ವಿಶ್ವ ತಂಬಾಕು ರಹಿತ ದಿನ – ಮೇ 31

ವಿಶ್ವ ತಂಬಾಕು ರಹಿತ ದಿನ – ಮೇ 31.  ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ರೋಗರುಜಿನ, ಸಾವು ನೋವು, ದುಗುಡ ದುಮ್ಮಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸವ ಸದುದ್ದೇಶದಿಂದಲೇ ಈ ಆಚರಣೆಯನ್ನು ಜಾರಿಗೆ ತಂದಿದೆ.

no-tobacco-day

ಇಂದಿನ ವ್ಯಾಪಾರಿ ಮನೋಭಾವದ ಮತ್ತು ಜಾಗತೀಕರಣಗೊಂಡ ಜಗತ್ತಿನಲ್ಲಿ ಸಿಗರೇಟು, ತಂಬಾಕು ಸೇವನೆ ಎಂಬುದು ಪ್ರತಿಷ್ಠೆ ಮತ್ತು ಪ್ಯಾಷನ್ ಆಗಿಬಿಟ್ಟಿದೆ. ದೃಶ್ಯಮಾಧ್ಯಮ, ಜಾಹಿರಾತು ಮತ್ತು ಜಾಗತೀಕರಣದ ವೈಭವೀಕರಣದಿಂದ ಇಂದಿನ ಯುವ ಜನತೆ ದಾರಿ ತಪ್ಪಿ ದೂಮಪಾನದ ಮೋಜಿನ ಜೂಜಿಗೆ ಬಲಿಯಾಗಿ ಲಕ್ಷಾಂತರ ಜನರು “ಸಾವಿಗೆ” ಪ್ರತಿದಿನ ಅಹ್ವಾನ ನೀಡುತ್ತಿದ್ದಾರೆ.

ದಾರಿ ತಪ್ಪುತ್ತಿರುವ ಯುವಜನತೆಗೆ ಜಾಗೃತಿ ಮೂಡಿಸಲು ಮತ್ತು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ‘ತಂಬಾಕು ರಹಿತ’ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದಲೇ ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವ ತಂಬಾಕು ರಹಿತದಿನ ಎಂದು ಅರ್ಥಪೂರ್ಣವಾಗಿ ಮೇ 31 ನ್ನು ಜಗತ್ತಿನಾದ್ಯಂತ  1987 ನೇ ವರ್ಷದಿಂದ,  ಆಚರಿಸುತ್ತಾ ಬಂದಿದೆ.

ಧೂಮಪಾನ – ವಿಷಪಾನ

ನಮ್ಮ ದೇಹದ ಅರ್ಬುದ ರೋಗಕ್ಕೆ ಅತಿ ಪ್ರಾಮುಖ್ಯವಾದ ಕಾರಣ ಎಂದರೆ ಧೂಮಪಾನ ಒಂದು ಸಿಗರೇಟಿನಲ್ಲಿ ಸರಿಸುಮಾರು 7 ರಿಂದ 8 ಮಿಲಿ ಗ್ರಾಂ ನಷ್ಟು ‘ಟಾರ್’ ನ ಪ್ರಮಾಣವನ್ನು ಕಂಡುಹಿಡಿಯಲಾಗಿದೆ. ಅರ್ಬುದ ರೋಗಕ್ಕೆ ರಹದಾರಿ ನೀಡುವ ‘ಎನ್-ನೈಟ್ರೋಸೋಮಿಕೋಟಿನ್’ ಎಂಬ ಬಹಳ ಅಪಾಯಕಾರಿ ವಸ್ತು ಸಿಗರೇಟಿನಲ್ಲಿದೆ. ಏನಿಲ್ಲವೆಂದರೂ ಸುಮಾರು 4500 ಅಪಾಯಕಾರಿ ರಾಸಾಯನಿಕ ವಸ್ತುಗಳು ಸಿಗರೇಟಿನಲ್ಲಿ ಕಂಡುಬರುತ್ತದೆ. ಸಿಗರೇಟಿನ ಟಾರಿನಲ್ಲಿ ಬೆಂಜೋಪೈರಿನ್, ಪಾರಿನ್ಯೂಕ್ಲಿಯರ್ ಆಸಿಡ್, ಆರೋಮಾಟಿಕ್ ಹೈಡ್ರೊಕಾರ್ಬನ್, ನೈಟ್ರೋಸೊಮಿನ್ ಇತ್ಯಾದಿ 200ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಚೋದನ ರಾಸಾಯನಿಕಗಳು ಇದೆ ಎಂದು ಸಂಶೋದನೆಗಳಿಂದ ಕಂಡುಹಿಡಿಯಲಾಗಿದೆ.

ಸಿಗರೇಟಿನ ಹೊಗೆಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನೋಕ್ಸೈಡ್ ಮತ್ತು ಹೈಡ್ರೋಜನ್ ಅನಿಲಗಳು ದೇಹದ ಆಮ್ಲಜನಕದ ಪೂರೈಕೆಗೆ ಅಡ್ಡಿ ಉಂಟುಮಾಡುತ್ತದೆ. ಧೂಮಪಾನದ ಹೊಗೆಯಲ್ಲಿರುವ ಹೈಡ್ರೋಜನ್ ಸಯಸೈಡ್, ಅಮೋನಿಯ, ಅಸಿಟೋನ್, ಫಿನಾಲ್, ಹೈಡ್ರಾಜನ್, ಕ್ರೆರಿಡಿನ್ ಮುಂತಾದ ಅಪಾಯಕಾರಿ ಅನಿಲಗಳು, ರಾಸಾಯನಿಕಗಳು ನಮ್ಮ ಶ್ವಾಸಕೋಶಕ್ಕೆ ಮಾರಕವಾದ ಪರಿಣಾಮ ಬೀರಿ ಶ್ವಾಸಕೋಶದ ಅರ್ಬುದರೋಗಕ್ಕೆ ನಾಂದಿ ಹಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ಪೆಲೋನಿಯಂ-210 ಎಂಬ ರೇಡಿಯೋ ಆಕ್ಟಿನ್ ವಿಕಿರಣ ವಸ್ತು ಕೂಡಾ ಸಿಗರೇಟಿನ ಹೊಗೆಯಲ್ಲಿದೆ ಎಂದು ಸಂಶೋಧನೆಗಳಿಂದ ಖಚಿತಪಟ್ಟಿದೆ.

ಯಾಕೆ ಧೂಮಪಾನ ತ್ಯಜಿಸ ಬೇಕು?

ಸರಿ ಸುಮಾರು 600 ರಿಂದ 700 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಧಹಿಸುವ ಸಿಗರೇಟ್ ಒಳಗಿನ ತಂಬಾಕು ನೂರಾರು ರಾಸಾಯನಿಕ ವಿಷಾನಿಲಗಳನ್ನು ತಯಾರು ಮಾಡುವ ಕಾರ್ಖಾನೆ ಇದ್ದಂತೆ ಎನ್ನಬಹುದು. ಸಿಗರೇಟು ಎಂಬುದು ಅಪಾಯಕಾರಿ ರಾಸಾಯನಿಕಗಳ ಅಗ್ನಿಜ್ವಾಲೆ ಎಂದರೂ ತಪ್ಪಲ್ಲ. ನಮ್ಮ ದೇಹದೊಳಗಿನ ಎಲ್ಲಾ ವಿಷಕಾರಿ ಅನಿಲಗಳನ್ನು ದೇಹದಿಂದ ಹೊರಹಾಕುವ ಕಾರ್ಯ ನಿರ್ವಹಿಸುವ ಅಂಗ ಯಕೃತ್ತು.

ಧೂಮಪಾನದ ಮೂಲಕ ನಮ್ಮ ಶರೀರ ಪ್ರವೇಶಿಸುವ ವಿಷಾನಿಲಗಳು ನಮ್ಮ ಶ್ವಾಸಕೋಶದ ಒಳಗೆ ಪ್ರವೇಶಿಸಿ ಬಳಿಕ ರಕ್ತದ ಮೂಲಕ ಯಕೃತ್ತನ್ನು ತಲುಪುತ್ತದೆ. ಕಾಲಕ್ರಮೇಣ ಧೂಮಪಾನದಿಂದ ಯಕೃತ್ತು ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡು ನಿಷ್ಕ್ರಯಕೊಳ್ಳುತ್ತದೆ. ಹೀಗೆ ಧೂಮಪಾನ ಶರೀರದ  ಶ್ವಾಸಕೋಶ, ಯಕೃತ್, ರಕ್ತನಾಳ, ಮೆದುಳು ಮುಂತಾದ ಅಂಗಗಳನ್ನು,  ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಒಂದೊಂದಾಗಿ ಕುಂದಿಸಿ ಧೂಮಪಾನಿ ಶರೀರವನ್ನು ರೋಗಗಳ ಹಂದರವಾಗಿ ಮಾರ್ಪಾಡುಮಾಡುತ್ತದೆ.

ಧೂಮಪಾನ ತ್ಯಜಿಸಿದ ಬಳಿಕದ ಪರಿಣಾಮ :

(a). 24 ಗಂಟೆಗಳ ನಂತರ
• ರಕ್ತದ ಒತ್ತಡ ಸಹಜ ಸ್ಥಿತಿಗೆ ಬರುತ್ತದೆ.
• ನಾಡಿಮಿಡಿತ ಸಹಜ ಸ್ಥಿತಿಗೆ ಬರುತ್ತದೆ.
• ಕೈಕಾಲುಗಳ ತಾಪಮಾನ ಸಹಜ ಸ್ಥಿತಿಗೆ ತಲುಪುತ್ತದೆ.
• ಮನಸ್ಸು ಸಮಸ್ಥಿತಿಗೆ ಬರುತ್ತದೆ.
• ರಕ್ತದಲ್ಲಿ ಸೇರಿದ ಕಾರ್ಬನ್ ಮೋನೊಕ್ಸೈಡ್ (ಇಂಗಾಲ)ದ ಪ್ರಮಾಣ ಕಡಿಮೆಯಾಗಿ, ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ.
• ಹೃದಯ ಬಡಿತ ಸಹಜಸ್ಥಿತಿಗೆ ಬಂದು, ಹೃದಯ ಕ್ರಿಯಾಶೀಲಗೊಳ್ಳುತ್ತದೆ.

(b) ಒಂದು ವಾರದ ಬಳಿಕ
• ನಿಷ್ಕ್ರಿಯಗೊಂಡ ನರನಾಡಿಗಳು ಚೇತರಿಸಿಕೊಳ್ಳುತ್ತದೆ.
• ಜಡಗೊಂಡ ಪಂಚೇಂದ್ರಿಯಗಳು ಚುರುಕುಗೊಳ್ಳುತ್ತದೆ.
• ನಾಲಗೆಯಲ್ಲಿನ ರುಚಿ ಸಹಜ ಸ್ಥಿತಿಗೆ ಮರಳುತ್ತದೆ.
• ದೇಹದಲ್ಲಿ ಚೈತನ್ಯ ತುಂಬಿ, ಆಯಾಸ, ಉಬ್ಬಸ ಕಡಿಮೆಯಾಗುತ್ತದೆ.
• ದೇಹದ ರಕ್ತಸಂಚಾರ ಉತ್ತಮಗೊಳ್ಳುತ್ತದೆ.
• ದೇಹದ ಇತರ ಅಂಗಾಂಗಗಳ ಕ್ರಿಯಶೀಲತೆ ಉತ್ತಮಗೊಳ್ಳುತ್ತದೆ.

(c) 6 ತಿಂಗಳ ಬಳಿಕ
• ರಕ್ತದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ ಸಹಜ ರಕ್ತ ಸಂಚಾರಕ್ಕೆ ಅವಕಾಶ ನೀಡುತ್ತದೆ.
• ಶ್ವಾಸಕೋಶದ ಶಕ್ತಿ ಸಾಮರ್ಥ್ಯ ಶೇ 40ರಷ್ಟು ಹೆಚ್ಚುತ್ತದೆ.
• ದೇಹದ ರಕ್ತ ಸಂಚಲನೆ ಸರಿಯಾಗಿ ಹೊಸ ಉಲ್ಲಾಸ ಮಾಡುತ್ತದೆ.
• ದೇಹದ ಆರೋಗ್ಯ ಸುಧಾರಿಸಿ, ಧೂಮಪಾನದಿಂದ ಉಂಟಾಗುತ್ತಿದ್ದ ಕೆಮ್ಮು – ದಮ್ಮು ಇಲ್ಲದಂತಾಗಿ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
• ಆಯಾಸ ಮತ್ತು ಏದುಸಿರು ಸಮಸ್ಯೆ ಕ್ಷೀಣವಾಗುತ್ತದೆ ಮತ್ತು ಧೂಮಪಾನದಿಂದ ಘಾಸಿ ಗೊಂಡಿದ್ದ ಶ್ವಾಸಕೋಶ ಮತ್ತಿತರ ಅಂಗಾಂಗಗಳ ಜೀವಕೋಶಗಳು ಸಹಜ ಸ್ಥಿತಿಗೆ ಮರಳಿ, ಹೊಸ ಜೀವಕೋಶಗಳು ಹುಟ್ಟಿಕೊಳ್ಳುತ್ತದೆ.
• ಹೃದಯಾಘಾತ, ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತಾ, ಆಲಸ್ಯ, ಆಯಾಸದಿಂದ ಮನಸ್ಸು ಮುಕ್ತಿಯಾಗಿ, ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಆರೋಗ್ಯ ಪೂರ್ಣವಾದ ಮಾನಸಿಕ ಚಿಂತನಾಶಕ್ತಿ ಮನಸ್ಸಿಗೆ ದೊರಕಿ, ದೈಹಿಕ ಸಾಮರ್ಥ್ಯವೂ ವೃದ್ಧಿಸುತ್ತದೆ.

ಈ ಎಲ್ಲಾ ಕಾರಣಕ್ಕಾಗಿಯೇ ತಂಬಾಕು ಮತ್ತು ತಂಬಾಕಿನ ಎಲ್ಲಾ ಉತ್ಪನ್ನಗಳನ್ನು ನಾವೆಲ್ಲರೂ ಸೇರಿ ಬಹಿಷ್ಕರಿಸೋಣ. ತಂಬಾಕು ತ್ಯಜಿಸಿ “ಎಲ್ಲಾ ಓಕೆ ತಂಬಾಕು ಯಾಕೆ” ಎಂಬ ಘೋಷವಾಕ್ಯದೊಂದಿಗೆ ಹೊಸ ಜೀವನ ಆರಂಭಿಸೋಣ, ಅದರಲ್ಲಿ ನಮ್ಮ ನಿಮ್ಮೆಲ್ಲರ ಹಿತ ಮತ್ತು ದೇಶದ ಹಿತ ಅಡಗಿದೆ.

Dr.-Murali-Mohana-Chuntaru.

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323
ದೂ.: 04998-273544, 235111 ಮೊ.: 9845135787

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!