಷ ಮಂದಿ ತಂಬಾಕಿನ ಬಳಕೆಯಿಂದ ಸಾಯುತ್ತಾರೆ. ಇದರಲ್ಲಿ 8ಲಕ್ಷ ಮಂದಿ, ತಾವು ತಂಬಾಕು ಸೇವನೆ ಮಾಡದಿದ್ದರೂ, ಇತರರು ತಂಬಾಕು ಸೇವಿಸಿದ ಪರಿಣಾಮವಾಗಿ, ಅವರಿಗೂ ತಂಬಾಕಿನ ರಾಸಾಯನಿಕಯುಕ್ತ ಹೊಗೆ ಶ್ವಾಸಕೋಶಕ್ಕೆ ಸೇರಿ, ಸಾವಿನಲ್ಲಿ ಪರಿರ್ಯವಸನವಾಗುವುದು, ಬಹಳ ದುರದೃಷ್ಟಕರ. ನಮ್ಮ ಭಾರತ ದೇಶವೊಂದರಲ್ಲಿಯೇ 10 ರಿಂದ 12 ಕೋಟಿ ತಂಬಾಕು ಬಳಕೆದಾರರು ಇದ್ದು ಸುಮಾರು 1 ಕೋಟಿ ಜನರು ತಂಬಾಕು ಸಂಭಂಧಿ ರೋಗಗಳಿಗೆ ತುತ್ತಾಗುತ್ತಾರೆ. ಈ ತಂಬಾಕು ಉತ್ಪನ್ನಗಳ ಅತಿಯಾದ ಬಳಕೆಯಿಂದಾಗಿಯೇ ಹಿಂದಿನ ಕಾಲದಲ್ಲಿ 50 ಮತ್ತು 60 ರ ಹರೆಯದಲ್ಲಿ ಬರುತ್ತಿದ್ದ ಕ್ಯಾನ್ಸರ್ ಈಗ 30-40 ರ ಆಸು ಪಾಸಿನಲ್ಲಿ ಬರುತ್ತಿರುವುದು ಬಹಳ ಖೇದಕರ ವಿಚಾರ.

ಅದರಲ್ಲೂ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್, ಯುವ ಜನರಲ್ಲಿ ಹೆಚ್ಚು ಕಾಣಿಸುತ್ತಿರುವುದು ಬಹಳ ನೋವಿನ ವಿಚಾರ. ಅಧಿಕ ತಂಬಾಕು ಬಳಕೆಯಿಂದಾಗಿ, ಅಧಿಕ ರಕ್ತದೊತ್ತಡ, ಹೃದಯಘಾತ, ರಕ್ತದಲ್ಲಿ ಹೆಚ್ಚಿದ ಕೊಬ್ಬಿನ ಅಂಶ, ಎದೆ ಗೂಡಿನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಗಂಟಲು ಮತ್ತು ಶಬ್ದ ಚೀಲದ ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಉಸಿರಾಟ ತೊಂದರೆ, ಅಂದತ್ವ, ದೃಷ್ಟಿ ಮಾಂದ್ಯತೆ ಎಲುಬು ಸವೆತ ಅಥವಾ ಟೊಳ್ಳು ಮೂಳೆ ರೋಗ ಮುಂತಾದ ಹತ್ತು ಹಲವಾರು ರೋಗಗಳು ಕಂಡು ಬರುತ್ತದೆ. ಇನ್ನು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್, ಮುಟ್ಟಿನ ತೊಂದರೆ, ಲೈಂಗಿಕ ನಿರಾಸಕ್ತಿ, ಬಂಜೆತನ, ಅಕಾಲಿಕ ಗರ್ಭಪಾತ ಮುಂತಾದ ಹತ್ತು ಹಲವು ಸಮಸ್ಯೆಗಳು ಒಟ್ಟಾಗಿ ಕಾಣಿಸುತ್ತದೆ.

ತಂಬಾಕು ಮತ್ತು ಶ್ವಾಸಕೋಶದ ತೊಂದರೆಗಳು:

ಶ್ವಾಸಕೋಶದ ಕ್ಯಾನ್ಸರ್‍ಗೆ ಅತ್ಯಂತ ಪ್ರಮಖ ಮತ್ತು ಸಾಮಾನ್ಯ ಕಾರಣವೆಂದರೆ ದೂಮಪಾನ. ಹಾಗೆಂದ ಮಾತ್ರಕ್ಕೆ ದೂಮಪಾನ ಮಾಡದವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಬಾರದೆಂದಿಲ್ಲ. ಸಾವಿರದಲ್ಲಿ ಒಬ್ಬರಿಗೆ ಬರಲೂಬಹುದು ಆದರೆ ನೂರರಲ್ಲಿ ತೊಂಬತ್ತು ಮಂದಿ ಶ್ವಾಸಕೋಶದ ಕ್ಯಾನ್ಸರ್ ಇರುವವರಿಗೆ ತಂಬಾಕಿನ ಚಟ ಇದ್ದೇ ಇರುತ್ತದೆ. ಇದಲ್ಲದೇ ತಂಬಾಕಿನ ಅತಿಯಾದ ಬಳಕೆಯಿಂದ ಶ್ವಾಸಕೋಶದ ಒಳಭಾಗದಲ್ಲಿ ಉರಿಯೂತ ಉಂಟಾಗಿ ಶ್ವಾಸಕೋಶದ ದ್ರವ್ಯಗಳು ಗಟ್ಟಿಯಾಗಿ ಬಹಳಷ್ಟು ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ COPD ಎಂದು ಕರೆಯುತ್ತಾರೆ. ಕನ್ನಡದಲ್ಲಿ “ದೀರ್ಘ ಕಾಲಿಕ ಉಸಿರಾಟ ತಡೆಗಟ್ಟುವ ಶ್ವಾಸಕೋಶದ ಖಾಯಿಲೆ” ಎಂದು ಕರೆಯುತ್ತಾರೆ.

ತಂಬಾಕು ಸೇವಿಸುವ ನೂರು ಮಂದಿಯಲ್ಲಿ 95 ಮಂದಿಗೆ ಈ ರೋಗ ಬಂದೇ ಬರುತ್ತದೆ. ಇನ್ನು ಮಕ್ಕಳಲ್ಲಿ ಶ್ವಾಸಕೋಶ ಬಹಳ ಚಂಚಲವಾಗಿರುತ್ತದೆ. ಬೇರೆಯವರು ಧೂಮಪಾನ ಮಾಡಿದ ಹೊಗೆಯಿಂದಲೇ ಮಕ್ಕಳ ಶ್ವಾಸಕೋಶ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು ಮತ್ತು ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಹೆತ್ತವರು ತಂದೆ ತಾಯಂದಿರು ಸದಾಕಾಲ ಧೂಮಪಾನ ಮಾಡುವುದರಿಂದ ಸಣ್ಣ ಮಕ್ಕಳಿಗೂ ಶ್ವಾಸಕೋಶದ ತೊಂದರೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲೇ ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ತಂಬಾಕು ಸೇವನೆ ಅಥವಾ ಧೂಮಪಾನ ಮಾಡುವುದರಿಂದ ಮತ್ತಷ್ಟು ಶ್ವಾಸಕೋಶಕ್ಕೆ ಹಾನಿಯಾಗಿ ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗುತ್ತದೆ.

ಕೋವಿಡ್-19 ಮತ್ತು ಧೂಮಪಾನ:

ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕಕೋವಿಡ್-19 ರೋಗ ಪ್ರಾಥಮಿಕವಾಗಿ ಶ್ವಾಸಕೋಶಗಳಿಗೆ ನೇರವಾಗಿ ದಾಳಿ ಮಾಡುವುದರಿಂದ ಶ್ವಾಸಕೋಶದ ತೊಂದರೆ ಇರುವವರಲ್ಲಿ ಈ ಕೋವಿಡ್ -19 ರೋಗ ಹೆಚ್ಚು ಉಗ್ರವಾಗಿ ಕಾಡುತ್ತದೆ ಎಂದು ತಿಳಿದು ಬಂದಿದೆ. ನಿರಂತರ ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಆರೋಗ್ಯ ಹದಗೆಟ್ಟು, ಶ್ವಾಸಕೋಶ ಸಾಮಥ್ರ್ಯ ಕುಗ್ಗುತ್ತದೆ ಮತ್ತು ಧೂಮಪಾನಿಗಳಲ್ಲಿ ARDS ಎನ್ನುವ ಅಕ್ಯೂಟ್ ರೆಸ್ಪಿರೇಟರ್ ಡಿಸ್ಟ್ರೆಸ್ ಸಿಂಡ್ರೋಮ್ ಎಂಬ ಮಾರಣಾಂತಿಕ ರೋಗ ಹೆಚ್ಚು ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಧೂಮಪಾನಿಗಳ ರಕ್ತದಲ್ಲಿ ಕೋಟಿನೈನ್ ಎಂಬ ವಸ್ತು ಹೆಚ್ಚು ಇರುತ್ತದೆ. ಇದು ನಿಕೋಟಿನ್ ಎಂಬ ವಸ್ತು ದೇಹದಲ್ಲಿ ಸೇರಿಕೊಂಡು ವಿಭಜನೆಯಾದಾಗ ಉತ್ಪತ್ತಿಯಾಗುವ ರಾಸಾಯನಿಕ ಆಗಿರುತ್ತದೆ. ಈ ಕೋಟಿನೈನ್ ಎಂಬ ವಸ್ತು ನೇರವಾಗಿ ಧೂಮಪಾನ ಮಾಡುವವರಲ್ಲಿ ಹೆಚ್ಚು ಇರುತ್ತದೆ. ಅದೇ ರೀತಿ ಪರೋಕ್ಷವಾಗಿ ಧೂಮಪಾನ ಮಾಡುವವರ ರಕ್ತದಲ್ಲಿಯೂ ಇರುತ್ತದೆ. ಈ ರಾಸಾಯನಿಕ ದೇಹದಲ್ಲಿ ಇರುವವರಲ್ಲಿ ARDS ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದಲ್ಲದೆ ನಿರಂತರ ಧೂಮಪಾನ ಮಾಡುವವರಿಗೆ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಹೆಚ್ಚು ಇರುತ್ತದೆ. ಅವರಲ್ಲಿ ಶ್ವಾಸಕೋಶಗಳ ಕಾರ್ಯಕ್ಷಮತೆ ಇತರ ಆರೋಗ್ಯವಂತ ವ್ಯಕ್ತಿಗಳಂತೆ ಇರುವುದಿಲ್ಲ. ಜಾಸ್ತಿ ಧೂಮಪಾನ ಮಾಡುವುದರಿಂದ ರಕ್ತನಾಳಗಳು ಪೆಡಸುಗೊಂಡು ಹೃದಯ ಸಂಬಂಧಿ ಖಾಯಿಲೆಗಳು ಕೂಡಾ ಕಂಡು ಬರುತ್ತದೆ. ಅದೇ ರೀತಿ ಧೂಮಪಾನಿಗಳ ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸುತ್ತದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ತೀವ್ರವಾಗಿ ಕಾಡುತ್ತದೆ. ಬೀಡಿ ಸಿಗರೇಟು, ಚುಟ್ಟಾ ಹುಕ್ಕ ಮುಂತಾದವುಗಳನ್ನು ಸೇವಿಸುವುದರಿಂದ ಉಸಿರಾಟವ್ಯೂಹದ ಶ್ವಾಸಕೋಶದ ಒಳಗಿನ ಚಿಕ್ಕ ಚಿಕ್ಕ ಗಾಳಿಚೀಲಗಳ ಒಳಪದರದಲ್ಲಿರುವ ಜೀವಕೋಶಗಳಲ್ಲಿನ ಸಿಲಿಯಾ ಅಥವಾ ಚಿಕ್ಕ ಕೂದಲಿನಂತಹ ಆ ರಚನೆಗೆ ಹಾನಿಯಾಗಿ ಗಾಳಿ ಚೀಲಗಳಲ್ಲಿ ನೀರು ತುಂಬುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದರ ಜೊತೆಗೆ ಧೂಮಪಾನಿಗಳಲ್ಲಿ ಕೆಮ್ಮು ಪರಿವರ್ತನಾ ಸಾಮಥ್ರ್ಯ ಕುಂಠಿತವಾಗಿರುವುದರಿಂದ ಶ್ವಾಸಕೋಶಕ್ಕೆ ಬೇಗನೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಇನ್ನು ಧೂಮಪಾನಿಗಳಲ್ಲಿ COPD ಎನ್ನು ದೀರ್ಘಕಾಲಿಕ ಪ್ರತಿರೋಧಕ ಶ್ವಾಸಕೋಶ ಖಾಯಿಲೆ ಹೆಚ್ಚು ಕಂಡು ಬರುತ್ತದೆ. ಇಂತಹಾ ವ್ಯಕ್ತಿಗಳಲ್ಲಿ ಶ್ವಾಸಕೋಶದ ಸಾಮಥ್ರ್ಯ ಕುಂದಿರುತ್ತದೆ. ಅವರಿಗೆ ಉಸಿರಾಟದ ತೊಂದರೆ ಹೆಚ್ಚು ಕಂಡು ಬರುತ್ತದೆ. ಇಂತಹಾ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ತಗುಲಿದಾಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಬೀಡಿ ಸಿಗರೇಟು ಸೇದುವಾಗ ಕೈಗಳಿಂದ ಬಾಯಿಗೆ ಸೋಂಕು ಹರಡು ಸಾಧ್ಯತೆ ಹೆಚ್ಚಾಗಿರುತ್ತದೆ.

ಅಗಿಯುವ ತಂಬಾಕಿನಿಂದ ಬಾಯಿಯಲ್ಲಿ ಜೊಲ್ಲುರಸ ಉತ್ಪತ್ತಿ ಜಾಸ್ತಿಯಾಗಿ ಪದೇ ಪದೇ ಉಗಿಯಬೇಕು ಎನ್ನುವ ತುಡಿತ ಉಂಟಾಗುತ್ತದೆ. ಇದರಿಂದ ಪದೇ ಪದೇ ಉಗುಳಿದಾಗ ಕಿರು ಹನಿಗಳ ಮುಖಾಂತರ ವೈರಾಣು ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅದೇ ರೀತಿ ಚುಟ್ಟಾ, ಪೈಪ್‍ಗಳನ್ನು ಪರಸ್ಪರ ಹಂಚಿಕೊಂಡು ಸೇದುವ ಹವ್ಯಾಸವಿದ್ದಲ್ಲಿ ಅದರ ಮುಖಾಂತರವೂ ಕೋವಿಡ್-19 ರೋಗ ಹರಡುವ ಸಾಧ್ಯತೆ ಇರುತ್ತದೆ. ಇನ್ನು ಧೂಮಪಾನಿಗಳ ರಕ್ತ ಕೂಡಾ ಹೆಚ್ಚು ಮಂದವಾಗಿರುತ್ತದೆ. ಈ ಕಾರಣದಿಂದ ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಅಧಿಕವಾಗಿರುತ್ತದೆ. ಇದನ್ನು ಥ್ರೊಂಬೋಸಿಸ್ ಎನ್ನುತ್ತಾರೆ.ಈ ಕಾರಣದಿಂದ ಧೂಮಪಾನಿಗಳಿಗೆ ಕೋವಿಡ್-19 ಸೋಂಕು ತಗಲಿದಾಗ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ.

ಕೊನೆ ಮಾತು

world_no_tobacco_day_ತಂಬಾಕು ಎನ್ನುವುದು ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುವ ಮೂಲಭೂತ ವಸ್ತು ಎಂಬುವುದು ಸಾರ್ವಕಾಲಿಕ ಸತ್ಯ. ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಂದ 10 ವರ್ಷಗಳ ಮೊದಲೇ ಸಾಯುತ್ತಾನೆಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.  ಒಂದು ತಂಬಾಕು ಮುಕ್ತ, ವ್ಯಸನ ಮುಕ್ತ ಆರೋಗ್ಯವಂತ ಭಾರತವನ್ನ ರೂಪಿಸುವಲ್ಲಿ ನಾವೆಲ್ಲಾ ಕೈ ಜೋಡಿಸೋಣ. ಅದರಲ್ಲಿಯೇ ನಮ್ಮ ಊರಿನ, ನಮ್ಮ ನಾಡಿನ, ನಮ್ಮ ರಾಜ್ಯದ ಹಾಗೂ ನಮ್ಮ ದೇಶದ ಉನ್ನತಿ ಅಡಗಿದೆ. ನೀವು ಸಿಗರೇಟನ್ನು ಹೊತ್ತಿಸಿ ಬೂದಿಮಾಡಿದ್ದಲ್ಲಿ ಸಿಗರೇಟ್ ನಿಮ್ಮ ಜೀವನವನ್ನೇ ಬೂದಿಮಾಡುತ್ತದೆ ಎಂಬ ಮಾತನ್ನು ಜನರು ಸರಿಯಾಗಿ ವಿವೇಚಿಸಿ ಅರ್ಥೈಸಿಕೊಂಡಲ್ಲಿ ಈ ವಿಶ್ವ ತಂಬಾಕು ರಹಿತ ದಿನದ ಆಚರಣೆ ಹೆಚ್ಚು ಅರ್ಥಗರ್ಭಿತವಾದೀತು.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com email: drmuraleemohan@gmail.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!