ಕೊರೊನಾ ಫೋಬಿಯಾ – ಮಾಸ್ಕ್‌ ಮ್ಯಾನಿಯಾ…….!?

ಈಗ ಎಲ್ಲಾ ಪೇಪರಗಳಲ್ಲೂ ಕೊರೊನಾದ್ದೇ  ಸುದ್ದಿ . ಟಿವಿಯ ಯಾವುದೇ ಚಾನಲ್ ಹಚ್ಚಿದರೂ ‘ಡೆಡ್ಲಿ ಕೊರೊನಾ’, ‘ಕಿಲ್ಲರ  ಕೊರೊನಾ’, ‘ ಚೀನಾದ ಜೈವಿಕ  ಸಮರ ‘, ‘ ಚೀನಾ ಬಚ್ಚಿಟ್ಟ ರಹಸ್ಯ ‘ ಎಂಬೆಲ್ಲಾ ಶೀರ್ಷಿಕೆಯೊಂದಿಗೆ ಭಯ, ಭೀತಿ ಹುಟ್ಟಿಸುವ ವರದಿಗಳು….. ಕೊರೊನಾ ಸೋಂಕು ಡಿಸೆಂಬರ್ನಲ್ಲಿ ಉಗಮವಾಗಿ ಈಗಾಗಲೇ 195 ರಾಷ್ಟ್ರಗಳಿಗೆ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಸಾವಿಗೆ ಕಾರಣವಾಗಬಲ್ಲಷ್ಟು ಅಪಾಯಕಾರಿಯಾದ ಕೊರೊನಾ ವೈರಸ್ ದೂರದ ಚೀನಾದಲ್ಲಷ್ಟೇ ಇದೆ ಎಂದು ಜಗತ್ತಿನ ಜನ ನಿರಾಳರಾಗುವ ಸ್ಥಿತಿ ಈಗ ಉಳಿದಿಲ್ಲ. 195 ದೇಶಗಳಿಗೆ ಸೋಂಕು ವ್ಯಾಪಿಸಿದೆ. ಭಾರತಕ್ಕೂ ಕಾಲಿಟ್ಟಿದೆ. ಕರ್ನಾಟಕಕ್ಕೆ ಆತಂಕ ಹೆಚ್ಚಿಸಿದೆ.ಎಲ್ಲಡೆ ” ಹೈ-ಅಲರ್ಟ್ ” ಘೋಷಿಸಲಾಗಿದೆ.  ದೇಶದ ಎಲ್ಲೆಡೆಯೂ ಕಟ್ಟೆಚ್ಚರ ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕರೊನಾ ಸದ್ದು ಸಧ್ಯಕ್ಕೆ ಅಡಗುವಂತೆ ಕಾಣುವುದಿಲ್ಲ. ದಿನದಿಂದ ದಿನಕ್ಕೆ ಅದರ ಅಬ್ಬರ ಹೆಚ್ಚುತ್ತಲೇ ಇದೆ. ಚೀನಾದಲ್ಲಿ ಅದರ ಚೆಲ್ಲಾಟ ಪ್ರಾರಂಭವಾದಾಗಲೇ ನಾವು ಎಚ್ಚರಗೊಳ್ಳಬೇಕಿತ್ತು. ಕಟ್ಟು ನಿಟ್ಟಿನ ಮುುಂಜಾಗ್ರತಾ ಕ್ರಮ ಕೈಕೊಳ್ಳಬೇಕಾಗಿತ್ತು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಓಡಾಡು ಜಾಯಮಾನದವರು ನಾವು. ಹೀಗಾಗಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲಿ ವಯೋವೃದ್ಧರ ಸಂಖ್ಯೆ ಸಾಕಷ್ಟಿದೆ. ಅಪೌಷ್ಟಿಕತೆಯ ತಾಂಡವ ನೃತ್ಯ ನಡದೇ ಇದೆ. ದೀರ್ಘಕಾಲಿಕ ಸೋಂಕಿಗೀಡಾದವರಿಗೂ ಬರವಿಲ್ಲ. ಸಕ್ಕರೆ ಕಾಯಿಲೆಯ ರಾಜಧಾನಿ. ಟಿ.ಬಿ., ಬಿ.ಪಿಯವರಿಗೂ, ರೋಗ  ನಿರೋಧಕ ಶಕ್ತಿ ಕುುಗ್ಗಿದವರಿಗೂ ಕೊರತೆಯಿಲ್ಲ. ಇವೆಲ್ಲ ರೋಗ ತ್ವರಿತವಾಗಿ ಹರಡಲು ಸೂಕ್ತ ಭೂಮಿಕೆ ಒದಗಿಸುತ್ತವೆ.

ಲಸಿಕೆ, ಔಷಧವಿದ್ದರೆ ಸಾಕೆ?

ಸಧ್ಯ ಕೊರೊನಾಕ್ಕೆ ಔಷಧ ಇಲ್ಲ. ಲಸಿಕೆಯೂ ಇಲ್ಲ. ನಿಜ. ಅದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ದೂರದರ್ಶನದ ಯಾವುದೇ ಚಾನಲ್ ಹಚ್ಚಿದರೂ ಭಯ ಬೀಳುವ ಸುದ್ದಿ ಬಿತ್ತರಗೊಳ್ಳುತ್ತಿವೆ. ಇದು ಜನರಲ್ಲಿ ಭಯದ ಬೀಜ ಬಿತ್ತಿದೆ. ಔಷಧ ಲಭ್ಯವಿರುವ ರೋಗಗಳ ಗತಿ ನೋಡಿ. ಕ್ಷಯ ರೋಗವನ್ನು ಗುಣಪಡಿಸಬಲ್ಲ ಔಷಧಿಗಳು ಸಾಕಷ್ಟು ಇವೆ. ಆದರೂ, ಪ್ರತಿವರ್ಷ 4.5 ಲಕ್ಷ ಜನರು ಸಾಯುತ್ತಿದ್ದಾರೆ. ಅಂದರೆ ದಿನವೊಂದಕ್ಕೆ ಸರಾಸರಿ 1200 ಜನರು. ಔಷಧಿಗಳು ಇದ್ದರೂ  ಮಧುಮೇಹದಿಂದ ಸಾಯುವವರ ಸಂಖ್ಯೆ ವರ್ಷಕ್ಕೆ 2.5 ಲಕ್ಷ. ದಮ್ಮು, ಕೆಮ್ಮುಗಳಿಂದ 7.8 ಲಕ್ಷ ಜನರು ಅಸುನೀಗಿದರೆ, ಹುಚ್ಚು ನಾಯಿಯ ಕಡಿತದಿಂದ ಬರುವ ರೇಬಿಸ್ ರೋಗಕ್ಕೆ ನೂರಕ್ಕೆ ನೂರು ವಾಸಿಮಾಡಬಹುದಾದ ಲಸಿಕೆ ಲಭ್ಯವಿದ್ದಾಗಲೂ ಪ್ರತಿ ವರ್ಷ ಅಂದಾಜು 20 ಸಾವಿರ ಜನರು ರೇಬಿಸ್ ದಿಂದ ಸಾಯುತ್ತಿದ್ದಾರೆ. ಅತಿಸಾರದಿಂದ ಪ್ರತಿ ದಿನ ಅಂದಾಜು 250 ಮಕ್ಕಳು ಮರಣ ಹೊಂದುತ್ತಿದ್ದಾರೆ. ಔಷಧ, ಲಸಿಕೆಗಳಿದ್ದರೆ ಸಾಕೆ?
ಇಂತಹ ನಿತ್ಯ ದುರಂತಗಳಿಗೆ, ಅದರಿಂದಾಗುವ ರಾಷ್ಟ್ರೀಯ ಅಪಮಾನಕ್ಕೆ ಎಂದೂ ತಲೆಕೆಡಿಸಿಕೊಳ್ಳದ ನಮ್ಮ ಸಮಾಜ ಕೊರೊನಾ ವೈರಸ್ ಗೆ ಇಷ್ಟೇಕೆ ಹೌಹಾರಿದೆ? ಹಾಗೆ ನೋಡಿದರೆ ಕೊರೊನಾ ತೀರ ದುರ್ಬಲವಾದ ವೈರಸ್. ಹಾಗೆಂದು ನಿರ್ಲಕ್ಷಿಸುವಂತೆಯೂ ಇಲ್ಲ. ಎಚ್ಚರಿಕೆ ಇರಬೇಕು. ಖಂಡಿತವಾಗಿಯೂ ಅಂಜಿಕೆ ಬೇಡ. ಭಾರತದಲ್ಲಿ ಕೊರೊನಾ ವೈರಸ್‌ಗಿಂತ ಮಾಸ್ಕ್‌ ಧರಿಸುವ ಹುಚ್ಚು ಹೆಚ್ಚಾಗಿದೆ. ಮಾಸ್ಕ್‌ ಧರಿಸಿದವರೆಲ್ಲಾ ಬದುಕುವುದಿಲ್ಲ. ಮಾಸ್ಕ ಧರಿಸುವುದು ಒಂದು ಫ್ಯಾಷನ್ ಆಗುವುದು ಬೇಡ .

coronavirusಸೋಂಕಿನ ಖಚಿತ ಪ್ರಕರಣ ಸಂಖ್ಯೆಯೂ ಚೀನಾದಲ್ಲಿ, ಬೇರೆ ದೇಶಗಳಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚೀನಾದಲ್ಲಿ ಸೀನಿದರೆ ಅಮೆರಿಕಾದವರ ಮೂಗಿಗೆ ಕರವಸ್ತ್ರ ಬೇಕು ಎನ್ನುವಂತಾಗಿದೆ.  ಸ್ವರ್ಗದಂತಿದ್ದ ಚೀನಾ ಸ್ಮಶಾನದಂತಾಗಿದೆ. ಪ್ರವಾಸೋದ್ಯಮ ನೆಲ ಕಚ್ಚಿದೆ. ಉತ್ಪಾದನೆ ಕುಗ್ಗಿದೆ. ಫ್ಯಾಕ್ಟರಿಗಳ ಸದ್ದು ಸ್ಥಬ್ದವಾಗಿವೆ. ಉದ್ಯೋಗಿಗಳಿಗೆ ರಜಾ ನೀಡಿವೆ. ಈ ರೋಗಕ್ಕೆ ನಿಶ್ಚಿತ ಚಿಕಿತ್ಸೆ ಇಲ್ಲ. ಲಸಿಕೆಯೂ ಲಭ್ಯವಿಲ್ಲದ್ದರಿಂದಾಗಿ ಜನರಲ್ಲಿ ಜೀವ ಭಯ ಹೆಚ್ಚಿದೆ. ಈ ಡ್ರ್ಯಾಗನ್ ಹಿಡಿತಕ್ಕೆ ಚೀನಾ ತತ್ತರಿಸಿ ಹೋಗಿದೆ. ಮುಂಜಾಗ್ರತೆಯೇ ಮದ್ದಾಗಿದೆ.

‘ಡ್ರಾಪ್ ಲೆಟ್ ಇನಫೆಕ್ಶನ್ ‘ತಡೆಗೆ ಮುಖಕ್ಕೆ ಮಾಸ್ಕ್‌ ಧರಿಸುವ ಮೇನಿಯಾಕ್ಕೆ ಜನ ಬಲಿಯಾಗಿದ್ದಾರೆ. ಕೊರೊನಾ ವೈರಸ್ ಕೆಮ್ಮು ಅಥವಾ ಸೀನಿನಿಂದ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಬಹುದು ! ಮರಣಾಂತಿಕ ಕೊರೊನಾ ವೈರಸ್ ಬಗ್ಗೆ ಎಚ್ಚರಿಸಿದ್ದ ವುಹಾಂಗ್ ನಗರದ ನಿವಾಸಿಯಾದ ವೈದ್ಯ ಲಿಯಾಂಗ್ ಸೋಂಕಿಗೆ ಬಲಿಯಾಗಿದ್ದಾನೆ. ಕೊರೊನಾ ಸೋಂಕಿನ ದಾಹ ಇನ್ನೂ ತೀರಿಲ್ಲ. ಮರಣಮೃದಂಗ ಮುಂದು ವರೆದಿದೆ.
ವಿವಿಧ ದೇಶಗಳಲ್ಲಿ ಈಗ ಮಾಸ್ಕ್‌ಗೆ ಬೇಡಿಕೆ ಹೆಚ್ಚಾಗುತ್ತಲಿದೆ. ಜಗತ್ತಿನೆಲ್ಲೆಡೆ ಮಾಸ್ಕ್‌ ಕೊರತೆ ಉಂಟಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಹೇಳಿದ್ದಾರೆ. ಎನ್ 95 ಸುರಕ್ಷಾ ಮಾಸ್ಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಿಂದೆ ಹಂದಿಜ್ವರದ ಹಾವಳಿ ಎದ್ದಾಗಲೂ ಮುಖದ ಮಾಸ್ಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಈಗಿನ ಸ್ಥಿತಿ ಅದಕ್ಕಿಂತ ಭಿನ್ನವಾಗಿಲ್ಲ. ಎನ್95 ಮಾಸ್ಕ್‌ಗಳನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಬಳಸಲಾಗುತ್ತದೆ. ಮೂರು ಮೈಕ್ರಾನ್ ಅಥವಾ ಅದಕ್ಕಿಂತ ದೊಡ್ಡ ಕಣಗಳು ಉಸುರಿನ ಸಂಪರ್ಕಕ್ಕೆ ಬಾರದಂತೆ ತಡೆಯುವ ಸಾಮರ್ಥ್ಯ ಇದಕ್ಕಿದೆ. ಎನ್95 ಮಾಸ್ಕ ಶೇ.95 ದಷ್ಟು ಸಣ್ಣ ಕಣಗಳನ್ನು ತಡೆಯುವುದು.   ಹೀಗಾಗಿ ಇದು ದುಬಾರಿ. ಆದರೂ ಜನ ಅದನ್ನೇ ಕೇಳುತ್ತಿದ್ದಾರೆ.

ಮಾಸ್ಕ ಬಳಕೆ ಹೇಗೆ ?

ಜಾಗತಿಕ ಆರೋಗ್ಯ ಸಂಸ್ಥೆ ಮಾಸ್ಕ ಬಳಕೆಯ ಬಗ್ಗೆ ಮಾರ್ಗದರ್ಶನ ಮಾಡಿದೆ . ಅವುಗಳನ್ನು ಪಾಲಿಸಿದಾಗ ಮಾತ್ರ ಅದರ ಪ್ರಯೋಜನ ಆಗುವುದೆಂಬುದನ್ನು ಬಳಕೆದಾರರು ಮರೆಯಬಾರದು.

  • ಆರೋಗ್ಯವಂತರು ಮಾಸ್ಕ್‌ ತೊಡುವ ಅಗತ್ಯವಿಲ್ಲ. ಕೊವಿಡ್ 19 ರೋಗಿಯ ಆರೈಕೆ ಮಾಡುತ್ತಿದ್ದರೆ ಮಾತ್ರ ಮಾಸ್ಕ ಬಳಸಿ.
  • ಮಾಸ್ಕ ಮೂಗು, ಬಾಯಿ, ಗದ್ದವನ್ನು ಸಂಪೂರ್ಣವಾಗಿ ಮುಚ್ಚಿರಬೇಕು.ಅದರ ಮೇಲ್ಭಾಗ ಮೂಗಿನ ಕಂಬಿಯ ಮೇಲೆ ಸರಿಯಾಗಿ ಆವರಿಸಿಕೊಂಡಿರಬೇಕು.
  • ಮಾಸ್ಕ್‌ನ ಕಟ್ಟುವ ಪಟ್ಟಿಗಳಲ್ಲಿ, ಮೇಲಿನದು ಕಿವಿಯ ಮೇಲೆ ಇರಲಿ, ಕೆಳಗಿನದನ್ನು ಕತ್ತಿನ ಹಿಂಭಾಗದಲ್ಲಿ ಇಟ್ಟುಕೊಳ್ಳಬೇಕು. ಕಟ್ಟುವ ಪಟ್ಟಿಗಳಿಲ್ಲದ ಮಾಸ್ಕಿನ ಎರಡೂ ಬದಿಯಲ್ಲಿರುವ ಬಳೆ ಆಕಾರದ ರಿಂಗ್ ಗಳನ್ನು ಕಿವಿಯ ಹಿಂಭಾಗಕ್ಕೆ ಕೂಡುವಂತೆ ಹಾಕಬೇಕು.
  • ಮಾಸ್ಕಿನ ಎರಡೂ ಬದಿಗೆ ಎಳ್ಳಷ್ಟೂ ‘ ಗ್ಯಾಪ್ ‘ ಇರದಂತೆ ನೋಡಿಕೊಳ್ಳಬೇಕು. ಮಾಸ್ಕ್‌ ಯಾವ ಕಾರಣಕ್ಕೂ ಕತ್ತಿನಿಂದ ನೇತಾಡುವಂತೆ ಇರಬಾರದು.
  • ಆರು ತಾಸುಗಳ ವರೆಗೆ ಬಳಸಿದ ನಂತರ ಮಾಸ್ಕ ಸಾಮಾನ್ಯವಾಗಿ ಹಸಿಯಾಗುವುದು. ಆಗ ಅದನ್ನು ಬದಲಿಸಲು ಮರೆಯಬಾರದು.
  • ಬಳಸಿ ಬೀಸಾಡುವ ಮಾಸ್ಕಗಳನ್ನು ಯಾವುದೇ ಕಾರಣಕ್ಕೂ ಮರುಬಳಕೆ ಮಾಡಬಾರದು.
  • ಮಾಸ್ಕನ್ನುಕಳಚುವಾಗ ಅತ್ಯಂತ ಕಾಳಜಿ ವಹಿಸುವುದು ಅಗತ್ಯ. ಮಾಸ್ಕಿನ ಹೊರಾವರಣದಲ್ಲಿ ಸೋಂಕುಕಾರಕ ವೈರಸ್‌ಗಳ ಶೇಖರಣೆಯಾಗುವ ಸಾಧ್ಯತೆ ಇರುವುದರಿಂದ ಆ ಭಾಗವನ್ನು ಮುಟ್ಟದಂತೆ ಎಚ್ಚರಿಕೆ ವಹಿಸಬೇಕು. ಕಳಚಿದ ಮಾಸ್ಕ್‌ ಸೋಂಕಿನ ಆಗರ ಆಗಿರುವ ಸಾಧ್ಯತೆಯಿರುವುದರಿಂದ ಅದನ್ನು ಎಲ್ಲಿಬೇಕಾದಲ್ಲಿ ಬೀಸಾಡಬಾರದು. ಅದರಲ್ಲಿರುವ ಸೋಂಕು ನಿವಾರಣೆಗಾಗಿ 5% ಬ್ಲಿಚಿಂಗ್ ಪೌಡರ್ ದ್ರಾವಣ ಇಲ್ಲವೆ 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಬೇಕು. ಕೂಡಲೇ ಮುಚ್ಚಿದ ಕಸದ ಬುಟ್ಟಿಯಲ್ಲಿ ಹಾಕಿ ಕೈ ತೊಳೆದುಕೊಳ್ಳಿ.
  • ಮಾಸ್ಕ್‌ ಧರಿಸುವ ಮುನ್ನ ಆಲ್ಕೋಹಾಲ್ನಿಂದ ತಯಾರಿಸಿದ ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸಾಬೂನು ಮತ್ತು ನೀರಿನಲ್ಲಿ ಕೈ ತೊಳೆದುಕೊಳ್ಳಿ.
  • ಮಾಸ್ಕ್‌ ಬಳಸುವಾಗ ಅದನ್ನು ಮುಟ್ಟುವುದು ಸರಿಯಲ್ಲ. ಅಕಸ್ಮಾತ್ ಮುಟ್ಟಿದರೆ ತಕ್ಷಣ ಕೈಗಳನ್ನು ಸಾಬೂನು ಮತ್ತು ನೀರಿನಲ್ಲಿ ಕೈ ತೊಳೆದುಕೊಳ್ಳಿ.

ಮಾಸ್ಕ್‌ನ್ನು 6 ತಾಸಿಗಿಂತ ಹೆಚ್ಚಿಗೆ ಬಳಸುವುದರಿಂದ ಅಥವಾ ಮರುಬಳಕೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುವುದೆಂಬುದನ್ನು ಮರೆಯಬೇಡಿ. ಭಾರತದಲ್ಲಿ ಕೊರೊನಾ ವೈರಸ್ ಗಿಂತ ಮಾಸ್ಕ್‌ ಮೆನಿಯಾ ಜೋರಾಗಿ ಹಬ್ಬುತ್ತಿದೆ. ರೋಗಿಯೊಬ್ಬ ನೇರವಾಗಿ ಸೀನಿದರೆ ಮಾತ್ರ ನೀವು ಮಾಸ್ಕ ಧರಿಸಿದ್ದರೂ ಅಷ್ಟೇನೂ ಪ್ರಯೋಜನವಿಲ್ಲ. ಏಕೆಂದರೆ ಕಣ್ಣುರೆಪ್ಪೆ, ಹಣೆ, ಕೆನ್ನೆ, ಕಿವಿಯ ಮೇಲೆ ವೈರಸ್ ಕೂತಿರಬಹುದು. ನೀವು ರೋಗಿಯಾಗಿದ್ದರೆ ಅಥವಾ ಆಸ್ಪತ್ರೆಯ ಸಿಬ್ಬಂದಿಯಾಗಿದ್ದರೆ ಮಾಸ್ಕ್‌ನ್ನು ಖಂಡಿತ ತೊಡಿ. ನಿಮಗೆ ಜ್ವರದ ಸೋಂಕು ಇಲ್ಲವಾಗಿದ್ದರೆ ಭಯದ ಮಾಸ್ಕ್‌ನ್ನು ಬದಿಗಿಟ್ಟು ನಿಮ್ಮ ಕೈ ಬಾಯಿ ಶುದ್ಧ ಇಟ್ಟುಕೊಳ್ಳಿ. ಅದಂತೂ ಎಲ್ಲ ಕಾಲದಲ್ಲೂ ಎಲ್ಲ ಅರ್ಥದಲ್ಲೂ ಒಳ್ಳೆಯದು.

ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿ, ಐ.ಸಿ.ಯು ಮತ್ತು ‘ ಕ್ರಿಟಿಕಲ್ ಕೇರ್ ‘ ಘಟಕಗಳಲ್ಲಿ ಕಾರ್ಯ ನಿರ್ವಹಿಸುವವರು, ಪ್ರಯೋಗಾಲಯದಲ್ಲಿ ಕೆಲಸ ಮಾಡುವವರು, ಮೂಗಿನಲ್ಲಿ ನಳಿಕೆ ಮುಖಾಂತರ ಆಕ್ಸಿಜನ್ ನೀಡುವವರು, ಗಂಟಲಲ್ಲಿ ಸಂಗ್ರಹವಾದ ಸ್ರವಿಕೆಗಳನ್ನು ಹೀರಿ ತಗೆಯುವ ‘ ಸಕ್ಸನ್ ಪಂಪ್ ‘ಬಳಸುವವರು ಎನ್ 95 ಮಾಸ್ಕ ಧರಿಸಬೇಕು. ಸ್ಕ್ರೀನಿಂಗ್ ಕೇಂದ್ರಗಳಲ್ಲಿ ಕೆಲಸ ಮಾಡುವವರು, ಸರ್ವೇಗಳಲ್ಲಿ ತೊಡಗಿದ ಆರೋಗ್ಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ವೃತ್ತಿನಿರತ ಖಾಸಗಿ ಖಾಸಗಿ ವೈದ್ಯರು, ಆಸ್ಪತ್ರೆಯಲ್ಲಿ ಕೆಲಸ ಮಾಡುವವರು ಮತ್ತು ರೋಗಿಗಳನ್ನು ಕರೆದುಕೊಂಡು ಹೋಗುವ ಆಂಬ್ಯುಲೆನ್ಸ್ ಸಿಬ್ಬಂದಿ ಮೂರು ಪದರಿನ ಸರ್ಜಿಕಲ್ ಮಾಸ್ಕ್‌ ಧರಿಸಬೇಕು.
ಇಷ್ಟು ದಿನ ಜನರಿಗೆ ಆರೋಗ್ಯದ ಪಾಠ ಮಾಡುತ್ತಿದ್ದ, ನಿಮ್ಮನ್ನು ಕೀಟಾಣುಗಳಿಂದ ರಕ್ಷಿಸಲೆಂದೇ ನಾವು ಕಂಪನಿ ಆರಂಭಿದ್ದೇವೆ ಎಂಬಂತೆ ಬಿಂಬಿಸಿ ಜಾಹೀರಾತು ನೀಡುತ್ತಿದ್ದ ಕಂಪನಿಗಳ ಉತ್ಪನ್ನಗಳು ದರ ಹೆಚ್ಚಿಸಿಕೊಂಡು ಕುಳಿತಿವೆ. ಇಷ್ಟು ದಿನ ಸ್ಯಾನಿಟೈಜರ್ ಬಳಸಿ, ಕೈಯನ್ನು ಉಜ್ಜಿ ದಿನಕ್ಕೆ ಇಪ್ಪತ್ತು ಬಾರಿ ಕೈತೊಳೆದುಕೊಳ್ಳಿ ಎನ್ನುತ್ತಿದ್ದರೂ, ಜನ ಅಷ್ಟು ಲಕ್ಷ್ಯ ಕೊಡುತ್ತಿರಲಿಲ್ಲ. ಈಗ ಜನಕ್ಕೆ ಅಗತ್ಯ ಇರುವಾಗ ಅವರು ದರ ಏರಿಸಿ, ಮಜಾ ನೋಡುತ್ತಿದ್ದಾರೆ. ನಾವೇನೂ ಕಡಿಮೆ ಇಲ್ಲ. ನಾವು ಇಂಥಹ ಸಂದರ್ಭದಲ್ಲಿ ಅನಗತ್ಯ ಆತಂಕ ಪ್ರದರ್ಶಿಸುತ್ತೇವೆ ! “Maintain a healthy lifestyle – including proper diet, sleep, exercise & contacts with loved ones at home, other family and friends. Don’t use smoking, alcohol or drugs to deal with emotions ” ಈ ಸಂದರ್ಭದಲ್ಲಿ   ಜಾಗತಿಕ ಆರೋಗ್ಯ ಸಂಸ್ಥೆ ನೀಡಿರುವ ಸಲಹೆ ಸೂಕ್ತ ಮತ್ತು ಸಮಯೋಚಿತ .
ಹೆಚ್ಚು ದರಕ್ಕೆ ಮಾರಾಟ ಮಾಡುವ ಮಾಸ್ಕಗಳನ್ನು ವಶಪಡಿಸಿಕೊಂಡು, ಅವುಗಳನ್ನು ನ್ಯಾಯಯುತ ದರಕ್ಕೆ ಜನರಿಗೆ ಸಿಗುವಂತೆ ಸರಕಾರ ಮಾಡಬೇಕು. ಹೆಚ್ಚು ದರಕ್ಕೆ ಮಾರಾಟ ಮಾಡುವುದು ಅಪರಾಧ. ಜನರ ಭಯವನ್ನು ಅಂಗಡಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾರಿಗೆ ಏನಾದರೂ ಸರಿ, ಜನ ಸತ್ತರೂ ಸರಿ ನಾನು ಮಾತ್ರ ಲಾಭ ಮಾಡಿಕೊಳ್ಳಬೇಕು ಎಂಬ ಮನಸ್ಥಿತಿ ಕೊರೊನಾಕ್ಕಿಂತ ಅಪಾಯಕಾರಿ! ನಮ್ಮ ಜನ ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚು ಹೆದರುತ್ತಾರೆ. ಸಮೂಹ ಸನ್ನಿ ಕರೊನಾಕ್ಕಿಂತ ಅಪಾಯಕಾರಿ!!

ಜನ ಮಾಸ್ಕ್‌ ಮೋಡಿಗೆ ಮರುಳಾಗಿದ್ದಾರೆ. ದೂರದರ್ಶನದಲ್ಲಿ, ಮಾಧ್ಯಮಗಳಲ್ಲಿ ಪೋಟೊ ನೋಡಿ ಮುಖಕ್ಕೊಂದು ಮಾಸ್ಕ್‌ ಧರಿಸುವ ತರಾತುರಿಯಲ್ಲಿದ್ದಾರೆ. ಗುಣಮಟ್ಟ ಕೇಳುವುದಿಲ್ಲ. ಬೆಲೆ ವಿಚಾರಿಸುವುದಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿ ತರಕಾರಿಗಳಂತೆ, ಹಣ್ಣುಹಂಪಲುಗಳಂತೆ ರಾಶಿ ರಾಶಿ ಹಾಕಿಕೊಂಡು ಜನರಿಗೆ ಮಾಸ್ಕ್‌ ಮಾರುತ್ತಿದ್ದಾರೆ. ಜೀವಭಯದಿಂದ ಜನ ಸಿಕ್ಕ ಮಾಸ್ಕ್‌  ಕೊಳ್ಳುತ್ತಿದ್ದಾರೆ. ಜನರ ಜೀವಭಯವನ್ನೇ ಬಂಡವಾಳವಾಗಿಸಿಕೊಂಡ ಕಂಪನಿಗಳು ಹಣ ಮಾಡುತ್ತಿವೆ. ಎಲ್ಲದಕ್ಕೂ ಬೆಲೆಯಿರುವ ಈ ದೇಶದಲ್ಲಿ ಜೀವಕ್ಕೆ ಕವಡಿ ಕಿಮ್ಮತ್ತಿಲ್ಲ. ಕಳಪೆ ಮಾಸ್ಕ್‌ ಧರಿಸಿದ ಜನಕ್ಕೆ ಸುಳ್ಳು ಸುರಕ್ಷಾ ಮಾಸ್ಕ್‌ ಧರಿಸಿದ್ದಾರೆಂಬುದರ ಅರಿವಿಲ್ಲ. ಇವೆಲ್ಲವುಗಳ ಲಾಭವನ್ನು ಕೊರೊನಾ ಪಡೆಯುತ್ತಿರುವುದು ಸುಳ್ಳಲ್ಲ. ಜನರಿಗೆ ವಿಧಿಯಾಗಿರುವ ಕೊರೊನಾ ಬಹುರಾಷ್ಟ್ರೀಯ ಕಂಪನಿಗಳಿಗೆ ಒಂದು ದೊಡ್ಡ ನಿಧಿಯಾಗಿದೆ.
ಎಫ಼್. ಡಿ.ಎ. ಮಾನ್ಯತೆ ಹೊಂದಿರುವ ಮಾಸ್ಕ್‌ಗಳನ್ನೇ ಬಳಸಿ ನಿಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸುವ ಮೊದಲು ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಕೂಡ ತೆಗೆದುಕೊಂಡರೆ ಒಳ್ಳೆಯದು. ಅವೆಂದರೆ-

  • ನೀವು ಏನಾದರೂ ಮುಟ್ಟಿದರೆ ಸೋಪು ಬಿಸಿನೀರಿನಿಂದ ಕೈ ತೊಳೆಯಿರಿ.
  • ಮೂಗು, ಮುಖ ಮುಟ್ಟುವುದನ್ನು ಕಡೆಗಣಿಸಿ. ಕಣ್ಣು ಉಜ್ಜಿಕೊಳ್ಳಬೇಡಿ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
  • ಅನಾರೋಗ್ಯ ಪೀಡಿತ ವ್ಯಕ್ತಿಗಳಿಂದ ದೂರವಿರಿ.

“Our greatest enemy right now is not the virus itself, it’s fear, rumours & stigma ” ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರಾದ ಟೆಡ್ರೊಸ್ ಅಧಾನೊಮ್ ಘೆಬ್ರಿಯೊಸಸ್ ಹೇಳಿರುವುದು ಅರ್ಥಪೂರ್ಣ ಅಲ್ಲವೇ?

dr Karaveeraprabhu-Kyalakonda.

ಡಾ.ಕರವೀರಪ್ರಭು ಕ್ಯಾಲಕೊಂಡ
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ
Mob:9448036207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!