ಕೊರೋನಾ ಸೈಡ್‍ಎಫೆಕ್ಟ್- ಮಕ್ಕಳಲ್ಲಾಗುತ್ತಿರುವುದೇನು? ಕಳೆದ ಮೂರು ತಿಂಗಳಿಂದ ಯುರೋಪ್, ಅಮೇರಿಕಾ, ಏಷ್ಯಾಗಳಲ್ಲಿ ಕೋವಿಡ್-19 ಸಂಬಂಧಿತ ಬಹು ಅಂಗಾಗ ಉರಿಯೂತ ಪ್ರಕರಣಗಳು ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಹೆಚ್ಚಿತ್ತಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.
ಇಡೀ ಪ್ರಪಂಚವನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೋನಾ ಇಟಲಿ, ಸ್ಪೇನ್, ಬ್ರಿಟನ್ ಮತ್ತು ಅಮೇರಿಕಾದಲ್ಲಿ ಮಕ್ಕಳಲ್ಲಿ ಒಂದು ಹೊಸ ಸಿಂಡ್ರೋಮ್‍ಗೆ ಕಾರಣವಾಗಿತ್ತು. ಇದಕ್ಕೆ ಮಲ್ಟಿಸಿಸ್ಟಮ್ ಇನ್‍ಫ್ಲಮೇಟರಿ ಸಿಂಡ್ರೋಮ್ ಎಂದು ಹೆಸರು ಇಡಲಾಗಿದೆ. ಚಿಂತೆಯ ವಿಚಾರ ಏನಂದ್ರೆ ಇದೀಗ ಭಾರತದಲ್ಲಿಯೂ ಮಕ್ಕಳ ಮೇಲೆ ಇಂತಹ ಲಕ್ಷಣಗಳು ಕಂಡು ಬರೋಕೆ ಶುರುವಾಗಿದೆ. ದಿಲ್ಲಿಯ ಏಮ್ಸ್‍ನಲ್ಲಿ ಈ ಬಗ್ಗೆ ಅಧ್ಯಯನ ಮಾಡಲಾಗಿದೆ. ಈ ವೇಳೆ ಮಕ್ಕಳಲ್ಲಿ ಮೈತುಂಬಾ ಕೆಂಪು ಗುಳ್ಳೆಗಳು ಕಂಡು ಬಂದಿದ್ದವು. ಇದು ಸಾಮಾನ್ಯವಾಗಿ ಕವಾಸಾಕಿ ಎನ್ನುವ ವಿಚಿತ್ರ ಕಾಯಿಲೆಗೆ ಹೋಲುತ್ತಿದೆ. ಈ ಕಾಯಿಲೆ ಬಂದ್ರೆ ಹೃದಯದಲ್ಲಿ ಅಪಥಮನಿ, ರಕ್ತನಾಳಗಳು ಮತ್ತು ಕ್ಯಾಪಿಲರಿಗಳಲ್ಲಿ ಉರಿಯೂತ ಸಂಭವಿಸುತ್ತದೆ.
ಎಮ್‍ಐಎಸ್-ಸಿಎಂದರೇನು?
ಮಲ್ಟಿಸಿಸ್ಟಮ್ ಇನ್‍ಫ್ಲಾಮೇಟರಿ ಸಿಸ್ಟಮ್ ಇನ್ ಚಿಲ್ಡ್ರನ್ ಹೆಸರಿನ ಸಂಕ್ಷಿಪ್ತರೂಪವೇ ಎಮ್‍ಐಎಸ್ ಸಿ. ಕೊರೋನಾ ಕಾಣಿಸಿಕೊಂಡ ಮಕ್ಕಳಿಗೆ ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಎಂಐಎಸ್-ಸಿ ಹೊಂದಿರುವ ಮಕ್ಕಳು ಕರುಳು, ಹೃದಯ, ಶ್ವಾಸಕೋಶ ಮತ್ತು ಮೂತ್ರ ಪಿಂಡಗಳಂತಹ ಅನೇಕ ಅಥವಾ ಎಲ್ಲಾ ಆಂತರಿಕ ಅಂಗಗಳಲ್ಲಿ ಉರಿಯೂತದ ಚಿಹ್ನೆಗಳೊಂದಿಗೆ ತುಂಬಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ರೋಗದಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಮಾರ್ಗವೆಂದರೆ ಕೋವಿಡ್ ಬರದಂತೆ ತಡೆಯುವ ಕ್ರಮವನ್ನೇ ಅನುಸರಿಸಬೇಕು.
ಎಮ್‍ಐಎಸ್-ಸಿ ಲಕ್ಷಣಗಳು ಯಾವುವು?
* ಮೂರು ದಿನಗಳಿಗಿಂತ ಹೆಚ್ಚು ದಿನ ಜ್ವರ ಕಾಣಿಸಿಕೊಳ್ಳುವುದು.
* ಹೊಟ್ಟೆ ನೋವು, ಅತಿಸಾರ ಅಥವಾ ವಾಂತಿ ಕಾಣಿಸಿಕೊಳ್ಳುವುದು.
* ಕುತ್ತಿಗೆ ನೋವು, ತುರಿಕೆ ಅಥವಾ ಚರ್ಮದ ಬಣ್ಣದಲ್ಲಿ ಬದಲಾವಣೆಯಾಗುವುದು.
* ಕಣ್ಣು ಕೆಂಪಗಾಗುವುದು.
* ಅತಿಯಾದ ಸುಸ್ತು, ಉಸಿರಾಟದ ತೊಂದರೆ, ಎದೆ ಉರಿಯಂತಹ ಲಕ್ಷಣಗಳು ಗೋಚರಿಸುತ್ತವೆ.
* ತುಟಿ ಅಥವಾ ಮುಖದ ಬಣ್ಣ ನೀಲಿಯಾಗಿ ಗೋಚರಿಸುವುದು ಇತ್ಯಾದಿ.
ಏನಿದು ಕವಾಸಕಿ ಸಿಂಡ್ರೋಮ್?
ಕವಾಸಕಿ ಸಿಂಡ್ರೋಮ್ ಹೆಚ್ಚಾಗಿ ಮಕ್ಕಳಲ್ಲಿ ಮಾತ್ರವೇ ಕಂಡುಬರುವ ಒಂದು ರೋಗ. ಆ ರೋಗಕ್ಕೆ ತುತ್ತಾದ ಮಕ್ಕಳಿಗೆ ಜ್ವರ ಬರುತ್ತದೆ. ಚರ್ಮದ ಮೇಲೆ ಕೆಂಪನೆಯ ಗುಳ್ಳೆಗಳು ಏಳುತ್ತವೆ. ಕಣ್ಣು ಕೆಂಪಾಗುತ್ತದೆ ಮತ್ತು ಆಯಾಸ, ಅತಿಬೇಧಿಯಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಮಕ್ಕಳು ಸಾವಿಗೀಡಾಗುವ ಸಾಧ್ಯತೆ ಇದೆ. ಜಪಾನಿನ ಶಿಶುವೈದ್ಯ ಟೋಮಿಸ್ಕಾ ಕವಾಸಕಿಯವರು ಈ ರೋಗವನ್ನು ಮೊದಲಿಗೆ ಪತ್ತೆ ಹಚ್ಚಿದ್ದರಿಂದ ಇದಕ್ಕೆ ಅವರ ಹೆಸರನ್ನು ಇಡಲಾಗಿದೆ.
ಎಮ್‍ಐಎಸ್-ಸಿ ಮತ್ತು ಕೋವಿಡ್-19 ಗೂ ಲಿಂಕ್ ಇದೆಯೇ?
ಕೋವಿಡ್ ರೋಗಕ್ಕೆ ತುತ್ತಾದ ಮಕ್ಕಳಲ್ಲಿ ತುತ್ತಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 100 ಮಕ್ಕಳಲ್ಲಿ 18 ಮಕ್ಕಳಿಗೆ ಇದೀಗ ಕವಾಸಕಿ ರೋಗ ಲಕ್ಷಣಗಳು ಕಂಡುಬಂದಿವೆ. ಇದು ವೈದ್ಯರ ಆತಂಕಕ್ಕೆ ಕಾರಣವಾಗಿದೆ. ಆದರೆ ಭಾರತವೂ ಸೇರಿದಂತೆ ಏಷ್ಯಾ, ಉತ್ತರ ಅಮೇರಿಕಾ ಹಾಗೂ ಲ್ಯಾಟಿನ್ ಅಮೇರಿಕಾಗಳಲ್ಲಿ ಕಂಡು ಬಂದಿರುವ ಈ ರೋಗ ಲಕ್ಷಣಗಳಿಗೂ ಕೋವಿಡ್-19ಗೂ ಇರುವ ಸಂಬಂಧ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ತಜ್ಞರು ಈ ಕುರಿತು ಬಹಳ ತೀವ್ರವಾಗಿ ತಲೆಕೆಡಿಸಿಕೊಂಡಿದ್ದಾರೆ.
ಯಾಕೆಂದರೆ ಕಳೆದ ಮೂರು ತಿಂಗಳಿಂದ ಯುರೋಪ್, ಅಮೇರಿಕಾ, ಏಷ್ಯಾಗಳಲ್ಲಿ ಕೋವಿಡ್-19 ಸಂಬಂಧಿತ ಬಹು ಅಂಗಾಗ ಉರಿಯೂತ ಪ್ರಕರಣಗಳು ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಹೆಚ್ಚಿತ್ತಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಕೋವಿಡ್-19 ತೀವ್ರತೆ ಇರುವಾಗ ಕಾಣಿಸಿಕೊಳ್ಳದೆ ಸೋಂಕಿನ ನಂತರದ ಬೆಳವಣಿಗೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ. ಹಾಗಾಗಿ ಬಹಳ ಗಂಭೀರವಾಗಿ ಪರಿಗಣಿಸಿರುವ ವಿಶ್ವ್ವಆರೋಗ್ಯ ಸಮುದಾಯ ಈ ನಿಟ್ಟಿನಲ್ಲಿ ತಮ್ಮ ಸಂಶೋಧನೆಗಳನ್ನು ತೀವ್ರಗೊಳಿಸಿವೆ.
Also Read: ಅಮೇರಿಕಾದಲ್ಲಿ ಹೆಚ್ಚುತ್ತಿದೆ ಖಿನ್ನತೆ – ಇದು ಕೇವಲ ಅಮೇರಿಕಾ ದೇಶವೊಂದರ ಕಥೆಯಲ್ಲ