ಅಲರ್ಜಿ ಎಂದರೆ ಒಗ್ಗದಿರುವಿಕೆ. ಧೂಳು, ರಾಸಾಯನಿಕ ವಸ್ತು, ಔಷಧ, ಸೌಂದರ್ಯವರ್ಧಕ, ಸಾಬೂನು ಮುಂತಾದ ಪದಾರ್ಥಗಳಿಗೆ ಅತಿಯಾದ ಸ್ಪಂದನೆ ಅಥವಾ ಪ್ರತಿಕ್ರಿಯೆ ತೋರುವ ಗುಣವೇ ಅಲರ್ಜಿ. ಗಂದೆ, ತುರಿಕೆ, ಆಸ್ತಮಾ, ಎಗ್ಜಿಮಾ ಮತ್ತು ಸೈನಸೈಟಿಸ್ನಂತಹ ಅನೇಕ ಕಾಯಿಲೆಗಳಿಗೆ ಈ ಅಲರ್ಜಿಯು ಕಾರಣವಾಗಬಹುದು. ಸಾಮಾನ್ಯವಾಗಿ ಬಾಹ್ಯ ವಸ್ತುಗಳೊಂದಿಗೆ ಹೋರಾಡಲು ನಮ್ಮ ರೋಗ ನಿರೋಧಕ ವ್ಯವಸ್ಥೆಯು ಆಂಟಿಬಾಡಿಗಳನ್ನು ಉತ್ಪಾದಿಸುತ್ತದೆ. ಅಲರ್ಜಿಯಲ್ಲೂ ಕೂಡ ಇದೇ ರೀತಿಯ ಕ್ರಿಯೆ ನಡೆಯುತ್ತದಾದರೂ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ಇತರೆ ಅಡ್ಡಪರಿಣಾಮಗಳೂ ಉಂಟಾಗುತ್ತವೆ. ಉಸಿರಾಟ ನಾಳ ಮತ್ತು ಚರ್ಮದಲ್ಲಿ ಈ ಅಲರ್ಜಿ ಸ್ಥಿತಿಯನ್ನು ಸಾಮಾನ್ಯವಾಗಿ ಕಾಣಬಹುದು.
ಚರ್ಮವನ್ನು ದೇಹದ ಅತ್ಯಂತ ದೊಡ್ಡ ಅಂಗ ಎಂದು ಪರಿಗಣಿಸಲಾಗಿದ್ದು, ಇದು ಇಡೀ ಶರೀರವನ್ನು ಮುಚ್ಚಿರುತ್ತದೆ. ಚರ್ಮ ಅಥವಾ ತ್ವಚೆಯು ದೇಹವನ್ನು ಆವರಿಸಿರುವ ಹೊರ ಪದರ. ವಿಭಿನ್ನ ರೀತಿಯ ಕೋಶಗಳ ವಿವಿಧ ಪದರಗಳಿಂದ ಇದು ನಿರ್ಮಿತವಾಗಿದೆ. ಎಪಿಡರ್ಮಿಸ್, ಮೀಸೋಡರ್ಮಿಸ್ ಮತ್ತು ಎಂಡೋಡರ್ಮಿಸ್ ಎಂಬ ಮೂರು ಪದರಗಳು ಇದರಲ್ಲಿರುತ್ತದೆ. ಎಪಿಡರ್ಮಿಸ್ನಲ್ಲಿರುವ ಕೋಶಗಳು ರಕ್ಷಣಾತ್ಮಕ ಗುಣವನ್ನು ಹೊಂದಿರುತ್ತದೆ. ಹಾಗೆಯೇ ಚರ್ಮಕ್ಕೆ ಬಣ್ಣ ನೀಡುವ ಮೆಲನೋಸೈಟ್ಗಳೂ ಇರುತ್ತವೆ. ಇನ್ನುಳಿದಂತೆ ಕೆಳಗಿನ ಪದರಗಳಲ್ಲಿ ರಕ್ತನಾಳಗಳು, ನರಗಳು, ಬೆವರು ಗ್ರಂಥಿಗಳು. ಕೂದಲು ಬೇರು ಚೀಲಗಳು ಇರುತ್ತವೆ.
ಚರ್ಮವು ದೇಹದ ಎಲ್ಲ ರಂಧ್ರಗಳಲ್ಲಿ ಕಾಂಜುಕ್ಟಿವಾ, ಟೈಮ್ಪ್ಯಾನಿಕ್ ಪೊರೆ ಮತ್ತು ಲೋಳೆ ಪೊರೆಯೊಂದಿಗೆ ಇರುತ್ತದೆ. ಇದು 24 ತಾಸುಗಳ ಕಾಲ ಬಾಹ್ಯ ಪರಿಸರ ಮತ್ತು ಬಾಹ್ಯ ಕಾರಕಗಳ (ವಸ್ತು) ಜೊತೆ ಸಂಪರ್ಕ ಹೊಂದಿರುತ್ತದೆ. ಈ ಬಾಹ್ಯ ಕಾರಕಗಳು ಚರ್ಮದ ರಚನೆ ಮತ್ತು ಕಾರ್ಯನಿರ್ವಹಣೆಗೆ ಹಾನಿಯುಂಟು ಮಾಡುತ್ತದೆ. ಆದಕಾರಣ ಚರ್ಮವು ಇಂತಹ ಎಲ್ಲ ಕಾರಕಗಳೊಂದಿಗೆ ವ್ಯವಹರಿಸಬೇಕಾಗುತ್ತದೆ ಹಾಗೂ ಇಂತಹ ಬಾಹ್ಯ ಏಜೆಂಟ್ಗಳಿಗೆ ಭೌತಿಕ ಮತ್ತು ರೋಗ ಪ್ರತಿರೋಧಕ ತಡೆವೊಡ್ಡುವುದನ್ನು ನಿರ್ವಹಿಸುತ್ತದೆ. ಆದ್ದರಿಂದ ವಿವಿಧ ರೀತಿಯ ರಾಸಾಯನಿಕಗಳ ಜೊತೆ ದೇಹವು ಸಂಪರ್ಕಕ್ಕೆ ಒಳಪಟ್ಟಾಗ ಚರ್ಮವು ಪ್ರಥಮ ಮಾರ್ಗದ ರಕ್ಷಣೆ ನೀಡುತ್ತದೆ. ಬಾಹ್ಯ ಕಾರಕಗಳೊಂದಿಗೆ ಚರ್ಮವು ಸಂಪರ್ಕಕ್ಕೆ ಬಂದಾಗ ಅನೇಕ ಪ್ರತಿಕೂಲ ವಿದ್ಯಮಾನಗಳು ಘಟಿಸುತ್ತವೆ. ಈ ಪ್ರತಿಕ್ರಿಯೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ, ಹಾಗೂ ಅಧಿಕ ವರ್ಣದ್ರವ್ಯಗಳು, ಕೆಳಮಟ್ಟದ ವರ್ಣದ್ರವ್ಯಗಳು, ಮೊಡವೆ, ತುರಚಿದದ್ದು, ಫೋಟೊಟಾಕ್ಸಿಕ್ ನಂಜಿನ ಪ್ರತಿಕ್ರಿಯೆ ಮತ್ತು ಇಸುಬು ಸೇರಿದಂತೆ ವಿವಿಧ ಪ್ರತಿಕ್ರಿಯೆಗಳು ಇದರಿಂದ ಉಂಟಾಗುತ್ತವೆ.
ಇಸುಬು ಕಿರಿಕಿರಿ ಉಂಟು ಮಾಡುವ ಅಥವಾ ಅಲರ್ಜಿ ಸ್ವರೂಪದಲ್ಲಿ ಇರಬಹುದಾಗಿರುತ್ತದೆ. ಚರ್ಮದೊಂದಿಗೆ ಬಾಹ್ಯ ರಾಸಾಯನಿಕವು ಸಂಪರ್ಕಕ್ಕೆ ಬರುವುದರಿಂದ ಇಸುಬು ಬೆಳವಣಿಗೆಯಾಗುತ್ತದೆ. ಹೀಗಾಗಿ ಇಸುಬನ್ನು ಸಂಪರ್ಕ ಚರ್ಮ ಉರಿಯೂತ ಎಂದು ಕರೆಯಲಾಗುತ್ತದೆ. ಸಾಬೂನುಗಳು, ದ್ರಾವಣಗಳು, ಆಮ್ಲಗಳು ಅಥವಾ ಕ್ಷಾರಗಳಂತಹ ಉದ್ರೇಕಕಾರಿ ರಾಸಾಯನಿಕಗಳೊಂದಿಗೆ ಚರ್ಮವು ಸಂಪರ್ಕಕ್ಕೆ ಬಂದಾಗ ಸ್ಥಳೀಯ ನಂಜು ಪರಿಣಾಮ ಫಲಿತಾಂಶವಾಗಿ ಉದ್ರೇಕಕಾರಿ ಸಂಪರ್ಕ ಚರ್ಮ ಉರಿಯೂತ (ಇರಿಟೆಂಟ್ ಕಾಂಟ್ಯಾಕ್ಡ್ ಡೆರ್ಮಾಟಿಟಿಸ್-ಐಸಿಡಿ) ಸಮಸ್ಯೆ ಉಂಟಾಗುತ್ತದೆ. ಎಲ್ಲ ರೀತಿಯ ಸಂಪರ್ಕ ಚರ್ಮ ಉರಿಯೂತಕ್ಕೆ ಐಸಿಡಿ ಶೇಕಡ 80ರಷ್ಟು ಕಾರಣವಾಗುತ್ತದೆ.
ಅಲರ್ಜಿಕಾರಕ ಸಂಪರ್ಕ ಚರ್ಮ ಉರಿಯೂತವು (ಎಸಿಡಿ) ಎಲ್ಲ ಸಂಪರ್ಕ ಚರ್ಮ ಉರಿಯೂತದ ಕನಿಷ್ಠ ಶೇಕಡ 20ರಷ್ಟು ಕಾರಣವಾಗುತ್ತದೆ. ಎಸಿಡಿ (ಅಲರ್ಜಿಕಾರಕ ಸಂಪರ್ಕ ಚರ್ಮ ಉರಿಯೂತ) ಹೆಸರೇ ಹೇಳುವಂತೆ, ಅಲರ್ಜಿ ಸಂವೇದನೆ ಹೊಂದಿರುವ ಓರ್ವ ವ್ಯಕ್ತಿಗೆ ಒಂದು ನಿರ್ದಿಷ್ಟ ಬಹಿರ್ವರ್ಧಿ (ಹೊರಗಡೆಯ) ಅಲರ್ಜಿಕಾರದೊಂದಿಗೆ ಸಂಪರ್ಕದಿಂದಾಗಿ ಒಂದು ಪ್ರತಿಕೂಲ ಚರ್ಮ ಉರಿಯೂತದ ಪ್ರತಿಕ್ರಿಯೆ ಕಂಡುಬರುತ್ತದೆ. 3,700ಕ್ಕೂ ಹೆಚ್ಚು ರಾಸಾಯನಿಕಗಳು ಮಾನವನಲ್ಲಿ ಎಸಿಡಿ ಕಾರಕಗಳಾಗಿ ಪರಿಣಾಮ ಬೀರುತ್ತದೆ. ಒಂದು ಅಲರ್ಜಿಕಾರದೊಂದಿಗೆ ಸಂಪರ್ಕಕ್ಕೆ ಬಂದ ನಂತರ ಚರ್ಮವು ರೋಗ ಪ್ರತಿರೋಧಕವಾಗಿ ಪ್ರತಿಕ್ರಿಯಿಸಿ, ಇಸುಬು ಉರಿಯೂತದ ಪ್ರಾಯೋಗಿಕ ಅನುಭವ ನೀಡುತ್ತದೆ.
ಎಸಿಡಿಯಲ್ಲಿ ಇಸುಬು ಉರಿಯೂತದ ತೀವ್ರತೆಯು ಸಾಧಾರಣ. ಅಲ್ಪಕಾಲದ ಸ್ಥಿತಿಯಿಂದ ತೀವ್ರ, ಮುಂದುವರಿದ, ದೀರ್ಘಕಾಲದ ರೋಗದ ಶ್ರೇಣಿಯವರೆಗೆ ಕೂಡಿರುತ್ತದೆ. ಸೂಕ್ತ ರೀತಿಯ ಎಪಿಕುಟಾನಿಯಸ್ ಪ್ಯಾಚ್ ಟೆಸ್ಟಿಂಗ್ ಮೂಲಕ ಸರಿಯಾದ ರೀತಿಯಲ್ಲಿ ಅಲರ್ಜಿ ಗುರುತಿಸುವಿಕೆಯಿಂದ ಜೀವನದ ಗುಣಮಟ್ಟ ಸುಧಾರಣೆಗೆ ಸಹಕಾರಿಯಾಗುತ್ತದೆ.
ಇತಿಹಾಸ
1840ರ ಆರಂಭದಲ್ಲೇ, ಫುಚ್ಸ್ ‘ಡೆರ್ಮಟಿಟಿಸ್ ವೆನೆನಾಟಾ’ ಎಂಬ ಚರ್ಮ ಉರಿಯೂತಕ್ಕೆ ಬಾಹ್ಯ ವಸ್ತುಗಳು ಕಾರಣ ಎಂಬುದನ್ನು ಅರ್ಥ ಮಾಡಿಕೊಂಡಿದ್ದರು. 1847ರಲ್ಲಿ, ಸ್ಟೆಡ್ಲೆರ್, ಅನಾಕಾರ್ಡಿಯಮ್ ಓಸಿಡೆನ್ಟೆಲೆ-ಸ್ಟೆಡ್ಲೆರ್ಸ್ ಬ್ಲಾಟಿಂಗ್ ಸ್ಟ್ರಿಪ್ ಟೆಕ್ನಿಕ್ನಿಂದ ಉದ್ರೇಕಿಸಲ್ಪಟ್ಟು ಮಾನವನ ಚರ್ಮದ ಮೇಲೆ ಗಾಯಗಳನ್ನು ಪುನರ್ ಉತ್ಪತ್ತಿ ಮಾಡುವ ಒಂದು ವಿಧಾನವನ್ನು ವರ್ಣಿಸಿದ್ದಾರೆ. 1889ರಲ್ಲಿ ಓರ್ವ ನೇತ್ರರೋಗ ತಜ್ಞರಾದ ಕೊಲಿನ್ಸ್ ಅವರು, ಅಟ್ರೋಪೀನ್ (ಕಂಟಕಾರಿ ಮೊದಲಾದ ಸಸ್ಯಗಳಿಂದ ತೆಗೆದ ವಿಷಕರ ಕ್ಷಾರಾಭ) ಹನಿಸುವಿಕೆಗೆ ಪ್ರತಿಕ್ರಿಯಿಸುವ ತನ್ನ ರೋಗಿಗಳಿಗೆ ಆಟ್ರೋಪೀನ್ ಅನ್ವಯಿಸಿ ಪ್ರಯೋಗ ನಡೆಸಿದ್ದರು.
ಊಹೆ ಮತ್ತು ರೋಗೋತ್ಪತ್ತಿ
ಎಸಿಡಿ ಒಂದು ಕೋಶ ಮಧ್ಯಸ್ಥಿಕೆ, ವಿಳಂಬ ರೀತಿಯ ನಾಲ್ಕನೇ ಅತಿ ಸೂಕ್ಷ್ಮ ಪ್ರತಿಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಇಂಥ ಪ್ರತಿರಕ್ಷಾ ಪ್ರತಿಕ್ರಿಯೆಯು ಒಡ್ಡಿಕೊಳ್ಳುವುದರಿಂದ (ತೆರೆತ) ಉಂಟಾಗಲಿದೆ ಹಾಗೂ ಸಂಕೀರ್ಣ ಉರಿ ಪ್ರತಿಕ್ರಿಯೆಗೆ ಮರು ಒಡ್ಡಿಕೊಳ್ಳುವಿಕೆಗೆ ಎಡೆ ಮಾಡಿಕೊಡುವ ಒಂದು ಪರಿಸರ ಅಲರ್ಜಿಕಾರಕ್ಕೆ ವಂಶವಾಹಿಯಾಗಿ ಒಳಗಾಗುವ ನಂತರದ ಸೂಕ್ಷ್ಮಗ್ರಾಹೀಕರಣವಾಗಿರುತ್ತದೆ. ಎರಿಥೆಮಾ (ದಂದೆ) ಎಡೆಮಾ (ದ್ರವಶೋಥ) ಮತ್ತು ಪಾಪುಲೊ-ವ್ಯಾಸಿಕ್ಯುಲೇಷನ್ನ(ಬೊಕ್ಕೆ) ಪ್ರಚೋದನಾಕಾರಿ ಅಲರ್ಜಿಕಾರದೊಂಧಿಗೆ ಸಂಪರ್ಕದ ವಿತರಣೆಯಲ್ಲಿರುತ್ತದೆ ಹಾಗೂ ಒಂದು ಪ್ರಮುಖ ಚಿಹ್ನೆ-ಲಕ್ಷಣವಾಗಿ ಗೋಚರಿಸುತ್ತದೆ. ಎಸಿಡಿ ಬೆಳವಣಿಗೆಯಲ್ಲಿ ಎರಡು ವಿಭಿನ್ನ ಹಂತಗಳಿವೆ, ಅವುಗಳೆಂದರೆ : ಸಂವೇದನಾಶೀಲತೆಯ ಹಂತ ಹಾಗೂ ಪರಿಶೀಲನೆಯ ಹಂತ.
ಚರ್ಮಕ್ಕೆ ಸಂಬಂಧಪಟ್ಟ ಸಂಶೋಧನೆಗಳು-
ಇಸುಬುಕಾರಕ ಚರ್ಮ ಉರಿಯೂತವು ಆರಂಭದಲ್ಲಿ ಅಲರ್ಜಿಗೆ ಒಡ್ಡಿಕೊಳ್ಳುವ ಪ್ರಾಥಮಿಕ ಸ್ಥಳವಾಗಿ ಪರಿಗಣಿಸಲಾಗಿತ್ತು. ತೀವ್ರ ಹಂತದ ವೇಳೆ ಎಡೆಮಾ (ದ್ರವಶೋಥ) ಎರಿಥೆಮಾ (ಗಂದೆ) ಮತ್ತು ವಿಸಿಕಲ್ (ಬೊಕ್ಕೆ) ರೂಪುಗೊಳ್ಳುವಿಕೆಯಿಂದ ಗುರುತಿಸಲ್ಪಟ್ಟಿತು. ಬೊಕ್ಕೆ ಅಥವಾ ಗಾಯದ ಗೂಡು ಹರಿದು ಹೋದಂತೆ ಸ್ರಾವ ಮತ್ತು ಪ್ಯಾಪುಲೆಸ್ಗಳು ಹಾಗೂ ಪ್ಲೇಕ್ಗಳು ಗೋಚರಿಸುತ್ತವೆ. ಸದೃಢ ಅಲರ್ಜಿಕಾರಕಗಳು ಬೊಕ್ಕೆ ರೂಪುಗೊಳ್ಳಲು ಕಾರಣವಾದರೆ, ದುರ್ಬಲ ಅಲರ್ಜಿಕಾರಕಗಳು, ದ್ರವಶೋಥ ಮತ್ತು ಗಂದೆ ಸುತ್ತುವರಿದಿರುವುದರೊಂದಿಗೆ ಗಾಯ ರೂಪುಗೊಳ್ಳಲು ಎಡೆ ಮಾಡಿಕೊಡುತ್ತದೆ. ಇನ್ನೊಂದಡೆ ತೀವ್ರ ಉಪ ಎಸಿಡಿ ದ್ರವಶೋಥ, ಸ್ರವಿಸುವ ಗಾಯದೊಂದಿಗೆ ಕಂಡುಬರುತ್ತದೆ. ದೀರ್ಘಕಾಲದ ಎಸಿಡಿಯು ಉಬ್ಬು, ಬಿರುಕು ಮತ್ತು ಲಿಚೆನಿಫಿಕೇಷನ್ ಸಮಸ್ಯೆಯೊಂದಿಗೆ ಕಂಡುಬರುತ್ತದೆ.
ಎಸಿಡಿಯ ಇಸುಬು ರಹಿತ ಕ್ಲಿನಿಕಲ್ ವಿಧಗಳು-
ಪುರ್ಪುರಿಕ್ ಎಸಿಡಿ ಟೆಕ್ಸ್ಟೈಲ್ ಡೈಗಳಿಂದ ಕೆಳ ಕಾಲುಗಳು ಮತ್ತು/ಅಥವಾ ಪಾದದ ಮೇಲೆ ಕಂಡುಬರುತ್ತದೆ.
ಲಿಚೆನಾಯ್ಡ್ ಎಸಿಡಿ, ಹಚ್ಚೆಯಲ್ಲಿನ ಲೋಹದ ಡೈಗಳಿಂದ ಕಂಡುಬರುತ್ತದೆ. ದಂತ ಮಿಶ್ರಣದ ಓರಲ್ ಲಿಚೆನಾಯ್ಡ್ ಎಸಿಡಿ ಓರಲ್ ಲಿಚೆನ್ ಪ್ಲಾನುಸ್ನನ್ನು ಹೋಲುತ್ತದೆ.
ವರ್ಣದ್ರವ್ಯದ ಎಸಿಡಿ.
ಲಿಂಫೊಮಟೋಯ್ಡ್ ಎಸಿಡಿಯು ಹೇರ್ ಡೈ ಅಲರ್ಜಿ, ಲೋಹ ಅಲರ್ಜಿ ಮತ್ತು ಡೈಮಿಥೈಲ್ಫುಮರೇಟ್ನಲ್ಲಿ ಕಂಡುಬರುತ್ತದೆ.
ಕೊನೆ ಮಾತು
ಎಸಿಡಿ, ಇಸುಬು ಅಥವಾ ಇಸುಬುರಹಿತ ಚರ್ಮದ ಗಾಯಗಳ ಇರುವಿಕೆಯೊಂದಿಗೆ ಬಹಿರ್ಜಾತ ವಸ್ತುವಿನಿಂದ ಚರ್ಮಕ್ಕೆ ಉಂಟಾಗುವ ಒಂದು ಉರಿಯೂತವಾಗಿದೆ. ಸಂಪರ್ಕ ಚರ್ಮದ ಉರಿಯೂತವನ್ನು ಪತ್ತೆ ಮಾಡಲು ಪ್ಯಾಚ್ ಟೆಸ್ಟ್ ಪರೀಕ್ಷೆ ನಡೆಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ, ಉದ್ರೇಕಾರಕಗಳನ್ನು ಹತೋಟಿಯಲ್ಲಿಡುವುದರಿಂದ ಉಪಶಮನ ಮಾಡಬಹುದಾಗಿರುತ್ತದೆ. ಚಿಕಿತ್ಸೆಗೆ ಕೊರ್ಟಿಕೋಸ್ಟಿರಾಯ್ಡ್ಗಳು ಮುಖ್ಯವಾಗಿದ್ದರೂ, ತೀವ್ರ ಚರ್ಮ ಉರಿಯೂತಕ್ಕೆ ಕ್ರಮಬದ್ಧ ಸ್ಟಿರಾಯ್ಡ್ಗಳು, ಪಿಯುವಿಎ, ಗ್ರೀನ್ಝ್ ರೇ, ಪ್ರತಿರಕ್ಷಾ ದಮನ ಪ್ರತಿರೋಧಕ ಔಷಧಿಗಳು ಮತ್ತು ಆಂಟಿಬಾಡಿಗಳ ಅಗತ್ಯವಿರುತ್ತದೆ.
ಡಾ. ಕೆ. ಹನುಮಂತಯ್ಯ
ಚರ್ಮರೋಗ ವಿಭಾಗ, ವೈದೇಹಿ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ಏರಿಯಾ, ವೈಟ್ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/2/3/4/5
Email: info@vims.ac.in; www.vims.ac.in