Health Vision

Health Vision

SUBSCRIBE

Magazine

Click Here

ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವಿಕೆ

ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವಿಕೆ ಮಾಡುವುದರಿಂದ ಬಾಯಿಯೊಳಗಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಸಂಖ್ಯೆ ತಾತ್ಕಾಲಿಕವಾಗಿ ಕುಂಠಿತವಾಗಿವೆ ಎಂದೂ ತಿಳಿದು ಬಂದಿದೆ.

gargling athava bayi mukkalisuvike ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವಿಕೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ಜಾಗತಿಕವಾಗಿ 210 ಕ್ಕೂ ದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ತಂದಿಟ್ಟಿರುವ ಕೋವಿಡ್-19 ರೋಗದ ಆರ್ಭಟದಿಂದಾಗಿ ಜನರು ರೋಗವನ್ನು ತಡೆಗಟ್ಟುವ ವಿಚಾರವಾಗಿ ಹೆಚ್ಚು ಹೆಚ್ಚು ತಲೆಗೆಡಿಸಿಕೊಂಡಿದ್ದಾರೆ. ಈ ರೋಗಕ್ಕೆ ಲಸಿಕೆ ಮತ್ತು ಚಿಕಿತ್ಸೆ ಇಲ್ಲದ ಕಾರಣದಿಂದಾಗಿ ವೈರಾಣು ದೇಹಕ್ಕೆ ಸೇರದಂತೆ ಮತ್ತು ದೇಹದೊಳಗೆ ಸೇರಿದ ವೈರಾಣು ನಿರ್ಮೂಲನಕ್ಕೆ ಜನರು ಹೆಚ್ಚು ಉಪಾಯಗಳನ್ನು ಕಂಡು ಹುಡುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಹೆಚ್ಚು ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಈ ಗಾಗ್ರ್ಲಿಂಗ್ ವಿಚಾರದ ಬಗ್ಗೆ ಯಾವುದೇ ರೀತಿಯ ವೈಜ್ಞಾನಿಕವಾದ ದೊಡ್ಡ ಮಟ್ಟದ ಸಂಶೋಧನೆ ನಡೆದಿಲ್ಲ ಹಾಗೂ ಗಾಗ್ರ್ಲಿಂಗ್‍ನ ಉಪಯೋಗಗಳ ಬಗ್ಗೆ ಸೂಕ್ತವಾದ ಮಾಹಿತಿಯೂ ಇರುವುದಿಲ್ಲ. ಅಲ್ಲಲ್ಲಿ ಸಣ್ಣ ಮಟ್ಟಿನ ಪ್ರಾಯೋಗಿಕ ಪರೀಕ್ಷೆಗಳು ನಡೆದು ಈ ರೀತಿ ಗಾಗ್ರ್ಲಿಂಗ್ ಮಾಡುವುದರಿಂದ ಬಾಯಿಯೊಳಗಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಸಂಖ್ಯೆ ತಾತ್ಕಾಲಿಕವಾಗಿ ಕುಂಠಿತವಾಗಿವೆ ಎಂದೂ ತಿಳಿದು ಬಂದಿದೆ. ಆದರೆ ಈ ಕೋವಿಡ್-19 ರೋಗವನ್ನು ತಡೆಗಟ್ಟುವ ಮತ್ತು ರೋಗದ ಚಿಕಿತ್ಸೆಯಲ್ಲಿ ಗಾಗ್ರ್ಲಿಂಗ್‍ನ ಮಹತ್ವದ ಮತ್ತು ಪಾತ್ರದ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ. ಸಾಮಾನ್ಯವಾಗಿ  ಉಪ್ಪು ಸೇರಿಸಿದ ಬಿಸಿನೀರು, ಕ್ಲೋರ್‍ಹೆಕ್ಸಿಡಿನ್ ಔಷಧಿ ಮತ್ತು ಪೋವಿಡಿನ್ –ಅಯೋಡಿನ್ ಔಷಧಿ ಬಳಸಿ ಹೆಚ್ಚಿನ ಮಂದಿ ಪದೇ ಪದೇ ಬಾಯಿ ಮುಕ್ಕಳಿಸುತ್ತಿರುವುದಂತೂ ನಿಜ ಎಂದೂ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಏನಿದು ಗಾಗ್ರ್ಲಿಂಗ್?

ಇದೊಂದು ರೀತಿಯ ಆರೋಗ್ಯ ರಕ್ಷಣಾ ವಿಧಾನವಾಗಿದ್ದು, ಔಷಧಿಗಳನ್ನು ಬಳಸಿ ಒಂದೆರಡು ನಿಮಿಷಗಳ ಕಾಲ ಬಾಯಿಯ ಒಳಗೆ, ಗಂಟಲಿನ ಭಾಗದಲ್ಲಿ ಔಷಧಿ ಇರುವಂತೆ ಮಾಡಿ ತಲೆಯನ್ನು ಮೇಲಕ್ಕೆ ಮಾಡಿ ಔಷಧಿಗಳು ಬಾಯಿಯೊಳಗಿನ ಪದರದ ಮುಖಾಂತರ ಪಸರಿಸುವಂತೆ ಮಾಡಿ, ರೋಗಾಣುಗಳನ್ನು ನಾಶ ಮಾಡುವ ಒಂದು ವಿಧಾನವಾಗಿರುತ್ತದೆ. ಸಾಮಾನ್ಯವಾಗಿ ಶೀತ, ಜ್ವರ, ಗಂಟಲು ನೋವು ಇರುವಾಗ ಹೆಚ್ಚಿನವರು ಈ ರೀತಿ ಗಾಗ್ರ್ಲಿಂಗ್ ಮಾಡುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಏಷ್ಯಾ ಖಂಡದಲ್ಲಿ ಬಹುತೇಕ ಮಂದಿ ಈ ಕ್ರಮವನ್ನು ರೂಢಿಸಿಕೊಂಡಿದ್ದಾರೆ. ಜಪಾನ್ ದೇಶದಲ್ಲಿ ಸರಕಾರವೇ ಜನರಿಗೆ ಕೈ ತೊಳೆಯುವುದು, ಮುಖಕವಚ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಬಾಯಿ ಮುಕ್ಕಳಿಸುವುದನ್ನು ಕಡ್ಡಾಯವಾಗಿ ಮಾಡಬೇಕೆಂದು ಸೂಚಿಸಿದೆ. ಈ ರೀತಿ ಮಾಡುವುದರಿಂದ ಶ್ವಾಸಕೋಶದ ಮೇಲ್ಭಾಗದ ಮತ್ತು ಕೆಳಭಾಗದ ಸೋಂಕಿನ ಅನುಪಾತ ಅಥವಾ ಪ್ರಮಾಣ ಕುಂಠಿತವಾಗಿದೆ ಎಂದೂ ತಿಳಿದು ಬಂದಿದೆ. ಬಹಳ ಸುಲಭವಾಗಿ ಮನೆಯಲ್ಲಿಯೇ ಮಾಡುವ ಈ ಪ್ರಕ್ರಿಯೆಗೆ 2ರಿಂದ 3 ನಿಮಿಷ ತಗಲುತ್ತದೆ. ಕುತ್ತಿಗೆ ನೋವು, ಪಾಶ್ರ್ವವಾಯು, ಮರೆಗುಳಿತನ ಮತ್ತು 8 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಪರಿಣಾಮಕಾರಿಯಾಗಿ ಗಾಗ್ರ್ಲಿಂಗ್ ಮಾಡಲು ಕಷ್ಟವಾಗಬಹುದು. ಬಹುತೇಕ ಉಳಿದ ಎಲ್ಲರೂ ಪುರುಷ ಮಹಿಳೆ ಎಂಬ ಭೇದವಿಲ್ಲದೆ ಈ ರೀತಿ ಗಾಗ್ರ್ಲಿಂಗ್ ಮಾಡುವುದರಿಂದ, ಹೆಚ್ಚಿನ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕು ತಡೆಗಟ್ಟಬಹುದು ಎಂದೂ ಅಂದಾಜಿಸಲಾಗಿದೆ. ಅತೀ ಕಡಿಮೆ ಖರ್ಚಿನ, ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲದ ಬಹಳ ಸುಲಭದ ರೋಗ ತಡೆಗಟ್ಟುವ ವಿಧಾನ ಇದಾಗಿರುತ್ತದೆ.

ಗಾಗ್ರ್ಲಿಂಗ್ ಮಾಡಲು ಏನನ್ನು ಬಳಸುತ್ತಾರೆ?

1. ಹದವಾದ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ (100 ml) ಒಂದು ಚಮಚ ಉಪ್ಪು ಸೇರಿಸಿ ತಯಾರು ಮಾಡಲಾದ ದ್ರಾವಣ. ಇದು 3% ಸಾಂದ್ರತೆಯ ದ್ರಾವಣವಾಗಿರುತ್ತದೆ. ಇದಕ್ಕೆ ಆಂಟಿಸೆಪ್ಟಿಕ್ ಗುಣ ಇದೆ ಎಂದು ಹೇಳಲಾಗಿದೆ. ಅತೀ ಕಡಿಮೆ ವೆಚ್ಚದ, ಸುಲಭದ ಮತ್ತು ಮನೆಯಲ್ಲಿಯೇ ತಯಾರು ಮಾಡಬಹುದಾದ ಈ ದ್ರಾವಣವನ್ನು ಬಹುತೇಕ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ಬಳಸುತ್ತಾರೆ. ಸಾರ್ವತ್ರಿಕವಾಗಿ ಬಾಯಿಯಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಾಣು ಸೋಂಕು ಕಡಿಮೆ ಮಾಡಲು ಬಳಸುವ ಏಕೈಕ ವಿಧಾನ ಇದಾಗಿದೆ.
2. ಕ್ಲೋರ್‍ಹೆಕ್ಸಿಡಿನ್ ಎಂಬ ಔಷಧಿಯನ್ನು ಕೂಡಾ ಬಾಯಿ ಮುಕ್ಕಳಿಸಲು ಬಳಸುತ್ತಾರೆ. ಹಲ್ಲು ನೋವಿಗೆ, ಬಾಯಿಯಲ್ಲಿನ ಬ್ಯಾಕ್ಟೀರಿಯಾ ಸೋಂಕಿಗೆ, ಬಾಯಿ ವಾಸನೆಗೂ ಇದನ್ನು ಬಳಸುತ್ತಾರೆ. ವೈರಾಣುವಿನ ವಿರುದ್ಧ ಇದರ ಕಾರ್ಯವೈಖರಿ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ.
3. ಬೆನ್ಜಾಲ್ಕೋನಿಯಮ್ ಕ್ಲೋರೈಡ್ ಎಂಬ ಔಷಧಿಯುಳ್ಳ ದ್ರಾವಣವನ್ನು ಗಂಟಲಿನ ಸೋಂಕು ನಿವಾರಣೆಗೆ ಗಾಗ್ರ್ಲಿಂಗ್ ಮಾಡಲು ಬಳಸುತ್ತಾರೆ.
4. ಪೋವಿಡಿನ್-ಅಯೋಡಿನ್ ಎಂಬ 2% ಸಾಮಥ್ರ್ಯದ ಅಯೋಡಿನ್ ದ್ರಾವಣ ಬಹಳ ಉಪಯುಕ್ತವಾದ ಗಾಗ್ರ್ಲಿಂಗ್ ದ್ರಾವಣ ಆಗಿರುತ್ತದೆ. ಇತ್ತೀಚಿಗೆ ಜರ್ಮನ್ ದೇಶದಲ್ಲಿ ಈ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆದು ಕೊರೋನಾ ಗುಂಪಿಗೆ ಸೇರಿದ SARS ಮತ್ತು MERS ರೋಗಕ್ಕೆ ಕಾರಣವಾಗುವ ಕೊರೋನಾ ವೈರಾಣುವಿನ ವಿರುದ್ಧ ಈ ಅಯೋಡಿನ್ ದ್ರಾವಣ ಶೇಕಡಾ 99 ರಷ್ಟು ಉಪಯುಕ್ತ ಎಂದೂ ತಿಳಿದುಬಂದಿದೆ.

ಇದೇ ರೀತಿ ಜಪಾನಿನಲ್ಲಿಯೂ ಪ್ರಯೋಗಾತ್ಮಕ ಪರೀಕ್ಷೆಗಳು ನಡೆದು ಅಯೋಡಿನ್ ದ್ರಾವಣವನ್ನು ಗಾಗ್ರ್ಲಿಂಗ್‍ಗೆ ಬಳಸುವುದರಿಂದ ಬರೀ ಕೊರೋನಾ ಅಲ್ಲದೆ, ಕೊಕ್ಸಾಕಿ ವೈರಸ್, ರೈನೋವೈರಸ್, ಅಡಿನೋ ವೈರಸ್, ರೋಟಾವೈರಸ್, ಇನ್‍ಪ್ಲುಯೆಂಜಾ ವೈರಸ್ ವಿರುದ್ಧ ಕೂಡಾ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ 2% ಸಾಮಥ್ರ್ಯ ಪೋವಿಡಿನ್-ಅಯೋಡಿನ್ ದ್ರಾವಣವನ್ನು ದಿನದಲ್ಲಿ 2ರಿಂದ 3 ಬಾರಿ ಬಾಯಿ ಮುಕ್ಕಳಿಸಿದಲ್ಲಿ, ಬಾಯಿ ಮತ್ತು ಗಂಟಲಿನಲ್ಲಿ ಹುದುಗಿಕೊಂಡಿರುವ ಹೆಚ್ಚಿನ ಎಲ್ಲಾ ವೈರಾಣುಗಳನ್ನು ನಾಶಪಡಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ದೊಡ್ಡ ಸಂಖ್ಯೆಯ ಪ್ರಾಯೋಗಿಕ ಪರೀಕ್ಷೆ ನಡೆಯಬೇಕಾಗಿದೆ. ಕೋವಿಡ್-19 ಅಂದರೆ ಕೊರೋನಾ ವೈರಸ್ ಡಿಸೀಸ್-2019 ಎಂಬ ರೋಗಕ್ಕೆ ಕಾರಣವಾದ ಸಾರ್ಸ್‍ಕೋವಿ-2 ಎಂಬ ವೈರಾಣುವಿನ ವಿರುದ್ಧ 2% ಪೋವಿಡಿನ್-ಅಯೋಡಿನ್ ದ್ರಾವಣ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ. ಅದೇನೇ ಇರಲಿ ಹೆಚ್ಚಿನ ಎಲ್ಲಾ ವೈರಾಣುಗಳನ್ನು ಕೊಲ್ಲುವ ಈ ಅಯೋಡಿನ್ ದ್ರಾವಣ ಖಂಡಿತವಾಗಿಯೂ ಸಾರ್ಸ್-ಕೋವಿ-2 ವೈರಾಣುವನ್ನು ನಾಶಪಡಿಸುತ್ತದೆ ಎಂಬುದು ವೈದ್ಯರ ಬಲವಾದ ನಂಬಿಕೆಯಾಗಿರುತ್ತದೆ. ಈ ಕಾರಣದಿಂದ ಕೋವಿಡ್-19 ರೋಗವನ್ನು ಎದುರಿಸುವಲ್ಲಿ ಅಯೋಡಿನ್ ಗಾಗ್ರ್ಲಿಂಗ್ ಬಹಳ ಮುಖ್ಯ ಭೂಮಿಕೆ ವಹಿಸುತ್ತದೆ ಎಂದು ಅಂದಾಜಿಸಲಾಗಿದೆ.

ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸಾ ವಿಧಾನ :

health-benefits-of-gargling-ಗಾಗ್ರ್ಲಿಂಗ್ ಎನ್ನುವ ಚಿಕಿತ್ಸಾ ಪದ್ಧತಿ ಗಂಟಲು ಕೆರೆತ ಮತ್ತು ಗಂಟಲು ನೋವಿಗೆ ಹೆಚ್ಚಿನವರು ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸಾ ವಿಧಾನವಾಗಿದ್ದು, ಕೋವಿಡ್-19 ರೋಗಕ್ಕೆ ಪರಿಣಾಮ ನೀಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇರುವುದಿಲ್ಲ. ಆದರೆ ಈ ರೀತಿ ಗಾಗ್ರ್ಲಂಗ್ ಮಾಡುವುದರಿಂದ ಬಾಯಿಯಲ್ಲಿ ಮತ್ತು ಗಂಟಲಿನಲ್ಲಿರುವ ವೈರಾಣು ಮತ್ತು ಬ್ಯಾಕ್ಟೀರಿಯಾಗಳ ಸಂಖ್ಯೆ ಗಣನೀಯವಾಗಿ ಕುಂಠಿತವಾಗುತ್ತದೆ ಎಂದು ತಿಳಿದು ಬಂದಿದೆ. ಜೋರಾಗಿ 3 ನಿಮಿಷ ಬಾಯಿ ಮುಕ್ಕಳಿಸಿದಾಗ ಒತ್ತಡ ಮತ್ತು ಔಷಧಿಯ ಪರಿಣಾಮದಿಂದ ಒಂದಷ್ಟು ಲಾಭವಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಈ ರೀತಿ ಮಾಡುವುದರಿಂದ ರೋಗಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲದ ಕಾರಣ ಎಲ್ಲರೂ ಗಾಗ್ರ್ಲಿಂಗ್ ಮಾಡುವುದು ಸೂಕ್ತ ಎಂಬುದೇ ವೈದ್ಯರ ಒಕ್ಕೊರಲಿನ ಅಭಿಮತವಾಗಿರುತ್ತದೆ.

ಇನ್ನು ಕೋವಿಡ್-19 ವೈರಾಣು ಶ್ವಾಸಕೋಶಕ್ಕೆ ಹೋಗುವ ಮೊದಲು 2 ರಿಂದ 3 ದಿನಗಳ ಕಾಲ ಗಂಟಲಿನಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಗಂಟಲಿನ ಕೆರೆತ ಮತ್ತು ನೋವು ಇರುತ್ತದೆ. ಈ ಸಂದರ್ಭದಲ್ಲಿ ಗಾಗ್ರ್ಲಿಂಗ್ ಮಾಡುವುದರಿಂದ ಕೋವಿಡ್-19 ಸೋಂಕು ಬರುವುದಿಲ್ಲ ಎಂಬುದು ನಂಬತಕ್ಕ ವಿಚಾರವಲ್ಲ. ಈ ವಿಚಾರ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆ ಇರುವುದಿಲ್ಲ. ಅದೇ ರೀತಿ ಬಿಸಿನೀರಿಗೆ ಉಪ್ಪು ಮತ್ತು ವಿನೆಗರ್ ಬಳಸಿ ಗಾಗ್ರ್ಲಿಂಗ್ ಮಾಡುವುದರಿಂದಲೂ ಕೊರೋನಾ ವೈರಾಣು ನಾಶವಾಗುತ್ತದೆ ಎಂಬುದಕ್ಕೂ ಯಾವುದೇ ವೈಜ್ಞಾನಿಕ ತಳಹದಿ ಇರುವುದಿಲ್ಲ. ಆದರೆ ಇತರ ಎಲ್ಲಾ ವೈರಾಣು ಬರದಂತೆ ಮಾಡುವ ಕ್ರಿಯೆಗಳಾದ ಸೋಪಿನಿಂದ ಕೈತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಮುಖಕವಚ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಗಾಗ್ರ್ಲಿಂಗ್ ಮಾಡುವುದರಿಂದ ಗಂಟಲಿನ ಒಳಗಿರುವ ವೈರಾಣುಗಳ ಸಂಖ್ಯೆಯನ್ನು ನಿಯಂತ್ರಿಸಬಹುದು ಹಾಗೂ ರೋಗದ ತೀವ್ರತೆಯನ್ನು ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದ ಗಾಗ್ರ್ಲಿಂಗ್ ಮಾಡುವುದರಿಂದ ಲಾಭವಿಲ್ಲದಿದ್ದರೂ ನಷ್ಟವೇನಿಲ್ಲ ಎಂಬ ಸಮಜಾಯಿಷಿ ನೀಡಲಾಗಿದೆ. ಗಾಗ್ರ್ಲಿಂಗ್ ಮಾಡಲು 2 ಶೇಕಡಾ ಪೋವಿಡಿನ್-ಅಯೋಡಿನ್ ದ್ರಾವಣ ಸೂಕ್ತ ಎಂದೂ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Dr.-Murali-Mohana-Chuntaru.ಡಾ| ಮುರಲೀ ಮೋಹನ್ ಚೂಂತಾರು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com email: drmuraleemohan@gmail.com

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
Email: drmuraleemohan@gmail.com

Back To Top