ಕೋವಿಡ್ ಲಸಿಕೆ : ಯಾಕೆ, ಯಾವಾಗ ಮತ್ತು ಹೇಗೆ?

ಕೋವಿಡ್ ಲಸಿಕೆ- ಯಾಕೆ, ಯಾವಾಗ ಮತ್ತು ಹೇಗೆ? ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಲಸಿಕೆಗಳ ಬಗ್ಗೆ 19 ಮಹತ್ವ ಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಬಹಳಷ್ಟು ಅಡ್ಡ ಪರಿಣಾಮ ಉಂಟಾಗುತ್ತದೆ ಎನ್ನುವುದು ತಪ್ಪು ಕಲ್ಪನೆ.  ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ, ನಿಮ್ಮನ್ನು ರಕ್ಷಿಸಿಕೊಳ್ಳಿ ನಿಮ್ಮವರನ್ನೂ ರಕ್ಷಿಸಿಕೊಳ್ಳಿ.

ಭಾರತ ದೇಶದಲ್ಲಿ ಮೇ 1 ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭವಾಗಲಿದ್ದು 18 ವಯಸ್ಸಿನ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಲಸಿಕಾ ಅಭಿಯಾನ 2021 ಜನವರಿ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಿದ್ದರೂ ನಿರೀಕ್ಷಿಸಿದ ಸ್ಪಂದನೆ ದೊರೆತಿಲ್ಲ. ಮೊದಲು ವೃದ್ಧರಿಗೆ, ಆರೋಗ್ಯ ಕಾರ್ಯಕರ್ತರು, ಪೋಲಿಸರು ಹೀಗೆ ಮುಂದೆ ನಿಲ್ಲುವ ಕೋವಿಡ್ ಸೇನಾನಿಗಳಿಗೆ ಮೊದಲ ಹಂತದಲ್ಲಿ ಮತ್ತು ಎರಡನೇ ಹಂತದಲ್ಲಿ 45 ವರ್ಷದ ಮೇಲಿನವರಿಗೆ ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಲಸಿಕೆ ಬಗ್ಗೆ ಜನರಿಗೆ ಇನ್ನೂ ಗೊಂದಲ, ಅನುಮಾನ, ಭಯ, ಕಾತರ ಮತ್ತು ನಿರೀಕ್ಷೆ ಎಲ್ಲವೂ ಇದೆ.

vaccination

1. ಸಧ್ಯ ಭಾರತ ದೇಶದಲ್ಲಿ ಎರಡು ಲಸಿಕೆಗಳು ಲಭ್ಯವಿದೆ. ಕೋವಿಶೀಲ್ಡ್ ಎಂಬ ಸಿರಮ್ ಇನ್‍ಸ್ಟ್ಟಿಟ್ಯೂಟ್ ಆಫ್ ಇಂಡಿಯಾ ಇದರಿಂದ ತಯಾರಿಸಲ್ಪಟ್ಟ ಲಸಿಕೆ ಹಾಗೂ ಕೋವಾಕ್ಸಿನ್ ಎಂಬ ಭಾರತ್ ಬಯೋಟಿಕ್ ಕಂಪನಿಯಿಂದ ತಯಾರಿಸಲ್ಪಟ್ಟ ಲಸಿಕೆ ಲಭ್ಯವಿದೆ. ಇದೀಗ ಮೂರನೇ ಹಂತದ ಲಸಿಕಾ ಅಭಿಯಾನದ ಸಮಯದಲ್ಲಿ ರಷ್ಯಾ ದೇಶದಲ್ಲಿ ತಯಾರಿಸಿದ ಸ್ಪುಟ್ನಿಕ್-5 ಎಂಬ ಲಸಿಕೆಯನ್ನು ಆಮದು ಮಾಡಿಕೊಂಡಿದ್ದು, ಮೇ 1 ರಿಂದ ಲಭ್ಯವಾಗಲಿದೆ. ಲ್ಯಾನ್‍ಸೆಟ್ ನಿಯತಕಾಲಿಕ ವರದಿ ಪ್ರಕಾರ ಸ್ಪುಟ್ನಿಕ್ ಲಸಿಕೆ 92 ಶೇಕಡಾ ಪರಿಣಾಮಕಾರಿ ಎಂದು ವರದಿ ಮಾಡಿದೆ.

2. ಕೋವಿಶೀಲ್ಡ್ ಲಸಿಕೆಯಲ್ಲಿ ಎರಡು ಡೋಸ್‍ಗಳ ನಡುವಿನ ಅಂತರ 6 ರಿಂದ 8 ವಾರ ಮತ್ತು ಕೋವಾಕ್ಸಿನ್ ಲಸಿಕೆಯಲ್ಲಿ 4 ರಿಂದ 6 ವಾರಗಳ ಅಂತರ ಇರಬೇಕಾಗಿರುತ್ತದೆ. ಸ್ಪುಟ್ನಿಕ್ ಲಸಿಕೆಯಲ್ಲಿ ಎರಡು ಡೋಸ್‍ಗಳ ನಡುವೆ 21 ದಿನಗಳ ಅಂತರ ಇರುತ್ತದೆ.

3. ನಿಮಗೆ ಕೋವಿಡ್-19 ರೋಗ ಬಂದು ಧನಾತ್ಮಕ ಫಲಿತಾಂಶ ಬಂದಿದೆ ಎಂದಾದರೆ ಹಾಗೂ ರೋಗ ಲಕ್ಷಣಗಳು ಕಂಡು ಬಂದಲ್ಲಿ ನೀವು ಲಸಿಕೆ ಹಾಕಿಸಿಕೊಳ್ಳುವಂತಿಲ್ಲ. ರೋಗ ಲಕ್ಷಣಗಳು ಮಾಸಿದ ಬಳಿಕ ಕನಿಷ್ಟ 4 ವಾರಗಳ ಬಳಿಕ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ.

4. ನೀವು ಮೊದಲ ಡೋಸ್ ತೆಗೆದುಕೊಂಡ ಬಳಿಕ ನಿಮಗೆ ಕೋವಿಡ್-19 ರೋಗ ಬಂದಿದ್ದಲ್ಲಿ ಅಥವಾ ಲಕ್ಷಣಗಳು ಕಾಣಿಸಿಕೊಂಡಲ್ಲಿ 4 ವಾರಗಳ ವರೆಗೆ ಎರಡನೇ ಲಸಿಕೆ ಹಾಕಿಸಿಕೊಳ್ಳಬೇಡಿ. ನಿಮಗೆ ಮೊದಲ ಡೋಸ್ ಬಳಿಕ 4 ರಿಂದ 8 ವಾರಗಳ ಒಳಗೆ ಲಸಿಕೆ ಹಾಕಿಸಿಕೊಳ್ಳಲೇ ಬೇಕು ಎಂಬ ನಿಯಮ ಅನ್ವಯವಾಗುವುದಿಲ್ಲ. ರೋಗ ಲಕ್ಷಣಗಳು ಮಾಯವಾದ 4 ವಾರಗಳ ಬಳಿಕವೇ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು.

5. ನೀವು ಗರ್ಭಿಣಿ ಅಥವಾ ಮೊಲೆಯೂಡಿಸುವ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳಬಹುದು ಎಂದು ವಿಶ್ವಪ್ರಸೂತಿ ತಜ್ಞರ ತಂಡ ಹೇಳಿದೆ. ಆದರೆ ವೈದ್ಯರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಅತೀ ಅಗತ್ಯ. ಆದರೆ ಭಾರತ ಸರ್ಕಾರದ ಆರೋಗ್ಯ ಮಂತ್ರಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದಕ್ಕೆ ಸಮ್ಮತಿ ನೀಡಿಲ್ಲ.

6. ನೀವು ಲಸಿಕೆ ಹಾಕಿಸಿದ ಮೇಲೆಯೂ ನಿಮಗೆ ಕೋವಿಡ್-19 ರೋಗ ಬರುವ ಸಾಧ್ಯತೆ ಇದೆ. ರೋಗ ಬರಬಾರದು ಎಂಬ ನಿಯಮವೇನಿಲ್ಲ. ಕೋವಿಶೀಲ್ಡ್ ಲಸಿಕೆ ಎರಡು ಡೋಸ್ ನೀಡಿದ ಬಳಿಕ ರೋಗ ಬರುವ ಸಾಧ್ಯತೆ 0.03% ಮತ್ತು ಕೋವಾಕ್ಸಿನ್ ಲಸಿಕೆ ಎರಡು ಡೋಸ್ ನೀಡಿದ ಬಳಿಕ ಬರುವ ಸಾಧ್ಯತೆ 0.04% ಎಂದು ICMR ವರದಿಯಲ್ಲಿ ಉಲ್ಲೇಖಿಸಲಾಗಿದೆ. ನೆನಪಿರಲಿ ಎರಡೂ ಲಸಿಕೆ ಹಾಕಿಸಿದವರಿಗೆ ರೋಗದ ತೀವ್ರತೆ ಬಹಳ ಕಡಿಮೆ ಇರುತ್ತದೆ. ಆಸ್ಪತ್ರೆ ಸೇರಬೇಕಾದ ಸಾಧ್ಯತೆ ಬಹಳ ವಿರಳ ಮತ್ತು ಸಾವಿನ ಪ್ರಮಾಣ ಅತ್ಯಂತ ವಿರಳವಾಗಿರುತ್ತದೆ ಎಂದೂ ಸಾಬೀತಾಗಿದೆ. ಒಟ್ಟಿನಲ್ಲಿ ಲಸಿಕೆ ತೆಗೆದುಕೊಳ್ಳುವುದೇ ಸುರಕ್ಷಿತ ಎಂಬುದರಲ್ಲಿ ಎರಡು ಮಾತೇ ಇಲ್ಲ.

7. ಲಸಿಕೆ ಹಾಕಿಸಿದ ಬಳಿಕ ಸಾಮಾನ್ಯ ಅಡ್ಡ ಪರಿಣಾಮಗಳಾದ ಸೂಜಿ ಚುಚ್ಚಿದ ಭಾಗದಲ್ಲಿ ನೋವು, ಊತ ಮತ್ತು ಸಣ್ಣ ಜ್ವರ ಬರಬಹುದು. ಆಲಸ್ಯ ಮತ್ತು ಸುಸ್ತು ಇರಬಹುದು. ಇತರ ಇನ್ನಾವುದೇ ಅಡ್ಡ ಪರಿಣಾಮ ಇರುವುದಿಲ್ಲ.

8. ನೋವು ಮತ್ತು ಜ್ವರ ಇದ್ದಲ್ಲಿ ಪಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳಬಹುದು. ಡೈಕ್ಲೊಫೆನಕ್ ಚುಚ್ಚು ಮದ್ದು ಹಾಕಿಸಿಕೊಳ್ಳುವುದು ಸಹ್ಯವಲ್ಲ ಎಂದೂ ವರದಿಯಾಗಿದೆ. ಲಸಿಕೆ ಪಡೆದವರಲ್ಲಿ ನೋವುನಿವಾರಕ ಡೈಕ್ಲೊಫೆನಕ್ ಚುಚ್ಚು ಮದ್ದು ತೆಗೆದುಕೊಂಡ ಬಳಿಕ ಮಾರಣಾಂತಿಕವಾದ ಒಂದೆರಡು ನಿದರ್ಶನಗಳು ವರದಿಯಾಗಿದೆ. ಜಾಸ್ತಿ ನೋವು, ಯಾತನೆ ಇದ್ದಲ್ಲಿ ವೈದ್ಯರನ್ನು ಸಂದರ್ಶಿಸಿ.

9. ಲಸಿಕೆ ಪಡೆದ ಬಳಿಕ ಲಸಿಕೆಯಿಂದ ಕೋವಿಡ್-19 ರೋಗ ಬರುವ ಸಾಧ್ಯತೆ ಅತ್ಯಂತ ವಿರಳವಾಗಿರುತ್ತದೆ. ಇತರ ಕಾರಣದಿಂದ ಕೋವಿಡ್-19 ರೋಗ ಬರುವ ಸಾಧ್ಯತೆ ಅತೀ ಕಡಿಮೆ.

10. ಮಕ್ಕಳಲ್ಲಿ ಲಸಿಕೆ ಪ್ರಯೋಗ ಇನ್ನೂ ನಡೆದಿಲ್ಲ. ಯಾವುದೇ ಲಸಿಕೆಯನ್ನು ಮಕ್ಕಳಿಗೆ ನೀಡುವ ಅಗತ್ಯವಿಲ್ಲ. ಮುಂದೆ ಲಸಿಕೆ ಲಭ್ಯವಾಗಲೂಬಹುದು.

11. ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿಯೂ ಲಸಿಕೆ ಪಡೆಯಬಹುದಾಗಿದೆ. ಲಸಿಕೆ ತೆಗೆದು ಕೊಳ್ಳವುದಕ್ಕೂ ಮುಟ್ಟಿಗೂ ಯಾವುದೇ ಸಂಬಂಧವಿಲ್ಲ.

12. ಮೊದಲ ಬಾರಿ ಪಡೆದ ಲಸಿಕೆಯನ್ನೇ ಎರಡನೇ ಬಾರಿಯೂ ತೆಗೆದುಕೊಳ್ಳಬೇಕು. ಮೊದಲ ಬಾರಿ ಕೋವಿಶೀಲ್ಡ್ ಲಸಿಕೆ ಪಡೆದು ಎರಡನೇ ಡೋಸ್ ಕೋವಾಕ್ಸಿನ್ ಪಡೆಯುವಂತಿಲ್ಲ.

13. ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟಿ ಮೆದುಳು ಮತ್ತು ಹೃದಯಾಘಾÀತವಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಎರಡೂವರೆ ಲಕ್ಷದಲ್ಲಿ ಒಬ್ಬರಿಗೆ ಈ ರೀತಿ ಆಗುವ ಸಾಧ್ಯತೆ ಇದೆ. ಈ ಕಾರಣವನ್ನೇ ನೆಪವಾಗಿಟ್ಟುಕೊಂಡು ಲಸಿಕೆ ಹಾಕಿಸದೆ ಇರುವುದು ಒಳ್ಳೆಯದಲ್ಲ.

14. ಮೊದಲ ಡೋಸ್ ಪಡೆದ ಬಳಿಕ ಅಲರ್ಜಿಯಾಗಿ ತೀವ್ರ ತೊಂದರೆ ಆಗಿದ್ದಲ್ಲಿ ಎರಡನೇ ಡೋಸ್ ಪಡೆಯಬಾರದು.

15. ನೀವು ಯಾವುದೇ ಗಂಭೀರವಾದ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಚಿಕಿತ್ಸ ಪಡೆಯುತ್ತಿದ್ದಲ್ಲಿ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಲಸಿಕೆ ಪಡೆಯಬೇಕು.

16. ಇತ್ತೀಚೆಗೆ ಕೋವಿಡ್-19 ರೋಗ ಉಂಟು ಮಾಡುವ SಂಖS-ಅoಗಿ2 ವೈರಾಣುವಿನ ರೂಪಾಂತರಿ ತಳಿಗಳು ಹೊರಹೊಮ್ಮಿರುವುದರಿಂದ ಮೊದಲೇ ತಯಾರಿಸದ ಲಸಿಕೆ ಪರಿಣಾಮಕಾರಿಯಾಗಲಿಕ್ಕಿಲ್ಲ ಎಂಬ ಸಂದೇಹ ಬರುವುದು ನಿಜ. ಆದರೆ ಇದುವರೆಗೆ ವರದಿಯಾದ ಎಲ್ಲಾ ರೂಪಾಂತರಿಗಳ ಮೇಲೆ ಎರಡು ಲಸಿಕಗಳೂ ಪರಿಣಾಮಕಾರಿ ಮತ್ತು ತೀವ್ರತರವಾದ ರೋಗಲಕ್ಷಣಗಳಿಂದ ರಕ್ಷಿಸುತ್ತದೆ ಎಂದು ವರದಿ ತಿಳಿಸುತ್ತದೆ. ಈ ಕಾರಣದಿಂದ ನಿಸ್ಸಂದೇಹದಿಂದ ಲಸಕೆ ಹಾಕಿಸಿಕೊಳ್ಳಿ.

17. ನೆನಪಿರಲಿ ಲಸಿಕೆ ಎನ್ನುವುದು ಔಷಧಿಯಲ್ಲ. ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುವ ಔಷಧಿಯಾಗಿರುತ್ತದೆ. ರೋಗ ಉಂಟುಮಾಡುವ ವೈರಾಣು ದೇಹಕ್ಕೆ ದಾಳಿ ಮಾಡಿದಾಗ ಅದ ಮೇಲೆ ಉಗ್ರ ಸಮರ ಸಾರಿ ವೈರಾಣುವನ್ನು ನಿಷ್ಕ್ರಿಯಗೊಳಿಸುವ ಕಾರ್ಯ ಲಸಿಕೆ ಮಾಡುತ್ತದೆ. ಈ ಕಾರಣದಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ.

18. ಈಗ ಲಭ್ಯವಿರುವ ಎಲ್ಲಾ ಲಸಿಕೆಗಳು ಬಹಳ ಪರಣಾಮಕಾರಿ. ಈಗಿನ ವರದಿ ಪ್ರಕಾರ 60 ರಿಂದ 95 ಶೇಕಡಾ ಪರಿಣಾಮಕತ್ವ ಈ ಲಸಿಕೆ ಹೊಂದಿದೆ. ಬೇರೆ ಬೇರೆ ಲಸಿಕೆಗಳೂ ವಿಭಿನ್ನ ಪರಿಣಾಮಕತ್ವ ಹೊಂದಿದೆ. ಒಟ್ಟಿನಲ್ಲಿ ಸದ್ಯ ಲಭ್ಯವಿರುವ ಎಲ್ಲಾ ಲಸಿಕೆಗಳು ವ್ಯಕ್ತಿಯನ್ನು ಕೊರೋನಾ ವೈರಾಣುವಿನಿಂದ ರಕ್ಷಿಸುವ ಸಾಮಥ್ರ್ಯ ಹೊಂದದೆ. ಈ ಕಾರಣದಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ.

19. ಲಸಿಕೆ ಪಡೆಯುವುದರಿಂದ ಪುರುಷತ್ವಕ್ಕೆ ಪೆಟ್ಟು ಬಿದ್ದು ಮಕ್ಕಳಾಗದಿರುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ದಯವಿಟ್ಟು ಯಾವುದೇ ಪುರಾವೆ ಇಲ್ಲದೆ ಸುಳ್ಳು ಸುದ್ದಿ ವದಂತಿಗಳಿಗೆ ಕಿವಿಗೊಡದೆ ನಿಮ್ಮನ್ನು ಮತ್ತು ನಿಮ್ಮವರನ್ನು ರಕ್ಷಿಸಿಕೊಳ್ಳಿ.

ಕೊನೆ ಮಾತು:

ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋವಿಡ್-19 ರೋಗ ಬರುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಲಸಿಕೆ ಹಾಕಿಸಿಕೊಂಡ ಬಳಿಕ ಬಹಳಷ್ಟು ಅಡ್ಡ ಪರಿಣಾಮ ಉಂಟಾಗುತ್ತದೆ ಎನ್ನುವುದು ಕೂಡಾ ತಪ್ಪು ಕಲ್ಪನೆ. ಯಾವುದೇ ವೈಜ್ಞಾನಿಕ ಪುರಾವೆ ಇಲ್ಲದೆ ಇಂತಹ ಗಾಳಿ ಸುದ್ದಿಗಳಿಗೆ ಬಲಿಯಾಗಬೇಡಿ. ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ, ನಿಮ್ಮನ್ನು ರಕ್ಷಿಸಿಕೊಳ್ಳಿ ನಿಮ್ಮವರನ್ನೂ ರಕ್ಷಿಸಿಕೊಳ್ಳಿ. ಅದರಲ್ಲಿ ನಮ್ಮೆಲ್ಲರ ಹಿತ, ನೆಮ್ಮದಿ, ಶಾಂತಿ ಅಡಗಿದೆ.

dr-muralee-mohan

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!