ಜೀವನದ ಸಂತೋಷ ಖುಷಿ ಎಲ್ಲಿದೆ?

ಜೀವನದ ಸಂತೋಷ ಖುಷಿ ಹಣದಲ್ಲಿಲ್ಲ. ಅದು ನಮ್ಮಲ್ಲಿ ಇದ್ದಾಗ, ನಾವು ಎಷು, ಯಾವ ರೀತಿ, ಕ್ರಿಯಾತ್ಮಕವಾಗಿ ಬಳಸ್ತೀವಿ? ಅದರ ಮೇಲಿದೆ. ಚಟಗಳಿಗೆ ದಾಸರಾಗದೇ, ಒಳ್ಳೆಯ ಹವ್ಯಾಸಗಳಾದ ಓದು-ಬರಹದತ್ತ, ಸಾಮಾಜಿಕ ಕಳಕಳಿಯತ್ತ ಮನಸ್ಸು ಮಾಡಿ.

ಜೀವನದ ಸಂತೋಷ ಖುಷಿ ಎಲ್ಲಿದೆ? ಹಣದಲ್ಲೇ? ಸುಖ ಸಂಸಾರದ ಸೂತ್ರಗಳೇನು?

ಸುಖ-ಶಾಂತಿ ನೆಮ್ಮದಿಗಳ ಜೀವನದ ಸುಖ ಸಂಸಾರದ ಸೂತ್ರಗಳೇನು? ಅವರವರ ಆದ್ಯತೆ, ಅನುಕೂಲ, ಸಮಯ-ಹಣದ ಲಭ್ಯತೆ, ಶಕ್ತಿ-ಸಾಮಥ್ರ್ಯ, ಮನರಂಜನೆ, ಸಮಯ ಬಳಸುವ ರೀತಿ, ಆಧರಿಸಿ ಇವು ಬದಲಾಗುತ್ತವೇನೋ! ನನ್ನ ದೃಷ್ಟಿಯಲ್ಲಿ ಸುಖ-ಶಾಂತಿ-ನೆಮ್ಮದಿ ಸೂತ್ರಗಳನ್ನು ಈಗ ಪಟ್ಟಿಮಾಡುತ್ತಿದ್ದೇನೆ. ಕಣ್ಣು ಹಾಯಿಸಿ ನೋಡಿ, ಒಪ್ಪಿದರೆ, ಒಪ್ಪಿದಷ್ಟು ಅನುಸರಿಸಿ.

ಬಿ.ಎ ಹಾಗೂ ಎಂ.ಎಗಳಲ್ಲಿ ಅರ್ಥಶಾಸ್ತ್ರ ಓದುವಾಗ, ಸಂಪತ್ತು ಹಾಗೂ ಕಲ್ಯಾಣ (wealth and welfare) ಎಂಬ ವಿಷಯಗಳ ಬಗೆಗೆ ಓದಿದ್ದೆ. ಪ್ರತಿ ವ್ಯಕ್ತಿಯ ಬಯಕೆಗಳು ಅಸಂಖ್ಯಾತ. ಆದರೆ ಸಿಗುವ ಸಂಪನ್ಮೂಲಗಳು ಮಿತ. ಹೀಗಾಗಿ ಆರ್ಥಿಕ ಬೆಂಬಲವಿರುವ ಬಯಕೆಗಳು  ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸುತ್ತವೆ. ಬೇಡಿಕೆಗೆ ಅನುಸಾರವಾಗಿ ಪೂರೈಕೆ. ಇದಕ್ಕಾಗಿ ವಸ್ತು ಹಾಗೂ ಸೇವೆಗಳ ಉತ್ಪಾದನೆ ಅವಶ್ಯ. ಇವುಗಳನ್ನು ಆಧರಿಸಿ ಬೆಲೆ ನಿರ್ಧಾರವಾಗುತ್ತದೆ. ಆದರೆ ಆರ್ಥಿಕ ವಿಚಾರಗಳಿಗಿಂತ, ವ್ಯಕ್ತಿ ಹಾಗೂ ಕುಟುಂಬದ ಕಲ್ಯಾಣ, ಅಂದರೆ ಆರೋಗ್ಯ ಗಮನಿಸುವಾಗ, ಮಾನಸಿಕ ಖುಷಿ, ಸಂತೋಷ, ದೈಹಿಕ ಆರೋಗ್ಯ ಇಮ್ಮಡಿಸುತ್ತದೆ. ಹಾಗಾದರೆ ಎಲ್ಲ ವ್ಯಕ್ತಿಗಳ ಸಂತಸ, ಅಭಿವ್ಯಕ್ತಿ ಒಂದೇ ಇರುತ್ತದೋ? ಇಲ್ಲ. ಇದು ಪ್ರತಿ ವ್ಯಕ್ತಿಯು ಹುಟ್ಟಿದ ಮನೆ, ಕುಟುಂಬ, ಸಂಬಂಧಗಳು, ಓದು, ವಿದ್ಯೆ, ಕೆಲಸ, ಸಂಬಳ ಇವುಗಳ ಜೊತೆಗೆ ಆ ಕುಟುಂಬದ ಹಾಗೂ ಅಲ್ಲಿಯ ಹಿರಿಯರ ಆದ್ಯತೆಗಳನ್ನೂ ಅವಲಂಬಿಸಿರುತ್ತದೆ.

ತಂದೆ-ತಾಯಿಯರೇ, ಅಜ್ಜ – ಅಜ್ಜಿಯರೇ, ಹಿಂದೆ ಮಕ್ಕಳಿಗೆ ಆರಂಭದ ಆದರ್ಶ ವ್ಯಕ್ತಿಗಳಾಗಿದ್ದರು. ಅವರ ಜೀವನಶೈಲಿಯೇ ಇವರಿಗೆ ದಾರಿದೀಪ. ಸಾಮಾನ್ಯವಾಗಿ ಸರಳ ಜೀವನ, ಉತ್ತಮ ಬಾಳು ನಡೆಸುವ ಹಿರಿಯರು, ಆಸ್ತಿಕರಾಗಿ ಆಧ್ಯಾತ್ಮ ಹಿನ್ನೆಲೆ ಹೊಂದಿದ್ದರೆ, ಆ ಕುಟುಂಬದಲ್ಲಿ ಪ್ರತಿನಿತ್ಯ ಸ್ನಾನದ ನಂತರ ಕಾಫಿ, ತಿಂಡಿ. ಅದಕ್ಕೆ ಮಧ್ಯೆ ದೇವರ ಮನೆಯಲ್ಲಿ ಪೂಜೆ, ಭಜನೆ ಸಾಮಾನ್ಯ. ನಾನು ನೋಡಿರುವ ಅನೇಕ ಕುಟುಂಬಗಳಲ್ಲಿ, ತಂದೆ-ತಾಯಿ ಪ್ರಭಾವದಿಂದ ಎಷ್ಟೋ ಜನ ಮಕ್ಕಳು, ಎತ್ತರದ ಸ್ಥಾನ -ಶ್ರೀಮಂತಿಕೆ ಸ್ಥಾನಕ್ಕೆ ಮುಟ್ಟಿದರೂ, ಈ ಮಕ್ಕಳೂ ಅವರ ಹಿರಿಯರನ್ನೇ ಅನುಸರಿಸುತ್ತಿದ್ದರು. ಹಣ ಹಾಗೂ ಸ್ವಾರ್ಥ ಪ್ರಧಾನವಾಗಿರುವ ಈಗಲೂ, ಇನ್ನೂ ಹಲವಾರು ಜನ, ಭೌತಿಕ ವಸ್ತು-ಸೇವೆಗಳ ಸುಖಕ್ಕಿಂತ, ಹಣಕ್ಕಿಂತ, ನೆಮ್ಮದಿ, ಶಾಂತಿ ಬಯಸುತ್ತಾರೆ.

ನೀವು ಬಲವಂತವಾಗಿ ಕುದುರೆಯನ್ನು ನೀರು ಕುಡಿವ ತೊಟ್ಟಿ ಬಳಿ ಒಯ್ಯಬಹುದು. ಆದರೆ ಅದನ್ನು ಬಲವಂತವಾಗಿ ನೀರು ಕುಡಿಯುವಂತೆ ಮಾಡಲಾಗದು. ಅವರವರ ಮನಸ್ಸಿಗೇ, ತಮ್ಮ ಸುಖ-ಶಾಂತಿ-ನೆಮ್ಮದಿ ಎಲ್ಲಿಂದ ಪಡೆಯಬೇಕು, ಪಡೆಯಬಹುದು ಎಂಬುದು, ಅನುಭವ ಜನ್ಯ್ಯವಾಗಿ ಹೊಳೆಯುತ್ತದೆ, ಹಾಗಾದರೆ ಸಂತೋಷ, ಖುಷಿ ಎಲ್ಲಿದೆ? ಹಣದಲ್ಲೇ? ನಿಮಗೆ ಎಷ್ಟು ಹಣ ಸಿಕ್ಕಿದರೆ, ನಂತರ ಸಾಕು ಎನ್ನುತ್ತೀರಿ ಹೇಳಿ? ಹೇಳಲಾಗದು ಅಲ್ಲವೇ!? ಆರಂಭದಲ್ಲಿ ಉಪವಾಸವಿದ್ದವನಿಗೆ, ಒಂದು ಹೊತ್ತು ಊಟ ಸಿಕ್ಕರೆ ಪುಣ್ಯ ಅನಿಸುತ್ತೆ. ನಂತರ ಎರಡು ಹೊತ್ತು ಊಟ ಸಿಕ್ಕರೆ ಅದೇ ಪುಣ್ಯ. ಹಾಗೇ ಹೊಟ್ಟೆ ಸಮಸ್ಯೆ ಕಳೆದ ಮೇಲೆ ವಸತಿ.

ಯಾವುದೇ ವಠಾರದ, ಅತಿ ಸಾಧಾರಣ ಒಂದು ಕೋಣೆ ಮನೆಯಿಂದ, 2 ಮಲಗುವ ಕೋಣೆ-3 ಕೋಣೆಗಳವರೆಗೆ, ಪ್ಲಾಟ್, ಬಂಗ್ಲೆ, ವಿಲ್ಲಾ; ಪಂಖದಿಂದ-ಹವಾನಿಯಂತ್ರಿತ ಕೋಣೆವರೆಗೆ, ನೆಲ-ಚಾಪೆಯಿಂದ-ಹಂಸತೂಲಿಕಾತಲ್ಪದವರೆಗೆ. ಒಂದು ಕೋಣೆ-ಒಂದು ಟಿವಿಯಿಂದ, ಅನೇಕ ಕೋಣೆ ಟಿವಿ. ಗಳವರೆಗೆ.ಉದಾ:-ಅಂದಂದಿನ ಗಳಿಕೆಯಲ್ಲೇ ಖರ್ಚು ಹೊಂದಿರುವ ಬಡವನಿಗೆ, ಅಂದಿನ ಶ್ರಮ-ಊಟ-ನಿದ್ರೆ, ಇವೇ ಸಂಪತ್ತು. ನೂರು ಗಳಿಸುವವ ಸಾವಿರ ಬೇಕೆಂದರೆ, ಸಾವಿರಾರು ಗಳಿಸುವವ ಲಕ್ಷ ಬೇಕಂತಾನೆ. ಲಕ್ಷ ಸೇರಿದ ಮೇಲೆ, ಅದರ ಮುಂದೆ, ಒಂದು, ಎರಡು, ನಾಲ್ಕು, ಸೊನ್ನೆ ಸೇರಿಸುವಷ್ಟು, ಗಳಿಸುತ್ತಲೇ ಹೋಗಬೇಕೆಂಬ ಆಸೆ. ಅಂದರೆ ಹಣದಾಸೆಗೆ ಮಿತಿಯಿಲ್ಲ.

ನನಗೆ ನನ್ನ ತಮ್ಮಂದಿರಿಗೆ ಚಿಕ್ಕಂದಿನಲ್ಲಿ ತಿನ್ನುವತ್ತಲೇ ಗಮನ. ಯಾವಾಗ ಎಲ್ಲಿ ಹೋದರೂ, ತಿನ್ನಲು ಏನು ಸಿಗುತ್ತೆ? ಯೋಚನೆ. ಅಲ್ಲಿ ಏನೇನೋ ತಿಂದ ಮೇಲೆ, ಅದರಲ್ಲಿ ನನಗೆ ಯಾವುದು ಅತಿ ಇಷ್ಟವಾಯಿತು, ಮತ್ತೆ ಬೇಕು, ಇತ್ತ ಯೋಚನೆ! ವಯಸ್ಸು ಕಳೆದಂತೆ ಆರೋಗ್ಯದ ಸಮಸ್ಯೆಗಳು ಬರುವ ಕಾಲದಲ್ಲಿ, ತಿನ್ನುವುದಕ್ಕಾಗಿ ಬದುಕದೇ, ಬದುಕಲಿಕೋಸ್ಕರ ಮಾತ್ರ ತಿನ್ನುವ ಯೋಚನೆಯತ್ತ ವಾಲುತ್ತೇವೆ. ಬಿ.ಪಿ. ಹೆಚ್ಚಿದರೆ ಉಪ್ಪು ಬಿಡಿ; ಮಧುಮೇಹ ಬಂದರೆ ಸಕ್ಕರೆ-ಸಿಹಿ ಬೇಡ, ಗ್ಯಾಸ್ಟ್ರಿಕ್ ಆದರೆ. ಹುಳಿ-ಖಾರ ಕಡಿಮೆ ಮಾಡಬೇಕು. ಜೇಬು ಖಾಲಿ ಇದ್ದ ಚಿಕ್ಕ ವಯಸ್ಸಿನಲ್ಲಿ, ದುಡ್ಡಿಲ್ಲ! ಆದರೆ ತಿನ್ನೋ ಉಮೇದು!.

ಈಗ ತಾರುಣ್ಯ ಬಂದಾಗ ದುಡ್ಡಿದೆ – ತಿನ್ನುವ ಸಮಯವಿಲ್ಲ. ಓದಲು, ಕೆಲಸಕ್ಕೆ ಹೋಗಲು ಧಾವಿಸುವ ಧಾವಂತ. ವಯಸ್ಸಾದಂತೆ ದುಡ್ಡಿದೆ, ಸಮಯವಿದೆ; ಆದರೆ ಆರೋಗ್ಯವಿಲ್ಲ. ಕಡಿಮೆ ತಿಂದರೆ ಸುಸ್ತು, ಕೋಮಾ. ಜಾಸ್ತಿ ತಿಂದರೆ ಅಜೀರ್ಣ, ನಿದ್ರಾಹೀನತೆ. ಜೀರ್ಣವಾಗದಿದ್ದರೆ, ಹೊಟ್ಟೆ ಖಾಲಿಯಾಗೋಲ್ಲ. ಆಗ ವಿಸರ್ಜನೆ ಸಮಸ್ಯೆ. ಈಗ ನಿದ್ರೆಗೆ ಬನ್ನಿ ಅಂದರೆ ನಿದ್ರಾ ಕ್ಷೇತ್ರಕ್ಕೆ. ಚಿಕ್ಕಂದಿನಲ್ಲಿ ಮಲಗಿದ್ದೇ ಮಲಗಿದ್ದು – ಅಪ್ಪನ ಕೂಗು, ಏಟು ಬೀಳುವವರೆಗೆ. ಕೆಲಸ ಮಾಡುವಾಗ ನಿದ್ರೆ ಕಡಿಮೆ. ನಿವೃತ್ತಿಯ ನಂತರ ಸಮಯವಿದೆ. ಆದರೆ ನಿದ್ರೆ ಬರುತ್ತಿಲ್ಲ, ನಿದ್ರೆ ಸಾಕಾಗುತ್ತಿಲ್ಲ. ಹಣ, ಆರೋಗ್ಯ ಸಂಬಂಧಗಳ ಒತ್ತಡ ಸಮಸ್ಯೆ, ಪ್ರತಿದಿನ ಬಂದಾಗ, ಅಂದು ಹೇಗಾದರೂ ಕಳೆದರೆ ಸಾಕೆಂಬ ಧಾವಂತ.

ಮೊದಲು ಮಕ್ಕಳು-ಯುವಜನ, ಶಾಲೆ, ಕಾಲೇಜುಗಳಿಗೆ, ರಜಾ ಇದ್ದಾಗ ಮನೆಯೇ ಸೇರುತ್ತಿರಲಿಲ್ಲ. ಅವರೆಲ್ಲ ಬಾವಿ- ಕೆರೆ ಸಿಕ್ಕಲ್ಲಿ ಧುಮುಕಿ, ಈಜಿ ಕಾಡು-ತೋಟಗಳಲ್ಲಿ ಮರ ಹತ್ತಿ ಹಣ್ಣು, ಕಾಯಿ ಕಿತ್ತಿ ತಿಂದು ಮರಕೋತಿ ಆಡಿ, ಗೋಲಿ,-ಕಲ್ಲು-ಚಿನ್ನಿದಾಂಡು ಆಡುತ್ತಾ, ಎಲ್ಲೆಲ್ಲೋ ಬಿದ್ದಿರುವ ಸ್ಟಾಂಪ್ ಹಾಗೂ ಕಡ್ಡಿಪೆಟ್ಟಿಗೆ ಮುಚ್ಚಳಗಳನ್ನು ಹುಡುಕುತ್ತ, ರಾತ್ರಿಯವರೆಗೆ ನಡೆದು, ಓಡಿ, ಆಡಿ ಸುಸ್ತಾಗಿ ಹಸಿವಾಗಿ ಮನೆಗೆ ಬರುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಆಧುನಿಕ ಸೌಲಭ್ಯಗಳಾದ ತರತರಹದ ಮೊಬೈಲ್, ಮೆಸೇಜ್, ಅಂತರ್ಜಾಲ, ಟಿವಿ. ವಾಹಿನಿಗಳ ಜಾಲ, ಸಾರ್ವಜನಿಕ ಮಾಧ್ಯಮಗಳಾದ ಮುಖಪುಟ (ಫೇಸ್ ಬುಕ್ ) ಸ್ವ ಟಿಪ್ಪಣೆ (ಟ್ವಿಟ್ಟರ್) ಬಂದ ಮೇಲೆ, ಜನ ನೇರ ಮುಖ ನೋಡಿ, ಅವರಿವರ ಮನೆಗೆ ಹೋಗಿ ಹರಟುವ, ತಿಂಡಿ ಊಟ ಮಾಡುವ ಖುಷಿ, ಮನರಂಜನೆ ಕಳೆದುಕೊಂಡಿದ್ದಾರೆ, ಒಂದೇ ಮನೆಯ ವಿವಿಧ ಕೋಣೆಗಳಲ್ಲಿರುವ ವಿವಿಧ ಸಂಬಂಧಗಳು, ಮೊಬೈಲ್‍ನಲ್ಲೇ ಕನಿಷ್ಠ ಮಾತಾಡಿದರೆ ಅದೇ ಪುಣ್ಯ! ಯಾಕೆ ಹೀಗೆ?

ಕಷ್ಟಪಟ್ಟು ಸಾಲ ಮಾಡಿ, ಮಕ್ಕಳನ್ನು ಹೆಚ್ಚು ಓದಿಸಿ, ವಿದೇಶಕ್ಕೆ ಕಳಿಸಿದ ತಂದೆ-ತಾಯಿ ಈಗ ವಯಸ್ಸು-ಅನಾರೋಗ್ಯಗಳಿಂದ ಬಳಲುತ್ತ, ಈ ದೇಶದ ನಗರಗಳ ದೊಡ್ಡ ಮನೆಗಳಲ್ಲಿ, ಏಕಾಂಗಿಯಾಗಿ ಕುಬ್ಜರಾಗಿದ್ದಾರೆ. ಮೊದಲು ಕನ್ನಡಿ ಮುಂದೆ ನಿಂತು ಓರಣವಾಗಿ ತಲೆ ಬಾಚಿ, ಸ್ವಲ್ಪ ಪೌಡರ್ ಹಾಕಿ ಮಿಂಚುತ್ತಿದ್ದ, ಸರಳ-ಸುಂದರ ವ್ಯಕ್ತಿಗಳ ಸ್ಥಳದಲ್ಲಿ ಈಗ ಸೌಂದರ್ಯ ಸೇವೆಗಳ ಬ್ಯೂಟಿ ಪಾರ್ಲರ್, ಸ್ಪಾ, ಜಾಹೀರಾತಿನ ವಸ್ತು-ಸೇವೆಗಳ ಕೃತಕ ಸೌಂದರ್ಯ ಹಾಗೂ ಸೌಂದರ್ಯ ವರ್ಧಕಗಳ ಬಳಕೆ ಹಾಗೂ ಮಾದರಿ, ಸ್ವಲ್ಪ ವಾಕರಿಕೆ ತರುವಷ್ಟು ಹೆಚ್ಚಿವೆ. ಪ್ರಕೃತಿ ಹಾಗೂ ತಂದೆ-ತಾಯಿ ಕೊಟ್ಟಿರುವ ಈ ದೇಹ ಸೌಂದರ್ಯವನ್ನು ಸಹಜವಾಗಿ ಆರೋಗ್ಯ ಪೂರ್ಣವಾಗಿ ಜೀವಂತವಾಗಿಡದೇ, ಕೃತಕ ಸೌಂದರ್ಯ ಮಾದರಿ ಬೆನ್ನು ಹತ್ತಿ, ನಾನೇಕೆ ಹೀಗೆ? ಅವಳೇಕೆ ಹಾಗೆ!? ಅವರಂತೆ ನಾನಿಲ್ಲ! ನಾನೇಕೆ ಹೀಗೆ ಹಾಗೆ ಆಗಬಾರದು? ಎನ್ನುವ ಬಿಸಿಲು ಕುದುರೆ ಬೆನ್ನು ಹತ್ತಿದವರು, ಸತತ ನಿರಾಶೆ-ಖಿನ್ನತೆ ಅನುಭವಿಸುತ್ತಾರೆ.

ಸುಖ ಸಂಸಾರದ ಸೂತ್ರ:

1. ಸಂತೋಷ- ಖುಷಿ ಹಣದಲ್ಲಿಲ್ಲ. ಅದು ನಮ್ಮಲ್ಲಿ ಇದ್ದಾಗ, ನಾವು ಎಷು, ಯಾವ ರೀತಿ, ಕ್ರಿಯಾತ್ಮಕವಾಗಿ ಬಳಸ್ತೀವಿ? ಅದರ ಮೇಲಿದೆ.

2. ಹಣವಿದೆಯೆಂದು, ಸೊಕ್ಕಿನಿಂದ ಮದಗಜವಾಗದೇ ಆ ಹಣದ ಸದುಪಯೋಗವಾಗಬೇಕು.

3. ಚಟಗಳಿಗೆ ದಾಸರಾಗದೇ, ಒಳ್ಳೆಯ ಹವ್ಯಾಸಗಳಾದ ಓದು-ಬರಹದತ್ತ, ಸಾಮಾಜಿಕ ಕಳಕಳಿಯತ್ತ ಮನಸ್ಸು ಮಾಡಿ.

4. ಬೇಡಿಕೆಗಳನ್ನು ಪೂರೈಸಿದ ಮೇಲೂ, ಹೆಚ್ಚಿನ ಹಣವಿದ್ದರೆ, ಓದುವ ಬಡ ಮಕ್ಕಳಿಗೆ, ಬಡರೋಗಿಗಳಿಗೆ, ಅನಾಥರಿಗೆ ಪುಸ್ತಕ, ಫೀಸು, ಊಟ, ತಿಂಡಿ, ಬಟ್ಟೆ ಕೊಡಿ. ಇಲ್ಲಿ ಕೊಡುತ್ತಿದ್ದೇನೆ ಎಂಬ ಅಹಂಕಾರವಿಲ್ಲದೇ, ಅವರಿರುವದರಿಂದ ನನಗೆ ಕೊಡಲು ಸಾಧ್ಯವಾಗುತ್ತಿದೆ, ಎಂಬ ನಮ್ರ ಭಾವವಿರಲಿ.

5. ನಮಗೆ ಎಷ್ಟು ಬೇಕೋ ಅಷ್ಟೇ ಬಟ್ಟೆ ಇರಲಿ ಸಾಕು! ಬ್ರಾಂಡ್ ಎಂದು, ಜಾಹಿರಾತು, ಸ್ನೇಹಿತರ ಒತ್ತಡ ಆಧರಿಸಿ ಪ್ರತಿ ತಿಂಗಳೂ ಕೊಂಡು ಕೊಂಡು, ಮನೆಯಲ್ಲಿ ಎಲ್ಲೋ ಮೂಲೆಯಲ್ಲಿ ಬಿಸಾಕಿ, ಮನೆಯನ್ನೇ ಅಂಗಡಿ ತರಹ ಮಾಡಬೇಡಿ. ಶೋಕಿಗಾಗಿ ಒಂದು ಬಾರಿ ಎರಡು ಬಾರಿ ಹಾಕಿಕೊಂಡು, ಮೂಲೆಗೆಸೆಯದೇ ಅನಾಥಾಶ್ರ್ರಮ, ಮಹಿಳಾ ಆಶ್ರಮ, ವೃದ್ಧಾಶ್ರಮಗಳಿಗೆ ಕೊಡಿ.

6. ತಿನ್ನುವ ಆಹಾರವನ್ನು ಭಕ್ತಿ, ಶ್ರದ್ಧೆ, ಪ್ರೀತಿಯಿಂದ ವ್ಯವಸ್ಥಿತವಾಗಿ ತಿನ್ನಿ, ಹೆಚ್ಚು ಅಡಿಗೆ ಮಾಡಿ ಎಸೆಯಬೇಡಿ. ಸಾರ್ವಜನಿಕ, ಧಾರ್ಮಿಕ ಸಮಾರಂಭಗಳಲ್ಲಿ ಬೇಕಾದ್ದನ್ನು ಮಾತ್ರ ಕೇಳಿ ಬಡಿಸಿಕೊಂಡು, ಎಲೆ-ತಟ್ಟೆ ಮೇಲಿರುವ ಎಲ್ಲ ತಿನ್ನಿ. ಎಸೆಯಲು ಹಾಕಿಸಿಕೊಳ್ಳಬೇಡಿ, ಅಲ್ಲಿ ಉಳಿದದ್ದು, ಬಳಕೆಯಾಗದ್ದನ್ನು, ಆಗಿಂದಾಗ ಆಶ್ರಮ, ಆಸ್ಪತ್ರೆ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಕೊಡಿ.

7. ಸತ್ವಾತ್ರರಲ್ಲದವರಿಗೆ ಧನಸಹಾಯ ಮಾಡಿ, ಅವರನ್ನು ನಾಲಾಯಕರನ್ನಾಗಿ, ಸೋಮಾರಿಗಳನ್ನಾಗಿ ಮಾಡಬೇಡಿ.

8. ಯಾರ್ಯಾರನ್ನೋ ಹೆಚ್ಚು ನಂಬಿ, ಸಾಲ ಕೊಟ್ಟು, ಕೊಟ್ಟವ ಕೋಡಂಗಿ, ಇಸ್ಕೋಂಡವ ಈರಭದ್ರ ಗಾಧೆ ಮಾತನ್ನು ನಿಮಗೆ ಅನ್ವಯಿಸಿಕೊಂಡು ನಿಜ ಮಾಡಬೇಡಿ.

9.ದೈಹಿಕ ರೂಪ ಶಾಶ್ವತವಲ್ಲ. ವಯಸ್ಸಾದಂತೆ ಇದು ಬದಲಾಗುತ್ತ ಹೋಗುತ್ತದೆ. ಪ್ರತಿ ವ್ಯಕ್ತಿತ್ವದ ಒಳ ರೂಪವೇ ಶಾಶ್ವತ. ಅದನ್ನೇ ಸುಂದರ ಎಂದು ಸ್ವೀಕರಿಸುವ ಮನೋಧರ್ಮ ನಮ್ಮದಾಗಬೇಕು.

10. ಹೊಟ್ಟೆ ಕನ್ನಂಬಾಡಿ ಕಟ್ಟೆ ಅಲ್ಲ, ಅದು ಕಸ ತುಂಬುವ ತಿಪ್ಪೆಯಲ್ಲ. ಆರೋಗ್ಯದ ಎಚ್ಚರ.! ರಸದಂತೆ ಅನುಭವಿಸಿ ಆನಂದಿಸುವ, ಅನಾರೋಗ್ಯಕರವಲ್ಲದ ಆಹಾರ ಬೇಕು. ಅತಿಯಾದರೆ ಅಮೃತವೂ ವಿಷ. ನಮ್ಮ ಆರೋಗ್ಯ, ದೈಹಿಕ ಬೇಡಿಕೆಗಳಿಗೆ ಅನುಗುಣವಾಗಿ, ಪೌಷ್ಠಿಕವಾಗಿರುವ ಮನೆ ಆಹಾರವೇ ನಮಗೆ ಅಮೃತ. ಅದರಲ್ಲೇ ರುಚಿ-ಅಭಿರುಚಿ ಕಂಡುಕೊಳ್ಳಬೇಕು.

11. ದೇಹ ಮನಸ್ಸುಗಳಿಗೆ ವ್ಯಾಯಾಮ, ಸತತ ಚಟುವಟಿಕೆ ಕೊಡಿ. ಸುಮ್ಮನಿರುವವನ ಮನಸ್ಸು ದೆವ್ವಗಳ ಕಾರ್ಯಾಗಾರ.

12. ತಾಜಾ ತಿನ್ನಿ.ಫ್ರಿಜ್‍ನ ತಂಗಳು, ಓವೆನ್‍ನಲ್ಲಿ ಬಿಸಿಯಾಗಿ, ನಿಮ್ಮ ಹೊಟ್ಟೆ ಸೇರದೇ, ತಾಜಾ ತಾಜಾ ಅಡಿಗೆ, ತಾಜಾ ತರಕಾರಿ, ಪಚಡಿ, ವೈವಿಧ್ಯಮಯ ಅಡಿಗೆ ತಿನ್ನಿ.

13. ತಟ್ಟೆ, ಲೋಟ, ಪಾತ್ರೆಗಳು ಸ್ವಚ್ಛವಾಗಿರಲಿ. ಅಡಿಗೆ ಮನೆಯ ಜೊತೆಗೆ, ಮಲಗುವ ಕೋಣೆ, ಬಚ್ಚಲ ಮನೆ ಹಾಗೂ ಶೌಚಗೃಹ ಸ್ವಚ್ಛವಾಗಿರಲಿ. ಮನೆಯ ಒಳಗಷ್ಟೇ ಅಲ್ಲ, ಮನೆಯ ಹೊರಗೆ, ಕಂಪಾಂಡು, ರಸ್ತೆ, ಅಂಗಡಿ, ಮಾರುಕಟ್ಟೆ, ದೇವಸ್ಥಾನ, ಹೋಟೆಲ್, ಬಸ್, ರೈಲು ಎಲ್ಲ ಕಡೆ ಸ್ವಚ್ಛವಾಗಿ ಇರಿಸೋಣ, ವಿದೇಶಗಳಲ್ಲಿ ಎಲ್ಲೆಲ್ಲೋ ಕಸ ಚೆಲ್ಲಿದರೆ, 100ರಿಂದ 500 ಡಾಲರ್ ದಂಡ ಖಾತ್ರಿ- ನಿಮಗೆ ತಿಳಿದಿರಲಿ.

14. ಇರುವುದರಲ್ಲೇ ತೃಪ್ತಿ ಪಡೋಣ.ನಮಗಿಂತ ಎತ್ತರದ ಸ್ಥಾನ-ಸೌಲಭ್ಯಗಳಲಿರುವವರ ಬಗ್ಗೆ ಸದಾ ಚಿಂತಿಸದೇ, ನಮಗಿಂತ ಕೆಳಗಿರುವವರನ್ನೂ ಗಮನಿಸಿ, ತೃಪ್ತಿಪಟ್ಟುಕೊಳ್ಳೋಣ. ಇರುವದೆಲ್ಲವ ಬಿಟ್ಟು, ಇರದುದಕ್ಕೇ ಹಂಬಲಿಸುವುದೇ ಜೀವನವಾಗಿದೆ. ಚಿನ್ನ ಇಲ್ಲದಿದ್ದರೂ, ಚಿನ್ನ ಎಂದು ಪ್ರೀತಿಸುವ ಗಂಡ/ಹೆಂಡತಿ, ಮುತ್ತು-ರತ್ನಗಳಿಲ್ಲದಿದ್ದರೂ ಮುತ್ತು ರತ್ನದಂತಹ ಮಕ್ಕಳು ಎಂದು ಹೆಮ್ಮೆ ಪಡಿ. 55 ವರ್ಷಗಳ ಹಿಂದೆಯೇ, “ಉತ್ತಮ ಹೆಂಡತಿ ಮಕ್ಕಳೇ ಆಸ್ತಿ” ಎಂದು ವರಕವಿ ಬೇಂದ್ರೆ, ನನ್ನ ತಂದೆ ಎನ್.ಎಸ್ ವಾಮನ್ ಬಳಿ ಅನೇಕ ಬಾರಿ ಹೇಳಿದ್ದುದು, ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿದೆ.

15. ಸಿಕ್ಕಿದ್ದಕ್ಕೆ ಸಂತಸ ಪಡೋಣ ಸಿಗದ್ದಕ್ಕೆ ಚಿಂತಿಸದಿರೋಣ. ಚಿತೆ ಹಾಗೂ ಚಿಂತೆ ಮಧ್ಯೆ, ಒಂದೇ ಸೊನ್ನೆ ವ್ಯತ್ಯಾಸ. ದೈಹಿಕ/ಶಾರೀರಿಕ ಮಾನಸಿಕ ಆರೋಗ್ಯ ಕಾಯ್ದುಕೊಳ್ಳೋಣ. ಅತೃಪ್ತಿ, ಅತಿ ಆಸೆಗಳೇ ದೆವ್ವಗಳು; ಅಸೂಯೆ, ಮದಗಳೇ ರಕ್ಕಸರು.

16. ಮನೆಯ ಮುಂದೆ ಅಥವಾ ಹಿತ್ತಲಲ್ಲಿ, ಅಥವಾ ಕುಂಡಗಳಲ್ಲಿ ಅಥವಾ ಮನೆ ಮೇಲಿನ ತಾರಸಿ ಮೇಲೆ ಸಮಯ ಹೊಂದಿಸಿ, ಗಾರ್ಡನ್ ಮಾಡೋಣ. ಹೂ ಗಿಡ ಹಚ್ಚಿ, ತರಕಾರಿ ಗಿಡ ಹಚ್ಚಿ, ಹೂ-ತರಕಾರಿ ನಾವೇ ಬೆಳೆದು ಪರಿಸರ ವಾತಾವರಣ ಶುದ್ಧವಾಗಿಟ್ಟ ತೃಪ್ತಿಯೊಂದಿಗೆ, ಮನೆಯಲ್ಲೇ, ತಾಜಾ ತರಕಾರಿ ಬಳಸೋಣ.

ಸಮಯ ಪೋಲು ಮಾಡಬಾರದು:

ಒಬ್ಬ ಹಿರಿಯರು ಹೇಳಿದ್ದು ನನಗಿನ್ನೂ ನೆನಪಿದೆ. ನಮ್ಮ ಸರಾಸರಿ ಆಯಸ್ಸು 100 ವರ್ಷ ಎಂದುಕೊಂಡರೆ ಅದು ಹೇಗೆ ಖರ್ಚಾಗುತ್ತಿದೆ? ಗಮನಿಸಿ. ಸುಮಾರು ಸರಾಸರಿ 20 ವರ್ಷ ಬಾಲ್ಯ, ತಿನ್ನಲು, ಸ್ನಾನ, ಶೌಚ, ಇತ್ಯಾದಿಗಳಿಗಾಗಿ ಖರ್ಚಾಗಿದೆ-ಖರ್ಚಾಗುತ್ತಿದೆ. ಸರಾಸರಿ 20 ವರ್ಷ ಓದಲು, ಕೆಲಸ ಹುಡುಕಲು, ನಿದ್ದೆಗಾಗಿ. ಸರಾಸರಿ 20 ವರ್ಷ ಕೆಲಸ-ಮದುವೆ-ದಾಂಪತ್ಯ-ಮಕ್ಕಳ ಪಾಲನೆ. ಉಳಿದ 20 ವರ್ಷ ಕ್ರಿಯಾತ್ಮಕವಾಗಿ ಕಳೆಯದೇ, ನಿದ್ರೆ ಮಾಡಲು, ಅನಾವಶ್ಯಕ ಮನೆಮುರುಕ ಹರಟೆಯಲ್ಲಿ ಕಳೆಯದೇ, ಕ್ರಿಯಾತ್ಮಕವಾಗಿ ಏನಾದರೂ ಮಾಡಿ.

Also read: ಕುಟುಂಬ ಆರೋಗ್ಯಕರ ಬದುಕಿನ ತಳಹದಿ

ಸಮಾಜಪರ ಚಟುವಟಿಕೆ ಮಾಡಿ. ಅವರಿವರನ್ನು, ಸರಕಾರವನ್ನು ಬಯ್ಯದೇ, ಟೀಕಿಸದೇ, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇನ್ನೊಬ್ಬರತ್ತ ಒಂದು ಬೆರಳು ತೋರಿಸುವ ನಮ್ಮ ಕೈನ ನಾಲ್ಕು ಬೆರಳು, ನಮ್ಮತ್ತಲೇ ಚಾಚಿವೆ.! ಪ್ರವಾಸ ಮಾಡಿ. ಪತ್ರಿಕೆ, ಪುಸ್ತಕ, ಓದಿ. ಒಳ್ಳೆಯ ಮಿತ್ರರೊಂದಿಗೆ ಚರ್ಚಿಸಿ. ನಂಬಿಕೆ-ಆಸಕ್ತಿ ಇದ್ದರೆ ದೇವರ ಪೂಜೆ ಮಾಡಿ, ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ, ವಿಷಯ ತಿಳಿದುಕೊಳ್ಳಿ, ದೇಹ ದಂಡಿಸಿ,

ಪ್ರಪಂಚದಿ ನಾನೇ ಬಲು ಶ್ರೀಮಂತ!
ನನ್ನ ದೇಹ -ಮನಸ್ಸು ಎಲ್ಲ, ನಂದೇ ಸ್ವಂತ!
ಜಾಹೀರಾತು ಏನೇ ಹೇಳ್ಲಿ, ಚಂಚಲವಾಗದ ಮನಸ್ಸು ಬರ್ಲಿ.
ಬೇಡದ್ದು ಬಿಟ್ಟು, ಬೇಕಾದ್ದು ಕೊಳ್ಳೋ ವಿವೇಚನೆ, ನನಗೆ ಸತತ ಇರ್ಲಿ!
ಒಳ್ಳೆಯದಕ್ಕೆ ಹೊಂದಿಕೊಳ್ಳೋ ಹಾಗೆ, ನಂಗೆ ದಿಲ್ ದಾರ್ ಮನಸ್ಸಿರಲಿ!

ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!