ದೇಹದ ರೋಗ ನಿರೋಧಕ ಶಕ್ತಿ ಮತ್ತು ನಾವು ತಿನ್ನುವ ಆಹಾರಕ್ಕೂ ಬಹಳ ನೇರ ಸಂಬಂಧವಿದೆ. ಆಹಾರದಲ್ಲಿರುವ ಸತ್ವಗಳಿಗೆ ಅನುಗುಣವಾಗಿ ಅದರಲ್ಲಿ ತರುವ ಔಷಧಿ ಗುಣಗಳಿಗೆ ಹೆಚ್ಚು ಮಹತ್ವ ನೀಡಿ ಆಹಾರವನ್ನು ಔಷಧಿಯಂತೆ ತಿಂದಲ್ಲಿ ಮುಂದೆ ಬರುವ ರೋಗಗಳನ್ನು ತಡೆಯಬಹುದು. ಸಮತೋಲಿತ ಆಹಾರವನ್ನು ನಿರಂತರವಾಗಿ ಸೇವಿಸುತ್ತಾ ಇದ್ದಲ್ಲಿ ಈ ರೋಗನಿರೋಧಕ ವ್ಯವಸ್ಥೆಯನ್ನು ಬಲಿಷ್ಟಗೊಳಿಸಲು ಖಂಡಿತಾ ಸಾಧ್ಯವಿದೆ.
ನಮ್ಮ ದೇಹ ಎನ್ನುವುದು ಒಂದು ಸಂಕೀರ್ಣವಾದ ರಚನೆಯಾಗಿದ್ದು, ಪ್ರತಿ ದಿನ ನಾವು ಒಂದಲ್ಲ ಒಂದು ಕಾರಣದಿಂದ ರೋಗಾಣುಗಳಿಗೆ ತೆರೆದುಕೊಳ್ಳುತ್ತೇವೆ. ಈ ರೋಗಾಣುಗಳು ಬ್ಯಾಕ್ಟೀರಿಯಾ, ಶಿಲೀಂದ್ರ, ವೈರಾಣು ಅಥವಾ ಇನ್ನಾವುದೇ ಜೀವಿ ಇರಬಹುದು. ಈ ರೋಗಾಣುಗಳು ದೇಹವನ್ನು ಸೇರಿಕೊಂಡಾಗ ನಮ್ಮ ದೇಹದ ಬಿಳಿ ರಕ್ತಕಣಗಳು ಮತ್ತು ಇತರ ರೋಗ ನಿರೋಧಕ ಶಕ್ತಿಗಳು ಒಂದಾಗಿ ಈ ರೋಗಾಣುಗಳನ್ನು ದೇಹದಿಂದ ಹೊರಗೆ ಹಾಕಲು ನಿರಂತರವಾಗಿ ಪ್ರಯತ್ನಿಸುತ್ತದೆ. ಇದನ್ನೇ ನಾವು ರೋಗ ನಿರೋಧಕ ಶಕ್ತಿ ಎನ್ನುತ್ತೇವೆ. ಒಬ್ಬ ವ್ಯಕ್ತಿಯ ರೋಗ ನಿರೋಧಕ ಶಕ್ತಿ, ಆತ ತಿನ್ನುವ ಆಹಾರ, ಜೀವನಶೈಲಿ ಮತ್ತು ಆತ ವಾಸಿಸುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ನಾವು ತಿನ್ನುವ ಆಹಾರಕ್ಕೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಗೂ ಬಹಳ ನೇರ ಸಂಬಂಧವಿದೆ.
ಒಬ್ಬ ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದು ಆಹಾರ ಸೇವನೆ ಅತೀ ಅಗತ್ಯವಿರುತ್ತದೆ. ವಿಟಮಿನ್‍ಗಳು, ಖನಿಜಾಂಶಗಳು, ಪೋಷಕಾಂಶಗಳು ಮತ್ತು ಆಂಟಾಕ್ಸಿಡ್‍ಗಳಿಂದ ಕೂಡಿದ ಸಮತೋಲಿತ ಆಹಾರ ಸೇವನೆ ಮಾಡುವುದು ಅತ್ಯಂತ ಅವಶ್ಯಕ ಎಂದೂ ಅಧ್ಯಯನಗಳಿಂದ ತಿಳಿದುಬಂದಿದೆ. ನಾವು ಆಹಾವನ್ನು ಬರೀ ‘ರುಚಿ’ಗೆ ಮಾರು ಹೋಗಿ ತಿನ್ನಬಾರದು. ಆಹಾರದಲ್ಲಿರುವ ಸತ್ವಗಳಿಗೆ ಅನುಗುಣವಾಗಿ ಅದರಲ್ಲಿ ತರುವ ಔಷಧಿ ಗುಣಗಳಿಗೆ ಹೆಚ್ಚು ಮಹತ್ವ ನೀಡಿ ಆಹಾರವನ್ನು ಔಷಧಿಯಂತೆ ತಿಂದಲ್ಲಿ ಮುಂದೆ ಬರುವ ರೋಗಗಳನ್ನು ತಡೆಯಬಹುದು. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರದಂತೆ ಸೇವಿಸಬೇಕಾದ ಅನಿವಾರ್ಯತೆ ಬರಲೂಬಹುದು ಎಂಬುದನ್ನು ಜನರು ಅರಿತು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಬದುಕು ಸುಂದರವಾದೀತು.
ಯಾವ ಆಹಾರವನ್ನು ಹೆಚ್ಚು ಸೇವಿಸಬೇಕು?
1) ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ವಿಟಮಿನ್ ‘ಸಿ’ ಜಾಸ್ತಿ ಇರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ವಿಟಮಿನ್ ‘ಸಿ’ ಕೊಲ್ಲಾಜೆನ್ ಎಂಬ ಪ್ರೊಟೀನ್ ತಯಾರಿಸಲು ಮತ್ತು ದೇಹದಲ್ಲಿನ ಗಾಯ ಬೇಗನೆ ಮಾಸಲು ಅತೀ ಅಗತ್ಯವಾಗಿರುತ್ತದೆ. ಈ ಕಾರಣದಿಂದ ವಿಟಮಿನ್ ‘ಸಿ’ ಜಾಸ್ತಿ ಇರುವ ‘ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮುಸುಂಬಿ ಹಾಗೂ ಲಿಂಬೆ, ಟೊಮ್ಯಾಟೋ, ಪೇರಳೆ, ಅನಾನಸು, ಪಪ್ಪಾಯಿ, ಹೂಕೋಸು(ಕಾಲಿಫ್ಲವರ್), ಗೆಡ್ಡೆಕೋಸು(ಬ್ರೂಕೊಲಿ) ಕ್ಯಾಪ್ಸಿಕಂ, ಹಸುರು ಸೊಪ್ಪು ತರಕಾರಿ, ನೆಲ್ಲಿಕಾಯಿ ಮುಂತಾದವುಗಳನ್ನು ಹೆಚ್ಚು ದಿನನಿತ್ಯದ ಆಹಾರದಲ್ಲಿ ಬಳಸುವುದು ಸೂಕ್ತ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
2) ವಿಟಮಿನ್ ‘ಎ’ ಜಾಸ್ತಿ ಇರುವ ಆಹಾರ ನಮ್ಮ ದೇಹದ ಚರ್ಮದ ಆರೋಗ್ಯಕ್ಕೆ ಅತೀ ಅವಶ್ಯಕ. ಚರ್ಮದ ಆರೋಗ್ಯ ಚೆನ್ನಾಗಿದ್ದಲ್ಲಿ ದೇಹಕ್ಕೆ ಸೋಂಕು ತಗಲುವ ಸಾಧ್ಯತೆ ಕ್ಷೀಣಿಸುತ್ತದೆ. ಈ ಕಾರಣದಿಂದ ವಿಟಮಿನ್’ಎ’ ಜಾಸ್ತಿ ಇರುವ ಆಹಾರಗಳಾದ ಕ್ಯಾರೆಟ್, ಬಸಳೆ, ಗೆಣಸು, ಕುಂಬಳಕಾಯಿ, ಟೊಮ್ಯಾಟೋ, ಪಪ್ಪಾಯಿ, ಬಾಳೆಹಣ್ಣು, ಮಾವಿನ ಹಣ್ಣು ಸೇವಿಸುವುದು ಸೂಕ್ತ ಎಂದು ಅಂದಾಜಿಸಲಾಗಿದೆ.
3) ಆಂಟಿಓಕ್ಸಿಡೆಂಟ್ ಹೇರಳವಾಗಿರುವ ಆಹಾರಗಳು ನಮ್ಮ ದೇಹದಲ್ಲಿನ ಜೀವಕೋಶಗಳ ‘ಆಓಂ’ ಯನ್ನು ರಕ್ಷಿಸುತ್ತದೆ ಮತ್ತು ಜೀವಕೋಶಗಳಿಗೆ ಮುಪ್ಪಾಗದಂತೆ ತಡೆಯುತ್ತದೆ. ಈ ನಿಟ್ಟಿನಲ್ಲಿ ಆಂಟಿಓಕ್ಸಿಡೆಂಟ್ ಜಾಸ್ತಿ ಇರುವ ಆಹಾರಗಳಾದ ಬ್ರೊಕೋಲಿ(ಕೋಸುಗಡ್ಡೆ) ಬಸಳೆ, ಪೇರಳೆ, ಕ್ಯಾರೆಟ್, ಕ್ಯಾಬೇಜ್, ಮೂಲಂಗಿ, ಗೆಣಸು, ಸಿಹಿಕುಂಬಳಕಾಯಿ ಮುಂತಾದ ಆಹಾರಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಹೆಚ್ಚು ಹೆಚ್ಚು ಸೇವಿಸುವುದು ಸೂಕ್ತ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
4) ನಾರಿನಾಂಶ ಜಾಸ್ತಿ ಇರುವ ಆಹಾರ ನಮ್ಮ ದೇಹದ ಆರೋಗ್ಯಕ್ಕೆ ಅತೀ ಅವಶ್ಯಕ. ನಮ್ಮ ಆಹಾರದಲ್ಲಿ ಕನಿಷ್ಟ 20 ರಿಂದ 30 ಶೇಕಡಾ ನಾರು ಇರಬೇಕು, ಈ ನಾರಿನಾಂಶ ಮಲ ಉತ್ಪಾದನೆ ಹೆಚ್ಚಿಸಿ, ಮಲ ವಿಸರ್ಜನೆಗೆ ಸಹಕಾರಿಯಾಗುತ್ತದೆ ಮತ್ತು ಪೋಷಕಾಂಶಗಳನ್ನು ಕರುಳಿನಲ್ಲಿ ಹೀರಿಕೊಳ್ಳಲು ಸಹಕಾರ ನೀಡುತ್ತದೆ. ನಮ್ಮ ಕರುಳಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ದೇಹದ ರಕ್ಷಣಾ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬಲ್ಲದು. ಅಲ್ಲದೆ, ನಾರಿನಾಂಶ ಜಾಸ್ತಿ ಇದ್ದಲ್ಲಿ ದೇಹದ ತೂಕ ನಿಯಂತ್ರಣಕ್ಕೆ ಬಂದು ಕೊಬ್ಬು ಕಡಿಮೆಯಾಗಿ ರಕ್ಷಣಾ ವ್ಯವಸ್ಥೆ ಸುದೃಢವಾಗುತ್ತದೆ. ಈ ಕಾರಣದಿಂದ ನಾರಿನಾಂಶ ಜಾಸ್ತಿ ಇರುವ ಬಾಳೆಹಣ್ಣು, ಮೂಲಂಗಿ, ಸುವರ್ಣಗಡ್ಡೆ, ಹಸಿ ತರಕಾರಿಗಳು, ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸುವುದು ಉತ್ತಮ.
5) ಜಂಕ್ ಆಹಾರ, ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಆಹಾರ, ರಾಸಾಯನಿಕ ಮತ್ತು ಆಹಾರ ಕೆಡದಂತೆ ರಾಸಾಯನಿಕ ಬೆರೆಸಿದ ಆಹಾರ ಸೇವನೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಹದಗೆಡುತ್ತದೆ. ಇಂತಹಾ ಆಹಾರಗಳನ್ನು ಸೇವಿಸುವುದು ಅಕ್ಷಮ್ಯ ಅಪರಾಧ. ಅತೀ ಅಗತ್ಯವಿದ್ದಲ್ಲಿ ಅನಿವಾರ್ಯವಿದ್ದಲ್ಲಿ ಮಾತ್ರ ಸೇವಿಸಬಹುದು. ಈ ಸಂಸ್ಕರಿಸಿದ ಆಹಾರದಲ್ಲಿನ ರಾಸಾಯನಿಕಗಳ ಕ್ಯಾನ್ಸರ್‍ಕಾರಕ ಮತ್ತು ರಕ್ಷಣಾ ವ್ಯವಸ್ಥೆಗೆ ಬಹುದೊಡ್ಡ ಶತ್ರು ಎಂದೂ ತಿಳಿದುಬಂದಿದೆ.
Also Read: ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ.
6) ಸಸ್ಯಜನ್ಯ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಪ್ರಾಣಿಜನ್ಯ ಆಹಾರಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು. ಹಣ್ಣುಗಳು, ಹಸಿತರಕಾರಿಗಳು, ಸೊಪ್ಪುತರಕಾರಿಗಳು, ಬೀಜಗಳು, ಕಾಳುಗಳು, ಬೇಳೆಕಾಳು ಮತ್ತು ಬೀನ್ಸ್‍ನಂತಹ ಪೂರ್ಣ ಸಸ್ಯಜನ್ಯ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಈ ಆಹಾರದಲ್ಲಿ ಪೌಷ್ಟಿಕಾಂಶಗಳು, ಆಂಟಿಆಕ್ಸಿಡೆಂಟ್‍ಗಳು ಹೇgಳವಾಗಿದ್ದು, ಸೋಂಕುಕಾರಕ ಸೂಕ್ಸ್ಮ ಜೀವಿಗಳ ವಿರುದ್ಧದ ಹೋರಾಟದಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ. ದೇಹಕ್ಕೆ ರಕ್ಷಣಾ ವ್ಯವಸ್ಥೆ ಯಾವತ್ತೂ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.
7) ಆಹಾರದಲ್ಲಿ ಸಕ್ಕರೆಯ ಅಂಶ ಹಿತಮಿತವಾಗಿರಬೇಕು. ಅತಿಯಾದ ಸಕ್ಕರೆ ಮತ್ತು ಸಂಸ್ಕರಿಸಿದ ಹೆಚ್ಚು ಕ್ಯಾಲೊರಿ ಇರುವ ಇಂಗಾಲಯುಕ್ತ ಪಾನೀಯಗಳಾದ ಕೋಲಾ, ಪೆಪ್ಸಿ, ಮಿರಿಂಡಾ, ಎನರ್ಜಿ ಪೇಯಗಳು, ಸ್ಪೋಟ್ರ್ಸ್ ಪೇಯಗಳು ಇತ್ಯಾದಿಗಳನ್ನು ಸೇವಿಸಲೇ ಬಾರದು. ನೈಸರ್ಗಿಕ ಪೇಯಗಳಾದ ನೀರು, ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸ ಸೇವನೆ ನಮ್ಮ ದೇಹದ ಆರೋಗ್ಯಕ್ಕೆ ಪೂರಕ ದಿಢೀರ್ ಶಕ್ತಿ ನೀಡುವ ಕುಕಿಗಳು, ಕೇಕ್‍ಗಳು, ಪೇಸ್ಟ್ರಿಗಳು, ಐಸ್‍ಕ್ರೀಂ, ಸಿಹಿತಿಂಡಿಗಳು, ಕರಿದ ತಿಂಡಿಗಳು ದೇಹದ ತೂಕ ಹೆಚ್ಚಿಸಿ ಬೊಜ್ಜು ಉಂಟು ಮಾಡಿ ರೋಗಕ್ಕೆ ನೇರ ರಹದಾರಿ ನೀಡುತ್ತದೆ. ಹಸಿವೆ ಇಂಗಿಸಲು ತಾಜಾ ಹಣ್ಣುಗಳು ಮತ್ತು ಹಣ್ಣಿನ ರಸಗಳು ಅತೀ ಉಪಯುಕ್ತ,
8) ನೀರು ಒಂದು ಉತ್ತಮವಾದ ನೈಸರ್ಗಿಕ ಪೇಯವಾಗಿದ್ದು, ದೇಹದ ಜೀವಕೋಶಗಳ ಕಾರ್ಯಕ್ಷಮತೆ ಹೆಚ್ಚಿಸಲು ಅತೀ ಅಗತ್ಯ, ದೇಹದಲ್ಲಿನ ಜೀವಕೋಶಗಳ ಕಲ್ಮಶಗಳನ್ನು ಹೊರಹಾಕಲು ನೀರು ಅತೀ ಅಗತ್ಯ. ದಿನವೊಂದಕ್ಕೆ 2 ರಿಂದ 3 ಲೀಟರ್ ನೀರು ಕುಡಿದಲ್ಲಿ ದೇಹದ ಜೈವಿಕ ಕ್ರಿಯೆಗಳು ಸರಾಗವಾಗಿ, ಕಿಡ್ನಿಗಳ ಕಾರ್ಯಕ್ಷಮತೆ ಹೆಚ್ಚಿ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ ಎಂದು ತಿಳಿದುಬಂದಿದೆ.
9) ಹುದುಗುಬರಿಸಿದ ಆಹಾರ ನಮ್ಮ ದೇಹದ ಆರೋಗ್ಯಕ್ಕೆ ಪೂರಕ. ಮೊಸರು, ಯೋಗರ್ಟು ಮನೆಯಲ್ಲಿ ತಯರಿಸಿದ ಇಡ್ಲಿ, ದೋಸೆ ಮುಂತಾದ ಆಹಾರಗಳಲ್ಲಿ ಪ್ರೊಬಯೋಟಿಕ್ ಎಂಬ ಉಪಕಾರಿ ಬ್ಯಾಕ್ಟೀರಿಯಾಗಳು ಹೇರಳವಾಗಿರುತ್ತದೆ, ಇವುಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿ ಇರಿಸಿ, ದೇಹದ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.
10) ವಿಟಮಿನ್‍ಯುಕ್ತ, ವಿಟಮಿನ್ ಸಮೃದ್ಧ ಹಾರವನ್ನು ಹೆಚ್ಚು ಸೇವಿಸಬೇಕು. ವಿಟಮಿನ್ ಃ6 ವಿಟಮಿನ್ ಃ ಸಂಕೀರ್ಣಗಳು, ವಿಟಮಿನ್ ಇ ಜಾಸ್ತಿ ಇರುವ ಆಹಾರಗಳಾದ ಬಸಳೆ, ನುಗ್ಗೆ, ಕ್ಯಾರೆಟ್, ನೀರುಳ್ಳಿ, ಬೆಳ್ಳುಳ್ಳಿ, ಅರಶಿನ, ಮೀನು, ದ್ರಾಕ್ಷಿ, ನೆಲಗಡಲೆ, ಪಿಸ್ತಾ, ಗೆಣಸು, ಇಡಿ ಧಾನ್ಯಗಳು, ಬಾಳೆಹಣ್ಣು, ಬಾದಾಮಿ, ಹಸಿರು ಸೊಪ್ಪು ತರಕಾರಿಗಳು ಹೇರಳವಾಗಿರುವ ಆಹಾರ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ದಿನನಿತ್ಯದ ಆಹಾರಗಳಲ್ಲಿ ಈ ಮೇಲೆ ಸೂಚಿಸಿದ ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಖಂಡಿತವಾಗಿಯೂ ರೋಗನಿರೋಧಕ ಶಕ್ತಿ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ.
11) ನೀರಿನಂಶ ಜಾಸ್ತಿ ಇರುವ ಹಣ್ಣು ತರಕಾರಿ ಸೇವನೆ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ಕಲ್ಲಂಗಡಿ ಹಣ್ಣು, ಸಿಟ್ರಿಸ್ ಹಣ್ಣುಗಳು ದೇಹದ ಜೀವಸತ್ವಗಳನ್ನು ಆರೋಗ್ಯವನ್ನು ನಿಯಂತ್ರಿಸಿ ಅವುಗಳ ಕ್ಷಮತೆಯನ್ನು ವೃದ್ಧಿಸುತ್ತದೆ ಎಂದು ತಿಳಿದುಬಂದಿದೆ.
12) ಆರೋಗ್ಯಕರ ಕೊಬ್ಬುಗಳನ್ನು ಹೆಚ್ಚು ಸೇವಿಸಬೇಕು. ಈ ಆರೋಗ್ಯಕರ ಕೊಬ್ಬುಗಳು ದೇಹದಲ್ಲಿನ ಉರಿಯೂತವನ್ನು ನಿಯಂತ್ರಿಸುತ್ತದೆ ಮತ್ತು ರೋಗಕಾರಕ ಸೂಕ್ಷ್ಮಾಣು ಜೀವಿಗಳ ವಿರುದ್ಧದ ಹೋರಾಟದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ರೋಗ ಬರದಂತೆ ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆಲಿವ್‍ಎಣ್ಣೆ, ಸಾಲ್ಮನ್ ಮೀನು, ಮೊಟ್ಟೆಗಳು, ಬೆಣ್ಣೆ ಹಣ್ಣು, ಬೆಣ್ಣೆ ಮತ್ತು ನೆಲಗಡಲೆಗಳಲ್ಲಿ ಈ ರೀತಿಯ ಆರೋಗ್ಯಕರ ಕೊಬ್ಬು ಹೆಚ್ಚು ಇರುತ್ತದೆ.
Watch this video:
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ..!
ಕೊನೆಮಾತು
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ನಮ್ಮ ಹಿರಿಯರು ಯಾವತ್ತೂ ಹೇಳುವ ಕಿವಿಮಾತು. ಈ ಮಾತು ಆರೋಗ್ಯದ ವಿಚಾರದಲ್ಲಿ ಅಕ್ಷರಶ: ನಿಜ ಎಂದರೆ ಅತಿಶಯೋಕ್ತಿಯಾಗಲಾರದು. ಹೆಚ್ಚಿನ ಎಲ್ಲಾ ರೋಗಗಳನ್ನು ನಾವು ನಮ್ಮ ಆಹಾರದ ಆಯ್ಕೆ ಮತ್ತು ಸೂಕ್ತ ಬಳಕೆಯಿಂದ ಬರದಂತೆ ತಡೆಯಬಹುದು. ಒಂದು ವೇಳೆ ರೋಗ ಬಂದರೂ, ಸೂಕ್ತ ಆಹಾರದ ಮಾರ್ಪಾಡಿನೊಂದಿಗೆ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ. ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಎನ್ನುವುದು ಅತ್ಯಂತ ಸಂಕೀರ್ಣವಾಗಿದ್ದು, ಕೇವಲ ಒಂದು ಆಚಾರದಿಂದ ಅದನ್ನು ಪ್ರಭಾವಿಸಲು ಸಾಧ್ಯವಾಗದು. ಆದರೆ ಸಾಕಷ್ಟು ವಿಟಮಿನ್‍ಗಳು, ಪೋಷಕಾಂಶಗಳು, ಖನಿಜಾಂಶಗಳು, ಜೀವದಾತುಗಳಿಂದ ಕೂಡಿರುವ ಸಮತೋಲಿತ ಆಹಾರವನ್ನು ನಿರಂತರವಾಗಿ ಸೇವಿಸುತ್ತಾ ಇದ್ದಲ್ಲಿ ಈ ರೋಗನಿರೋಧಕ ವ್ಯವಸ್ಥೆಯನ್ನು ಬಲಿಷ್ಟಗೊಳಿಸಲು ಖಂಡಿತಾ ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಆಹಾರ ಸೇವಿಸುವಾಗ ಅತ್ಯಂತ ಮುತುವರ್ಜಿ ವಹಿಸಿ ನಮ್ಮ ದೇಹದ ಆರೋಗ್ಯಕ್ಕೆ ಪೂರಕವಾದ ಆಹಾರವನ್ನೇ ಸೇವಿಸಿದ್ದಲ್ಲಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸಿ ನಾವು ನೂರು ಕಾಲ ನೆಮ್ಮದಿಯಿಂದ ಆರೋಗ್ಯವಂತರಾಗಿ ಬದುಕಲು ಖಂಡಿತಾ ಸಾಧ್ಯವಿದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
email: drmuraleemohan@gmail.com