ಕೊರೋನಾ ಲಾಕ್ ಡೌನ್ ಕೊರೋನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಸರಿಯಾದ ದಾರಿ. ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಮುಂಬರುವ ದಿನಗಳನ್ನು ಊಹಿಸಲೂ ಅಸಾಧ್ಯ.
“ನನಗೆ ಮೂರ್ನಾಲ್ಕು ಬಾರಿ ಸೀನು ಬಂದವು. ಕೊರೋನಾ ಇರಬಹುದಾ ಎಂಬ ಭಯವಾಗ್ತಿದೆ’ ಸರ್’. ‘ಗಂಟಲಲ್ಲಿ ಸ್ವಲ್ಪ ಕಿಚಿ ಕಿಚಿ ಅಂತಿದೆ. ಕೊರೋನಾ ಪರೀಕ್ಷೆ ಮಾಡಿಸ್ಕೋಬೇಕಾ ಸರ್’ ಮುಂತಾದ ಒಂದಲ್ಲ ಒಂದು ಫೋನ್ ಕರೆ ಸ್ನೇಹಿತರಿಂದಲೋ ಪರಿಚಿತರಿಂದಲೋ ಕಳೆದ ಕೆಲವು ದಿನಗಳಿಂದ ನಿತ್ಯವೂ ಬರುತ್ತಲೇ ಇರುತ್ತದೆ.”- ಹೀಗೆ ಕೇಳುವವರ ಧ್ವನಿಯಲ್ಲಿ ಕೊರೋನಾ ಭಯಕ್ಕಿಂತ ಸಾವಿನ ಭಯವೇ ಎದ್ದುಕಾಣುತ್ತದೆ. ಸಾವೆಂದರೆ ಎಂಥವರಿಗಾದರೂ ಭಯ ಸಹಜವಾದರೂ ಕೊರೋನಾ ಬಂದವರೆಲ್ಲಾ ಸಾಯುತ್ತಾರೆ ಎಂಬ ಆತಂಕವೇ ಬಹಳಷ್ಟು ಜನರ ನಿದ್ದೆಗೆಡಿಸಿದೆ; ಇಲ್ಲಸಲ್ಲದ್ದನ್ನು ಯೋಚಿಸುವಂತೆ ಮಾಡಿದೆ.
ಆದರೆ ಲಭ್ಯವಿರುವ ಮಾಹಿತಿ ಪ್ರಕಾರ, ವಾಸ್ತವವಾಗಿ ಕೊರೋನಾ ಸೋಂಕಿಗೊಳಗಾದ ಪ್ರತಿಶತ ಎಂಬತ್ತರಷ್ಟು ವ್ಯಕ್ತಿಗಳಲ್ಲಿ ಕಾಯಿಲೆಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ,ಇಲ್ಲವೆ ಲಘು ಸ್ವರೂಪದ ರೋಗಲಕ್ಷಣಗಳಿರುತ್ತವೆ. ಇನ್ನುಳಿದ ಇಪ್ಪತ್ತರಷ್ಟು ವ್ಯಕ್ತಿಗಳಲ್ಲಿ ತೀವ್ರಸ್ವರೂಪದ ನ್ಯುಮೋನಿಯಾ, ಬಹುಅಂಗಗಳ ವೈಫಲ್ಯ ಮುಂತಾದ ಕಾರಣಗಳಿಂದ ಸಾವಿನ ಹಾದಿ ಹಿಡಿಯುವವರು ಮೂರರಿಂದ ನಾಲ್ವರು ಮಾತ್ರ. ಅದರಲ್ಲೂ ತುಂಬಾ ವಯಸ್ಸಾಗಿರುವವರು, ಅನಿಯಂತ್ರಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡ ಸಮಸ್ಯೆ, ಯಾವುದೇ ಕಾರಣದಿಂದ ರೋಗನಿರೋಧಕ ಶಕ್ತಿ ಕುಂಠಿತವಾಗಿರುವುದು ಮುಂತಾದ ಸಮಸ್ಯೆಗಳಿರುವವರಲ್ಲಿ ಸಾವಿನ ಪ್ರಮಾಣ ಹೆಚ್ಚು.
See our video: ಆಂತರಿಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?
ಹಾಗಾದರೆ ಈ ಸೋಂಕಿನ ಬಗ್ಗೆ ಅಷ್ಟೊಂದು ಕಾಳಜಿ ವಹಿಸಬೇಕಾದ ಅಗತ್ಯವೇನಿದೆ? ಎಂಬ ಪ್ರಶ್ನೆಗೆ ಉತ್ತರವೆಂದರೆ ಕೊರೋನಾ ವೈರಾಣು ಬಹುಕಾಲ ವಾತಾವರಣದಲ್ಲಿ ಬದುಕುಳಿಯುವ ವಿಶೇಷ ಗುಣ ಹೊಂದಿರುವುದು ಮತ್ತು ಅತ್ಯಂತ ಕ್ಷಿಪ್ರಗತಿಯಲ್ಲಿ ದೇಶ ದೇಶಗಳನ್ನು ದಾಟಿ ವಿಶ್ವದಾದ್ಯಂತ ವ್ಯಾಪಿಸಿರುವುದು. ಇದೇ ಇಡೀ ವಿಶ್ವವನ್ನು ತಲ್ಲಣಗೊಳಿಸಿರುವುದು. ಆದರೆ ವಾಸ್ತವಾಂಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ವದಂತಿಗಳಿಗೆ ಕಿವಿಗೊಟ್ಟು, ಗೊಂದಲಕ್ಕೊಳಗಾಗಿ ಭಯದ ನೆರಳಿನಲ್ಲಿ ಬದುಕುತ್ತಿರುವವರೇ ಹೆಚ್ಚು. ಯಾವುದೇ ಕಾಯಿಲೆಯ ಕುರಿತು ಸ್ವಲ್ಪಮಟ್ಟಿನ ಭಯವಿರುವುದು ಒಳ್ಳೆಯದೇ ಆದರೂ ಅತಿಭಯ ಇನ್ನಷ್ಟು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಲ್ಲದು ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬಲ್ಲದು.
ಲಾಕ್ ಡೌನ್ ನ ಅನಿವಾರ್ಯತೆಯೇನು?
ಈಗಾಗಲೇ ಕೊರೋನಾ ವೈರಾಣುವಿನ ಸೋಂಕು ಸಾಮುದಾಯಿಕ ಹಂತವನ್ನು ತಲುಪಿಯಾಗಿದೆ. ಇದೇ ಬಹಳ ಅಪಾಯಕಾರಿಯಾದ ಹಂತ. ಈ ಹಂತದಲ್ಲಿ ಯಾರು ಕೊರೋನಾ ವೈರಾಣುವಿನ ಸೋಂಕಿತರು ಯಾರು ಸೋಂಕಿತರಲ್ಲ ಎಂದು ಗುರುತಿಸುವುದು ಕಷ್ಟಸಾಧ್ಯ. ಹಾಗಾಗಿ ಹರಡುವಿಕೆಯನ್ನು ಸಮರ್ಪಕವಾಗಿ ನಿಯಂತ್ರಿಸುವುದೇ ಪ್ರತಿಯೊಬ್ಬರ ಜವಾಬ್ದಾರಿ. ಮೇಲೆ ತಿಳಿಸಿದ ವಿಶೇಷ ಗುಣವುಳ್ಳ ಕೊರೋನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಒಂದೇ ಸರಿಯಾದ ದಾರಿ. ಇದನ್ನು ಒಂದು ಸರಳ ಲೆಕ್ಕಾಚಾರದ ಮೂಲಕ ವಿಶ್ಲೇಷಿಸೋಣ.
ಒಂದು ಸಾವಿರ ಜನಸಂಖ್ಯೆಯಿರುವ ಒಂದು ಪುಟ್ಟ ಊರಿಗೆ ಯಾವುದೋ ಮೂಲದಿಂದ ಒಬ್ಬ ಸೋಂಕಿತ ವ್ಯಕ್ತಿ ಎಂಟ್ರಿ ಪಡೆಯುತ್ತಾನೆಂದುಕೊಳ್ಳೋಣ. ಆತ ಸ್ವಯಂನಿರ್ಬಂಧ ಹೇರಿಕೊಂಡು ಪ್ರತ್ಯೇಕಿಸಿಕೊಳ್ಳದೇ ಇದ್ದರೆ ಮತ್ತು ಮುಕ್ತವಾಗಿ ಆ ಊರಿನಲ್ಲೆಲ್ಲಾ ತಿರುಗಾಡಿದನೆಂದರೆ ಏನಿಲ್ಲವೆಂದರೂ ಹತ್ತು ಜನರಿಗಾದರೂ ಸೋಂಕನ್ನು ರವಾನಿಸಿರುತ್ತಾನೆ. ಅತ್ಯಧಿಕ ಅಧಿಶಯನ ಕಾಲವನ್ನು ಹೊಂದಿರುವ ಕಾರಣದಿಂದಲೂ ನೆಗಡಿಗೆ ಸಂಬಂಧಿಸಿದ ಇತರೆ ವೈರಾಣುಗಳ ರೋಗಲಕ್ಷಣಗಳು ಮತ್ತು ಕೊರೋನಾ ವೈರಾಣುವಿನ ರೋಗಲಕ್ಷಣಗಳು ಒಂದೇ ತೆರನಾಗಿರುವುದರಿಂದಲೂ ಸೋಂಕಿನ ಅರಿವಿಲ್ಲದ ಆ ಹತ್ತು ವ್ಯಕ್ತಿಗಳು ಮತ್ತೆ ಹತ್ತರ ಲೆಕ್ಕದಲ್ಲಿ ಸುಮಾರು ನೂರು ಜನರಿಗೆ ಸೋಂಕು ರವಾನಿಸಬಲ್ಲರು. ಇದು ಹೀಗೇ ಮುಂದುವರೆಯುತ್ತಾ ಕೆಲವೇ ದಿನಗಳಲ್ಲಿ ಇಡೀ ಊರಿಗೆ ಊರೇ ಸೋಂಕಿತರಿಂದ ತುಂಬಿಹೋಗುತ್ತದೆ.
ಲಾಕ್ ಡೌನ್ ನಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಗಳಾಗಿ:
ಹಾಗಾದಾಗ ಮೇಲೆ ಹೇಳಿದ ಅಂಕಿಅಂಶಗಳ ಪ್ರಕಾರ ಆ ಊರಿನಲ್ಲಿ ಸುಮಾರು ಇನ್ನೂರು ಜನರಿಗೆ ಗಂಭೀರ ಸ್ವರೂಪದ ಸಮಸ್ಯೆಗಳಾಗುವ ಮತ್ತು ಸುಮಾರು ಮೂವತ್ತರಿಂದ ನಲವತ್ತು ಜನ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ. ಸಾವಿರ ಜನರಲ್ಲಿ ಒಮ್ಮೆಗೇ ನಲವತ್ತು ಜನ ಸಾಯುತ್ತಾರೆಂದರೆ ಅದರಿಂದುಂಟಾಗಬಹುದಾದ ಪರಿಣಾಮಗಳನ್ನು ಊಹಿಸಿಕೊಳ್ಳಿ. ಇದೇ ಲೆಕ್ಕಾಚಾರವನ್ನು ಲಕ್ಷ ಜನಸಂಖ್ಯೆಗೆ ಅನ್ವಯಿಸಿ ನೋಡಿದಾಗ ನಿಜಕ್ಕೂ ಭಯಾನಕವೆನಿಸಿಬಿಡುತ್ತದೆ. ಸೂಕ್ತ ಸಮಯದಲ್ಲಿ ಮುಂಜಾಗ್ರತೆ ವಹಿಸದಿದ್ದುರಿಂದಲೂ, ಲಾಕ್ ಡೌನ್ ಇದ್ದರೂ ಜನತೆ ನಿರ್ಲಕ್ಷ ಧೋರಣೆ ತಳೆದುದರಿಂದಲೂ, ಸೋಂಕಿತರೆಲ್ಲಾ ಒಂದೇ ಪ್ರದೇಶದಲ್ಲಿ ಬೀಡುಬಿಟ್ಟಿದುದರಿಂದಲೂ ಇಟಲಿಯಲ್ಲಿನ ಇಂದಿನ ಪರಿಸ್ಥಿತಿ ನಮ್ಮ ಕಣ್ಣಮುಂದಿದೆ.
ಇದೆಲ್ಲವನ್ನೂ ಮನಗಂಡು, ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಮುಂಬರುವ ದಿನಗಳನ್ನು ಊಹಿಸಲೂ ಅಸಾಧ್ಯ. ‘ನಾನಂತೂ ಸಾಯುವುದಿಲ್ಲ ಇನ್ಯಾರೋ ಸಾಯುತ್ತಾರೆ ಬಿಡು’ ಎಂಬ ಧೋರಣೆಯಿರುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಹಾಗೆ ಸಾವಿನ ಕುಣಿಕೆಗೆ ಕೊರಳೊಡ್ಡುವವರು ತಮ್ಮ ಆಪ್ತೇಷ್ಟರೋ ಪ್ರೀತಿಪಾತ್ರರೋ ಆಗಿರಬಹುದು ಅಥವಾ ತಾವೇ ಆಗಿರಬಹುದು. ಈ ಎಲ್ಲಾ ಸಂಗತಿಗಳನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಂಡು, ಈಗ ಸ್ವಲ್ಪ ಕಷ್ಟವೆನಿಸಿದರೂ, ಇಂಥ ಸಮಯದಲ್ಲಿ ಸರ್ಕಾರ ಘೋಷಿಸಿರುವ ಲಾಕ್ ಡೌನ್ ನಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಗಳಾಗಿ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸುವುದೇ ಜಾಣತನ.
Also Read: ಆಂತರಿಕ ರೋಗ ನಿರೋಧಕ ಶಕ್ತಿ -ಇದು ಭಾರತೀಯರಲ್ಲಿ ಹೆಚ್ಚು
ಡಾ. ಕೆ. ಬಿ. ರಂಗಸ್ವಾಮಿ
ನೆಮ್ಮದಿ, 7ನೇ ಮುಖ್ಯರಸ್ತೆ
ಜಯನಗರ ಪೂರ್ವ
ತುಮಕೂರು – 2
ಮೊ: 9880709766