Health Vision

ಯೋಗ ಮಾಡಿ- ಆರೋಗ್ಯವಂತರಾಗಿ.

ಯೋಗ ಮಾಡಿ- ಆರೋಗ್ಯವಂತರಾಗಿ. ಮಾನವ ಜೀವನದ ಪರಿಪೂರ್ಣ ವಿಕಾಸವುಂಟಾಗಲು ಯೋಗವು ಅನಿವಾರ್ಯ.ಪುರಾಣದ ಕಾಲದಿಂದಲೇ ಯೋಗದ ಅಳವಡಿಕೆ ಇತ್ತೆಂಬುದು ಹಲವಾರು ಸಾಕ್ಷ್ಯಾದಾರಗಳಿಂದ ನಮಗೆ ತಿಳಿದುಬರುತ್ತದೆ. ‘ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ.

ಯೋಗ ಮಾಡಿ- ಆರೋಗ್ಯವಂತರಾಗಿ.ಯೋಗ ಶಾಸ್ತ್ರದ ಮೂಲ ಸಾಕ್ಷಾತ್ ಬ್ರಹ್ಮನಿಂದಲೇ ಬಂದಿರುವುದು ಎಂದು ಯೋಗ ಶಾಸ್ತ್ರವು ಹೇಳುತ್ತದೆ. ನಮಗೆ ದೊರಕಿರುವ ಯೋಗ ಶಾಸ್ತ್ರದ ಗ್ರಂಥಗಳಲ್ಲಿ ಪತಂಜಲಿ ಮಹಾಋಷಿಗಳು 195/196 ಸೂತ್ರಗಳನ್ನು ರಚಿಸಿರುತ್ತಾರೆ ಹಾಗೂ ಈ ಯೋಗ ಸೂತ್ರದಲ್ಲಿ ನಾಲ್ಕು ಪಾದಗಳು ಅಥವಾ ಅಧ್ಯಾಯಗಳೂ ಇದೆ. ಹೀಗೆ ಅವರು ಸನಾತನವಾಗಿದ್ದ ಶಾಸ್ತ್ರವನ್ನು ಕ್ರೋಢೀಕರಿಸಿ, ವರ್ಗೀಕರಿಸಿ ಅದಕ್ಕೊಂದು ನಿರ್ದಿಷ್ಟ ರೂಪ ನೀಡಿದ್ದಾರೆ. ಅವಿದ್ಯೆ, ಅಸ್ಮಿತ(ಅಹಂಭಾವನೆ), ರಾಗ(ಆಸಕ್ತಿ), ಪ್ರೀತಿ, ದ್ವೇಷ, ಅಭಿನಿವೇಶ (ಪ್ರಾಪಂಚಿಕ ಜೀವನದಲ್ಲಿ ನಿರಾಸಕ್ತಿ) ಈ ಐದು ಬಗೆಯ ತೊಡಕುಗಳಿಂದ ಯೋಗ ಸಾಧನೆ ಸಾಧ್ಯವಾಗದು. ಆದಕಾರಣ ಮೊದಲು ಯೋಗ ಎಂದರೇನು, ಹೇಗೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕು. ಮಹಾತ್ಮಾ ಗಾಂಧಿಯು ಹೇಳುವಂತೆ ‘ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಸಂಯೋಜಿಸುವುದೇ ಯೋಗ’.

ಯೋಗ ಎನ್ನುವ ಪದ ಸಂಸ್ಕತ ಮೂಲಧಾತುವಾದ ‘ಯುಜ್’ ಎನ್ನುವುದರಿಂದ ಬಂದಿದ್ದು. ‘ಕೂಡಿಸು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು’ ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ‘ಯುಜ್ಯತೇ ಸಮಾಧೀಯತೇನೇನ ಇತಿ ಯೋಗಃ’ ಇದು ಯೋಗ ಶಬ್ದದ ಉತ್ಪತ್ತಿಯಾಗಿದೆ. ಇಲ್ಲಿ ಜೀವಾತ್ಮವನ್ನು ಯಾವುದು ಆತ್ಮ ಸಾಕ್ಷಾತ್ಕಾರದೆಡೆಗೆ ಒಯ್ಯುವುದೋ ಅದು ಯೋಗ.‘ಚಿತ್ತ ವೃತ್ತಿ ನಿರೋಧಃ’ ಮನಸ್ಸಿನ ಬಯಕೆಗಳನ್ನು ಸಂಪೂರ್ಣ ತಡೆಹಿಡಿದು ಸರ್ವಥಾ ವಿರೋಧಿಸಿ, ನಿಲ್ಲಿಸಿ, ಏಕಾಗ್ರತೆ ಸಾಧಿಸುವುದೇ ಯೋಗ. ಲೌಕಿಕ ವಿದ್ಯಾರ್ಜನೆಗೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ.ಅದನ್ನರಿಯುವುದು ಯೋಗ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ತನ್ನ ಸಂಪೂರ್ಣ ವಿಕಾಸವನ್ನು ಒಂದು ಜನ್ಮದಲ್ಲಿ ಅಥವಾ ಕೆಲವು ತಿಂಗಳಲ್ಲಿ ಅಥವಾ ಕೆಲವು ಗಂಟೆಗಳಲ್ಲಿ ಮಾನವನು ಸಾಧಿಸಬಹುದಾದ ಸಾಧನವೇ ಯೋಗ’ ಅರ್ಥಾತ್ ಯೋಗ ಒಂದು ಶಕ್ತಿಯು. ಅದರ ಬಲದಿಂದಾಗಿ ಅಸಾಧ್ಯವಾದ ಕೆಲಸವು ಸಾಧ್ಯವಾಗುತ್ತದೆ. ಅನಿಶ್ಚಿತದಲ್ಲಿ ಕೈಗೊಳ್ಳುವ ಕಾರ್ಯವು ನಿಶ್ಚಿತವಾಗಿ ಕೊನೆಗೊಳ್ಳುತ್ತದೆ.

ಇನ್ನು ಮಹರ್ಷಿ ಅರವಿಂದರು ಹೇಳುವ ಪ್ರಕಾರ ‘ಶಾರೀರಿಕ, ಮಾನಸಿಕ, ಸಾಮಾಜಿಕ, ಅಧ್ಯಾತ್ಮಿಕ ಸ್ತರಗಳೆಲ್ಲದರಲ್ಲಿಯೂ ವ್ಯಕ್ತಿಯು ಪರಿಪೂರ್ಣವಾಗಿ ವಿಕಸನಗೊಳ್ಳುವ ಪ್ರಕ್ರಿಯೆಯೇ ಯೋಗ. ಹೀಗೆ ಎಲ್ಲ ಮಹನೀಯರ ಅಭಿಪ್ರಾಯ, ವ್ಯಾಖ್ಯಾನ ಅದು ‘ಒಳ್ಳೆಯ ಸಿದ್ಧಿ’ ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಯೋಗದ ವಿಶಾಲವಾದ ಅರ್ಥ – ಸಂಕುಚಿತವಾದ ಅಹಂಕಾರ ತುಂಬಿನ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಿತಿಗೆ ತರುವುದು’ ಎಂಬುದನ್ನು ಸಾಕಾರಗೊಳಿಸಲು ಯೋಗದ ಅನುಭೂತಿಯು ನಮ್ಮಲ್ಲಿ ಉಂಟಾಗಬೇಕು. ಯೋಗದ ಅಳವಡಿಕೆಯು ಇದನ್ನು ಪೊರೈಸಲು ಸಾಧ್ಯ. “ಬಹುತೇಕ ಜನರು ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದಷ್ಟೇ ಭಾವಿಸಿದ್ದಾರೆ. ಅದೇ ದೊಡ್ಡ ತಪ್ಪು. ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ ಅಧ್ಯಾತ್ಮಿಕ ಪ್ರಕ್ರಿಯೆ-ಇದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳು. ಈ ಮೂಲಕ ಯೋಗದ ಮಹತ್ವವನ್ನು ಸಾರಲು ಪ್ರಯತ್ನಿಸಿದ ಅವರು ನಮ್ಮಲ್ಲಿನ ಹಲವಾರು ಸಂಶಯಗಳು ಹಾಗೂ ಮನೋದೈಹಿಕ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಯೋಗವು ಪೂರಕ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ.

ವಿಶ್ವ ಯೋಗ ದಿನ:

ಯೋಗ ಮಾಡಿ- ಆರೋಗ್ಯವಂತರಾಗಿ.ವಿಶ್ವದಾದ್ಯಂತ ಜೂನ್ 21 2015 ರಂದು ಮೊದಲ ಬಾರಿಗೆ ‘ವಿಶ್ವ ಯೋಗದಿನ’ ವನ್ನು ಆಚರಿಸಲಾಗಿದ್ದು, ಭಾರತ ಸೇರಿದಂತೆ ವಿಶ್ವದ 177 ರಾಷ್ಟ್ರಗಳಲ್ಲಿ ಯೋಗ ಅಭ್ಯಾಸವನ್ನು ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು. ಯೋಗಾಸನ, ಧ್ಯಾನ, ಸಾಂಸ್ಕ್ರತಿಕ ಕಾರ್ಯಕ್ರಮ ಆರೋಗ್ಯದ ಸಲುವಾಗಿ ದೈಹಿಕ ವ್ಯಾಯಾಮ. ಇದು ಯೋಗ ದಿನದ ಪ್ರಮುಖ ಆಶ್ರಯಗಳಾಗಿದ್ದು, ಇದರ ಮೂಲಕ ಯೋಗ ದಿನವನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತದೆ. ಹಲವಾರು ವರ್ಷಗಳ ಸಾಂಪ್ರದಾಯಿಕ, ಸುಸಂಸ್ಕ್ರತ ಸಂಸ್ಕಾರ ಹೊಂದಿರುವ ಭಾರತದಲ್ಲಿ ಎಷ್ಟೋ ಪುರಾಣದ ಕಾಲದಿಂದಲೇ ಯೋಗದ ಅಳವಡಿಕೆ ಇತ್ತೆಂಬುದು ಹಲವಾರು ಸಾಕ್ಷ್ಯಾದಾರಗಳಿಂದ ನಮಗೆ ತಿಳಿದುಬರುತ್ತದೆ. ‘ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ. 5000 ವರ್ಷಗಳ ನಂಬಿಕೆ ಅಡಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಹಿತಾತ್ಮನ ಜೊತೆಯಲ್ಲಿ ಒಂದುಗೂಡಿಸುವ ಸಾಮರ್ಥ ಹೊಂದಿದೆ. ಪ್ರಕೃತಿ ಮತ್ತು ಮನುಷ್ಯನನ್ನು ಸಂಬಂಧಿಸುವ ವಿಶೇಷ ಗುಣವನ್ನು ಹೊಂದಿರುವ ಈ ಯೋಗವು ಮನುಷ್ಯನು ತನ್ನಲ್ಲಿಯೇ ಇರುವ ಪ್ರಬಲವಾದ ಸಾಮಥ್ರ್ಯವನ್ನು ಪ್ರಚುರಪಡಿಸಲು ನೆರವಾಗುತ್ತದೆ. ಆತನು ತನ್ನ ಶಕ್ತಿಯನ್ನು ಅರಿಯಲು ಇದೊಂದು ಮಾಧ್ಯಮ.ಪ್ರತಿನಿತ್ಯ ಯೋಗದ ಅಳವಡಿಕೆ ಜೀವನದಲ್ಲಿ ಉತ್ತಮ ಬದಲಾವಣೆಗೆ ಪೂರಕ.

ಯೋಗದ ಮಹತ್ವ:

‘ಯಮ-ನಿಯಮ ಅನುಷ್ಟಾನೇ ಪಾಪ ನಿವೃತ್ತಿ’, ಯಮ ನಿಯಮಗಳ ಅಭ್ಯಾಸವು ವ್ಯಕ್ತಿಯು ಮನಸ್ಸಿನಲ್ಲಿ ಏಳುವ ಪಾಪಕರ್ಮಗಳನ್ನು ಮಾಡಬೇಕೆಂಬ ಯೋಜನೆಗಳನ್ನು ನಾಶಗೊಳಿಸುತ್ತದೆ ಎಂಬುದಾಗಿ ಯೋಗ ಮಹರ್ಷಿಗಳು ನುಡಿಯುತ್ತಾರೆ.ಹಿಂದಿನ ಕಾಲದಲ್ಲಿ ಗುರುಪದ್ಧತಿಯಲ್ಲಿರಬಹುದು ಅಥವಾ ಗುರುಪರಂಪರಾ ಶಿಷ್ಯ ವೃತ್ತಿಯಲ್ಲಿರಬಹುದು. ಬೆಳಗ್ಗಿನ ಮೂರು ನಾಲ್ಕನೇ ಪ್ರಹರದಲ್ಲಿಯೇ ಶಿಷ್ಯನಿಗೆ ಯೋಗದ ಮೂಲಕ ಸ್ವಸ್ಥ ಆರೋಗ್ಯ, ಪರಿಶುದ್ಧ ಮನಸ್ಸಿನ ಕಲ್ಪನೆಯನ್ನು ಗುರುವು ನೀಡುತ್ತ ಬಂದಿದ್ದನು. ಆ ಮೂಲಕ ಅವರಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಬೇಕಾದಂತಹ ಭದ್ರ ಬುನಾದಿಯು ತಿಳಿಯಲ್ಪಡುತ್ತಿತ್ತು. ಮನುಷ್ಯನಲ್ಲಿ ಕೋಪ, ತಾಪ, ಸುಖ ಸಂತೋಷ, ದುಃಖ, ಹಾತೊರೆಯುವಿಕೆ, ಹತಾಷೆ, ತಪ್ಪು, ಒಪ್ಪು, ನಂಬಿಕೆ ಅವಿಶ್ವಾಸ, ದೃಡತೆ, ಒಳ್ಳೆಯವ, ಕೆಟ್ಟವ ಇತ್ಯಾದಿಗಳೆಂಬ ಭಾವನೆಗಳು ಸಾಮಾನ್ಯ. ಜನ ಸಾಮಾನ್ಯರಾದಂತಹ ನಮಗೆ ಇದನ್ನೆಲ್ಲ ಅನುಭವಿಸುವುದು ಜೀವನದ ಹಂತಗಳು. ಕಾರಣ, ಪ್ರತಿಯೊಬ್ಬ ಮಾನವನೂ ಸಹ ತನ್ನ ಜೀವಿತಾವಧಿಯಲ್ಲಿ ಹಲವಾರು ಭಾವನೆಗಳು ಕ್ಷಣಕ್ಷಣದಲ್ಲಿ ಕಾಡುತ್ತಿರುವುದನ್ನು ಅನುಭವಿಸುತ್ತಿರುತ್ತಾನೆ. ಹಾಗಾಗಿ ಕೀಳರಿಮೆ, ಮೇಲರಿಮೆಗಳಂತಹ ಭಾವನೆಗಳು ಅಳಿದು, ಮೂಡನಂಬಿಕೆ, ವರದಕ್ಷಿಣೆಯಂತಹ ಅನಿಷ್ಟ ಪದ್ಧತಿಗಳು ಕೊನೆಯಾಗಿ ಉತ್ತಮ ಮೇಲ್ಮಟ್ಟದ ಶಾರೀರಿಕ, ಮಾನಸಿಕ ಸದೃಢತೆಯ ಭಾವನೆಗಳು ಮಾನವನಲ್ಲಿ ಅವತರಿಸುವುದು ಈ ಭಾವನಾ ಸ್ಥರ ಅಭಿವೃದ್ಧಿಗೊಂಡಾಗಲೇ.

ಇದಕ್ಕೆ ಈ ಯೋಗವು ಪರಿಪೂರ್ಣವಾಗಿ ಸಹಕರಿಸುತ್ತದೆ. ಇದು ಎಲ್ಲ ವಿಧದಲ್ಲಿಯೂ ಪ್ರಮಾಣಿತವಾಗಿರುವುದು ಸತ್ಯವೇ ಸರಿ. ಭಾವನಾಸ್ಥಿರತೆ ಯೋಗದಿಂದ ಸಾಧ್ಯವಾಗಿ ಜನಸಾಮಾನ್ಯರಲ್ಲಿ ಜಾಗೃತಿಯುಂಟಾಗುವುದರಲ್ಲಿ ಯಾವುದೇ ಸಂಶಯವೂ ಇಲ್ಲ. ‘ಬುದ್ಧಿಯು ಜ್ಞಾನದಿಂದ ಶುದ್ಧಗೊಳ್ಳುತ್ತದೆ. ಯೋಗಾಭ್ಯಾಸದಿಂದ ಜ್ಞಾನದೀಪ್ತಿಯು ಪರಿಶುದ್ಧತೆಯನ್ನು ಪಡೆಯುತ್ತದೆ.’ ಎಂಬಮಾತು ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ಪರಿಣಮಿಸುತ್ತದೆ. ಬೌದ್ಧಿಕ ಸ್ಥರದಲ್ಲಿ ವ್ಯಕ್ತಿತ್ವ ವಿಕಾಸ ಎಂದರೆ ಕೇವಲ ಬುದ್ಧಿಶಕ್ತಿಯನ್ನು ಹರಿತಗೊಳಿಸುವುದು ಎಂಬರ್ಥವಲ್ಲ. ಬದಲಿಗೆ ಹರಿತಹೊಂದಿದ ಬುದ್ಧಿಶಕ್ತಿಯು ತಾನೇ ದಾಸನಾಗದೇ ಸ್ವಾಮಿತ್ವ ಹೊಂದುವ ಸಾಮಥ್ರ್ಯ ಪಡೆಯಬೇಕು. ಹಾಗಾಗಿಯೇ ಸ್ವಾಮಿ ವಿವೇಕಾನಂದರು ಏಕಾಗ್ರತೆ ಹಾಗೂ ಆಸಕ್ತಿ ಇವುಗಳನ್ನು ಶಿಕ್ಷಣದ ಪ್ರಮುಖ ಅಂಗಗಳೆಂದು ಗುರುತಿಸಿದ್ದಾರೆ. ಒಂದು ವಿಷಯದ ಬಗೆಗೆ ಆಳವಾಗಿ ಚಿಂತಿಸುತ್ತ ಹೋಗುವುದರ ಜೊತೆಗೆ ಆ ವಿಷಯದಿಂದ ಯಾವುದೇ ಕ್ಷಣದಲ್ಲಿ ಹೊರಬರುವ ಸಾಮಥ್ರ್ಯ ಹೊಂದಿರಬೇಕು. ಈ ಸಾಮಥ್ರ್ಯವನ್ನು ಬೆಳವಣಿಗೆಯನ್ನೂ ಕೊಡುವಂತದ್ದು ಯೋಗದ ವೈಶಿಷ್ಟ್ಯ. ಹೀಗೆ ಬೌದ್ಧಿಕ ಸ್ಥರವು ಮೇಲ್ಮಟ್ಟದಲ್ಲಿ ವಿಕಾಸಗೊಳ್ಳಲು ಯೋಗವು ಅವಶ್ಯಕವಾಗಿದೆ.

ಮನುಷ್ಯನ ಜೀವನದ ಪರಮೋಚ್ಛಗುರಿಯೇ ಅಧ್ಯಾತ್ಮಿಕವಾಗಿ ಪರಿಪೂರ್ಣವಾಗುವುದು. ಭಾರತೀಯ ಸಾಂಪ್ರದಾಯಿಕ, ಪುಣ್ಯಭೂಮಿಯಲ್ಲಿ ನೆಲೆನಿಂತ ನಾವು ಮುಕ್ತಿಯನ್ನು ಪಡೆಯುವುದರ ಕುರಿತು, ಭಗವಂತನನ್ನು ಸೇರುವುದರ ಕುರಿತು ಆಲೋಚಿಸುತ್ತೇವೆ. ದೈವಿ ಭಾವವನ್ನು ಸದಾ ನಂಬುವ ನಮಗೆ ಮುಕ್ತಿ ಪರಮೋಚ್ಚಗುರಿಯಾಗಿದೆ. ಇಂತಹ ಆಧ್ಯಾತ್ಮಿಕತೆಯನ್ನು ಆಶಿಸುವ ನಮಗೆ ಯೋಗವು ವರಪ್ರದಾಯಕವಾಗಿದೆ. ಹಾಗಾಗಿ ‘ಯೋಗವು’ ಮನುಜನ ಒಳಮನಸ್ಸಿಗೊಂದು ಆತ್ಮ ಸಂಶೋಧನೆ ನೀಡಿ ಆಧ್ಯಾತ್ಮಿಕ ಸ್ಥರದಲ್ಲಿ ಉತ್ತುಂಗಕ್ಕೇರಲು ಸಹಾಯ ಮಾಡುವುದು. ಯೋಗವು ಮಾನವನ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಅಧ್ಯಾತ್ಮಿಕ ಸ್ಥರದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅವಲೋಕಿಸಿದಾಗ ಮಾನವ ಜೀವನದ ಪರಿಪೂರ್ಣ ವಿಕಾಸವುಂಟಾಗಲು ಯೋಗವು ಅನಿವಾರ್ಯ ಎಂಬ ಮನೋಜ್ಞೆಗೆ ಬಂದು ತಲುಪುತ್ತೇವೆ. ಆದ್ದರಿಂದ ಸರ್ವರ ಸುಖಕ್ಕಾಗಿ, ಸರ್ವರ ಏಳ್ಗೆಗಾಗಿ, ಸರ್ವರ ಹಿತಕ್ಕಾಗಿ, ಸರ್ವರ ಆರೋಗ್ಯಕ್ಕಾಗಿ ಸ್ವಯಂ ಪ್ರೇರಿತರಾಗಿ ಯೋಗವನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳೋಣ.

ಯೋಗದಿಂದಾಗುವ ಪ್ರಯೋಜನಗಳು:

Yoga-Day-at-Home.ತತ್ವಜ್ಞಾನಿಯಾದ ಸಾಕ್ರೇಟಿಸನು ಹೇಳುವಂತೆ ‘Sound mind in a sound body’ ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ನೆಲೆಸಿರುತ್ತದೆ. ಆದರೆ ಈ ಸ್ವಸ್ಥ ಶರೀರಕ್ಕಾಗಿ ಸತ್ವಯುತ ಆಹಾರದ ಅನಿವಾರ್ಯತೆಯಿದೆ. ಸಾತ್ವಿಕ ಆಹಾರದ ಬಳಕೆಯು ದೇಹದ ಅಥವಾ ಶರೀರದ ಪರಿಪೂರ್ಣ ಬೆಳವಣಿಗೆಗೆ, ಮಾನಸಿಕ ಸ್ಥಿಮಿತತೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ‘ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ’ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ವಾಕ್ಯವೇ ನಾಣ್ಣುಡಿಯೇ ಆದರೂ ಸಹ ನಾವಿದರ ಅನ್ವಯಿಕೆಯನ್ನು ಸರಿಯಾಗಿ ಮಾಡದಿರುವುದೇ ನಮ್ಮ ಆರೋಗ್ಯವು ವ್ಯತಿರಿಕ್ತವಾಗಲು ಕಾರಣವು. ಹಾಗಾಗಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ವಿಕೇಂದ್ರೀಕರಣದ ವಿರುದ್ಧವಾಗಿ ಕಾರ್ಯನಿರ್ವಹಿಸಲು ಕ್ಷಮತೆ ಹೊಂದುದನ್ನಾಗಿ ಮಾಡಬೇಕು. ಅದಕ್ಕೆ ಯೋಗದ ಅರ್ಥವನ್ನು ತಿಳಿದುಕೊಳ್ಳುವುದು, ಯೋಗದ ಅನ್ವಯವನ್ನು ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು, ಯೋಗದ ಅನ್ವಯವನ್ನು ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ಅತ್ಯಾವಶ್ಯಕ.

1. ಶರೀರವನ್ನು ಬಲಯುತಗೊಳಿಸುವುದು, ಶರೀರದ ರೋಗ ನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುವುದು, ಶರೀರದ ಎಲ್ಲ ಮಾಂಸಖಂಡವನ್ನು ಬಲಯುತಗೊಳಿಸುವುದು ಹಾಗೂ ಅಂಗವ್ಯೂಹವನ್ನು ಬಲಯುತಗೊಳಿಸುವುದು, ದೇಹದ ಪ್ರತಿಯೊಂದು ಭಾಗಕ್ಕೂ ಸರಿಯಾದ ರಕ್ತ ಸಂಚಾರವನ್ನು ಮಾಡುವುದು, ಶ್ವಾಸಕೋಶ, ಜೀಣಾಂಗವ್ಯೂಹ, ಹೃದಯ ನರಮಂಡಲ ಮಿದುಳು ಇತ್ಯಾದಿ ಎಲ್ಲ ಅಂಗಗಳ ಚಟುವಟಿಕೆಗಳನ್ನು ಚುರುಕುಗೊಳಿಸುವುದು, ನರಮಂಡಲದ ಆರೊಗ್ಯ ಕಾಪಾಡಿ ದೇಹಕ್ಕೆ ಬೇಕಾಗುವ ಎಲ್ಲ ಅಗತ್ಯತೆಗಳನ್ನು ಪೊರೈಸುವುದು.

2. ದೇಹಕ್ಕೆ ಸೌಂದರ್ಯ ಹೆಚ್ಚಿಸುವುದು, ದೇಹದ ಜೀವರಾಸಾಯನಿಕ ಕ್ರೀಯೆಯನ್ನು ವೃದ್ಧಿಸುವದು. ಜೀರ್ಣಕ್ರೀಯೆ, ದೇಹಕ್ಕೆ ಬೇಕಾಗುವ ವಸ್ತುಗಳನ್ನು ಹೀರಿಕೊಳ್ಳುವುದು ಹಾಗೂ ದೇಹಕ್ಕೆ ಬೇಡದ ವಿಷ, ಕಲ್ಮಶ ಪದಾರ್ಥಗಳನ್ನು ಹೊರಹಾಕುವುದು ಇತ್ಯಾದಿ ಎಲ್ಲ ಕ್ರೀಯೆಗಳನ್ನು ಸುಲಲಿತವಾಗಿ ಆಗುವಂತೆ ಮಾಡುತ್ತದೆ. ಶರೀರದ ಸೂಕ್ಷ್ಮ ಹಾಗೂ ಸ್ಥೂಲ ರೋಗಗಳನ್ನು ಗುಣಪಡಿಸುತ್ತದೆ. ಯಾವುದೇ ರೋಗ ಸುಲಭವಾಗಿ ನಮ್ಮ ದೇಹ ಪ್ರವೇಶಿಸಬಾರದಂತೆ ತಡೆಯುವ ಮಹಾಕಾರ್ಯವನ್ನು ಮಾಡುವುದು ಯೋಗ.

3. ಅಷ್ಟೇ ಅಲ್ಲದೇ ಯೋಗವು ಮನಸ್ಸನ್ನು ಪ್ರಶಾಂತವಾಗಿಡುತ್ತದೆ. ಮನಸ್ಸನ್ನು ಆಹ್ಲಾದಕರಗೊಳಿಸುತ್ತದೆ. ಧನಾತ್ಮಕ ಭಾವನೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಋಣಾತ್ಮಕ ಭಾವನೆಗಳು ಅಳಿದು ಯೋಗವ ಸಹಕರಿಸುವುದಲ್ಲದೇ ಮಾನಸಿಕ ಸ್ಥಿರತೆಯನ್ನು ತಂದುಕೊಡುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ದೃಡವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಸೂಕ್ಷ್ಮ ಸಂವೇದನೆ ಸೃಷ್ಟಿಸುತ್ತ ಹತ್ತು ಹಲವಾರು ಮಾನಸಿಕ ತೊಂದರೆಗಳನ್ನು ನಿವಾರಿಸಿ, ಪುಷ್ಟಿಕರಿಸುವ ವಿಧಾನ ಈ ಯೋಗದಲ್ಲಿದೆ. ಹೀಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢ ಭಾವವನ್ನು ನೀಡಿ ಮನುಷ್ಯನನ್ನು ಮನೋದೈಹಿಕವಾಗಿ ಸರ್ವದರಲ್ಲೂ ಸರ್ವೋತ್ತಮನನ್ನಾಗಿ ಮಾಡಲು ಯೋಗ ಸಹಕಾರಿ. ಪ್ರಬಲವಾದ ಬುದ್ಧಿ ಸಾಮಥ್ರ್ಯವು ಮನುಷ್ಯನಲ್ಲಿ ರೂಪುಗೊಳ್ಳಲು ಯೋಗವು ಅತ್ಯಂತ ಪರಿಣಾಮಕಾರಿಯು.

ಯೋಗ ಮಾಡಿ, ಆರೋಗ್ಯವಂತರಾಗಿ:

ಮಾನವ ಮೂಳೆ ಮಾಂಸದ ತಡಿಕೆ….
ಇದರ ಮೇಲಿದೆ ತೊಗಲಿನ ಹೊದಿಕೆ…..
ತುಂಬಿದೆ ಒಳಗೆ ಕಾಮಾದಿ ಬಯಕೆ…..
yoga-raveena-tondon.ಆಹಾ ಎಂಥ ಅರ್ಥಪೂರ್ಣವಾದ ಸಾಲುಗಳು ಅಲ್ಲವೇ?…ಹೌದು! ಮಾನವನ ಅಸ್ತಿತ್ವ ಎಷ್ಟೆಂಬುದನ್ನು ಇದರಿಂದಲೇ ಅಳೆಯಬಹುದು. ಹುಟ್ಟು-ಸಾವು ಎಂಬ ಕಾಲಚಕ್ರದಲ್ಲಿ ಸಿಲುಕಿರುವ ಮನುಷ್ಯನಿಗೆ, ಈ ಮಾಂಸದ ತಡಿಕೆಯೊಳಗೆ ತುಂಬಿಕೊಂಡಿರುವ ನೂರಾರು ಬಯಕೆಗಳನ್ನು ಪೂರೈಸಿಕೊಳ್ಳುವುದು ಹಾಗೂ ಲೌಕಿಕವಾಗಿ ಭೋಗಭಾಗ್ಯಗಳನ್ನು ಅನುಭವಿಸುವುದರಲ್ಲಿ ಮನುಷ್ಯ ತನ್ನ ಜೀವಮಾನವನ್ನು ಕಳೆಯುತ್ತಾನೆ. ಎಲ್ಲೋ ಕೆಲವರು ಹುಟ್ಟು-ಸಾವುಗಳನ್ನು ಅರ್ಥ ಮಾಡಿಕೊಂಡು ಪಾರಮಾರ್ಥಿಕವಾಗಿ, ಅಧ್ಯಾತ್ಮಿಕವಾಗಿ ಮುಂದುವರೆದಿದ್ದಾರೆ. ಅಂಥವರನ್ನು (ಸಿದ್ಧರನ್ನು, ಯೋಗಿಗಳನ್ನು) ನೋಡಿದ ಜನರಿಗೆ, “ಯೋಗ ಎಂದರೆ ಅದು ನಮಗಲ್ಲ, ಅದೆಲ್ಲಾ ಮಹಾಮಹಿಮರಿಗೆ ಮಾತ್ರ” ಎಂಬ ತಪ್ಪು ಕಲ್ಪನೆ ಮೂಡಿ ಬಂದಿದೆ.

ಮನುಷ್ಯನ ಜೀವನವನ್ನು ಉತ್ತಮಗೊಳಿಸಲು, ಆತನನ್ನು ಆನಂದದಿಂದ ಜೀವಿಸುವಂತೆ ಮಾಡಲು ಪುರಾತನ ಕಾಲದಲ್ಲಿಯೇ ಯೋಗ ಪಿತಾಮಹ ಮಹರ್ಷಿ ಪತಂಜಲಿ ಮುನಿಯು ಅಷ್ಟಾಂಗ ಯೋಗವನ್ನು ರಚಿಸಿ ಲೋಕೋದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಮೆಟ್ಟಿಲುಗಳನ್ನೊಳಗೊಂಡ ಈ ಯೋಗಶಾಸ್ತ್ರದಲ್ಲಿ ಮನುಷ್ಯ ಸರಿಯಾದ ರೀತಿಯಲ್ಲಿ ಹೇಗೆ ಜೀವಿಸಬೇಕೆಂಬುದನ್ನು ಶಾಸ್ತ್ರೀಯವಾಗಿ ಹೇಳಿಕೊಟ್ಟಿದ್ದಾರೆ. ಆತ್ಮ ಹಾಗೂ ಪರಮಾತ್ಮಗಳ ಸಂಬಂಧ ಅನನ್ಯ. ಅಖಂಡ ಹಾಗೂ ಅನವರತ. ಇದನ್ನು ಅರ್ಥಮಾಡಿ ಕೊಳ್ಳಲು ಮಹಾಮಹಿಮರೆಲ್ಲಾ ತಮ್ಮದೇ ಆದ ಹಾದಿಯಲ್ಲಿ ಸಾಗಿದ್ದಾರೆ. (ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಇತ್ಯಾದಿ) ಹಾಗಾಗಿ ಸುಲಭವಾಗಿ ಅರ್ಥವಾಗುವಂತೆ ಹೇಳುವುದಾದರೆ “ಯೋಗವೆಂಬುದು ದೇಹವನ್ನು ಮನಸ್ಸಿನೊಟ್ಟಿಗೆ ಸೇರಿಸುವ ಸುಂದರ ಬಂಧನವಾಗಿದೆ”. ನಾವು ದೈಹಿಕವಾಗಿ ಉತ್ತಮ ಕೆಲಸಗಳನ್ನು ಮಾಡಬೇಕಾದರೆ, ನಮ್ಮಲ್ಲಿ ಒಳ್ಳೆಯ ಮನಸ್ಸಿರಬೇಕು.

ಹಾಗೆಯೇ ಯೋಚಿಸಿದ ಕೆಲಸಗಳನ್ನು ಪೂರೈಸಲು ಸದೃಢ ದೇಹ ಅತ್ಯಗತ್ಯ. ಅಲ್ಲದೇ ದೇಹ ಹಾಗೂ ಮನಸ್ಸು ಗಾಡಿಯ ಎರಡು ಚಕ್ರಗಳಿದ್ದಂತೆ, ಇದರ ಸಮತೋಲನವನ್ನು ಕಾಪಾಡಲು ‘ಯೋಗ’ ಅಗತ್ಯ. ಈ ಸಮತೋಲನವು ತಪ್ಪುವುದರಿಂದಲೇ ಇಂದು ಅನೇಕ ರೋಗಗಳನ್ನು ಮನುಷ್ಯ ಆಹ್ವಾನಿಸುತ್ತಿದ್ದಾರೆ. ಇತ್ತೀಚೆಗಂತೂ ಸಾಮಾನ್ಯವಾಗಿ ಎಲ್ಲಾ ರೋಗಗಳು ಮನೋದೈಹಿಕ ಕಾಯಿಲೆಗಳಾಗಿವೆ. ಕಲುಷಿತ ವಾತಾವರಣದಿಂದ ರೋಗಾಣುಗಳು ಉತ್ಪತಿ ಹೊಂದುತ್ತವೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದಲ್ಲಿ, ಈ ರೋಗಾಣುಗಳು ನಮ್ಮ ದೇಹವನ್ನು ಸೇರಿಕೊಂಡು ಅನೇಕ ರೀತಿಯ ರೋಗಗಳಿಗೆ ಕಾರಣವಾಗಬಹುದು. ಸದೃಢ ಶರೀರ ಹಾಗೂ ಮನಸ್ಸಿದ್ದಲ್ಲಿ ಮಾತ್ರ ಅವುಗಳ ವಿರುದ್ಧ ನಿಯಂತ್ರಣ ಸಾಧ್ಯ. ಹಾಗಾಗಿ ಸ್ವಾಸ್ಥವನ್ನು ಕಾಪಾಡಲು ಯೋಗಾಭ್ಯಾಸವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ.

ಯೋಗವನ್ನು ದಿನವಿಡೀ ಮಾಡಬೇಕು ಹಾಗೂ ಕಷ್ಟದ ಆಸನಗಳನ್ನು ಅಭ್ಯಾಸ ಮಾಡಿದರೆ ಮಾತ್ರ ಅದು ಯೋಗ’ ಎಂದು ತುಂಬಾ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಆದರೆ ಇದು ತಪ್ಪು. ಯೋಗವೆಂದರೆ ಕೇವಲ ಆಸನಗಳು ಮಾತ್ರವಲ್ಲ. ಈ ಮೊದಲೇ ಹೇಳಿದಂತೆ ಯವi- ನಿಯಮದಿಂದ ಹಿಡಿದು ಸಮಾಧಿಯವರೆಗೆ ಎಲ್ಲವನ್ನೂ ಒಳಗೊಂಡಿದೆ. ನಾವು ಮಾಡುವ ಪ್ರತಿಯೊಂದು ಕೆಲಸವು ಯೋಗವೇ, ಆದರೆ ಸಾಮಾನ್ಯ ಮನುಷ್ಯನಿಗೆ ಸಂಪೂರ್ಣ ದೇಹದ ಬೆಳವಣಿಗೆಗೆ, ಒಳ್ಳೆಯ ಮೈಕಟ್ಟು, ಸುಂದರವಾದ ಆಕಾರ, ರೋಗ ನಿರೋಧಕತೆ ಹೆಚ್ಚಸಿಕೊಳ್ಳ್ಳಲು, ಚುರುಕು ಬುದ್ಧಿ, ದೃಢವಾದ ಮನಸ್ಸು ಹಾಗೂ ಚಟುವಟಕೆಯಿಂದ ಕೂಡಿದ ಶರೀರ ಇವೆಲ್ಲವನ್ನು ಪಡೆದುಕೊಳ್ಳಲು ಆಸನಗಳು, ಪ್ರಾಣಾಯಾಮಗಳು, ಯೋಗ ಕ್ರಿಯೆಗಳು, ಧ್ಯಾನ, ವಿಶ್ರಾಂತಿ ವಿಧಾನಗಳು ಅತ್ಯಂತ ಸಹಾಯ ಮಾಡುತ್ತವೆ. ಹಾಗಾಗಿ ಪ್ರತಿದಿನ ಒಂದು ಗಂಟೆ ಅಥವಾ 45 ನಿಮಿಷವಾದರೂ ಸರಿಯಾಗಿ ಅಭ್ಯಾಸ ಮಾಡಿದಲ್ಲಿ ಲಾಭದಾಯಕ.

ಯೋಗ ಏಕೆ ಬೇಡ?

ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಸುಸ್ತಾಗುತ್ತದೆ ಅದೇ ಒಂದು ವ್ಯಾಯಾಮ ಅಥವಾ ಯೋಗ. ಇನ್ನು ಪ್ರತ್ಯೇಕವಾಗಿ ಯೋಗ ಮಾಡಲು ಸಮಯವೆಲ್ಲಿ? ಎಂದು ಎಷ್ಟೋ ಮಂದಿ ಕೇಳುವವರಿದ್ದಾರೆ. ಮನುಷ್ಯನ ಬೆನ್ನುಮೂಳೆ ಅಡಿಪಾಯವಾದರೆ, ಮಾಂಸಖಂಡಗಳು ಗೋಡೆಗಳಿದ್ದಂತೆ. ನಮ್ಮ ದೇಹವನ್ನು ಸದೃಢವಾಗಿಡಲು ಇವೆರಡೂ ಅತ್ಯಂತ ಸಹಾಯಕ. ಮಾಂಸ ಖಂಡಗಳ ಸಮತೋಲಿತ ಕಾರ್ಯಚಟುವಟಿಕೆಯೇ ನಮಗೆ ದಿನನಿತ್ಯದ ಕೆಲಸಗಳನ್ನು ಸರಾಗವಾಗಿ ಮಾಡಲು ಸಹಾಯ ಮಾಡುತ್ತವೆ. ಈ ಮಾಂಸಖಂಡಗಳು ದೇಹದ ಎಲ್ಲಾ ಕಡೆಗಳಲ್ಲೂ ವ್ಯಾಪಿಸಿಕೊಂಡಿವೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲಸಮಾಡಿದರೂ ಬರೀ ಮುಂದೆ ಬಗ್ಗಿ ಕೆಲಸ ಮಾಡುವುದರಿಂದ, ಕೆಲವೊಂದು ಮಾಂಸಖಂಡಗಳಿಗಷ್ಟೇ ವ್ಯಾಯಾಮ ಸಿಗುತ್ತದೆ. ಹಾಗಾಗಿ ದೇಹದ ಎಲ್ಲ ಮಾಂಸಖಂಡಗಳನ್ನು ವ್ಯಾಯಾಮಕ್ಕೊಳಪಡಿಸಬೇಕಾದರೆ ‘ಯೋಗ’ ಅಗತ್ಯ.

ಯೋಗದಲ್ಲಿ ಮುಂದೆ ಬಾಗುವ, ಹಿಂದೆ ಬಾಗುವ, ಬೆನ್ನ ಮೇಲೆ ಮಲಗಿ ಮಾಡುವ, ಹೊಟ್ಟೆಯ ಮೇಲೆ ಮಲಗಿ ಮಾಡುವ, ಹೀಗೆ ವಿವಿಧ ಆಸನಗಳಿರುವುದರಿಂದ ದೇಹದ ಪ್ರತಿಯೊಂದು ಭಾಗಕ್ಕೂ ಸರಿಯಾದ ವ್ಯಾಯಾಮವನ್ನು ಕೊಟ್ಟಂತಾಗುತ್ತದೆ. ಹಾಗೂ ಯೋಗಾಭ್ಯಾಸ ಮನಸ್ಸಿನಲ್ಲಿರುವ ಗುರಿಗಳನ್ನು ತಲುಪುವಲ್ಲಿ ಸಹಕರಿಸುವುದರ ಜೊತೆಗೆ ರೂಪ, ಲಾವಣ್ಯ, ವ್ಯಕ್ತಿತ್ವ, ತೇಜಸ್ಸು ವರ್ಧಿಸಲು ಸಹಾಯ ಮಾಡುತ್ತದೆ. ಹೀಗೆ ಪಟ್ಟಿ ಮಾಡುತ್ತ ಹೋದಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನಾವು ಕಾಣಬಹುದು. ಈ ಪಟ್ಟಿಯನ್ನು ಓದಿದ ಮೇಲೆ ನಿಮಗೇ ಅನಿಸಿರಬೇಕಲ್ಲವೇ ನಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು. ಹಾಗಂತ ವ್ಯಾಯಾಮಗಳನ್ನು ಕೀಳು ಎಂದು ಹೇಳುತ್ತಿಲ್ಲ. ಆದರೇ ಸರ್ವಾಂಗೀಣ ಬೆಳವಣಿಗೆಗೆ ಯೋಗ ಮುಖ್ಯ.

ಡಾ||ವೆಂಕಟ್ರಮಣ ಹೆಗಡೆ ನಿಸರ್ಗಮನೆ,  ಶಿರಸಿ, ಉ.ಕ. ದೂ:9448729434/9731460353 Email: drvhegde@yahoo.com; nisargamane6@gmail.com http://nisargamane.com
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Back To Top