ಏನಿದು ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ? ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಔಷಧಿಯೇ ಹೈಡ್ರೋಕ್ಸಿಕ್ಲೋರೋಕ್ವಿನ್’ ಎಂಬ ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧಿ. 55 ದೇಶಗಳಿಗೆ ಭಾರತ ಈ ಔಷಧಿಯನ್ನು ರಫ್ತು ಮಾಡಿದೆ.
ಕೋವಿಡ್-19 ಎಂಬ ವೈರಾಣುವಿನಿಂದ ಹರಡುವ ಕೊರೋನಾ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲ. ಕೇವಲ ರೋಗದ ಲಕ್ಷಣಗಳನ್ನು ಆಧರಿಸಿ ಅವುಗಳನ್ನು ನಿವಾರಿಸಲು ಬೇಕಾದ ಔಷಧಿಗಳನ್ನು ರೋಗಿಯ ದೇಹದ ಲಕ್ಷಣ, ತೂಕ ಮತ್ತು ಚರಿತ್ರೆಯನ್ನು ಅಭ್ಯಸಿಸಿ ವೈದ್ಯರು ಔಷಧಿಯ ಪ್ರಮಾಣ ಹಾಗೂ ಆಯ್ಕೆಯನ್ನು ಮಾಡುತ್ತಾರೆ. ಕೋವಿಡ್-19 ಎಂಬ ವೈರಾಣುವನ್ನು ನಿಯಂತ್ರಿಸಲು ಬೇಕಾದ ಆಂಟಿವೈರಾಣು ಔಷಧಿ ಇನ್ನು ತಯಾರಿಸಲಾಗಿಲ್ಲ. ಹಾಗೆಯೇ ಈ ರೋಗ ಬರದಂತೆ ತಡೆಯುವ ಲಸಿಕೆಗಳನ್ನು ಇನ್ನು ಕಂಡು ಹಿಡಿಯಲಾಗಿಲ್ಲ.
ರೋಗಿಯ ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಆಹಾರ ಪದ್ಧತಿ, ದೈಹಿಕ ವ್ಯಾಯಾಮ ಮತ್ತು ಜೀವನಶೈಲಿಯನ್ನು ಅನುಸರಿಸಿಕೊಳ್ಳುವಂತೆ ಎಲ್ಲಾ ರೋಗಿಗಳಿಗೆ ಆದೇಶ ನೀಡಲಾಗುತ್ತಿದೆ. ಅದೇ ರೀತಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸುವ ಹಾಗೂ ತೀವ್ರತೆಯನ್ನು ಕುಗ್ಗಿಸುವ ಔಷಧಿಗಳನ್ನು ಇತ್ತೀಚಿನ ದಿನಗಳಲ್ಲಿ ಈ ಕೋವಿಡ್-19 ವೈರಾಣು ಸೋಂಕಿತ ವ್ಯಕ್ತಿಗಳಿಗೆ ನೀಡಿ, ರೋಗದ ತೀವ್ರತೆಯನ್ನು ತಗ್ಗಿಸುವ ಪ್ರಯತ್ನ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಔಷಧಿಯೇ ಹೈಡ್ರೋಕ್ಸಿಕ್ಲೋರೋಕ್ವಿನ್’ ಎಂಬ ಮಲೇರಿಯಾ ಚಿಕಿತ್ಸೆಗೆ ಬಳಸುವ ಔಷಧಿ. ಈ ಔಷಧಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾಕಾಗಿ ಕೋವಿಡ್-19 ಸೋಂಕಿತ ವ್ಯಕ್ತಿಗಳಲ್ಲಿ ಬಳಸುತ್ತಾರೆ ಎಂಬ ವಿಚಾರದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
ಏನಿದು ಹೈಡ್ರೋಕ್ಸಿಕ್ಲೊರೋಕ್ವಿನ್ ಮಾತ್ರೆ?
ಕೋವಿಡ್-19 ವೈರಾಣು ಜ್ವರ ಜಗತ್ತಿನ ಸುಮಾರು 210 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹರಡಿ ವಿಶ್ವದಾದ್ಯಂತ ಆತಂಕವನ್ನು ತಂದೊಡ್ಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು(ICMR) ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿ ಬಳಕೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಮತ್ತು ಅಧಿಕ ಪ್ರಾಣಾಪಾಯ ಇರುವ ವ್ಯಕ್ತಿಗಳಿಗೆ ಈ ಹೈಡ್ರೋಕ್ಲೊರೋಕ್ವಿನ್ ಔಷಧಿಯನ್ನು ಪ್ರತಿಬಂಧಕ ಔಷಧಿಯಾಗಿ ನೀಡಬಹುದಾಗಿದೆ ಎಂದು ಪ್ರಕಟಣೆ ನೀಡಿರುತ್ತದೆ. ಇತ್ತೀಚಿಗೆ ಅಮೇರಿಕಾ, ಇಸ್ರೇಲ್, ಯುರೋಪ್ ಸೇರಿದಂತೆ ಹಲವಾರು ದೇಶಗಳಿಗೆ ಈ ಔಷಧಿಯನ್ನು ಭಾರತ ಅಗಾಧ ಪ್ರಮಾಣದಲ್ಲಿ ರಫ್ತು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಈ ಔಷಧಿಯ ಬಳಕೆ ಬಗ್ಗೆ, ಔಷಧಿಯ ಅಪಾಯದ ಬಗ್ಗೆ ಮತ್ತು ಎಲ್ಲೆಲ್ಲಾ ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಅಧಿಸೂಚನೆ ಸರಕಾರ ಕೂಡಾ ನೀಡಿದೆ. ಔಷಧಿಯ ಲಭ್ಯತೆಯ ಕೊರತೆಯಿಂದಾಗಿ ಆದ್ಯತೆಯ ಮೇರೆಗೆ ಮಾತ್ರ ಈ ಔಷಧಿ ಬಳಸತಕ್ಕದ್ದು ಎಂದೂ ಸರಕಾರ ಅಧಿಸೂಚನೆ ಹೊರಡಿಸಿದೆ. ವೈದ್ಯರ ಸೂಚನೆ ಇಲ್ಲದೆ ಈ ಔಷಧಿಯನ್ನು ಖರೀದಿಸಿ ಬಳಸುವುದು ಮತ್ತು ಶೇಖರಣೆ ಮಾಡುವುದರಿಂದ ಅಗತ್ಯ ವ್ಯಕ್ತಿಗಳಿಗೆ ಈ ಔಷಧಿ ಲಭ್ಯವಾಗದೆ ಇರುವ ಕಾರಣದಿಂದ ಜನಸಾಮಾನ್ಯರು ಅತಿಯಾದ ಉತ್ಸುಕತೆಯಿಂದ ಈ ಔಷಧಿ ಖರೀದಿ ಮಾಡಬಾರದು ಎಂದೂ ತಿಳಿಸಲಾಗಿದೆ.
ಯಾರಿಗೆಲ್ಲಾ ಈ ಔಷಧಿ ಅಗತ್ಯವಿರುತ್ತದೆ?
1. ಸರ್ಕಾರದ ಸೂಚನೆಯಂತೆ ಕೋವಿಡ್-19 ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಈ ಔಷಧಿ ಬಳಸಬಹುದು.
2. ಕೋವಿಡ್-19 ತಪಾಸಣೆಗಾಗಿ ಮನೆಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರು, ಇಲಾಖಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು, ದಾದಿಯರು ಈ ಔಷಧಿ ಬಳಸಬಹುದು.
3. ಕೋವಿಡ್-19 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ಎಲ್ಲ ವೈದ್ಯರು ದಾದಿಯರು ಮತ್ತು ಇತರ ಸಿಬ್ಬಂದಿಗಳು ಬಳಸಬಹುದು.
4. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು, ಸೋಂಕಿತ ರೋಗಿಗಳ ಜೊತೆ ಅನಿವಾರ್ಯವಾಗಿ ಸಂಪರ್ಕ ಬರುವ ಸಾಧ್ಯತೆ ಇರುವವರು ಬಳಸಬಹುದು.
5. ದಂತ ವೈದ್ಯರು ಮತ್ತು ಕಿವಿ, ಮೂಗು, ಗಂಟಲು ತಜ್ಞರು ಶಂಕಿತ ಮತ್ತು ಸೋಂಕಿತ ರೋಗಿಗಳ ಬಾಯಿ ಮಖದ ಸುತ್ತ ಹೆಚ್ಚು ಸಂಪರ್ಕ ಬರುವ ಸಾದ್ಯತೆ ಇರುವುದರಿಂದ ಮತ್ತು ಅವರಿಗೆ ಕಿರುಹನಿಗಳ ಮುಖಾಂತರ ರೋಗ ಹರಡುವ ಸಾಧ್ಯತೆ ಅತೀ ಹೆಚ್ಚು ಇರುವ ಕಾರಣದಿಂದಾಗಿ ಅವರು ಈ ಔಷಧಿ ಸೇವಿಸುವುದು ಉತ್ತಮ.
6. ಶಂಕಿತ ಮತ್ತು ಸೋಂಕಿತ ಕೋವಿಡ್-19 ರೋಗಿಗಳನ್ನು ಚಿಕಿತ್ಸೆಗೆ ಸಾಗಿಸುವ ಜವಾಬ್ದಾರಿ ಇರುವ ಅಂಬುಲೆನ್ಸ್ ವಾಹನ ಚಾಲಕರು ಮತ್ತು ಸಹಾಯಕರು ಈ ಔಷಧಿ ಬಳಸಬಹುದಾಗಿದೆ.
7. ಮಧುಮೇಹಿ ರೋಗಿಗಳು, ಹೃದಯ ತೊಂದರೆ ಇರುವವರು ಮತ್ತು ದೇಹದ ರಕ್ಷಣಾ ವ್ಯವಸ್ಥೆ ಕುಂದಿರುವವರು ಹೃದಯ ತಜ್ಞರು ಮತ್ತು ಫಿಸಿಷಿಯನ್ ಅವರ ಸಲಹೆ ಪಡೆದ ನಂತರವೇ ಈ ಔಷಧಿ ಸೇವಿಸತಕ್ಕದ್ದು.
ಏನಿದು ಹೈಡ್ರೋಕ್ಸಿಕ್ಲೊರೋಕ್ವಿನ್:
ಇದೊಂದು ‘ಕ್ಲೊರೋಕ್ವಿನ್’ ಎಂಬ ಮಲೇರಿಯಾ ರೋಗದ ವಿರುದ್ಧ ಬಳಸುವ ಅತೀ ಪುರಾತನ ಮತ್ತು ಸುರಕ್ಷಿತ ಔಷಧಿಯಂತೆ ಇರುವ ಇನ್ನೊಂದು ಔಷಧಿಯಾಗಿತ್ತು. ಮಲೇರಿಯಾ ಚಿಕಿತ್ಸೆಯಲ್ಲಿ ಹೆಚ್ಚು ಬಳಸುತ್ತಿದ್ದಾರೆ. ಮಲೇರಿಯಾ ರೋಗ ತಡೆಯಲು ಕೂಡಾ ಈ ಔಷಧಿ ಬಳಸುತ್ತಾರೆ. ಮಲೇರಿಯಾ ಅಲ್ಲದೆ ರುಮಟಾಯ್ಡ್ ಆಥ್ರೈಟಿಸ್ (ಸಂಧಿವಾತ) ಮತ್ತು ಲೂಪಸ್ ಎರಿಥಮಟೋಸಿಸ್ ಎಂಬ ರೋಗದ ಚಿಕಿತ್ಸೆಯಲ್ಲಿಯೂ ಬಳಸುತ್ತಾರೆ. ಇತ್ತೀಚೆಗೆ ಕೋವಿಡ್-19 ವೈರಾಣು ಜ್ವರದ ಚಿಕಿತ್ಸೆಯಲ್ಲಿ ಅಜಿಥ್ರೋಮೈಸಿನ್ ಔಷಧಿ ಜೊತೆ, ಹೈಡ್ರೋಕ್ಸಿಕ್ಲೊರೋಕ್ವಿನ್ ಬಳಸಲಾಗುತ್ತಿದೆ.
ಎಲ್ಲಿ ಬಳಸಬಾರದು?
1. 15 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಈ ಔಷಧಿಯ ಬಳಸಲೇಬಾರದು.
2. ಹೃದಯದ ತೊಂದರೆ ಇರುವ ವ್ಯಕ್ತಿಗಳಲ್ಲಿ ಈ ಔಷಧಿ ಬಳಸಬಾರದು. ಯಾಕೆಂದರೆ ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿ ಹೃದಯದ ಲಯವನ್ನು ಹಾದಿ ತಪ್ಪಿಸಿ ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ.
3. ಮನೋರೋಗ ಇರುವವರು ಮತ್ತು ಆಂಟಿಡಿಪ್ರೆಸೆಂಟ್ ಔಷಧಿ ಬಳಸುವವರಲ್ಲಿ ಕೂಡಾ ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿ ಹೃದಯದ ಲಯವನ್ನು ತಪ್ಪಿಸಿ ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ.
ಒಟ್ಟಿನಲ್ಲಿ ಈ ಔಷಧಿ ಬಳಸುವ ಮೊದಲು ಹೃದಯ ತಜ್ಞರು ಮತ್ತು ಫಿಸಿಷಿಯನ್ ಅವರ ಸಂದರ್ಶನ ಮತ್ತು ಒಪ್ಪಿಗೆ ಅತ್ಯವಶ್ಯಕ. 1955 ರಿಂದಲೂ ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿ ಬಳಕೆಯಲ್ಲಿದೆ. ವಿಶ್ವಸಂಸ್ಥೆಯಿಂದ ಅತೀ ಅವಶ್ಯಕ ಔಷಧಿಯ ಪಟ್ಟಿಯಲ್ಲಿ ಈ ಔಷಧಿ ಸ್ಥಾನ ಪಡೆದಿದೆ. ಅತೀ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧಿ ಎಂಬ ಹಣೆಪಟ್ಟಿ ಹೊಂದಿದೆ.
ಅಡ್ಡ ಪರಿಣಾಮಗಳು ಏನು?
ವಾಂತಿ, ತಲೆನೋವು, ಕಣ್ಣು ಮಂಜಾಗುವುದು, ಸ್ನಾಯುಗಳಲ್ಲಿ ದುರ್ಬಲತೆ ಮುಂತಾದ ಲಕ್ಷಣಗಳು ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿಯಲ್ಲಿ ಇರುವ ಸಾಧ್ಯತೆ ಇರುತ್ತದೆ. ಅತೀ ವಿರಳ ಸಂದರ್ಭಗಳಲ್ಲಿ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.
ಹೇಗೆ ಈ ಔಷಧಿ ಪರಿಣಾಮಕಾರಿ?
ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿಯನ್ನು ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ ಎಂದು ಹೇಳಲಾಗಿದೆ. ಕೋವಿಡ್-19 ವೈರಾಣು ನೇರವಾಗಿ ನಮ್ಮ ಶ್ವಾಸಕೋಶಕ್ಕೆ ದಾಳಿ ಮಾಡಿದಾಗ ಅತಿಯಾದ ಹಾಗೂ ತೀವ್ರವಾದ ಉರಿಯೂತದಿಂದಾಗಿ ಶ್ವಾಸಕೋಶಗಳಲ್ಲಿ ಆಮ್ಲಜನಕದ ಸರಬರಾಜು ವ್ಯತ್ಯಯವಾಗುತ್ತದೆ. ಈ ಹೈಡ್ರೋಕ್ಸಿಕ್ಲೊರೋಕ್ವಿನ್ ತೀವ್ರವಾದ ಉರಿಯೂತವನ್ನು ನಿಯಂತ್ರಿಸಿ ಸರಾಗ ಉಸಿರಾಟಕ್ಕೆ ಅನುವು ಮಾಡುತ್ತದೆ ಎಂದು ಅಂದಾಜಿಸಲಾಗಿದೆ.
ಹೇಗೆ ಬಳಸಬೇಕು?
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಇದರ ಆದೇಶದಂತೆ ಶಂಕಿತ ಹಾಗೂ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಔಷಧಿಯನ್ನು ಸೇವಿಸಬಹುದು ಎಂದು ಪ್ರಕಟಣೆ ನೀಡಿದೆ. ಮೊದಲ ವಾರದ ಮೊದಲ ದಿನ 400 mg ದಿನಕ್ಕೆರಡು ಬಾರಿ ಸೇವಿಸಬೇಕು. ಆ ಬಳಿಕ ವಾರದಲ್ಲಿ ಒಮ್ಮೆ ದಿನಕ್ಕೆ 400 mg ನಂತೆ 7 ವಾರಗಳ ಕಾಲ ಬಳಸಬಹುದು ಎಂದು ತಿಳಿಸಲಾಗಿದೆ. ರೋಗಲಕ್ಷಣಗಳಿಲ್ಲದ ಸೋಂಕಿತ ರೋಗಿಗಳ ಜತೆ ವಾಸವಿರುವ ಇತರ ವ್ಯಕ್ತಿಗಳು ಕೂಡಾ ಈ ಔಷಧಿ ಸೇವಿಸಬಹುದು ಎಂದು ತಿಳಿಸಲಾಗಿದೆ. ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿಯ ಸುರಕ್ಷತೆ ಮತ್ತು ಬಳಕೆಯಿಂದ ಉಂಟಾಗುವ ಲಾಭಗಳ ಬಗ್ಗೆ ಯಾವುದೇ ರೀತಿಯ ದೀರ್ಘಕಾಲಿಕ ಅಧ್ಯಯನ ನಡೆಯದೇ ಇರುವುದರಿಂದ ರೋಗಿಗಳಿಗೆ ಈ ಔಷಧಿ ಬಳಸುವ ಮೊದಲೇ ಸಂಪೂರ್ಣ ಮಾಹಿತಿ ನೀಡಿ, ಲಿಖಿತವಾದ ಅನುಮತಿ ಪಡೆದು ಔಷಧಿ ಬಳಸಲು ಸೂಚಿಸಲಾಗಿದೆ. ಔಷಧಿಗಳ ಬಳಕೆಯಿಂದ ಉಂಟಾಗುವ ಅಡ್ಡಪರಿಣಾಮ ಮತ್ತು ತೊಂದರೆಗಳ ಬಗ್ಗೆಯೂ ಔಷಧಿ ಬಳಸುವ ಮೊದಲು ಪರಿಪೂರ್ಣ ಮಾಹಿತಿ ನೀಡಬೇಕು ಎಂದೂ ಸೂಚಿಸಲಾಗಿದೆ.
ಕೊನೆಮಾತು:
ಅಮೇರಿಕಾ ದೇಶದ FDA ಅಂದರೆ ಆಹಾರ ಮತ್ತು ಔಷಧಿ ನಿಯಂತ್ರಣ ಮಂಡಳಿ ಹೈಡ್ರೋಕ್ಸಿಕ್ಲೊರೋಕ್ವಿನ್ ಔಷಧಿಯನ್ನು ಕೋವಿಡ್-19 ಸೋಂಕಿತ ವ್ಯಕ್ತಿಗೆ ಪ್ರಾಯೋಗಿಕವಾಗಿ ಬಳಸಲು ಎಂಬ ಒಪ್ಪಿಗೆ ನೀಡಿದ ಕಾರಣ, ನ್ಯೂಯಾರ್ಕ್‍ನಲ್ಲಿ 1500 ಸೋಂಕಿತ ರೋಗಿಗಳಲ್ಲಿ ಈ ಔಷಧಿ ಬಳಸಲಾಗುತ್ತಿದೆ. ಅಮೇರಿಕಾ, ಮಾರಿಷಿಯಸ್, ಫ್ರಾನ್ಸ್, ನೆದರ್‍ಲ್ಯಾಂಡ್, ಅಫಘಾನಿಸ್ತಾನ್, ಬೂತಾನ್, ಬಾಂಗ್ಲಾದೇಶ, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ ಸೇರಿದಂತೆ 55 ದೇಶಗಳಿಗೆ ಭಾರತ ಈ ಔಷಧಿಯನ್ನು ರಫ್ತು ಮಾಡಿದೆ. ಇತ್ತೀಚೆಗೆ ಈ ಔಷಧಿಯನ್ನು ರಫ್ತು ಮಾಡಲು ಇರುವ ನಿಷೇಧವನ್ನು ಭಾರತ ಸರ್ಕಾರ ಹಿಂದಕ್ಕೆ ಪಡೆದುಕೊಂಡಿರುವುದು ಗಮನಾರ್ಹ ಅಂಶವಾಗಿದೆ. ಈ ಔಷಧಿಯಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಸರಿಯಾದ ಪುರಾವೆ ಇಲ್ಲ ಎಂದು ವಿಶ್ವಸಂಸ್ಥೆ ಹೇಳಿದ್ದರೂ, ಈ ಔಷಧಿ ತೆಗೆದುಕೊಂಡರೆ ನಷ್ಟವೇನಿಲ್ಲ ಎಂಬ ಸಬೂಬಿನೊಂದಿಗೆ ಎಲ್ಲ ರಾಷ್ಟ್ರಗಳೂ ಈ ಔಷಧಿಗೆ ಮಣೆ ಹಾಕಿರುವುದಂತೂ ನಿಜವಾದ ಮಾತು.
ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ, ಯಾವುದೇ ನಿರ್ದಿಷ್ಟ ಔಷಧಿ ಈ ಕೋವಿಡ್-19 ವೈರಾಣುವಿಗೆ ಇಲ್ಲದ ಕಾರಣ ಈ ಹೈಡ್ರೋಕ್ಸಿಕ್ಲೊರೋಕ್ವಿನ್ ಬಳಕೆಯಿಂದ ಲಾಭವಾಗುವುದಾದರೆ ಆಗಲಿ ಎಂಬ ಉದ್ದೇಶದಿಂದ ಎಲ್ಲ ರಾಷ್ಟ್ರಗಳು ಔಷಧಿ ಬಳಸುತ್ತಿದ್ದಾರೆ. ಅಮೇರಿಕಾ, ಚೈನಾ, ಯುನೈಟೆಡ್ ಕಿಂಗ್‍ಡಮ್, ಸ್ಪೇನ್ ಮುಂತಾದ ದೇಶಗಳಲ್ಲಿ 20 ಕ್ಕಿಂತಲೂ ಹೆಚ್ಚು ಪ್ರಯೋಗಾತ್ಮಕ ಪರೀಕ್ಷೆಗಳು ನಡೆಯುತ್ತದೆ. ಈ ಔಷಧಿಯ ಪರಿಣಾಮ ಮತ್ತು ಅಡ್ಡಪರಿಣಾಮಗಳ ಬಗ್ಗೆ ಸದ್ಯದಲ್ಲಿಯೇ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಯಾವುದೇ ಚಿಕಿತ್ಸೆ ಇಲ್ಲದ ಲಸಿಕೆ ಇಲ್ಲದ ಈ ಕೋವಿಡ್-19 ವೈರಾಣು ಜ್ವರಕ್ಕೆ ಈ ಹೈಡ್ರೋಕ್ಸಿಕ್ಲೊರೋಕ್ವಿನ್ ರಾಮಬಾಣವಾಗಲಿ ಎಂಬುದೇ ನಮ್ಮೆಲ್ಲರ ಒಕ್ಕೊರಲಿನ ಹಾರೈಕೆ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com