ಏನಿದು ಮೆಡಿಕಲ್ ಗ್ರೇಡ್ ಆಕ್ಸಿಜನ್? ಯಾವಾಗ ಆಮ್ಲಜನಕದ ಅವಶ್ಯಕತೆ ಇರುತ್ತದೆ?

ಏನಿದು ಮೆಡಿಕಲ್ ಗ್ರೇಡ್ ಆಕ್ಸಿಜನ್? ಯಾವಾಗ ಆಮ್ಲಜನಕದ ಅವಶ್ಯಕತೆ ಇರುತ್ತದೆ?  ಕೋವಿಡ್-19 ಸೋಂಕಿತರಲ್ಲಿ ಶೇಕಡಾ 10 ಮಂದಿಗೆ ಮಾತ್ರ ವೈದ್ಯಕೀಯ ಗ್ರೇಡ್‍ನ ಶುದ್ಧ ಆಮ್ಲಜನಕದ ಅವಶ್ಯಕತೆ ಇರುತ್ತದೆ. ವೈದ್ಯರ ಸಲಹೆ ಮಾರ್ಗದರ್ಶನ ಇಲ್ಲದೇ ಸ್ವತ: ತಾವೇ ಆಮ್ಲಜನಕ ಪಡೆಯುವುದು ಅಪಾಯಕಾರಿ.

ವಿಶ್ವದಾದ್ಯಂತ ಕೊರೋನಾ ವೈರಾಣವಿನಿಂದ ಹರಡುವ ಕೋವಿಡ್-19 ಮಹಾಮಾರಿಯ ರುದ್ರ ನರ್ತನ ಮುಂದುವರಿಯುತ್ತಲೇ ಇದೆ. ನಮ್ಮ ಭಾರತದಲ್ಲಂತೂ ಎರಡನೇ ಅಲೆ ಸುನಾಮಿಯಂತೆ ದೇಶದೆಲ್ಲೆಡೆ ತೀವ್ರ ಸಾವು ನೋವುಗಳಿಗೆ ಕಾರಣವಾಗುತ್ತಿದೆ. ಪರಿಸ್ಥಿತಿ  ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವ ಅಪಾಯದ ಹಂತಕ್ಕೆ ನಾವಿಂದು ತಲುಪಿದ್ದೇವೆ. ಎಲ್ಲೆಲ್ಲೂ ಪ್ರಾಣವಾಯು ಆಮ್ಲಜನಕದ್ದೇ ಸುದ್ದಿ. ಆಮ್ಲಜನಕ ಪೂರೈಕೆ ಇಲ್ಲ. ಆಮ್ಲಜನಕ ಉತ್ಪಾದನೆ ಇಲ್ಲ. ಆಮ್ಲಜನಕದ ಕೊರತೆ ಹೀಗೆ ದೇಶದೆಲ್ಲೆಡೆ ಜನರು ಪ್ರತಿ ಉಸಿರಾಟಕ್ಕೂ ಪರದಾಡುತ್ತಿದ್ದಾರೆ ಎಂದು ಮಾಧ್ಯಮಗಳು ವಿಪರೀತವಾಗಿ ಅತೀ ರಂಜನೀಯ ವರದಿ ನೀಡಿ ಜನರಲ್ಲಿ ಮತ್ತಷ್ಟು ಉದ್ವೇಗ ಮತ್ತು ಗಾಬರಿ ಹುಟ್ಟಿಸುತ್ತಿವೆ.

medical-oxygen-gas-plant- ಏನಿದು ಮೆಡಿಕಲ್ ಗ್ರೇಡ್ ಆಕ್ಸಿಜನ್? ಯಾವಾಗ ಆಮ್ಲಜನಕದ ಅವಶ್ಯಕತೆ ಇರುತ್ತದೆ?

ಏನಿದು ಪ್ರಾಣವಾಯು?

ಆಕ್ಸಿಜನ್ ಅಥವಾ ಆಮ್ಲಜನಕವನ್ನು ಪ್ರಾಣವಾಯು ಎಂದೂ ಕರೆಯುತ್ತಾರೆ. ನಮ್ಮ ದೇಹದ ಎಲ್ಲಾ ಜೀವಕೋಶಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಆಗಲೇಬೇಕು. ನಮ್ಮ ಮೆದುಳು 3 ನಿಮಿಷಕ್ಕಿಂತ ಜಾಸ್ತಿ ಕಾಲ ಆಮ್ಲಜನಕ ಸಿಗದಿದ್ದಲ್ಲಿ ಶಾಶ್ವತವಾಗಿ ಊನವಾಗುತ್ತದೆ. ಈ ಕಾರಣದಿಂದ ನಮಗೆ ಆಮ್ಲಜನಕ ಪೂರೈಕೆಯಾಗಲೇ ಬೇಕು. ನಾವು ಸೇವಿಸುವ ಗಾಳಿಯಲ್ಲಿ ಇರುವುದೆಲ್ಲ ಆಕ್ಸಿಜನ್ ಅಲ್ಲ. ನಮ್ಮ ಸುತ್ತಲಿರುವ ವಾತಾವರಣದ ಗಾಳಿಯಲ್ಲಿ ಇರುವ ಆಮ್ಲಜನಕದ ಪ್ರಮಾಣ 21 ಶೇಕಡಾ ಮಾತ್ರ. ಶೇಕಡಾ 78 ರಷ್ಟು ನೈಟ್ರೋಜನ್ ಮತ್ತು ಉಳಿದ ಶೇಕಡಾ 1 ರಷ್ಟು ಇಂಗಾಲದ ಡೈಆಕ್ಸೈಡ್, ಮತ್ತು ಇತರ ಅನಿಲಗಳು ಇರುತ್ತವೆ. ನಮ್ಮ ದೇಹ ಶೇಕಡಾ 21ಷ್ಟು ಆಮ್ಲಜನಕ ಇರುವ ಗಾಳಿಯನ್ನು ಸೇವಿಸಲು ಪೂರಕವಾಗಿ ನಿರ್ಮಾಣವಾಗಿದೆ.

ಒಬ್ಬ ಆರೋಗ್ಯವಂತ ವ್ಯಕ್ತಿಗೆ 100 ಶೇಕಡಾ ಆಮ್ಲಜನಕದ ಅಗತ್ಯವಿರುವುದಿಲ್ಲ. ಸಹಜವಾಗಿಯೇ ವಾತಾವರಣದಲ್ಲಿರುವ 21 ಶೇಕಡಾ ಆಕ್ಸಿಜನ್ ಧಾರಳವಾಗಿ ಸಾಕಾಗುತ್ತದೆ. ಆರೋಗ್ಯವಂತ ವ್ಯಕ್ತಿಗೆ 100 ಶೇಕಡಾ ಆಮ್ಲಜನಕವನ್ನು ನಿರಂತರವಾಗಿ ನೀಡುವುದರಿಂದ ದೀರ್ಘಕಾಲಿಕ ದೈಹಿಕ ತೊಂದರೆಗಳು ಉಂಟಾಗಬಹುದು ಎಂದು ವೈದ್ಯರು ಹೇಳಿರುತ್ತಾರೆ. ಒಬ್ಬ ಆರೋಗ್ಯವಂತ ವ್ಯಕ್ತಿ ಒಂದು ನಿಮಿಷಕ್ಕೆ ಸುಮಾರು 7 ರಿಂದ 8 ಲೀಟರ್‍ಗಳಷ್ಟು ಗಾಳಿಯನ್ನು ವಿಶ್ರಾಂತಿ ಸಮಯದಲ್ಲಿ ಒಳಗೆ ತೆಗೆದುಕೊಂಡು ಹೊರಗೆ ಬಿಡುತ್ತಾನೆ. ಆರೋಗ್ಯವಂತ ವ್ಯಕ್ತಿ ಒಂದು ನಿಮಿಷಕ್ಕೆ ವಿಶ್ರಾಂತಿ ಕಾಲದಲ್ಲಿ 12 ರಿಂದ 16 ಬಾರಿ ಉಸಿರಾಟ ಮಾಡುತ್ತಾನೆ. ಒಟ್ಟಿನಲ್ಲಿ ದಿನವೊಂದರಲ್ಲಿ ಸುಮಾರು 11 ರಿಂದ 12 ಸಾವಿರ ಲೀಟರ್ ಗಾಳಿಯನ್ನು ದಿನವೊಂದಕ್ಕೆ ಸೇವಿಸುತ್ತಾನೆ.

ಹೀಗೆ ನಾವು ಒಳಗೆ ಸೇವಿಸುವ ಗಾಳಿಯಲ್ಲಿ 21 ಶೇಕಡಾ ಆಮ್ಲಜನಕ ಇರುತ್ತದೆ. ಮತ್ತು ಹೊರಗೆ ಬಿಡುವ ಗಾಳಿಯಲ್ಲಿ 15 ಶೇಕಡಾ ಆಮ್ಲಜನಕ ಇರುತ್ತದೆ. ಇವೆರಡರ ವ್ಯತ್ಯಾಸವಾದ 6 ಶೇಕಡಾ ಆಮ್ಲಜನಕ ನಮ್ಮ ದೇಹದ ರಕ್ತಕ್ಕೆ ಶ್ವಾಸಕೋಶದ ಗಾಳಿ ಚೀಲದ ಮುಖಾಂತರ ಸೇರಿಕೊಂಡು ಜೀವಕೋಶಗಳಿಗೆ ರವಾನೆಯಾಗುತ್ತದೆ. ಆದರೆ ಕೋವಿಡ್-19 ರೋಗ ತಲುಪಿದಾಗ ಕೊರೋನಾ ವೈರಾಣು ಶ್ವಾಸಕೋಶದ ಒಳಗೆ ಸೇರಿಕೊಂಡು ಗಾಳಿ ಚೀಲಗಳಲ್ಲಿ ಸರಿಯಾಗಿ ಆಮ್ಲಜನಕದ ಸರಬರಾಜು ಮತ್ತು ವಿನಿಮಯ ಆಗುವುದನ್ನು ತಡೆಯುತ್ತದೆ. ಮತ್ತು ಆ ವ್ಯಕ್ತಿ ಉಸಿರಾಟದ ತೊಂದರೆ ಅನುಭವಿಸುತ್ತಾನೆ. ಒಬ್ಬ ಕೋವಿಡ್-19 ಸೋಂಕಿತ ವ್ಯಕ್ತಿಯ ರೋಗದ ತೀವ್ರತೆ ಮೇಲೆ ಆಮ್ಲಜನಕದ ಅವಶ್ಯಕತೆ ಅವಲಂಬಿತಾಗಿರುತ್ತದೆ. ಕೋವಿಡ್-19 ಸೋಂಕಿತರಲ್ಲಿ ಶೇಕಡಾ 10 ಮಂದಿಗೆ ಮಾತ್ರ ವೈದ್ಯಕೀಯ ಗ್ರೇಡ್‍ನ ಶುದ್ಧ ಆಮ್ಲಜನಕದ ಅವಶ್ಯಕತೆ ಇರುತ್ತದೆ. 5 ಶೇಕಡಾ ಮಂದಿಗೆ ಮೂಗಿನ ಮುಖಾಂತರ ಹಾಕುವ ನಳಿಕೆಯ ಹೈ ಪ್ಲೊ ನೇಸಲ್ ಕ್ಯಾನುಲಾ ಮೂಲಕ ಆಮ್ಲಜನಕದ ಆವಶ್ಯಕತೆ ಬೇಕಾಗಬಹುದು.

ಯಾವಾಗ ಆಮ್ಲಜನಕದ ಅವಶ್ಯಕತೆ ಇರುತ್ತದೆ?

ಒಬ್ಬ ಕೋವಿಡ್ -19 ಸೋಂಕಿನ ವ್ಯಕ್ತಿಯ ಆಮ್ಲಜನಕದ ಪ್ರಮಾಣ 90 ಶೇಕಡಾಕಿಂ್ಕತ ಕಡಿಮೆಯಾದಾಗ ಆತನಿಗೆ ಆಮ್ಲಜನಕದ ಅವಶ್ಯಕತೆ ಇರುತ್ತದೆ. ಪಲ್ಸ್ ಆಕ್ಸಿಮೀಟರ್ ಎಂಬ ಸಾಧನದ ಮುಖಾಂತರ ವ್ಯಕ್ತಿಯ ರಕ್ತದಲ್ಲಿನ ಆಮ್ಲಜನಕವನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ನಮ್ಮ ಕೈಯಲ್ಲಿನ ಮಧ್ಯದ ಬೆರಳಿನ ತುದಿಗೆ ಈ ಉಪಕರಣವನ್ನು ಜೋಡಿಸಿ 2 ರಿಂದ 3 ನಿಮಿಷಗಳಲ್ಲಿ ದೇಹದಲ್ಲಿ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ನಿಖರವಾಗಿ ಪತ್ತೆ ಹಚ್ಚಬಹುದು. ಆಮ್ಲಜನಕದ ಅವಶ್ಯಕತೆಯನ್ನು ಧೃಢೀಕರಿಸಲು 6 ನಿಮಿಷ ನಡೆಯುವ ಪರೀಕ್ಷೆಯನ್ನು ವೈದ್ಯರು ಮಾಡುತ್ತಾರೆ. ನಡೆಯುವ ಮೊದಲು ಆಮ್ಲಜನಕದ ಪ್ರಮಾಣ ದಾಖಲು ಮಾಡುತ್ತಾರೆ.

6 ನಿಮಿಷಗಳ ಕಾಲ ನಡೆದ ಬಳಿಕ ಮಗದೊಮ್ಮೆ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪರೀಕ್ಷೆ ಮಾಡಲಾಗುತ್ತದೆ. ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಆರೋಗ್ಯವಂತ ವ್ಯಕ್ತಿಗಳಲ್ಲಿ 6 ನಿಮಿಷಗಳ ಕಾಲ ನಡೆದ ಬಳಿಕ ಹೆಚ್ಚಾಗುತ್ತದೆ. ಆದರೆ ಕೋವಿಡ್-19 ಭಾಧಿತರಲ್ಲಿ ಕಡಿಮೆಯಾಗುತ್ತದೆ. ಇದರ ವ್ಯತ್ಯಾಸ 3 ಶೇಕಡಾಕ್ಕಿಂತ ಜಾಸ್ತಿ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣತಕ್ಕದ್ದು. ಅದೇ ರೀತಿ 6 ನಿಮಿಷಗಳ ನಡೆಯುವ ಮೊದಲೇ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳತಕ್ಕದ್ದು. ವೈದ್ಯರ ಸಲಹೆ ಮಾರ್ಗದರ್ಶನ ಇಲ್ಲದೇ ಸ್ವತ: ತಾವೇ ಆಮ್ಲಜನಕ ಪಡೆಯುವುದು ಅಪಾಯಕಾರಿ.

ಏನಿದು ಮೆಡಿಕಲ್ ಗ್ರೇಡ್ ಆಕ್ಸಿಜನ್?

ಕೈಗಾರಿಕಾ ಅಮ್ಲಜನಕಕ್ಕೂ, ವೈದ್ಯಕೀಯ ಆಮ್ಲಜನಕಕ್ಕೂ ಬಹಳ ವ್ಯತ್ಯಾಸವಿದೆ. ಕೈಗಾರಿಕಾ ಆಮ್ಲಜನಕ ತಯಾರಿಸುವ ಘಟಕದಲ್ಲಿಯೇ ಅಮ್ಲಜನಕವನ್ನು ತಯಾರಿಸಿ ಅದನ್ನು 93 ಶೇಕಡಾಕ್ಕಿಂತಲೂ ಹೆಚ್ಚು ಆಕ್ಸಿಜನ್ ಇರುವಂತೆ ಶುದ್ದೀಕರಿಸಿ, ವೈದ್ಯಕೀಯ ಗ್ರೇಡ್ ಆಕ್ಸಿಜನ್ ಆಗಿ ಪರಿವರ್ತಿಸಿ, ಕೋವಿಡ್-19 ರೋಗಿಗಳಲ್ಲಿ ಬಳಸಲಾಗುತ್ತದೆ. ಕೋವಿಡ್ ಸೋಂಕಿನ ವ್ಯಕ್ತಿಗೆ ನಿಮಿಷಕ್ಕೆ ಸುಮಾರು 60 ಲೀಟರ್ ಆಮ್ಲಜನಕ ಅಥವಾ ಗಂಟೆಗೆ 36,000 ಲೀಟರ್ ಆಮ್ಲಜನಕ ಅವಶ್ಯಕತೆ ಇರುತ್ತದೆ. ತೀವ್ರ ಸೋಂಕು ಇದ್ದಾಗ ದಿನವೊಂದಕ್ಕೆ ಹೆಚ್ಚು…ಅಂದರೆ 86,000 ಲೀಟರ್‍ಗಳಷ್ಟು ಆಮ್ಲಜನಕದ ಅವಶ್ಯಕತೆ ಇರಲೂಬಹುದು. ಈಗ ಸಣ್ಣ ಸಿಲಿಂಡರ್‍ಗಳಲ್ಲಿ ಲಭ್ಯವಿರುವ ಆಕ್ಸಿಜನ್ ಕಾನ್‍ಸೆಂಟ್ರೇಟರ್… ಯಂತ್ರದ ಮುಖೇನ, ಕಡಿಮೆ ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಮನೆಯಲ್ಲಿಯೇ ನೀಡಬಹುದು. ನಿಮಿಷಕ್ಕೆ ಬರಿ 3 ಲೀಟರ್ ಅಮ್ಲಜನಕದ ಅವಶ್ಯಕತೆ ಇರುವ ಸೋಂಕಿತರಿಗೆ ಮಾತ್ರ ಇದನ್ನು ಬಳಸಬಹುದು. ಹೆಚ್ಚು ಆಕ್ಸಿಜನ್ ಅವಶ್ಯಕತೆ ಇರುವವರು ಆಸ್ಪತ್ರೆಗೆ ಹೋಗಲೇಬೇಕಾದ ಅನಿವಾರ್ಯತೆ ಇರುತ್ತದೆ.

ಕೈಗಾರಿಕಾ ಅಮ್ಲಜನಕವನ್ನು ದಹನ, ಆಕ್ಸಿಡೀಕರಣ, ಕತ್ತರಿಸುವುದು ಮತ್ತು ಇತರ ರಾಸಾಯನಿಕ ಕ್ರಿಯೆಗಳಿಗೆ ಬಳಸಲಾಗುತ್ತದೆ. ಕೈಗಾರಿಕಾ ಆಮ್ಲಜನಕದಲ್ಲಿ ಶೇಕಡಾ 60 ರಷ್ಟು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳನ್ನು ಬಳಸಲಾಗುತ್ತದೆ. ಕೈಗಾರಿಕೆಗಳಿಗೆ ಬಳಸುವ ಆಮ್ಲಜನಕದ ಶುದ್ಧತೆಯ ಮಟ್ಟವು ಕಡಿಮೆಯಿದ್ದು, ಮಾನವನ ಬಳಕೆಗೆ ಸೂಕ್ತವಲ್ಲ. ವೈದ್ಯಕೀಯ ಉದ್ದೇಶಕ್ಕೆ ಬಳಸುವಾಗ ಆಮ್ಲಜನಕದ ಶುದ್ಧತೆಯ ಮಟ್ಟವನ್ನು 93 ರಿಂದ 95 ಶೇಕಡಾದಷ್ಟು ಹೆಚ್ಚಿಸಲಾಗುತ್ತದೆ ಮತ್ತು ಆಮ್ಲಜನಕ ಇತರ ಮಾಲಿನ್ಯಕಾರಕ ಅನಿಲಗಳಿಂದ ಮುಕ್ತವಾಗಿರಬೇಕಾಗಿರುತ್ತದೆ. ಆಮ್ಲಜನಕವನ್ನು, ಇತರ ಅನಿಲಗಳು ಮತ್ತು ಗಾಳಿಯಲ್ಲಿರುವ ಕಲ್ಮಶಗಳಿಂದ ಸಂಕೋಚನ ಮತ್ತು ಶುದ್ಧೀಕರಣ ವಿಧಾನ ಬಳಸಿ ಬೇರ್ಪಡಿಸಿ ಉತ್ಪಾದಿಸಲಾಗುತ್ತದೆ.

medical oxygen ಏನಿದು ಮೆಡಿಕಲ್ ಗ್ರೇಡ್ ಆಕ್ಸಿಜನ್? ಯಾವಾಗ ಆಮ್ಲಜನಕದ ಅವಶ್ಯಕತೆ ಇರುತ್ತದೆ?

ಆಮ್ಲಜನಕದ ಪೂರೈಕೆ ಹೇಗೆ?

ಆಸ್ಪತ್ರೆಯ ಬೇಡಿಕೆ ಮತ್ತು ಗಾತ್ರಕ್ಕೆ ಅನುಗುಣವಾಗಿ ಆಮ್ಲಜನಕವನ್ನು ಪೂರೈಸಲಾಗುತ್ತದೆ. ಮೂರು ವಿಧಗಳಲ್ಲಿ ಆಮ್ಲಜನಕ ಪೂರೈಸಲಾಗುತ್ತದೆ.
1) ವಿಐಇ ಅಥವಾ ವ್ಯಾಕ್ಯೂಮ್ ಇನ್ಸುಲೇಟೆಡ್ ಇವಾಪರೇಟರ್: ಇದು ದ್ರವರೂಪದ ಆಮ್ಲಜನಕ ಆಗಿರುತ್ತದೆ. ಕಾರ್ಖಾನೆಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಿ ಲಾರಿ ಕಂಟೈನರ್‍ಗಳ ಮುಖಾಂತರ ಸರಬರಾಜು ಮಾಡಲಾಗುತ್ತದೆ.
2) ಆಮ್ಲಜನಕ ಸಿಲಿಂಡರ್: ಆನಿಲ ಸಿಲಿಂಡರ್‍ಗಳಲ್ಲಿ ತೀವ್ರ ಒತ್ತಡದಲ್ಲಿ ಆಮ್ಲಜನಕ ಶೇಖರಿಸಿ ಬಳಸಲಾಗುತ್ತದೆ. ಸಣ್ಣಪುಟ್ಟ ಅಗತ್ಯಗಳಿಗೆ, ಚಿಕ್ಕ ಆಸ್ಪತ್ರೆಗಳು ಮತ್ತು ತೀವ್ರ ಅಗತ್ಯ ಇಲ್ಲದ .ಕಡೆಗಳಲ್ಲಿ ಸಿಲಿಂಡರ್ ಬಳಸಬಹುದಾಗಿದೆ.
3) ಆಕ್ಸಿಜನ್ ಕಾನ್‍ಸೆಂಟ್ರೇಟರ್: ಇದೊಂದು ವಿದ್ಯುತ್‍ಚಾಲಿತ ಯಂತ್ರವಾಗಿದ್ದು, ಸುತ್ತಲಿನ ಗಾಳಿಯಲ್ಲಿನ ಆಮ್ಲಜನಕವನ್ನು ಸಾಂದ್ರೀಕರಿಸಿ ಸ್ಥಳದಲ್ಲಿಯೇ ಪೂರೈಸುವ ವ್ಯವಸ್ಥೆ ಇದಾಗಿರುತ್ತದೆ. ರಕ್ತದಲ್ಲಿ ಕಡಿಮೆ ಆಮ್ಲಜನಕ ಸಾಂದ್ರತೆ ಇರುವ ರೋಗಿಗಳ ಉಪಚಾರಕ್ಕೆ ಇದನ್ನು ಬಳಸಬಹುದಾಗಿದೆ.

ಕೊನೆಮಾತು:

ಕೋವಿಡ್-19 ರೋಗ ತೀವ್ರವಾದಾಗ, ಶ್ವಾಸಕೋಶದಲ್ಲಿ ಆಮ್ಲಜನಕ ವಿನಿಮಯವಾಗದೆ ರಕ್ತದಲ್ಲಿ ಆಮ್ಲಜನಕದ ಮಟ್ಟ ಕುಸಿದು, ಜೀವಕೋಶಗಳಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ ದೊರಕದೆ ವ್ಯಕ್ತಿ ಉಸಿರಾಡಲು ಚಡಪಡಿಸುತ್ತಾನೆ. ಇಂತಹಾ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕ ನೀಡಿ ಪ್ರಾಣವಾಯುವಿನ ಕೊರತೆ ನೀಗಿ ಉಸಿರಾಟದ ಸಮಸ್ಯೆಯನ್ನು ಸರಿಪಡಿಸಲಾಗುತ್ತದೆ. ಎಲ್ಲವೂ ಸರಿಯಿದ್ದಾಗ ವಾತಾವರಣದಲ್ಲಿನ ಆಮ್ಲಜನಕ ನಮಗೆ ಸಾಕಾಗುತ್ತದೆ. ಆದರೆ ಶ್ವಾಸಕೋಶದಲ್ಲಿ ಸೋಂಕು ಆದಾಗ, ವೈರಾಣುಗಳು ಶ್ವಾಸಕೋಶದೆಲ್ಲೆಡೆ ತುಂಬಿಕೊಂಡಾಗ ಶ್ವಾಸಕೋಶದ ಗಾಳಿಚೀಲಗಳಲ್ಲಿ ಆಮ್ಲಜನಕ ವಿನಿಮಯವಾಗದೆ ಮಾರಣಾಂತಿಕವಾಗಬಹುದು.

ಆಮ್ಲಜನಕ ಪೂರೈಕೆ ಇಲ್ಲದಾಗ ಜೀವಕೋಶಗಳು ತಮ್ಮ ಚಟುವಟಿಕೆ ನಿಲ್ಲಿಸಿಬಿಡುತ್ತವೆ. ಜೀವಕೋಶಗಳು ಸತ್ತೇ ಹೋಗುತ್ತದೆ. ಇದು ನಮ್ಮ ಮೆದುಳು, ಕಿಡ್ನಿ, ಹೃದಯ ಎಲ್ಲಾ ಅಂಗಗಳನ್ನು ಹಾಳುಗೆಡಹುತ್ತದೆ. ಬಹು ಅಂಗಾಂಗ ವೈಫಲ್ಯ ಉಂಟಾಗಿ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಇಂತಹಾ ಕಠಿಣ, ತುರ್ತು ಸಂದರ್ಭಗಳಲ್ಲಿ ಶುದ್ಧ ವೈದ್ಯಕೀಯ ಆಮ್ಲಜನಕವನ್ನು ಒತ್ತಡದ ಜೊತೆಗೆ ನೀಡಿ ಜೀವ ಉಳಿಸಲು ವೈದ್ಯರು ಪ್ರಯತ್ನಪಡುತ್ತಾರೆ. ಈ ಕಾರಣಕ್ಕೆ ಆಮ್ಲಜನಕವನ್ನು ಜೀವರಕ್ಷಕ ಪ್ರಾಣವಾಯು ಎನ್ನಲಾಗುತ್ತದೆ. ಕೋವಿಡ್-19 ಸೋಂಕು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುವುದರಿಂದ ಕೋವಿಡ್ ಚಿಕಿತ್ಸೆಯಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಬಹಳ ಬೇಡಿಕೆ ಇದೆ.

ಈಗ ದೇಶದೆಲ್ಲೆಡೆ ಪ್ರತಿ ದಿನ ಲಕ್ಷಾಂತರ ಮಂದಿ ಈ ರೋಗಕ್ಕೆ ತುತ್ತಾಗಿ ಎಲ್ಲೆಡೆ ಆಮ್ಲಜನಕಕ್ಕೆ ಭಾರೀ ಬೇಡಿಕೆ ಬಂದಿದೆ. ಜನರು ಪ್ರತಿ ಉಸಿರಾಡಲೂ ಆಮ್ಲಜನಕಕ್ಕೆ ಬೇಡಿಕೆ ಇಡುವಂತಾ ಪರಿಸ್ಥಿತಿ ಬರುವ ಮೊದಲೇ ನಾವುಗಳು, ಸರಕಾರ ಮತ್ತು ಆರೋಗ್ಯಕಾರ್ಯಕರ್ತರು ಎಚ್ಚೆತ್ತುಕೊಳ್ಳದಿದ್ದಲ್ಲಿ ಭಾರೀ ಅನಾಹುತವಾಗುವ ಎಲ್ಲಾ ಸಾಧ್ಯತೆಗಳೂ ಮುಕ್ತವಾಗಿದೆ. ಆ ಹಂತಕ್ಕೆ ತಲುಪದಿರುವಂತೆ ನಾವೆಲ್ಲಾ ಮುಖಕವಚ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಹಾಗೂ ಸೋಪು ಬಳಸಿ ವೈರಾಣುವನ್ನು ಸಾಯಿಸಿ ರೋಗ ಹರಡದಂತೆ ಜವಾಬ್ದಾರಿಯುತವಾಗಿ ವರ್ತಿಸಬೇಕಾದ ತುರ್ತು ಅನಿವಾರ್ಯತೆ ಈಗ ಇದೆ.

dr-muralee-mohan

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ: 9845135787

www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!