ಏ ಥೂ….. ಉಗಿಬೇಡ್ರಪ್ಪಾ ….! ಕೋರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ, ಪ್ರಸರಣ ತಡೆಯುವಿಕೆಯೊಂದೇ ಚಿಕಿತ್ಸೆ.ಉಗುಳುವದ ಬಿಟ್ಟರೆ ನಮ್ಮ ದೇಶದ ಮೇಲೆ ಕೋರೋನಾದ ಕರಿಛಾಯೆ ದೂರವಾಗಬಹುದು.
ಥೂ ಏನ್ ಜನಾನಪ್ಪಾ ಎಲ್ಲಕಂಡ್ರೂ ಉಗ್ದೆ ಉಗಿತಾರೆ “ಯಾಕ್ಥೂ …ಖ್ಯಾಕ್ ಥೂ …ವ್ಯಾಕ್ಥೂ…..ಗುರ್ರರ್ರ …ದನ ಹೂಂಕರಿಸಿದಂತೆ ಸುಧೀರ್ಘವಾಗಿ ಮೂಗೇರಿಸಿ ಪಾವು ಕಿಲೋ ಗೊಣ್ಣೆಯನ್ನು. ಮೂಗೆಂಬ ಡಬಲ್ ಬ್ಯಾರಲ್ ಬಂದೂಕಿನಿಂದ ನಭೋಮಂಡಲಕ್ಕೆ ಕ್ಷಿಪಣಿ ಹಾರಿಬಿಡುವುದು ಒಂದು ಪ್ರಾಣಘಾತುಕ ಕಲೆಯಾದರೆ ,”ಚಿರಕ್ ಚಿರಕ್…”.ಎಂದು ಚಿಂವ್ ಚಿಂವ್ ಗುಬ್ಬಚ್ಚಿಯಂತೆ ಸದ್ದು ಮಾಡಿ ಅದೆ ಗುಬ್ಬಚ್ಚಿ ಕಕ್ಕ ಮಾಡಿದಂತೆ ಚಿಕ್ಕದಾಗಿ ಉಗಿದು,ಉಗುಳು ನೆಲಕಾಣದೆ ಗಾಳಿಯಲ್ಲೆ ಲೀನ ಮಾಡುವ ಕಲಾವಿದರ ಸಾಧನೆಯ ಹಿಂದೆ ವರ್ಷಗಳ ಪರಿಶ್ರಮ . ಗುಟಕಾ ತಿಂದವರದೋ ಕಂಡಲ್ಲಿ ಉಗುಳುವುದು ಜನ್ಮಸಿದ್ದ ಹಕ್ಕು.
ಎಲೆ ಅಡಿಕೆ ಜಗಿದವರು ಕೆಂಪು ರಂಜಕದ ದ್ರಾವಣದಂತಹ ಅರ್ಧ ಲೀಟರ್ ಜೊಲ್ಲು ಪಚಕ್ ಎಂದು ಉಗಿದು ಗೋಡೆ ,ಮೂಲೆ,ಬಸ್ಸಿನ ಮೂಲೆ ಎಲ್ಲೆಂದರಲ್ಲಿ ಜಿಹ್ವಾ ಶಕ್ತಿಯ ಮೌಖಿಕ ಕಲೆಯನ್ನು ಅನಾವರಣಗೊಳಿಸುತ್ತಾರೆ. ನಿಂತಲ್ಲಿಂದ ಹತ್ತಿಪ್ಪತ್ತು ಅಡಿ ದೂರ ತಮ್ಮ ಕೆಂಪು ಜಿಹ್ವಾಜಲ ಪ್ರಸರಣಕಲೆಯನ್ನು “ಜಿಮ್ನಾಸ್ಟಿಕ್” ಮಾಡಿದಂತೆ ಹೆಮ್ಮೆಯಿಂದ ಪ್ರದರ್ಶಿಸುತ್ತ ಮೀಸೆ, ತುಟಿ,ಕಪೋಲಗಳ ಮೇಲೆ ಸಿಡಿದ ಕೆಂಪು ಬಿಂದುಗಳನ್ನು ಹೆಮ್ಮೆಯಿಂದ ವರೆಸಿಕೊಳ್ಳುವವರನ್ನು ಕಂಡಾಗ ಕೀಳರಿಮೆಯಾಗದೆ ಇರದು .ಬಸ್ಸು ,ರೈಲು ,ಲಾರಿ,ಕಾಂಪೌಂಡ್ ,ಸಾರ್ವಜನಿಕ ಶೌಚಾಲಯ ಎಲ್ಲೆಂದರಲ್ಲಿ ಅಗಿದು ಉಗಿದವರು ಬರೆದ ಚಿತ್ತಾರಗಳನ್ನು ಅರ್ಥೈಸಲು ಒಳಗಣ್ಣು ಇರಬೇಕು ….!!!..ವಿಶೇಷವೆಂದರೆ ಈ ಜಿಹ್ವಾ ಜೊಲ್ಲುಕಲೆಯ ಕಲಾಕೃತಿಗಳು ಅಡಿಕೆ ಹರಳುಗಳ ಒಳಗೊಂಡ ಮೂರು ಆಯಾಮದ( ತ್ರೀಡಿ HD) ಕಲಾಕೃತಿಗಳ ನೋಡಿದರೆ ವಾಂತಿಮಾಡಿ ನಮನ ಅರ್ಪಿಸಬೇಕೆನ್ನುವ ಭಾವನೆ ಬಂದೆ ಬರುತ್ತದೆ .
ದಾರಿಯಲ್ಲಿ ಕಣ್ಣು ಮುಚ್ಚಿ ನಡೆಯಲಾಗದು, ಉಗುಳ ಕಲೆಯ ಕಡೆಗಣಿಸಲಾಗದು …!
ಮನುಷ್ಯರು ಗುಟಕಾ ತಿಂದಿರಬಹುದು , ಗುಟಕಾದಿಂದ ತಿನ್ನಲ್ಪಟ್ಟಿರಬಹುದು. .ಕೆಂಪು,ಕಪ್ಪು, ಕೆಂಚು ,ಬೂದು ಬಣ್ಣದ ಹಲ್ಲುಗಳವರು ಎಲ್ಲೆಂದರಲ್ಲಿ “ಯಾಕ್ಥೂ ,ಖಾಕ್ಥೂ ,” ಎಂದು ಕೆಂಪನೆಯ ಭೇದಿಯಂತೆ ಲಾಲರಸ ಸ್ರವಿಸಿ ತಮ್ಮ ಜನ್ಮಸಿದ್ದ ಹಕ್ಕನ್ನು ಪಡೆದು ಬೀಗುತ್ತಾರೆ .ಅಂದಹಾಗೆ ಪ್ರಸಿದ್ದ ಕಂಪನಿಯು ಗುಟಕಾ ಮಾರಿ ಅದೆ ಗುಟಕಾ ಹೆಸರಿನಲ್ಲಿ ವಿಮಾನಯಾನಕ್ಕೂ ಕೈಹಾಕಿದ್ದಾನೆ.ಇದರ ಹಿಂದೆ ಅಗಿದು ಉಗಿದವರ ಅಪಾರ ಕೊಡುಗೆಯಿದೆ .ಆಕಾಶದಲ್ಲಿ ಹಾರುವ ವಿಮಾನ ನೋಡಿ” ನಾ ತಿಂದು ಉಗಿದಿರೋ ಕಾಸಲ್ಲಿ ಆ ವಿಮಾನ ಹಾರ್ತಾ ಇದೆ ” ಎಂದು “ಗುಟುಕಿ” ಹೆಮ್ಮೆ ಪಡಬಹುದು .
“ಥೋ … ಯಾರಪ್ಪಾ ಇವನು …ಎಂತಾ ಟಾಪಿಕ್ ಎತ್ಕೊಂಡವನೆ ಬರಿಯಕ್ಕೆ” ಅನ್ಕೊಬೋದು .”ಈ ಉಗುಳಿಗೂ
ಮನುಜನಿಗೂ ಮೂಕ ನಂ (ಅಂ)ಟಿದೆ……ಅಣ್ಣಯ್ಯ ಅಣ್ಣಯ್ಯ ಬಾರೋ ಗುಟಕಾ ತಿಂದು ಉಗುಳೋ … “
ಉಗುಳು ಉಗುಳಿನಂತೆ ನಮಗೆ ಅಂಟಿಬಿಟ್ಟಿದೆ . “ಅಯ್ಯೋ…. ಥೂ ನನ್ಮಗನೆ ಎಲ್ಲೋ ಹೋಗಿದ್ದೆ ಹಾಳಾಗಿ ಇಷ್ಟದಿನ? ” ಎಂಬ ಅತಿ ಅಕ್ಕರೆಯ ಮಾತಿನಿಂದ ಹಿಡಿದು ” ಎಲ್ಲೋಗಿದ್ದ ಕೇಳಿ… ಥೂ ಅಂಥ ಉಗಿ ಅವನ ಮಕ್ಕೆ ” ಎಂಬ ಎಲ್ಲ ರೀತಿಯ ಉಗುಳುವಿಕೆಯ ಮಾತುಗಳು.
ಪ್ರತಿ ಉಗುಳು ಜೀವಿಯ ಬಾಯಿಯಿಂದ ದಿನಕ್ಕೆ ಹತ್ತಾರು ಸಲ ಹೊರಬರುತ್ತವೆ.ಈ ಅಮಾಯಕ(?) ಉಗುಳು ಹಾಗೆ ನೋಡಿದರೆ ಬಹು ಉಪಕಾರಿ. ಅತ್ತ ಯಾವನೋ ಪುಣ್ಯಾತ್ಮ ಉಗುಳು ಬಂಢವಾಳದಿಂದ ವಿಮಾನ ಹಾರಿಸಿದರೆ ,ಇತ್ತ ಭಾರತದ ಪ್ರತಿ ಆಸ್ಪತ್ರೆ ,ಔಷಧಂಗಡಿ,ಔಷಧ ಕಂಪನಿಗಳು ,ಹಾಗೂ ಪ್ರಯೋಗಾಲಯಗಳು ಈ ಉಗುಳುಗಳಿಂದ ಕೋಟಿ ಕೋಟಿ ಸಂಪಾದನೆ ಮಾಡುತ್ತಿವೆ. ಅತ್ತ ವೈದ್ಯರು ” ಥೋ ಎಷ್ಟಪ್ಪಾ ಪೇಷಂಟು ನೋಡೋದು? ” ಎನ್ನುತ್ತ ಲಕ್ಷ ಲಕ್ಷ ಸಂಪಾದನೆ ಮಾಡುತಿದ್ದಾರೆ.
ಉಗುಳಿನಿಂದ ಹರಡುವ ಕಾಯಿಲೆ:
ಉಗುಳಿನಲ್ಲಿ ಅಪಾರ ಶಕ್ತಿ. ಹತ್ತು ಹಲವಾರು ಬ್ಯಾಕ್ಟೀರಿಯಾ.ಫಂಗಸ್ ,ನೂರಾರು ವೈರಸ್ಗಳು ಆತನ ಉಗುಳಿನಿಂದ ಹೊರಬಂದು ಹತ್ತಿರದವರ ಮೂಗು ಬಾಯಿಗಳಿಂದ ದೇಹದ ಒಳಹೋಕ್ಕು ಶ್ವಾಸಕೋಶದ ಸೊಂಕು ಉಂಟುಮಾಡಿ,ನಗಡಿ ಕೆಮ್ಮುಗಳ ಚೈನ್ ರಿಯಾಕ್ಷನ್ (ಸರಣಿ ಅಪಘಾತ ಅನಬಹುದು!?) ಅರಂಭಿಸಿಬಿಡುತ್ತವೆ, ಒಂದು ಕೆಮ್ಮಿನ ನಂತರದ ಕ್ಯಾಕರಿಕೆಯ ಉಗುಳಿನಿಂದ ಹರಡುವ “ಟಿಬಿ “ಕಾಯಿಲೆ ನಮ್ಮ ದೇಶವನ್ನು ಆರ್ಥಿಕವಾಗಿ ತಿನ್ನುತ್ತಿದೆ .ಸರಕಾರ ಹಲವಾರು ಕಾರ್ಯ ಕ್ರಮ ಹಮ್ಮಿಕೊಂಡು ಟಿಬಿ ನಿಯಂತ್ರಿಸಲು ಪರಿಶ್ರಮ ಪಡುತಿದ್ದರೆ ,ಇತ್ತ ರೋಗಿಗಳು ಎಲ್ಲೆಂದರಲ್ಲಿ ” ಕ್ಯಾಕರಿಸಿ ಉಗಿದು ” ರೋಗ ಹರಡಿ ಸರಕಾರಿ ಸವಲತ್ತುಗಳನ್ನು ಅನುಭವಿಸಲು ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ ಉಗುಳು ಬೀಜಾಸುರರಾಗಿ ರೋಗಿಗಳ ಸಂಖ್ಯೆ ನೂರ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಕ್ಸಟೆನ್ಸಿವ್ ಡ್ರಗ್ ರೆಸಿಸ್ಟಂಟ್” XDR“ಎಂಬ ಕಠಿಣ ಟಿಬಿ ಸೊಂಕು ಚಿಕಿತ್ಸೆ ಮಾಡಲು ಅಸಾಧ್ಯವೆನ್ನುವಷ್ಟು ಜಟಿಲ .ಈ ಸೊಂಕಿಗೆ ತುತ್ತಾದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಲೆಯಿಂದ ಮರಣ ಹೊಂದುತ್ತಾರೆ .ಒಬ್ಬ ಸೊಂಕಿತ ವ್ಯಕ್ತಿಯ ಚಿಕಿತ್ಸಾ ಖರ್ಚು,ಆತನ ಸಂಪಾದನೆಯ ಕಡಿತ,ಅವನಿಂದ ಕುಟುಂಬದ ಕಷ್ಟಗಳು ,ಹೀಗೆ ಲೆಕ್ಕ ಹಾಕುತ್ತಾ ಹೋದರೆ ಅಗೋಚರ ಖರ್ಚುಗಳಿಂದ ನಮ್ಮ ದೇಶದ ಮೇಲೆ ಸಾವಿರಾರು ಕೋಟಿಗಳಷ್ಟ ಆರ್ಥಿಕ ಭಾರ …!
ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ನಮ್ಮ ದೇಶಕ್ಕೆ ಕೋಟ್ಯಾನುಕೋಟಿ ನಷ್ಟ …..! ನಂಬಲಾಗದು.
ಇದು ಕೇವಲ ಕ್ಷಯರೋಗದ ಪ್ರಸರಣವಲ್ಲ. ಹಲವಾರು ಬೇರೆ ಕಾಯಿಲೆಗಳು .ಸಣ್ಣ ಪುಟ್ಟ ನೆಗಡಿಗಳಿಂದ ಆರಂಭವಾಗಿ ದುರ್ಬಲ ಸೊಂಕುಗಳು ಒಂದೆರಡು ದಿನದ ಜ್ವರ ಕರುಣಿಸಿ ಕೆಲದಿನಗಳ ಕೆಲಸ, ಸಂಪಾದನೆ, ತಡೆಯುತ್ತವೆ. ಕಿಕ್ಕಿರಿದು ತುಂಬಿದ ಬಸ್ಸು, ರೈಲಿನಲ್ಲಿ ,ಒಬ್ಬ ವ್ಯಕ್ತಿ ಕಿಟಕಿಯಾಚೆ ” ಥೂ ” ಎಂದು ಉಗುಳಿದರೆ ,ಅತನ ದೇಹದಲ್ಲಿನ ಸೂಕ್ಷ್ಮಾಣು ಜೀವಿಗಳು ಬಸ್ಸಿನ ಎಲ್ಲ ಪ್ರಯಾಣಿಕರ ದೇಹ ಪ್ರವೇಶಿಸಬಹುದು… ಯೋಚಿಸಿ ನೋಡಿ ….
ಇನ್ನು ..ಮುಂದಿನ ಮಾತು ನಿಮಗಿಷ್ಟವಿಲ್ಲದಿದ್ದರೂ ಕೇಳಲೆಬೇಕು … ಬಯಲಲಿ ಮೂಲ ಮೂತ್ರ ವಿಸರ್ಜನೆಗಳ ಸೊಂಕುಗಳು ಹರಡುವ ವಿಧಾನಗಳನ್ನು ನಾನು ವಿವರಿಸಿದರೆ ಓದುಗರು ಈ ಲೇಖನದ ಮೇಲೆ ವಾಂತಿ ಮಾಡಬಹುದು .ಹಾಂ…. ಅಂದ ಹಾಗೆ “ವಾಂತಿ ಮಾಡುವುದೆ” ಮರ್ತಿದ್ದೆ “ಥೋ ಥೋ …ಸಾರಿ …ಸಾರಿ ವಾಂತಿಯ ಬಗ್ಗೆ ಬರೆಯುವುದೆ ಮರ್ತಿದ್ದೆ” . ಇನ್ನೂ ನಮ್ಮ ಜನ ಸರಕಾರಿ ಬಸ್ಸುಗಳ ಆಸನಗಳ ಮೇಲೆ ,ಬಸ್ಸಿನ ಮಧ್ಯ ಯಾವ ಹಿಂಜರಿಕೆಯಿಲ್ಲದೆ ವಾಂತಿ ಮಾಡಿ .ಪ್ರಯಾಣದ ಸುಖದ ಸುಂಕವನ್ನು ವಾಂತಿಯ ರೂಪದಲ್ಲಿ ಬಸ್ಸಿನ ಸಿಬ್ಬಂದಿ ಹಾಗೂ ಸಹಪ್ರಯಾಣಿಕರಿಗೆ ಇತ್ತು ಇಳಿದುಬಿಡುತ್ತಾರೆ. ವಾಂತಿಯ ವೈಭವ ವರ್ಣಿಸಲಾರೆ .ಅದಕ್ಕೆ ತೇಜಸ್ವಿಯವರ “ಜುಗಾರಿ ಕ್ರಾಸ್( ಕರ್ವಾಲೋ?) ” ಓದಿಕೊಳ್ಳಬೇಕು.
ನಿರುಪದ್ರವಿ ಕೆಮ್ಮು , ನಿರಪಾಯಕಾರಿ ಸೀನುಗಳ ನಂತರ ಬರುವ ಉಗುಳು ಗೊಣ್ಣೆಗಳು ಹಾರಿಸುವ ಬ್ಯಾಕ್ಟೀರಿಯಾ ವೈರಸ್ಗಳು ತಮಗೆ ಸಾಕಾದಷ್ಟು ಬಲಿಗಳನ್ನು ತೆಗೆದುಕೊಳ್ಳುತಿದ್ದರೂ ಕೆಮ್ಮಿ ಉಗುಳುವ ಚಾಳಿ ನಿಲ್ಲಲಿಲ್ಲ.ಇಷ್ಟೆ ಯಾಕೆ ಹಂದಿ ಜ್ವರ ಹಕ್ಕಿ ಜ್ವರ ಸಾಲದೆಂಬಂತೆ ಮರುಭೂಮಿಜ್ವರ ಅಥವಾ ಮಧ್ಯಪ್ರಾಚ್ಯ ಅರ್ಥಾರ್ಥ ಮಿಡಲ್ ಈಸ್ಟ ರೆಸ್ಪಿರೆಟರಿ ವೈರಸ್ MERS ಬಂದು ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡರೆ. ” ಥೂ… ಅದೆಂಥಾ ಜ್ವರ ಇರ್ಬೋದು ” ಎಂದು ತಲೆ ಚಚ್ಚಿಕೊಳ್ಳುತ್ತ ಸುಮ್ಮನಾದರೂ, ಉಗುಳುವುದು ಬಿಡಲಿಲ್ಲ .
ಹಂದಿ,ಹಕ್ಕಿ ಕೋಳಿಗಳನ್ನು ಕೊಂದು ಕಾಯಿಲೆ ನಿಯಂತ್ರಿಸಿ.” ಉಸ್ಸಪ್ಪಾ .. “ಎಂದು ಎದುಸಿರು ಬಿಡುವಷ್ಟರಲ್ಲಿ ಬಂದೆ ಬಿಟ್ಟಿತ್ತು ” ಮನುಷ್ಯರ ಜ್ವರ “.ಯಾವ ಅಮಾಯಕ ಪ್ರಾಣಿ ಪಕ್ಷಿಗಳ ಮೇಲೆ ಗೂಬೆ ಕೂರಿಸಲಾಗದ ಪರಿಸ್ಥಿತಿ ಈಗ. ಮನುಷ್ಯರೆ ಹುಟ್ಟಿಸಿದ ” ಅತ್ಯಂತ ಭಯಂಕರ ” ವೈರಸ್ ,ಚೈನಾ ವೈರಸ್,ಉಹಾನ್ ವೈರಸ್ ,ಕೋರೋನಾ ವೈರಸ್ ,ಕೋವಿಡ್-19. ಕೆಮ್ಮಿ ಉಗುಳುವುದು ದೂರದ ಮಾತು,ಸೊಂಕಿತರ ದೃಷ್ಟಿ ಬಿದ್ದರೂ ಹರಡಿದಂತೆ.ಗಾಳಿ ಬೀಸಿದ ಕಡೆಯಲ್ಲಾ ಹರಡಿದ ಕಾಯಿಲೆಗೆ ಚೈನಾ ಮಂಡಿಯೂರಿ ನಿಂತಿದೆ .ಜಗತ್ತಿನ ದೊಡ್ಡಣ್ಣ ಅಮೇರಿಕದ ಮುಂದೆ ಮದಗಜದಂತೆ ಘೀಳಿಡುತಿದ್ದ ಚೈನಾ ಈಗ ಅಕ್ಷರಶಃ ಕುಂಯ್ಗುಡುತ್ತಿದೆ. ಪತ್ರಿಕೆಗಳು ಸಾವಿರ ಸಂಖ್ಯೆಯಲ್ಲಿ ಸಾವಿನ ಲೆಕ್ಕ ಹೇಳಿದರೆ .ಉಹಾನ್ ಪ್ರಾಂತ್ಯದ ಉಪಗ್ರಹ ಚಿತ್ರಗಳು ಪರಿಸರದಲ್ಲಿನ ರಾಸಾಯನಿಕಗಳ ಸಾಂದ್ರತೆ ಲೆಕ್ಕಹಾಕಿ, ಹೆಚ್ಚಿನ ಸಂಖ್ಯೆಯಲ್ಲಿ ಮನುಷ್ಯರ ಕಳೆಬರಗಳ ದಹನದಿಂದ ಉಂಟಾದ ಮಾಲಿನ್ಯ ಎಂದು ವರದಿ ಇತ್ತರೆ ,ಕಮ್ಯೂನಿಷ್ಟ ನಾಡಿನ ನಿಷ್ಠ ಪತ್ರಿಕೆಗಳ ವಾರ್ತೆಗಳನ್ನು ನಂಬ ಬೇಕೋ ಬೇಡವೂ ಎಂಬ ಸಂದಿಗ್ಧತೆ .
ಕೋರೋನ ಭಾರತಕ್ಕೆ ಬಂದಾಯ್ತು–ಬಂದ ಮೇಲೆ ಏನು ?
ಕೋರೋನ ಭಾರತಕ್ಕೆ ಬಂದಾಯ್ತು .ಬರದೆ ಇರುವ ಸಾಧ್ಯತೆಗಳು ನಗಣ್ಯವಾಗಿದ್ದವು .ಬಂದ ಮೇಲೆ ಏನು .?
ಅಪಾರ ಜನಸಂಖ್ಯೆ, ಜನ ನಿಬಿಡ ನಿಲ್ದಾಣಗಳು, ಸಂತೆ, ಮಾರುಕಟ್ಟೆಗಳು, ಶಾಲೆ, ಸಂಸ್ಥೆಗಳಲ್ಲಿ ಒಬ್ಬ ಸೊಂಕಿತ ಕೆಮ್ಮಿದರೂ ಸಾಕು ಇಡಿ ಗುಂಪಿಗೆ ಸೊಂಕು ತಗಲಬಹುದು .ಹಿಂದೆ ಮುಂದೆ ನೋಡದೆ “ಥೂ ಥೂ ಪಚಕ್ ಪಿಚಕ್, “ಎಂದು ಉಗುಳಿ ಅಭ್ಯಾಸವಿದ್ದ ನಮಗೆ ಇದ್ದಕ್ಕಿದ್ದಂತೆ ಉಗುಳದೆ ಇರುವುದು ಸಾಧ್ಯವೆ ? ತುಪಾಕಿ,ಕ್ಷಿಪಣಿ,ಗಲಭೆ,ಭೂಕಂಪಗಳೂ ಮಾಡಲಾರದ ಕೆಲಸವನ್ನು ಒಂದು” ಥೂ ” ಕ್ಷಣಾರ್ಧದದಲ್ಲಿ ಮಾಡಿಬಿಡುತ್ತದೆ. ನಮ್ಮಉಗುಳುವ ಅಭ್ಯಾಸವನ್ನು ಹೇಗೆ ನಿಯಂತ್ರಿಸುವುದು ?
ಶತಕೋಟಿಗೂ ಮೀರಿದ ಜನಸಂಖ್ಯೆಯಲ್ಲಿ ಕಾಲುಭಾಗದಷ್ಟು ಜನ ತಾಂಬೂಲಾಭ್ಯಾಸಿಗಳು ….!! ನಗರದ ಸುಶೀಕ್ಷಿತರೂ ಹೊರತಲ್ಲ ,ವಿಮಾನ ನಿಲ್ದಾಣದ ಮೂತ್ರಿಗಳಲ್ಲೂ ನಾಚಿಕೆಯಿಲ್ಲದೆ ಥೂ ಎಂದು “ಉಗುಳಿ ” ಕೋಟು ಸೂಟು ಸರಿಪಡಿಸಿಕೊಳ್ಳುವವರಿದ್ದಾರೆ.ಶಿಷ್ಟಾಚಾರದ ಕಗ್ಗೊಲೆ.ನಮ್ಮ ಉಗುಳು ನಮಗೆ ಉರುಳು .ಉಗುಳು ಪ್ರತಿಭಂದಕ ಕಾನೂನು ತೆಗೆದರೆ ಮಾತ್ರ ಕೋರೋನಾ ನಿಯಂತ್ರಣ ಸಾಧ್ಯ. ” ಇಲ್ಲಿ ಉಗುಳಬಾರದು ” ಎಂಬ ಬರಹದ ಕೆಳಗೆ ಉಗುಳಿ ಹೋಗುವ ಜನಗಳ ಉಗುಳು ತಡೆಯುವುದು, ಬೆಕ್ಕಿಗೆ ಗಂಟೆ ಕಟ್ಟಿದಷ್ಟೆ ಅಸಾಧ್ಯ. ಸದ್ಯಕ್ಕೆ ನಮ್ಮ ಅಳಿವು ಉಳಿವು ಉಗುಳಿನಲ್ಲಿದೆ. ದೇಶದ ಭದ್ರತೆ ಜನರ ಅರೋಗ್ಯ ಹಾಗೂ ಆರೋಗ್ಯ ವ್ಯವಸ್ಥೆ ಬಲಪಡಿಸುವದರಲ್ಲಿದೆ ಎಂದು ನಿಸರ್ಗ ಏಟುಕೊಟ್ಟು ಕಲಿಸಿದ ಪಾಠ. ಇಂತಹ ಕಾಯಿಲೆಗಳ ಮುಂದೆ ಯಾವ ಮಿಲಿಟರಿ ,ಏರ್ಫೋರ್ಸು ತಡೆಯಲ್ಲ.ಕೊನೆಗೆ ಆರೋಗ್ಯವೆ ಭಾಗ್ಯ .ಸದ್ಯಕ್ಕೆ ಉಗುಳುವದ ಬಿಟ್ಟರೆ ನಮ್ಮ ದೇಶದ ಮೇಲೆ ಕೋರೋನಾದ ಕರಿಛಾಯೆ ದೂರವಾಗಬಹುದು.
ಕೋರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ, ಪ್ರಸರಣ ತಡೆಯುವಿಕೆಯೊಂದೆ ಚಿಕಿತ್ಸೆ:
ಕೊನೆಗೆ
” ಉಗುಳೆ ,ಉಗುಳೆ
ನೀ ಉಸಿರ ಕೊಲ್ಲಬೇಡ “
“ಥೂ ಆದೇನ್ ಹಾಡೋ …ಅದೇನ್‌ರೋಗಾನೋ ..
ಒಬ್ಬ ಟಿಬಿ ರೋಗಿ ಕೆಮ್ಮಿದಾಗ ಅಥವಾ ಉಗುಳಿದಾಗ ಟಿಬಿ ರೋಗಾಣುಗಳು 55 ರಿಂದ 38 ಕಿಮಿ ಪ್ರತಿ ಘಂಟೆಯ ವೇಗದಿಂದ ,ಶ್ವಾಸಕೋಶಗಳಿಂದ ಉಚ್ಚಾಟಿಸಲ್ಪಡುತ್ತವೆ .ಸುಮಾರು ಆರು ಮೀಟರ್ ಅಂತರದ ವರೆಗೂ ರೋಗಾಣುಗಳ ಹರಡಿದರೆ ,ಗಾಳಿಯಲ್ಲಿ ಸುಮಾರು ಹತ್ತು ನಿಮಿಷಗಳವರೆಗೆ ತೇಲುತ್ತವೆ .ಕೆಲ ರೋಗಾಣುಗಳು ಕೆಳಗೆ ಬಿದ್ದು ಅಲ್ಲಿನ ವಸ್ತುಗಳ ಅಥವಾ ಮಣ್ಣಿನಲ್ಲಿ ಸೇರಿ ಸೊಂಕಿಗೆ ಮೂಲವಾಗಬಹುದು . ಹಾಗಾಗಿ ಹತ್ತಿರ ಯಾರೂ ಇಲ್ಲವೆಂದು ಸಾರ್ವಜನಿಕ ಸ್ಥಳಗಳಲ್ಲಿ ನಿರಾತಂಕವಾಗಿ ಕಮ್ಮಿ ಉಗುಳಿ ಹೋದ ಮೆಲೆ ಅಲ್ಲಿಗೆ ಬರುವವರಿಗೆ ರೋಗಾಣುಗಳ ಸ್ವಾಗತ .
ಪ್ರತಿ ಟಿಬಿರೋಗಿ ಒಂದು ಕೆಮ್ಮಿನಿಂದ ಸುಮಾರು ಇಪ್ಪತ್ತು ಆರೋಗ್ಯವಂತರಿಗೆ ಸೊಂಕು ಹರಡುತ್ತಾನೆ.ಟಿಬಿಯ ಉದಾಹರಣೆಯಿಂದ ಸದ್ಯದ ಕೋರೋನಾ ಸೊಂಕು ಹರಡುವ ತೀವ್ರತೆಯನ್ನು ಲೆಕ್ಕಹಾಕಬಹುದು. ಒಂದು ಅನವಶ್ಯಕ ” ಥೂ ” ಅಥವಾ ರಕ್ಣೆಯಿಲ್ಲದ ” ಆಕ್ಷಿ ” ಹತ್ತಿರದ ಎಲ್ಲರನ್ನು ಸೊಂಕಿಗೀಡು ಮಾಡಬಹುದು .ಇನ್ನು ಸೊಂಕಿನ ತೀವ್ರತೆ ಕೆಮ್ಮಿದ ಸ್ಥಳಗಳ ಮೇಲೆ ಅವಲಂಬಿತ ವಾಗಿರುತ್ತದೆ .ಚಿಕ್ಕ ಜನನಿಬಿಡ ಸ್ಥಳದಲ್ಲಿ ಅಂದರೆ ಚಿಕ್ಕ ಕೋಣೆ ,ಬಸ್ಸು,ಕಿಕ್ಕಿರಿದು ತುಂಬಿದ ಬಸ್ಸು, ಸಭೇ , ಗಳಲ್ಲಿನ ಒಂದು “ಥೂ ” ವಿನಲ್ಲಿ ಉತ್ತತ್ತಿಯಗುವ ಪ್ರತಿ ವೈರಸ್ ,ಬ್ಯಾಕ್ಟೀರಿಯಾ ಅಕ್ಕಪಕ್ಕದದವರ ದೇಹ ಸೇರಿ ತಕ್ಷಣ ರೋಗ ಉಂಟುಮಾಡುತ್ತದೆ .ಇನ್ನು ಹತ್ತಿರವಿದ್ದಷ್ಟು ದೇಹಪ್ರವೇಶಿಸುವ ರೋಗಾಣುಗಳ ಸಂಖ್ಯೆ ಹೆಚ್ಚು .ಹಾಗಾಗಿ ಸೋಂಕಿನ ನಂತರ ರೋಗಲಕ್ಕಷಣಗಳು ಶೀಘ್ರವಾಗಿ ಕಾಣಿಸಿಕೊಳ್ಳುತ್ತವೆ .
ಇನ್ನು ಕೋರೋನಾ ವೈರಸ್ನ ಸೊಂಕು ಬಂದಾಗ ಸಾವಿರಾರು ರೋಗಿಗಳ ಪ್ರತ್ಯೇಕತೆ ಚಿಕಿತ್ಸೆ ಅಸಾಧ್ಯದ ಮಾತು .ವೈದ್ಯರನ್ನು ದಾದಿಯರನ್ನೂ ಬಿಡದ ಈ ರೋಗದ ವೈದ್ಯಕೀಯ ನಿಯಂತ್ರಣ ಕಷ್ಟ ಸಾಧ್ಯವಾಗಬಹುದು .ಹಾಗಾಗಿ ಕಟ್ಟುನಿಟ್ಟಿನ ರೋಗಪ್ರಸಾರ ತಡೆಯುವ ಕಾನೂನುಗಳ ಅನುಷ್ಠಾನ ಹಾಗೂ ಪಾಲನೆ ಅಗತ್ಯ .ಕೋರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ, ಪ್ರಸರಣ ತಡೆಯುವಿಕೆಯೊಂದೆ ಚಿಕಿತ್ಸೆ.
ಡಾ. ಸಲೀಮ್ ನದಾಫ್
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415