ಬೆಲ್ಸ್ ಪಾಲ್ಸಿ- ಮುಖದ ಅಂದಕ್ಕೆ ಕುಂದು ತರುವ ಕಾಯಿಲೆ

ಬೆಲ್ಸ್ ಪಾಲ್ಸಿ- ಮುಖದ ಅಂದಕ್ಕೆ ಕುಂದು ತರುವ ಕಾಯಿಲೆ

ಬೆಲ್ಸ್ ಪಾಲ್ಸಿ ಮುಖದ ಅಂದಗೆಡಿಸುವ ಕಾಯಿಲೆ.ಜನಸಾಮಾನ್ಯರು ಇದನ್ನು ಮುಖದ ಲಕ್ವ ಎಂತಲೂ ಕರೆಯುವರು.ಮುಂದೆ ಪೂರ್ತಿ ಕೈಕಾಲುಗಳಿಗೆ ಲಕ್ವ ಹೊಡೆಯುತ್ತಾ? ಎಂಬ ಆತಂಕ ಬೇಡ.

ಸುರೇಶ ಸಹಕುಟುಂಬ ಪರಿವಾರದೊಡನೆ ಜೋಗ್‍ಫಾಲ್ಸ ನೋಡಿ ಬಂದ. ಜಿಟಿ ಜಿಟಿ ಮಳೆ ತಂಪು ಹವೆ, ಪ್ರವಾಸ  ಖುಷಿ ಕೊಟ್ಟಿತು. ಬಂದ ಮೇಲೆ ಆಫೀಸನ ಕೆಲಸಕ್ಕೆ ಹೋದ. ಅಲ್ಲಿ ಇಲ್ಲಿ ತಂಪಿನಲ್ಲಿ ತಿರುಗಿದ. ಅವನಿಗೆ ಕಾರಿನ ಮೇಲೆ ಎಲ್ಲಿಲ್ಲದ ವ್ಯಾಮೋಹ. ಡ್ರೈವಿಂಗ ತಾನೇ ಮಾಡಬೇಕು. ಡ್ರೈವಿಂಗ್ ಮಾಡುವಲ್ಲೆ ಸಂತಸಪಡುತ್ತಿದ್ದ. ಬೇರರೆಯವರ ಕೈಯಲ್ಲಿ ಎಂದು ಕಾರು ಕೊಡುತ್ತಿರಲ್ಲಿಲ್ಲ. ಹೀಗೆ ಕಾರಿನಲ್ಲಿ ತಿರುಗುವಾಗ ಕಿವಿಗೆ ತಂಫು ಗಾಳಿ ಬಡಿಯುತ್ತಿತ್ತು. ರಾತ್ರಿ ಮನೆಗೆ ಬಂದಾಗ ಬಲಕಿವಿಯ ಹಿಂದೆ ಏಕೋ ನೋಯುತ್ತಿದೆ ಅಂದ. ಒದ್ದಾಡುತ್ತ ನಿದ್ದೆ ಮಾಡಿದ. ಬೆಳಗಿನ ಸಕ್ಕರೆಯ ನಿದ್ದೆ ಸವಿಯುತ್ತಿದ್ದ. ಹೊತ್ತು ಬಹಳ ಆಗಿದೆ ಏಳ್ರಿ, ಬಿಸಿ ಬಿಸಿ ಚಹಾ ರೆಡಿ ಇದೆ ಎಂದಾಗ ಗಡಬಡಿಸಿ ಎದ್ದ. ಆಗಲೇ ಗಂಟೆ ಎಂಟ್ಟಾಗಿತ್ತು. ಮುಖ ತೊಳೆದುಕೊಂಡು. ಕಣ್ಣು ಉರಿಯುತ್ತಿತ್ತು. ಸೋಪಿನ ನೀರು ಕಣ್ಣಲ್ಲಿ ಹೊಯ್ತೆನೋ ಎಂದು ಎದುರಿನ ಕನ್ನಡಿಯಲ್ಲಿ ದಿಟ್ಟಿಸಿ ನೋಡಿದ.

ಅಚ್ಚರಿ ಕಾದಿತ್ತು!

ಅವನ ಬಲಗಣ್ಣು ತೆರದೆ ಇತ್ತು, ಎಷ್ಟು ಪ್ರಯತ್ನಿಸಿದರು ಮುಚ್ಚಲು ಆಗಲಿಲ್ಲ. ಬಾಯಿ ಸೊಟ್ಟಗಾಗಿತ್ತು. ಬಲ ಹುಬ್ಬನ್ನು ಏರಿಸಲು ಸಾಧ್ಯವಾಗಲಿಲ್ಲ. ಹಣೆಯ ಮೇಲಿನ ಗೆರೆಗಳು ಮಾಯವಾಗಿದ್ದವು ಬಾಯಿಯಲ್ಲಿ ನೀರು ಹಾಕಿ ಕೊಂಡು ಮುಕ್ಕಳಿಸ ಬೇಕೆಂದರೆ ಕಟಬಾಯಿಯಿಂದ ನೀರುಸೋರ ಹತ್ತಿತು ಗಲ್ಲ ಉಬ್ಬಿಸಲು ಬರಲಿಲ್ಲ. ಗಾಬರಿಯಾದ. ವಿಷಯವನ್ನು ಹೆಂಡತಿಗೆ ಹೇಳಿದ. ಅವಳು ಸುರೇಶನ ಮುಖವನ್ನು ದಿಟ್ಟಿಸಿ ನೋಡಿದಳು. ನಂಬಲಾಗಲಿಲ್ಲ. ಕಣ್ಣುಜ್ಜಿ ಮತ್ತೊಮ್ಮೆ ನೋಡಿದಳು. ಮುಖ ಅವಲಕ್ಷಣಗೊಂಡವು. ವೈದ್ಯರಲ್ಲಿಗೆ ದೌಡಾಯಿಸಿದರು. ನೋಡಿದ ತಕ್ಷಣ ವೈದ್ಯರು ಹೇಳಿದ್ದು,- ಬೆಲ್ಸ ಪಾಲ್ಸಿ. ಜನಸಾಮಾನ್ಯರು ಇದನ್ನು ಮುಖದ ಲಕ್ವ ಎಂತಲೂ ಕರೆಯುವರು.

ಬೆಲ್ಸ ಪಾಲ್ಸಿ ಎಂದರೇನು?ಬೆಲ್ಸ್ ಪಾಲ್ಸಿ- ಮುಖದ ಅಂದಕ್ಕೆ ಕುಂದು ತರುವ ಕಾಯಿಲೆ

ಬೆಲ್ಸ ಪಾಲ್ಸಿ” ಮುಖದ ಅಂದಗೆಡಿಸುವ ಕಾಯಿಲೆ. ಲಿಂಗಭೇಧದ ತಾರತಮ್ಯ ಈ ರೋಗಕ್ಕಿಲ್ಲವಾದರೂ, ಹೆಣ್ಣುಮಕ್ಕಳಲ್ಲಿ ಇದರ ಹಾವಳಿ ಹೆಚ್ಚು. ಎಲ್ಲ ವಯಸ್ಸಿನವರಲ್ಲೂ ಇದು ಕಾಣಿಸಿಕೊಳ್ಳುವುದು. ವರ್ಷದುದ್ದಕ್ಕೂ ಇದರ ಕಾಟ ಕಂಡುಬಂದರೂ, ಚಳಿಗಾಲದಲ್ಲಿ ಇದರ ಉಪಟಳ ಜಾಸ್ತಿ. ಇದು ಏಕಾಏಕಿಯಾಗಿ ಗೋಚರಿಸುವುದು. ಇದಕ್ಕೆ ನಿಶ್ಚಿತ ಕಾರಣ ಗೊತ್ತಾಗಿಲ್ಲ. ಅತಿಯಾದ ಶೀತಕ್ಕೆ ದೇಹವನ್ನು ಒಡ್ಡಿದಾಗ, ಕಿವಿಯಲ್ಲಿ ಸೋಂಕು ಉಂಟಾದಾಗ, ಕಿವಿ ಸೋರುತ್ತಿದ್ದಾಗ, ವೈರಸ್ ಸೋಂಕುಗಳಾದ ಹರ್ಪಿಸ್ ಸಿಂಪ್ಲೆಕ್ಸ, ಹರ್ಪಿಸ್ ಜೋಸ್ಟರ್ ಮುತ್ತಿಗೆ ಹಾಕಿದಾಗ, ತಲೆಗೆ ಏಟು ಬಿದ್ದಾಗ ಬೆಲ್ಸ ಪಾಲ್ಸಿ ಉಂಟಾಗಬಹುದು. ಸಕ್ಕರೆ ಕಾಯಿಲೆ, ರಕ್ತದ ಒತ್ತಡ ತೀವ್ರವಾದಾಗ ಹಾಗೂ ಗರ್ಭಿಣಿಯರಲ್ಲಿ ಕೊನೆಯ ತಿಂಗಳುಗಳಲ್ಲಿ ಹಲ್ಲಿಗೆ ಅರಿವಳಿಕೆಕೊಟ್ಟಾಗ ಸಹ ಇದು ಉಂಟಾಗಬಹುದು. ಇವು ವೈದ್ಯಕೀಯ ವಿಜ್ಞಾನ ಇಲ್ಲಿಯವರೆಗೆ ಬೆಲ್ಸ ಪಾಲ್ಸಿ”ಉಂಟಾಗಲು ಗುರುತಿಸಿರುವ ಕಾರಣಗಳು.

ಮುಖಕ್ಕೆ ಅರಿವಿನ ಜ್ಞಾನ’ವನ್ನು ಒದಗಿಸುವ ಫೇಶಿಯಲ್ ನರ್ವ (Fecial Nerve) ಒಂದು ಭಾಗದಲ್ಲಿ ಬಾವು ಬಂದು ಊತ ಕಾಣಿಸಿಕೊಳ್ಳುವುದು. ಇದು ಸಾಮಾನ್ಯವಾಗಿ ಇಕ್ಕಟ್ಟಾದ ಫೇಶಿಯಲ್ ಕೆನಾಲ್ ಮುಖಾಂತರ ಹೊರಬರುವಾಗ ಆಗುವುದರ ಪ್ರಯುಕ್ತ, ಸ್ಥಳೀಯವಾಗಿ ಅರವಳಿಕೆಯಾದಂತಾಗಿ ಸಂವೇದನೆಗಳ ಸರಬರಾಜು ಸ್ಥಗಿತಗೊಳ್ಳುವುದು. ಕೆಲವೊಮ್ಮೆ ಮುಂದಿನ ನರತಂತುಗಳು ನಾಶವಾಗುವವು. ಮುಖದ ಲಕ್ವ ಲಕ್ಷಣಗಳು ಕಾಣಿಸುವ ಪೂರ್ವದಲ್ಲಿ ಕಿವಿಯಲ್ಲಿ ನೋವು ಕಾಣಿಸುವುದು. ಬಹುಶಃ ಇದು ಬೆಲ್ಸ ಪಾಲ್ಸಿಯ ಮುನ್ಸೂಚಕವೆಂದರೆ ತಪ್ಪಾಗಲಿಕ್ಕಿಲ್ಲ.

ಬೆಲ್ಸ ಪಾಲ್ಸಿ  ಲಕ್ಷಣಗಳು:

1. ಮುಖದ ಹಾವಭಾವಗಳನ್ನು ತೋರ್ಪಡಿಸುವಲ್ಲಿ ಬಾಕಾಗುವ ಮಾಂಸಖಂಡಗಳು ಲಕ್ವದ ಹೊಡೆತಕ್ಕೆ ತುತ್ತಾಗುತ್ತವೆ. ಬಾಯಿ ಲಕ್ವ ಹೊಡೆದ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದು  ಕಟಬಾಯಿಯಿಂದ ಜೊಲ್ಲು ಸೋರಬಹುದು. ನೀರು ಕುಡಿಯುವಾಗ ಆ ಕಡೆಯಿಂದ ನೀರು ಹೊರಬರುವುದು.

2. ಹಣೆಯ ಮೇಲಿನ ನಿರಿಗೆಗಳು (Skin Creases)  ಮಾಯವಾಗುವವು. ಲಕ್ವ ಹೊಡೆದ ಕಡೆ ಹುಬ್ಬು ಏರಿಸಲು ಬರುವುದಿಲ್ಲ. ಕಣ್ಣನ್ನು ಪೂರ್ತಿಯಾಗಿ ಗಟ್ಟಿಯಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಮೂಗಿನ ಹೊರಳೆಗಳ ಚಲನವಲನ ಆಗುವುದಿಲ್ಲ. ಮುಖದ ಮೇಲಿನ ಚರ್ಮದ ನೀರಿಗೆಗಳು ಮಾಯವಾಗಿ ಸಪಾಟಾಗಿ ವಿಲಕ್ಷಣ ನರ್ತನಗೈಯುವುದು.

3. ರೋಗಿಗಳಿಗೆ ಹಲ್ಲು ತೋರಿಸಲು ಹೇಳಿದಾಗ, ಕಟಬಾಯಿ ಲಕ್ವ ಹೊಡೆದ ವಿರುದ್ಧ ಬದಿಗೆ ವಾಲುವುದು. ಕಣ್ಣಿನ ರೆಪ್ಪೆಗಳಿಂದ ಬಿಗಿಯಾಗಿ ಕಣ್ಣು ಮುಚ್ಚಲು ಪ್ರಯತ್ನಪಟ್ಟಾಗ, ಲಕ್ವ ಹೊಡೆದ ಭಾಗದ ಕಣ್ಣಿನ ಗುಡ್ಡೆ ಮೇಲಕ್ಕೆ ತಿರುಗುವುದು. ಇದಕ್ಕೆ ಬೆಲ್ಸಪೆನಾಮಿನಾ’ಎನ್ನುವರು. ಮಲಗುವಾಗ ಕಣ್ಣುಪೂರ್ತಿ ಮುಚ್ಚಿಕೊಳ್ಳಲು ಆಗುವುದಿಲ್ಲವಾದ್ದರಿಂದ ತೆರೆದ ಭಾಗದ ಕಾರ್ನಿಯಾ ಒಣಗಿದಂತಾಗಿ ಅಲ್ಲಿ ಕಾರ್ನಿಯಾ ಹುಣ್ಣು’ಕಾಣಿಸಕೊಳ್ಳಬಹುದು. ಆದ್ದರಿಂದ ಕಣ್ಣಿನ ಬಗ್ಗೆ ಕಾಳಜಿ ವಹಿಸುವುದು ಅತೀ ಅವಶ್ಯ ಎಂಬುದನ್ನು ಮರೆಯಬಾರದು.

4. ಆಹಾರವನ್ನು ಅಗಿಯುವಾಗ ಬೆಲ್ಸ ಪಾಲ್ಸಿ ಆದ ಕಡೆ ವಸಡು ಮತ್ತು ಗಲ್ಲದ ನಡುವೆ ನುರಿತ ಆಹಾರ ಶೇಖರಗೊಳ್ಳುತ್ತದೆ. ಕೆಲವೊಮ್ಮೆ ದವಡೆ ಮೂಳೆಯ ಕೋನದಲ್ಲಿ ನೋವು ಕಾಣಿಸಿಕೊಳ್ಳಬಹುದು. ರೋಗಿಗೆ ತುಟಿಯನ್ನು ಕೂಡಿಸಿ ಊದುವುದಾಗಲೀ, ಸಿಳ್ಳು ಹಾಕುವುದಾಗಲೀ ಆಗುವುದಿಲ್ಲ.

ರೋಗ ನಿಧಾನ:

ಬೆಲ್ಸ ಪಾಲ್ಸಿಯನ್ನು ಅದು ತೋರ್ಪಡಿಸುವ ಗುಣಲಕ್ಷಣಗಳಿಂದಲೇ ರೋಗ ನಿಧಾನ ಮಾಡಬಹುದು. ಇದನ್ನು ಖಚಿತಪಡಿಸುವ ನಿರ್ದಿಷ್ಠ ಪರೀಕ್ಷೆಗಳು ಲಭ್ಯವಿಲ್ಲ. ಇಲೆಕ್ಟ್ರೋಮಯೋಗ್ರಾಫಿ (EMG) ಪರೀಕ್ಷೆ ಮಾಡುವುದರಿಂದ ರೋಗದ ಮುನ್ನೋಟ ತಿಳಿಯಲು ಸಾಧ್ಯವಾಗುವುದು. ಮೆದುಳಿನ ಸಿಟ ಎಂ. ಆರ್.ಐ. ಅಪರೂಪಕ್ಕೆ ಮಾಡಿಸಬೇಕಾಗುವುದು.

ಚಿಕಿತ್ಸೆ:

1. ಬೆಲ್ಸ ಪಾಲ್ಸಿ ಕಾಣಿಸಿಕೊಂಡಾಗ, ಆದಷ್ಟು ಬೇಗ ತಜ್ಞವೈದ್ಯರನ್ನು ಕಂಡು ಚಿಕಿತ್ಸೆಗೊಳಪಡಬೇಕು. ವಿಳಂಬ ಮಾಡಿದಷ್ಟೂ ವಿಕಾರದ ಲಕ್ಷಣಗಳು ರೋಗದ ಉಡುಗೊರೆಯಾಗಿ ಉಳಿಯುವವು.

2. ಸ್ಟೀರಾಯ್ಡ (ಪ್ರೆಡ್ನಿಸೊಲೊನ್) ಮತ್ತು ಎಸೈಕ್ಲೋವೇರ್ ಔಷಧಿಗಳನ್ನು ತಜ್ಞರ ಸಲಹೆಯಂತೆ ನಿಗದಿಪಡಿಸಿದ ಪ್ರಮಾಣದಲ್ಲಿ ಸೂಕ್ತ ಕಾಲದವರೆಗೆ ತೆಗೆಕೊಂಡಲ್ಲಿ ತ್ವರಿತವಾಗಿ ಗುಣಮುಖರಾಗಬಹುದು.

3. ಇದು ದೇವರ ದಿಂಡರ ಕಾಟದಿಂದ, ಪೂರ್ವಜನ್ಮದ ಪಾಪದಿಂದ, ಮಾಟ ಮಂತ್ರಗಳಿಂದ ಬಂದ ರೋಗವಲ್ಲ. ಕಾಡು ಪಾರಿವಾಳಗಳ ರಕ್ತ ಕುಡಿಯುವುದು, ಮಾಂಸ ಮಜ್ಜಾಲೆ ತಿನ್ನುವುದು ಈ ರೋಗ ಗುಣಮುಖರಾಗುವಲ್ಲಿ ಸಹಕರಿಸುವುದು ಎನ್ನುವುದು ತಪ್ಪುಗ್ರಹಿಕೆ ಅಷ್ಟೇ. ಅಳಲೆಕಾಯಿ ಪಂಡಿತರ ಮಾತಿನ ಮೋಡಿಗೆ ಮರುಳಾಗಿ ಔಷಧ ಸೇವಿಸುತ್ತ ಕಾಲಹರಣ ಮಾಡಿದಲ್ಲಿ ವಿಕಾರ ಉಲ್ಭಣಿಸುವುದಕ್ಕೆ ಹಾದಿ ಮಾಡಿಕೊಟ್ಟಂತಾಗುವುದು.

4. ಆಯುರ್ವೇದ ತಜ್ಞರ ಸಲಹೆ ಸೂಚನೆಗಳು, ಔಷದೋಪಚಾರಗಳು ಈ ರೋಗ ಗುಣಪಡಿಸುವಲ್ಲಿ ಉಪಯುಕ್ತವಾಗುವವು.

5. ವಿಕಾರಗೊಂಡ ಭಾಗಕ್ಕೆ ಇನ್‍ಫ್ರಾರೆಡ್ ರೇಡಿಯೇಶನ್, ಕಾರ್ಟವೇವ್ ಡಯಾಥರ್ಮಿ ಅಥವಾ ಮೊಯಿಸ್ಟ್ ಹೀಟ್ ಥೆರಪಿ ಸಹಾಯಕವಾಗುವವು.

6. ಇಲೆಕ್ಟ್ರಿಕಲ್ ವೈಬ್ರೇಶನ್ ಥೆರಪಿ ಇಲೆಕ್ಟ್ರಿಕಲ್ ಸ್ಟಿಮ್ಯುಲೇಶನ್ ಥೆರಪಿ’ರೋಗ ಗುಣಮುಖವಾಗುವುದನ್ನು ತ್ವರಿತಗೊಳಿಸುವವು. ನರತಂತುಗಳು, ನರಗಳು ಮೊದಲಿನಂತೆ ಕಾರ್ಯನಿರ್ವಹಿಸುವ ಸಲುವಾಗಿ ಈ ಪುನಶ್ಚೇತನ ಚಿಕಿತ್ಸೆ ಉಪಯುಕ್ತ.

7. ರೋಗಿಯ ಮುಖವನ್ನು ಎಣ್ಣೆಯಿಂದ (ಎಳ್ಳೆಣ್ಣೆ ಉತ್ತಮ) ದಿನಕ್ಕೆರಡು ಬಾರಿ ಕನಿಷ್ಠ ಐದು ನಿಮಿಷ ಮಸಾಜ್ ಮಾಡಿಕೊಂಡರೆ ಉತ್ತಮ. ಮಸಾಜ್ ಮಾಡುವಾಗ ಗದ್ದದಿಂದ ಶುರುಮಾಡಿ ಕೆಳದುಟಿಯಿಂದ ಮೇಲ್ಬಾಗಕ್ಕೆ ಗಲ್ಲದ ಮೇಲೆ ಹಾಯ್ದು, ಕಣ್ಣಿನ ಹುಬ್ಬಿನವರೆಗೆ ಹೋಗಬೇಕು.

8. ಕಣ್ಣುಗಳನ್ನು ಸರಿಯಾಗಿ ಮುಚ್ಚಲು ಆಗದಿದ್ದಾಗ, ಮಲಗುವ ವೇಳೆ ಕಣ್ಣಿನ ಮೇಲೆ ಪ್ಯಾಡ್ ಇಟ್ಟು ಮಲಗಬೇಕು. ಇಲ್ಲವೇ ಅಂಟುಪಟ್ಟಿ ಹಚ್ಚಿಕೊಂಡು ಮಲಗಬೇಕು. ಕಟಬಾಯಿಗೂ ಅಂಟುಪಟ್ಟಿ ಹಚ್ಚಿ ಎಳೆದು ಹಚ್ಚಿಕೊಳ್ಳಬೇಕು. ಕೃತಕ ಕಣ್ಣೀರು ತೊಟ್ಟುಗಳನ್ನು ಕಣ್ಣಿಗೆ ಹಾಕಿಕೊಳ್ಳಬೇಕು.

Bells_Palsy

9. ಆಕ್ಯುಪಂಚರ್ ಚಿಕಿತ್ಸೆಯೂ ರೋಗ ಗುಣಪಡಿಸುವಲ್ಲಿ ಉಪಯುಕ್ತ. ಇದಕ್ಕಾಗಿ ನಕಲಿ ವೈದ್ಯರ ಆಸ್ಪತ್ರೆಗಳ ಮೆಟ್ಟಿಲು ಹತ್ತಬೇಡಿ. ವಯೋವೃದ್ಧರಲ್ಲಿ ಬೆಲ್ಸ ಪಾಲ್ಸಿ ಕಾಣಿಸಿಕೊಂಡಾಗ, ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟ. ಅನಿವಾರ್ಯ ಪ್ರಸಂಗಗಳಲ್ಲಿ ಸರ್ಜರಿ ಅಥವಾ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಬಹುದು.

10. ಗುಣವಾದ ಮೇಲೆ ಮುಖದ ಪ್ರತಿಯೊಂದು ಕ್ರಿಯೆಯನ್ನು (ಊದುವುದು, ಕಣ್ಣು ರೆಪೆಗಳನ್ನು ಗಟ್ಟಿಯಾಗಿ ಮುಚ್ಚುವುದು, ತೆರೆಯುವುದು, ಹುಬ್ಬು ಏರಿಸುವುದು ಮತ್ತು ಇಳಿಸುವುದು, ಬೆಲ್ಸ ಪಾಲ್ಸಿ ಆದ ಕಡೆ ಚೂಯಿಂಗ್‍ಗಮ್ ಅಗಿಯುವುದು, ಸಿಳ್ಳು ಹಾಕುವುದು, ಪುಗ್ಗಾ ಊದುವುದು……. ಇತ್ಯಾದಿಗಳನ್ನು) ಕನ್ನಡಿಯಲ್ಲಿ ನೋಡಿಕೊಂಡು ಮಾಡುವುದು.

11. ಕಿವಿಗೆ ತಂಪು ತಗಲದಂತೆ ಕಿವಿಯಲ್ಲಿ ಅರಳೆ ಇಟ್ಟುಕೊಳ್ಳಬೇಕು. ಉಣ್ಣೆಯ ಟೋಪಿಯನ್ನು ಕಿವಿ ಮುಚ್ಚುವ ಹಾಗೆ ಧರಿಸಬೇಕು. ಇಲ್ಲವೆ ಈಗ ತಂಪಿನಿಂದ ರಕ್ಷಿಸುವ ಪರಿಕರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳನ್ನು ಬಳಸಲು ಮರೆಯಬಾರದು.

12. ವೈದ್ಯಕೀಯ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆಯಿಂದ ಒಳ್ಳೊಳ್ಳೆಯ ಔಷಧಿಗಳು ಲಭ್ಯವಿರುವುದರಿಂದ, ತಕ್ಷಣ ತಜ್ಞರ ಸಲಹೆಯಂತೆ ಚಿಕಿತ್ಸೆ ಆರಂಭಿಸುವುದರಿಂದ ಸಂಪೂರ್ಣ ಗುಣಹೊಂದಿ “ಮುಖದ ವಿಕಾರತೆಗೆ” ವಿದಾಯ ಹೇಳಬಹುದು! ಹೆಚ್ಚಿನ ಪ್ರಕರಣಗಳಲ್ಲಿ, ಒಂದೆರಡು ತಿಂಗಳುಗಳ ಅವಧಿಯಲ್ಲಿ ಸ್ನಾಯುಗಳು ಮೊದಲಿನ ಸ್ಥಿತಿಗೆ ಮರಳುತ್ತವೆ. ಯಾವ ನ್ಯೂನ್ಯತೆಯೂ ಉಳಿಯುವುದಿಲ್ಲ. ಆದರೆ ಕೆಲವರಲ್ಲಿ ಪೂರ್ಣ ಗುಣ ಕಾಣದೆ, ಸ್ವಲ್ಪಮಟ್ಟಿನ ನ್ಯೂನ್ಯತೆ ಉಳಿಯುತ್ತದೆ.

ಮುಖದ ಲಕ್ವ ಹೊಡೆದಿದೆ, ಮುಂದೆ ಪೂರ್ತಿ ಕೈಕಾಲುಗಳಿಗೆ ಲಕ್ವ ಹೊಡೆಯುತ್ತಾ? ಎಂಬ ಆತಂಕ ಬೇಡ. ಮುಖದ ಒಂದು ಲಕ್ವ ಹೊಡೆದರೆ ಮತ್ತೊಂದು ಕಡೆ ಲಕ್ವ ಹೊಡೆಯಬಾರದೆಂಬ ನಿಯಮವೇನೂ ಇಲ್ಲ. ಮುಖಕ್ಕೆ ಎಡಕ್ಕೊಂದು ಬಲಕ್ಕೊಂದು ಫೇಶಿಯಲ್ ನರ್ವ್’ಇರುವುದರಿಂದ ಎರಡೂ ಕಡೆ ಆಗಬಹುದು. ಆದರೆ, ಎರಡೂ ಕಡೆ ಒಮ್ಮೆಲೇ ಆಗುವುದಿಲ್ಲ.ಇದು ಅದರ ವೈಶಿಷ್ಟ್ಯ.

ಡಾ|| ಕರವೀರಪ್ರಭು ಕ್ಯಾಲಕೊಂಡ ಕ್ಯಾಲಕೊಂಡ ಆಸ್ಪತ್ರೆ, ಕಾಲೇಜ ರೋಡ, ಬಾದಾಮಿ-587201 ಜಿಲ್ಲಾ: ಬಾಗಲಕೋಟ. ಮೋ: 9448036207   ಇ-ಮೇಲ್ : drkvkyalakond@gmail.com

ಡಾ|| ಕರವೀರಪ್ರಭು ಕ್ಯಾಲಕೊಂಡ
ಕ್ಯಾಲಕೊಂಡ ಆಸ್ಪತ್ರೆ, ಕಾಲೇಜ ರೋಡ, ಬಾದಾಮಿ-587201
ಜಿಲ್ಲಾ: ಬಾಗಲಕೋಟ.
ಮೋ: 9448036207   ಇ-ಮೇಲ್ : drkvkyalakond@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!