Health Vision

Health Vision

SUBSCRIBE

Magazine

Click Here

ವೈದ್ಯರ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ

ವೈದ್ಯರ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ.ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೇ ಕ್ಷೀಣಿಸುತ್ತ ಹೋದರೆ ಶಿಘ್ರದಲ್ಲಿ ಚಿಕಿತ್ಸೆಗೆ ವೈದ್ಯರಿರುವದಿಲ್ಲ‌, ಮಾರಣಹೋಮ ಖಂಡಿತ.ಕಡ್ಡಾಯ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಿದರೆ ಈ ಗಂಡಾಂತರದಿಂದ ನಾವೆಲ್ಲ ಬದುಕುಳಿಯುವುದು ಅತೀ ಸುಲಭ. 

ಕೋರೋನಾ ಗಂಡಾಂತರದಿಂದ ಪಾರಾಗಲು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯಕೋರೋನಾ ಬಂದ‌ನಂತರ, ಕೋರೋನೇತರ ಚಟುವಟಿಕೆಗಳು ಗಮನಾರ್ಹವಾಗಿದ್ದು ವೈರಸ್ ನಿಯಂತ್ರಣಕ್ಕಿಂತ ಇತರ ಚಟುವಟಿಕೆಗಳು ತಲೆನೋವಾಗಿ ಪರಿಣಮಿಸಿದ್ದು ತುಂಬ ವಿಷಾದನೀಯ. ಇದರಲ್ಲಿ ಅತಿಮುಖ್ಯವಾದ ವಿಷಯವೆಂದರೆ ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಗಳು. ಮನೆ ಮನೆಗೆ ಹೋಗಿ, ಬಿರುಬಿಸಲಲ್ಲಿ ಅನ್ನ ನೀರಿಲ್ಲದೆ, ಮನೆಯಿಂದ ನೀರು ಅನ್ನವನ್ನು ಸೇವಿಸಿ ಕಷ್ಟಪಡುವ ಮಹಿಳಾ ಕಾರ್ಯಕರ್ತರಿಗೆ ಬೆದರಿಕೆಯ ಕೆಲಸ ತೀವ್ರ ಖಂಡನೀಯ .ಅದರಂತೆ ಆಸ್ಪತ್ರೆಗಳಲ್ಲಿ ದಾದಿಯರು ವೈದ್ಯರ ಮೇಲಿನ ಹಲ್ಲೆ ಬೈಗುಳಗಳು ದುಃಖಕರ.  ಸಲಹೆ ನೀಡಿದ‌ ವೈದ್ಯರ ಮೇಲೆ ರೋಗಿಗಳು ಹಲ್ಲೆ ನಡೆಸಿದರು, ನಂತರ ವೈದ್ಯರ ಗುಂಪಿನ ಮೇಲೆ ಹಲ್ಲೆಗಳು ನಿರಂತರ ಸಾಗುತ್ತಲೆ‌ ಇವೆ.

ತೀವ್ರ ಒತ್ತಡದಲ್ಲಿ ಕೆಲಸ ಮಾಡುವ ವೈದ್ಯರಿಗೆ ಹಲ್ಲೆಗಳ ಭಯ:

ಸೋಂಕು ಯಾರನ್ನು ಬಿಟ್ಟಿಲ್ಲ. ಹಲವಾರು ವೈದ್ಯರು ದಾದಿಯರು,ಅರೋಗ್ಯ ಸಿಬ್ಬಂದಿಗಳು ಸೊಂಕಿಗೆ ತುತ್ತಾಗಿ ಮರಣಹೊಂದಿದರು .ಇವರಾರು ಬೇರೆ ಸ್ಥಳದಿಂದ ಸೊಂಕು ತಂದವರಲ್ಲ,ಸೊಂಕಿತರ ಆರೈಕೆ ಮಾಡುತ್ತ ಸೊಂಕಿಗೆ ತುತ್ತಾಗಿ ಮರಣಹೊಂದಿದರು,ಇದಕ್ಕಿಂತ ದುರಾದೃಷ್ಟ ಇನ್ನೊಂದಿಲ್ಲ. ಪ್ರಾಣಘಾತುಕ ರೋಗಕ್ಕೆ ತುತ್ತಾದ ರೋಗಿಯ ಅರೈಕೆಯ ಒತ್ತಡದ ಜೊತೆಗೆ ಸ್ವತಃ ತುತ್ತಾಗುವ ಭಯ ಒಂದು ಕಡೆಯಾದರೆ, ಕುಟುಂಬದಿಂದ ದೂರವಿರುವ ದುಃಖ. ಮರಣಹೊಂದಿದರೆ ಅಂತ್ಯಕ್ರಿಯೆಗೆ ಮನೆಯವರೂ ಬಾರದಂತ ಸನ್ನಿವೇಶ. ಇತ್ತಿಚಿಗೆ ಚೆನ್ನೈ ನಗರದ ಪ್ರಸಿದ್ದ ಮೆದುಳು ಶಸ್ತ್ರಚಿಕಿತ್ಸಾ ತಜ್ಞರು ಕೋರೋನಾ‌ಸೊಂಕಿತರ ಆರೈಕೆ ಮಾಡುತ್ತ ಅದೆ ಸೊಂಕಿನಿಂದ ಮೃತಪಟ್ಟರು. ದುಃಖಿತ ಸಹೋದ್ಯೋಗಿಗಳನ್ನು ಮೃತ ಶರೀರವನ್ನು ಸ್ಮಶಾನಕ್ಕೆ ಒಯ್ದಾಗ ಜನರು ದೊಣ್ಣೆಗಳಿಂದ‌ ಹಲ್ಲೆಗೈದರು, ಬೇರೆ ಸ್ಮಶಾನಕ್ಕೆ ಹೋದರು. ಇದೆ ರೀತಿ ಜನರ ಗುಂಪು ದೊಣ್ಣೆ ಕಲ್ಲುಗಳಿಂದ ಹಲ್ಲೆಗೈದು ಸಹುದ್ಯೋಗಿ ವೈದ್ಯರು, ವಾಹನ ಚಾಲಕರು ರಕ್ತಸಿಕ್ತರಾಗಿ ತಮ್ಮ ಜೀವ ಉಳಿಸಿಕೊಂಡು ಕೊನೆಗೆ ಕಷ್ಟಪಟ್ಟು ಮೃತದೇಹದ ಅಂತ್ಯಕ್ರಿಯೆ ಮಾಡಲಾಯಿತು. ಎರಡು ಮೂರು ದಶಕಗಳ ಸುಧೀರ್ಘ ಸೇವೆ ಸಲ್ಲಿಸಿ,ಸೇವೆಯಲ್ಲಿಯೆ ಮೃತಪಟ್ಟ ವೈದ್ಯರಿಗೆ ಸಿಗಬೇಕಾದ ಆಂತಿಮ ಗೌರವಗಳೂ ಸಿಗಲಿಲ್ಲ. ಸಿಕ್ಕಿದ್ದು ತೀವ್ರ ಅಗೌರವ, ನಾಚಿಕೆಗೇಡು ಘಟನೆ.

ಎಲ್ಲರಿಗಿಂತ ಹೆಚ್ಚು ಸುರಕ್ಷಿತವಾಗಿರಬೇಕಾದವರು ವೈದ್ಯಕೀಯ ಸಿಬ್ಬಂದಿ :

ಕೋರೋನಾ ಗಂಡಾಂತರದಿಂದ ಪಾರಾಗಲು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ ವೈರಾಣು,ಸೋಂಕು,ರೋಗ ,ಹರಡುವಿಕೆ ಎಲ್ಲವನ್ನೂ ಗಹನವಾಗಿ ಅಭ್ಯಸಿಸಿ ಸಕಲ ಕ್ರಮಗಳನ್ನು ಕೈಗೊಂಡರೂ, ಮನುಷ್ಯರ ವರ್ತನೆ, ಭಯ ಗಾಬರಿಗಳಿಂದ ಉಂಟಾದ ಮೃಗೀಯ ವರ್ತನೆಗಳ ಅಂದಾಜು ಮಾಡಲಾಗಲೆ‌ ಇಲ್ಲ. ಸಾಂಕ್ರಾಮಿಕ ರೋಗಕ್ಕಿಂತ ವೇಗವಾಗಿ ಹರಡಿದ “ಮಾಹಿತಿ ಸಾಂಕ್ರಾಮಿಕ ” ಅವೈಜ್ಞಾನಿಕ ಟಿವಿ ವರದಿಗಳು ಜನರಲ್ಲಿನ ಮೃಗೀಯ ವರ್ತಬೆ ಬಡಿದೆಬ್ಬಿಸಿತು. ಈ ಮುಂಚೆ ಸಾವಿರಾರು ಹಲ್ಲೆಗಳು ನಡೆದು, ವೈದ್ಯರು ಮುಷ್ಕರ ನಡೆಸಿ ಸರಕಾರದ ಗಮನಕ್ಕೆ ತಂದರೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜರುಗಲೆ‌ ಇಲ್ಲ. ಹಲ್ಲೆ ಮಾಡಿದವರು ಬಚಾವಾಗಿದ್ದು, ಕಾನೂನಿನ ವಿಫಲತೆ ಹಾಗೂ ವೈದ್ಯ ಸಿಬ್ಬಂದಿಯ ನಿಸ್ಸಹಾಯಕ ಪರಿಸ್ಥಿತಿ ಯನ್ನು ಎತ್ತಿಹಿಡಿದು ಹಲ್ಲೆಕೋರರಿಗೆ ಉತ್ತೇಜನ ನೀಡಿದಂತಾಯಿತಷ್ಟೆ. ನಿಪಾ ವೈರಸ್ ಸೊಂಕು ಕೇರಳದಲ್ಲಿ ಪತ್ತೆಯಾದಾಗ ಆರೈಕೆ ಮಾಡುತಿದ್ದ ವೈದ್ಯ ದಾದಿಯರ ಮೇಲೆ ಹಲವಾರು ಜನ ಹಲ್ಲೆ ನಡೆಸಿದ್ದರು. ಸಾರ್ವಜನಿಕ ಸಾರಿಗೆ ಬಳಸುವಾಗಲೂ ಸಹಪ್ರಯಾಣಿಕರು ಕಿರುಕುಳ‌ನೀಡಿದ್ದು ದೇಶದಲ್ಲೆಲ್ಲಾ ಸುದ್ದಿಮಾಡಿತ್ತು. ಇಂತಹ ಪೂರ್ವ ನಿದರ್ಶನದ ಘಟನೆಗಳನ್ನು ಆಧರಿಸಿ, ತ್ವರಿತ ಕಾನೂನು ಅನುಷ್ಠಾನಗೊಳಿಸಿ, ಶಿಕ್ಷೆ ಜಾರಿಮಾಡಿ ,ಶಿಕ್ಷೆಗೊಳಗಾದವರ ಪ್ರಚಾರ ಮಾಡಿದ್ದರೆ ಇಂದು ಸನ್ನಿವೇಶ ಇಷ್ಟು ವಿಪರೀತವಾಗುತ್ತಿರಲಿಲ್ಲ.

ರಾಜಕೀಯ, ಧಾರ್ಮಿಕ ಮುಖಂಡರ ಹಾಗೂ ಪೋಲೀಸರ ಸಮಕ್ಷಮದಲ್ಲಿ ನಡೆದ ಸಂಧಾನ, ಎಚ್ಚರಿಕೆಯ ಕ್ರಮಗಳು ವೈದ್ಯ ಸಿಬ್ಬಂದಿಯ ದುರ್ಬಲತೆಯನ್ನು ಎತ್ತಿತೋರಿಸದಂತಾಯಿತು. ತದನಂತರ ವೈದ್ಯರ ಮೇಲಿನ ಹಲ್ಲೆಗಳು ನಿರಂತರವಾದವು. ಜಾಗತಿಕ ಸಾಂಕ್ರಾಮಿಕಕ್ಕೆ ವೈದ್ಯರು ಹೊರತಾಗಿಲ್ಲ, ಇಲ್ಲಿಯವರೆಗೆ ಸುಮಾರು ಜನ ಹಿರಿಯ ಅನುಭವಿ ವೈದ್ಯರು ಬಲಿಯಾದರು. ಅನುಭವಿ ವೈದ್ಯರ ಸಾವು ತುಂಬಲಾರದ ನಷ್ಟ.ವೈದ್ಯಕೀಯ ಅನುಭವ ಕೊಂಡು ತರಲಾಗದು, ಓದಿ ಪಡೆಯಲಾಗದು, ವರ್ಷಗಳ ಪ್ರರಿಶ್ರಮ ಅನುಭವದ ಮೂಲ. ಸೀಮಿತ ರಕ್ಷಾ ಕವಚಗಳೊಂದಿಗೆ ಕಷ್ಟಪಟ್ಟು ಕೆಲಸ ಮಾಡುವ ವೈದ್ಯಸಿಬ್ಬಂದಿಗೆ ಹೊಡೆದುಬಡಿದು ಸೋಂಕು ಅಂಟಿಸಿದಾಗ ಅಷ್ಟು ಮಾನವ ಸಂಪನ್ಮೂಲ ತಾತ್ಕಾಲಿಕವಾಗಿ ಕಡಿಮೆಯಾದಂತೆ. (ಆ ಸಿಬ್ಬಂದಿ ರೋಗಮುಕ್ತರಾಗುವವರೆಗೂ) ,ಅದೆ ಸಿಬ್ಬಂದಿ ಸಾವಿಗೀಡಾದರೆ ಮುಗಿದೆ ಹೋಯಿತು. ಹೀಗೆಯೆ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೇ ಕ್ಷೀಣಿಸುತ್ತ ಹೋದರೆ ಶಿಘ್ರದಲ್ಲಿ ಚಿಕಿತ್ಸೆಗೆ ವೈದ್ಯರಿರುವದಿಲ್ಲ‌, ಮಾರಣಹೋಮ ಖಂಡಿತ.

ಈ ವೆಂಟಿಲೇಟರ್ ಗಳ ನಿರ್ವಹಣೆ ಮಾಡಲು ನಮ್ಮಲ್ಲಿ ಸಾಕಷ್ಟು ವೈದ್ಯರಿದ್ದಾರೆಯೆ ?

VENTILATORSರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ರಕ್ಷಾ ಕವಚಗಳನ್ನು ಹಾಕಿಕೊಂಡು ಕೆಲಸಕ್ಕಿಳಿದು ವೈದ್ಯರಿಗೆ ಕೊರತೆಯಾಗುವಂತೆ ಮಾಡಿದ್ದಾರೆ. ಇಲ್ಲಿ ಎಲ್ಲರಿಗಿಂತ ಹೆಚ್ಚು ಸುರಕ್ಷಿತವಾಗಿರಬೇಕಾದವರು ವೈದ್ಯಕೀಯ ಸಿಬ್ಬಂದಿ ಎಂಬ ವಿಚಾರ ಯಾರ ತಲೆಯಲ್ಲೂ ಬರದಿರುವುದು ಶೋಚನೀಯ. ಇನ್ನು ಕೆಲ ಬುಧ್ದಿವಂತರು ಸಮರೋಪಾದಿಯಲ್ಲಿ ವೆಂಟಿಲೇಟರ್ ಗಳನ್ನು ತಯಾರಿಸಬೇಕೆಂದರು. ಸಮರೋಪಾದಿಯಲ್ಲಿ ಲಕ್ಷಕೋಟಿ ವೆಂಟಿಲೇಟರ್ ಗಳನ್ನು ತಯಾರಿಸಿ ಒಂದೆರಡು ವಾರಗಳಲ್ಲಿ ಆಸ್ಪತ್ರೆಗಳಲ್ಲಿ ತುಂಬಿಸಬಹುದು, ನಮ್ಮ ವೆಂಟಿಲೇಟರ್ ಗಳ ಸಂಖ್ಯೆಗಳ ಬಗ್ಗೆ ಬಡಾಯಿಕೊಚ್ಚಿಕೊಳ್ಳಬಹುದು. ಆದರೆ ಈ ವೆಂಟಿಲೇಟರ್ ಗಳ ನಿರ್ವಹಣೆ ಮಾಡಲು ನಮ್ಮಲ್ಲಿ ಸಾಕಷ್ಟು ವೈದ್ಯರಿದ್ದಾರೆಯೆ ? ಎಂಬುದು ಇನ್ನೂ ಯಾರೂ ದುರದುಷ್ಟವಶಾತ್ ಯೋಚಿಸಿಯೇ ಇಲ್ಲ. ಒಬ್ಬ ತೀವ್ರ ಉಸಿರಾಟದ ತೊಂದರೆಯ ರೋಗಿಯನ್ನು ವೆಂಟಿಲೇಟರ್ಗೆ ಅಳವಡಿಸಿ ಕೃತಕ ಉಸಿರಾಟಕ್ಕೆ ಹಾಕಬೇಕೆಂದರೆ ಅದರ ಕಾರ್ಯವಿಧಾನವೆ ಬೇರೆ, ಇದಕ್ಕೆ ಮೋದಲು ರೋಗಿಗೆ ಮದ್ದುನೀಡಿ ಸ್ಮೃತಿ ತಪ್ಪುವಂತೆ ಮಾಡಬೇಕಾಗುತ್ತದೆ.

ಈ ಸಮಯದಲ್ಲಿ ರೋಗಿಯ ಯಾವ ಮಾಂಸಖಂಡ ಸ್ನಾಯುಗಳು ಚಲಿಸುವದಿಲ್ಲ, ಕೇವಲ ಹೃದಯ ಮಾತ್ರ ಕೆಲಸದಲ್ಲಿರುತ್ತದೆ, ಉಸಿರಾಟವೂ ನಿಂತುಹೋಗುತ್ತದೆ. ಕೆಲವೆ ಸೆಕಂಡುಗಳ ಸಮಯದಲ್ಲಿ ಈ ರೋಗಿಯ ಗಂಟಲಿನಾಳಕ್ಕೆ ಉಸಿರಾಟದ ನಿಳಿಕೆಹಾಕಿ ವೆಂಟಿಲೇಟರ್ ಅಳವಡಿಸಿ ಪ್ರಾಣವಾಯುವಿನ ಹರಿವು ಮಾಡಬೇಕಾಗುತ್ತದೆ. ಮನುಷ್ಯನ ದೇಹದಾಕಾರ, ಎತ್ತರ, ತೂಕ, ಶ್ವಾಸಕೋಶದಲ್ಲಿನ ಉಂಟಾದ ತೊಂದರೆಯ ತೀವ್ರತೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕೆಲ ಗಣಿತಗಳ ಮೂಲಕ ಗಾಳಿಯ ಹರಿವಿನ‌ ನಿಯಂತ್ರಣ, ಒತ್ತಡ, ಲೆಕ್ಕ ಮಾಡಬೇಕು, ಹೆಚ್ಚಿನ ಗಾಳಿ ಹೋದರೆ ಶ್ವಾಸಕೋಶಗಳು ಬಲೂನಿನಂತೆ ಒಡೆದು ಹೊಗಬಹುದು, ಕ್ಷಣ ಕ್ಷಣಕ್ಕೆ ಗಾಳಿಯ ಹರಿವಿನ ನಿಯಂತ್ರಣ ಮಾಡಬೇಕು. ಇದರೆಲ್ಲದರ ಜೊತೆಗೆ ರೋಗಿಯ ದೇಹದ ಪೋಷಕಾಂಶ ರಕ್ತದಲ್ಲಿನ ಸಕ್ಕರೆಯ ಪ್ರಮಾಣ, ಮೂತ್ರಪಿಂಡಗಳ ಸರಾಗಕ್ರಿಯೆ, ಹಾಗೂ ಅಲುಗಾಡದೆ ಮಲಗಿದುದುರ ಪರಿಣಾಮವಾಗಿ ಬೆನ್ನು, ಪ್ರಷ್ಟಭಾಗದ ಮೇಲೆ‌ ಒತ್ತಡದ ಗಾಯಗಳು, ಹೀಗೆ ಒಂದು ವೆಂಟಿಲೇಟರ್ ನ ಮೇಲಿನ‌ರೋಗಿಯ ನೂರಾರು ರಾಸಾಯನಿಕ ಕ್ರಿಯೆಗಳ ಮೇಲೆ‌ ಹದ್ದಿನ ಕಣ್ಣಿ್ಟ್ಟು, ಮೂರ್ಛಿತ ರೋಗಿಯ ಆರೈಕೆ ಮಾಡಬೇಕು.

ಸದ್ಯದ ಗಂಡಾಂತರದಿಂದ ಪಾರಾಗಲು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ :

ಇದರ ಜೊತೆ ಉಂಟಾದ ಸೊಂಕಿಗೆ ಸೂಕ್ತ ಔಷಧಿ, ದೇಹಜಲದ ವ್ಯವಸ್ಥೆ, ಕಣ್ಣು ಗಳ ಆರೈಕೆ ಎಲ್ಲವನ್ನು ನೋಡಬೇಕು. ಹಾಗಾಗಿ ಒಂದು ರೋಗಿಗೆ ಒಬ್ಬ ನುರಿತ
ನರ್ಸ್ ಮೇಲ್ವಚಾರಣೆ ಸದಾ ಇರಬೇಕು, ಅಂದರೆ ಒಂದು ರೋಗಿಗೆ ಒಬ್ಬ ನರ್ಸ್ . ಈ ನರ್ಸ್ ಗಳು ಒಂದು ಆಸ್ಪತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಇರುತ್ತಾರೆ .ಹಾಗೂ ಐಸಿಯುನಲ್ಲಿ ರೋಗಿಗಳನ್ನು ವೆಂಟಿಲೆಟರ್ ಮೇಲೆ ಅಳವಡಿಸಿ ನರ್ಸುಗಳಿಗೆ ಸೂಕ್ತ ನಿರ್ದೇಶನಗಳನ್ನು ಕೊಡುವ ಐಸಿಯು ವೈದ್ಯರ ಸಂಖ್ಯೆ ಇಡಿ ದೇಶದಲ್ಲಿ ಕೆಲ ಸಾವಿರ ಮಾತ್ರ. ಇವರಂತೆ ಐಸಿಯು ನರ್ಸ್ಗಳ  ಸಂಖ್ಯೆಯೂ ವಿರಳ. ನೂರಾಮೂವತ್ತು ಕೋಟಿ ಜನಸಂಖ್ಯೆಗೆ ಕೆಲ ಸಾವಿರದಷ್ಟು ಸಂಖ್ಯೆಯ ಪರಿಣಿತರು. ಹಾಗಾಗಿ ಲಕ್ಷೋಪಲಕ್ಷ ವೆಂಟಿಲೇಟರ್ ಗಳನ್ನು ವೈದ್ಯರ,ದಾದಿಯರ ಅನುಪಾತ ಲೆಕ್ಕದಲ್ಲಿಟ್ಟುಕೊಳ್ಳದೆ ತಯಾರಿಸುವುದು ನಿಷ್ಪ್ರಯೋಜಕ ಕಸರತ್ತು .ಹಾಗಾಗಿ ಸದ್ಯದ ಗಂಡಾಂತರದಿಂದ ಪಾರಾಗಲು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ .

ಇನ್ನು ಸದ್ಯದ ಪರಿಸ್ಥಿತಿ ನೋಡಿದರೆ ದಿನದಿನವು ಸೋಂಕಿತರ ಸಂಖ್ಯೆ ವೃದ್ಧಿ ಸುತ್ತಲೆ ಇದೆ, ಆದರೆ ಸಾವುಗಳು ಯುರೋಪ್ ಹಾಗೂ ಚೈನಾದಷ್ಟಿಲ್ಲ .ಇದರಿಂದ ನಮ್ಮ ಆಂತರಿಕ ರೋಗನಿರೋಧಕ‌ಶಕ್ತಿಯ ಪ್ರಮಾಣದ ಅಂದಾಜು ಮಾಡಬಹದು. ಸೊಂಕು ಇದ್ದರೂ ಸಾವುನೋವಿನ ಸಂಖ್ಯೆಗಳು ಕಡಿಮೆ. ಕಡ್ಡಾಯ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಿದರೆ ಈ ಗಂಡಾಂತರದಿಂದ ನಾವೆಲ್ಲ ಬದುಕುಳಿಯುವುದು ಅತೀ ಸುಲಭ. ದೊಂಬಿ ಗಲಾಟೆ ಹೊಡೆದಾಟ ಬಡಿದಾಟಗಳಿಂದ ರೋಗ ಹರಡುವಿಕೆ ಹೆಚ್ಚು .ಅವೈಜ್ಞಾನಿಕ ವಾರ್ತೆಗಳು,ಟಿವಿ ಕಾರ್ಯಕ್ರಮಗಳನ್ನು ನೋಡಿ ಗಾಬರಿಯಾಗಿ ಹಿಂಸಾಚಾರಕ್ಕಿಳಿಯುವುದು ಬೇಡ . ಗ್ರಹ ದಿಗ್ಬಂಧನದಿಂದ ಜನರು ಟಿವಿಗಳಲ್ಲಿಯ ಅವೈಜ್ಞಾನಿಕ ಹಾಗೂ ಅತಾರ್ಕಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ತಮ್ಮ ಭಯವನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಟಿವಿಗಳಲ್ಲಿ ರೋಗದ ಭೀಕರತೆಯ ಬಗೆಗಿನ‌ಕಾರ್ಯಕ್ರಮಗಳನ್ನು ನಿಲ್ಲಿಸಿ ಜನರಲ್ಲಿ ದೈರ್ಯ ತುಂಬುವ, ಹಾಗೂ ವೈದ್ಯ ಸಿಬ್ಬಂದಿಯ ಪ್ರಾಮುಖ್ಯತೆಯ ಕಾರ್ಯಕ್ರಮಗಳ ಬಿತ್ತರಣೆ ಆರಂಭವಾದರೆ ರೋಗಿಗಳ ಆರೈಕೆಗೆ ವೈದ್ಯಸಿಬ್ಬಂದಿ ಉಳಿಯಬಹುದು. ಇಲ್ಲದಿದ್ದರೆ ಮುಂದಿನ ಭೀಕರತೆ ಅನೂಹ್ಯ, ಜನರ ಅಳಿವು ಉಳಿವು ವೈದ್ಯ ಸಿಬ್ಬಂದಿಯ ಅಳಿವುಉಳಿವಿನ ಮೇಲೆ ಅವಲಂಬಿತ.

Dr-Salim-nadaf ಡಾ. ಸಲೀಮ್ ನದಾಫ್‌ ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು ಮೊ.: 8073048415

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Back To Top