ಕೊರೊನಾ ಅವಾಂತರ; ನಡುವೆ ಪ್ರೀತಿ, ಸೌಹಾರ್ದತೆಗಳಿಗೆ ಮರುಜೀವ

ಕೊರೊನಾ ಅವಾಂತರ ಅಷ್ಟಿಷ್ಟಲ್ಲ. ಅವನನ್ನು ಮಣಿಸಬಲ್ಲ ಒಂದೇ ಒಂದು ಪ್ರಬಲ ಅಸ್ತ್ರವೆಂದರೆ ಒಂದು ಪರಿಣಾಮಕಾರಿ ಲಸಿಕೆ.ಋಣಾತ್ಮಕ ಅಂಶಗಳ ನಡುವೆಯೂ ಅವನು ಮನುಷ್ಯರಿಗೆ ಒಂದಿಷ್ಟು ಒಳ್ಳೆಯದನ್ನೂ ಮಾಡಿದ್ದಾನೆ. ಕೌಟುಂಬಿಕ ಪ್ರೀತಿ, ಸೌಹಾರ್ದತೆಗಳಿಗೆ ಮರುಜೀವ ನೀಡಿದ್ದಾನೆ.

ಕೊರೊನಾ ಅವಾಂತರ; ನಡುವೆ ಪ್ರೀತಿ, ಸೌಹಾರ್ದತೆಗಳಿಗೆ ಮರುಜೀವ

‘ಕೊರೊನಾ’ ಎಂಬ ಮೂರಕ್ಷರದ ಮನುಕುಲದ ಶತ್ರು ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಕೆಲವೇ ತಿಂಗಳುಗಳಲ್ಲಿ ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿದ್ದಾನೆ ಈ ಪರಮವೈರಿ. ಎಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾನೆ. ಆರ್ಥಿಕ ಅಧಃಪತನಕ್ಕೆ ಕಾರಣನಾಗಿದ್ದಾನೆ. ಅಸಂಖ್ಯಾತ ನಿರುದ್ಯೋಗಿಗಳನ್ನು ಸೃಷ್ಟಿಸಿದ್ದಾನೆ. ಮಕ್ಕಳು ಮರಿಗಳನ್ನು ಅನಾಥರನ್ನಾಗಿಸಿದ್ದಾನೆ. ಕೂಳಿಗಾಗಿ ಪರದಾಡುವಂತೆ ಮಾಡಿದ್ದಾನೆ. ಎಷ್ಟೋ ಜನರ ಮಾನಸಿಕ ಅಸ್ವಸ್ಥತೆಗೆ ಕಾರಣನಾಗಿದ್ದಾನೆ. ದೇವರು ಬೀಗ ಜಡಿದುಕೊಂಡು ಗುಡಿಯೊಳಗೇ ಬಂಧಿಯಾಗುವಂತೆ ಮಾಡಿದ್ದಾನೆ….

ಮಣಿಸಬಲ್ಲ  ಪ್ರಬಲ ಅಸ್ತ್ರವೆಂದರೆ ಒಂದು ಪರಿಣಾಮಕಾರಿ ಲಸಿಕೆ:

ಈ ವೈರಿ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವವನಂತೆಯೂ ಕಾಣುತ್ತಿಲ್ಲ. ಅವನು ತಾನಾಗಿಯೇ ದುರ್ಬಲನಾಗಿ ನೆಲಕಚ್ಚುವಂತಾಗಬೇಕು. ಸದ್ಯಕ್ಕೆ ಅದು ಸುಲಭಸಾಧ್ಯವೆನಿಸುತ್ತಿಲ್ಲ. ಏಕೆಂದರೆ ಅವನ ಸಂಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಅರ್ಥೈಸಿಕೊಳ್ಳಲು ಎಂಥ ಘಟಾನುಘಟಿಗಳಿಗೂ ಇದುವರೆಗೆ ಸಾಧ್ಯವಾಗಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಬಗೆಯ ಶಕ್ತಿ ಪ್ರದರ್ಶನ ಅವನದು. ಅಲ್ಲಲ್ಲಿ ಅವನ ಶಕ್ತಿ ಕೊಂಚ ಉಡುಗಿದಂತೆ ಕಂಡರೂ ಯಾವಾಗ, ಎಲ್ಲಿ ಮತ್ತೆ ಮೈಕೊಡವಿಕೊಂಡು ಮುಗಿಬೀಳುತ್ತಾನೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅಂಥ ಚಾಣಾಕ್ಷನವ.

ಅವನನ್ನು ಮಣಿಸಬಲ್ಲ ಒಂದೇ ಒಂದು ಪ್ರಬಲ ಅಸ್ತ್ರವೆಂದರೆ ಒಂದು ಪರಿಣಾಮಕಾರಿ ಲಸಿಕೆ. ಅದರ ತಯಾರಿಯಲ್ಲಿ ನಾನಾ ದೇಶಗಳು ನಾ ಮುಂದು ತಾ ಮುಂದು ಎಂಬಂತೆ ಪೈಪೋಟಿಗೆ ಬಿದ್ದಿವೆ. ಹಿಂದೆಂದೂ ಘಟಿಸಿರದಷ್ಟು ತ್ವರಿತಗತಿಯಲ್ಲಿ ಅದರ ಉತ್ಪಾದನೆಯ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಕೆಲವೇ ತಿಂಗಳುಗಳಲ್ಲಿ ಅದರ ಬಳಕೆಯ ಸಾಧ್ಯತೆಗಳು ಸಾಕಾರಗೊಳ್ಳಬಹುದು. ಆ ಒಂದು ಕ್ಷಣಕ್ಕಾಗಿ ಇಡೀ ಮನುಕುಲವೇ ಚಾತಕ ಪಕ್ಷಿಯಂತೆ ಕಾದುಕುಳಿತಿದೆ.

ಪ್ರೀತಿ, ಸೌಹಾರ್ದತೆಗಳಿಗೆ ಮರುಜೀವ :

ಇಷ್ಟೆಲ್ಲಾ ಋಣಾತ್ಮಕ ಅಂಶಗಳ ನಡುವೆಯೂ ಅವನು ಮನುಷ್ಯರಿಗೆ ಒಂದಿಷ್ಟು ಒಳ್ಳೆಯದನ್ನೂ ಮಾಡಿದ್ದಾನೆ. ಕೌಟುಂಬಿಕ ಪ್ರೀತಿ, ಸೌಹಾರ್ದತೆಗಳಿಗೆ ಮರುಜೀವ ನೀಡಿದ್ದಾನೆ. ಜನರು ಸಾಹಿತ್ಯ, ಸಂಗೀತಗಳಂಥ ಉತ್ತಮ ಹವ್ಯಾಸಗಳತ್ತ ವಾಲುವಂತೆ‌ ಮಾಡಿದ್ದಾನೆ. ಮಿತವ್ಯಯದ ಪಾಠ ಕಲಿಸಿದ್ದಾನೆ. ಕಷ್ಟಪಟ್ಟು ಗಳಿಸಿದ ಹಣ ವ್ಯಯಿಸಿಯೋ ಸಾಲಸೋಲ ಮಾಡಿಯೋ ಮಾಡುತ್ತಿದ್ದ ಅದ್ದೂರಿ ಮದುವೆಗಳೆಲ್ಲವೂ ಸರಳಾತಿಸರಳವಾಗುವಂತೆ ಮಾಡಿದ್ದಾನೆ. ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಿದ್ದಾನೆ. ಆರೋಗ್ಯದ ಮಹತ್ವವನ್ನು ತಿಳಿಸಿಕೊಟ್ಟಿದ್ದಾನೆ. ಸ್ವಲ್ಪವಾದರೂ ಸಮಾನತೆಯ ಮನೋಭಾವ ಮೊಳೆಯುವಂತೆ ಮಾಡಿದ್ದಾನೆ. ತುಚ್ಛವೆಂದು ಭಾವಿಸಲಾಗಿದ್ದ ವೃತ್ತಿಗಳಿಗೂ ಗೌರವ ತಂದುಕೊಟ್ಟಿದ್ದಾನೆ. ವಿದೇಶಿ ವ್ಯಾಮೋಹಕ್ಕೆ ಒಳಗಾಗಿದ್ದವರು ‌ಸ್ವದೇಶಿ ಮಂತ್ರ ಜಪಿಸುವಂತೆ ಮಾಡಿದ್ದಾನೆ.

ನಗರದ ಥಳುಕುಬಳುಕಿಗೆ ಮರುಳಾಗಿದ್ದವರು ತಮ್ಮ ತಮ್ಮ ಹಳ್ಳಿಗಳಿಗೆ ಮರಳಿ ಬದುಕುಕಟ್ಟಿಕೊಳ್ಳುವಂತೆ ಮಾಡಿದ್ದಾನೆ. ‘ನೀನು ಯಾರೇ ಆಗಿರು ನನ್ನೆದುರು ನೀನೊಬ್ಬ ಮನುಷ್ಯ ಜೀವಿ ಅಷ್ಟೆ’‌ ಎಂಬ ಸಂದೇಶವನ್ನು ಗಟ್ಟಿಧ್ವನಿಯಲ್ಲಿ ಹೇಳಿದ್ದಾನೆ. ಹಾಗೆಯೇ ಈ ವೈರಿ ಅಂದುಕೊಂಡಷ್ಟು ಬಲಾಢ್ಯನೂ ಅಲ್ಲ. ತೀರಾ ವಯಸ್ಸಾದವರು ಮತ್ತು ಹತ್ತು ಹಲವು ಕಾಯಿಲೆಗಳಿಂದ ಈಗಾಗಲೇ ಜರ್ಝರಿತರಾದವರ ಮೇಲಷ್ಟೇ ಅವನ ಉಗ್ರ ಪ್ರತಾಪ. ಗಟ್ಟಿಮುಟ್ಟಾಗಿರುವರ ಮೇಲೆ ದಾಳಿ ನಡೆಸಿದರೂ ಅದು ಬಲಯುತವಾದುದೇನೂ ಅಲ್ಲ. ಹಾಗೆಯೇ ಮಕ್ಕಳೆಡೆಗೂ ಕೊಂಚ ಮೃದು ಧೋರಣೆ ಅವನದು.

ಇಂಥ ವಿಷಮ ಪರಿಸ್ಥಿತಿಯಲ್ಲಿ ಎಷ್ಟು ದಿನಗಳ ಕಾಲ ಈ ವೈರಿಗೆ ಹೆದರಿ ತಲೆಮರೆಸಿಕೊಂಡು ಕುಳಿತಿರಲು ಸಾಧ್ಯ? ಇದರಿಂದ ಬೇರೆಯದೇ ಆದ ಸಮಸ್ಯೆಗಳು ತಲೆದೋರಬಹುದು. ಆರ್ಥಿಕ ಪರಿಸ್ಥಿತಿ ಊಹಿಸಲಾರದಷ್ಟು ಹದಗೆಟ್ಟು ಅನ್ನ, ನೀರಿಗೆ ಬಾಯಿ ಬಾಯಿ ಬಿಡುವಂತಾಗಬಹುದು. ರೈತ ಬೆಳೆ ಬೆಳೆಯದೆ, ಬೆಳೆದ ಬೆಳೆಗೆ ಮೌಲ್ಯ ದೊರಕದೆ ಕಂಗಾಲಾಗಿಹೋಗಬಹುದು. ನಿರುದ್ಯೋಗ ಸಮಸ್ಯೆ ಇನ್ನಷ್ಟು ಉಲ್ಬಣಿಸಿ ಕಳ್ಳತನ, ದರೋಡೆಗಳಂಥ ಅಪರಾಧಗಳು ಹೆಚ್ಚಾಗಬಹುದು. ಮಕ್ಕಳು ಮನೆಯೊಳಗೇ ಇದ್ದು ಬೊಜ್ಜು ಮತ್ತು ಮಾನಸಿಕ ಸಮಸ್ಯೆಗಳಿಗೆ ಹೆಚ್ಚು ತುತ್ತಾಗಬಹುದು. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಬಹುದು. ಜನರಲ್ಲಿ ಬೇರೆ ಬೇರೆ ಕಾರಣಗಳಿಂದ ಸಾವು ನೋವುಗಳ ಪ್ರಮಾಣ ಹೆಚ್ಚಾಗಬಹುದು……

ನಿರ್ಲಕ್ಷ್ಯ ತೋರಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ:

ಆಯುಷ್ಯ ಗಟ್ಟಿಯಿದ್ದರೆ ಈ ವೈರಿಯೊಂದಿಗೆ ಸೆಣಸಿ ಜಯಶಾಲಿಗಳಾಗಬಲ್ಲೆವು. ಹಾಗೆ ನೋಡಿದರೆ ಜೀವಕ್ಕೆ ಮುಳುವಾಗಬಲ್ಲ ಹಸಿವು, ಕ್ರೌರ್ಯ, ಕ್ಯಾನ್ಸರ್, ಕ್ಷಯ, ಮಲೇರಿಯಾ ಮುಂತಾದ ಬಹಳಷ್ಟು ವೈರಿಗಳಿದ್ದಾರೆ. ಅವರೆಲ್ಲರಂತೆ ಇವನೂ ಒಬ್ಬ ಎಂದುಕೊಂಡರಾಯಿತು. ಪ್ರಸಕ್ತ ಸನ್ನಿವೇಶದಲ್ಲಿ ನಮಗೆ ಉಳಿದಿರುವ ಒಂದೇ ದಾರಿಯೆಂದರೆ, ಈ ವೈರಿಯನ್ನು ಮಣಿಸಲು ಸಾಧ್ಯವಾಗುವವರೆಗೆ ಅವನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಾಳುವುದು. ಹಾಗಂತ ತೀರಾ ನಿರ್ಲಕ್ಷ್ಯ ತೋರಿದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ.

covid and life1. ನಮ್ಮ ಎಚ್ಚರಿಕೆಯಲ್ಲಿ ನಾವಿರಲೇಬೇಕಾಗುತ್ತದೆ. ಸರ್ವವ್ಯಾಪಿಯಾಗಿರುವ ಅವನಿಂದ ಆದಷ್ಟೂ ‌ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.

2. ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕುಂಠಿತವಾಗಿರುವಂಥ ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಮುಂತಾದ ಸಮಸ್ಯೆಗಳಿಂದ ಬಳಲುವವರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

3. ಆಹಾರ, ವ್ಯಾಯಾಮ ಮುಂತಾದ ಕ್ರಮಗಳಿಂದ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಕಷ್ಟು ಮುತುವರ್ಜಿ ವಹಿಸಬೇಕಾಗುತ್ತದೆ.

4. ಎಲ್ಲಕ್ಕಿಂತಲೂ ಹೆಚ್ಚಾಗಿ ಬದುಕಿನ ಬಗ್ಗೆ ಧನಾತ್ಮಕವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಇಂತಹ ಒಂದಿಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುತ್ತಾ ಆದಷ್ಟೂ ಸಹಜವಾಗಿ ಬದುಕಲು ಕಲಿಯುವುದು ಇಂದಿನ ಪರಿಸ್ಥಿತಿಯಲ್ಲಿ ಜಾಣತನವೆನಿಸೀತು.

ಡಾ. ಕೆ. ಬಿ. ರಂಗಸ್ವಾಮಿ ನೆಮ್ಮದಿ, 7ನೇ ಮುಖ್ಯರಸ್ತೆ ಜಯನಗರ ಪೂರ್ವ ತುಮಕೂರು - 2 ಮೊ: 9880709766

ಡಾ. ಕೆ. ಬಿ. ರಂಗಸ್ವಾಮಿ
ನೆಮ್ಮದಿ, 7ನೇ ಮುಖ್ಯರಸ್ತೆ
ಜಯನಗರ ಪೂರ್ವ
ತುಮಕೂರು – 2
ಮೊ: 9880709766

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!