ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ ಬೊಜ್ಜಿನ ಅಪಾಯ ಹೆಚ್ಚು.

ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ ಬೊಜ್ಜಿನ ಅಪಾಯ ಹೆಚ್ಚು. ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳದ ಮಕ್ಕಳಲ್ಲಿ ಇಮ್ಯೂನ್ ಪ್ರಚೋದಕಗಳು ಇಲ್ಲ. ಹೀಗಿದ್ದಾಗ ಅವರ ರೋಗನಿರೋಧಕ ವ್ಯವಸ್ಥೆಯು ಬೆಳವಣಿಗೆಗೆ ಬೇಕಾದ ಪರಿಕರಗಳನ್ನು ಹೊಂದುವುದಿಲ್ಲ. (ಮಕ್ಕಳು, ಸೂಕ್ಷ್ಮಾಣುಗಳು ಹಾಗೂ ಆಂಟಿಬಯೋಟಿಕ್ ದುಷ್ಪರಿಣಾಮಗಳು : ಭಾಗ-2)

antibiotics-and-obesityಇತ್ತೀಚೆಗೆ ಯು .ಎಸ್. ನಲ್ಲಿ 65,000 ಮಕ್ಕಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ 70% ದಷ್ಟು ಮಕ್ಕಳು ತಮ್ಮ ಎರಡನೇ ವಯಸ್ಸಿಗೆ ಆಂಟಿಬಯೋಟಿಕ್ಸ್ ಕೊಡಲ್ಪಟ್ಟವರು. ತಮ್ಮ 5 ನೇ ವಯಸ್ಸಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ಆಂಟಿಬಯೋಟಿಕ್ಸ್ ಚಿಕಿತ್ಸೆಗೆ ಒಳಗಾದವರು. 10% ಕ್ಕಿಂತ ಹೆಚ್ಚುಪಾಲು ಬೊಜ್ಜಿನ ಅಪಾಯಕ್ಕೆ ಗುರಿಯಾದವರು. ಇನ್ನೊಂದು ಅಧ್ಯಯನದ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನದ ರೋಗ ನಿಯಂತ್ರಣ ಮತ್ತು ಪ್ರತಿಬಂಧಕ ಕೇಂದ್ರಗಳ ವರದಿಯಂತೆ ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ  ಬೊಜ್ಜಿನ ಅಪಾಯ ಹೆಚ್ಚು.

ಆಂಟಿಬಯೋಟಿಕ್ಸುಗಳು ಬೊಜ್ಜಿಗೆ ಕಾರಣ

ಆಂಟಿಬಯೋಟಿಕ್ಸುಗಳು ಬೊಜ್ಜಿಗೆ ಕಾರಣ ಎಂದು ನೇರವಾಗಿ ಪ್ರಮಾಣೀಕರಿಸದಿದ್ದರೂ, ಅಧ್ಯಯನಗಳನ್ನು ತಾಳೆ ಮಾಡಿದಾಗ, ವಿಜ್ಞಾನಿಗಳನ್ನು ಮತ್ತೆ ಯೋಚನೆಗೆ ಹಚ್ಚಿತು. ಕುತೂಹಲಕಾರಿ ಪ್ರಯೋಗವೊಂದನ್ನು ನಡೆಸಿದರು. ಕರುಳಿನಲ್ಲಿನ ಬ್ಯಾಕ್ಟೀರಿಯಾಗಳನ್ನು ಬೊಜ್ಜಿಗೆ ಒಳಗಾದ ಇಲಿಗಳಿಂದ ಕೃಷವಾಗಿರುವ ಇಲಿಗಳ ಕರುಳಿಗೆ ವರ್ಗಾಯಿಸಿದಾಗ, ಅವುಗಳನ್ನು ಕೂಡ ಬೊಜ್ಜಿಗೆ ಒಳಗಾಗುವಂತೆ ಮಾಡಿತು.

ಕೊಬ್ಬು, ಪಿಷ್ಠ, ಅನುವಂಶೀಯತೆ, ವ್ಯಾಯಾಮ ಇಲ್ಲದಿರುವುದು – ಸ್ಥೌಲ್ಯವನ್ನು ಹೆಚ್ಚು ಮಾಡುವುದೆಂದು ಕೇಳಿದ್ದೇವೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಬದುಕಿನ ಆರಂಭದ ದಿನಗಳಲ್ಲಿ ನಿರ್ದಿಷ್ಟವಾದ ಬ್ಯಾಕ್ಟೀರಿಯಾಗಳ ಇರುವಿಕೆ ಅಥವಾ ಇಲ್ಲದಿರುವಿಕೆಗಳು, ಮುಂದಿನ ಜೀವನದಲ್ಲಿನ ತೂಕವನ್ನು ನಿರ್ಧರಿಸುವಲ್ಲಿ ಸಹಕರಿಸುತ್ತವೆ. ಮುಂದುವರಿದ ಸಂಶೋಧನೆಗಳು ಆಳವಾದ ವಾಸ್ತವಗಳನ್ನು ಅನಾವರಣಗೊಳಿಸುತ್ತವೆ. ನಮ್ಮ ದೇಹದಲ್ಲಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾಗಳ ಸಮೂಹವನ್ನು ವ್ಯತ್ಯಾಸ ಗಳಿಸುವುದರಿಂದ ಬೊಜ್ಜು ಮಾತ್ರವಲ್ಲ, ಇನ್ನೂ ಅನೇಕ ದೀರ್ಘಕಾಲೀನ ಕಾಯಿಲೆಗಳು ಉಂಟಾಗುತ್ತವೆ.

ಇನ್ನೂ ಅನೇಕ ದೀರ್ಘಕಾಲೀನ ಕಾಯಿಲೆಗಳು

ಬಹುಶಹ ಮೊದಮೊದಲು ನಮಗೆ ಅಂತಹ ಕಾಯಿಲೆಗಳ ಬೆಳವಣಿಗೆಯಲ್ಲಿ ಬ್ಯಾಕ್ಟೀರಿಯಾಗಳ ಪಾತ್ರ ತಿಳಿದಿರಲಿಕ್ಕಿಲ್ಲ. ಅಸ್ತಮಾ ಹಾಗೂ ಅಲರ್ಜಿ ಗಳನ್ನು ಇದಕ್ಕೆ ಸಂಬಂಧಿಸಿದ ಉದಾಹರಣೆಯಾಗಿ ನೋಡೋಣ. ಅಂದರೆ ಇಂದಿನ ದಿನಗಳಲ್ಲಿ ಮಕ್ಕಳು ಹೆಚ್ಚುಹೆಚ್ಚಾಗಿ ಈ ತೊಂದರೆಗೆ ಒಳಗಾಗುತ್ತಿದ್ದಾರೆ. ಕೆಲವು ದಶಕಗಳ ಹಿಂದೆ ಶಾಲೆಗಳಲ್ಲಿ ಅಸ್ತಮಾ ಇನ್ಹೇಲರ್ ಔಷಧಗಳನ್ನು ಉಪಯೋಗಿಸುವ ಮಕ್ಕಳಿರಲಿಲ್ಲ. ಈಗ, ಬೊಜ್ಜಿನ ಕುರಿತಾದ ಸಂಶೋಧನೆಯ ಜೊತೆಗೆ ಇನ್ನೊಂದು ಅಂಶ ಬೆಳಕಿಗೆ ಬಂದಿದೆ. ಆಂಟಿಬಯೋಟಿಕ್ ಔಷಧಗಳನ್ನು ಬಾಲ್ಯದಲ್ಲಿ ಅತಿಯಾಗಿ ಪ್ರಯೋಗಿಸುವುದು, ಅಸ್ತಮಾ ಹಾಗೂ ಅಲರ್ಜಿ ಗಳ ಅಪಾಯವನ್ನು ಹೆಚ್ಚಾಗಿಸಿದೆ.

ಕೆನಡಾದಲ್ಲಿ- 13% ಮಕ್ಕಳು
ಯುಎಸ್ನಲ್ಲಿ- 10% ಮಕ್ಕಳು
ಆಸ್ಟ್ರೇಲಿಯಾದಲ್ಲಿ- 21% ಮಕ್ಕಳು ಅಸ್ತಮಾ ಪೀಡಿತರಾಗಿದ್ದಾರೆ.

ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿ ಪ್ರಯೋಗಶಾಲೆಯಲ್ಲಿ ಪ್ರಯೋಗ ನಡೆಸಿದ ಪ್ರಕಾರ- ಶಿಶು ಇಲಿಗಳಿಗೆ ಆಂಟಿಬಯೋಟಿಕ್ ಕೊಟ್ಟಾಗ ಅಸ್ತಮಾ ತೊಂದರೆಗೆ ಒಳಗಾದವು. ಅದೇ ಆಂಟಿಬಯೋಟಿಕ್ ಗಳನ್ನು, ಇಲಿಗಳು ತಾಯಿಯ ಅವಲಂಬನೆಯಿಂದ ಬಿಡುಗಡೆಯಾಗಿ ಓಡಾಡುವುದಕ್ಕೆ ಆರಂಭ ಮಾಡಿದಾಗ ಕೊಡಲಾಯಿತು. ಆಗ ಅಸ್ತಮಾ ಸಾಧ್ಯತೆಗಳು ಇರಲಿಲ್ಲ. ಆ ಸಂದರ್ಭದಲ್ಲಿ ಬಳಸಲಾದ ಆಂಟಿಬಯೋಟಿಕ್ ವಾಂಕೋಮೈಸಿನ್. ಇದು ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಮಾತ್ರ ಸಾಯಿಸಿತ್ತು. ಕರುಳಿನಿಂದ ರಕ್ತಕ್ಕೆ ಸೇರಲಿಲ್ಲ! ಆದ ಕಾರಣ ಇತರ ಅಂಗಗಳಿಗೆ ಹೋಗಿ ಅಲ್ಲಿನ ರೋಗಾಣುಗಳನ್ನು ಸಾಯಿಸಲಿಲ್ಲ. ಇದರಿಂದಾಗಿ, ಆ ಆಂಟಿಬಯೋಟಿಕ್ ಔಷಧವು ಕರುಳಿನಲ್ಲಿ ಮಾಡಿದ ಬದಲಾವಣೆಯಿಂದ ಅಸ್ತಮಾ ರೋಗ ಉಂಟಾಯಿತು ಎಂದು ತೀರ್ಮಾನಿಸಬಹುದು…. ಇದು ಪ್ರಯೋಗದ ನಂತರ ವೈದ್ಯ ವಿಜ್ಞಾನಿಗಳು ಕಂಡುಕೊಂಡ ಸತ್ಯ.

ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳದ ಮಕ್ಕಳಲ್ಲಿ ಇಮ್ಯೂನ್ ಪ್ರಚೋದಕಗಳು ಇಲ್ಲ.

child-antibioticsಆದಕಾರಣ ನಮ್ಮ ಪರಿಸರದ ಅಂಶಗಳನ್ನು, ಬಾಲ್ಯಕಾಲದಲ್ಲಿ ನಮ್ಮ ದೇಹದಲ್ಲಿ ಯಾವುದು ಸೂಕ್ಷ್ಮಾಣು ಸಮೂಹವನ್ನು ಕುಂದಿಸುತ್ತದೆ – ಅಂತಹ ಅಂಶಗಳನ್ನು ಗುರುತಿಸಬೇಕು ಎಂಬುದು ಪ್ರಾಮುಖ್ಯ. ಹಳ್ಳಿ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳನ್ನು, ನಗರ ಪ್ರದೇಶಗಳಲ್ಲಿ ಬೆಳೆದ ಮಕ್ಕಳಿಗೆ ಹೋಲಿಸಿ ನೋಡಿ. ಅಸ್ತಮಾ ಇದ್ದ ಕುಟುಂಬದ ಮಕ್ಕಳೇ ಆಗಿದ್ದರೂ ಕೂಡ, ಕೃಷಿ ಪರಿಸರಕ್ಕೆ ತೆರೆದುಕೊಂಡ ಮಕ್ಕಳಲ್ಲಿ ಅಸ್ತಮಾ ಬರುವ ಸಾಧ್ಯತೆ ಕಡಿಮೆ. ಇದರ ಕಾರಣವನ್ನು ವಿಜ್ಞಾನಿಗಳು ಅರಿಯ ತೊಡಗಿದ್ದಾರೆ. ರೈತರ ಹೊಲಗಳಲ್ಲಿ ಬೆಳೆದ ಮಕ್ಕಳು ಹೆಚ್ಚು ಪ್ರಾಣಿಗಳ ಜತೆ ಒಡನಾಟ, ಹೆಚ್ಚು ಸಮಯ ಹೊರಗಡೆಗೆ ಹಾಗೂ ಕೆಸರು ಕೊಳೆಗಳಿಗೆ ಒಡ್ಡಿಕೊಂಡು ಬೆಳೆಯುತ್ತಾರೆ. ಇದು ಅವರ ಶರೀರದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಶಾಲಿಯಾಗಿಸುತ್ತದೆ.

ನಮ್ಮ ದೇಹದ ರೋಗನಿರೋಧಕ ಶಕ್ತಿಯ ಬೆಳವಣಿಗೆ ಮತ್ತು ತರಬೇತಿ ಬದುಕಿನ ಬಾಲ್ಯದ ಮೊದಲ ವರ್ಷಗಳಲ್ಲಿ ನಡೆಯುತ್ತದೆ…. ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳದ ಮಕ್ಕಳಲ್ಲಿ ಇಮ್ಯೂನ್ ಪ್ರಚೋದಕಗಳು ಇಲ್ಲ. ಹೀಗಿದ್ದಾಗ ಅವರ ರೋಗನಿರೋಧಕ ವ್ಯವಸ್ಥೆಯು ಬೆಳವಣಿಗೆಗೆ ಬೇಕಾದ ಪರಿಕರಗಳನ್ನು ಹೊಂದುವುದಿಲ್ಲ. ಮಕ್ಕಳನ್ನು ಕೊಳೆ ಧೂಳಿನ ಪರಿಸರದಿಂದ ಅತಿಯಾಗಿ ಸಂರಕ್ಷಿಸಿ ಜೋಪಾನ ಮಾಡಿದಾಗ, ಅತಿ ಶುಚಿತ್ವದ ಗೀಳಿನಿಂದಾಗಿ ಸಾವಿರಾರು ವರ್ಷಗಳಿಂದ ಯಾವ ರೀತಿಯಲ್ಲಿ ಅದು ಬೆಳೆಯಬೇಕಾಗಿತ್ತೋ, ಅದರ ಕಾರ್ಯವಿಧಾನವನ್ನು ಮೊಟಕುಗೊಳಿಸುತ್ತದೆ.

ನಮ್ಮ ಪ್ರಾಚೀನರ ಬದುಕೆಂದರೆ ಪರಿಸರದಲ್ಲಿನ ಅಣು ಅಣುವಿಗೂ, ಸೂಕ್ಷ್ಮಾಣು ಗಳಿಗೂ, ಆಹಾರ-ನೀರು -ಕೊಳೆಗಳಲ್ಲಿನ ಸೂಕ್ಕ್ಷ್ಮಾಣುಗಳಿಗೂ ಒಡ್ಡಿಕೊಳ್ಳುವುದು. ಅದನ್ನು ಇಂದಿನ ನಮ್ಮ ಜೀವನಶೈಲಿಗೆ, ಸೂಕ್ಷ್ಮಾಣು ರಹಿತಗೊಳಿಸಿದ ಆಹಾರಕ್ಕೆ, ಸೂಕ್ಷ್ಮಾಣುರಹಿತ ಗೊಳಿಸಿದ ನೀರಿಗೆ ಹೋಲಿಸಿ ನೋಡಿ.

1. ನಮ್ಮ ಇಮ್ಯೂನ್ ಸಿಸ್ಟಮ್  ಬೆಳವಣಿಗೆಗೆ ಸಹಕಾರ ಮಾಡುವುದು ಸೂಕ್ಷ್ಮಾಣುಗಳ ಕಾರ್ಯದ ಒಂದು ಅಂಶ ಮಾತ್ರ.
2. ಅವು ಆಹಾರವನ್ನು ಪಚನ ಗೊಳಿಸುತ್ತದೆ. ವಿಟಮಿನ್ ಬಿ, ವಿಟಮಿನ್ ಕೆ ಇತ್ಯಾದಿ ಜೀವಸತ್ವಗಳನ್ನು ಉತ್ಪಾದನೆ ಮಾಡುತ್ತದೆ. ಸೂಕ್ಷ್ಮಾಣುಗಳ “ವಿಟಮಿನ್ ಕೆ ”  ಕೊಡುಗೆ ಇಲ್ಲದಿದ್ದರೆ ನಮ್ಮಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆ ಕುಂಠಿತಗೊಳ್ಳುವುದು.

ಸಾಲ್ಮೋನೆಲ್ಲಾ ( ಸಲ್ಮೋನೆಲ್ಲ ಟೈಫೈ ಎಂಬುದು ಟೈಫಾಯಿಡ್ ಕಾಯಿಲೆ ಉಂಟುಮಾಡುವ ಬ್ಯಾಕ್ಟೀರಿಯಾ ) ಬ್ಯಾಕ್ಟೀರಿಯಾಗಳ ಸೋಂಕು, ಆ ವ್ಯಕ್ತಿ ಅದಕ್ಕೂ ಮುನ್ನ ಆಂಟಿಬಯೋಟಿಕ್ ಸೇವನೆ ಮಾಡಿದರೆ ಅತ್ಯಂತ ತೀವ್ರತರ ವಾಗಿರುತ್ತದೆ. ಅತಿಸಾರವನ್ನು ತೀವ್ರ ಸ್ವರೂಪದಲ್ಲಿ ಉಂಟುಮಾಡುತ್ತದೆ. ಗಂಭೀರವಾದ ಕಾಯಿಲೆಗಳನ್ನು ತಡೆಯುವುದು ನಮ್ಮ ಮುಖ್ಯ ಧ್ಯೇಯಯವಾಗಿದ್ದರೂ ಕೂಡ, ಜೊತೆಗೆ,

1.ಜೀವಾಪಾಯ ತರುವ ಕಾಯಿಲೆಗಳ ನಿಯಂತ್ರಣಕ್ಕೆ ಮಾತ್ರ ಆಂಟಿಬಯೋಟಿಕ್ ಬಳಸುವ ದೃಢನಿರ್ಧಾರವನ್ನು ತಳೆಯಬೇಕು.
2. ಅನಗತ್ಯ ,ಅನಾರೋಗ್ಯಕರವಾದ ಆಂಟಿಬಯೋಟಿಕ್ ದುರ್ಬಳಕೆಯನ್ನು ತಡೆಯಬೇಕು.
3. ಆಂಟಿಬಯೋಟಿಕ್ ಬಳಕೆಯ ಔಚಿತ್ಯ ಹಾಗೂ ವ್ಯಸನಗಳ ನಡುವಿನ ವ್ಯತ್ಯಾಸವನ್ನು ಅರಿಯಬೇಕು.
4. ಮಗು ಪ್ರತಿಸಲ ಆಡಿ ಬಂದಾಗಲೂ ಕೈಗಳಿಗೆ ಸ್ಯಾನಿಟೈಸರ್ ಬಳಸುವುದರ ಹಿಂದಿನ ಅನೌಚಿತ್ಯ ಅರಿಯಬೇಕು.

ಸೂಕ್ಷ್ಮಣು ಅತಿಥಿಗಳಿಗೆ ಆಶ್ರಯ ನೀಡಿ 

Antibiotics-and-obesity ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ ಬೊಜ್ಜಿನ ಅಪಾಯ ಹೆಚ್ಚು.ವೈದ್ಯಕೀಯ ಜಗತ್ತಿಗೆ, ರೋಗಕಾರಕ ಸೂಕ್ಷ್ಮಾಣುಗಳು ಹಾಗೂ ಅವುಗಳಿಂದ ಬರುವ ಕಾಯಿಲೆಗಳ ಬಗ್ಗೆ ತಿಳಿಯುವಷ್ಟು, ಅವುಗಳನ್ನು ಕೊಲ್ಲುವಷ್ಟು ಜ್ಞಾನ ಇದೆ. ಆದರೆ ನಮ್ಮನ್ನು ಆರೋಗ್ಯವಾಗಿಡುವ ಸೂಕ್ಷ್ಮಾಣುಗಳ ಕುರಿತು ಅಸಡ್ಡೆ ತಳೆದಿದೆ ಹಾಗೂ ಅಜ್ಞಾನದಿಂದ ಕೂಡಿದೆ. ಆದರೆ, ಹೊಸ ವಿಜ್ಞಾನ ಪ್ರಯೋಗಗಳು, ಸಂಶೋಧಕರ ಹೊಸ ಒಲವುಗಳು, ದೃಷ್ಟಿಕೋನದಲ್ಲಿನ ವೈವಿಧ್ಯಗಳು,- ಯೋಚನೆಗೆ ಹಚ್ಚುವುದಕ್ಕೆ ತೊಡಗಿವೆ. ಪ್ರತಿಯೊಬ್ಬನು ಕೂಡ ಸೂಕ್ಷ್ಮಣು ಅತಿಥಿಗಳಿಗೆ ಆಶ್ರಯ ನೀಡಿ ಎಂಬ ಸಂದೇಶವನ್ನು ತಂದಿವೆ.

ಸ್ವಾರಸ್ಯಕರ ಹಾಗೂ ಸತ್ಯ ಘಟನೆಯೊಂದರ ಉದಾಹರಣೆಯೊಂದಿಗೆ ಲೇಖನವನ್ನು ಮುಗಿಸುತ್ತೇನೆ. 1971 ರಲ್ಲಿ ಹಾಸ್ಟನ್ ನಗರದಲ್ಲಿ ಡೇವಿಡ್ ವೆಟ್ಟರ್ ಹುಟ್ಟಿದ. ಆತನಿಗೆ ಅಪರೂಪದ ಅನುವಂಶೀಯ ಕಾಯಿಲೆ ಇತ್ತು. ಅದರಿಂದಾಗಿ ಆತನ ರೋಗನಿರೋಧಕ ವ್ಯವಸ್ಥೆ ಕೆಲಸ ಮಾಡುತ್ತಿರಲಿಲ್ಲ. ಆದಕಾರಣ ಸೂಕ್ಷ್ಮಾಣು ತುಂಬಿದ ಜಗತ್ತಿನ ಸಂಪರ್ಕದಿಂದ ಆತನಿಗೆ ಸಾವೇ ಗತಿಯಾಗಿತ್ತು. ಹುಟ್ಟಿದ ತಕ್ಷಣ ಸೂಕ್ಷ್ಮಾಣು ರಹಿತ ರಕ್ಷಾಕವಚದೊಳಗೆ ಆತನನ್ನು ಸಂರಕ್ಷಿಸಲಾಯಿತು. ಆ ಕವಚದ ಒಳಗೆ ಆತ ಆಸ್ಪತ್ರೆಯಲ್ಲಿ ಬೆಳೆದ. ಆಂಟಿಬಯೋಟಿಕ್ ಕೋರ್ಸ್ ಗಳ ಸರಮಾಲೆಯೇ ಆತನ ದಿನನಿತ್ಯದ ಅವಿಭಾಜ್ಯ ಅಂಗವಾಗಿತ್ತು. ಜೊತೆಗೆ ವಿಶಿಷ್ಟವಾದ ಸೂಕ್ಷ್ಮಾಣುರಹಿತಗೊಳಿಸಿದ ಆಹಾರ, ಹಾಗೂ ವಿಟಮಿನ್ ಗಳನ್ನು ಕೊಡಲಾಯಿತು.

ದುಃಖದ ಸಂಗತಿಯೆಂದರೆ ಆತನಿಗೆ 12 ವರ್ಷ ಆಗಿದ್ದಾಗ, ಅಸ್ತಿಮಜ್ಜೆ ಯ ಕಸಿಯ ಶಸ್ತ್ರಚಿಕಿತ್ಸೆಯ ನಂತರ ಕೆಲವೇ ತಿಂಗಳುಗಳಲ್ಲಿ ಆತ ಸಾಮಾನ್ಯವಾದ ಸೂಕ್ಷ್ಮಾಣು ಸೋಂಕಿನಿಂದ ಸತ್ತುಹೋದ !!!

ಇದು ಮಾನವ ಜನಾಂಗಕ್ಕೆ ಎರಡು ಅಂಶಗಳನ್ನು ತಿಳಿಸುತ್ತದೆ.

1. ರೋಗನಿರೋಧಕ ಶಕ್ತಿಯ ಹೊರತಾಗಿ ಸೂಕ್ಷ್ಮಾಣು ತುಂಬಿದ ಪ್ರಪಂಚದಲ್ಲಿ ಬದುಕುವ ಸಾಧ್ಯತೆ ಇಲ್ಲ ಎಂಬುದಕ್ಕೆ ಇದು ನಿದರ್ಶನ.

2. ಅದುವೇ, ಸೂಕ್ಷ್ಮಾಣುಗಳ ಮೇಲಿನ ಮನುಷ್ಯನ ಅವಲಂಬನೆ ಮತ್ತು ಅವುಗಳ ಕೊಡುಗೆಗಳ ಮೇಲಿನ ಅವಲಂಬನೆಗೂ ಸಾಕ್ಷಿಯಾಯಿತು.

Dr-Ragavendra-Prasad-Bangaradka

ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಪ್ರಸಾದ್ ಹೆಲ್ತ್ ಕೇರ್ ಸೆಂಟರ್,
ಪುರುಷರಕಟ್ಟೆ, ,ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ,ಸುಳ್ಯ.
ಮೊಬೈಲ್: 97405 45979
rpbangaradka@gmail.com.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!